ಶನಿವಾರ, ಸೆಪ್ಟೆಂಬರ್ 25, 2021
22 °C
ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ಪ್ರಶಸ್ತಿಗಳ ಪ್ರದಾನ

ಭಾರತವನ್ನು ಕಟ್ಟಿದ್ದು ಸಾಹಿತಿಗಳು, ಸಾಂಸ್ಕೃತಿಕ ವ್ಯಕ್ತಿಗಳು: ಪ್ರೇಮಶೇಖರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪ್ರಾಚೀನ ಕಾಲದಲ್ಲಿ ಯುರೋಪ್‌ಗಿಂತ ಗರಿಷ್ಠ ಸಂಖ್ಯೆಯ ಕಾಳಗಗಳನ್ನು ಕಂಡಿದ್ದು ಭಾರತದ ಉಪಖಂಡ. ಸಾಮ್ರಾಟರು ತಮ್ಮ–ತಮ್ಮಲ್ಲೇ ಹೊಡೆದಾಡಿಕೊಳ್ಳುತ್ತಿದ್ದಾಗ, ನಾವೆಲ್ಲರೂ ಒಂದು ಎಂದು ಸಾರಿದವರು ಸಾಹಿತಿಗಳು. ನಿಜವಾಗಿ ದೇಶವನ್ನು ಕಟ್ಟಿದವರು ಅವರೇ’ ಎಂದು ಸಾಹಿತಿ ಪ್ರೇಮಶೇಖರ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 2020ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ವಿವಿಧ ಮಹನೀಯರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿ, 2019 ಮತ್ತು 2020ರ ಸಾಹಿತ್ಯ ಶ್ರೀ ಪ್ರಶಸ್ತಿ ಹಾಗೂ 2018 ಮತ್ತು 2019ನೇ ಸಾಲಿನ ಪುಸ್ತಕ ಬಹುಮಾನ ನೀಡಲಾಯಿತು. 

‘ಸಾಹಿತಿಗಳು ಅವರವರ ರಾಜರು–ಸಾಮ್ರಾಟರ ಪರವಾಗಿ ಮಾತ್ರ
ನಿಂತಿದ್ದರೆ, ಇಡೀ ದೇಶ ಒಂದು ಎಂಬ ಭಾವನೆ ಜನರಲ್ಲಿ ಮೂಡುವುದು ಕಷ್ಟವಿತ್ತು. ಸಾಹಿತಿಗಳು ಮತ್ತು ಸಾಂಸ್ಕೃತಿಕ ವ್ಯಕ್ತಿಗಳ ಇಂತಹ ಗುಣಗಳ ಕಾರಣಗಳಿಂದಲೇ ಸಾಮ್ರಾಟರು ಸಾಹಿತಿಗಳನ್ನು ಗೌರವಿಸುತ್ತಿದ್ದ ಉದಾಹರಣೆಗಳು ಸಾಕಷ್ಟಿವೆ. ಪ್ರಜಾ
ಪ್ರಭುತ್ವದ ಕಾಲದಲ್ಲಿಯೂ ಸಾಹಿತಿ ಗಳನ್ನು ಗೌರವಿಸುವ ಕಾರ್ಯ ಮುಂದು ವರಿದಿರುವುದು ಸಂತಸದ ವಿಷಯ’ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ‘ಪ್ರಪಂಚದ ಬೇರೆ ಯಾವುದೇ ಭಾಷೆಯಲ್ಲಿ ಇಲ್ಲದಷ್ಟು ಸಾಹಿತ್ಯ ಸಿರಿವಂತಿಕೆ ಕನ್ನಡದಲ್ಲಿದೆ. ವಚನಗಳು, ದಾಸರ ಪದಗಳು ಶ್ರೇಷ್ಠ ರಚನೆಯಾಗಿವೆ. ಇವುಗಳನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವೂ ಆಗಬೇಕು’ ಎಂದು ಸಲಹೆ ನೀಡಿದರು.

‘ಒಂದು ಭಾಷೆಯನ್ನು ಎಷ್ಟು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆಯೋ ಆಗ ಆ ಭಾಷೆ ಉಳಿಯುತ್ತದೆ. ಸದ್ಯ, ಬೇರೆ ಭಾಷೆಗಳಂತೆ ಕನ್ನಡವೂ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಪ್ರಪಂಚದಲ್ಲಿನ ಯಾವುದೇ ಭಾಷೆಯ ಮಾಹಿತಿಯು ಕನ್ನಡದಲ್ಲಿಯೂ ದೊರೆಯುವಂತಾಗಬೇಕು. ರಾಜ್ಯ ಸರ್ಕಾರದ ನೆರವಿನೊಂದಿಗೆ ಅಕಾಡೆಮಿಯು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್, ‘ಈ ಬಾರಿ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ವಿಶಿಷ್ಟ ಮತ್ತು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಅಧಿವೇಶನ ಮುಗಿದ ನಂತರ ಈ ಕುರಿತು ಎಲ್ಲರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

‘ಕೋವಿಡ್‌ ಮಾರ್ಗಸೂಚಿ ಗಳನ್ನು ಪಾಲಿಸುತ್ತಲೇ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸಲಾಗುವುದು. ಕನ್ನಡವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಕಾರ್ಯವನ್ನು ಮಾಡಲಾಗುವುದು. ರಾಜ್ಯದಲ್ಲಿ ಕನ್ನಡಕ್ಕೆ ವಿಶೇಷ ಆದ್ಯತೆ ನೀಡಲಾಗುವುದು’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು