ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಪಿಟೀಲಿನೊಂದಿಗೆ ನಾದಾನುಸಂಧಾನ

Last Updated 13 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಅಪ್ಪಟ ಕರ್ನಾಟಕ ಶಾಸ್ತ್ರೀಯ ಸಂಗೀತ ಮನೆತನದಲ್ಲಿ, ಏಳು ತಲೆಮಾರುಗಳ ದಕ್ಷಿಣಾದಿ ಸಂಗೀತ ಪರಂಪರೆಯ ಕುಟುಂಬದಲ್ಲಿ ಜನಿಸಿ ಮೂರನೇ ವಯಸ್ಸಿಗೇ ಪಿಟೀಲು ತಂತಿ ಮೀಟಲಾರಂಭಿಸಿದ್ದು, 16 ವರ್ಷದವರೆಗೂ ಕರ್ನಾಟಕ ಸಂಗೀತವನ್ನೇ ನುಡಿಸಿ ಸಂಗೀತ ಸಾಮ್ರಾಜ್ಞಿ ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಗಾಯನಕ್ಕೆ ದೇಶದಾದ್ಯಂತ ಪಿಟೀಲು ಪಕ್ಕವಾದ್ಯ ನುಡಿಸಿದ್ದು, ಬಳಿಕ ಅನಿವಾರ್ಯವಾಗಿ ಹಿಂದೂಸ್ತಾನಿ ಶೈಲಿಯ ಪಿಟೀಲು ವಾದನಕ್ಕೆ ಆತುಕೊಂಡು ದೇಶದ ಅತ್ಯಂತ ಹಿರಿಯ ಹಿಂದೂಸ್ತಾನಿ ವಯೊಲಿನ್‌ ವಾದಕಿಯಾಗಿ ಹೆಸರು ಗಳಿಸಿದ್ದು ವಿದುಷಿ ಡಾ. ಎನ್‌. ರಾಜಮ್‌ ಅವರ ಅಗ್ಗಳಿಕೆ. ಸದ್ಯ 83ರ ಹರೆಯದ ಈ ಸಾಧಕಿಯ ಯಶೋಗಾಥೆಗೆ ಪದ್ಮಶ್ರೀ (1984), ಪದ್ಮಭೂಷಣದ (2004) ಗರಿಯೂ ಮುಕುಟದಂತಿವೆ. ವಿದುಷಿ ಎನ್‌. ರಾಜಮ್‌ ಈಗ ಮಹಾರಾಷ್ಟ್ರ ಸರ್ಕಾರ ನೀಡುವ ಪಂ. ಭೀಮಸೇನ ಜೋಶಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದು, ಸುಮಾರು ಏಳೂವರೆ ದಶಕಗಳ ಪಿಟೀಲು ನುಡಿಸಾಣಿಕೆಗೆ ಸಂದ ಗೌರವಪೂರ್ವಕ ಮನ್ನಣೆ ಇದಾಗಿದೆ.

ಈ ಹಿನ್ನೆಲೆಯಲ್ಲಿ ರಾಜಮ್‌ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸಂಗೀತ ಜೀವನದ ಹಲವು ಆಯಾಮಗಳನ್ನು, ಸಾಧನೆಯ ಹಾದಿಯನ್ನು ಅವಲೋಕಿಸಿದ್ದಾರೆ.

ಪಾರಂಪರಿಕ ಸಂಗೀತ ಮನೆತನ ನಿಮ್ಮದು. ಹಲವಾರು ವರ್ಷಗಳಿಂದ ನಿಮ್ಮ ಮನೆಯಲ್ಲಿ ಪಿಟೀಲು ನಾದ ಅನುರಣಿಸುತ್ತಲೇ ಇದೆ. ನಿಮ್ಮ ಸಂಗೀತ ಪಯಣದ ಬಗ್ಗೆ ಹೇಳಿ.
ನಮ್ಮದು ಸಂಗೀತದ ಮನೆತನ. ಕಳೆದ ಏಳು ತಲೆಮಾರುಗಳಿಂದ ನಮ್ಮ ಕುಟುಂಬದಲ್ಲಿ ಹೆಣ್ಣುಮಗುವೇ ಜನಿಸಲಿ, ಗಂಡು ಮಗುವೇ ಹುಟ್ಟಲಿ ಸಂಗೀತ ಅದರಲ್ಲೂ ಪಿಟೀಲು ನಾದದೊಂದಿಗೇ ಜೀವನ ನಡೆಸಿಕೊಂಡು ಬಂದವರು ನಾವು. ನನ್ನ ತಂದೆ ಎ. ನಾರಾಯಣ ಅಯ್ಯರ್‌ ಉತ್ತಮ ಪಿಟೀಲು ಮತ್ತು ವೀಣಾ ವಾದಕರು. ನನ್ನ ಸೋದರ ಟಿ.ಎನ್‌. ಕೃಷ್ಣನ್‌ ಪಿಟೀಲು ವಿದ್ವಾಂಸರು. ನಾನು ಮೂರನೆ ವಯಸ್ಸಿಗೇ ಪಿಟೀಲು ಕಲಿಯಲಾರಂಭಿಸಿದೆ. ದಿನಕ್ಕೆ ನಾಲ್ಕೈದು ಗಂಟೆಗಳ ‌ಕಾಲ ನುಡಿಸಿ ಅಭ್ಯಾಸ ಮಾಡಬೇಕಿತ್ತು. ಅಪ್ಪ ಎಂದಿಗೂ ಅಭ್ಯಾಸದಿಂದ ತಪ್ಪಿಸಿಕೊಳ್ಳಲು ಬಿಟ್ಟವರಲ್ಲ. ನನಗೆ ಒಂಬತ್ತು ವರ್ಷ ಇರುವಾಗ ಮೊದಲ ವಯೊಲಿನ್‌ ಕಛೇರಿ ನೀಡಿದೆ. ಹನ್ನೆರಡು ವರ್ಷದ ಹುಡುಗಿ ಇರುವಾಗಲೇ ಸಂಗೀತ ಸಾಮ್ರಾಜ್ಞಿ ಎಂ.ಎಸ್‌. ಸುಬ್ಬಲಕ್ಷ್ಮಿ ಅವರಿಗೆ ಪಿಟೀಲು ಪಕ್ಕವಾದ್ಯ ನೀಡಲಾರಂಭಿಸಿದೆ. ಭಾರತದಾದ್ಯಂತ ಅವರೊಂದಿಗೆ ಪಿಟೀಲು ನುಡಿಸಿದ್ದೇನೆ.

ಮುಂದೆ ಸಂಗೀತದಲ್ಲಿ ಪದವಿ ಓದಬೇಕು ಎಂದುಕೊಂಡೆ. ಇದು ಚೆನ್ನೈಯಲ್ಲಿ ಸಾಧ್ಯವಿರಲಿಲ್ಲ. ಆಗ ತಂದೆಯವರು ನನ್ನನ್ನು ಬನಾರಸ್‌ನ ವಿಶ್ವವಿದ್ಯಾಲಯಕ್ಕೆ ಕರೆದುಕೊಂಡು ಹೋಗಿ ಪ್ರವೇಶ ದೊರಕಿಸಿಕೊಟ್ಟರು. ಆದರೆ ಅಲ್ಲಿ ಕರ್ನಾಟಕ ಸಂಗೀತ ಇರಲಿಲ್ಲ. ಅನಿವಾರ್ಯವಾಗಿ ಹಿಂದೂಸ್ತಾನಿ ಸಂಗೀತದತ್ತ ಹೊರಳಿದೆ. ಸುಮಾರು ಹನ್ನೆರಡು ವರ್ಷ ಕರ್ನಾಟಕ ಶಾಸ್ತ್ರೀಯ ಶೈಲಿಯ ಸಂಗೀತ ಮನೋಧರ್ಮ, ಸ್ವರ ಪ್ರಸ್ತಾರ, ನೆರವಲ್‌, ರಾಗ–ತಾನಗಳನ್ನು ಕಲಿತ ಕಾರಣ ಹಿಂದೂಸ್ತಾನಿ ಶೈಲಿಯ ತಾನ್‌–ತರಾನಗಳನ್ನು ನುಡಿಸಲು ಕಿಂಚಿತ್ತೂ ಕಷ್ಟವೆನಿಸಲಿಲ್ಲ.

ಸಂಗೀತದ ಅಕಡೆಮಿಕ್‌ ಅಧ್ಯಯನ, ಪ್ರಾಧ್ಯಾಪನದಲ್ಲೂ ನುರಿತವರು ನೀವು. ಒಬ್ಬ ಅತ್ಯುತ್ತಮ ಸಂಗೀತ ಬೋಧಕಿಯಾಗಿ ನಿಮ್ಮ ಅನುಭವದ ಆಳ–ಅಗಲಗಳನ್ನು ವಿವರಿಸಿ.
ಸಂಗೀತವನ್ನು ಪಾರಂಪರಿಕವಾಗಿ ಕಲಿತು ಮುಂದೆ ಅಕಡೆಮಿಕ್‌ ಆಗಿ ಅಧ್ಯಯನ ನಡೆಸಿದೆ. ಬನಾರಸ್‌ ಸಂಗೀತ ವಿಶ್ವವಿದ್ಯಾಲಯದಲ್ಲಿ ಸುಮಾರು 40 ವರ್ಷಗಳ ಕಾಲ ಸಂಗೀತ ಬೋಧಿಸಿದ ಅನುಭವವಿದೆ. ಸಂಗೀತ ವಿಭಾಗದ ಮುಖ್ಯಸ್ಥೆಯಾಗಿ, ವಿ.ವಿಯ ಡೀನ್‌ ಆಗಿ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸಂಗೀತದ ಅತಿಥಿ ಪ್ರಾಧ್ಯಾಪಕಿಯಾಗಿ ನಿರಂತರವಾಗಿ ಸುಮಾರು ಏಳೂವರೆ ದಶಕಗಳಿಗೂ ಹೆಚ್ಚು ಕಾಲ ಸಂಗೀತದ ಶಾಸ್ತ್ರ ಹಾಗೂ ಗಾಯನ ಭಾಗಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ ಅನುಭವ ಎಂದೂ ಮರೆಯುವಂಥದ್ದಲ್ಲ.

ಮೊಮ್ಮಗಳು ರಾಗಣಿ, ಮಗಳು ಸಂಗೀತಾ, ಮತ್ತೊಬ್ಬ ಮೊಮ್ಮಗಳು ನಂದಿನಿ ಅವರೊಂದಿಗೆ ಎನ್‌.ರಾಜಮ್‌
ಮೊಮ್ಮಗಳು ರಾಗಣಿ, ಮಗಳು ಸಂಗೀತಾ, ಮತ್ತೊಬ್ಬ ಮೊಮ್ಮಗಳು ನಂದಿನಿ ಅವರೊಂದಿಗೆ ಎನ್‌.ರಾಜಮ್‌

ನಿಮ್ಮ ತಂದೆಯೊಂದಿಗೆ ನಿಮಗೆ ತಂದೆ–ಮಗಳ ಅನುಬಂಧಕ್ಕಿಂತಲೂ ಮಿಗಿಲಾಗಿ ಗುರು–ಶಿಷ್ಯ ಬಾಂಧವ್ಯವೇ ಸಂಗೀತದ ಬದುಕಿನಲ್ಲಿ ಮೇಲ್ಪಂಕ್ತಿ ಹಾಕಿದೆ ಎಂದಿರಿ. ಅದು ಹೇಗೆ?
ನಮ್ಮ ತಂದೆ ಎ. ನಾರಾಯಣ ಅಯ್ಯರ್‌ ಅವರು ಬಹಳ ಕಟ್ಟುನಿಟ್ಟಿನ ವ್ಯಕ್ತಿ. ಅವರು ವಯೊಲಿನ್‌ ಅನ್ನು ಬಹಳ ಪ್ರೀತಿಸುತ್ತಿದ್ದರು, ನಾವೂ ಕಠಿಣ ಅಭ್ಯಾಸ ಮಾಡಬೇಕು ಎಂದು ಅಪೇಕ್ಷೆ ಪಡುತ್ತಿದ್ದರು. ಮಧ್ಯರಾತ್ರಿಯಲ್ಲಿ ಅವರಿಗೆ ಎಚ್ಚರವಾಗಿ ಪಿಟೀಲು ರಿಯಾಜ್‌ ಶುರು ಮಾಡಿದರೆಂದರೆ ನಮ್ಮನ್ನೂ ಅದೇ ವೇಳೆಗೆ ನಿದ್ದೆಯಿಂದ ಎಚ್ಚರಿಸಿ ಅಭ್ಯಾಸ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಆಗೆಲ್ಲ ಪ್ರಾಕ್ಟೀಸ್‌ ಮಾಡುವಾಗ ನನಗೆ ಅಳು ಒತ್ತರಿಸಿ ಬರುತ್ತಿತ್ತು. ಅವರ ಮಾತೇ ಅಂತಿಮವಾಗಿತ್ತು, ಮತ್ತು ಅದನ್ನು ನಿರಾಕರಿಸುವ ಧೈರ್ಯವೂ ನಮಗಿರಲಿಲ್ಲ. ಆದರೆ ಅದು ನನಗೆ ಸಿಕ್ಕಿದ ಅದ್ಭುತ ಅವಕಾಶ ಎಂಬುದು ಈಗ ಮನದಟ್ಟಾಗಿದೆ. ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ತಂದೆಯೇ ಕಾರಣ. ಜೊತೆಗೆ ನನ್ನ ಗುರು ಪಂ. ಓಂಕಾರನಾಥ ಠಾಕೂರ್‌ ಕೂಡ. ತಂದೆಯವರು ಕರ್ನಾಟಕ ಸಂಗೀತ ಕಲಾವಿದರಾಗಿದ್ದರೂ ಅವರ ಮಕ್ಕಳಲ್ಲೊಬ್ಬರು ಹಿಂದೂಸ್ತಾನಿ ಸಂಗೀತ ಕಲಿಯಬೇಕು ಎಂಬ ಆಸೆ ಅವರಿಗಿತ್ತು. ಅವರ ಬಯಕೆಯನ್ನು ನಾನು ಈಡೇರಿಸಿದೆ.

ಹದಿನಾರು ವರ್ಷಕ್ಕೇ ಮನೆ ಬಿಟ್ಟು ಬನಾರಸ್‌ಗೆ ಹೋದಾಗ ಅಲ್ಲಿ ಭಾಷೆ, ಸಂಸ್ಕೃತಿ. ಆಹಾರ, ಸಂಗೀತಶೈಲಿ ಎಲ್ಲವೂ ನನಗೆ ಹೊಸದಾಗಿತ್ತು. ಮೇಲಾಗಿ ಗುರು ಪಂ. ಓಂಕಾರನಾಥ ಅವರಿಗೆ ವಯೊಲಿನ್‌ ನುಡಿಸಲು ಬರುತ್ತಿರಲಿಲ್ಲ. ಅವರು ಹಿಂದೂಸ್ತಾನಿ ಗಾಯಕರು. ಗಂಟೆಗಟ್ಟಲೆ ಹಾಡುತ್ತಿದ್ದರು. ಅದನ್ನು ನಾನು ಪಕ್ಕದಲ್ಲಿ ಕುಳಿತು ವಯೊಲಿನ್‌ನಲ್ಲಿ ಪಡಿಮೂಡಿಸಬೇಕಾಗಿತ್ತು. ಸಂಗೀತದ ಪ್ರತಿಯೊಂದು ನೋಟ್‌ ಅನ್ನೂ ಕಿಂಚಿತ್ತೂ ತಪ್ಪಿಲ್ಲದೆ ಮೇಲಾಗಿ ಗಾಯನದಷ್ಟೇ ವೇಗವಾಗಿ ನುಡಿಸುವುದು ಬಹುದೊಡ್ಡ ಸವಾಲೂ ಆಗಿತ್ತು. ಆದರೆ ‘ಗಾಯಕಿ ಅಂಗ್‌‌’ನಲ್ಲಿ ನಾನು ಯಶಸ್ವಿಯಾದದ್ದು ಅವರಿಗೆ ಬಹಳ ತೃಪ್ತಿ ತಂದಿತ್ತು. ಇಷ್ಟು ವರ್ಷಗಳ ವಯೊಲಿನ್‌ ನುಡಿಸಾಣಿಕೆಯಲ್ಲಿ ಅತ್ಯಂತ ಸುಧಾರಿತ ತಂತ್ರಕಾರಿ ಅಂಶಗಳನ್ನು ರೂಢಿಸಿಕೊಂಡಿದ್ದು, ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದು, ಈ ಮೂಲಕ ಸಂಗೀತದ ಹೊಸ ಹೊಸ ಆಯಾಮಗಳನ್ನು ಕೇಳುಗರಿಗೆ ಉಣಬಡಿಸಿದ್ದು ಎಲ್ಲವೂ ನನ್ನ ತಂದೆಯವರ ನಿರಂತರ ಪ್ರೋತ್ಸಾಹದಿಂದಾಗಿಯೇ ಎಂಬುದನ್ನು ಸದಾ ಸ್ಮರಿಸುತ್ತೇನೆ.

ನಮ್ಮ ದೇಶದಲ್ಲಿ ಹಿಂದೂಸ್ತಾನಿ ಶೈಲಿಯ ಪಿಟೀಲು ಕಲಾವಿದರ ಸಂಖ್ಯೆ ಬಹಳ ಕಡಿಮೆ ಇದೆ. ಇದಕ್ಕೆ ನಿರ್ದಿಷ್ಟ ಕಾರಣಗಳೇನಾದರೂ ಇವೆಯೇ?
ಹಿಂದೂಸ್ತಾನಿ ಸಂಗೀತದಲ್ಲಿ ಪಿಟೀಲು ವಾದಕರುಬಹಳ ಕಡಿಮೆ. ಕಾರಣ ಕರ್ನಾಟಕ ಸಂಗೀತದಲ್ಲಿ ವಯೊಲಿನ್‌ ಅನ್ನು ಗಾಯನಕ್ಕೆ ಪಕ್ಕವಾದ್ಯವಾಗಿ ಬಳಸಲಾಗುತ್ತದೆ. ಇದಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ಹಿಂದೂಸ್ತಾನಿ ವಯೊಲಿನ್‌ಗೆ 100 ವರ್ಷಗಳ ಇತಿಹಾಸ ಅಷ್ಟೇ ಇರುವುದು. ಅಲ್ಲದೆ ಹಿಂದೂಸ್ತಾನಿ ಸಂಗೀತಕ್ಕೆ ಸಾಥಿ ವಾದ್ಯವಾಗಿ ಹಿಂದೆ ಸಾರಂಗಿಯನ್ನು ಬಳಸಲಾಗುತ್ತಿತ್ತು. ಸದ್ಯ ಹಾರ್ಮೋನಿಯಂಬಳಸುವಂತೆ. ಇದು ಕೂಡ ಪಿಟೀಲು ನುಡಿಸುವ ಕಲಾವಿದರ ಸಂಖ್ಯೆ ಕಡಿಮೆಯಾಗಲು ಕಾರಣ.

ಮಗಳು, ಮೊಮ್ಮಕ್ಕಳ ಜೊತೆಗೆ ನಿಮ್ಮ ಪಿಟೀಲು ಕಛೇರಿಗಳು ಜಗದ್ವಿಖ್ಯಾತವಾಗಿವೆ. ಇದು ಸಂಗೀತ ಲೋಕದ ಹೆಮ್ಮೆ. ಸದ್ಯದ ನಿಮ್ಮ ಕೌಟುಂಬಿಕ ಸಂಗೀತ ಪಯಣ ಹೇಗೆ ಸಾಗುತ್ತಿದೆ?
ಮಗಳು ಸಂಗೀತಾ ಶಂಕರ್‌ ಉತ್ತಮ ವಯೊಲಿನ್‌ ವಾದಕಿ. ಮೊಮ್ಮಕ್ಕಳಾದ ರಾಗಿಣಿ ಶಂಕರ್, ನಂದಿನಿ ಶಂಕರ್‌ ಕೂಡ ಪಿಟೀಲು ನುಡಿಸಾಣಿಕೆಯಲ್ಲಿ ಪಳಗಿದ್ದು, ದೇಶವಿದೇಶಗಳಲ್ಲಿ ಹಲವಾರು ಪಿಟೀಲು ಕಛೇರಿಗಳನ್ನು ನೀಡಿದ್ದೇವೆ. ಯೂಟ್ಯೂಬ್‌ನಲ್ಲಿಯೂ ಇದರ ಧ್ವನಿಮುದ್ರಿಕೆ ಲಭ್ಯವಿದೆ. ಸಹೋದರ ಟಿ.ಎನ್‌. ಕೃಷ್ಣನ್‌ ಜೊತೆಗೂ ಹಿಂದೂಸ್ತಾನಿ– ಕರ್ನಾಟಕ ಸಂಗೀತದ ಪಿಟೀಲು ಜುಗಲ್‌ಬಂದಿ ನೀಡಿದ್ದೇನೆ.

ಸಂಗೀತ, ವಯೊಲಿನ್‌ ಬಗ್ಗೆ ಇನ್ನೇನು ಹೇಳಲು ಇಷ್ಟಪಡುತ್ತೀರಿ?
ಐ ಲವ್‌ ಮ್ಯೂಸಿಕ್‌, ಐ ಲವ್‌ ವಯೊಲಿನ್‌... ಅಷ್ಟೆ..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT