ಮಂಗಳವಾರ, ನವೆಂಬರ್ 30, 2021
21 °C
ಎಲ್ಲೆಲ್ಲೂ ಸಂಗೀತವೇ...

PV Web Exclusive: ರಸ್ತೆಗೊಂದು ಹೆಸರು, ವೃತ್ತಕ್ಕೊಂದು ನಾಮ!

ಉಮಾ ಅನಂತ್ Updated:

ಅಕ್ಷರ ಗಾತ್ರ : | |

Prajavani

ದಾಸಶ್ರೇಷ್ಠ, ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು ‘ಶುದ್ಧ ಧನ್ಯಾಸಿ’ ರಾಗದಲ್ಲಿ ‘ನಾರಾಯಣ ನಿನ್ನ ನಾಮದ ಸ್ಮರಣೆಯ ನಾಮಾಮೃತವು ಎನ್ನ ನಾಲಿಗೆಗೆ ಬರಲಿ....’ ಎಂದು ಹಾಡಿದರು. ಎಂದರೆ ನಾರಾಯಣ ಹೆಸರನ್ನು ನಿತ್ಯವೂ ಸ್ಮರಣೆ ಮಾಡುತ್ತಾ ಈ ನಾಮ ನಾಲಿಗೆಯಲ್ಲಿ ಸದಾ ನಲಿದಾಡುತ್ತಿರಲಿ ಎಂಬುದು ಇದರ ತಾತ್ಪರ್ಯ. ಹಾಗೆಯೇ ಸಂಗೀತ ದಿಗ್ಗಜರ, ಮಹಾಜ್ಞಾನಿಗಳ ಹೆಸರನ್ನು ಆಗಾಗ ನೋಡುತ್ತಾ, ಕೇಳುತ್ತಾ, ಓದುತ್ತಾ ಇದ್ದರೆ ಅವರದೇ ಸಂಸ್ಕಾರ ನಮಗೂ ಬರುತ್ತದೆ, ದಿವ್ಯಜ್ಞಾನ, ನಾದಪ್ರಜ್ಞೆ ನಮ್ಮ ಮನದಲ್ಲೂ ಜಾಗೃತವಾಗುತ್ತದೆ. ಇದಕ್ಕಾಗಿಯೇ ರಸ್ತೆಗೆ, ವೃತ್ತಕ್ಕೆ, ನಗರಕ್ಕೆ, ಭವನಕ್ಕೆ ತ್ಯಾಗರಾಜ, ಪುರಂದರದಾಸ, ಕನಕದಾಸ, ವಾದಿರಾಜ, ಬಸವೇಶ್ವರ... ಹೀಗೆ ವಾಗ್ಗೇಯಕಾರರ, ವಚನಕಾರರ ಹೆಸರನ್ನು ನಾಮಕರಣ ಮಾಡಿರುವುದು.

ಅಂದ ಹಾಗೆ ಇಂದು (ಸೆಪ್ಟೆಂಬರ್‌ 9) ಬೆಳಿಗ್ಗೆ ಬೆಂಗಳೂರಿನ ತ್ಯಾಗರಾಜನಗರ ಸಮೀಪದ ನರಸಿಂಹರಾಜ ಕಾಲೊನಿಯ ನಾಲ್ಕನೇ ಅಡ್ಡರಸ್ತೆಗೆ ವೀಣೆ ವಿದ್ವಾಂಸ ಗಾನಕಲಾಭೂಷಣ ರಾಜಾರಾವ್‌ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ (ಆಗಸ್ಟ್‌10, 2018ರಲ್ಲಿ) ಮಲ್ಲೇಶ್ವರಂ 13ನೇ ಅಡ್ಡರಸ್ತೆಗೆ ವೀಣೆ ದೊರೆಸ್ವಾಮಿ ಅಯ್ಯಂಗಾರ್‌ ಅವರ ಹೆಸರನ್ನು ನಾಮಕರಣ ಮಾಡಲಾಗಿತ್ತು. ಸಂಗೀತ ದಿಗ್ಗಜರ, ಮೇಧಾವಿಗಳ, ಕವಿಗಳ, ಸಾಹಿತಿಗಳ, ಮಹಾತ್ಮರ ಹೆಸರುಗಳನ್ನು ರಸ್ತೆ, ವೃತ್ತಗಳಿಗೆ ಇಟ್ಟರೆ ಆ ಮೂಲಕವಾದರೂ ನಿತ್ಯವೂ ಇವರ ಮಹಾಕಾರ್ಯದ ಸ್ಮರಣೆಯಾಗಬಹುದು ಎಂಬ ಉದ್ದೇಶ ಇದರ ಹಿಂದಿನದು.


ದೊರೆಸ್ವಾಮಿ ಅಯ್ಯಂಗಾರ್

ಪ್ರಬುದ್ಧ ವೀಣಾವಾದಕ

ವೀಣೆಗೆ ಅನ್ವರ್ಥನಾಮವಾಗಿ ರೂಪುಗೊಂಡಿದ್ದವರು ದೊರೆಸ್ವಾಮಿ ಅಯ್ಯಂಗಾರ್‌ ಅವರು, ತಮ್ಮ ಆರನೇ ವಯಸ್ಸಿನಲ್ಲೇ ಪ್ರಬುದ್ಧ ವೀಣಾವಾದಕರಾಗಿದ್ದರು. ತಮ್ಮ ಹತ್ತನೇ ವಯಸ್ಸಿನಲ್ಲೇ ಮೈಸೂರಿನ ಮಹಾರಾಜರ ಎದುರು ವೀಣೆ ನುಡಿಸಿ 50 ಬೆಳ್ಳಿ ನಾಣ್ಯಗಳ ಬಹುಮಾನ ಪಡೆದಿದ್ದ ಪ್ರತಿಭಾನ್ವಿತ. ಇವರು ವೀಣೆ ಮತ್ತು ಕೊಳಲು ಎರಡೂ ವಾದನಗಳಲ್ಲೂ ಪರಿಣತಿ ಹೊಂದಿದ್ದು, ರಾಜ ಕುಟುಂಬದವರಿಗೆ ವೀಣೆ ಮತ್ತು ಕೊಳಲು ವಾದನದ ಪಾಠ ಹೇಳುತ್ತಿದ್ದರು. ದೊರೆಸ್ವಾಮಿ ಅಯ್ಯಂಗಾರ್ ಅವರು ಅತ್ಯುತ್ತಮ ಬರಹಗಾರರೂ ಆಗಿದ್ದು 'ವೀಣೆಯ ನೆರಳಿನಲ್ಲಿ' ಎಂಬ ಕೃತಿ ಬರೆದು ಮುಂದಿನ ಪೀಳಿಗೆಗೆ ವೀಣೆಯ ಅಭ್ಯಾಸ ಮಾಡಲು ಅನುವು ಮಾಡಿಕೊಟ್ಟಿದ್ದರು. ಇಂಥ ಮಹಾನುಭಾವರ ಹೆಸರು ರಸ್ತೆಗೆ ನಾಮಕರಣಗೊಂಡಿರುವುದು ಸಮಂಜಸವಾಗಿಯೇ ಇದೆ.

ವೀಣೆ ರಾಜಾರಾವ್‌

ಗಾನಕಲಾಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ವಿದ್ವಾನ್‌ ರಾಜಾರಾವ್‌ ಕೂಡ ಮುಂಚೂಣಿಯಲ್ಲಿದ್ದ ವೈಣಿಕರೇ ಆಗಿದ್ದರು. ಹಲವಾರು ವಿದ್ಯಾರ್ಥಿಗಳಿಗೆ ವೀಣಾಭ್ಯಾಸ ಮಾಡಿಸಿ ಉತ್ತಮ ವೈಣಿಕರನ್ನು ತಯಾರು ಮಾಡಿದ ಕೀರ್ತಿ ವೀಣೆ ರಾಜಾರಾಯರಿಗೆ ಸಲ್ಲಬೇಕು. ಇಂಥ ಪರಿಣತ ವೀಣಾವಾದಕರ ಹೆಸರನ್ನು ಎನ್‌ಆರ್‌ ಕಾಲೊನಿ ನಾಲ್ಕನೇ ಕ್ರಾಸ್‌ ರಸ್ತೆಗೆ ಇಟ್ಟದ್ದು ಕೂಡ ಈ ಮಹಾವಿದ್ವಾಂಸರಿಗೆ ಸಂದ ಗೌರವ ಎಂದೇ ಹೇಳಬೇಕು. ಬೆಂಗಳೂರು ಮಹಾನಗರಪಾಲಿಕೆ ವತಿಯಿಂದ ಈ ನಾಮಕರಣ ಕಾರ್ಯಕ್ರಮ ನಡೆದಿದ್ದು, ಪಾಲಿಕೆ ಸದಸ್ಯ ಬಿ.ಎಸ್‌. ಸತ್ಯನಾರಾಯಣರಾವ್‌ ಕಾರ್ಯಕ್ರಮದ ನೇತೃತ್ವ ವಹಿಸಿರುವುದು ಸ್ತುತ್ಯರ್ಹ.

ಸಾರ್ವಭೌಮ ವಾದ್ಯ

ತಂತಿವಾದ್ಯಗಳ ತಾಯಿ ವೀಣೆ ಸಾರ್ವಭೌಮ ವಾದ್ಯ. ಎಲ್ಲ ತಂತಿವಾದ್ಯಗಳಿಗೂ ಮೂಲ ವೀಣೆಯೇ ಆಗಿದೆ. ಈ ವಾದ್ಯಕ್ಕೆ ಶತಶತಮಾನಗಳ ಇತಿಹಾಸವೂ ಇದೆ. ವೀಣೆಯಲ್ಲಿ ಸರಸ್ವತಿ ವೀಣೆ, ಚಿತ್ರವೀಣೆ, ವಿಪಂಚಿ ವೀಣೆ, ರುದ್ರವೀಣೆ, ಮೋಹನವೀಣೆ, ಸಾತ್ವಿಕ ವೀಣೆ... ಹೀಗೆ ಹಲವು ವಿಧಗಳಿವೆ. ಮೈಸೂರು ಬಾನಿಯಲ್ಲಿ ವೀಣೆ ನುಡಿಸುತ್ತಿದ್ದ ಪದ್ಮಭೂಷಣ ವಿದ್ವಾನ್‌ ದೊರೆಸ್ವಾಮಿ ಅಯ್ಯಂಗಾರ್‌ ಹಾಗೂ ವೀಣೆ ರಾಜಾರಾವ್‌ ಇಬ್ಬರೂ ವೀಣಾವಾದನದ ಮಟ್ಟಿಗೆ ಬಹುಮುಖ್ಯ ಹೆಸರು. ಇಂಥ ಮಹಾನ್‌ ವಿದ್ವಾಂಸರ ಹೆಸರುಗಳನ್ನು ರಸ್ತೆ, ವೃತ್ತಗಳಿಗೆ ಇಟ್ಟರೆ ಅದರಿಂದ ಮಕ್ಕಳಿಗೆ ಅವರ ಜೀವನಚರಿತ್ರೆಯನ್ನು, ಸಂಗೀತ ಸಾಧನೆಯನ್ನು ತಿಳಿಯುವ ಕುತೂಹಲವೂ ಉಂಟಾಗುತ್ತದೆ. ಇದೇ ಹೆಸರುಗಳನ್ನು ನೋಡುತ್ತಾ ಇದ್ದರೆ ಆ ಸ್ಮರಣೆಯ ನಾಮಾಮೃತ ಮಕ್ಕಳಲ್ಲಿ ಬಂದು ಸದ್ಭಾವನೆಯೂ ಮೂಡುವಂತಾಗುತ್ತದೆ.

ದೆಹಲಿಯಲ್ಲಿ ತ್ಯಾಗರಾಜರ ಹೆಸರನ್ನು ರಸ್ತೆಗೆ ಇಡಲಾಗಿದೆ. ಬೆಂಗಳೂರಿನಲ್ಲಿ ನಗರಕ್ಕೆ ಇಡಲಾಗಿದೆ. ಪುರಂದರ ದಾಸರ ಹೆಸರು ನಗರಕ್ಕೆ, ಭವನಕ್ಕೆ ಇಡಲಾಗಿದೆ. ವಾದಿರಾಜರ ಹೆಸರಿನಲ್ಲಿ ಭವನ ನಿರ್ಮಿಸಲಾಗಿದೆ. ಪಿಟೀಲು ಚೌಡಯ್ಯನವರ ಹೆಸರಿನ ಸಭಾಭವನವಿದೆ. ಕನಕದಾಸರ ಹೆಸರಿನ ವೃತ್ತವೂ ಇದೆ. ಪುರಂದರದಾಸ, ಕನಕದಾಸರ ಹೆಸರಿನಲ್ಲಿ ಪ್ರಶಸ್ತಿ, ಪುರಸ್ಕಾರಗಳನ್ನು, ನಿಜಗುಣ ಶಿವಯೋಗಿಗಳ ಹೆಸರಿನಲ್ಲಿ ಪುರಸ್ಕಾರವನ್ನು ನೀಡಲಾಗುತ್ತಿದೆ. ಇದೇ ರೀತಿ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯ, ಶ್ಯಾಮಾಶಾಸ್ತ್ರಿಗಳ, ಮುತ್ತಯ್ಯ ಭಾಗವತರ, ಎಂ.ಎಸ್‌. ಸುಬ್ಬಲಕ್ಷ್ಮಿ, ಗಂಗೂಬಾಯಿ ಹಾನಗಲ್‌, ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರು, ಕುಮಾರ ಗಂಧರ್ವ ಮುಂತಾದವರ ಹೆಸರುಗಳನ್ನು ನಗರ, ವೃತ್ತ, ರಸ್ತೆಗಳಿಗೆ ಇಟ್ಟರೆ ಅವರ ಹೆಸರು ದಿನನಿತ್ಯವೂ ಜನರ ಮನದಾಳದಲ್ಲಿ ಅಚ್ಚಳಿಯದೆ ಇರುತ್ತದೆ, ನಾಮಸ್ಮರಣೆ ಮಾಡಿದಂತೆಯೂ ಆಗುತ್ತದೆ.

ಇದೇ ರೀತಿ ಕುವೆಂಪು ನಗರ, ಬೇಂದ್ರೆ ರಸ್ತೆ, ಶಿವರಾಮ ಕಾರಂತ ಬಡಾವಣೆ... ಹೀಗೆ ಮಹಾಕವಿಗಳ ಹೆಸರುಗಳನ್ನೂ, ರಾಣಿ ಚೆನ್ನಮ್ಮ ವೃತ್ತ, ಬಸವೇಶ್ವರ ವೃತ್ತ, ಅಬ್ಬಕ್ಕ ರಸ್ತೆ,  ಸಂಗೊಳ್ಳಿರಾಯಣ್ಣ ವೃತ್ತ, ಕೆಂಪೇಗೌಡ ಬಡಾವಣೆ ಎಂದು ಹೋರಾಟಗಾರ/ಗಾರ್ತಿಯರ ಹೆಸರುಗಳನ್ನೂ, ಗಾಂಧಿ, ನೆಹರು, ಅಂಬೇಡ್ಕರ್‌, ಶಾಸ್ತ್ರಿ.. ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನೂ ಈಗಾಗಲೇ ಇಡಲಾಗಿದೆ. ರಾಜಕುಮಾರ್‌, ವಿಷ್ಣುವರ್ಧನ್‌ ಮುಂತಾದ ಸಿನಿದಿಗ್ಗಜರ ಹೆಸರುಗಳನ್ನೂ ರಸ್ತೆ, ವೃತ್ತ, ನಗರ, ಭವನಗಳಿಗೆ ಇಟ್ಟರೆ ಅದು ಮುಂದೆ ಇಂಥ ಮಹಾನುಭಾವರ ನಾಮ ಎಂದೆಂದೂ ನೆನಪಿನಲ್ಲಿ ಅಚ್ಚೊತ್ತಿ ನಿಲ್ಲುವಂತಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು