ಶುಕ್ರವಾರ, ಸೆಪ್ಟೆಂಬರ್ 30, 2022
21 °C

ಕವಿತೆ: ಅಮ್ಮನ ಕಾಲುಗಳು

ಸಂತೆಬೆನ್ನೂರು ಫೈಜ್ನಟ್ರಾಜ್ Updated:

ಅಕ್ಷರ ಗಾತ್ರ : | |

Prajavani

ಅಝಾನ್ ಕೂಗಿದರೂ ಮಸೀದಿಯತ್ತ
ತೆರಳುವುದು ಕಡಿಮೆ ಆದರೂ
ದಿನವೂ ಅಮ್ಮನ ಕಾಲಿಗೆ ನಮಸ್ಕರಿಸುತ್ತೇನೆ
ನಾನು ಒಳ್ಳೆಯ ಮಗನಲ್ಲ,
ಎದೆಹಾಲು ಕುಡಿಯುವಾಗ ಒದ್ದಿದ್ದೇನೆ ಅಮ್ಮನೆದೆಗೆ
ಅಂಬೆಗಾಲಿನ ಪಾದವೂರುವಾಗ ಆಯ ತಪ್ಪಿ ಕೈ
ಹಿಡಿಯ ಬಂದ ಅಮ್ಮನ ಸಿಂಡರಿಸಿ ನಡೆದಿದ್ದೇನೆ
ಹಾಲು ಅನ್ನ ಉಣ್ಣುತ್ತಾ ಮೈ ತುಂಬಾ
ಚೆಲ್ಲಿಕೊಳ್ಳುತ್ತಿರುವಾಗ ಬಾಯಿ ಒರೆಸಬಂದ ಅಮ್ಮನಿಗೇ ಅಣಕಿಸಿ ಓಡಿದ್ದೇನೆ
ಅಮ್ಮ ಎಷ್ಟು ನಕ್ಕಳೋ, ನೊಂದಳೋ, ಅತ್ತಳೋ ಗೊತ್ತಿಲ್ಲ;
ಮಸೀದಿಯ ಅಲ್ಲಾನಿಗೂ ಅಮ್ಮನ ಕಂಡರೆ ಅದೇನು ಒಲವೋ
ಅವನೂ ‘ಅಮ್ಮನಿಗೆ’ ಶರಣು
ನನ್ನ ನಮಸ್ಕಾರದೊಂದಿಗೆ!

ಮನೆಪಾಠ ಬರೆಯುವಾಗೆಲ್ಲ ತಿದ್ದಬಂದ ಅಮ್ಮನಿಗೆ ಮಿಸ್
ಹೇಳಿದ್ದೇ ಸರಿ ಅಂತ
ಕೆಂಪುಕಣ್ಣು ಬೀರಿದ್ದೇನೆ
ಉಣ್ಣೋ ಮುದ್ದೆ, ಉಡೋ ಬಟ್ಟೆಗೆಲ್ಲಾ ಖಂಡಿಸಿ, ಕಾಡಿಸಿ ಪೀಡಿಸಿ ಅಳಿಸಿದ್ದೇನೆ
ಅಪ್ಪನಿಗೆ ಕಾಣದೇ ತೆಗೆದಿರಿಸಿದ ಸಾಂಸಾರಿಕ ಚಿಲ್ಲರೆಗಳಿಗೆ
ಕಣ್ಣು ಮತ್ತು ಕೈ ಹಾಕಿದ್ದ ತಪ್ಪಿಗೆ
ಖುದಾ ಏನೂ ಮಾಡಲಾರ, ಅಮ್ಮನ ಕಾಲೇ ಸ್ವರ್ಗ
ಈಗೀಗ ಅವುಗಳೀಗೇ ನಮಸ್ಕಾರ ಹಾಕಿ ತಲೆ ಬಾಗುತ್ತಿದ್ದೇನೆ!

ಎದೆಯುಬ್ಬಿಸಿ ನಡೆ ಎಂದಾಗೆಲ್ಲಾ ಮುಖ ತಿರುಗಿಸಿದ್ದೆ
ನಾಲ್ಕು ಜನರಿಗೆ ನೆರಳಾಗು ಎಂದಾಗಲೂ ಆಕಾಶ ನೋಡಿದ್ದೆ
ಬಂದವಳನ್ನು ಬಾಳಿಸೆಂದ ಚಣವೂ ಮುನಿಸೆ
ಅಮ್ಮನ ಕಣ್ಣೀರ
ನನ್ನ ಕೆನ್ನೆಗಿಳಿಸಿಕೊಂಡದ್ದು ಕಡಿಮೆ; ದೇವರುಗಳು ಅವರ ಪಾಡಿಗಿರಲಿ
ಅಮ್ಮ ಅಂದರೆ ಸದರ(ವೇ?)
ಬಿಡದೇ ದಿನವೂ
ನಮಸ್ಕಾರ ಹಾಕುತ್ತಿದ್ದೇನೆ !

ಮೂಲೆ ಹಿಡಿದ ಅಮ್ಮನ ಹಿಡಿದಾಡಿ, ನಡೆದಾಡಿಸಿ
ನಾನು ಅಮ್ಮನಾಗಿದ್ದೇನೆ
ಅವಳು ಮಗುವಾಗಿದ್ದಾಳೆ
ಕಹಿ ಕಷಾಯ ಸಿಹಿಯೆಂದು ನಾ ಹನಿ ಕುಡಿದೇ ಅವಳಿಗೆ ಕುಡಿಸುವಾಗೆಲ್ಲಾ
ಮೈ ಮುಖ ಹಿಂಡಿ ಹಿಪ್ಪೆಯಾಗಿಸಿಕೊಂಡ ಅಮ್ಮನೆದುರು
ನಾನು ಅಪರಾಧಿ, ಅಲ್ಲಾ ಮಾಫ್ ಮಾಡಲಿ ನನ್ನ
ಸದಾ ಅಮ್ಮನ ಕಾಲ್ಮುಟ್ಟಿ ನಮಸ್ಕರಿಸುತ್ತೇನೆ!

ಬಾಬ ಹೋದರು......ಅಮ್ಮ ಅಕ್ಷರಶಃ ಒಂಟಿ
ಕಣ್ಣೀರೆ ಸಹವಾಸ, ದಿನಗಳ ಲೆಕ್ಕ ತಸ್ಬಿಯ ಮಣಿಗಳೆಣಿಕೆ
ಅನ್ನ-ನೀರು-ಔಷಧ ಗದರಿಸಿ ನೀಡಿದರೂ ಭಯದಿ
ಸೇವನೆ ಅಷ್ಟೆ; ನಾನೆಷ್ಟು ಕ್ರೂರಿ?!

ಅಮ್ಮನ ಬಿದ್ದ ಕೈಕಾಲು ನೀವುವಾಗೆಲ್ಲಾ ಸೋತ
ಬದುಕಿನ ಪುಟಗಳೇ ಕಣ್ಮುಂದೆ;
ಮಸೀದಿಯಲ್ಲಿ ನಾನೆಷ್ಟು ಬಾಗಿದರೇನು
ಅವಳ ಮುಖದಿ ಒಂದು ನಗು ತರಿಸುವುದು ದುಬಾರಿ ಸೈ!

ಎಷ್ಟೊಂದು ಮಾತುಗಳು ಅಮ್ಮನ ಕೊರಳಲ್ಲಿ
ಇಂಗಿದ್ದು, ಆಡಲು ಹೋಗಿ ತಡವರಿಸಿದ್ದು ಮತ್ತು
ಆಡದೇ ಎದೆಯಲ್ಲಿಯೇ ಸಮಾಧಿಯಾಗಿದ್ದು.....
ಐದು ಹೊತ್ತೂ ಅಲ್ಲಾ ಹು ಅಕ್ಬರ್ ದನಿಯಿದೆ
ಅಮ್ಮ ಈಗಿಲ್ಲ ಅಂತ ಹೇಗೆ ಹೇಳಲಿ?

ಕಂಪ್ಯೂಟರ್ ಪರದೆಯ ಮೇಲೆ ಇದೋ ಅಮ್ಮ ಮೌನವಾಗಿ ನಗುತ್ತಿದ್ದಾಳೆ ಪಟವಾಗಿ
ದಿನವೂ ಕಾಲ್ಮುಟ್ಟಿ ನಮಸ್ಕರಿಸುತ್ತೇನೆ
ತಪ್ಪು ಹೆಜ್ಜೆಗಳೇ ಕಾಡುತ್ತವೆ, ಕೊರೆಯುತ್ತವೆ
ಮತ್ತು ಇದ್ದೂ ಸತ್ತಂತೆ ಭಾಸವಾಗುತ್ತವೆ
ಅಮ್ಮನ ಕಾಲುಗಳೇ ನನ್ನ ಪಾಲಿನ ಹಜ್ ಯಾತ್ರೆಯ
ರಹದಾರಿಯಾಗಿ ಕಾಣುತ್ತವೆ........ಅಲ್ಲಾ-ಅಮ್ಮ- ಮತ್ತು ನಾನು ನಾಳೆಗಳಿಗೂ ಪ್ರಶ್ನೆಯಾಗಿ ಬೆನ್ನು ಹತ್ತುತ್ತೇವೆ!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು