ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬಕ್ಕಿರಲಿ ಧೋತಿ ಸ್ಕರ್ಟ್‌

Last Updated 30 ಅಕ್ಟೋಬರ್ 2018, 18:21 IST
ಅಕ್ಷರ ಗಾತ್ರ

ಕಚ್ಚೆಯಂತೆ ಸೀರೆ ಉಡುವ ಆಸೆಯನ್ನು ತಣಿಸಿದ್ದು ರೆಡಿಮೇಡ್‌ ಕಚ್ಚೆ ಸೀರೆ. ದಶಕಗಳ ಹಿಂದೆ ಹರೆಯದ ಹೆಣ್ಣುಮಕ್ಕಳ ಮೆಚ್ಚಿನ ಆಯ್ಕೆಯಾಗಿದ್ದ ಧೋತಿ ಪ್ಯಾಂಟೂ ಮತ್ತೆ ಬಂತು. ಈ ಸರಣಿಯಲ್ಲಿ ಈಗ ಟ್ರೆಂಡ್‌ ಬರೆಯುತ್ತಿರುವುದು ಧೋತಿ ಸ್ಕರ್ಟ್‌.

ಸ್ಕರ್ಟ್‌ ಅಂದಾಕ್ಷಣ ಮಂಡಿಯಿಂದ ಮೇಲಕ್ಕೋ, ಮಂಡಿವರೆಗೋ ಇರುತ್ತದೆ ಎಂಬ ಜಮಾನ ಅಲ್ಲ ಇದು. ನೆಲವನ್ನೆಲ್ಲಾ ಗುಡಿಸಿ ಸಾರಿಸುವಂತಹ ‘ಫ್ಲೋರ್‌ ಲೆಂಗ್ತ್‌’ನಲ್ಲಿಯೂ ಸ್ಕರ್ಟ್‌ಗಳು ಬಂದಿವೆ. ಆದರೆ ಈ ಧೋತಿ ಸ್ಕರ್ಟ್‌ ಕಾಲಿನ ಮಣಿಕಟ್ಟಿನಿಂದ ಸ್ವಲ್ಪ ಮೇಲಕ್ಕೆ ನಿಲ್ಲುವಂತಿರುತ್ತವೆ. ಮಂಡಿವರೆಗಿನ ಸ್ಕರ್ಟ್‌ಗಳು ಇಲ್ಲವೆಂದಲ್ಲ. ಪದರ ಪದರವಾದ ನೆರಿಗೆಗಳಿಂದಾಗಿ ಈ ಉಡುಪು ಧೋತಿ, ಪ್ಯಾಂಟು ಮತ್ತು ಧೋತಿ ಸೀರೆಯಂತೆಯೇ ಕಾಣುತ್ತದೆ.

ಒಂದೂವರೆ ದಶಕದ ಹಿಂದೆ ಕಚ್ಚೆ ಪ್ಯಾಂಟು ಅಥವಾ ಧೋತಿ ಪ್ಯಾಂಟ್‌ ಕಾಲೇಜು ಕ್ಯಾಂಪಸ್‌ಗಳಲ್ಲಿ ತರುಣಿಯರ ಫ್ಯಾಷನ್‌ಪ್ರಜ್ಞೆಗೆ ಕನ್ನಡಿ ಹಿಡಿಯುತ್ತಿದ್ದವು. ಪುರುಷರ ಉಡುಪು ಆಗಿದ್ದಧೋತಿ ಅಥವಾ ಕಚ್ಚೆ, ಹೆಣ್ಣುಮಕ್ಕಳ ಉಡುಪು ಆಗಿ ವಾರ್ಡ್‌ರೋಬ್‌ ತುಂಬಿದ ದಿನಗಳವು. ಆದರೆ ‘ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲು ನಾಳೆಯು ಚಿಂತೆ ಏತಕೆ’ ಎಂಬ ಹಾಡಿನಂತೆಫ್ಯಾಷನ್ ಲೋಕದ ಟ್ರೆಂಡ್‌ಗಳು ಹೊಸತನಕ್ಕೆ ಸದಾ ತೆರೆದುಕೊಳ್ಳುತ್ತಲೇ ಇರುತ್ತವೆ. ಹಾಗಾಗಿ ಧೋತಿ ಪ್ಯಾಂಟ್‌ ಜಾಗವನ್ನು ಪಂಜಾಬಿ ಶೈಲಿಯ ಸ್ಟ್ರೇಟ್‌ ಕಟ್‌ ದೊಗಳೆ ಪ್ಯಾಂಟ್‌ ಆಕ್ರಮಿಸಿಕೊಂಡಿತ್ತು.

ಧೋತಿ ಪ್ಯಾಂಟ್‌ ಎರಡೂ ಕಾಲುಗಳನ್ನು ಪ್ರತ್ಯೇಕಿಸುವಂತಿರುತ್ತದೆ. ಧೋತಿ ಸ್ಕರ್ಟ್‌ ಮಾಮೂಲಿ ಸ್ಕರ್ಟ್‌ಗಳ ಪ್ರತಿರೂಪ. ಆದರೆ ಕಚ್ಚೆಯಂತಹ ವಿನ್ಯಾಸದಿಂದಾಗಿ ಟ್ರೆಂಡಿ ಅನಿಸುತ್ತದೆ ಅಷ್ಟೇ. ಸೊಂಟದ ವಿನ್ಯಾಸ ಮತ್ತು ನೆರಿಗೆಗಳ ಶೈಲಿಯೇ ಪ್ರತಿ ಸ್ಕರ್ಟ್‌ಗೆ ವಿಭಿನ್ನ ನೋಟ ನೀಡುವುದು. ಸೊಂಟವು ಸರಳವಾದ ಪಟ್ಟಿಯಿಂದ ಕೂಡಿರಬಹುದು. ಕಸೂತಿ ಹಾಕಿದರೆ ಅಥವಾ ರೇಷ್ಮೆ/ಜರಿಯ ಪಟ್ಟಿ ಹೊಲಿದರೆ ಡಾಬು ಧರಿಸಿದಂತೆ ಕಾಣುತ್ತದೆ. ಸಮಾರಂಭಗಳಿಗೆ ಹೋಗುವಾಗ ಇಂತಹ ವಿನ್ಯಾಸವಿರುವ ಧೋತಿ ಸ್ಕರ್ಟ್‌ ಮೇಲೆ ವಿರುದ್ಧ ಬಣ್ಣದ ಅಥವಾ ಸ್ಕರ್ಟ್‌ಗೆ ಹೊಂದುವ ಯಾವುದೇ ಬಣ್ಣದ ಕುರ್ತಾ ಇಲ್ಲವೇ ಮೇಲಂಗಿ ಧರಿಸಿದರೆ ಎಥ್ನಿಕ್‌ ಲುಕ್‌ ನೀಡುತ್ತದೆ. ಕಸೂತಿ/ಪಟ್ಟಿಯದ್ದೇ ಬಣ್ಣದ ರೇಷ್ಮೆ ಟಾಪ್‌ ಕೂಡಾ ವಿಭಿನ್ನ ನೋಟ ನೀಡುತ್ತದೆ. ಸಂದರ್ಭಕ್ಕೆ ತಕ್ಕುದಾಗಿ ಟಾಪ್‌ ಅಥವಾ ಮೇಲುಡುಗೆ ಮತ್ತು ಒಡವೆಗಳನ್ನು ಆಯ್ಕೆ ಮಾಡಿಕೊಂಡರೆಧೋತಿ ಸ್ಕರ್ಟ್‌ ಧರಿಸಿರುವ ನೀವು ಗುಂಪಿನಲ್ಲೆದ್ದು ಕಾಣುವುದು ಖಚಿತ.

ಹಾಟ್‌ ಬೆಡಗಿಯಂತೆ ಕಾಣಿಸಿಕೊಳ್ಳುವ ಇರಾದೆ ಇದ್ದರೆಈ ಸ್ಕರ್ಟ್‌ ಮೇಲೆ ಸೀರೆ ಅಥವಾ ಲೆಹೆಂಗಾದ ಜಾಕೆಟ್‌ನಂತಹ ಚೋಲಿ ಆರಿಸಿಕೊಳ್ಳಬಹುದು. ಭರ್ಜರಿ ಕಸೂತಿ ಇರುವ, ಸ್ಕರ್ಟ್‌ನ ಸೊಂಟದ ಪಟ್ಟಿಯನ್ನು ಮರೆಮಾಚುವ ತುಂಬು ತೋಳಿನ ಜಾಕೆಟ್‌ ಧರಿಸಿದರೆ ಯಾವುದೋ ರೂಪದರ್ಶಿಯ ನೋಟ ನಿಮ್ಮದಾಗುತ್ತದೆ. ಅಸಿಮೆಟ್ರಿಕ್‌ ಶೈಲಿಯ ಟಾಪ್‌ ಧರಿಸಿದರೆ ಅದರ ಮೇಲೆ ಸೊಂಟಕ್ಕೆ ಅಗಲವಾದ ಬೆಲ್ಟ್‌ ಇರಬೇಕು. ಸ್ಕರ್ಟ್‌ ಮಂಡಿವರೆಗೆ ಇದ್ದರೆ ಬಿಗಿಯಾದ ಟೀ ಶರ್ಟು, ಟಾಪ್‌ ಒಪ್ಪುತ್ತದೆ.

ಕಿವಿಗೆ ನೇತಾಡುವ ಓಲೆ ಇಲ್ಲವೇ ದೊಡ್ಡ ಜುಮುಕಿ ಆಯ್ದುಕೊಳ್ಳಿ. ಆದರೆ ಕತ್ತಿಗೆಅಗಲವಾದ ಅಥವಾ ಪದರ ಪದರದ ನೆಕ್‌ಲೇಸ್‌ (ಚೋಕರ್‌ನಂತಹುದು) ಧರಿಸುವುದು ಸೂಕ್ತ. ಈ ಉಡುಗೆಗೆ ಚಪ್ಪಟೆ ಚಪ್ಪಲಿ, ಪಠಾಣ್‌ ಚಪ್ಪಲಿ/ಶೂ, ಎತ್ತರದ ಹಿಮ್ಮಡಿಯ ಚಪ್ಪಲಿಗಳೂ ಹೊಂದುತ್ತವೆ.

voonik.com, www.craftsvilla.com, amazon.comನಲ್ಲಿ ಧೋತಿ ಸ್ಕರ್ಟ್‌ನ ನೂರಾರು ಆಯ್ಕೆಗಳು ಸಿಗುತ್ತವೆ. ಒಂದು ವೇಳೆ, ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಗೊಂದಲವಿದ್ದರೆ ಪಿಂಟರೆಸ್ಟ್‌ನಲ್ಲಿ ನಿಮ್ಮ ಪ್ರಶ್ನೆಯನ್ನು ಹಂಚಿಕೊಳ್ಳಿ. ಯಾವ ಸಂದರ್ಭಕ್ಕೆ ಯಾವ ಬಗೆಯಲ್ಲಿ ಧೋತಿ ಸ್ಕರ್ಟ್‌, ಕುರ್ತಾ ಮತ್ತು ಒಡವೆಗಳನ್ನು ಹೊಂದಿಸಿ ಕೊಳ್ಳಬೇಕು, ಯಾವ ಬಣ್ಣ ಸೂಕ್ತ ಎಂಬಿತ್ಯಾದಿ ಮಾಹಿತಿಗಳ ಕಂತೆಯೇ ಸಿಗುತ್ತದೆ.

ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸುವುದು ಇದ್ದೇ ಇದೆ. ಹಬ್ಬದ ಬೆನ್ನಲ್ಲೇ ಮದುವೆ ಸಮಾರಂಭಗಳೂ ಸಾಕಷ್ಟಿವೆ. ಹಬ್ಬದ ನೆಪದಲ್ಲಿ ಖರೀದಿಸಿದ ಈ ಟ್ರೆಂಡಿ ಉಡು‍ಗೆ ತೊಡುಗೆ ಸಮಾರಂಭದಲ್ಲಿ ಎಲ್ಲರ ನೋಟ ನಿಮ್ಮ ಮೇಲಿರುವಂತೆ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT