ಭಾನುವಾರ, ಏಪ್ರಿಲ್ 11, 2021
25 °C

ಅದೃಷ್ಟವಂತ ನಾಗೇಂದ್ರ

ಬಿ.ಎಸ್. ಮುಳ್ಳೂರ Updated:

ಅಕ್ಷರ ಗಾತ್ರ : | |

Prajavani

ಒಂದು ಊರಿನಲ್ಲಿ ನಾಗೇಂದ್ರ ಎಂಬ ವ್ಯಕ್ತಿ ಇದ್ದ. ಅವನು ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದ. ಅವನ ದೃಷ್ಟಿ ತುಸು ಮಂದವಾಗಿತ್ತು. ಹಗಲಿನ ಹೊತ್ತಿನಲ್ಲಿ ಅವನಿಗೆ ದೃಷ್ಟಿ ಸರಿಯಾಗಿ ಕಾಣುತ್ತಿತ್ತು. ಆದರೆ ರಾತ್ರಿ ಮಾತ್ರ ದೃಶ್ಯಗಳು ಸ್ವಲ್ಪ ಮಬ್ಬಾಗಿ ಕಾಣುತ್ತಿದ್ದವು.

ಒಂದು ದಿನ ಅವನು ವ್ಯಾಪಾರಕ್ಕಾಗಿ ದೂರದ ಊರಿಗೆ ಹೋಗಬೇಕಿತ್ತು. ಅವನ ಬಳಿ ಒಂದು ಕುದುರೆ ಇತ್ತು. ಅದರ ಮೇಲೆ ಕುಳಿತು ಅವನು ವ್ಯಾಪಾರಕ್ಕೆ ಪ್ರಯಾಣ ಹೊರಟನು. ಬಹುದೂರ ಪ್ರಯಾಣ ಮಾಡಿದ. ಅಷ್ಟು ಹೊತ್ತಿನಲ್ಲಿ ಸಂಜೆಯಾಯಿತು. ಸಂಜೆಯಾಗುತ್ತಿದ್ದಂತೆ ನಾಗೇಂದ್ರನಿಗೆ ಕಣ್ಣು ಮಬ್ಬಾಗುತ್ತಿದ್ದುದರಿಂದ ಪ್ರಯಾಣ ಮುಂದೆ ಬೆಳೆಸಲು ತೊಂದರೆಯಾಯಿತು. ಸನಿಹದಲ್ಲೇ ಒಂದು ಹಳ್ಳಿ ಕಂಡಿತು. ಅಲ್ಲಿ ಒಬ್ಬಳು ಅಜ್ಜಿಯ ಮನೆಯ ಹತ್ತಿರ ಕುದುರೆಯಿಂದ ಇಳಿದು ಅಜ್ಜಿಗೆ ತನ್ನ ತೊಂದರೆ ಹೇಳಿಕೊಂಡ. ಒಂದು ರಾತ್ರಿಯನ್ನು ಅವಳ ಮನೆಯಲ್ಲಿ ಕಳೆಯಲು ಅನುಮತಿ ಕೇಳಿದ.

ನಾಗೇಂದ್ರನಿಗೆ ಆ ರಾತ್ರಿ ಅಲ್ಲಿ ಉಳಿದುಕೊಳ್ಳಲು ಅಜ್ಜಿ ಒಪ್ಪಿಕೊಂಡಳು. ಅವನು ಕುದುರೆಯನ್ನು ಹೊರಗೆ ಒಂದು ಗೂಟಕ್ಕೆ ಕಟ್ಟಿ ತಾನು ಒಳಗೆ ಮಲಗಿದ. ರಾತ್ರಿ ನಾಗೇಂದ್ರನಿಗೆ ಎಚ್ಚರವಾಯಿತು. ಹೊರಗೆ ಬಂದು ನೋಡಿದರೆ ಕುದುರೆ ಕಾಣಲಿಲ್ಲ. ಬೆಳದಿಂಗಳು ಇದ್ದುದ್ದರಿಂದ ಕುದುರೆಯನ್ನು ಹುಡುಕುತ್ತ ಹೋದ. ಅಲ್ಲಿ ಒಂದು ಪೊದೆಯ ಮರೆಯಲ್ಲಿ ನಿಂತಿದ್ದ ಹುಲಿಯನ್ನೇ ಕುದುರೆಯೆಂದು ಭಾವಿಸಿ, ಅದನ್ನು ಎಳೆದು ತಂದು ಅಜ್ಜಿ ಮನೆಯ ಮುಂದಿನ ಗೂಟಕ್ಕೆ ಕಟ್ಟಿ ಹಾಕಿದ!

ಬೆಳಗಾಗುವ ಹೊತ್ತಿಗೆ ಹೊರಗೆ ಸಾಕಷ್ಟು ಜನ ಸೇರಿದ್ದರು. ನಾಗೇಂದ್ರನು ಹುಲಿಯನ್ನು ಹಿಡಿದು ತಂದಿದ್ದನ್ನು ಕೇಳಿದ ಅಲ್ಲಿನ ರಾಜ ಈತನನ್ನು ತನ್ನಲ್ಲಿಗೆ ಕರೆಸಿದ. ‘ಹುಲಿ ತಂದವನು ನೀನೇ ಏನು’ ಎಂದು ಪ್ರಶ್ನಿಸಿದ ರಾಜ. ಆಗ ನಾಗೇಂದ್ರನು, ‘ನಾನೊಬ್ಬ ವ್ಯಾಪಾರಿ. ನನ್ನ ಕುದುರೆ ಕಳೆದುಹೋಗಿತ್ತು. ಹುಡುಕುತ್ತ ಹೋಗಿ ಕುದುರೆ ಎಂದು ತಿಳಿದು ಹುಲಿಯನ್ನು ಎಳೆದು ತಂದೆ’ ಎಂದು ಹೇಳಿದ.

ಆಗ ರಾಜನು ‘ನಿನ್ನಂತಹ ಶೂರ ನಮಗೆ ಬೇಕು’ ಎಂದು ಹೇಳಿ ನಾಗೇಂದ್ರನನ್ನು ತನ್ನ ರಾಜ್ಯದ ಸೇನಾಧಿಕಾರಿಯನ್ನಾಗಿ ನೇಮಿಸಿದ. ಕೆಲವೇ ದಿನಗಳಲ್ಲಿ ಈ ರಾಜನಿಗೂ ಪಕ್ಕದ ರಾಜ್ಯದ ರಾಜನಿಗೂ ಕದನ ಘೋಷಣೆಯಾಯಿತು. ಆಗ ರಾಜನು ನಾಗೇಂದ್ರನಿಗೆ ಎರಡು ಖಡ್ಗಗಳನ್ನು ಕೊಟ್ಟ. ಒಂದೊಂದು ಕೈಗೆ ಒಂದೊಂದು ಖಡ್ಗ. ನಾಗೇಂದ್ರ ಹೋಗಿ, ಮುಂಚೂಣಿಯಲ್ಲಿ ನಿಂತು ಯುದ್ಧ ಮಾಡಬೇಕಿತ್ತು.

ನಾಗೇಂದ್ರನು ಕುದುರೆಯ ಮೇಲೆ ಕುಳಿತ. ಕುದುರೆ ಓಡತೊಡಗಿತು. ನಾಗೇಂದ್ರನಿಗೆ ಮನದಲ್ಲಿ ಭಯವಾಗಿ ಯುದ್ಧದಿಂದ ಪಾರಾಗುವ ಉಪಾಯ ಮಾಡಿದ. ಕುದುರೆ ಓಡುವಾಗ ಮರದ ಕೊಂಬೆಯನ್ನು ಹಿಡಿದರೆ ಪಾರಾಗಬಹುದು ಎಂದು ಆತ ಆಲೋಚಿಸಿದ. ಕುದುರೆ ಓಡುತ್ತಿದ್ದಾಗ ಎದುರಿಗೆ ಒಂದು ಮರ ಕಾಣಿಸಿತು. ಅದು ಸಮೀಪ ಬಂದಾಗ, ಎರಡೂ ಕೈಗಳಲ್ಲಿ ಖಡ್ಗ ಹಿಡಿದುಕೊಂಡೇ ಆ ಮರದ ಟೊಂಗೆಯನ್ನೂ ಹಿಡಿದನು. ಆಗ ಟೊಂಗೆ ಮುರಿದು ಅವನ ಹೆಗಲಿಗೇರಿತು.

ಎರಡೂ ಕೈಯಲ್ಲಿ ಖಡ್ಗ ಹಾಗೂ ಹೆಗಲ ಮೇಲಿರುವ ಮರದ ದಿಮ್ಮಿಯನ್ನು ನೋಡಿದ ಶತ್ರುಗಳು ಭಯಭೀತರಾಗಿ ನಾಗೇಂದ್ರನ ಎದುರು ಶರಣಾಗತರಾದರು. ನಾಗೇಂದ್ರನಿಗೆ ಸುಲಭವಾಗಿ ವಿಜಯ ಮಾಲೆ ಸಿಕ್ಕಿತು. ಈ ಸುದ್ದಿ ಕೇಳಿದ ರಾಜ ಖುಷಿಯಾಗಿ ತನಗೆ ವಿಜಯ ದೊರಕಿಸಿ ಕೊಟ್ಟ ನಾಗೇಂದ್ರನಿಗೆ ಸತ್ಕರಿಸಿ ತನ್ನ ಮಗಳನ್ನು ಅವನಿಗೆ ಮದುವೆ ಮಾಡಿಕೊಟ್ಟ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.