ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತದ ಸೀಮೋಲ್ಲಂಘನ

Last Updated 16 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಪ್ರಪಂಚದ ಯಾವುದೋ ತುದಿಯಲ್ಲಿರುವವರು ಮತ್ತೆಲ್ಲೋ ಇರುವವರ ಬಳಿ ಆನ್‍ಲೈನ್‍ನಲ್ಲಿ ಸಂಗೀತ ಕಲಿಯುವುದು, ಸಹ ಕಲಾವಿದರೊಂದಿಗೆ ಆನ್‍ಲೈನ್ ಕಾರ್ಯಕ್ರಮಗಳನ್ನು ಕೊಡುವುದು, ಬೇರೆ ಬೇರೆ ಕಡೆ ಇರುವವರು ಜೊತೆ ಸೇರಿ ವಿಡಿಯೋಗಳನ್ನು ಸೇರಿಸಿ, ವಿಧವಿಧದಲ್ಲಿ ಎಡಿಟಿಂಗ್ ಮಾಡಿ ಹೊಸತನ್ನು ಮಾಡುವುದು ಇವೆಲ್ಲಾ ಸಹಜ ಎಂಬಷ್ಟರ ಮಟ್ಟಿಗೆ ಆಗಿವೆ.

***

ಸಂಗೀತವೆಂಬುದು ವಿಶ್ವವ್ಯಾಪಿಯಾದುದು, ಸೀಮಾತೀತವಾದದ್ದು, ದೇಶ-ಗಡಿಗಳನ್ನು ಮೀರಿದ್ದು, ಯಾರನ್ನೂ ತಲುಪಬಲ್ಲದು ಎಂಬಂತಹ ಮಾತುಗಳನ್ನೆಲ್ಲಾ ಕೇಳುತ್ತಿರುತ್ತೇವೆ. ಆದರೆ ಒಂದು ಪ್ರದೇಶದಲ್ಲಿ ಅಲ್ಲಿನ ಸಂಸ್ಕೃತಿ-ಸ್ವಭಾವಗಳನ್ನು ಅನುಸರಿಸಿಕೊಂಡು ರೂಪುಗೊಂಡ ಸಂಗೀತ ತೀರಾ ವಿಭಿನ್ನವಾದ, ಎಷ್ಟೋ ಬಾರಿ ವೈರುಧ್ಯ ಎನಿಸಬಹುದಾದ ಸಾಮಾಜಿಕ ಸನ್ನಿವೇಶದಲ್ಲಿ ಒಡಮೂಡುವುದನ್ನು ನೋಡಿದಾಗ ಅಚ್ಚರಿಯಾಗುತ್ತದೆ ಮಾತ್ರವಲ್ಲ ಇದರ ಹಿಂದಿನ ಸಂದರ್ಭ, ಆಸಕ್ತಿ, ಪರಿಶ್ರಮ ಇವುಗಳೆಡೆ ಗಮನ ಸಾಗುತ್ತದೆ.

ಬದಲಾದ ಈಗಿನ ಸಂದರ್ಭದಲ್ಲಿ ಬೇರೆ ದೇಶಗಳಿಗೆ ಪ್ರಯಾಣ ಮಾಡುವುದು, ಪ್ರಪಂಚದ ಯಾವುದೋ ತುದಿಯಲ್ಲಿರುವವರು ಮತ್ತೆಲ್ಲೋ ಇರುವವರ ಬಳಿ ಆನ್‍ಲೈನ್‍ನಲ್ಲಿ ಸಂಗೀತ ಕಲಿಯುವುದು, ಸಹ ಕಲಾವಿದರೊಂದಿಗೆ ಆನ್‍ಲೈನ್ ಕಾರ್ಯಕ್ರಮಗಳನ್ನು ಕೊಡುವುದು, ಬೇರೆ ಬೇರೆ ಕಡೆ ಇರುವವರು ಜೊತೆ ಸೇರಿ ವಿಡಿಯೋಗಳನ್ನು ಸೇರಿಸಿ, ವಿಧವಿಧದಲ್ಲಿ ಎಡಿಟಿಂಗ್ ಮಾಡಿ ಹೊಸತನ್ನು ಮಾಡುವುದು ಇವೆಲ್ಲಾ ಸಹಜ ಎಂಬಷ್ಟರ ಮಟ್ಟಿಗೆ ಆಗಿವೆ.

ಇಂದು ಹಿಂದೂಸ್ತಾನಿ-ಕರ್ನಾಟಕಿ ಎರಡೂ ಪದ್ಧತಿಗಳಲ್ಲಿ ಕಲಿಯುತ್ತಿರುವ ವಿದೇಶದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಅಚ್ಚರಿ ಮೂಡಿಸುವಷ್ಟಿದೆ. ಚೆನ್ನೈನಲ್ಲಿ ಡಿಸೆಂಬರ್ ತಿಂಗಳಿನ ‘ಮ್ಯೂಸಿಕ್ ಸೀಸನ್’ನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹಾಡುವ/ನುಡಿಸುವ ಬಾಲ ಮತ್ತು ಯುವ ಕಲಾವಿದರಲ್ಲಿ ಅಗ್ರಪಾಲು ಎನ್‍ಆರ್‌ಐಗಳದ್ದೇ ಆಗಿರುತ್ತದೆ. ನಮ್ಮ ದೇಶದ ಪ್ರಸಿದ್ಧ, ಹಿರಿಯ ಸಂಗೀತಗಾರರೆಲ್ಲರೂ ನಿಯಮಿತವಾಗಿ ಅಮೆರಿಕ ಹಾಗೂ ಇತರ ಯುರೋಪ್ ದೇಶಗಳಿಗೆ ಕಾರ್ಯಕ್ರಮ ನೀಡಲು ಪ್ರಯಾಣ ಮಾಡುತ್ತಾರೆ. ಕಾರ್ಯಕ್ರಮಗಳೊಂದಿಗೆ ನಡೆಯುವ ಅನೇಕ ಕಾರ್ಯಾಗಾರಗಳು, ಉಪನ್ಯಾಸ, ಚರ್ಚೆಗಳು ಅಲ್ಲಿನ ಅಭ್ಯಾಸಿಗಳಿಗಿರುವ ಆಸಕ್ತಿಯನ್ನು ತಿಳಿಸುತ್ತವೆ. ಕ್ಲೀವ್‍ಲಾಂಡ್‌ನಲ್ಲಿ ನಡೆಯುವ ತ್ಯಾಗರಾಜ ಆರಾಧನಾ ಸಂಗೀತ ಕಾರ್ಯಕ್ರಮ, ಲಂಡನ್‌ನ ದರಬಾರ್ ಫೆಸ್ಟಿವಲ್ ಮುಂತಾದ ವೈಭವೋಪೇತವಾದ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಕಲಾವಿದರು ಹೆಚ್ಚಿನ ಗೌರವವನ್ನು ಪಡೆದುಕೊಳ್ಳುತ್ತಾರೆ. ಈ ಎಲ್ಲಾ ಬದಲಾವಣೆಯ ಹಿಂದಿನ ಪರಿಶ್ರಮ, ಸಾಗಿಬಂದ ದಾರಿ ಕುತೂಹಲಕರವಾದದ್ದು.

ಮೊದಲ ಬಾರಿಗೆ ವಿದೇಶದಲ್ಲಿ ಕಾರ್ಯಕ್ರಮ ನೀಡಲು ತಮ್ಮ ತಂಡದೊಂದಿಗೆ ಪ್ರವಾಸ ಮಾಡಿದ ಭಾರತೀಯ ಕಲಾಕಾರರೆಂದರೆ ಉದಯ್ ಶಂಕರ್ ಅವರ ನೃತ್ಯ ತಂಡ. ಈ ತಂಡದೊಂದಿಗೆ ಆಗ ಬಾಲಕರಾಗಿದ್ದ ರವಿಶಂಕರ್ ಅವರ ವಿದೇಶ ಪ್ರವಾಸ ಆರಂಭವಾಗಿತ್ತು. ಮುಂದೆ 1960ರ ಸುಮಾರಿಗೆ ಅಮೆರಿಕಾದಲ್ಲಿ ಮುಖ್ಯವಾಹಿನಿಯಿಂದ ಬೇರೆಯಾಗಿ ನಿಂತು ಬದಲಾವಣೆಯ ಗಾಳಿ ಬೀಸಿದ ಹಿಪ್ಪಿ ಜನರೊಂದಿಗೆ ಗುರುತಿಸಿಕೊಂಡ ಇವರ ವಾದನ ಅತ್ಯಂತ ವೇಗವಾಗಿ ಎಲ್ಲರ ಗಮನ ಸೆಳೆಯಿತು. ಆದರೆ ಇಲ್ಲಿ ನುಡಿಸುವುದರಿಂದ ಆಗುವ ಕೆಟ್ಟ ಪರಿಣಾಮಗಳನ್ನು ಅರಿತ ರವಿಶಂಕರ್ ಅವರು ಜಾರ್ಜ್ ಹಾರಿಸನ್ ಅವರ ಬೀಟಲ್ಸ್ ತಂಡವನ್ನು ಸೇರಿ ಅತ್ಯಂತ ಸಂವೇದನಾಶೀಲವಾದ (ಸೆನ್ಸೇಷನಲ್) ಸಂಗೀತದ ಆಲ್ಬಮ್‍ನ್ನು 1967ರಲ್ಲಿ ಹೊರತಂದರು. ಇದರಿಂದ ರವಿಶಂಕರ್ ಅವರ ಖ್ಯಾತಿ ಎಷ್ಟು ಹೆಚ್ಚಿತೆಂದರೆ ಅಮೆರಿಕಾದ ಪ್ರಸಿದ್ಧ ಸಂಗೀತಗಾರು ಕೂಡಾ ಇವರ ಬಳಿ ಭಾರತೀಯ ಸಂಗೀತದ ಗುಟ್ಟನ್ನು ತಿಳಿಯಲು ಸಂಗೀತ ಪಾಠಕ್ಕಾಗಿ ಬರಲಾರಂಭಿಸಿದರು.

ಮುಂದೆ ರವಿಶಂಕರ್ ತಮ್ಮ ಸಂಗೀತದೊಂದಿಗೆ ಮಾಡಿದ್ದು ಒಂದು ಪವಾಡ. ರವಿಶಂಕರ್ ಅವರ ಗುರುಗಳಾದ ಮೈಹರ್ ಘರಾಣಾದ ಶ್ರೇಷ್ಠ ಗುರುಗಳಾದ ಅಲ್ಲವುದ್ದೀನ್ ಖಾನರು ಹಲವು ಬಗೆಯ ವಾದ್ಯಗಳನ್ನು ನುಡಿಸಬಲ್ಲವರೂ, ಪಾಶ್ಚಾತ್ಯ ಸಂಗೀತವನ್ನೂ ಬಹುಮಟ್ಟಿಗೆ ಅರಿತವರಾಗಿದ್ದರು. ಇವರ ಮಗ, ಸರೋದ್ ವಾದಕ ಅಲಿ ಅಕ್ಬರ್ ಖಾನರು ಸರೋದ್ ವಾದನದಲ್ಲಿ ದೊಡ್ಡ ಹೆಸರು ಮಾಡಿದವರು. ತಮ್ಮ ಗುರುಬಂಧು ರವಿಶಂಕರ್ ಅವರು ವಿದೇಶಿ ಪ್ರಯಾಣ ಆರಂಭಿಸಿದ ಕಾಲದಲ್ಲೇ ತಾವೂ ಅಮೇರಿಕಾದಲ್ಲಿ ಕಾರ್ಯಕ್ರಮ ನೀಡಲಾರಂಭಿಸಿದರು.

ಅಲಿ ಅಕ್ಬರ್ ಖಾನರಿಗೆ ಪ್ರಸಿದ್ಧ ಸಂಗೀತಗಾರರಾದ ಯಹೂದಿ ಮೆನುಹಿನ್ ಅವರ ಪರಿಚಯವಾಗಿ ಈ ಪ್ರವಾಸದಲ್ಲಿ ಭಾರತೀಯ ಸಂಗೀತದ ಬಗ್ಗೆ ಪಾಶ್ಚಾತ್ಯರಿಗಿರುವ ಆಸಕ್ತಿ, ಅವರ ಕಲಿಯುವ ಹಂಬಲದ ಅರಿವಾಯಿತು. ಭಾರತಕ್ಕೆ ಹಿಂತಿರುಗಿದ ನಂತರ 1956ರಲ್ಲಿ ಕಲ್ಕತ್ತಾದಲ್ಲಿ ಮೊದಲಬಾರಿಗೆ ಸಂಗೀತ ಕಾಲೇಜೊಂದನ್ನು ಖಾನರು ನಿರ್ಮಿಸಿದರು. ಆದರೆ ದುರ್ದೈವವಶಾತ್ 1960ರಲ್ಲಿ ಈ ಕಾಲೇಜನ್ನು ಮುಚ್ಚಬೇಕಾಯಿತು. 1965-66 ರಲ್ಲಿ ಅಲಿ ಅಕ್ಬರ್ ಖಾನರು ಮತ್ತೆ ‘ಅಮೆರಿಕನ್ ಸೊಸೈಟಿ ಫಾರ್ ಈಸ್ಟರ್ನ್ ಆರ್ಟ್ಸ್‌’ನಲ್ಲಿ ಸಂಗೀತ ಪಾಠ ಮಾಡಲು ಕಾಲಿಫೋರ್ನಿಯಾದ ಬರ್ಕ್ಲಿಗೆ ಬಂದು, ಮುಂದೆ ಇದೇ ಸಂಸ್ಥೆಯ ನೆರವಿನೊಂದಿಗೆ ಅವರು 1967ರಲ್ಲಿ ಬರ್ಕ್ಲಿಯಲ್ಲಿ ‘ಅಲಿ ಅಕ್ಬರ್ ಖಾನ್ ಕಾಲೇಜ್ ಆಫ್‌ ಮ್ಯೂಸಿಕ್’ನ್ನು ಸ್ಥಾಪಿಸಿದರು. ನಂತರದಲ್ಲಿ ಈ ಕಾಲೇಜು, ಸನ್ ರಾಫೆಲ್ ಗೆ ವರ್ಗಾವಣೆಗೊಂಡಿತು.

ಖಾನ್ ಅವರು ಸ್ಥಾಪಿಸಿದ ಈ ಸಂಗೀತ ಕಾಲೇಜು ಅಮೆರಿಕದಲ್ಲಿ ನೆಲೆಯಾಗಿರುವ ಭಾರತೀಯ ಸಂಗೀತದ ಅತಿ ಪ್ರಮುಖ ಕೇಂದ್ರ. ಇದುವರೆಗೆ 10 ಸಾವಿರಕ್ಕೂ ಹೆಚ್ಚಿನ ಪಾಶ್ಚಿಮಾತ್ಯ ಮತ್ತು ಅಲ್ಲಿ ನೆಲೆಯಾಗಿರುವ ಭಾರತೀಯ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಈ ಕಾಲೇಜಿನ ಮುಖ್ಯಸ್ಥರಾಗಿ ಸುವಿಖ್ಯಾತ ತಬಲಾ ವಾದಕ ಸ್ವಪನ್ ಚೌಧುರಿ ಅವರು ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 1985ರಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ಆರಂಭವಾದ ಈ ಕಾಲೇಜಿನ ಶಾಖೆಯಲ್ಲಿ ಪ್ರಸ್ತುತ ಅಲಿ ಅಕ್ಬರ್ ಖಾನರ ಶಿಷ್ಯರಾದ ಕೆನ್ ಝುಕರ್ಮನ್ ಅವರು ಮುಖ್ಯಸ್ಥರಾಗಿದ್ದಾರೆ. ಇದೇ ಕಾಲಘಟ್ಟದಲ್ಲಿ 1963ರಲ್ಲಿ ಕರ್ನಾಟಕಿ ಸಂಗೀತದ ಧ್ರುವತಾರೆ ಎಂ.ಎಸ್.ಸುಬ್ಬುಲಕ್ಷ್ಮಿ ಅವರು ಎಡಿನ್‍ಬರ್ಗ್ ಸಂಗೀತೋತ್ಸವದಲ್ಲಿ ಹಾಡಿ, ಜನಮೆಚ್ಚುಗೆ ಗಳಿಸಿದ್ದರು.

ಎಂ.ಎಸ್. ಅವರಂತೆ ಭಾರತೀಯ ಸಂಗೀತದ ಅನೇಕ ದಿಗ್ಗಜ ಕಲಾವಿದರಾದ ನಿಖಿಲ್ ಬಾನರ್ಜಿ, ಹರಿಪ್ರಸಾದ್ ಚೌರಾಸಿಯಾ, ಶಿವಕುಮಾರ್ ಶರ್ಮಾ , ಘಟಂ ಕಲಾವಿದ ವಿಕ್ಕು ವಿನಾಯಕರಾಮ್, ಎಲ್.ಸುಬ್ರಹ್ಮಣ್ಯಂ ಇವರೆಲ್ಲರೊಂದಿಗೆ ಆರಂಭವಾದ ವಿದೇಶದ ನಂಟು ಇನ್ನೂ ಗಾಢವಾಗೇ ಮುಂದುವರಿಯುತ್ತಾ ಬಂದಿದೆ.

ಅದೇ ರೀತಿ ರವಿಶಂಕರ್ ಅವರ ತಬಲಾ ಜೊತೆಗಾರರಾದ ಅಲ್ಲಾರಖಾರವರು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನುಡಿಸಿ, ತಮ್ಮ ವಾದನದಿಂದ ಬಹುದೊಡ್ಡ ಸಂಖ್ಯೆಯಲ್ಲಿ ಪಾಶ್ಚಿಮಾತ್ಯರನ್ನು ಭಾರತೀಯ ಸಂಗೀತದೆಡೆಗೆ ಸೆಳೆದವರು. ಮುಂದೆ ರವಿಶಂಕರ್, ಅಲಿ ಅಕ್ಬರ್ ಖಾನ್ ಹಾಗೂ ಅಲ್ಲಾರಖಾರ ಸುಪುತ್ರ ತಬಲಾ ಮಾಂತ್ರಿಕ ಝಾಕಿರ್ ಹುಸೇನ್ ಇವರುಗಳು ಅಮೆರಿಕದಲ್ಲೇ ನೆಲೆಯಾದರು. ಹಾಗೆಯೇ ಕರ್ನಾಟಕಿ ಸಂಗೀತದ ಅಪರೂಪದ ವಯೋಲಿನ್ ವಾದಕರಾದ ಎಲ್.ಶಂಕರ್ ಅವರೂ ಅಮೆರಿಕದಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡರು.

ಈ ಕಲಾವಿದರು ವಿದೇಶೀಯರಿಗೆ ಭಾರತೀಯ ಸಂಗೀತದ ಸಾರವನ್ನು ಪರಿಚಯಿಸಿದರು, ತಾವೂ ಪಾಶ್ಚಾತ್ಯ ಸಂಗೀತ ಪದ್ಧತಿಯನ್ನು ಅರಿತರು, ಜೊತೆ ಸೇರಿ ಹಲವಾರು ಹೊಸ ಬಗೆಯ ಜಂಟಿ ಕಾರ್ಯಕ್ರಮಗಳನ್ನು, ಆರ್ಕೆಸ್ಟ್ರಾಗಳನ್ನು ರೂಪಿಸಿದರು. ಈ ಎಲ್ಲಾ ವಿನಿಮಯಗಳು ಹಲವು ರೀತಿಯಲ್ಲಿ ಭಾರತೀಯ ಸಂಗೀತಕ್ಕೆ ಲಾಭದಾಯಕವಾಯಿತು. ಸಂಗೀತವು ವಿಸ್ತಾರವನ್ನು ಪಡೆದುಕೊಂಡಿತು.

ಅಲಿ ಅಕ್ಬರ್ ಖಾನ್, ರವಿಶಂಕರ್ ಮುಂತಾದವರು ಪಶ್ಚಿಮ ದೇಶಗಳಲ್ಲಿ ಮಾಡಿದ ಕೆಲಸ, ನಿರ್ವಾತದಿಂದ ಆರಂಭವಾದದ್ದು. ಭಾರತೀಯ ಸಂಗೀತದ ಪರಂಪರೆ, ಇತಿಹಾಸ, ರಾಗ-ತಾಳಗಳ ವ್ಯವಸ್ಥೆ, ಇಲ್ಲಿನ ಶಿಕ್ಷಣ ಪದ್ಧತಿ, ಭಾಷೆ ಇವ್ಯಾವುದರ ಸುಳಿವೂ ಗೊತ್ತಿರದ ಹೊಸ ವಾತಾವರಣದಲ್ಲಿ, ಅವರು ಭಾರತೀಯ ಸಂಗೀತದ ಪರಿಚಯ ಮಾಡಿಸಿದರು ಮಾತ್ರವಲ್ಲ ಗಂಭೀರವಾದ ಅಭ್ಯಾಸಿಗಳ ಪರಂಪರೆಯೊಂದನ್ನು ಇಲ್ಲಿ ಸೃಷ್ಟಿಸಿದರು. ಭಾರತೀಯ ಸಂಗೀತಕ್ಕೆ ಒಂದು ಹೊಸ ಮಗ್ಗುಲನ್ನು ಕೊಟ್ಟರು, ಮತ್ತು ಇದರಿಂದಾಗಿ ಸಂಗೀತ ಲೋಕದಲ್ಲಿ ಹೊಸ ಪರ್ವವೊಂದರ ಉದಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT