ಮಂಗಳವಾರ, ಮೇ 18, 2021
22 °C

ಮನೆ, ಕಚೇರಿಯಷ್ಟೇ ಸಾಕೇ? ಮನವನ್ನೂ ಸಂಭಾಳಿಸಿ!

ಡಿ. ಯಶೋದಾ Updated:

ಅಕ್ಷರ ಗಾತ್ರ : | |

Prajavani

ಈ ಮಿಲೆನಿಯಲ್‌ ತಲೆಮಾರಿನವರನ್ನು ಗಮನಿಸಿದರೆ ಖಿನ್ನತೆ ಎಂಬುದು ಈಗ ಸಸ್ತಾ ಆಗಿಬಿಟ್ಟಂತೆ ತೋರುತ್ತದೆ. ಹುಡುಗ ಕೈ ಕೊಟ್ಟರೆ ಖಿನ್ನತೆ; ಅಪ್ಪ– ಅಮ್ಮ ಬೈದರೆ ಖಿನ್ನತೆಯ ಪರದೆ ಮುಸುಕಿಬಿಡುತ್ತದೆ; ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ.. ಬಯಸದ ಉದ್ಯೋಗ ಸಿಗದಿದ್ದರೆ.. ಕಚೇರಿಯಲ್ಲಿ ಬಾಸ್‌ ಬೈದರೆ.. ಹುಡುಗಿಯರು ಬಹಳ ಸುಲಭವಾಗಿ ಖಿನ್ನತೆ ಅಥವಾ ದುಗುಡಕ್ಕೆ ಜಾರಿಬಿಡುತ್ತಾರೆ. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌.

ಹೌದು, ಸ್ನೇಹಿತರ ಜೊತೆ ಹರಟೆ, ಸುದ್ದಿಯ ವಿನಿಮಯ, ಪರಸ್ಪರ ಕಾಲೆಳೆದು ಸಮಯ ಕೊಲ್ಲುವ ಈ ಫೆಸ್‌ಬುಕ್ ಮೇಲೆ ಹೆಚ್ಚು ಸಮಯ ಕಳೆವ ಹದಿ ಹರೆಯದ ಹುಡುಗಿಯರು ಖಿನ್ನತೆಗೆ ಜಾರುತ್ತಾರಂತೆ. ಈ ಸಾಮಾಜಿಕ ಜಾಲತಾಣದಲ್ಲಿ ಹೀಯಾಳಿಸುವ ಪರಿಪಾಠದಿಂದ ಈ ಸಮಸ್ಯೆ ಹೆಚ್ಚುತ್ತಿದೆ ಎನ್ನುತ್ತದೆ ಸಮೀಕ್ಷೆ.

ಇದು ಹುಡುಗಿಯರ ಮಾತಾದರೆ ಮನೆ, ಉದ್ಯೋಗ ಎರಡನ್ನೂ ಸಂಭಾಳಿಸುವ ಯುವತಿಯರ ಪಾಡೇನು? ಇತ್ತೀಚಿನ ಮನೋವೈದ್ಯಕೀಯ ವರದಿಗಳನ್ನು ಗಮನಿಸಿದಾಗ ಸಮಾಜದಲ್ಲಿ ಖಿನ್ನತೆಗೆ ಗುರಿಯಾಗುತ್ತಿರುವವರು ಹೆಚ್ಚಾಗಿ ಯುವತಿಯರೇ. ಮನೆ, ಗಂಡ, ಮಕ್ಕಳು, ಕೆಲಸ ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸುವ ಅವಳು ತನ್ನನ್ನು ತಾನು ನಿಯಂತ್ರಿಸಿಕೊಳ್ಳುವಲ್ಲಿ ಸೋಲುತ್ತಿರುವುದು ಕಂಡುಬರುತ್ತಿದೆ. ಹೌದು, ಒಳ, ಹೊರಗಿನ ಕೆಲಸದ ಒತ್ತಡದಲ್ಲಿ ಸಿಲುಕಿ ಸಮಾಧಾನ ಚಿತ್ತದ ಮುಖವಾಡ ಹಾಕಿಕೊಂಡು ಒಳಗೊಳಗೆ ಕುದಿಯುತ್ತಿದ್ದು, ಅದು ಖಿನ್ನತೆಗೆ ಕಾರಣವಾಗುತ್ತಿರುವುದು ಸ್ಪಷ್ಟ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಬೇಸರ, ದುಃಖ, ನೋವು ಇದ್ದೇ ಇರುತ್ತದೆ. ಆಯಾ ಸಂದಭಗಳಲ್ಲಿ ಅವು ಕಾಣಿಸಿಕೊಂಡು ಸ್ವಲ್ಪ ಸಮಯದ ನಂತರ ಮರೆಯಾಗುತ್ತವೆ. ಅದು ಸಹಜವಾದದ್ದು. ಆದರೆ ಅವಧಿಗಿಂತ ಹೆಚ್ಚಾಗಿ ಕಾಡಿದಾಗ ಅದು ಖಿನ್ನತೆ
ಯಾಗುತ್ತದೆ. ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು, ಸದಾ ಬೇಸರ, ಅಳುವುದು, ನಿರಾಶೆ, ಜೀವನ ಇಷ್ಟೇ ಇನ್ನೆಂದೂ ಒಳ್ಳೆಯದು ಆಗುವುದಿಲ್ಲ ಎಂಬ ಹತಾಶ ಭಾವ, ಊಟ- ತಿಂಡಿ ಮೇಲೆ ಆಸಕ್ತಿ ಇಲ್ಲದಿರುವುದು, ನಿದ್ದೆ ಬಾರದಿರುವುದು. ಇವೆಲ್ಲ
ದರಿಂದ ಕೆಲಸ-ಕಾಯಗಳಲ್ಲಿ ನಿಧಾನ, ದೈಹಿಕ ನಿಃಶಕ್ತಿ, ಆರೋಗ್ಯ ಸಮಸ್ಯೆ- ಇವು ಖಿನ್ನತೆಯ ಲಕ್ಷಣಗಳು. ಖಿನ್ನತೆಯನ್ನು ಬಗೆಹರಿಸಿಕೊಳ್ಳದಿದ್ದರೆ ಬೇಗ ಸಾವೂ ಬರಬಹುದು. ಜೊತೆಗೆ ತ್ರೀವ್ರವಾಗಿ ಖಿನ್ನತೆಯಿಂದ ಬಳಲುತ್ತಿರುವವರು ಆತ್ಮಹತ್ಯೆಗೂ ಯತ್ನಿಸಬಹುದು.

ಕೆಲವು ಕಾರಣಗಳು

ಹೊರಗಿನ ದುಡಿತ, ಮನೆಯ ತುಡಿತ, ಕೆಲಸಗಳಲ್ಲಿ ಏರುಪೇರು. ಅದರಿಂದ ಗೊಂದಲ, ಬೇಸರ, ನಿರಾಶೆ. ಅದು ಹೆಚ್ಚಾಗಿ ಖಿನ್ನತೆಗೆ ದಾರಿಯಾಗುತ್ತದೆ. ಮಹಿಳೆ ಪುರುಷನಿಗೆ ಸರಿಸಮಾನವಾಗಿ, ಕೆಲವು ಸಂದರ್ಭಗಳಲ್ಲಿ ಪುರುಷನಿಗಿಂತ ಹೆಚ್ಚಾಗಿ ಕೆಲಸ ಮಾಡಿದರೂ ಕೆಲವೊಮ್ಮೆ ಪುರುಷರಿಗೆ ಸಿಗುವಷ್ಟು ಹಣ, ಹೆಸರು, ಕೀರ್ತಿ ದೊರೆಯದೇ ಮಹಿಳೆಯನ್ನು ಪುರುಷನ ನಂತರದ ಸ್ಥಾನದಲ್ಲಿ ನೋಡಲಾಗುತ್ತದೆ. ಮನ್ನಣೆ ಸಿಗದ ಕೆಲಸ ಮನಸ್ಸನ್ನು ದುರ್ಬಲಗೊಳಿಸಿ ಖಿನ್ನತೆಗೆ ದೂಡಬಹುದು.

ಮಾನಸಿಕ ಸಮಸ್ಯೆ, ದೈಹಿಕ ಸಮಸ್ಯೆಗೆ ಹೆಣ್ಣು ಗಂಡು ಎಬ ಭೇದವಿಲ್ಲವಾದರೂ ಮಹಿಳೆಯರಲ್ಲಿ ಭಾವೋದ್ವೇಗ ಹೆಚ್ಚು. ಒಂದೇ ಘಟನೆ ಪುರುಷ ಮತ್ತು ಮಹಿಳೆಯರಲ್ಲಿ ಭಿನ್ನ ಭಿನ್ನ ಪರಿಣಾಮವನ್ನು ಉಂಟುಮಾಡಬಹುದು. ಕೆಲವೊಮ್ಮೆ ವೃತ್ತಿಯಲ್ಲಿನ ಸಣ್ಣ ಸಣ್ಣ ಘಟನೆಗಳು ಮಹಿಳೆಗೆ ದೊಡ್ಡದಾಗಿ ಪರಿಹಾರವಾಗದ ಸಮಸ್ಯೆಯಾಗಿ ಪರಿಣಮಿಸುತ್ತದೆ. ದುಡಿಯುವ ಮಹಿಳೆಯರಲ್ಲಿನ ಖಿನ್ನತೆಗೆ ಇದೂ ಒಂದು ಕಾರಣ.

ಉದ್ಯೋಗದ ಸ್ಥಳದಲ್ಲಿ ಕೆಲಸದ ಸಹಜವಾದ ಒತ್ತಡದ ಜೊತೆಗೆ ಇನ್ನಿತರ ದೌರ್ಜನ್ಯಗಳು.

ಮಹಿಳೆಯರಿಗೆ ಹಿರಿಯರಿಂದ ಸಿಗುವ ಒಂದು ಉಪದೇಶವೆಂದರೆ ಏನೇ ಕಷ್ಟ ಬಂದರೂ ಸಹಿಸಿಕೊಳ್ಳಬೇಕು, ಇನ್ನೂಬ್ಬರ ಬಳಿ ಹೇಳಿಕೊಳ್ಳಬಾರದು, ತಾನೇ ಬಗೆಹರಿಸಿಕೊಳ್ಳಬೇಕು ಎಂಬುದು. ಉದ್ಯೋಗದ ಸ್ಥಳದಲ್ಲಿ ತಮಗಾಗುತ್ತಿರುವ ತೊಂದರೆ ಹೇಳಿಕೊಂಡರೆ ಹೆಚ್ಚಿನ ಅಪಾಯ ಸಂಭವಿಸಬಹುದೇನೋ ಅಥವಾ ತಮಗೆ ಸೂಕ್ತ ರಕ್ಷಣೆ ಸಿಗುವುದಿಲ್ಲವೇನೋ ಎಂದು ಆ ಸಮಸ್ಯೆಯನ್ನು ತಮ್ಮ ಆಪ್ತರ ಬಳಿಯೂ ಹೇಳುವುದಿಲ್ಲ. ಮನಸ್ಸಿನಲ್ಲಿ ಕುದಿಯುತ್ತಿರುವ ವಿಷಯಗಳನ್ನು ಹೊರಹಾಕಲು ತೋಚದೆ ಒತ್ತಡಕ್ಕೆ ಸಿಲುಕಿ, ಆತಂಕಗೊಂಡು ಕಡೆಗೆ ಖಿನ್ನತೆಗೆ ಬಲಿಯಾಗುತ್ತಾರೆ.

ಸಾಮಾನ್ಯವಾಗಿ ಗರ್ಭ ಧರಿಸಿರುವ ಸಂದರ್ಭದಲ್ಲಿ, ಪ್ರಸವದ ನಂತರ ಹಾರ್ಮೋನ್‌ಗಳಲ್ಲಿ ವ್ಯತ್ಯಾಸದಿಂದ, ದೇಹದಲ್ಲಿ ಬದಲಾವಣೆ ಉಂಟಾಗುತ್ತದೆ. ಇದು ಕೆಲವು ಮಹಿಳೆಯರಲ್ಲಿ ಸಮಸ್ಯೆಯಾಗಿ ಕಾಡುವುದೂ ಉಂಟು. ಇನ್ನು ಉದ್ಯೋಗಸ್ಥ ಗರ್ಭಿಣಿಯರಲ್ಲಿ ಈ ಬದಲಾವಣೆಗಳ ಜೊತೆಗೆ, ಉದ್ಯೋಗದ ಒತ್ತಡ, ಮಗು ಆಗಮನದಿಂದ ಆಗುವ ಹೆಚ್ಚಿನ ಕೆಲಸವೂ ಸೇರಿ ಅವರಲ್ಲಿ ಆತಂಕ ಮೂಡಿ, ಖಿನ್ನತೆಗೆ ಹೋಗಬಹುದು.

ಪರಿಹಾರ

* ತನ್ನ ಕೈಯಲ್ಲಿ ಆಗದೇ ಇರುವುದು ಯಾವುದೂ ಇಲ್ಲ ಎಂಬಂತೆ ಎಲ್ಲವನ್ನೂ ಮಾಡಹೊರಟಾಗ ಕೆಲವೊಮ್ಮೆ ಯಶಸ್ಸು ಸಿಗಬಹುದು. ಆದರೆ ಯಶಸ್ಸು ಸಿಗದಿದ್ದಾಗ ಬೇಸರವಾಗುವುದು ಸಹಜ. ಎಲ್ಲವನ್ನೂ ಮಾಡಿ ಯಾರನ್ನೂ ಮೆಚ್ಚಿಸಬೇಕಾಗಿಲ್ಲ. ತಮ್ಮ ಪರಿಸ್ಥಿತಿ, ಇತಿಮಿತಿ, ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿಯೊಬ್ಬ ಮಹಿಳೆಯೂ ತನ್ನ ಕೆಲಸ-ಕಾರ್ಯಗಳನ್ನು ಯೋಜಿಸಿಕೊಳ್ಳಬೇಕಾಗುತ್ತದೆ. ಇದರಿಂದ ಮೈ-ಮನಸ್ಸಿಗೆ ಅಗತ್ಯವಿರುವ ವಿಶ್ರಾಂತಿ, ಶಾಂತಿ ದೊರೆಯುತ್ತದೆ. ಅನಗತ್ಯ ಕೆಲಸಗಳನ್ನು ಸೃಷ್ಟಿಸಿಕೊಳ್ಳುವುದು ಸಲ್ಲ. 

* ಪ್ರತಿಯೊಬ್ಬರೂ ಭಾವೋದ್ವೇಗಗಳಿಗೆ ಒಳಗಾಗುತ್ತಾರೆ. ನಗು, ಅಳು, ಪ್ರೀತಿ, ದುಃಖ, ಸಂತೋಷ, ಕೋಪ, ಭಯ, ಅಸೂಯೆ ಎಲ್ಲವೂ ಭಾವೋದ್ವೇಗಗಳೇ. ಆದರೆ ಅತಿಯಾದ ಭಾವೋದ್ವೇಗ ದಿಂದ ಕೆಡಕು ಉಂಟಾಗುವುದರಲ್ಲಿ ಸಂಶಯವಿಲ್ಲ. ಮನಸ್ಸಿಗೆ ನೋವನ್ನುಂಟುಮಾಡುವ ನಕಾರಾತ್ಮಕ ಭಾವೋದ್ವೇಗಗಳಾದ ಕೋಪ, ಭಯ, ದುಃಖ, ಅಸೂಯೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಮನಸ್ಸಿನ ಭಾವನೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಲು ಯತ್ನಿಸುವುದು ಒಳಿತು.

* ಮೈ- ಮನಸ್ಸನ್ನು ಸುಂದರಗೊಳಿಸುವ ವ್ಯಾಯಾಮ ಉದ್ಯೋಗಸ್ಥ ಮಹಿಳೆಯ ದಿನಚರಿಯ ಪ್ರಮುಖ ಅಂಶವಾಗಬೇಕು. ವ್ಯಾಯಾಮ ದೈಹಿಕ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೋ ಮಾನಸಿಕ ಆರೋಗ್ಯದ ಮೇಲೂ ಅಷ್ಟೇ ಪರಿಣಾಮ ಬೀರುತ್ತದೆ. ಮಹಿಳೆಯರು ಎಷ್ಟೇ ಕೆಲಸದಲ್ಲಿ ಬ್ಯುಜಿ ಇದ್ದರೂ ತಮಗೆ ಇಷ್ಟವಾಗುವ ಹಾಡು, ನೃತ್ಯ, ಚಿತ್ರಕಲೆ, ಕುಸುರಿ ಕೆಲಸ, ಬರವಣಿಗೆ, ಕ್ರೀಡೆ ಮುಂತಾದ ಹವ್ಯಾಸಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಮನಸ್ಸು ಹಗುರವಾಗಿ ದೈಹಿಕ ಸಮಸ್ಯೆಗಳಿಗೂ ಪರಿಹಾರ ಸಿಗಬಹುದು.

* ವೈದ್ಯಕೀಯ ಚಿಕಿತ್ಸೆ ಅಗತ್ಯ ಇರುವವರು ಸೂಕ್ತ ಸಮಯದಲ್ಲಿ ಸರಿಯಾದ ವೈದ್ಯರನ್ನು ಸಂಪರ್ಕಿಸಿ ಔಷಧೋಪಚಾರ ಮಾಡಿಕೊಳ್ಳಬೇಕು. ಮಾತ್ರೆ-ಔಷಧಿಯನ್ನು ವೈದ್ಯರು ತಿಳಿಸಿರುವ ಸಮಯದವರೆಗೂ ಕಡ್ಡಾಯವಾಗಿ ಸೇವಿಸಬೇಕು.

* ಸ್ವಯಂ ಕೌನ್ಸೆಲಿಂಗ್- ನಮ್ಮ ಬಗ್ಗೆ ನಮಗಿಂತ ಹೆಚ್ಚಾಗಿ ಬೇರೆಯವರಿಗೆ ತಿಳಿದಿರಲು ಸಾಧ್ಯವಿಲ್ಲ. ನಮ್ಮ ಶಕ್ತಿ, ಪ್ರತಿಭೆ, ಸಾಮರ್ಥ್ಯ, ಅವಕಾಶಗಳು, ಪರಿಸ್ಥಿತಿ, ಕೊರತೆ ಎಲ್ಲವೂ ನಮಗೆ ಚೆನ್ನಾಗಿ ತಿಳಿದಿರುತ್ತದೆ. ನಮ್ಮ ಪ್ರತಿಯೊಂದು ನಡವಳಿಕೆಗಳಿಗೆ ನಾವೇ ವಿಮರ್ಶಕರಾಗಬೇಕು. ಇದಕ್ಕಾಗಿ ದುಡಿಯುವ ಮಹಿಳೆಯರು ಪ್ರತಿನಿತ್ಯ ತಮಗೆ ತಾವು ಸ್ವಲ್ಪ ಸಮಯವನ್ನು ಮೀಸಲು ಇಟ್ಟುಕೊಳ್ಳಬೇಕು.

(ಲೇಖಕಿ ಬೆಂಗಳೂರಿನಲ್ಲಿ ಆಪ್ತಸಮಾಲೋಚಕಿ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು