ಮಂಗಳವಾರ, ಅಕ್ಟೋಬರ್ 27, 2020
24 °C

ದುಗುಡ ಮರೆಯಲು ಹಳೆಯ ಹಾಡುಗಳಿಗೆ ಮೊರೆ

ಅನನ್ಯ ಆರ್‌.ಪಿ. Updated:

ಅಕ್ಷರ ಗಾತ್ರ : | |

Prajavani

ಒತ್ತಡ ನಿವಾರಣೆಗೂ ಸಂಗೀತಕ್ಕೂ ಸಂಬಂಧವಿರುವುದು ಗೊತ್ತಿರುವಂತಹದ್ದೇ. ಸಂಗೀತಕ್ಕೆ ಮನಸ್ಸನ್ನು ಸಾಂತ್ವನಗೊಳಿಸುವ ಅದ್ಭುತ ಶಕ್ತಿಯಿದೆ. ಅವರವರ ಇಷ್ಟದ ಸಂಗೀತಕ್ಕೆ ಕಿವಿಗೊಟ್ಟರೆ ಎಂತಹ ದುಗುಡವಾದರೂ ಕ್ಷಣಕಾಲ ಮರೆಯಾಗುವುದಂತೂ ನಿಜ. ಸದ್ಯದ ಟ್ರೆಂಡ್‌ ಎಂದರೆ ಹಳೆಯ ಹಾಡುಗಳನ್ನು ಆಲಿಸಿ, ಭಾವುಕತೆಯ ಲೋಕದಲ್ಲಿ ಮುಳುಗಿ ಹೋಗುವುದು!

ಲಾಕ್‌ಡೌನ್‌, ಮುಂದುವರಿದ ಕೊರೊನಾ ಸೋಂಕು, ಪ್ರೀತಿಪಾತ್ರರ ಮರಣ, ಭವಿಷ್ಯದ ಕುರಿತ ಆತಂಕ.. ಇವೆಲ್ಲ ಮನಸ್ಸಿನೊಳಗೆ ಹತಾಶೆಯನ್ನು ಸೃಷ್ಟಿಸಿಬಿಟ್ಟಿದೆ. ಹೀಗಾಗಿ ಬಹುತೇಕ ಮಂದಿ ಹಳೆಯ ಹಾಡುಗಳ ಅದರಲ್ಲೂ ನಾಸ್ಟಾಲ್ಜಿಕ್‌ ಹಾಡುಗಳ ಮೊರೆ ಹೋಗಿದ್ದಾರೆ ಎನ್ನುತ್ತದೆ ‘ಕೋವಿಡ್‌ ಎಕನಾಮಿಕ್ಸ್‌’ನಲ್ಲಿ ಪ್ರಕಟವಾದ ಇಂಗ್ಲೆಂಡ್‌ನ ಆರ್ಥಿಕ ನೀತಿ ಸಂಶೋಧನ ಕೇಂದ್ರ ನಡೆಸಿದ ಅಧ್ಯಯನದ ವರದಿ. ಸಂಗೀತದ ಸ್ಟ್ರೀಮಿಂಗ್ ಆ್ಯಪ್‌ ‘ಸ್ಪಾಟಿಫೈ’ನಲ್ಲಿ ಹಿಂದಿ ಹಾಡುಗಳೂ ಸೇರಿದಂತೆ ಡೌನ್‌ಲೋಡ್‌ ಆದ ಹಾಡುಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ.

ಈ ನಾಸ್ಟಾಲ್ಜಿಯ ಎನ್ನುವುದು ಪ್ರಸ್ತುತ ವಿದ್ಯಮಾನ ತಂದ ಹತಾಶೆಯಿಂದ ಪಾರಾಗುವ ಒಂದು ಮಾರ್ಗ. ಹಿಂದೆ ಕಳೆದ ಸಂತಸದ ಕ್ಷಣಗಳನ್ನು ರಿವೈಂಡ್‌ ಮಾಡುವುದು. ಈ ನಾಸ್ಟಾಲ್ಜಿಯ ಅಥವಾ ಭಾವುಕತೆ ಎನ್ನುವುದು ಮನಸ್ಥಿತಿ ಬದಲಾಯಿಸಿ, ಭವಿಷ್ಯದತ್ತ ಆಶಾದಾಯಕ ನೋಟ ಬೀರುವಂತೆ ಮಾಡಬಲ್ಲದು ಎನ್ನುತ್ತಾರೆ ತಜ್ಞರು. ಕೋವಿಡ್‌ ಸೃಷ್ಟಿಸಿದ ಅನಿಶ್ಚಿತ ಪರಿಸ್ಥಿತಿಯನ್ನು ಕ್ಷಣಕಾಲವಾದರೂ ಈ ಹಳೆಯ ಹಾಡುಗಳು ಸೃಷ್ಟಿಸುವ ಭಾವುಕತೆಯಿಂದ ಮರೆಯಬಹುದು.

ಒಮ್ಮೆ ನೆನಪಿಸಿಕೊಳ್ಳಿ. ಚಿಕ್ಕವರಿದ್ದಾಗ ಕೇಳಿದ ಹಾಡು, ಅದು ಪಠ್ಯದಲ್ಲಿ ಓದಿಕೊಂಡ ಹಾಡಾದರೂ ಆಗಿರಬಹುದು, ನಮ್ಮ ಸ್ಮರಣೆಯಲ್ಲಿ ಉಳಿದುಕೊಂಡು ಬಿಡುತ್ತದೆ. ಆಗಾಗ ನೆನಪಾಗಿ ಅದಕ್ಕೆ ಕೊಂಡಿಯಂತಿರುವ ಹಳೆಯ ನೆನಪುಗಳನ್ನು ತೋಡಿ ಹಾಕುತ್ತದೆ. ಇದಕ್ಕೆ ಕಾರಣ ನಮ್ಮ ಭಾವನೆಗಳ ಜೊತೆ ಸಂಗೀತ ತಳಕು ಹಾಕಿಕೊಂಡಿರುವುದು.

ನಿಮಗಿಷ್ಟವಾದ ಹಳೆಯ ಹಾಡುಗಳನ್ನು ಕೇಳುತ್ತ ಹೋಗಿ, ಸುತ್ತಲಿನ ತಲ್ಲಣಗಳನ್ನು ಮರೆತು ಒಂದು ರೀತಿಯ ಪ್ರಫುಲ್ಲ ಮನೋಭಾವ ಸ್ಫುರಿಸುತ್ತದೆ. ‘ಫೀಲ್‌ ಗುಡ್‌’ ಹಾರ್ಮೋನ್‌ಗಳ ಮಟ್ಟ ಜಾಸ್ತಿಯಾಗುವುದು ಇದಕ್ಕೆ ಕಾರಣವಂತೆ. ಹಾಡುಗಳ ಜೊತೆ ಹಿಂದೆ ಕಳೆದ ಸಂತಸದ ದಿನಗಳೂ ನೆನಪಾಗಿ ಮುದ ನೀಡುತ್ತವೆ. ಅಂದರೆ ಆ ಹಾಡು ಹಳೆಯ ನೆನಪುಗಳ ಪೆಟ್ಟಿಗೆಯನ್ನು ತೆರೆಯುವ ಕೀಲಿಕೈ ತರಹ. ಯಾವುದೋ ಒಂದು ಕ್ಷಣದ ಬದಲು ಅಂದಿನ ದಿನಗಳೇ ಕಣ್ಮುಂದೆ ಬಂದಂತಾಗುತ್ತದೆ. ಖುಷಿಯ ದಿನಗಳು, ಆತ್ಮೀಯ ಸ್ನೇಹಿತರ ನೆನಪಾಗಿ ಸದ್ಯದ ಹತಾಶೆ ತೆರೆಗೆ ಸರಿದು ಬಿಡುತ್ತದೆ; ಮನಸ್ಸು ನಿರಾಳವಾಗುತ್ತದೆ.

ಬಹುತೇಕರು ಕಪ್ಪು– ಬಿಳುಪಿನ ಜಮಾನಾದ ಸಿನಿಮಾ ಹಾಡುಗಳಿಂದ ಹಿಡಿದು 90ರ ದಶಕದವರೆಗಿನ ಹಾಡುಗಳವರೆಗೂ ಡೌನ್‌ಲೋಡ್‌ ಮಾಡಿಕೊಂಡು ಪದೇ ಪದೇ ಕೇಳುತ್ತಿದ್ದಾರೆ. ಸಿನಿಮಾ ಹಾಡು ಮಾತ್ರವಲ್ಲ, 80ರ ದಶಕದ ಭಾವಗೀತೆಗಳು, ಭಕ್ತಿಗೀತೆ, ಜಾಜ್‌ ಸಂಗೀತ.. ಹೀಗೆ ಅವರವರ ಆಸಕ್ತಿಗೆ ಅನುಗುಣವಾಗಿ ಹಾಡುಗಳನ್ನು ಕೇಳಬಹುದು. ಹೆಡ್‌ಫೋನ್‌ ಹಾಕಿಕೊಂಡು ಕೇಳುವುದಕ್ಕಿಂತ ಮನೆಯಲ್ಲಿ ಪ್ರಶಾಂತ ಜಾಗದಲ್ಲಿ ಕುಳಿತು ಆರಾಮವಾಗಿ ಕೇಳಿದರೆ ಈ ಉತ್ಕಟ ಭಾವುಕತೆಯ ಲೋಕಕ್ಕೆ ಜಾರಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು