ಬುಧವಾರ, ಮೇ 12, 2021
19 °C

ಕವಿತೆ: ಒಂದು ಅಳುವಿನ ಕತೆ

ಬಿ.ಆರ್.ಲಕ್ಷ್ಮಣರಾವ್ Updated:

ಅಕ್ಷರ ಗಾತ್ರ : | |

Prajavani

ಒಂದು ಊರಲ್ಲೊಬ್ಬ ರಾಜ,
ಅವನಿಗೊಬ್ಬ ಮಗಳು.
ಅವಳು ಒಂದು ದಿನ ಯಾಕೋ
ಅಳತೊಡಗಿದಳು.

ರಾಜಕುವರಿಗೇನು ಕಡಿಮೆ?
ಆದರೂ ಯಾಕಂತೆ
ಇಂಥ ರಚ್ಚೆ ಹಿಡಿದ ಅಳು,
ಜಡಿಮಳೆಯಂತೆ?

ಹಸಿವೇ? ಹೊಟ್ಟೇನೋವೇ?
ಜ್ವರದ ತಾಪವೇ?
ಯಾರಾದರೂ ಬೈದರೇ?
ಅದಕ್ಕೆ ಕೋಪವೇ?

ವೈದ್ಯರು ಪರೀಕ್ಷಿಸಿದರು,
ತಿಳಿಯಲಿಲ್ಲ ಕಾರಣ.
ಯಾರೇನೇ ಮಾಡಿದರೂ
ಇಲ್ಲ ಉಪಶಮನ.

ಊಟವಿಲ್ಲ, ನಿದ್ದೆಯಿಲ್ಲ,
ಒಂದೇ ಸಮ ಅಳು.
ರಾಜ, ರಾಣಿ, ಊರ ಜನ
ಕಂಗಾಲಾದರು.

ಎಲ್ಲ ದೇವಾಲಯಗಳಲ್ಲೂ
ಪೂಜೆ, ಪ್ರಾರ್ಥನೆ :
"ಈ ಅಳು ನಿಲ್ಲಿಸು, ಎಳೆ ಜೀವವ
ಉಳಿಸು, ದೇವನೇ!"

ಕೊನೆಗಲ್ಲಿಗೆ ಬಂದನೊಬ್ಬ
ಜೋಲುಮೋರೆ ಬಾಲಕ,
ಅಳುವನರಸಿ ಬಂದ ಹಾಗೆ
ಅಳುವಿನೊಂದು ರೂಪಕ.

ಅಳುವ ಬಾಲೆಯೆದುರು ನಿಂತು
ತಾನೂ ಅಳತೊಡಗಿದ.
ಅಳು ಅಳುವಿನ ನಡುವೆ ಹೀಗೆ
ತೊಡಗಿತೊಂದು ಯುದ್ಧ.

ಅವನ ಅಂತರಾಳದಿಂದ
ಧುಮ್ಮಿಕ್ಕಿತು ದುಃಖ,
ಅಸಹಾಯಕ ಹಸಿವು, ನೋವು,
ಅವಮಾನದ ಸಹಿತ.

ಭೋರ್ಗರೆಯುವ ಕಡಲಿನಂಥ
ಆ ಮಹಾ ಅಳು
ಕಂಡು ಬಾಲೆ ಬೆಕ್ಕಸ
ಬೆರಗಾಗಿ ನಿಂತಳು.

ನಿಂತುಹೋಯಿತವಳ ಅಳು
ಅವನಳುವಿಗೆ ಸೋತು.
ನೇವರಿಸಿದಳವನ ಬೆನ್ನ
ಅವನ ಮುಂದೆ ಕೂತು.

ತನ್ನ ಮಡಿಲೊಳಿಟ್ಟು ಅವನ
ತಲೆ ತಟ್ಟಿದಳು.
ಉಬ್ಬರವಿಳಿಯಿತು ನಿಧಾನ
ಶಾಂತವಾಯ್ತು ಕಡಲು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.