ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಲಿಟಿ ಶೋಗಳಲ್ಲಿ ಆಸಕ್ತಿಯಿಲ್ಲ

ಭಕ್ತಿ ಸಂಗೀತದ ಬಾಲಪ್ರತಿಭೆ ಸೂರ್ಯಗಾಯತ್ರಿ ಮನದಾಳ ಮಾತು
Last Updated 27 ಜನವರಿ 2020, 19:30 IST
ಅಕ್ಷರ ಗಾತ್ರ

ಹದಿನಾಲ್ಕರ ಹರೆಯದ ಗಾಯಕಿ ಸೂರ್ಯಗಾಯತ್ರಿ, ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ಪ್ರಿಯರ ನೆಚ್ಚಿನ ‘ಜೂನಿಯರ್‌ ಎಂ.ಎಸ್‌.ಸುಬ್ಬಲಕ್ಷ್ಮಿ’! ಹೌದು, ಈ ಕಿರಿ ಪ್ರತಿಭೆಯ ಭಕ್ತಿಗೀತೆ, ಭಜನೆ, ಕೀರ್ತನೆಗಳ ಹಾಡುಗಾರಿಕೆ ಈಗ ತುಂಬ ಪ್ರಸಿದ್ಧಿ.

ತುಳಸಿದಾಸರ ರಚನೆ ‘ಹನುಮಾನ್ ಚಾಲೀಸ್‌’ ಗೀತೆಯನ್ನು ಹಾಡಿ,ಯೂಟ್ಯೂಬ್‌ಗೆಅಪ್‌ಲೋಡ್‌ ಮಾಡಿರುವ ಸೂರ್ಯಗಾಯತ್ರಿ, ಈ ಒಂದು ಹಾಡಿನಿಂದ ಜನಜನಿತರಾದರು. ‘ಗಣೇಶ ಪಂಚರತ್ನಂ’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಶ್ರೀರಾಮಚಂದ್ರ ಕೃಪಾಳು’ ಸೇರಿ ಇವರು ಹಾಡಿರುವ ಹಲವು ಜನಪ್ರಿಯ ಭಕ್ತಿಗೀತೆಗಳಿಗೆ ಮಾರು ಹೋದವರು ಲಕ್ಷಾಂತರ ಮಂದಿ. ಇವರ ಗಾಯನ ಪ್ರತಿಭೆಯನ್ನು ಮೆಚ್ಚಿದ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ದೇಗುಲದಲ್ಲಿ ಅನ್ನಮಯ್ಯ ಕೀರ್ತನೆಗಳನ್ನು ಹಾಡಲು ಅವಕಾಶ ಮಾಡಿಕೊಟ್ಟಿತು. ಇಷ್ಟು ಸಣ್ಣ ವಯಸ್ಸಿನಲ್ಲಿ ಈ ಅವಕಾಶ ಪಡೆದುಕೊಂಡ ಹೆಗ್ಗಳಿಕೆಯು ಅವರದ್ದು.

ಕೇರಳದ ವಡಕರ ಜಿಲ್ಲೆಯವರಾದ ಸೂರ್ಯಗಾಯತ್ರಿ ಪುರಮೇರಿಯ ಕಡತನಾಡು ರಾಜ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಭಾರತೀಯ ಸಾಮಗಾನ ಸಭಾ ಪ್ರಸ್ತುತ ಪಡಿಸುತ್ತಿರುವ 11ನೇ ವಾರ್ಷಿಕ ಶಾಸ್ತ್ರೀಯ ಸಂಗೀತ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ‘ಮೆಟ್ರೊ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಸಂಗೀತವನ್ನು ಧೇನಿಸಲು ಶುರು ಮಾಡಿದ್ದು ಯಾವಾಗ?

ಐದನೇ ವಯಸ್ಸಿಗೆ ಹಾಡನ್ನು ಕಲಿಯಲು ಆರಂಭಿಸಿದೆ.ನನ್ನ ತಂದೆ ಅನಿಲ್‌ಕುಮಾರ್‌ ಮೃದಂಗ ವಾದಕರು. ಹಾಗಾಗಿ ಮನೆಯಲ್ಲಿ ಸಂಗೀತದ ವಾತಾವರಣವಿದೆ. ಹತ್ತನೇ ವಯಸ್ಸಿಗೆ ಸಂಗೀತ ಕಾರ್ಯಕ್ರಮ ನೀಡಲು ಆರಂಭಿಸಿದೆ.ನಿಶಾಂತ್‌ ಸರ್‌ ನನ್ನ ಮೊದಲ ಗುರು. ಈಗ ಸದ್ಯ ಆನಂದಿ ಟೀಚರ್‌ ಅವರಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಕುಲದೀಪ್‌ ಪೈ ಅವರು ನನ್ನ ಮಾರ್ಗದರ್ಶಕರು. ಅವರ ಮಾರ್ಗದರ್ಶನದಲ್ಲಿ ಹಾಡುಗಳನ್ನು ಯೂಟ್ಯೂಬ್‌ನಲ್ಲಿ ಅಪಲೋಡ್‌ ಮಾಡಲಾಯಿತು. ಅಲ್ಲಿಂದ ಬೆಳಕಿಗೆ ಬಂದೆ.

ಅಪ್ಪನೊಂದಿಗೆ ಸಂಗೀತಾಭ್ಯಾಸ ನಡೆಸುವಾಗಿನ ಅನುಭವ?

ಚಿಕ್ಕವಳಿದ್ದಾಗ ಅಪ್ಪನ ಮೃದಂಗದ ಜತೆ ಆಟವಾಡಿಕೊಂಡಿದ್ದೆ. ಅವರೊಬ್ಬ ಉತ್ತಮ ಗಾಯಕರೂ ಹೌದು. ಮುಂಜಾನೆ ಸಮಯದಲ್ಲಿ ಒಟ್ಟಿಗೆ ಕುಳಿತು ಅಭ್ಯಾಸ ನಡೆಸುತ್ತೇವೆ. ಪ್ರತಿ ಹಂತದಲ್ಲಿಯೂ ಅವರು ನನ್ನನ್ನು ತಿದ್ದುತ್ತಾರೆ.

ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಂದ ಅವಕಾಶ ಬಂದಿದೆಯಾ?

ಬಂದಿದೆ. ಆದರೆ, ಅದರಲ್ಲಿ ನನಗೆ ಆಸಕ್ತಿ ಇಲ್ಲ. ಹಾಗಾಗಿ ಅವೆಲ್ಲದರಿಂದಲೂ ದೂರ ಉಳಿದಿದ್ದೇನೆ. ಏನಾದರೂ ಸಾಧನೆ ಮಾಡಿದರೆ ಅದು ಶಾಸ್ತ್ರೀಯ ಸಂಗೀತದಲ್ಲಿಯೇ ಮಾಡಬೇಕು ಎಂಬುದು ನನ್ನ ಅಪ್ಪ– ಅಮ್ಮನ ಅಭಿಲಾಷೆಯೂ ಹೌದು. ಹೆಚ್ಚಾಗಿ ರಿಯಾಲಿಟಿ ಶೋಗಳೆಲ್ಲವೂ ನನಗೆ ಆಗಿ ಬರುವುದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿದ್ದೀರಾ ಹೇಗನಿಸುತ್ತದೆ?

ಎಲ್ಲೋ ಹಾಡಿಕೊಂಡು ಇದ್ದ ನನಗೆ ಜನಪ್ರಿಯತೆ ಒದಗಿಸಿದ್ದು ಜಾಲತಾಣ ಇಂದಿಗೂ ಕೇರಳದಲ್ಲಿರುವ ನಮ್ಮನೆಯನ್ನು ಹುಡುಕಿಕೊಂಡು ಅಭಿಮಾನಿಗಳು ಬರುತ್ತಾರೆ. ಇದೊಂದು ಬಗೆಯ ಖುಷಿಯೂ ಹೌದು. ಹಾಗೆಂದು ನಾನು ಜಾಲತಾಣಗಳಲ್ಲಿ ಸಕ್ರಿಯಳಾಗಿಲ್ಲ. ಕೇವಲ ಕರೆ ಮಾಡಲು ಮಾತ್ರ ಮೊಬೈಲ್‌ ಬಳಸುತ್ತೇನೆ. ಉಳಿದಂತೆ ಜಾಲತಾಣಗಳ ನಿರ್ವಹಣೆ ನನ್ನ ಅಮ್ಮನದೇ. ಹಾಡುವುದಷ್ಟೆ ನನ್ನ ಕೆಲಸ.

ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡುತ್ತಿದ್ದೀರಿ ಹೇಗನಿಸುತ್ತೆ?

ತುಂಬಾ ಖುಷಿ ಎನಿಸುತ್ತೆ. ಈವರೆಗೆ ನಾನಾ ರಾಜ್ಯ, ವಿದೇಶ ಸೇರಿ ಒಟ್ಟು 400ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಈ ಮುಂಚೆಯೂ ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಿದ್ದೆ. ಆದರೆ, ಈ ಬಾರಿ ದೊಡ್ಡ ಕಲಾವಿದರೆಲ್ಲರೂ ಭಾಗವಹಿಸುತ್ತಿರುವ ಉತ್ಸವದಲ್ಲಿ ಹಾಡುತ್ತಿರುವುದಕ್ಕೆ ಖುಷಿಯಾಗಿದೆ.ಇಲ್ಲಿ ಕೇಳುಗರು ನೀಡುವ ಪ್ರೋತ್ಸಾಹ ಅತಿ ಮಹತ್ವದ್ದು ಎಂದು ಭಾವಿಸುತ್ತೇನೆ.

ಸಂಗೀತ ಮತ್ತು ವಿದ್ಯಾಭ್ಯಾಸ ಎರಡನ್ನೂ ಹೇಗೆ ನಿಭಾಯಿಸುತ್ತಿದ್ದೀರಿ?

ನನ್ನ ಶಾಲೆಯ ಸಹಪಾಠಿಗಳೆಲ್ಲರೂ ಬಹಳ ಉತ್ತೇಜನ ನೀಡುತ್ತಾರೆ. ಪ್ರತಿ ಹಂತದಲ್ಲಿಯೂ ಅವರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಜತೆಗೆ ಅಪ್ಪ ಅನಿಲ್‌ಕುಮಾರ್, ಅಮ್ಮ ದಿವ್ಯ ಅವರ ಪ್ರೋತ್ಸಾಹದಿಂದಲೇ ನಾನು ಈ ಹಂತಕ್ಕೆ ತಲುಪಲು ಸಾಧ್ಯವಾಗಿದೆ.

ಹಾಡಲು ಪ್ರೇರಣೆಯೇನು?, ನಿಮ್ಮ ಕನಸನ್ನು ಹಂಚಿಕೊಳ್ಳಬಹುದಾ?

ಹಾಡಬೇಕೆಂಬ ತುಡಿತ ಹೆಚ್ಚಾಗಲು ಸಂಗೀತವೇ ನನಗೆ ಪ್ರೇರಣೆ. ಸಂಗೀತ ಕ್ಷೇತ್ರದ ಧ್ರುವತಾರೆ ಸುಬ್ಬಲಕ್ಷ್ಮಿ ಅಮ್ಮ ಅವರೇ ನನಗೆ ಮಾದರಿ. ಅವರ ಸಂಗೀತ ತಪ್ಪಸ್ಸನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನನಗೆ ಹೆಚ್ಚಿನ ಖುಷಿ ಇದೆ. ನನ್ನಂತಹ ಪುಟ್ಟ ಪ್ರತಿಭೆಗೂ ಜನ ಅಂಥ ಮೇರು ಪ್ರತಿಭೆಯನ್ನು ಹೋಲಿಸಿ ಮಾತನಾಡುವಾಗ ಮನಸ್ಸು ತುಂಬಿ ಬರುತ್ತದೆ. ಜೂನಿಯರ್‌ ಎಂ.ಎಸ್‌. ಎಂದು ಕರೆಯುವಾಗೆಲ್ಲ ನಮ್ರಳಾಗುತ್ತೇನೆ. ಮುಂದಿನ ದಿನಗಳಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಅಳವಾದ ಅಭ್ಯಾಸ ಮಾಡಬೇಕೆಂಬ ಕನಸಿದೆ. ವೋಕ್ಸೋಲಾಜಿಯಲ್ಲಿ ಪದವಿ ಪಡೆಯಬೇಕೆಂಬ ಆಸೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT