ಶನಿವಾರ, ಅಕ್ಟೋಬರ್ 24, 2020
22 °C

ಕವನ: ಪ್ರಮಾದವಿಲ್ಲ

ಶ್ರೀದೇವಿ ಕಳಸದ Updated:

ಅಕ್ಷರ ಗಾತ್ರ : | |

Prajavani

ಅಲ್ಲಿ ನಿನ್ನ ಪದತಲದಲ್ಲಿ ಬಿದ್ದು ಹೊರಳಾಡುತ್ತಿರುವ
ನನ್ನ ಮನಸಿನ ಬಗ್ಗೆ
ನನಗೇ ಮರುಕವಿಲ್ಲ, ಇನ್ನು ಸಂಕೋಚವೆಲ್ಲಿ?
ಅಂತೆಯೇ ಈ ಅರ್ಧರಾತ್ರಿಯಲ್ಲೇ
ದೇಹವನ್ನೂ ಹೊತ್ತು ಬಂದಿದ್ದೇನೆ.

ಮರುಳಾ,
ಕೊಟ್ಟರೆ ತುಂಬಿ ತುಂಬಿ ಕೊಡಬೇಕು
ಕಟ್ಟಿಕಟ್ಟಿ ಉರುಳಿಸಬೇಕು
ನೋವಿನ ಹೆಡಿಗೆಯನ್ನು, ಸಾವಿನ ಸರಪಳಿಯನ್ನು
ಮುಟ್ಟಲು ಬಂದವರೆಲ್ಲ ನಿಂತಲ್ಲೇ ಭಸ್ಮವಾಗಿ
ಮೋಹದ ಹುಡಿಯೊಂದಿಗೆ ಹಾರಿ ಮೋಡಕ್ಕಂಟುವಂತೆ.

ಬಳಿದುಕೊಂಡು ಆಟ ಮುಗಿಸಲಿದು
ಹುಣಸೆಬೀಜದ ಚೌಕಾಬಾರವೇನು?
ಒಳಹೋಗಲು ಕಡಿತ ಸಿಗಲಿಲ್ಲವೆಂದೋ
ಹಣ್ಣಾಯಿತೆಂದು ಎದ್ದು ಹೋಗಲೋ.

ಎಳೆ ಹಿಂಜಿ ಅಂಜಿ ಅಷ್ಟಷ್ಟೇ ಹಿಂಜಿಂಜಿ
ಗುಂಜಿಎಳೆಯ ಲಡಿಗಟ್ಟಿಸಿ ಕುಣಿಕೆ ಎಳೆದು
ಬ್ರಹ್ಮಾಂಡ ನೇಯ್ದ ನಾಜೂಕು ಜೀವಜಾಲವಿದು.

ಬಾ ಮುಗಿಲೀಗ ಹರಿದಿರಬೇಕು,

ನೀನೀಗ ಕಾಲಿಳಿಬಿಡುವಾಗ
ಉತ್ಕಟ ನೆನಪುಗಳು ತೊಡರಬಹುದು;
ನಿನ್ನೆದುರಿನ ಮುಳ್ಳುಗಳಿಗೆ ನಿನ್ನೆದೆಯ ಲೋಲಕಕ್ಕೆ
ಮತ್ತೆ ನೀನೇ ಗತಿ ಕಲಿಸಿಕೊಡಬೇಕು
ನಿನ್ನದೇ ಅಂಕೆಯಲ್ಲಿ ಅವೇ ಸಂಖ್ಯೆಯಲ್ಲಿ ನಿಶ್ಶಂಕೆಯಲ್ಲಿ.

ನಿನ್ನ ಶುದ್ಧಬನಿಗೆ ಶುಭ್ರಬಾನಿಗೆ
ತೆರೆದುಕೊಳ್ಳಲು ಇಳೆಯ ಎದೆಗೆ ಪಾದಗಳನ್ನೂರಲೇಬೇಕು.
ಬಾಗಿಲ ತೆರೆಯುವಾಗ ನಾಚಿಕೆ ಇಲ್ಲದ ನನ್ನ ಕರುಳು
ಚಿಲಕವೇ ತಾನಾಗಿ ನಿನ್ನ ತಡೆಯಬಹುದು;
ಅತೀಮಾನವನಾಗುವ ಹಂಬಲ ಸಾಕಲ್ಲವೆ?
ಸ್ವಲ್ಪ ಹೊತ್ತಾದರೂ ರಾಕ್ಷಸನಾಗುವ
ಅವಕಾಶ ಆವಾಹಿಸಿಕೋ
ನಿನ್ನ ನೀ ಉಳಿಸಿಕೋ
ನಿನ್ನೊಳಗಿನ ನನ್ನನ್ನೂ
ನನ್ನೊಳಗಿನ ನಿನ್ನನ್ನೂ
ಆದೀತೆ, ಇದು ಪರಿಯೆ?

***

ಒಂದು ಸ್ಪರ್ಶದ ವಿಭಾವಕ್ಕೆ
ಜೀವಕ್ಕೆ ಜೀವವೇ ಪಾಪಕುಂಡದೊಳಗೆ ಹಾರಿ
ಬಯಕೆ ಕೆಂಡವಾದರೂ ಬಯಲ ಜೀಕದೆ
ಅಗ್ನಿ ಇಲ್ಲದೆ ಅರಳಿನಿಂತ ಮನಸ್
ಸಾಕ್ಷಿಯ ವೃಕ್ಷವಿದು;

ಪಾದಾಘಾತದಿಂದ ದೋಹದವೇ ಎಸಗುತ್ತದೆ
ಅಲ್ಲವೇ ನನ್ನ ಗಂಧರ್ವ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.