ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ತಲೆನೋವಿಗೆ ಪೂರ್ವಿ, ನಿದ್ರಾಹೀನತೆಗೆ ನೀಲಾಂಬರಿ

ಉತ್ತಮ ಆರೋಗ್ಯ ಹಾಗೂ ಸಂಕಷ್ಟ ನಿವಾರಣೆಗೆ ಸಂಗೀತ ಚಿಕಿತ್ಸೆ
Last Updated 23 ಸೆಪ್ಟೆಂಬರ್ 2020, 4:06 IST
ಅಕ್ಷರ ಗಾತ್ರ
ADVERTISEMENT
""

ಕೊರೊನಾ ಕಾಲದಲ್ಲಿ ವೈರಸ್‌ಗಳಿಂದ ತಗಲುವ ರೋಗದಿಂದ ಆಗುವ ಅಪಾಯದ ಬಗ್ಗೆಯೇ ಆತಂಕ. ಸೋಂಕು ತಗುಲಿದವರಿಗೆ ದೈಹಿಕ ಆಯಾಸದ ಜೊತೆಗೆ ಮಾನಸಿಕ ಆಘಾತವೂ ಹೆಚ್ಚು. ಇಂಥ ಕಾಲದಲ್ಲಿ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ಹಾಯಾಗಿ ನಿದ್ದೆ ಮಾಡುವುದು ಕೂಡ ಆರೋಗ್ಯಕ್ಕೆ ಪೂರಕವಾದ ಅಂಶವೇ. ಮನಸ್ಸು ಒತ್ತಡದಿಂದ ಕೂಡಿದ್ದರೆ ನಿದ್ರಾಹೀನತೆ ಕಾಡುತ್ತದೆ. ವಿರಾಮ, ವ್ಯಾಯಾಮ, ಪ್ರಾಣಾಯಾಮ, ಧ್ಯಾನ, ಯೋಗ, ರಾಗ... ಎಲ್ಲವೂ ಮನಸ್ಸನ್ನು ಒತ್ತಡದಿಂದ ದೂರ ಮಾಡುವಂಥವು.

ತಲೆನೋವು ಕೂಡ ಬಾಧಿಸುವ ರೋಗ, ಕೆಲವರಿಗೆ ಇದು ಆಗಾಗ ಬರುತ್ತಿದ್ದರೆ, ಇನ್ನೂ ಕೆಲವರಿಗೆ ಅರೆ ತಲೆಶೂಲೆ ತ್ರಿಶೂಲದಂತೆ ಇರಿಯುತ್ತದೆ. ಮನಸ್ಸು ತಾಳ್ಮೆ ಕಳೆದುಕೊಳ್ಳುವಷ್ಟು ಯಾತನೆಯಾಗುತ್ತದೆ. ನಿದ್ರೆಯಂತೂ ಬಹುದೂರ ಸಾಗುತ್ತದೆ. ಈ ಜಾಗದಲ್ಲಿ ಚಿಂತೆ ಆವರಿಸಿಕೊಳ್ಳುತ್ತದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಹಾಯಕ್ಕೆ ಬರುವುದು ಸಂಗೀತ ಚಿಕಿತ್ಸೆ ಎಂಬ ನಾದಸಂಜೀವಿನಿ!

ಕರ್ನಾಟಕ ಶಾಸ್ತ್ರೀಯ ಸಂಗೀತದ ಕೆಲವೊಂದು ರಾಗಗಳು ಸಂಗೀತ ಚಿಕಿತ್ಸೆಗೆ ಅತ್ಯಂತ ಸೂಕ್ತವಾದವು ಎಂಬುದನ್ನು ತಜ್ಞರು ಮನಗಂಡಿದ್ದಾರೆ. ಅಧ್ಯಯನ, ಪ್ರಯೋಗಗಳಲ್ಲಿ ಸಾಬೀತೂ ಪಡಿಸಿದ್ದಾರೆ. ರಾಗ ನೀಲಾಂಬರಿ, ಭಾಗೇಶ್ರೀ, ಕಾಫಿ, ಕಮಾಚ್‌, ಅಭೋಗಿ ನಿದ್ರಾಹೀನತೆ ನಿವಾರಣೆಗಾಗಿ ಸಂಗೀತ ಚಿಕಿತ್ಸಕರು ಬಳಸುವ ಪ್ರಮುಖ ರಾಗಗಳು. ಇದೇ ರೀತಿ ಪೂರ್ವಿ, ಕಾಫಿ, ಮಾಲ್‌ಕೌಂಸ್‌, ಸೇರಿದಂತೆ ಹಿಂದೂಸ್ತಾನಿ ಸಂಗೀತದ ಥಾಟ್‌ ರಾಗಗಳು ತಲೆನೋವನ್ನು ನಿವಾರಿಸಲು ಸಹಾಯಕ.

ರೋಗಗಳಿಗೂ ರಾಗಗಳಿಗೂ ಏನಾದರೂ ಏನಾದರೂ ಸಂಬಂಧ ಇದೆಯೇ? ಎಂಬುದು ಎಲ್ಲರೂ ಹುಬ್ಬೇರಿಸಿ ಕೇಳುವ ಪ್ರಶ್ನೆ. ಆದರೆ ‘ಖಂಡಿತಾ ಇದೆ’ ಎಂದು ಪ್ರತಿಪಾದಿಸುತ್ತಾರೆ ಸಂಗೀತ ತಜ್ಞರು ಮತ್ತು ಸಂಗೀತ ಚಿಕಿತ್ಸಕರು. ನಿದ್ರಾಹೀನತೆ ಸಮಸ್ಯೆ ದೂರ ಮಾಡಲೆಂದೇ ಸಂಗೀತ ಚಿಕಿತ್ಸೆಯಲ್ಲಿ ಕೆಲವೊಂದು ರಾಗಗಳನ್ನು ಬಳಸಿಕೊಂಡಿದ್ದಾರೆ ಈ ತಜ್ಞರು. ಅಂತಹ ರಾಗಗಳಲ್ಲಿ ನೀಲಾಂಬರಿ ಒಂದು ಪ್ರಮುಖ ರಾಗ. ಕರ್ನಾಟಕ ಶಾಸ್ತ್ರೀಯ ಸಂಗೀತದ ನೀಲಾಂಬರಿ ರಾಗವನ್ನು ಸಂಗೀತ ಚಿಕಿತ್ಸೆಯಲ್ಲಿ ಬಳಸಿ ಯಶಸ್ಸನ್ನೂ ಸಾಧಿಸಲಾಗಿದೆ. ಇದು ನಡೆದದ್ದು ಚೆನ್ನೈಯ ಅಪೊಲೊ ಆಸ್ಪತ್ರೆಯ ‘ಮ್ಯೂಸಿಕ್‌ ಥೆರಪಿ’ ವಿಭಾಗದಲ್ಲಿ, ಅದೂ ಕಳೆದ ಹತ್ತು ಹದಿನೈದು ವರ್ಷಗಳ ಹಿಂದೆ.

ನೀಲಾಂಬರಿ ಮಾತ್ರವಲ್ಲ, ಕಲ್ಯಾಣ್‌ ರಾಗ ಕೂಡ ನಿದ್ದೆಯ ಸಮಸ್ಯೆಯನ್ನು ದೂರ ಮಾಡುವ ಗುಣ ಹೊಂದಿದೆ. . ಮಕ್ಕಳ ಸುಖ ನಿದ್ದೆಗೆ ರಾಗ ‘ಅಭೋಗಿ’ ಪೂರಕ ಎಂದು ಇದನ್ನೂ ಸಂಗೀತ ಚಿಕಿತ್ಸಕರು ಮನಗಂಡಿದ್ದಾರೆ. ಭಾಗೇಶ್ರೀ, ಕಾಫಿ, ಕಮಾಚ್‌ ಕೂಡ ನಿದ್ದೆ ಸಮಸ್ಯೆ ನಿವಾರಣೆಗೆ ಸಹಾಯಕ. ಈ ರಾಗಗಳಲ್ಲಿರುವ ನಾದ ತರಂಗಗಳನ್ನು ನಿದ್ದೆ ಸಮಸ್ಯೆ ಇರುವ ವ್ಯಕ್ತಿಯ ಮೇಲೆ ಪ್ರಯೋಗಿಸಿದಾಗ ರಕ್ತನಾಳಗಳಲ್ಲಿ ಒಂದು ರೀತಿಯ ಸಂವೇದನೆ ಉಂಟಾಗುತ್ತದೆ. ಇದರಿಂದ ಮಾನಸಿಕ ಪ್ರಚೋದನೆ ಉಂಟಾಗಿ ಬೇಗನೆ ನಿದ್ದೆ ಆವರಿಸುತ್ತದೆ ಎನ್ನುತ್ತಾರೆ ಸಂಗೀತ ಚಿಕಿತ್ಸಕರು.

‘ಕೊರೊನಾ ಸಂಕಷ್ಟ ನಿವಾರಣೆಗೆ ಧ್ಯಾನ ಸಮಾಧಾನ ನೀಡುತ್ತದೆ’ ಎಂದು ಹೇಳುತ್ತಾರೆ ಖ್ಯಾತ ಕೊಳಲು ವಾದಕ ಶಶಾಂಕ್‌ ಸುಬ್ರಹ್ಮಣ್ಯ. ಇದಕ್ಕಾಗಿಯೇ ಶಶಾಂಕ್‌, ‘ಮೆಡಿಟೇಷನ್‌ ಹೌಸ್‌–ಸೈಲಂಟ್ ಬ್ರೆತ್‌’ ಎಂಬ ಆಲ್ಬಂ ಅನ್ನು ಇತ್ತೀಚೆಗೆ ಹೊರತಂದಿದ್ದಾರೆ. ಇದರಲ್ಲಿ ಕೊಳಲ ನಾದದಿಂದ ಸಂಗೀತ ಚಿಕಿತ್ಸೆ ಪಡೆದು ಕೊರೊನಾ ಆತಂಕದಿಂದ ಮುಕ್ತಿ ಹೊಂದುವ ಉಪಾಯವೂ ಇದೆ.

‘ಮೆಡಿಟೇಷನ್‌ ಸಂಗೀತದಲ್ಲಿ ಸುಮಾರು 30 ನಿಮಿಷಗಳ ಕಾಲ ಬರೀ ರಾಗಾಲಾಪವನ್ನೇ ಮಾಡುವುದರಿಂದ ಕೇಳುಗರಲ್ಲಿ ವಿಶಿಷ್ಟ ಅನುಭೂತಿಯನ್ನೇ ಸೃಷ್ಟಿಸುತ್ತದೆ. ಸಂಗೀತ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಸುವ ಸಾರಮತಿ, ಹಂಸಾನಂದಿ, ತೋಡಿ, ಭೈರವಿ, ಮೋಹನ, ಪೂರ್ವಿ, ಜಂಜೂಟಿ, ನೀಲಾಂಬರಿ ರಾಗಗಳು ಏಕಾಗ್ರತೆ, ನೆಮ್ಮದಿ ಮೂಡಿಸಲು ಸಹಕಾರಿ’ ಎಂದೂ ಹೇಳುತ್ತಾರೆ ಶಶಾಂಕ್.

ಲಾಲಿ ಹಾಡಿದಂಥ ಅನುಭವ

ಮೇಳಕರ್ತ ರಾಗ ಧೀರ ಶಂಕರಾಭರಣದಲ್ಲಿ ಜನ್ಯ ರಾಗವಾದ ‘ನೀಲಾಂಬರಿ’ ರಾಗ ಕೇಳಿದಾಗ ಲಾಲಿ ಹಾಡು ಕೇಳಿದಂತಹ ಅನುಭವವಾಗುತ್ತದೆ. ಕರುಣಾ, ಭಕ್ತಿ, ವಾತ್ಸಲ್ಯ ರಸ ಸೂಸುವ ಈ ರಾಗ ಮಕ್ಕಳೂ ಸೇರಿದಂತೆ ಎಲ್ಲರಿಗೂ ನಿದ್ದೆಗೆ ಬಹಳ ಸಹಾಯಕವಾಗಿದೆ. ಹಳೆಯ ಹಿಂದಿ ಚಿತ್ರಗೀತೆಗಳನ್ನು ಆಲಿಸುವ ಆಸಕ್ತಿಯುಳ್ಳವರು ನಿದ್ದೆ ಸಮಸ್ಯೆ ಇದ್ದರೆ ‘ಮಧುಮತಿ’ ಚಿತ್ರದ ‘ಆಜಾರೇ ಪರದೇಸಿ..’ ಹಾಡು ಕೇಳಬಹುದು. ಇದು ಸುಪ್ರಸಿದ್ಧ ರಾಗ ‘ಭಾಗೇಶ್ರೀ’ಯಲ್ಲಿದ್ದು ನಿದ್ರಾಹೀನತೆಗಾಗಿ ಸಂಗೀತ ಚಿಕಿತ್ಸೆಯಲ್ಲಿ ಬಳಸಲಾಗಿದೆ. ಕೆಲವೊಂದು ರಾಗಗಳು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ದೂರ ಮಾಡಲು ಸಹಕಾರಿ. ಇಂಥ ರೋಗಕ್ಕೆ ಇಂಥದ್ದೇ ರಾಗಗಳ ಮೂಲಕ ಚಿಕಿತ್ಸೆ ನೀಡಬೇಕು ಎಂಬುದನ್ನೂ ವೈಜ್ಞಾನಿಕವಾಗಿ ರೂಪಿಸಲಾಗಿದೆ.

ಮಾನಸಿಕ ನೆಮ್ಮದಿಗೆ ರಾಗ ಕಾನಡ, ವಕುಳಾಭರಣ ಕೇಳಿ. ಇವೆಲ್ಲ ಪ್ರಮುಖ ರಾಗಗಳು ಮನಸ್ಸಿಗೆ ವಿಶ್ರಾಂತಿ ನೀಡುತ್ತವೆ. ಎಲ್ಲ ಚಿಂತೆ ಮರೆತು ಮನಸ್ಸು ರಾಗದಲ್ಲಿ ಬೆರೆತು ಹೋದ ಅನುಭವವಾಗುತ್ತದೆ. ಹೀಗಾಗಿ ಈಗೀಗ ಸಂಗೀತ ಚಿಕಿತ್ಸೆ ಬಹಳ ಜನಪ್ರಿಯವಾಗುತ್ತಿದೆ.

ರಾಗಗಳನ್ನು ಚೆನ್ನಾಗಿ ಆಲಿಸಬೇಕು.ಆಗ ಪ್ರಭಾವ ಹೆಚ್ಚು. ಯೋಗಾಸನ ಮಾಡುತ್ತಾ ಸಂಗೀತ ಕೇಳಬಹುದು. ಯೋಗಾಸನದ ಕೊನೆಯ ಆಸನ ಶವಾಸನ ಸ್ಥಿತಿಯಲ್ಲಿದ್ದು ಕೆಲವು ರಾಗಗಳನ್ನು ಆಲಿಸಿದರೆ ಬಹಳ ಪರಿಣಾಮಕಾರಿ ಎನ್ನುವುದು ಸಂಗೀತ ಚಿಕಿತ್ಸಕರ ಅಭಿಮತ. ಗಾಯನ ಮಾತ್ರವಲ್ಲ, ವಾದ್ಯ ಸಂಗೀತ ಕೂಡ ನಿದ್ದೆ, ತಲೆನೋವು ಮುಂತಾದ ಸಮಸ್ಯೆ ನಿವಾರಣೆಗೆ ರಾಮಬಾಣ. ವಾದ್ಯಗಳಲ್ಲಿ ಪ್ರಮುಖವಾಗಿ ಕೊಳಲು, ಪಿಟೀಲು, ಮೃದಂಗ ಮತ್ತು ವೀಣೆಯನ್ನು ಬಳಸಿದರೆ ಪರಿಣಾಮಕಾರಿಯಾಗುತ್ತದೆ. ಅದರಲ್ಲೂ ಕೊಳಲು ಅತ್ಯಂತ ಪರಿಣಾಮಕಾರಿ ವಾದ್ಯ.

ಕೊಳಲು ವಾದಕ ಶಶಾಂಕ್‌ ಸುಬ್ರಹ್ಮಣ್ಯ

ಕೊಳಲ ನಾದವ ಕೇಳಿ...

ಬಿದಿರಿನಿಂದ ಮಾಡಿದ ಹಗುರ ವಾದ್ಯ ಕೊಳಲಿನ ನಾದ ಕೇಳಲು ಎಂದಿಗೂ ಆಪ್ಯಾಯಮಾನ. ಈ ಸುಷಿರ ವಾದ್ಯದ ನಾದ ನಾದ ನಿದ್ದೆ ಬರಿಸಲು ಹೇಳಿ ಮಾಡಿಸಿದಂಥದ್ದು. ಬೆಂಗಳೂರಿನಲ್ಲಿ ವಿದ್ವಾನ್‌ ಶಂಕರರಾವ್‌ ಕೊಳಲು ನುಡಿಸುವ ಮೂಲಕ ಸಂಗೀತ ಚಿಕಿತ್ಸೆ ನೀಡುತ್ತಾರೆ. ನಿದ್ರೆ ಸಮಸ್ಯೆ ಎದುರಿಸುವವರು ಮಾತ್ರವಲ್ಲ ಆಸ್ತಮಾ ರೋಗಿಗಳು ಸಹ ಇವರ ಚಿಕಿತ್ಸೆಯಿಂದ ಸಂಪೂರ್ಣ ಪ್ರಯೋಜನ ಪಡೆದವರಿದ್ದಾರೆ.

ಚೆನ್ನೈಯಲ್ಲಿರುವ ಅಪೊಲೊ ಆಸ್ಪತ್ರೆಯಲ್ಲಿ ಸುಮಾರು ಹದಿನೈದು ವರ್ಷಗಳಷ್ಟು ಹಿಂದೆಯೇ ದೇಶದಲ್ಲಿ ಮೊದಲ ಬಾರಿಗೆ ‘ಮ್ಯೂಸಿಕ್‌ ಥೆರಪಿ ಕೋರ್ಸ್‌’ ಆರಂಭಿಸಲಾಗಿದೆ. ಇಲ್ಲಿ ಮೊದಲ ಬಾರಿಗೆ ರೋಗಿಗಳಿಗೆ ರಾತ್ರಿ ಚೆನ್ನಾಗಿ ನಿದ್ರೆ ಬರಲೆಂದು ‘ನೀಲಾಂಬರಿ’ ರಾಗವನ್ನು ಹಾಕಿ ಪ್ರಯೋಗ ಮಾಡಿದ್ದು ಸಾಕಷ್ಟು ಯಶಸ್ವಿಯಾಗಿದೆ.

‘ಸಾಮಾನ್ಯವಾಗಿ ಚಿಕಿತ್ಸೆಗೆ ಸಂಗೀತದ ಎಲ್ಲ ರಾಗಗಳನ್ನು ಬಳಸಿಕೊಳ್ಳಬಹುದು. ನಿದ್ದೆ ಸಮಸ್ಯೆ ಇರುವವರಿಗೆ ಸರಳವಾಗಿ ಓಂಕಾರ ಧ್ಯಾನ ಮಂತ್ರದಿಂದ ಆರಂಭಿಸಿ ಸರಳವಾದ ರಾಗಗಳನ್ನು ಹೇಳಿಕೊಡಲಾಗುತ್ತದೆ. ಓಂಕಾರದಿಂದ ಆರಂಭಿಸಿದರೆ ಪ್ರಾಣಾಯಾಮ ಮಾಡಿದಂತಾಗಿ ಉಸಿರಾಟ ಸರಾಗವಾಗುತ್ತದೆ. ಧ್ಯಾನ ಮಂತ್ರದಿಂದ ಮಾನಸಿಕ ಶಾಂತಿಗೆ ಸಹಾಯವಾಗುತ್ತದೆ. ನಿದ್ರಾಹೀನತೆ ದೂರವಾಗುವ ಜತೆಗೆ ವೀಸಿಂಗ್‌, ಅಲರ್ಜಿ ಇದ್ದವರಿಗೂ ಓಂಕಾರ ಚಿಕಿತ್ಸೆ ಬಹಳ ಪ್ರಯೋಜನಕಾರಿ. ಓಂಕಾರದಿಂದ ಸಂಗೀತದಲ್ಲಿ ಆಸಕ್ತಿ ಮೂಡಿದರೆ ಸರಳವಾದ ಭಜನ್ಸ್‌ಗಳನ್ನು ಹಾಡಿ ತೋರಿಸಿ ಏಕಾಗ್ರತೆ ಬರುವಂತೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ನಿದ್ದೆಗೂ ಮನಸ್ಸಿಗೂ ನೇರ ಸಂಬಂಧ ಇರುವುದರಿಂದ ಸಂಗೀತದ ಮೂಲಕ ಏಕಾಗ್ರತೆ ಮೂಡಿಸಿ ನೀಲಾಂಬರಿ ರಾಗ ಹಾಡಿ ತೋರಿಸಿ ರೋಗಿಗಳಲ್ಲೂ ಹಾಡುವಂತೆ ಸಂಗೀತ ಚಿಕಿತ್ಸಕರು ಪ್ರೇರೇಪಿಸುತ್ತಾರೆ. ರಾತ್ರಿ ಮಲಗುವ ವೇಳೆ ಈ ರಾಗವನ್ನು ಕೇಳುತ್ತಾ ಮಲಗಿದರೆ ಬೇಗನೆ ನಿದ್ದೆ ಆವರಿಸಿಕೊಳ್ಳುತ್ತದೆ’ ಎಂದು ವಿವರ ನೀಡುತ್ತಾರೆ ಗಾಯಕ ವಿದ್ವಾನ್‌ ಹರಿಪ್ರಸಾದ್‌.

‘ಓಂಕಾರ ಪಠಣ ಮತ್ತು ಸಂಗೀತವನ್ನು ಮಂದ್ರಸ್ಥಾಯಿಯಲ್ಲಿ ಕೇಳ್ಮೆಯಿಂದ ಸಕಾರಾತ್ಮಕ, ದೈವಿಕ ತರಂಗಗಳು ಶರೀರದಲ್ಲಿ ಉತ್ಪತ್ತಿಯಾಗಿ ಶರೀರ ಸಂಪೂರ್ಣ ಶುದ್ಧಗೊಳಿಸಿದ ಅನುಭವ. ಗುಂಪು ಚಿಕಿತ್ಸಾ ಆಯಾಮಗಳಲ್ಲಿ ದಾಸರ ಪದ, ವಚನ, ಭಾವಗೀತೆಗಳನ್ನು ಕೇಳಿ ಹಾಡಿದಾಗ ಮನಸ್ಸು ಹಗುರಗೊಳ್ಳುತ್ತದೆ. ರಾಗಗಳಲ್ಲಿ ಭಾವನೆಗಳ ತೀವ್ರತೆ, ಸಾರದ ಮೌಲ್ಯಮಾಪನ ನಡೆಸಬೇಕಾದ್ದು ಅವಶ್ಯ’ ಎನ್ನುವುದು ಈ ವಿದ್ವಾಂಸರ ಅಭಿಪ್ರಾಯ.

ಇತಿಹಾಸ

ರಾಗಗಳಿಂದ ನಿದ್ರಾ ಸಮಸ್ಯೆ ದೂರವಾದ ಬಗ್ಗೆ ಸುದೀರ್ಘ ಇತಿಹಾಸವೂ ಇದೆ. ತಾನ್‌ಸೇನ್‌ ಸಂಗೀತದಲ್ಲಿ ಅನೇಕ ಪ್ರಯೋಗ ಮಾಡಿ ದೀಪ್‌ ರಾಗ, ಬೈಜೂಬಾವ್ರ ರಾಗ ಬಳಸಿ ನಿದ್ದೆಯ ಜತೆಗೆ ತಲೆನೋವು ಸಮಸ್ಯೆ ಕೂಡ ಬಗೆಹರಿಸಿಕೊಂಡಿದ್ದನಂತೆ. ಜಹಾಂಗೀರ್‌ ಒಮ್ಮೆ ನಿದ್ರಾಹೀನತೆಯಿಂದ ಬಳಲಿದಾಗ ತಂಬೂರಿ ಶ್ರುತಿ ಮಾಡಿ ಅದರ ನಾದದಿಂದ ಮಂಪರು ಬಂದು ನಿದ್ದೆ ಬರುವ ಹಾಗೆ ಆಯಿತು. ಆಮೇಲೆ ನಿದ್ದೆ ಸಮಸ್ಯೆ ಬಂದಾಗೆಲ್ಲ ಜಹಾಂಗೀರ್‌ ತಂಬೂರಿ ನಾದ ಆಲಿಸುತ್ತಿದ್ದ ಎನ್ನುತ್ತದೆ ಇತಿಹಾಸ.

ಶಶಾಂಕ್‌ ಸುಬ್ರಹ್ಮಣ್ಯ ನುಡಿಸಿದ ಕೊಳಲ ನಾದ ಕೇಳಲು ಈ ಕೊಂಡಿ ಒತ್ತಿರಿ. https://meditationhouse.lnk.to/SilentBreath

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT