ಗುರುವಾರ , ಡಿಸೆಂಬರ್ 3, 2020
18 °C

ಎಲೆಕ್ಟ್ರಿಕ್‌ ಗಿಟಾರಿನಲ್ಲಿ ಸರ್ವ ಸಂಗೀತ ದರ್ಶನ!

ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಅದು ಗೋಧೂಳಿ ಸಮಯ. ಇಡೀ ಜಗತ್ತಿನಲ್ಲಿ ಕೊರೊನಾ ಹಾವಳಿಯಿಂದ ಸೋಂಕಿತರು, ಶಂಕಿತರು, ಆತಂಕಿತರು ತುಂಬಿರುವಾಗ ಎಲ್ಲರಿಗೂ ಸಂಗೀತದ ಮೂಲಕ ಸಾಂತ್ವನದ ತಂಗಾಳಿ ಬೀಸಿ ನೊಂದ ಮನಸ್ಸುಗಳಿಗೆ ನಾದೋಲ್ಲಾಸ ತುಂಬಿದವರು ಪಂ. ಪ್ರಕಾಶ್‌ ಸೊಂಟಕ್ಕೆ.

‘ಪ್ರಜಾವಾಣಿ ದಸರಾ ಸಂಗೀತ ಮಹೋತ್ಸವ’ದ ಎರಡನೆ ದಿನ ಎಲೆಕ್ಟ್ರಿಕ್‌ ಗಿಟಾರ್‌ ವಾದಕ ಪಂ. ಪ್ರಕಾಶ್‌ ಸೊಂಟಕ್ಕೆ ಪ್ರಸ್ತುತಪಡಿಸಿದ ಎಲ್ಲ ಸಂಗೀತ ಪ್ರಕಾರಗಳ ‘ಮಾಧುರ್ಯ ಗುಚ್ಛ’ ಕೇಳುಗರಿಗೆ ವಿಶಿಷ್ಟ ಅನುಭೂತಿ ನೀಡಿತು. ಇಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಫ್ಯೂಷನ್‌, ಹಿಂದಿ ಮತ್ತು ಕನ್ನಡ ಸಿನಿಮಾ ಸಂಗೀತ, ಬಸವಣ್ಣನವರ ವಚನ, ದೇವರನಾಮ... ಮುಂತಾದವುಗಳ ರಾಗ ಸಂಗಮ ಇದ್ದು ಒಂದೇ ಕಛೇರಿಯಲ್ಲಿ ‘ಸರ್ವ ಸಂಗೀತ’ ದರ್ಶನ ಲಭಿಸುವಂತಾಯಿತು. ಒಂದು ಗಂಟೆಯ ಅವಧಿಯಲ್ಲಿ ಸಂಗೀತದ ಒಂದೊಂದೇ ‘ಹೂಬಾಣ’ಗಳನ್ನು ಬಿಡುತ್ತಾ, ಸ್ವರ, ರಾಗ, ಭಾವಗಳ ಚಿತ್ತಾರ ಬರೆದರು. ಅಲ್ಲದೆ ಗಿಟಾರ್‌ನಲ್ಲಿ ತೋರಿಸಿದ ಬೆರಳುಗಳ ತಂತ್ರಗಾರಿಕೆ (ಫಿಂಗರಿಂಗ್‌ ಟೆಕ್ನಿಕ್ಸ್) ಕೇಳುಗರನ್ನು ಸ್ವರ ಸಮ್ಮೋಹನಕ್ಕೊಳಗಾಗುವಂತೆ ಮಾಡಿತು.

ಸಂಜೆಯ ಸುಮಧುರ ಹಾಗೂ ಭಕ್ತಿಪ್ರಧಾನ ರಾಗ ‘ಯಮನ್‌’ ಕಛೇರಿಗೆ ಉತ್ತಮ ನಾಂದಿ ಹಾಡಿತು. ತುಸು ವಿಲಂಬಿತ್‌ ಲಯದೊಂದಿಗೆ ಆರಂಭಿಸಿ ರಾಗವನ್ನು ವಿಸ್ತರಿಸುತ್ತಾ ವೇಗ ಗತಿಯಲ್ಲಿ ಧೃತ್‌ ಭಾಗವನ್ನು ನುಡಿಸಿದರು. ಮಧ್ಯೆ ಮಧ್ಯೆ ಗಾಯನವನ್ನೂ, ಸ್ವರಮಾಲೆಗಳನ್ನೂ ಪೋಣಿಸುತ್ತಾ ರಾಗಕ್ಕೆ ರಂಗು ತುಂಬಿದರು. ನುಡಿಸಾಣಿಕೆಯ ನಡುವಿನಲ್ಲಿ ಸರ್‌ಗಮ್‌ಗಳನ್ನು ಹಾಡುತ್ತಾ ನುಡಿಸುವ ರಾಗ–ಸ್ವರಗಳಿಗೆ ಹೆಚ್ಚಿನ ಜೀವ ತುಂಬುವ ವಿಶ್ವವಿಖ್ಯಾತ ಮೋಹನವೀಣೆ ವಾದಕ ಪಂ. ವಿಶ್ವಮೋಹನ ಭಟ್‌ ಅವರ ನುಡಿಸಾಣಿಕೆ ಶೈಲಿ ಈ ಸಂದರ್ಭದಲ್ಲಿ ನೆನಪಿಗೆ ಬಂದಿತು.
ಸಾಮಾಜಿಕ ಜಾಲತಾಣದ ಮೂಲಕ ಸಂಗೀತ ಆಲಿಸುವ ಕೇಳುಗರಲ್ಲಿ ಎಲ್ಲ ರೀತಿಯ ಹಾಡು ಸವಿಯುವ ಆಸಕ್ತರಿರುತ್ತಾರೆ. ಇದನ್ನು ಮನಗಂಡ ಸೊಂಟಕ್ಕೆ ಅವರು ಶಾಸ್ತ್ರೀಯ ಸಂಗೀತದ ಏಕತಾನತೆಯನ್ನು ಮರೆಸುವ ಸಲುವಾಗಿ ಮುಂದೆ ‘ಪ್ರೇಮದ ಕಾಣಿಕೆ’ ಸಿನಿಮಾದ ಜನಪ್ರಿಯ ಹಾಡು ‘ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ..’ ಅನ್ನು ಗಿಟಾರ್‌ನಲ್ಲಿ ನುಡಿಸಿದ್ದು ರೋಚಕವಾಗಿತ್ತು.

ಹಿಂದೂಸ್ತಾನಿ ಸಂಗೀತದ ಚಾರುಕೇಶಿ ರಾಗ ಕೇಳುಗರಿಗೆ ಎಂದಿಗೂ ಪ್ರಿಯವಾದದ್ದೇ. ಈ ರಾಗದಲ್ಲಿ ದೈವತ ಮತ್ತು ನಿಷಾಧ ಕೋಮಲ ಸ್ವರಗಳು ಹಾಗೂ ಉಳಿದೆಲ್ಲ ಸ್ವರಗಳು ಶುದ್ಧ ಸ್ವರಗಳಾಗಿದ್ದು, ದಕ್ಷಿಣಾದಿಯಲ್ಲೂ ಈ ರಾಗ ಮೇಳಕರ್ತ ರಾಗವಾಗಿ ಕೇಳುಗರನ್ನು ರಂಜಿಸುತ್ತದೆ. ಈ ರಾಗ ವಾದ್ಯಸಂಗೀತಕ್ಕೆ ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಈ ಸುಮಧುರ ರಾಗವನ್ನು ಪಾಶ್ಚಾತ್ಯ ಸಂಗೀತದೊಂದಿಗೆ ಹೊಸೆದು ದೇಸಿ–ವಿದೇಶಿ ಸಂಗೀತ ಮಾಧುರ್ಯವನ್ನು ಒಂದೇ ವಾದ್ಯದಲ್ಲಿ ಸೃಷ್ಟಿಸಿ ಚಮತ್ಕಾರ ಮೆರೆದರು.

ಮುಂದೆ ನಾದವೈವಿಧ್ಯದಲ್ಲಿ ಸ್ಥಾನ ಪಡೆದುಕೊಂಡದ್ದು ಬಸವಣ್ಣನವರ ವಚನ. ‘ ಚಕೋರಂಗೆ ಚಂದ್ರಮನ ಬೆಳಕಿನಾ ಚಿಂತೆ’ ಹಾಡಿ‌ಗೆ ಗಾಯನ–ವಾದನದ ಮೂಲಕ ನ್ಯಾಯ ದೊರಕಿಸಿಕೊಟ್ಟರು. ಕೊನೆಯಲ್ಲಿ ಪುರಂದರದಾಸರ ಸುಪ್ರಸಿದ್ಧ ಕೃತಿ ‘ಭಾಗ್ಯದ ಲಕ್ಷ್ಮಿ ಬಾರಮ್ಮ..ವನ್ನು ಹಿಂದೂಸ್ತಾನಿ–ಕರ್ನಾಟಕ ಸಂಗೀತ ಎರಡನ್ನೂ ಬ್ಲೆಂಡ್‌ ಮಾಡಿದ ಮಿಶ್ರ ಶೈಲಿಯ ಜೊತೆಗೆ ಪಂ. ಭೀಮಸೇನ ಜೋಶಿಯವರು ಹಾಡಿದ್ದ ವಿಶಿಷ್ಟ ಶೈಲಿಯನ್ನೂ ಸೇರಿಸಿ ನುಡಿಸಿದ್ದು ಇಡೀ ಕಛೇರಿಗೆ ಕಳಶವಿಟ್ಟಂತಿತ್ತು. ತಬಲಾದಲ್ಲಿ ಕಾರ್ತಿಕ್‌ ಭಟ್‌ ಸಹಕರಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು