ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಬಸ್-ಆಟೊ ಚಾಲಕರ ಮಧ್ಯೆ ವಾರ್‌!

ಚಾಲಕರ ಮಧ್ಯೆ ವಾರ್‌ ಇದ್ದದ್ದೆ ಪರಿಹಾರ ಇಲ್ಲ!
Last Updated 12 ಜೂನ್ 2019, 19:30 IST
ಅಕ್ಷರ ಗಾತ್ರ

ಮೆಟ್ರೊ ರೈಲ್ವೆ ಸ್ಟೇಷನ್‌ ಸಮೀಪದಲ್ಲಿ ಬಸ್ ನಿಲ್ಲಿಸುವ ವಿಚಾರವಾಗಿ ಆಟೊ ಹಾಗೂ ಬಿಎಂಟಿಸಿ ಬಸ್ ಚಾಲಕರ ನಡುವೆ ವಾಗ್ವಾದ ನಡೆಯುತ್ತಲೇ ಇರುತ್ತದೆ. ಚಾಲಕರಲ್ಲಿ ವಿಚಾರಿಸಿದರೆ ಒಬ್ಬರ ಮೇಲೆ ಒಬ್ಬರು ದೂರುತ್ತಾರೆ.

‘ಬಸ್ ನಿಲ್ದಾಣ ಎಲ್ಲಿರುತ್ತದೋ ಅಲ್ಲಿ ಬಸ್ ನಿಲ್ಲಬೇಕು ಆದ್ರೆ ಮೆಟ್ರೊ ಸ್ಟೇಷನ್ ಮುಂದೆ ಬಸ್ ನಿಲ್ಲಿಸ್ತಾರೆ. ಅವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲ. ಅವರು ನಿಲ್ಲಿಸಿದ ಸ್ಥಳವೇ ಬಸ್‌ಸ್ಟಾಪ್. ಈ ಬಗ್ಗೆ ಕೇಳಿದರೆ ಎದುರು ವಾದಿಸ್ತಾರೆ’ -ಇದು ಆಟೊ ಚಾಲಕರ ವಾದ.

‘ಬಸ್ ನಿಲ್ದಾಣ ಅಂತ ಮಾಡಿದ ಬಹುತೇಕ ಕಡೆಗಳಲ್ಲಿ ಜನ ನಿಲ್ಲಲ್ಲ. ಅವರು ನಿಲ್ಲುವ ಸ್ಥಳದಲ್ಲಿ ನಾವು ಬಸ್ ನಿಲ್ಲಿಸುತ್ತೇವೆ. ಆಟೊಗಳು ಬಸ್ ನಿಲ್ಲಿಸುವ ಜಾಗದಲ್ಲಿ ನಿಂತಿರುತ್ತವೆ. ನಾವು ಹೇಗೆ ಹೋಗಬೇಕು? ಪಕ್ಕಕ್ಕೆ ಹೋಗಿ ಎಂದರೆ ಸಾಕು ಜೋರು ಮಾಡುತ್ತಾರೆ’

-ಇದು ಬಿಎಂಟಿಸಿ ಬಸ್ ಚಾಲಕರು ಹೇಳುವ ಪ್ರತಿವಾದ.

ಹೌದು. ಇದು ಮೈಸೂರು ರಸ್ತೆಯ ನಾಯಂಡಹಳ್ಳಿ ಯಲ್ಲಿರುವ ಮೆಟ್ರೊ ನಿಲ್ದಾಣದ ಕೆಳಗಿನ ಬಸ್ ನಿಲ್ದಾಣವೊಂದರ ಸಮಸ್ಯೆ ಮಾತ್ರವಲ್ಲ. ಬೈಯಪ್ಪನಹಳ್ಳಿ, ಯಲಚೇನಹಳ್ಳಿ ಕೊನೆಯ ನಿಲ್ದಾಣಗಳು ಸೇರಿದಂತೆ ಹಲವಾರು ಮೆಟ್ರೊ ನಿಲ್ದಾಣಗಳಲ್ಲಿ ಈ ಸಮಸ್ಯೆ ಇದೆ.

ಸಂಜೆಯಾದರೆ ಸಾಕು ಪ್ರಯಾಣಿಕರು ಹೆಚ್ಚಿದಂತೆ ಆಟೊಗಳು ಹೆಚ್ಚುತ್ತವೆ. ರಸ್ತೆಯ ಮಧ್ಯೆ ಬಿಎಂಟಿಸಿ ಬಸ್‌ಗಳು ಓಡಾಡುವುದಕ್ಕೆ ಜಾಗವಿರುವುದಿಲ್ಲ. ಬಸ್‌ ನಿಲ್ಲಿಸಲು ಆಟೊಗಳು ಅಡ್ಡವಾದಾಗ ಬಸ್‌ಗಳ ಸಾಲು ಬೆಳೆಯುತ್ತಾ ಹೋಗುತ್ತದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುವುದು ಇಲ್ಲಿ ಸಾಮಾನ್ಯವಾಗಿದೆ.

ಬಸ್‌ಗಳು ಒಂದರ ಹಿಂದೆ ಒಂದು ಹಾರ್ನ್‌ ಮಾಡುವಾಗ ಮುಂದಿರುವ ಬಸ್‌ ಚಾಲಕರು ಆಟೊ ಚಾಲಕರಿಗೆ ಪಕ್ಕಕ್ಕೆ ಸರಿಯಲು ಹೇಳಿದಾಗ ಇಬ್ಬರ ನಡುವೆ ಒಂದು ರೀತಿಯ ‘ವಾರ್‌’ ಶುರುವಾಗುತ್ತದೆ. ಅವಾಚ್ಯ ಪದಗಳಿಂದ ನಿಂದಿಸಿಕೊಳ್ಳುವುದು, ಬೆದರಿಸುವುದು ಇನ್ನೂ ಕೆಲವರು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗುವುದನ್ನು ‘ಇದು ದಿನಾಲು ಇದ್ದದ್ದೇ’ ಎಂದುಪ್ರಯಾಣಿಕರು ಬೇಸರ ಮಾಡಿಕೊಳ್ಳುತ್ತಾರೆ. ಇದೆಲ್ಲ ಇಲ್ಲಿ ಮಾಮೂಲು.

ಈ ಸಮಸ್ಯೆಗೆ ಯಾರು ಕಾರಣ?
ತಪ್ಪು ಆಟೊ ಚಾಲಕರದ್ದಾಗಲಿ, ಬಸ್‌ ಚಾಲಕರದ್ದಾಗಲಿ ಅಲ್ಲ. ಸಮಸ್ಯೆ ಪ್ರಯಾಣಿಕರದ್ದೇ. ಜನ ಮೆಟ್ರೊ ಸ್ಟೇಷನ್‌ ಇಳಿದ ನಂತರ ಸಮೀಪದ ಬಸ್ ನಿಲ್ದಾಣಕ್ಕೆ ಹೋಗದೆ ಮೆಟ್ರೊ ನಿಲ್ದಾಣದ ಮುಂಬಾಗಿಲ ಬಳಿಯೇ ನಿಲ್ಲುತ್ತಾರೆ. ಬಸ್ ನಿಲ್ದಾಣಕ್ಕೆ ಬಂದರೆ ಈ ಸಮಸ್ಯೆಯೇ ಇರುವುದಿಲ್ಲ. ಇದರಿಂದಾಗಿ ನಮಗೂ ಆಟೊದವರ ನಡುವೆ ಮಾತಿಗೆ ಮಾತು ಬೆಳೆಯುತ್ತಾ ಜಗಳಕ್ಕೆ ದಾರಿಯಾಗುತ್ತಿದೆ. ನಮ್ಮ ಬಸ್‌ಗಳು ಬಸ್‌ಸ್ಟಾಪ್‌ ಹತ್ತಿರ ನಿಂತರೆ ಅಲ್ಲಿಗೆ ಪ್ರಯಾಣಿಕರು ಬರುವುದಿಲ್ಲ. ಇದು ಈ ನಿಲ್ದಾಣವೊಂದರ ಸಮಸ್ಯೆ ಅಲ್ಲ. ಬೆಂಗಳೂರಿನ ಬಹುತೇಕ ಬಸ್‌ಸ್ಟಾಪ್‌ ಗೋಳಿದು ಎನ್ನುತ್ತಾರೆ ಟ್ರಾಫಿಕ್‌ ಕಂಟ್ರೋಲರ್‌ ಬೀರಪ್ಪ.

ಆಟೊದವರು ಬೆದರಿಸುತ್ತಾರೆ
‘ಆಟೊ ನಿಲ್ಲಿಸಲು ಪ್ರತ್ಯೇಕ ಸ್ಥಳವಿಲ್ಲ. ಹೀಗಾಗಿ ಬಸ್‌ ನಿಲ್ಲುವ ಸ್ಥಳದಲ್ಲಿಯೇ ಆಟೊಗಳನ್ನು ನಿಲ್ಲಿಸುತ್ತಾರೆ. ಬಸ್ ಚಾಲಕರೊಂದಿಗೆ ಆಟೊ ಚಾಲಕರು ಸಂಘರ್ಷಕ್ಕಿಳಿದಾಗ ನಾವೇನಾದರು ಮಧ್ಯ ಪ್ರವೇಶಿಸಿದರೆ ಆಟೊದವರ ಗುಂಪು ಬೆದರಿಕೆ ಹಾಕುತ್ತದೆ. ಹಾಗಾಗಿ ನಮಗ್ಯಾಕೆ ಅವರ ಜಗಳದ ವಿಚಾರ ಎಂದು ತೆಪ್ಪಗಿರುತ್ತೇವೆ. ಈ ಸಮಸ್ಯೆ ಪ್ರತಿದಿನ ಧಾರಾವಾಹಿಯಂತೆ ನಡೆಯುತ್ತಲೇ ಇರುತ್ತದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಟ್ರಾಫಿಕ್ ಕಂಟ್ರೋಲರ್.

ಟ್ರಾಫಿಕ್ ಪೊಲೀಸ್‌ ನಿರ್ಲಕ್ಷ್ಯ
ಆಟೊಗಳು ರಸ್ತೆಯ ಮಧ್ಯೆಯೇ ನಿಲ್ಲುತ್ತವೆ. ಹೇಳುವವರು ಕೇಳುವವರು ಯಾರೂ ಇಲ್ಲ. ಹೇಳಿದವರ ಮೇಲೆ ಆಟೊದವರು ರೇಗುವುದರಿಂದ ಇಲ್ಲಿ ಅವರದ್ದೇ ಕಾರು ಬಾರು. ಟ್ರಾಫಿಕ್ ಪೊಲೀಸರಂತೂ ಇತ್ತಕಡೆ ಸುಳಿಯುವುದಿಲ್ಲ. ಸುಳಿದರೂ ಸುಂಟರಗಾಳಿಯಂತೆ ಸುತ್ತಿ ಹೋಗುತ್ತಾರೆ. ಅವರು ಈ ಸಮಸ್ಯೆಯ ಕುರಿತು ಕಾಳಜಿ ವಹಿಸಿದರೆ ಸಮಸ್ಯೆಯೇ ಇರುವುದಿಲ್ಲ ಎನ್ನುತ್ತಾರೆ ಕಂಟ್ರೋಲರ್‌ ಬೀರಪ್ಪ.

ಪ್ರಯಾಣಿಕರು ನಿಲ್ಲುವ ಸ್ಥಳಗಳಲ್ಲಿ ಬಸ್‌ ನಿಲ್ದಾಣಗಳನ್ನು ರೂಪಿಸಬೇಕು. ಆದರೆ, ಪ್ರಯಾಣಿಕರು ಹೋಗಲಾಗದ ಜಾಗದಲ್ಲಿ ಅವುಗಳನ್ನು ನಿರ್ಮಿಸುತ್ತಾರೆ. ಹೀಗೆ ನಿರ್ಮಿಸಿರುವ ಎಷ್ಟೋ ನಿಲ್ದಾಣಗಳು ಪಾಳು ಬಿದ್ದಿವೆ. ನಾವು ಬಸ್ ನಿಲ್ದಾಣದ ಹತ್ತಿರ ನಿಲ್ಲಿಸಿದರೆ ಅಲ್ಲಿ ಯಾರೂ ಇರುವುದಿಲ್ಲ. ಹಾಗಾಗಿ ನಾವು ಪ್ರಯಾಣಿಕರು ಇರುವಲ್ಲಿಯೇ ನಿಲ್ಲಿಸುತ್ತೇವೆ. ಅಲ್ಲಿ ಆಟೊಗಳು ಕೂಡ ಇರುತ್ತವೆ. ಬಸ್‌ಸ್ಟಾಪ್ ಮುಂದೆ ನಿಲ್ಲಿಸಿದರೆ ಕಲೆಕ್ಷನ್ ಆಗುವುದಿಲ್ಲ ಎನ್ನುವುದು ಬಿಎಂಟಿಸಿ ಚಾಲಕರು ಹಾಗೂ ಕಂಡಕ್ಟರ್‌‌ಗಳ ಗೋಳು.

ಮೆಟ್ರೊ ನಿಲ್ದಾಣದ ಮುಂದೆ ಬಸ್‌ ಹಾಗೂ ಆಟೊಗಳು ಸಾಲಗಿ ನಿಂತಿರುವುದು​
ಮೆಟ್ರೊ ನಿಲ್ದಾಣದ ಮುಂದೆ ಬಸ್‌ ಹಾಗೂ ಆಟೊಗಳು ಸಾಲಗಿ ನಿಂತಿರುವುದು​

ಓಲಾ, ಉಬರ್‌ ಕಾರುಗಳು ಕೂಡ ಇಲ್ಲಿಯೇ ನಿಲ್ಲುತ್ತವೆ
ರಸ್ತೆಯ ಮಧ್ಯೆ ಆಟೊಗಳು ಮಾತ್ರವಲ್ಲ ಓಲಾ, ಉಬರ್ ಕಾರುಗಳು ಕೂಡ ಬಂದು ನಿಲ್ಲುತ್ತವೆ. ಇದರಿಂದ ಬಿಎಂಟಿಸಿ ಬಸ್‌ಗಳಿಗೆ ಪರದಾಟ. ಈ ಸಮಸ್ಯೆಗಳಿಗೆ ಪರಿಹಾರ ಹೇಳುವವರು ಯಾರು? ಇಲ್ಲಿ ತಪ್ಪು ಯಾರದು ಎಂಬುದು ಕೂಡ ತಿಳಿಯದಂತಾಗಿದೆ.

ಇನ್ನು ಕೆಲವೆಡೆ ಬಸ್‌ ನಿಲ್ದಾಣಗಳು ಇಲ್ಲ. ಬಸ್‌ ನಿಲ್ಲುವ ಆಸುಪಾಸಿನಲ್ಲಿ ಖಾಸಗಿ ವಾಹನಗಳು ತಂಗಿರುತ್ತವೆ. ಒಟ್ಟಿನಲ್ಲಿ ಬಿಎಂಟಿಸಿ ಬಸ್‌ ಚಾಲಕರು ಆಟೊ ಚಾಲಕರ ನಡುವೆ ನಡೆಯುವ ಜಗಳಕ್ಕೆ ಕೊನೆಯಿಲ್ಲದಂತಾಗಿದೆ. ಈ ಸಮಸ್ಯೆ ಮುಂದುವರೆಯುವುದು ನೋಡಿದರೆ ಇದು ಎಂದೂ ಮುಗಿಯದ ಕಥೆಯಂತೆ.

**
ಬಸ್‌ ನಿಲ್ದಾಣ ಇದ್ದಲ್ಲಿಗೆ ಪ್ರಯಾಣಿಕರು ಹೋಗುವುದಿಲ್ಲ. ಹಾಗಾಗಿ ಬಸ್‌ ಮೆಟ್ರೊ ನಿಲ್ದಾಣದ ಮುಂದೆ ನಿಲ್ಲಿಸುತ್ತಾರೆ.
-ಬೀರಪ್ಪ,ಟ್ರಾಫಿಕ್ ಕಂಟ್ರೋಲರ್ವಿ, ಜಯನಗರ ಟಿಟಿಎಂಸಿ

*

ಬಸ್‌ಸ್ಟಾಪ್‌ ಪಕ್ಕದಲ್ಲಿ ಇದ್ದರೂ ಅಲ್ಲಿ ನಿಲ್ಲಿಸುವುದಿಲ್ಲ. ಅವರು ಎಲ್ಲಿ ನಿಲ್ಲಿಸುತ್ತಾರೋ ಅದೇ ಬಸ್‌ಸ‌್ಟಾಪ್‌. ಕೇಳುವವರು ಯಾರು ಇಲ್ಲ
-ರವಿ, ಆಟೊ ಚಾಲಕ

*

ಬಸ್‌ ಎಲ್ಲಿ ನಿಲ್ಲುತ್ತೊ ಅಲ್ಲಿಗೆ ಪ್ರಯಾಣಿಕರು ಹೋಗುತ್ತಾರೆ ಆದರೆ ಪ್ರಯಾಣಿಕರು ಇರುವಲ್ಲಿಗೇ ಬಸ್‌ ಬರುವುದರಿಂದ ನಿಲ್ದಾಣಗಳು ನಿರುಪಯುಕ್ತವಾಗಿವೆ
-ಕಿರಣ್‌ ಕುಮಾರ್ ಹೆಚ್.ಆರ್ ಪ್ರಯಾಣಿಕ

*

ಪ್ರಯಾಣಿಕರು ನಿಲ್ಲುವ ಸ್ಥಳಗಳಲ್ಲಿ ಬಸ್‌ ನಿಲ್ದಾಣ ಮಾಡದೆ ತಮಗೆ ಬೇಕಾದ ಸ್ಥಳಗಳಲ್ಲಿ ಮಾಡುತ್ತಾರೆ ಆದರೆ ಅಲ್ಲಿಗೆ ಪ್ರಯಾಣಿಕರು ಬರುವುದಿಲ್ಲ
-ಕುಮಾರ್‌ ಬಿಎಂಟಿಸಿ ಬಸ್‌ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT