ಶುಕ್ರವಾರ, ಜುಲೈ 1, 2022
23 °C

ಕವಿತೆ: ಬದುಕುವುದೇ ಜರೂರಿ...

ಎಚ್.ಸಿ. ಭವ್ಯ ನವೀನ್ Updated:

ಅಕ್ಷರ ಗಾತ್ರ : | |

Prajavani

ಒಳಗೆ 

ಸಾವಿನ ಭ್ರೂಣ 

ಮಿಸುಕುತ್ತಿರುವಾಗ

ಮಗ್ಗುಲಲ್ಲಿ ಮಲಗಿರುವ ಬದುಕು

ಕೊರಳತಬ್ಬಿ 

ರಚ್ಚೆ ಹಿಡಿಯುತ್ತಿದೆ

 **

ಸುತ್ತೆಲ್ಲಾ ಕಳವಳದ ಕಾಳರಾತ್ರಿ

ಎಂಥ ಹಿಂಸೆ... ನೋಡು

ಲಾಲಿಪದಗಳೇ ಚಿರನಿದ್ದೆಗೆ ಹಚ್ಚುತ್ತಿವೆ

ಇನ್ನೂ ದಣಿಯದ ಅಸಂಖ್ಯ ಅಪ್ಪ

ಮದುವೆಸೀರೆಗೆ ಕುಚ್ಚುಕಟ್ಟುತ್ತಿದ್ದ ಎಷ್ಟು ಅಮ್ಮ

ಭರ್ತಿ ಯೌವ್ವನದ ಹುಡುಗ, ಹುಡುಗಿ

ಎಳೆ ಬಾಣಂತಿ, ಹಸುಗೂಸುಗಳೂ...

ಸಾಲಾಗಿ ಕರೆತಂದು

ಬಲವಂತಕ್ಕೆ ಬಿತ್ತಿಹೋಗುತ್ತಿದ್ದಾರೆ ಇಲ್ಲಿ..

ಬಿತ್ತಿದ್ದೆಲ್ಲವೂ ಚಿಗುರುವುದಿಲ್ಲವಲ್ಲ‌ಾ ಮತ್ತೆ 

 

ವಿದಾಯ ಹೇಳದ ಕೊನೆ

ಮತ್ತೆ ಕಾಯುವಂತೆ ಮಾಡುತ್ತದೆ

ಆಟಿಕೆ ತಣ್ಣಗಾಗಿ...

ದೃಶ್ಯಗಳಿಲ್ಲದ ಚಿತ್ರ, ಉತ್ತರ ಸಿಗದ ಪತ್ರ..

ಬಿಟ್ಟುಳಿದ ಬದುಕು ಅಂಗಳದಲ್ಲಿ ಗೂಡಾಡಿ

ಮಿಕ್ಕುಳಿದ ಬದುಕು ಸೂರಡಿಯಲ್ಲಿ ಬಿಕ್ಕುಗಳಾಗಿ

ಅಯ್ಯೋ... ಈ ಪ್ರಳಯಕಾಲ

ದಾಟಿದರೆ ಬದುಕಬಹುದು

ದಾಟುವವರೆಗೆ ಹೇಗೆ ಬದುಕುವುದು?

**

ವಿಷಾದಗಳೆಂದರೆ ಮೀರಬೇಕಾದ ಪರಮಸತ್ಯಗಳು

ದಾಟು..

ಬದುಕುವುದೇ ಜರೂರಿ... 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು