ಶನಿವಾರ, ಸೆಪ್ಟೆಂಬರ್ 19, 2020
22 °C

‘ರಾಜೀವ್‌’ ಸರೋದ್‌ ಮೋಡಿ

ಡಾ.ರಮಾ ವಿ. ಬೆಣ್ಣೂರ್ Updated:

ಅಕ್ಷರ ಗಾತ್ರ : | |

Prajavani

ತನ್ನ 58ನೇ ಪಾರಂಪರಿಕ ಸಂಗೀತೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಟ್ರಸ್ಟ್ ತನ್ನ ಕಛೇರಿಗಳಲ್ಲಿ ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಪದ್ಧತಿಗಳನ್ನು ಒಳಗೊಂಡಿರುತ್ತದೆ. ಹೆಸರು ಮಾಡಿರುವ ಹಿರಿಯ ಸಂಗೀತಗಾರರಿಗಷ್ಟೇ ಅಲ್ಲದೆ ಕಿರಿಯ ಉದಯೋನ್ಮುಖ ಕಲಾವಿದರಿಗೂ ವೇದಿಕೆಯನ್ನು ಒದಗಿಸಿಕೊಡುತ್ತದೆ. ಜೊತೆಗೆ ಪ್ರತಿ ನಿತ್ಯವೂ ಕಛೇರಿಯ ಆರಂಭದ ಮೊದಲು ಒಂದು ಗಂಟೆವರೆಗೆ ಗಮಕ ವಾಚನ ಮತ್ತು ವ್ಯಾಖ್ಯಾನವನ್ನೂ ಏರ್ಪಡಿಸುವುದರ ಮೂಲಕ ನಮ್ಮ ಪ್ರಾಚೀನ ಪರಂಪರೆಗೂ ಮಹತ್ವ ಕೊಡುತ್ತಾ ಬಂದಿದೆ.

ಸೆಪ್ಟೆಂಬರ್ 6ರಂದು ನಡೆದ ಕಛೇರಿಯು ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಕಗ್ಗಕ್ಕೆ ವ್ಯಾಖ್ಯಾನ ಬರೆದಂತಿತ್ತು. ಅಂದು ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್‌ ಅವರ ಸರೋದ್ ವಾದನ ಇತ್ತು. ಅದಕ್ಕೆ ಮೊದಲು ಮಾಸ್ಟರ್ ಪ್ರದ್ಯುಮ್ನ ಉದಯ್ ಕರ್ಪೂರ್ ಅವರ ತಬಲಾ ವಾದನ ಇದ್ದಿತು. ಮೂರನೆಯ ತರಗತಿಯಲ್ಲಿ ಓದುತ್ತಿರುವ ಈ ಪೋರನಿಗೆ ಹಾರ್ಮೋನಿಯಂನಲ್ಲಿ ಲೆಹರಾ ನುಡಿಸಿದ್ದು 6ನೇ ತರಗತಿಯಲ್ಲಿ ಓದುತ್ತಿರುವ ಮತ್ತೊಬ್ಬ ಪೋರ ಚಿನ್ಮಯ್ ಭಾರದ್ವಾಜ್!

ಈ ಪ್ರತಿಭೆಗಳಿಬ್ಬರನ್ನೂ ತಯಾರು ಮಾಡುತ್ತಿರುವವರು ತಬಲಾ ವಾದಕರ ಮುಂಚೂಣಿಯಲ್ಲಿರುವ ಉದಯ್ ರಾಜ್ ಕರ್ಪೂರ್ ಅವರು. ನಿರರ್ಗಳವಾಗಿ ತಬಲಾದ ಬೋಲ್‌ಗಳನ್ನು ಹೇಳುತ್ತಾ ಪುಟ್ಟ ಬೆರಳುಗಳಿಂದ ತಬಲಾ ವಾದನ ಮಾಡುತ್ತಾ ತೀನ್ ತಾಲ್‌ನಲ್ಲಿ ಪೇಷ್ಕಾರ್, ಕಾಯ್ದ, ರೇಲಾ, ತುಕಡಾ ಮತ್ತು ಚಕ್ರಧಾರ್‌ಗಳನ್ನು ನುಡಿಸಿ ಸುಮಾರು ಒಂದು ಗಂಟೆಯವರೆಗೆ ಕೇಳುಗರನ್ನು ಮೋಡಿ ಮಾಡಿದ. ಅಪ್ಪನ ಉಸ್ತುವಾರಿಯಲ್ಲಿ ತಯಾರಾಗುತ್ತಿರುವ ಪುಟ್ಟ ಬಾಲಕ ಪ್ರದ್ಯುಮ್ನನಲ್ಲಿ ಉತ್ತಮ ತಬಲಾ ವಾದಕನಾಗುವ ಎಲ್ಲ ಲಕ್ಷಣಗಳೂ ಇವೆ.

ಪಂಡಿತ್ ರಾಜೀವ್ ತಾರಾನಾಥ್‌ ತಮ್ಮ ತೀಕ್ಷ್ಣ ಬುದ್ಧಿಮತ್ತೆಗೆ, ಆಳವಾದ ಅಧ್ಯಯನಕ್ಕೆ, ಅಸಾಧಾರಣ ಮತ್ತು ಗಂಭೀರ ಆಲೋಚನೆಗೆ ಮತ್ತೊಂದು ಹೆಸರಾದವರು. ಅವರ ವ್ಯಕ್ತಿತ್ವದ ಎಲ್ಲ ಅಂಶಗಳೂ ಅವರ ಸಂಗೀತದಲ್ಲಿ ಹಾಸುಹೊಕ್ಕಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಅವರ ವಾದನದಲ್ಲಿ ಸ್ಪಷ್ಟತೆ, ಇಂಪು, ನವಿರು, ಗಡಸು, ಭಾವದ ಹೊಳೆ ಎಲ್ಲವೂ ಸಮ್ಮಿಲಿತವಾಗಿವೆ. ಸಂಗೀತದ ಹುಚ್ಚನ್ನು ಅವರು ತಲೆಗೇರಿಸಿಕೊಂಡ ನಂತರ ಅದಕ್ಕೆ ತಮ್ಮನ್ನು ತಾವು ತೆತ್ತುಕೊಂಡ ಪರಿಯು ಈಗ ಇತಿಹಾಸ. ಆ ಪ್ರಾಮಾಣಿಕತೆಯು ಅವರ ಕೈಹಿಡಿದು ಕಾಪಾಡಿದೆ. ಇಂದು ಅವರನ್ನು ಅದ್ವಿತೀಯ ಸರೋದ್ ವಾದಕನನ್ನಾಗಿ ರೂಪಿಸಿದೆ.

ಪಂಡಿತ್ ಅಕ್ಬರ್ ಅಲಿ ಖಾನರಂತಹ ಅದ್ಭುತ ಕಲಾವಿದರ ಕಣ್ಗಾವಲಿನಲ್ಲಿ ತಯಾರಾದ ಈ ಅಪ್ಪಟ ಪ್ರತಿಭೆಯು ಮೈಹರ್-ಅಲ್ಲಾದೀನ್ ಘರಾನಾದ ಪ್ರಮುಖ ವಾದಕರೆನಿಸಿದ್ದಾರೆ. ಅಂದು ಅವರಿಗೆ ಉದಯ್‌ರಾಜ್ ಕರ್ಪೂರರ ತಬಲಾ ಸಾಥ್ ಇದ್ದಿತು. ಅವರೊಂದಿಗೆ ಅವರ ಶಿಷ್ಯ ಅರಣ್ಯಕುಮಾರರ ಸಿತಾರ್ ವಾದನವೂ ಜೊತೆಗೂಡಿತ್ತು. ರಾಗ್ ಯಮನ್‌ನಿಂದ ತಮ್ಮ ವಾದನವನ್ನು ಪ್ರಾರಂಭಿಸಿದ ರಾಜೀವ್ ತಾರಾನಾಥ್‌ ನವಿರಾಗಿ ಸ್ವರಗಳನ್ನು ಸ್ಪರ್ಶಿಸುತ್ತಾ ರಾಗದ ಪರಿಮಳವನ್ನು ಸಾವಕಾಶವಾಗಿ ಪಸರಿಸುತ್ತಾ ನಡೆದರು. ಅವರೊಂದಿಗೆ ಮೃದುವಾದ ಸ್ವರಗಳೊಡನೆ ಅವರ ಶಿಷ್ಯ ಅರಣ್ಯಕುಮಾರರೂ ಹಿತವಾಗಿ ಹಿಂಬಾಲಿಸುತ್ತಿದ್ದರು. ಕೆಲವೇ ನಿಮಿಷಗಳಲ್ಲಿ ಸಂಗೀತದ ಸಾಂದ್ರತೆಯನ್ನು ಸರೋದ್ ಹೆಚ್ಚಿಸುತ್ತಾ ಹೋದಂತೆ ಅಲ್ಲಿ ತಾಳಕ್ಕೆ ನಿಬದ್ಧವಾದ ಯಾವ ರಚನೆಯ ಅವಶ್ಯವೂ ಇರಲಿಲ್ಲ. ಆಲಾಪ್– ಜೋಡ್ ಝಾಲಾಗಳೇ ಸಾಕಿತ್ತು. ಮಾಧುರ್ಯವೇ ಮನೆ ಮಾಡಿದ್ದ ಸ್ಥಿತಿ ಅದಾಗಿತ್ತು.

ಮುಂದೆ, ರಾಗ್ ದೇಸ್‌ಮಲ್ಹಾರ್ ಲಯಬದ್ಧವಾಗಿ ತೀನ್ ತಾಲ್‌ನಲ್ಲಿ ಮುಂದುವರೆಯಿತು. ಈ ರಾಗವು ದೇಸ್ ಮತ್ತು ಮಲ್ಹಾರ್ ಎರಡೂ ರಾಗಗಳ ಅಂಗ್‌ಗಳನ್ನು ಹೊಂದಿರುವ ರಾಗ. ಅದನ್ನೇ ವಿಸ್ತರಿಸುತ್ತಾ ಎರಡರ ಸೊಬಗನ್ನು ಆನಂದಿಸುವಂತೆ ಮಾಡಿದರು ರಾಜೀವ್ ಅವರು. ಅವರ ಗುರುಗಳ ಸೃಷ್ಟಿಯಾದ ರಾಗ್ ಮದನಮಂಜರಿ ಮತ್ತೊಂದು ಸುಂದರ ಅನುಭವ. ಆ ರಾಗದ ರೂಪ, ಆಕಾರಗಳು ಸ್ವರಗಳ ಮೂಲಕ ಅನಾವರಣವಾಗುವುದನ್ನು ಅನುಭವಿಸುವುದೇ ಸಂಗೀತಾನುಭವ. ಮಧ್ಯೆ ಮಧ್ಯೆ ಸಿತಾರಿನ ಮೃದು ಸಿಂಚನ ಮತ್ತು ತಬಲಾದ ಹಿತವಾದ ಸಾಥ್‌ನೊಂದಿಗೆ ರಾಗ್ ಭೈರವಿಯೊಂದಿಗೆ ಪಂಡಿತ್ ರಾಜೀವ್ ತಾರಾನಾಥ್‌ ಅವರ ಸರೋದ್ ವಾದನವು ಸಂಪನ್ನಗೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.