ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ನೃತ್ಯ, ಸಂಗೀತ ಕ್ಲಾಸ್‌

ಕೊರೊನಾ ರಜೆಯ ಪರಿಣಾಮ
Last Updated 1 ಏಪ್ರಿಲ್ 2020, 8:56 IST
ಅಕ್ಷರ ಗಾತ್ರ
ADVERTISEMENT
""
""
""
""

ಒಂದು ಕಾಲದಲ್ಲಿ ಮೈಸೂರಿನ ಡಾನ್ಸ್‌ ಟೀಚರ್‌ನಿಂದ ಯುಟ್ಯೂಬ್ ಮೂಲಕ ಅಮೆರಿಕದಲ್ಲಿರುವವರು ನೃತ್ಯ ಕಲಿತರು ಎಂದು ಸುದ್ದಿಯಾಗಿತ್ತು ಈಗ ‘ಕೊರೊನಾ ರಜೆ‘ಯ ಕಾರಣ ಬೆಂಗಳೂರಿನಲ್ಲಿರುವ ಕೆಲವು ಸಂಗೀತ ಶಿಕ್ಷಕರು, ಝೂಮ್, ಸ್ಕೈಪ್‌ನಂತಹ ಅಪ್ಲಿಕೇಷನ್‌ಗಳನ್ನು ಬಳಸಿಕೊಂಡು ಆನ್‌ಲೈನ್ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ ಕಲಿಸುತ್ತಿದ್ದಾರೆ.

ಮೇ ತಿಂಗಳಲ್ಲಿ ನೃತ್ಯ ಪರೀಕ್ಷೆಗಳು ನಡೆಯುತ್ತಿರುವುದರಿಂದ ಬಹುತೇಕ ನೃತ್ಯ ಕಲಾವಿದರು ಈಗ ಆನ್‌ಲೈನ್‌ ಮೂಲಕ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ.

ವೀಣಾ ಮೂರ್ತಿ

ಶ್ರೀ ರಾಜರಾಜೇಶ್ವರಿ ಕಲಾನಿಕೇತನ

ಈ ನೃತ್ಯ ಸಂಸ್ಥೆಯ ಗುರುಗಳಾದ ವೀಣಾ ಮೂರ್ತಿ ಅವರು ಝೂಮ್‌, ಸ್ಕೈಫ್‌ ಆ್ಯಪ್‌ಗಳ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಭರತನಾಟ್ಯ, ಕೂಚುಪುಡಿ ಹೇಳಿಕೊಡುತ್ತಿದ್ದಾರೆ. ಯುಟ್ಯೂಬ್‌ನಲ್ಲಿ ನೃತ್ಯದ ವಿಡಿಯೊಗಳನ್ನು ಅಪ್‌ಲೋಡ್‌ ಮಾಡಿ, ಲಿಂಕ್‌ಗಳನ್ನು ಶಿಷ್ಯರಿಗೆ ಕಳುಹಿಸುತ್ತಾರೆ. ಬಳಿಕ ಅವರಿಗೆ ಝೂಮ್‌, ಸ್ಕೈಪ್‌ ಆ್ಯಪ್‌ಗಳ ಮೂಲಕ ವಿವರವಾಗಿ ಕಾಣಿಸುವಂತೆ ಹೇಳಿಕೊಡುತ್ತಾರೆ.

‘ಮುಂಚೆ ವಿದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ತೆಗೆದುಕೊಳ್ಳುತ್ತಿದ್ದೆ. ಈಗ ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ನನ್ನಲ್ಲಿಗೆ ನೃತ್ಯ ಕಲಿಯಲು ಬರುತ್ತಿದ್ದ ಮಕ್ಕಳಿಗೂ ಆನ್‌ಲೈನ್‌ ಮೂಲಕವೇ ಹೇಳಿಕೊಡುತ್ತಿದ್ದೇನೆ. ಜೂನಿಯರ್‌ ಬ್ಯಾಚ್‌ನಲ್ಲಿ 10 ಜನ, ಸೀನಿಯರ್‌ ಆಗಿದ್ದರೆ ಮೂರು ಜನ ಹಾಗೂ ರಂಗಪ್ರವೇಶ ಮಾಡುವವರಾಗಿದ್ದರೆ ಒಬ್ಬರಿಗೆ ಮಾತ್ರ ತರಗತಿ ತೆಗೆದುಕೊಳ್ಳುತ್ತೇನೆ. ಬೆಳಿಗ್ಗೆ 7ರಿಂದ 11ಗಂಟೆವರೆಗೆ ಇಲ್ಲಿನವರಿಗೆ, ರಾತ್ರಿ ಹೊತ್ತು ವಿದೇಶಗಳ ವಿದ್ಯಾರ್ಥಿಗಳಿಗೆ ಕ್ಲಾಸ್‌’ ಎಂದು ಹೇಳಿಕೊಂಡರು ವೀಣಾ ಮೂರ್ತಿ.

ಸವಿತಾ ರವಿ

ಅಮೃತಾ ಸಂಗೀತ ಅಕಾಡೆಮಿ

ಸಂಜಯನಗರದ ಈ ಸಂಗೀತ ಶಾಲೆಯ ಗುರು ಸವಿತಾ ರವಿ, ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಸಂಗೀತ ಪಾಠ ಮಾಡುವ ಪ್ರಯೋಗಕ್ಕೆ ಮುಂದಾಗಿದ್ದಾರೆ. ‘ಮೊದಲ ಬಾರಿಯಾದರೂ, ಈ ಪ್ರಯೋಗ ಬಹುತೇಕ ಯಶಸ್ವಿಯಾಗಿದೆ. ಎಲ್ಲಾ ಮಕ್ಕಳಿಗೂ ಖುಷಿಯಿಂದ ಪಾಲ್ಗೊಳ್ಳುತ್ತಾರೆ‘ ಎಂದು ಅವರು ಖುಷಿ ಹಂಚಿಕೊಳ್ಳುತ್ತಾರೆ.

‘ಆನ್‌ಲೈನ್‌ ಕ್ಲಾಸ್‌ ಬಗ್ಗೆ ನನಗೆ ಏನೂ ಐಡಿಯಾ ಇರಲಿಲ್ಲ. ಕರ್ಫ್ಯೂ ವಿಧಿಸಿದ ಬಳಿಕ ನನಗೂ ಸಂಗೀತ ತರಗತಿ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಆಗ ನನ್ನ ಗಂಡ, ಝೂಮ್‌ ಆ್ಯಪ್‌ ಬಳಸಿ ಕಾನ್ಫರೆನ್ಸ್‌ ಮೀಟಿಂಗ್‌ ಮಾಡುವುದನ್ನು ನೋಡಿದೆ. ಇದನ್ನೇ ಬಳಸಿ ನಾನೂ ಯಾಕೆ ವಿದ್ಯಾರ್ಥಿಗಳಿಗೆ ತೆಗೆದುಕೊಳ್ಳಬಾರದು ಎಂದು ಅನಿಸಿತು. ಮಕ್ಕಳ ಹೆತ್ತವರ ಜೊತೆ ಮಾತನಾಡಿ, ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳುವಂತೆ ಹೇಳಿದೆ’ ಎಂದು ತಿಳಿಸಿದರು.

ಸವಿತಾ ರವಿ ಅವರು 5–10 ಮಕ್ಕಳಿಗೆ ಜೊತೆಗೇ ಕ್ಲಾಸ್‌ ನಡೆಸುತ್ತಾರೆ. ಇವರು ಒಂದು ಬಾರಿ ಪಾಠ ಮಾಡಿದ ನಂತರ, ಪ್ರತಿ ಮಕ್ಕಳಿಂದ ಒಬ್ಬೊಬ್ಬರಾಗಿ ಅದನ್ನು ಹಾಡಿಸುತ್ತಾರೆ. ಎಲ್ಲಿ ತಾಳ, ರಾಗ ತಪ್ಪಿದೆಯೋ ಅದನ್ನು ತಿದ್ದುತ್ತಾರೆ. ‘ಸಂಗೀತದ ನೋಟ್‌ಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸುತ್ತೇನೆ. ಸಂಗೀತ ಪಾಠಪುಸ್ತಕ ಮಕ್ಕಳ ಬಳಿ ಇದೆ. ನಾನು ಪಾಠ ಮಾಡಿದ್ದನ್ನು ಮರುದಿನ ಅವರ ಬಳಿ ಹೇಳಿಸುತ್ತೇನೆ. ಬಳಿಕ ಮುಂದಿನ ಪಾಠ’ ಎಂದು ಆನ್‌ಲೈನ್‌ ಪಾಠ ಮಾಡುವ ರೀತಿಯನ್ನು ವಿವರಿಸಿದರು.

ಲೂರ್ಡ್‌ ವಿಜಯ್‌

ಲೂರ್ಡ್‌ ವಿಜಯ್‌ ಡಾನ್ಸ್‌ ಸ್ಟುಡಿಯೊ

ವಸಂತನಗರದಲ್ಲಿರುವ ಈ ಡಾನ್ಸ್‌ಸ್ಟುಡಿಯೊ, ಸಾಲ್ಸಾ, ಕಂಟೆಂಪರರಿ, ಬಾಡಿ ಮೂಮೆಂಟ್‌, ಫಿಲ್ಮಿ ನೃತ್ಯಗಳನ್ನು ಕಲಿಸುವ ಸಂಸ್ಥೆ. ಇದರ ಮುಖ್ಯಸ್ಥ ಲೂರ್ಡ್‌ ವಿಜಯ್‌. ಸದ್ಯ ದಿನಕ್ಕೆ ಆರು ಗಂಟೆಗಳ ಕಾಲ ಆನ್‌ಲೈನ್‌ ಮೂಲಕ ಡಾನ್ಸ್ ಕಲಿಸುತ್ತಿದ್ದಾರೆ. ಒಂದು ಬ್ಯಾಚ್‌ನಲ್ಲಿ 30 ವಿದ್ಯಾರ್ಥಿಗಳು ಇರುತ್ತಾರೆ.

ಫೇಸ್‌ಬುಕ್‌ ಲೈವ್‌ನಲ್ಲೂ ಮನೆಯಲ್ಲಿರುವವರಿಗೆ ನೃತ್ಯದ ಬೇಸಿಕ್‌ ಬಗ್ಗೆ ಹೇಳಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ‘ನಾನು ತರಗತಿಗೆ ಬಂದು ನೃತ್ಯ ಕಲಿಯಲು ಪ್ರಾಶಸ್ತ್ಯ ನೀಡುವವನು. ಆನ್‌ಲೈನ್‌ ಮೂಲಕ ಸಂವಹನ ಸರಿಯಾಗುವುದಿಲ್ಲ. ಮುಂಚೆ ಯಾರಾದರೂ ಅನಿವಾರ್ಯ ಕಾರಣದಿಂದ ನೃತ್ಯ ತರಗತಿಗೆ ಬರಲಾಗದಿದ್ದರೆ ಅವರಿಗೆ ಆನ್‌ಲೈನ್‌ ಮೂಲಕ ಹೇಳಿಕೊಡುತ್ತಿದ್ದೆ. ಈಗ ಎಲ್ಲರೂ ಮನೆಯಲ್ಲೇ ಬಂದಿಯಾಗಿರುವುದರಿಂದ ಆನ್‌ಲೈನ್‌ ತುಂಬ ಉಪಯುಕ್ತವಾಗಿದೆ’ ಎನ್ನುತ್ತಾರೆ ಅವರು.

ವೈಜಯಂತಿ ಕಾಶಿ

ಶಾಂಭವಿ ಸ್ಕೂಲ್‌ ಆಫ್‌ ಡಾನ್ಸ್‌

ಹಂಪಿನಗರದಲ್ಲಿರುವ ಈ ಶಾಲೆಯ ನೃತ್ಯಗುರು, ಖ್ಯಾತ ನೃತ್ಯ ಕಲಾವಿದೆ ವೈಜಯಂತಿ ಕಾಶಿ. ಅವರೂ ಸಹ ಈಗ ನೃತ್ಯ ಕಲಿಸಲು ಆನ್‌ಲೈನ್‌ ಮೊರೆ ಹೋಗಿದ್ದಾರೆ. ‘ನಾನು ತೀರಾ ಸಣ್ಣ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಹೇಳಿಕೊಡುವುದಿಲ್ಲ.12 ವರ್ಷಕ್ಕಿಂತ ಮೇಲಿನ, ಸ್ವತಂತ್ರವಾಗಿ ಆಲೋಚಿಸುವ ಸಾಮರ್ಥ್ಯ ಹೊಂದಿದ ಮಕ್ಕಳಿಗೆ ‘ಸ್ಕೈಪ್‌‘ ಬಳಸಿ ನೃತ್ಯ ಕಲಿಸುತ್ತಿದ್ದೇನೆ. ಈ ದಿಗ್ಬಂಧನ ಎಷ್ಟು ದಿನ ಮುಂದುವರಿಯಬಹುದು ಗೊತ್ತಿಲ್ಲ. ಸಾಮಾನ್ಯವಾಗಿ ಪ್ರತಿವರ್ಷ ಮೇನಲ್ಲಿ ಜೂನಿಯರ್‌, ಸೀನಿಯರ್‌ ನೃತ್ಯ ಪರೀಕ್ಷೆಗಳು ನಡೆಯುತ್ತಿದ್ದವು. ಹಾಗಾಗಿ ಇನ್ನು ಸ್ವಲ್ಪ ಸಮಯ ವಿರುವುದರಿಂದ ಪರೀಕ್ಷೆ ಕಟ್ಟುವ ಮಕ್ಕಳಿಗೆ ತೊಂದರೆಯಾಗಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT