ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ದಕ್ಕೀತೆ ಇಂತಹ ಬಾಳು

Last Updated 21 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಹದಿ ಹರೆಯದಿಂದ
ಮುದಿಯವರೆಗೆ
ಅವ ಬ್ಯಾಗು ಹಿಡಿದು
ಚೀಟಿ ಪಡೆದು
ಸಂತೆಗೆ ಹೋಗುತ್ತಿದ್ದ
ಬರುವಾಗ ಮರೆಯದೆ
ಅವಳಿಗೆ 'ವಿಕ್ಸ್' ತರುತ್ತಿದ್ದ
ಮನೆಯ ಮುಂದೆ
ಬೈಕು ನಿಂತ ಶಬ್ಧ
ಸ್ಪಷ್ಟವಾಗಿ ಕೇಳುತ್ತದೆ
ಎಷ್ಟು ಜನಕ್ಕೆ ದಕ್ಕೀತು ಇಂತಹ ಬಾಳು

ಇಂಟರ್‌ಶಿಪ್ಪಿನಂತೆ
ಗಂಡಸೊಬ್ಬ ತಾಳಿಕಟ್ಟಿ
ಜತೆಯಲ್ಲಿ ಮಲಗಿ
ಚಿನ್ನ ರನ್ನ ಎಂದು
ಬೇಗ ಬೇಗ ಮಾತುಮುಗಿಸಿ
ಮರೆಯಲಾಗದ ನೆನಪಕೊಟ್ಟು
ವಾಪಸ್ಸು ಬರದಂತೆ ಹೋಗಿ ಬಿಟ್ಟರೆ!
ವಿಕ್ಸ್ ತರುವವರಾರು?

ಮಡಿಲಲ್ಲಿ ಮಲಗಿ
ತುಟಿಗೆ ತುಟಿ
ತಾಪತ್ರಯಗಳಲಿ
ಮಾತಿಗೆ ಮಾತು
ನಿನ್ನನ್ನು ಯಾವ ಕರ್ಮಕ್ಕೆ ಕಟ್ಟಿಕೊಂಡೆನೊ'
ಎಂದು ಕೂಗಬಹುದು
ಅವ ಬಿರುಸು ಹೆಜ್ಜೆಯಲಿ
ಹೊರ ಹೋಗಿಬಿಟ್ಟರೆ
‘ನಿಮ್ಮಪ್ಪ ಯಾವ್ ಕಡೆ ಹೋದ್ರು’
ಎಂದು ಕೇಳಬಹುದು
ಬಾಗಿಲ ಬಳಿ
ಹುಸಿರ ಬಿಗಿ ಹಿಡಿದು
ಅವಡುಗಚ್ಚಿ ಕಾಯಬಹುದು

ಅಪರೂಪಕ್ಕೆ ತವರಿಗೆ ಹೋದರು
ಬರುವಾಗಲೇ ಎಲ್ಲ ಕೆಲಸ ಮುಗಿಸಿ ಬಂದಿದ್ದರು
ಸಂಜೆಯೇ ಕರೆ ಬರುತ್ತದೆ
‘ಯಾವಾಗ ಬರೋದು’
ಒಂದು ದಿನ ತಡವಾದರೆ
ಮುನಿದ ಮಾತು
ಮುಗುಳು ನಗೆಗೆ ಕಾಯುವ ಆ ಒಂದು ಕ್ಷಣ
ಎಷ್ಟು ಜನರಿಗೆ ದಕ್ಕೀತು?

ಇದ್ದರೆ,
ಇಂದಲ್ಲ ನಾಳೆ ನಗಬಹುದು
ಕಾದು ಕೂತ ರಾತ್ರಿಯಲಿ ಸೇರಬಹುದು
ಸಿನಿಮಾಗೆ ಹೋಗೋಣ ಅನ್ನಬಹುದು
ಯಾರಿಗೂ ತೋರಿಸಲಾಗದ ಗಾಯ ತೋರಿಸಬಹುದು
ಯಾರೊಂದಿಗೂ ಹೇಳಿಕೊಳ್ಳಲಾಗದ ಸಂಕಟ ಹೇಳಿಕೊಳ್ಳಬಹುದು
ಬಾಡಿಗೆ ಕೇಳಲು ಬಂದವಗೆ
‘ಸಂಜೆ ಬನ್ನಿ’
ತುಂಟ ಮಗುವಿಗೆ
‘ಅಪ್ಪನ್ನ ಕರೀಲ’
ಛೇ! ಎಲ್ಲರಿಗೂ ದಕ್ಕಲಿ ದೇವರೆ
ಇಂತಹ ಬಾಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT