ಬುಧವಾರ, ಮಾರ್ಚ್ 3, 2021
31 °C
Love story- Jagadeesh angadi

ಅಮರ ಪ್ರೇಮ ಕಥನ ಎಂದರೆ...

ಜಗದೀಶ್ ಅಂಗಡಿ Updated:

ಅಕ್ಷರ ಗಾತ್ರ : | |

Prajavani

‘ನಾನು ಅದೆಷ್ಟು ಉತ್ಕಟವಾಗಿ ಪ್ರೀತಿಸುತ್ತೇನೆಂದು ಅವನಿಗೆಲ್ಲಿ ತಿಳಿದೀತು? ಅದ್ಯಾಕೆ ಅವನ ಮೇಲೆ ಸತ್ತು ಹೋಗುವಷ್ಟು ಪ್ರೀತಿ ಗೊತ್ತಾ? ನಾನು ನನ್ನೊಳಗೆ ಎಷ್ಟು ಆವಿರ್ಭವಿಸಿದ್ದೇನೋ ಅದಕ್ಕೂ ನೂರುಪಟ್ಟು ಹೆಚ್ಚು ಅವ ನನ್ನೊಳಗೆ ಆವಿರ್ಭವಿಸಿದ್ದಾನೆ.’

‘ಒಂದು ವೇಳೆ ಈ ಪ್ರಪಂಚದಲ್ಲಿ ಎಲ್ಲವೂ ಸತ್ತುಹೋಗಿ ಆತ ಮಾತ್ರ ಬದುಕಿಬಿಟ್ಟರೇ? ಆಗಲೂ ನಾನು ಅವನನ್ನೇ ಬಯಸುತ್ತೇನೆ. ಒಂದೊಮ್ಮೆ ಅವ ಸತ್ತು ಬೇರೆಲ್ಲವೂ ಉಳಿದುಬಿಟ್ಟರೆ, ಆಗ ಇಡೀ ಪ್ರಪಂಚವೇ ನನಗೆ ಅಪರಿಚಿತವಾಗಿಬಿಡುತ್ತದೆ.’

‘ಆತ ತನ್ನ ತುಂಬು ಯೌವನ, ಸೌಂದರ್ಯ ಹಾಗೂ ಸಂಪತ್ತೆಲ್ಲವುಗಳಿಂದ ನಿನ್ನನ್ನು ಪ್ರೀತಿಸಬಹುದು. ಆತ ನಿನ್ನ ಬದುಕಿನಲ್ಲಿ 80 ವರ್ಷ ಇದ್ದರೂ, ನಾನು ಒಂದು ದಿನದಲ್ಲಿ ನಿನ್ನನ್ನು ಉತ್ಕಟವಾಗಿ ಪ್ರೀತಿಸುವಷ್ಟು ಆತ 80 ವರ್ಷಗಳಲ್ಲಿ ಪ್ರೀತಿಸಲಾರ.’

‘ಆತನೆಡೆಗಿನ ನನ್ನ ಪ್ರೀತಿಗೆ ಸಾವೇ ಇಲ್ಲ. ಕಾನನದ ಗರ್ಭದಲ್ಲಿ ಹುದುಗಿಹೋಗಿರುವ ಕಲ್ಲು-ಬಂಡೆಗಳಷ್ಟೇ ಅಚಲ ನನ್ನ ಪ್ರೀತಿ. ನಾನು ನಾನಾದರೆ, ಅವ ನನ್ನ ಅಸ್ತಿತ್ವವೇ ಆಗಿಹೋಗಿದ್ದಾನೆ.’

‘ಕೊನೆಯದಾಗಿ ನಿನ್ನ ಕಂಗಳನ್ನೊಮ್ಮೆ ಮುಚ್ಚಿ ನನ್ನನ್ನೊಮ್ಮೆ ಚುಂಬಿಸಿಬಿಡು. ನಿನ್ನ ಕಂಗಳನ್ನು ನೋಡಲು ನನ್ನನ್ನು ಬಿಡಬೇಡ. ನೀನು ನನಗೆ ಕೊಟ್ಟ ಸಂಕಷ್ಟಗಳೆಲ್ಲವನ್ನೂ ಕ್ಷಮಿಸಿಬಿಡುತ್ತೇನೆ. ನನ್ನನ್ನು ಸಾಯಿಸಿದ ಕೊಲೆಗಾರ ನೀನು. ಆದರೂ ಈ ಕೊಲೆಗಾರನನ್ನು ನನಗಿಂತ ಹೆಚ್ಚೇ ಪ್ರೀತಿಸುತ್ತೇನೆ.’

‘ನನ್ನ ಬದುಕಿನಲ್ಲಿ ನನ್ನ ನಾಲಿಗೆ ಚಲನೆಹೀನವಾಗುವ ತನಕ ಉಳಿದಿರುವುದು ಒಂದೇ ಪ್ರಾರ್ಥನೆ. ನಾನು ಉಸಿರಾಡುವ ತನಕ ನಿನ್ನ ಆತ್ಮಕ್ಕೆ ಮುಕ್ತಿಯೇ ಇಲ್ಲ. ನಾನು ನಿನ್ನನ್ನು ಸಾಯಿಸಿಬಿಟ್ಟೆ ಎಂದು ಹೇಳಿದೆಯಲ್ಲ? ಹಾಗಿದ್ದರೆ ನನ್ನನ್ನು ಭೂತವಾಗಿ ಕಾಡು. ಪ್ರತಿಕ್ಷಣ ಸಾಯಿಸಿಬಿಡು. ಆಗಲಾದರೂ ನೀನು ನನ್ನ ಜೊತೆ ಇರುತ್ತೀಯಲ್ಲ? ಅಷ್ಟು ಸಾಕು ನನಗೆ. ಆದರೆ ಕೊನೆಯೇ ಇಲ್ಲದ ಈ ಬದುಕಿನಲ್ಲಿ ನನ್ನನ್ನು ಮಾತ್ರ ಒಂಟಿಯಾಗಿ ಬಿಟ್ಟು ನೀನು ಹೋಗಿಬಿಡಬೇಡ. ಓ! ದೇವಾ! ಆಕೆಯೇ ಇರದ ಭೂಮಿಯಲ್ಲಿ ನಾನು ಉಸಿರಾಡಲು ಸಾಧ್ಯವೇ? ನನ್ನ ಬದುಕೇ ಇಲ್ಲದ ಈ ಜೀವನವಾದರೂ ನನಗ್ಯಾಕೆ? ಆತ್ಮವೇ ಇಲ್ಲದ ಈ ದೇಹ, ಈ ಬದುಕು ನನಗೆ ಬೇಡವೇ ಬೇಡ!’

‘ಭಗವಂತ ಹಾಗೂ ಭೂತಗಳು ಸೃಜಿಸುವ ಈ ಘೋರ ದುರಂತ, ದುಃಖ, ಅವಮಾನ, ಅನ್ಯಾಯ, ಮೋಸ, ಸಾವುಗಳ್ಯಾವವೂ ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವೇ ಇರಲಿಲ್ಲ. ನಾನು ನಿನ್ನ ಹೃದಯವನ್ನು ಒಡೆಯಲಿಲ್ಲ. ನೀನು ನಿನ್ನ ಹೃದಯವನ್ನು ಒಡೆದುಕೊಂಡುಬಿಟ್ಟೆ. ನಿನ್ನ ಹೃದಯ ಒಡೆದುಹೋಗುವಾಗ ನನ್ನ ಹೃದಯವೂ ನುಚ್ಚುನೂರಾಗಿಬಿಟ್ಟಿತು.’

‘ಆ ಭಗವಂತ ನನ್ನ ಹಾಗೂ ಆತನ ಆತ್ಮಗಳನ್ನು ಬೇರೆ ಕಣಗಳಿಂದ ಮಾಡಿರಬಹುದು. ಆದರೆ ನಮ್ಮ ಆತ್ಮಗಳು ಒಂದೇ. ಅಲ್ಲಿರುವುದು ಎರಡಲ್ಲ, ಒಂದೇ.’

‘ಆ ಕಂಟಿಯ ಮೇಲೆ ಬಾಗಿ ಹರಡಿ ಸುವಾಸನೆ ಬೀರುತ್ತಿರುವ ಆ ಹೂವನ್ನು ಕಂಟಿಯ ಹೃದಯದಲ್ಲಿ ಅರಳಿನಿಂತ ಮುಳ್ಳು ಬಾಗಿಸಿಲ್ಲ. ಆ ಹೂವೇ ಆ ಮುಳ್ಳನ್ನು ಬರಸೆಳೆದು ಅಪ್ಪಿಕೊಂಡಿದೆ.’

‘ನಾನು ಅನುಭವಿಸಿದ ದುರಂತಗಳೆಲ್ಲವೂ ಆತನ ದುರಂತಗಳೇ. ನಾನು ಅತ್ತುಬಿಟ್ಟರೆ, ಆತನ ಕಂಗಳಲ್ಲಿ ನೀರು.’

‘ನನ್ನ ಮುಗ್ಧ ಹೃದಯವನ್ನು ಆತನಿಗೆ ಒಪ್ಪಿಸಿಬಿಟ್ಟೆ. ಅದನ್ನು ಆತ ಹೊಸಕಿಹಾಕಿಬಿಟ್ಟ. ಸತ್ತುಹೋದ ನನ್ನ ಹೃದಯವನ್ನು ನನಗೇ ಎಸೆದ. ಮನುಷ್ಯರು ತಮ್ಮ ಹೃದಯದ ಮೂಲಕ ಭಾವನೆಯನ್ನು ಹೊರಹಾಕುತ್ತಾರೆ. ಭಾವನೆಯನ್ನು ಹೊರಹಾಕುವ ನನ್ನ ಹೃದಯದ ಬಡಿತ ನಿಂತು ಎಷ್ಟೋ ವರ್ಷಗಳಾಗಿಹೋದವು.’

ಇಲ್ಲಿ ಆತ ಹೀಥ್‍ಕ್ಲಿಫ್. ಆಕೆ ಕ್ಯಾಥರೀನ್. ಅದು ‘ವಥರಿಂಗ್ ಹೈಟ್ಸ್’.

* * *

ಎಮಿಲಿ ಬೋಂಟೆಯಿಂದ 1846 ರಲ್ಲಿ ಸೃಷ್ಟಿಯಾದ ವಥರಿಂಗ್ ಹೈಟ್ಸ್ ಎಂಬ ಇಂಗ್ಲಿಷ್‌ ಕಾದಂಬರಿ ಜಾಗತಿಕ ಸಾಹಿತ್ಯಲೋಕದ ಕಾಡುವ ಕಾದಂಬರಿಯೆಂದೇ ಪರಿಗಣಿತ. ಹೀಥ್‍ಕ್ಲಿಫ್ ಹಾಗೂ ಆತನ ಪ್ರೇಯಸಿ ಕ್ಯಾಥರೀನ್ ಅವರ ಅಪ್ರತಿಮ, ಉತ್ಕಟ ಪ್ರೀತಿ ಕಾಡಿದಷ್ಟೇ ವಥರಿಂಗ್ ಹೈಟ್ಸ್ ಹಾಗೂ ಅಲ್ಲಿನ ಸಂಭಾಷಣೆಗಳು. ಪ್ರತಿ ಓದಿಗೂ ಅದು ಉಳಿಸಿಬಿಡುವ ಛಾಯೆ, ಕಾಡುವಿಕೆ ದಾಖಲಿಸಲು ಅಕ್ಷರಗಳಿಗೆ ಸಾಧ್ಯವಿಲ್ಲವೇನೋ?!

ಹೀಥ್‍ಕ್ಲಿಫ್ ಒಬ್ಬ ಅನಾಥ. ಕ್ಯಾಥರೀನ್ ಮನೆಗೆ ಆಕೆಯ ಅಪ್ಪನ ಮೂಲಕ ಆಗುಂತಕನಾಗಿ ಆಗಮಿಸಿದಾಗ ಆತ 7 ವರ್ಷದ ಬಾಲಕ. ಇಬ್ಬರಿಗೂ ಬಿಟ್ಟಿರಲಾರದಷ್ಟು ಉತ್ಕಟತೆ. ಹೃದಯ ಆತ ಉಸಿರು ಆಕೆ. ಕಾರಣಾಂತರಗಳಿಂದ ಕ್ಯಾಥರೀನ್ ಬೇರೊಬ್ಬನನ್ನು ಮದುವೆಯಾದಾಗ ಹೀಥ್‍ಕ್ಲಿಫ್ ಮರೆಯಾಗುತ್ತಾನೆ. ತನ್ನ ಗಂಡ ಆಕೆಯ ನೆನಪಿನಲ್ಲಿದ್ದರೆ ಹೀಥ್‍ಕ್ಲಿಫ್ ಮಾತ್ರ ಆಕೆಯ ಹೃದಯದ ಅಂತರಾಳದಲ್ಲಿ ಸಾಗರವಾಗಿ ಭೋರ್ಗರೆಯುತ್ತಲೇ ಇರುತ್ತಾನೆ. ವರ್ಷಗಳ ನಂತರ ಬದುಕುವ ರೀತಿಯನ್ನು ಬದಲಾಯಿಸಿಕೊಂಡ ಮತ್ತೆ ಹೀಥ್‍ಕ್ಲಿಫ್ ಬಂದಾಗ ಭೋರ್ಗರೆಯುವ ಪ್ರೀತಿಯ ಆ ಸಾಗರ ಸುನಾಮಿಯಾಗಿ ಎರಗುತ್ತದೆ. ಆಕೆಗೆ ಕಾಯಿಲೆ. ಇಲ್ಲವಾಗುತ್ತಾಳೆ. ಆತನ ತೋಳ್ತೆಕ್ಕೆಯಲ್ಲಿ ಉಸಿರು ಬಿಡುವ ಆಕೆ ಹೇಳುತ್ತಾಳೆ: ನಿನ್ನನ್ನು ಪ್ರೀತಿಸಿದಷ್ಟು ತೀವ್ರವಾಗಿ ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವೇ ಇಲ್ಲ. ನಾನು ಎಂದಿದ್ದರೂ ನಿನ್ನವಳೆ!’

ಆಕೆಯ ಸಾವು ಆತನನ್ನು ನೋವಿಗೆ ದೂಡುತ್ತದೆ. ಆತನಿಗೆ ಆಕೆ ತನ್ನೊಡನೆ ಒಂದಾಗುವಂತೆ ಕರೆಯುತ್ತಿರುವಂತೆ ಭಾಸವಾಗತೊಡಗುತ್ತದೆ. ಅದೊಂದು ದಿನ ಆಕೆ ಕರೆದಳೆಂದು ಮನೆಯಿಂದ ಹೊರಟ ಹೀಥ್‍ಕ್ಲಿಫ್ ಆಕೆಯನ್ನು ಹೂಳಿದ ಸಮಾಧಿಯ ಹತ್ತಿರ ನಡೆದು ಹೋಗುತ್ತಾನೆ. ಊರಿನವರಿಗೆ ಹೀಥ್‍ಕ್ಲಿಫ್-ಕ್ಯಾಥರೀನ್ ಜೊತೆಯಾಗಿಯೇ ಸಾವಿಲ್ಲದ
ಬದುಕಿನೆಡೆಗೆ ಜೊತೆ-ಜೊತೆಗೆ ಹೋಗುವಂತೆ ತೋರುತ್ತದೆ. ಆಕೆಯ ಸಮಾಧಿಯ ಪಕ್ಕದಲ್ಲಿಯೇ ಆತನನ್ನೂ ಹೂಳಲಾಗುತ್ತದೆ.

ಯುಕೆಟಿವಿ 2007ರಲ್ಲಿ ನೆಡೆಸಿದ ಸಮೀಕ್ಷೆಯಲ್ಲಿ ಬೇರೆ ಎಲ್ಲ ಪುಸ್ತಕಗಳನ್ನು ಬದಿಗಿಕ್ಕಿ ವಥರಿಂಗ್ ಹೈಟ್ಸ್ ಸರ್ವಶ್ರೇಷ್ಠ ಪ್ರೇಮ ಕಥನವಾಗಿ ಹೊರಹೊಮ್ಮಿತು.

ಎಮಿಲಿ ಬೋಂಟೆ ಸತ್ತಾಗ ಆಕೆಯ ವಯಸ್ಸು 30. ನಂತರದ ದಿನಗಳಲ್ಲಿ ವಥರಿಂಗ್ ಹೈಟ್ಸ್ ಪ್ರಕಟಣೆಗೊಂಡಿತು. ತನ್ನ ಕಾದಂಬರಿ ಮುಂದೊಂದು ದಿನ ಕಲ್ಟ್ ಕ್ಲಾಸಿಕ್ ಆಗುತ್ತದೆ ಎಂಬುದರ ಪರಿವೆಯೂ ಆಕೆಗೆ ಇರಲಿಲ್ಲ. ಆಕೆ ಬರೆದದ್ದು ಅದೊಂದೇ ಕಾದಂಬರಿ. 1939ರಲ್ಲಿ ಚಲನಚಿತ್ರವಾದ ವಥರಿಂಗ್ ಹೈಟ್ಸ್ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.