ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರಪಟ್ಟಣ ಸಂಗೀತ ಪರಂಪರೆಗೆ ಮತ್ತೊಂದು ಗರಿ

₹ 40 ಲಕ್ಷದಲ್ಲಿ ದ್ವಾದಶ ಸ್ವರಸ್ತಂಭ ಮಂಟಪ ನಿರ್ಮಾಣ: ಇಂದು ಲೋಕಾರ್ಪಣೆ
Last Updated 18 ಮೇ 2019, 19:45 IST
ಅಕ್ಷರ ಗಾತ್ರ

ಮುಖ್ಯಾಂಶಗಳು

* ತಂಬೂರಿಯಾಕಾರದ ಸಪ್ತಸ್ವರ ಮಂದಿರದಲ್ಲಿ ಮತ್ತೊಂದು ದಾಖಲೆ

* ಸಂಗೀತಸಾಧಕರ ಜನ್ಮಭೂಮಿ ರುದ್ರಪಟ್ಟಣ

* ಸಪ್ತಸ್ವರ ರಸ್ತೆಯಲ್ಲಿ ಸೊಂಪಾಗಿ ಬೆಳೆದ 72 ಗಿಡ

ಕೊಣನೂರು: ಸಂಗೀತ ಗ್ರಾಮವೆಂದೇ ಪ್ರಸಿದ್ಧವಾಗಿರುವ ರುದ್ರಪಟ್ಟಣ ಗ್ರಾಮಕ್ಕೆ ದ್ವಾದಶಸ್ವರಸ್ತಂಭ ಮಂಟಪವೆಂಬ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದ್ದು, ಇಲ್ಲಿನ ಸಂಗೀತ ಪರಂಪರೆಗೆ ಮತ್ತಷ್ಟು ಶ್ರೀಮಂತಗೊಳಿಸುತ್ತಿದೆ. ಅದು ಮೇ 19ರಂದು ಲೋಕಾರ್ಪಣೆಯಾಗಲಿದೆ.

ರುದ್ರಪಟ್ಟಣ ಗ್ರಾಮದಲ್ಲಿನ ತಂಬೂರಿಯಾಕಾರದ ಸಪ್ತಸ್ವರ ಮಂದಿರ ನಿರ್ಮಾಣ ವಿಶ್ವದಲ್ಲೇ ಮೊದಲನೆಯದ್ದು. ಹೀಗಾಗಿ ಇದು ದೇಶ, ವಿದೇಶಿಗರ ಗಮನಸೆಳೆದಿದೆ. ಇಲ್ಲಿನ ಸಪ್ತಸ್ವರ ಮಂದಿರದ ಆವರಣದಲ್ಲಿ ತಲೆ ಎತ್ತಿರುವ ದ್ವಾದಶಸ್ವರಸ್ತಂಭ ಮಂಟಪವು ಮತ್ತೊಂದು ವಿನೂತನ ಪರಿಕಲ್ಪನೆಯಾಗಿದ್ದು, ಸಂಗೀತ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿನ 12 ಸ್ವರಗಳನ್ನು ಪ್ರತ್ಯೇಕ ಕಲ್ಲುಗಳಲ್ಲಿ ಹೊಮ್ಮುವಂತೆ ನಿರ್ಮಿಸಿ 12 ಸ್ವರಗಳನ್ನು ಪ್ರತಿನಿಧಿಸುವ 12 ಕಲ್ಲುಗಳನ್ನು ಅರ್ಧವರ್ತುಲಾಕಾರದಲ್ಲಿ ವ್ಯವಸ್ಥಿತವಾಗಿ ಜೋಡಿಸಿ ಇವೆಲ್ಲವುಗಳನ್ನೂ ಅಂದವಾಗಿ ಕಾಣುವಂತೆ ಮಂಟಪವೊಂದನ್ನು ನಿರ್ಮಿಸುವ ಕಲ್ಪನೆಯೇ ದ್ವಾದಶಸ್ವರಸ್ತಂಭ ಮಂಟಪ.

ಮರದ ಸುತ್ತಿಗೆಯಿಂದ ಒಂದೊಂದು ಕಂಬವನ್ನು ಬಡಿದಾಗ ಒಂದೊಂದು ಸ್ವರ ಹೊಮ್ಮವಂತೆ ಮಾಡಿರುವುದು ಇಲ್ಲಿನ ವಿಶೇಷವಾಗಿದೆ.
ಶಾಸ್ತ್ರೀಯ ಸಂಗೀತದಲ್ಲಿ ಪ್ರಧಾನ 12 ಸ್ವರಸ್ಥಾನಗಳಿದ್ದು ರಿಷಭ, ಮಧ್ಯಮ, ದೈವತ, ನಿಷಾದ, ಷಡ್ಜ ಮತ್ತು ಪಂಚಮಸ್ವರಗಳು ತಲಾ ಎರಡು ಸ್ಥಾನಗಳನ್ನು ಹೊಂದಿದ್ದು, ಈ 12 ಉಪಸ್ವರಗಳನ್ನೂ ಒಂದೊಂದು ಕಲ್ಲಿನ ಮೂಲಕ ಕೇಳಬಹುದಾಗಿದೆ. 12 ಉಪಸ್ವರಗಳನ್ನು ಕೇಳಿಸುವ ಕಂಬಗಳನ್ನು ಸ್ವರದ ಏರಿಳಿತದ ಕ್ರಮದಂತೆ ಆರೋಹಣ ಕ್ರಮದಲ್ಲಿ ಜೋಡಿಸಲಾಗಿದೆ.

ಹಂಪಿಯಲ್ಲಿರುವ ಸಂಗೀತ ಮಂಟಪದ ಮಾದರಿಯಲ್ಲೇ ನಿರ್ಮಾಣವಾಗುತ್ತಿರುವ ಇಡೀ ಸಂಗೀತ ಪ್ರಪಂಚಕ್ಕೆ ಚರಿತಾರ್ಹವಾದ ಕೊಡುಗೆಯಾಗಲಿದೆ. ಒಟ್ಟು ₹ 40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದ್ವಾದಶ ಸ್ವರಸ್ತಂಭ ಮಂಟಪದಲ್ಲಿನ ಒಂದೊಂದು ಕಂಬದ ನಿರ್ಮಾಣಕ್ಕೂ ಒಂದು ಲಕ್ಷ ವೆಚ್ಚವಾಗುತ್ತಿದೆ.

ಸಂಗೀತ ಕ್ಷೇತ್ರಕ್ಕೆ ಮಹತ್ತರವಾದ ಸೇವೆಯನ್ನು ಸಲ್ಲಿಸಿರುವ ಆರ್.ಆರ್.ಕೇಶವಮೂರ್ತಿ, ಆರ್.ಎಸ್.ಕೇಶವಮೂರ್ತಿ, ಆರ್.ಕೆ.ಶ್ರೀಕಂಠನ್, ಆರ್.ಕೆ.ರಾಮನಾಥನ್, ಆರ್.ಕೆ.ವೆಂಕಟರಮಣಶಾಸ್ತ್ರಿ, ಆರ್.ಕೆ.ನಾರಾಯಣಸ್ವಾಮಿ, ವೀಣೆ ರಂಗಪ್ಪ, ವೀಣೆ ಜನಾರ್ದನ್, ವೀಣೆ ವೆಂಕಟರಾಮಯ್ಯ ತಾರನಾಥ್, ತ್ಯಾಗರಾಜನ್ ಸೇರಿದಂತೆ ಹಲವಾರು ಸಾಧಕರ ಜನ್ಮಭೂಮಿ ರುದ್ರಪಟ್ಟಣದಲ್ಲಿ ಸಂಗೀತ ಪ್ರಪಂಚದ ಎರಡನೇ ವೈಶಿಷ್ಟ್ಯವಾಗುತ್ತಿರುವ ದ್ವಾದಶಸ್ವರಸ್ತಂಭ ಮಂಟಪವು ಸಂಗೀತ ಕೈಂಕರ್ಯಕ್ಕೆ ಮುನ್ನುಡಿಯಾಗುತ್ತಿದೆ.

ಈಗಾಗಲೇ ಇಲ್ಲಿನ ತಂಬೂರಿಯಾಕಾರದ ಸಪ್ತಸ್ವರ ಮಂದಿರವು ಪ್ರತಿದಿನ ನೂರಾರು ಸಂಗೀತಪ್ರಿಯರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ದ್ವಾದಶಸ್ವರಸ್ತಂಭ ಮಂಟಪವು ಸಹ ತನ್ನದೇ ಆದ ವಿಶೇಷತೆಗಳಿಂದ ಕೂಡಿದ್ದು ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ಹಸಿರುಡುಗೆಯ ಸಪ್ತಸ್ವರ ಪಥ

ಸಪ್ತಸ್ವರ ಮಂದಿರ ರಸ್ತೆಗೆ ಸಪ್ತಸ್ವರ ಪಥ ಎಂದು ನಾಮಕರಣ ಮಾಡಿ, ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ಸಂಗೀತೋತ್ಸವ ಸಮಿತಿ ಟ್ರಸ್ಟ್ 72 ಮೇಳ ರಾಗಗಳ ಹೆಸರಿನಲ್ಲಿ ನೆಟ್ಟು ಬೆಳೆಸಿರುವ 72 ಗಿಡಗಳು ಸೊಂಪಾಗಿ ಬೆಳೆದು ನಿಂತಿದ್ದು ಹಚ್ಚ ಹಸುರಿನಿಂದ ಕೂಡಿದ್ದು ರಸ್ತೆಯ ಅಂದವನ್ನು ಹೆಚ್ಚಿಸಿವೆ.

ಸತತವಾಗಿ 17 ವರ್ಷಗಳಿಂದ ವಾರ್ಷಿಕ ಸಂಗೀತೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ಗ್ರಾಮದ ಸಂಗೀತ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಾ 18ನೇ ಸಂಗೀತೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಭಾನುವಾರ ಸಂಭ್ರಮದ ತೆರೆ ಕಾಣಲಿದೆ.

ಹೊಯ್ಸಳ ಶೈಲಿಯಲ್ಲಿ ನಿರ್ಮಾಣ

ದ್ವಾದಶ ಸ್ವರಸ್ತಂಭಮಂಟಪವನ್ನು ಸಂಪೂರ್ಣವಾಗಿ ಹೊಯ್ಸಳ ಶಿಲ್ಪಕಲೆಯ ಮಾದರಿಯಲ್ಲಿ ನಿರ್ಮಿಸಲಾಗಿದೆ. ಮಂಟಪದ ಸುತ್ತಲಿನ ಗೋಡೆಯ ಮೇಲೆ ಮತ್ತು ದ್ವಾದಶ ಸ್ವರಸ್ತಂಭದ ಕೆಳಭಾಗದಲ್ಲಿ ಆನೆ, ಮಕರ ಮತ್ತು ಹೊಯ್ಸಳಬಳ್ಳಿಯ ಸಾಲನ್ನು ಚಿತ್ರಿಸಲಾಗಿದೆ. ಮಂಟಪದ ಬಾಗಿಲಿನ ಇಕ್ಕೆಲಗಳಲ್ಲಿ ಶಿಲಾಬಾಲಿಕೆಯರ ಅಂದವಾದ ಮೂರ್ತಿಗಳು ಸ್ವಾಗತಿಸಿದರೆ. ಮೇಲ್ಭಾಗದಲ್ಲಿ ಸರಸ್ವತಿ ಮತ್ತು ಗಣಪತಿಗಳ ಮೂರ್ತಿಗಳಿವೆ. ಹೊಯ್ಸಳ ಶಿಲ್ಪಕಲೆಯ ಕಂಬಗಳನ್ನು ಹೋಲುವ ಕಂಬಗಳು ಆಕರ್ಷಕವಾಗಿವೆ.

ಉಪಸ್ವರಗಳ ಕಲ್ಪನೆ ನೀಡುವ ದ್ವಾದಶಸ್ತರಸ್ತಂಭ

ಸಂಗೀತವೆಂದರೆ ಸಪ್ತಸ್ವರಗಳೆನ್ನುವುದು ಸಾಮಾನ್ಯ ಅಭಿಪ್ರಾಯವಾಗಿದೆ. ಆದರೆ ಸಂಗೀತದ ಉಪಸ್ವರಗಳಿದ್ದಾಗ ಮಾತ್ರ ಭಾರತೀಯ ಸಂಗೀತದ ಶಾಸ್ತ್ರೀಯತೆ ಅಭಿವ್ಯಕ್ತವಾಗುತ್ತದೆ. ಸಾಮಾನ್ಯರಿಗೆ ಉಪಸ್ವರಗಳ ಕಲ್ಪನೆಯನ್ನು ಮೂಡಿಸಿ ಕೇಳುವಂತೆ ಮಾಡುವ ಪ್ರಯತ್ನವೇ ದ್ವಾದಶಸ್ವರಸ್ತಂಭ ಮಂಟಪ ನಿರ್ಮಾಣ.

ವಿದ್ವಾನ್ ಆರ್.ಕೆ.ಪದ್ಮನಾಭ್, ಮ್ಯಾನೇಜಿಂಗ್ ಟ್ರಸ್ಟಿ. ರುದ್ರಪಟ್ಟಣ ಸಂಗೀತೋತ್ಸವ ಸಮಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT