ಮಂಗಳವಾರ, ಮೇ 17, 2022
26 °C

ಕವಿತೆ: ನನ್ನ ತಪ್ಪೇ?

ಎಂ.ವಿ. ಶಶಿಭೂಷಣ ರಾಜು Updated:

ಅಕ್ಷರ ಗಾತ್ರ : | |

Prajavani

ಆಕಾಶದುದ್ದದ, ಆದಿಶೇಷನ ಕಾಲದ
ಯದಾರ್ಥವೆಂದ, ಇದೊಂದೇ ನಿಜವೆಂದ
ಕ್ಷೀರಸಾಗರದ ಆಪೋಶನದಿ ಬೆಳೆದ
ಮರಗಳಿಗೆ, ನಾ ನೇಣಿಕ್ಕಿಕೊಂಡಿದ್ದು
ನನ್ನ ತಪ್ಪೇ

ಉದಾತ್ತವಾದ ಭಾವದೊಳು, ಹುಳುಕುಸೇರಿದ ಬಗೆ
ತಾದಾತ್ಮ್ಯ ತುಂಬಿದ ಮನಸಿನಲಿ, ಕೊಳಕುತುಂಬಿದ ಬಗೆ
ಗಂಗಾಜಲ ಕಲ್ಮಶವಾದ ಬಗೆ
ಸರಳವಾದ ರೇಖೆ ಸಂಕೀರ್ಣವಾದ ಬಗೆ
ವಿವರಿಸ ಹೊರಟಿದ್ದು
ನನ್ನ ತಪ್ಪೇ

ಎಲ್ಲಾ ನಡೆದ ದಾರಿಯಲಿ ನಡೆದು ಸವಿದ ಕಾಲುಗಳ ನೋಡಿ
ಅವೇ ಮಂತ್ರಗಳ ಪದೇ ಪದೇ ಕೇಳಿದ ಕಿವಿಗಳ ನೋಡಿ
ಹೊಸದೇನೂ ಸ್ಪುರಿಸದ ಮನಸುಗಳ ನೋಡಿ
ಸಂತರ ಮೌನವ ನೋಡಿ
ಹೊಸದಾರಿ ಹಿಡಿಯಹೊರಟಿದ್ದು
ನನ್ನ ತಪ್ಪೇ

ಜಗದ ಮನೆಗಳಲಿ ಗೋಡೆಗಳೆದ್ದು
ಜೊತೆಯಾದ ಮನಸುಗಳು ಒಡೆದು
ಶಕ್ತಿಹೀನರ ಎದೆಯನು ತುಳಿದು
ಒಂದೇ ರಾಗವ ತಳೆದು ಬೆಳೆದ
ಪರಿಯನು ನೋಡಿ ಕಣ್ಣೀರಿಟ್ಟಿದ್ದು
ನನ್ನ ತಪ್ಪೇ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.