ಶನಿವಾರ, ಅಕ್ಟೋಬರ್ 1, 2022
20 °C

ವಿಶ್ವನಾಥ್‌ ಎನ್‌. ನೇರಳಕಟ್ಟೆ ಅವರು ಬರೆದ ಕಥೆ: ಅಂಬುರುಹ ದಳನೇತ್ರೆ

ವಿಶ್ವನಾಥ ಎನ್. ನೇರಳಕಟ್ಟೆ Updated:

ಅಕ್ಷರ ಗಾತ್ರ : | |

Prajavani

‘ಅಂಬುರುಹ ದಳನೇತ್ರೆ ಶ್ರೀ ದುರ್ಗಾಂಬಿಕೆಯ ಬಲಗೊಂಡು ಭಕ್ತಿಯೊಳು......’ ಭಾಗವತರ ಏರುಧ್ವನಿ ಕಿವಿಯೊಳಗನ್ನು ಹೊಕ್ಕ ಕೂಡಲೇ ಸಂಕಪ್ಪನಿಗೆ ಚೇಳು ಕುಟುಕಿದಂತಹ ಗಾಢಾನುಭವವಾಯಿತು. ‘ಇವತ್ತು ಮದ್ಲೆಪುರಕ್ಕೆ ಹೋಗಿ ಸಂಧಾನ ಸಾಧ್ಯವಾಗಿಸಿ ಬರೋಣ ಎಂದದ್ದಕ್ಕೆ ಒಪ್ಪಲೇ ಇಲ್ಲ ಫಟಿಂಗ. ಯಾವತ್ತಿಗಿಂತ ಬೇಗವೇ ಧಣಿಗಳ ಮನೆಯ ಕೆಲಸ ಮುಗಿಸಿ, ಮನೆಗೆ ಬಂದು, ಸ್ನಾನ ಮುಗಿಸಿ, ಆಟದಲ್ಲಿ ವೇಷ ಹಾಕಲು ಚೌಕಿಯಲ್ಲಿ ಹೋಗಿ ಕುಳಿತಿದ್ದಾನೆ. ಅಕ್ಕನ ಬದುಕು ಹಾಳಾದರೂ ಚಿಂತೆಯಿಲ್ಲ. ಆಟವೇ ಹೆಚ್ಚು ಇವನಿಗೆ. ಬಾಯಿ ಸೊಟ್ಟಗು ಮಾಡಿಕೊಂಡು ರಂಗ ಹೊಕ್ಕುವುದನ್ನೇ ಕಾಯುತ್ತಿರುತ್ತಾನೆ ಮುಟ್ಠಾಳ. ರಂಗಪೂರ್ತಿ ತುಂಬಿರುವ ಆರೂ ಮುಕ್ಕಾಲು ಜನರ ಜೊತೆಗೆ ಅಕ್ಷಯಾಂಬರ ಯಕ್ಷಗಾನ ಪ್ರಸಂಗದ ಧರ್ಮರಾಯನೆಂದು ಹೆಸರು ಹೊತ್ತು ಹತ್ತರ ಜೊತೆಗೆ ಹನ್ನೊಂದಾಗಿ ಕುಳಿತುಕೊಳ್ಳುವುದಕ್ಕೆ ಅದೇನು ಆಸಕ್ತಿಯೋ ಏನೋ ಇವನಿಗೆ!’ ಹೀಗೆ ಮನಸ್ಸಿನಲ್ಲೇ ಮಗ ಸುಂದರನನ್ನು ಬೈದುಕೊಳ್ಳುತ್ತಿದ್ದ ಸಂಕಪ್ಪನಿಗೆ ಮನೆಯ ಎಡ ಮಗ್ಗುಲಿಗೆ ಇರುವ ಹಟ್ಟಿಯಿಂದ ದನದ ಕೂಗು ಕೇಳಿಸಿತು. ಮಗನನ್ನು ಬೈದುಕೊಳ್ಳುತ್ತಲೇ ಹಟ್ಟಿಯಾಚೆಗೆ ನಡೆದ.

‘ಸಾವಿರ ಮಂದಿಯ ಮುಂದೆ ನನಗಾದ ಅಪಮಾನ ಅದು ಸಾವಿಗೆ ಸಮಾನ......’ ಒರಟಾದ ಧ್ವನಿ ಕೇಳಿಸಿದ ತಕ್ಷಣವೇ, ಹುಲ್ಲಿನ ಕಂತೆಯಿಂದ ಇಷ್ಟಿಷ್ಟೇ ಹುಲ್ಲನ್ನು ಹಂಚಿ ಹಂಚಿ ಹಟ್ಟಿಯಲ್ಲಿದ್ದ ದನಗಳಿಗೆ ಹಾಕುತ್ತಿದ್ದ ಸಂಕಪ್ಪನಿಗೆ ಸ್ಪಷ್ಟವಾಯಿತು- ‘ದುರ್ಯೋಧನನ ಪಾತ್ರ ಪ್ರವೇಶ ಆಗಿದೆ!’

*****
‘ಅದೆಷ್ಟು ಸಭ್ಯನಂತೆ ನಟಿಸುತ್ತಾ ಅಂದು ಅಕ್ಕನನ್ನು ನೋಡುವುದಕ್ಕೆ ಬಂದಿದ್ದ ಆ ಮೂರ್ಖ! ಧರ್ಮರಾಯನ ಮುಖವಾಡ ಹೊತ್ತ ದುರ್ಯೋಧನ! ಭಾವ ಎಂದು ಕರೆಯಲೂ ಅಸಹ್ಯವಾಗುತ್ತದೆ ಆ ನೀಚನನ್ನು’ ವೇಷವನ್ನು ಧರಿಸಿ ಚೌಕಿಯಲ್ಲಿ ಕುಳಿತಿದ್ದ ಸುಂದರ ತನ್ನ ಅಕ್ಕನ ಗಂಡನನ್ನು ಮನಸ್ಸಿನಲ್ಲೇ ಹೀಗೆ ಬೈದುಕೊಳ್ಳುತ್ತಾ, ಕಾಲ್ಗೆಜ್ಜೆಯನ್ನು ಬಿಗಿಯಾಗಿ, ಮತ್ತೂ ಬಿಗಿಯಾಗಿ, ಸಾಧ್ಯವಾಗುವಷ್ಟು ಬಿಗಿಯಾಗಿ ಕಟ್ಟತೊಡಗಿದ......

*****
ಹಟ್ಟಿಯಲ್ಲಿ ಉತ್ಸಾಹದಿಂದ ನೆಗೆಯುತ್ತಿದ್ದ ಹೆಂಗರುವನ್ನು ಕಂಡ ಸಂಕಪ್ಪನಿಗೆ ಮಗಳು ಅರ್ಚನಾಳ ನೆನಪಾಯಿತು. ಕೆಲವು ವರುಷಗಳ ಹಿಂದಷ್ಟೇ ಮದ್ಲೆಪುರದ ಮಾಲಿಂಗಯ್ಯನವರ ಎರಡನೇ ಮಗ ಅಶೋಕನ ಜೊತೆಗೆ ನಡೆದ ಮದುವೆ ಅವಳದ್ದು. ಅಂದು ಅದೆಷ್ಟು ಕನಸುಗಳಿದ್ದವು ಅವಳ ಆ ಮುಗ್ಧ ಕಣ್ಗಳಲಿ! ತನ್ನ ಕೈಗಳಿಗೆ ಹಚ್ಚಿದ್ದ ಮದರಂಗಿ ಗಾಢ ಬಣ್ಣ ಪಡೆದುಕೊಂಡದ್ದನ್ನು ಬಂದಿದ್ದ ಸಂಬಂಧಿಕರಿಗೆಲ್ಲಾ ತೋರಿಸಿ, ಗಂಡನನ್ನು ತಾನು ಅಷ್ಟೂ ಪ್ರೀತಿಸುತ್ತೇನೆ ಎಂದು ಮತ್ತೆ ಮತ್ತೆ ಹೇಳಿ ಕುಣಿದಿದ್ದಳಲ್ಲ! ಪ್ರೀತಿಸುತ್ತೇನೆ ಎಂದು ಹೇಳಿದ್ದು ಮಾತ್ರವಲ್ಲ, ಅಂತೆಯೇ ನಡೆದುಕೊಂಡಳೂ ಕೂಡಾ. ಆರಂಭದಲ್ಲೇನೋ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಕುಂಟುನೆಪ ಮುಂದಿಟ್ಟುಕೊಂಡು ಕೈಹಿಡಿದ ಹೆಂಡತಿಯನ್ನು ಹಂಗಿಸತೊಡಗಿದನಲ್ಲ ಆ ಅಯೋಗ್ಯ! ಅವನಿಗೆ ಸಿಕ್ಕಿದ ನೆಪವಾದರೂ ಯಾವುದು? ಮೂಲೆಮನೆಯ ಧಣಿ ನಾರಾಯಣ ಹೆಗ್ಡೆಯವರ ಮಗಳ ಮದುವೆಗೆ ಹೋದ ತಾನು ಅಲ್ಲಿಂದ ಹೊರಡುವಾಗ ಅವನಲ್ಲಿ ‘ಅಳಿಯಂದಿರೇ, ಹೋಗಿ ಬರುತ್ತೇನೆ’ ಎಂಬ ಒಂದು ಮಾತು ತಿಳಿಸಲಿಲ್ಲವಂತೆ! ಬೇಕುಬೇಕೆಂದೇ ಅವನನ್ನು ಅವಮಾನಿಸುವುದಕ್ಕಾಗಿಯೇ ಅವನನ್ನು ನೋಡಿಯೂ ನೋಡದಂತೆ ಮಾಡಿ ಅಲ್ಲಿಂದ ಹೊರಟುಬಂದೆನಂತೆ! ಸೇರಿದ್ದ ಸಾವಿರ ಜನರೆದುರು ಅವನಿಗೆ ಮರ್ಯಾದೆ ಹೋಯ್ತಂತೆ!

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಕ್ಕಿದ ಅಶೋಕನ ಮನೆ ಪಕ್ಕದ ಶಂಕರ ಉಡುಪರು ಅವನ ಅಸಮಾಧಾನದ ಗುಟ್ಟು ಬಿಚ್ಚಿಟ್ಟಾಗ ಸಂಕಪ್ಪ ಅವಾಕ್ಕಾಗಿದ್ದ. ‘ಕಣ್ಣು ಮಂಜಾಗಿದ್ದ ತಾನು ಮದುವೆಗೆ ಹೊರಡುವ ಗಡಿಬಿಡಿಯಲ್ಲಿ ಕನ್ನಡಕ ಮರೆತುಹೋಗಿ, ಹೊರಟುಬರುವಾಗ ಸೇರಿದ್ದ ಸಾವಿರಾರು ಜನರ ಮಧ್ಯೆ ತನ್ನ ಅಳಿಯನನ್ನು ಕಂಡುಹಿಡಿಯುವುದಕ್ಕೆ ಸಾಧ್ಯವಾಗದ್ದೇ ಇಷ್ಟೆಲ್ಲಾ ಅವಾಂತರಕ್ಕೆ ದಾರಿಮಾಡಿತೇ?! ಇರಲಿ. ಅಳಿಯಂದಿರಿಗೆ ನಿಜ ವಿಷಯ ತಿಳಿಸಿದರಾಯ್ತು. ಎಲ್ಲಾ ಅಸಮಾಧಾನ ಹೊರಟುಹೋಗುತ್ತದೆ’ ಎಂದು ಯೋಚಿಸಿ, ಸಂಕಪ್ಪ ನಿರಾಳನಾಗುವಷ್ಟರಲ್ಲಿಯೇ ಉಡುಪರು ಪರಮ ಕಠೋರ ಸತ್ಯವನ್ನು ಅರುಹಿದ್ದರು- ‘ಇದೆಲ್ಲಾ ಸುಮ್ಮನೆ. ನಿನ್ನ ಮಗಳ ಜೊತೆಗಿನ ಸಂಸಾರ ಅವನಿಗೆ ಬೇಕಾಗಿಲ್ಲ. ಮದುವೆಗೂ ಮೊದಲೇ ಮನೆಗೆಲಸದವಳ ಜೊತೆಗೆ ಅವನಿಗೆ ಸಂಬಂಧವಿತ್ತು. ಮಗನನ್ನು ಸರಿದಾರಿಗೆ ತರುವುದಕ್ಕೇ ಅವನಿಗೆ ಒತ್ತಾಯಿಸಿ ಮದುವೆ ಮಾಡಲು ಮುಂದಾದರಂತೆ ಆ ಮಾಲಿಂಗಯ್ಯ. ನಿನ್ನಂತಹ ಬಡವನ ಬಾಯಿ ಮುಚ್ಚಿ ತೆಪ್ಪಗಿರಿಸುವುದು ಸುಲಭ ಎಂಬ ಕಾರಣಕ್ಕೇ ನಿನ್ನ ಮಗಳನ್ನು ಒಪ್ಪಿಕೊಂಡಿರಬೇಕು. ನನಗೆ ಈ ವಿಷಯಗಳೆಲ್ಲಾ ತಿಳಿದದ್ದು ಎರಡು ವಾರಗಳ ಹಿಂದೆ ಸಂಕಪ್ಪ. ಇಲ್ಲವಾದರೆ ಆ ಸಂಬಂಧ ಬೇಡ ಎಂದು ನಾನೇ ಹೇಳಿರುತ್ತಿದ್ದೆ ನಿನಗೆ’ ಈ ಮಾತು ಕೇಳಿದ ಸಂಕಪ್ಪ ಪಾತಾಳಕ್ಕಿಳಿದು ಹೋಗಿದ್ದ......

ಸಂಕಪ್ಪನ ಕಿವಿಗೆ ಈಗ ಬಿದ್ದದ್ದು ಭಾಗವತರು ಕರುಣಾರಸಭರಿತವಾಗಿ ಹಾಡುತ್ತಿದ್ದ ಪದ್ಯ- ‘ದೂತ ಪೇಳೈ ಧ್ಯೂತದಲಿ ಯಮಜಾತ ಸೋತ ನಂತರ......’

*****
ಆರ್ದ್ರ ಭಾವದಿಂದ ಮೂಡಿಬರುತ್ತಿದ್ದ ಪದ್ಯ ಚೌಕಿಯ ಮೂಲೆಯಲ್ಲಿ ಕುಳಿತಿದ್ದ ಸುಂದರನ ಮನಸ್ಸನ್ನು ಕಲಕತೊಡಗಿತು. ಹಾಗೇ ರಂಗದ ಕಡೆಗೊಮ್ಮೆ ಕಣ್ಣುಹಾಯಿಸಿ ಬಂದ. ದ್ರೌಪದಿಯ ಕಣ್ಗಳಲ್ಲಿದ್ದ ದುಃಖ ಹೃದಯವನ್ನು ಹಿಂಡತೊಡಗಿತ್ತು. “ಸಂಧಾನಕ್ಕೆಂದು ನಿನ್ನ ತವರಿನಿಂದ ಯಾರಾದರೂ ಬಂದರೆ ನೀನೂ ಅವರ ಜೊತೆಗೆ ಗಂಟುಮೂಟೆ ಕಟ್ಟಿಕೊಂಡು ಹೊರಡಬೇಕಾಗುತ್ತದೆ’ ಎಂದಿದ್ದಾನಂತೆ ಭಾವ ಎನಿಸಿಕೊಂಡ ಆ ಪಾಪಿ! ಅಕ್ಕ ಬೆಳಗ್ಗೆ ಗುಟ್ಟಾಗಿ ಕಾಲ್ ಮಾಡಿ ಅಳುತ್ತಾ ವಿಷಯ ತಿಳಿಸಿದಾಗ ಅದೆಷ್ಟು ಖೇದವಾಗಿತ್ತು ತನಗೆ! ಅಪ್ಪನಂತೂ ತಾನೇನೂ ತಲೆಕೆಡಿಸಿಕೊಂಡಿಲ್ಲ ಎಂದು ಭಾವಿಸಿದಂತಿದೆ. ತಲೆಗೇರಿದ ಚಿಂತೆಯನ್ನು ಕಳೆದುಕೊಳ್ಳಲೆಂದೇ ತಾನಿಲ್ಲಿಗೆ ಹೊರಟುಬಂದದ್ದೆಂಬ ಸತ್ಯ ಅವರಿಗೆ ತಿಳಿದೀತಾದರೂ ಹೇಗೆ? ‘ತಲೆಗೆರೆದರೆ ಕಾಲಿಗಿಲ್ಲ, ಕಾಲಿಗೆರೆದರೆ ತಲೆಗಿಲ್ಲ’ ಎಂಬಂತಹ ಸ್ಥಿತಿಯಲ್ಲಿದ್ದ ತಾವು ಮನೆಮಗಳು ಹೊಟ್ಟೆತುಂಬಾ ಉಂಡು, ಮೈತುಂಬಾ ಉಟ್ಟು ಸಂತಸದಿಂದಿರಲಿ ಎಂದು ಆಸೆಪಟ್ಟು, ಅಂತಹ ಸಿರಿವಂತರ ಜೊತೆಗೆ ಸಂಬಂಧ ಬೆಳೆಸಿದ್ದೇ ದೊಡ್ಡ ತಪ್ಪು ಎಂದೆಲ್ಲಾ ಯೋಚಿಸುತ್ತಲೇ ಇದ್ದ ಸುಂದರ.

ಅಷ್ಟರಲ್ಲಿ ಆತನ ಮೊಬೈಲ್‌ನಲ್ಲಿ ಹೊಸ ನೋಟಿಫಿಕೇಶನ್. ಅಕ್ಕ ವಾಟ್ಸಾಪ್‌ನಲ್ಲಿ ಧ್ವನಿ ಸಂದೇಶವೊಂದನ್ನು ಕಳುಹಿಸಿದ್ದಾಳೆ. ಕುತೂಹಲದಿಂದ ಅದನ್ನು ಆಲಿಸತೊಡಗಿದ.....

*****
ಉಳಿದಿದ್ದ ಆಹಾರವನ್ನೆಲ್ಲಾ ಪಾತ್ರೆಗೆ ಸುರುವಿಕೊಂಡು ಸಾಕುನಾಯಿ ಬಾಗುವಿನ ಬಳಿಗೆ ಬಂದ ಸಂಕಪ್ಪ ಅದನ್ನು ಅದರೆದುರಿದ್ದ ತಟ್ಟೆಗೆ ಹಾಕಿ, ಅದರ ತಲೆಯನ್ನೊಮ್ಮೆ ನೇವರಿಸಿದ. ‘ನಾಯಿಯನ್ನು ಸಿಂಹಾಸನದಲ್ಲಿ ಕೂರಿಸಿದ ಹಾಗಾಗಿದೆ’ ಮಗಳಿಗಾದ ಅನ್ಯಾಯ ಪ್ರಶ್ನಿಸಲು ಮದ್ಲೆಪುರಕ್ಕೆ ಹೋದಾಗ ಮಾಲಿಂಗಯ್ಯನವರು ಹೇಳಿದ ಈ ಮಾತು ಈಗ ನೆನಪಾಗಿ ಸಂಕಪ್ಪನ ಎದೆಯನ್ನು ಇರಿಯಿತು. ಅದೆಂತಹ ಅಹಂಕಾರವಿತ್ತು ಆ ಮಾತಿನಲ್ಲಿ! ಬಡವರಾದ ಮಾತ್ರಕ್ಕೆ ಏನೇನೆಲ್ಲ ಕೇಳಿಸಿಕೊಳ್ಳುವಂತಾಯಿತಲ್ಲಾ! ನೆನೆಸಿಕೊಂಡಂತೆಲ್ಲಾ ಅವನ ಹೃದಯ ದುರ್ಬಲಗೊಳ್ಳುತ್ತಲೇ ಹೋಯಿತು......

*****
‘ನಾನು ಸೂಳೆಯಂತೆ ಸುಂದರ...(ಉಮ್ಮಳಿಸಿದ ಸದ್ದು) ಗಂಡನನ್ನು ಅಷ್ಟು ಪ್ರೀತಿಸುವ ನಾನು ಸೂಳೆಯಂತೆ.…ನನಗೆ ಮನೆಗೆಲಸದವನ ಜೊತೆ ಸಂಬಂಧ ಇದೆ ಅಂತ ಹೇಳಿ ಡೈವೋರ್ಸ್ ಕೊಡಿಸುತ್ತಾರಂತೆ.…ವಕೀಲರ ಜೊತೆಗೆ ಇವರು ಮತ್ತು ಮಾವ ಇವತ್ತು ಮಾತಾಡಿಯೂ ಆಗಿದೆ.....ನಾನಿನ್ನು ಬದುಕುವುದಿಲ್ಲ ಸುಂದರ.....(ಮತ್ತೊಮ್ಮೆ ಉಮ್ಮಳಿಸಿದ ಸದ್ದು) ನಿನಗೊಂದು ಸತ್ಯ ಹೇಳುತ್ತೇನೆ. ಅಪ್ಪನ ಸ್ಥಾನದಲ್ಲಿರಬೇಕಾದ ಮಾವನೇ ನನ್ನ ಸೀರೆ ಸೆಳೆಯುವ ದುಶ್ಯಾಸನನಾದಾಗ, ಕೈಹಿಡಿದ ಗಂಡನೇ ಅದಕ್ಕೆ ಬೆಂಬಲ ಕೊಡುವ ದುರ್ಯೋಧನನಾದಾಗ ನಾನು ಬದುಕುವುದಾದರೂ ಹೇಗೆ?’ ಅಕ್ಕ ಕಳಿಸಿದ ಧ್ವನಿ ಸಂದೇಶ ಸುಂದರನ ಹಣೆಯಲ್ಲಿ ಬೆವರಿನ ಹನಿಗಳನ್ನು ಮೂಡಿಸಿತು. ಏನು ಮಾಡಲಿ ಎಂದು ತಿಳಿಯದಂತಹ ಗೊಂದಲ. ಅಷ್ಟರಲ್ಲಿ ಸಂಘಟಕರಾದ ವಿಠಲ ಶೆಟ್ಟರ ಜೋರು ಧ್ವನಿ ಕೇಳಿಸಿತು- ‘ಹೋಯ್ ಧರ್ಮರಾಯ, ಅಲ್ಲಿ ಮೂಲೆಯಲ್ಲೇ ಕೂತಿದ್ದೀಯಲ್ಲಾ. ಬೇಗ ಬಾ. ರಂಗ ಪ್ರವೇಶಿಸುವ ಸಮಯ ಆಗಿದೆ’.  ಬೆಪ್ಪನಂತಾಗಿದ್ದ ಸುಂದರ ಸಭಾಕಂಪನದಿಂದಿದ್ದಾನೆ ಎಂದು ಭಾವಿಸಿದ ವಿಠಲ ಶೆಟ್ಟರು ಆತನ ಕೈ ಹಿಡಿದೆಳೆದು ರಂಗಸ್ಥಳಕ್ಕೆ ನೂಕಿದರು......

*****
ತನ್ನಿಂದ ಅನತಿ ದೂರದಲ್ಲಿ ಸತ್ತಂತೆ ಬಿದ್ದಿದ್ದ ಸಂಕಪ್ಪನನ್ನು ನೋಡಿ ಬಾಗು ಒಂದೇ ಸಮನೆ ಬೊಗಳುತ್ತಿತ್ತು. ಸಂಕೋಲೆ ಇರುವಷ್ಟು ದೂರವೂ ನೆಗೆಯುತ್ತಿತ್ತು. ಆದರೂ ಸಂಕಪ್ಪನನ್ನು ತಲುಪಲು ಅದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸಂಕಪ್ಪನಲ್ಲಿ ಯಾವ ಬದಲಾವಣೆಯೂ ಇರಲಿಲ್ಲ. ಬಾಗು ಬೊಗಳುತ್ತಲೇ ಇತ್ತು......ಸಂಕಪ್ಪನ ದೇಹ ಹಾಗೆಯೇ ಇತ್ತು.....

*****
ಕ್ಷಣ ಮೊದಲು ಸುಂದರನಾಗಿದ್ದವ ಈಗ ಧರ್ಮರಾಯನಾಗಿದ್ದ......ಮೋಸದ ಪಗಡೆಯಾಟದಲ್ಲಿ ಸೋತ ಕುದಿ ಎದೆಯೊಳಗಿದ್ದರೂ ತಲೆ ತಗ್ಗಿಸಿ ಕುಳಿತಿದ್ದ......ಹೆಣ್ಣಿನ ಕಣ್ಣೀರಿಗೆ ಸ್ಪಂದಿಸಬೇಕೆನಿಸುವ ಉತ್ಕಟತೆ ಇದ್ದರೂ ಕೈಮುಷ್ಠಿ ಬಿಚ್ಚಲಾಗದ ಬಿಡುಗಾಸಿನವನಾಗಿದ್ದ......ದ್ರೌಪದಿಯ ಕಣ್ಣೀರು ಅವನೆದೆಯನ್ನು ತೋಯಿಸತೊಡಗಿತ್ತು......‘ನಿಮ್ಮ ಮಕ್ಕಳ ಅಹಂಕಾರದ ತೂಕಕ್ಕೆ ಮುಳುಗುತ್ತಿರುವ ನನ್ನ ಬದುಕನ್ನು ಹಿರಿಯರಾದ ನೀವಾದರೂ ಉಳಿಸಲಾರಿರಾ?’ ದ್ರೌಪದಿ ದೃತರಾಷ್ಟ್ರನೆದುರು ಕರುಣಾಜನಕವಾಗಿ ಬೇಡಿಕೊಂಡಾಗ ಬೆಂಕಿಯುರಿಯಲ್ಲಿ ಸುಟ್ಟುಹೋಗುತ್ತಿದ್ದ ಹಕ್ಕಿಯಂತಾದ......

ಸುಂದರ ಯೋಚಿಸತೊಡಗಿದ......ಅದು ಅಕ್ಕ ಭಾವನ ಮದುವೆ ಆಗಿದ್ದ ಸಮಯ. ನವದಂಪತಿಗಳಿಗೆ ಮೊದಲ ದೀಪಾವಳಿಯ ಸಡಗರ. ಮನೆತುಂಬಾ ಬಡತನ ಇದ್ದರೂ ಅದನ್ನು ತೋರಿಸಿಕೊಳ್ಳದಂತೆ ಸಂಕಪ್ಪ ಮಗಳು- ಅಳಿಯನಿಗೆ ಭರ್ಜರಿ ಔತಣದ ವ್ಯವಸ್ಥೆ ಮಾಡಿ, ಮನೆಗೆ ಬರಹೇಳಿದ್ದ. ಆ ದಿವಸ ಅಕ್ಕ- ಭಾವನ ಮಧ್ಯೆ ಅದೆಂತಹ ಅನ್ಯೋನ್ಯತೆ ಇತ್ತು. ಹಟ್ಟಿಯಲ್ಲಿದ್ದ ಸಿಹಿ ಅವಲಕ್ಕಿಯನ್ನು ಅಕ್ಕ ಗೋವಿಗೆ ತಿನ್ನಿಸುತ್ತಿದ್ದಾಗ ದನವೆಲ್ಲಾದರೂ ಗೋಣಾಡಿಸಿದರೆ ಅಕ್ಕನಿಗೆ ತಗಲಬಹುದೆಂದು ಎಚ್ಚರಿಕೆ ವಹಿಸಿದ್ದ ಭಾವ. ಒಲೆಯಲ್ಲಿದ್ದ ಬಿಸಿ ಪಾತ್ರೆಯನ್ನು ಅವಸರದಲ್ಲಿ ಮುಟ್ಟಿದ ಅಕ್ಕ ಕೈಸುಟ್ಟುಕೊಂಡಾಗ ತಕ್ಷಣವೇ ತುಪ್ಪವನ್ನು ಅವಳ ಕೈಗೆ ಸವರಿ, ಆರೈಕೆ ಮಾಡಿದ್ದ. ಅಕ್ಕ ತುಂಟತನದಿಂದ ಮಾಡಿದ್ದ ತಮಾಷೆಗಳೆಲ್ಲದಕ್ಕೂ ಬಿಚ್ಚುಮನಸ್ಸಿನಿಂದ ನಗಾಡಿದ್ದ.

ಹೀಗಿದ್ದ ಅವರ ಸಂಸಾರದ ನೌಕೆ ಬಿರುಗಾಳಿಗೆ ಸಿಲುಕಿದ್ದು ಯಾವಾಗ? ಅಕ್ಕ ತನ್ನ ದೈಹಿಕ ಸೌಂದರ್ಯವನ್ನು ಕಳೆದುಕೊಂಡ ಬಳಿಕ. ಹೌದು! ಆ ದಿನ ಭಾವನ ಹುಟ್ಟುಹಬ್ಬವಿತ್ತು. ಗಂಡನೇ ದೈವ ಎಂದುಕೊಂಡಿದ್ದ ಅಕ್ಕ ಮನೆಯಲ್ಲಿ ಹಬ್ಬದಡುಗೆ ಸಿದ್ಧಪಡಿಸಿದ್ದಳು. ಏನಾದರೂ ಉಡುಗೊರೆಯನ್ನು ಗಂಡನಿಗೆ ಕೊಡಬೇಕೆಂದು ಯೋಚಿಸಿ, ಆ ಕೆಲಸಕ್ಕೆ ತನ್ನನ್ನೇ ಜೊತೆಗಾರನಾಗಿಸಿ ಪೇಟೆಗೆ ಕರೆದೊಯ್ದಿದ್ದಳು. ಹತ್ತಾರು ಅಂಗಡಿಗಳನ್ನು ಸುತ್ತಿದ ಬಳಿಕ ತಕ್ಕುದಾದ ಉಡುಗೊರೆ ಅವಳಿಗೆ ಕಾಣಿಸಿತ್ತು. ಗಂಡು ಹೆಣ್ಣಿನ ನಡುವಿನ ಪ್ರೀತಿಯನ್ನು ಕುಂಚಗಳ ನೆರವಿನಿಂದ ಕಟ್ಟಿಕೊಟ್ಟ ತೈಲಚಿತ್ರ ಅದಾಗಿತ್ತು. ನಿಸರ್ಗದ ಮಡಿಲಲ್ಲಿದ್ದ ಕೃಷ್ಣ ರಾಧೆಯರ ಚಿತ್ರವದು. ರಾಧೆಯ ಮಡಿಲಲ್ಲಿ ಮಗುವಂತೆ ಮಲಗಿದ್ದಾನೆ ಕೃಷ್ಣ. ತೆರೆದ ಅಗಲವಾದ ರಾಧೆಯ ಕಣ್ಗಳೊಳಗೆ ತನ್ನ ಮಡಿಲಲ್ಲಿ ಮಗುವಾಗಿ ಪವಡಿಸಿರುವ ಪರಮಾತ್ಮನ ಪ್ರತಿಬಿಂಬ ನೆಲೆಗೊಂಡಿದೆ. ‘ಭಾವ ನಿನ್ನ ತೊಡೆಯ ಮೇಲೆ ಮಲಗಿಕೊಂಡಂತಿದೆ’ ಎಂದು ಹೇಳಿ ತಾನು ರೇಗಿಸಿದಾಗ ಅಕ್ಕನ ಮೊಗದಲ್ಲಿ ಅದೆಂತಹ ನಾಚಿಕೆಯ ಭಾವವಿತ್ತು! ಉಡುಗೊರೆಯನ್ನು ಬಹಳ ಚಂದವಾಗಿ ಪ್ಯಾಕ್ ಮಾಡಿಸಿಕೊಂಡ ತಾವಿಬ್ಬರೂ, ಮನೆ- ಸಂಸಾರದ ಬಗ್ಗೆ ಮಾತಾಡುತ್ತಾ, ರಸ್ತೆಯಲ್ಲಿ ನಡೆಯುತ್ತಿದ್ದೆವು. ಅಷ್ಟರಲ್ಲಿ ಅದೆಲ್ಲಿಂದಲೋ ಸೈತಾನನಂತೆ ಬಂದವ ಕೈಲಿದ್ದ ಬಾಟಲ್‌ನಿಂದ ಅದೇನನ್ನೋ ಅಕ್ಕನ ಕಡೆಗೆ ಎರಚಿ, ಬಂದಷ್ಟೇ ರಣವೇಗದಲ್ಲಿ ಹೊರಟುಹೋಗಿದ್ದ. ಆತ ಎರಚಿದ್ದು ಆ್ಯಸಿಡ್. ಅಕ್ಕ ನೆಲದ ಮೇಲೆ ಬಿದ್ದು, ಹೊರಳಾಡತೊಡಗಿದ್ದಳು. ತನ್ನ ಕಾಲಿಗೂ ಅಲ್ಪಸ್ವಲ್ಪ ಆ್ಯಸಿಡ್ ಬಿದ್ದು, ಸುಡತೊಡಗಿತ್ತು. ರಕ್ಕಸನಂತೆ ಬಂದವ ಯಾರು? ಆತ ತಮ್ಮ ಮೇಲೆ ಆ್ಯಸಿಡ್ ಎರಚಿದ್ದಾದರೂ ಯಾಕೆ? ಎನ್ನುವುದು ಆ ಬಳಿಕದ ಪೋಲೀಸ್ ವಿಚಾರಣೆಯಿಂದ ತಿಳಿದುಬಂದಿತ್ತು. ಆ ಕಿರಾತಕ ಅವನದೇ ಕಾಲೇಜಿನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಅವಳಲ್ಲಿ ಪ್ರೇಮನಿವೇದನೆಯನ್ನೂ ಮಾಡಿಕೊಂಡಿದ್ದನಂತೆ. ಆಕೆ ಒಪ್ಪಿರಲಿಲ್ಲ. ಕೋಪಗೊಂಡ ಆತ ಕಾಲೇಜಿನಿಂದ ಹೊರಟವಳನ್ನು ಹಿಂಬಾಲಿಸಿಕೊಂಡು ಬಂದು ಆ್ಯಸಿಡ್ ಎರಚಿದ್ದಾನೆ. ಆ ಯುವತಿಯು ತಮ್ಮಿಬ್ಬರ ಸಮೀಪದಲ್ಲಿಯೇ ನಡೆಯುತ್ತಿದ್ದುದರಿಂದ ಆತ ಗಡಿಬಿಡಿಯಲ್ಲಿ ಎರಚಿದ ಅಷ್ಟೂ ಆ್ಯಸಿಡ್ ತನ್ನ ಅಕ್ಕನ ಮೇಲೆ ಬಿದ್ದಿದೆ.

ಆ್ಯಸಿಡ್‌ನ ತೀವ್ರತೆಗೆ ಅಕ್ಕನ ಮುಖ ಸಂಪೂರ್ಣ ಸುಟ್ಟುಹೋಗಿತ್ತು. ಆಕೆ ಬದುಕಿದ್ದೇ ಹೆಚ್ಚು. ಮೊದಲು ಆಕೆಯನ್ನು ನೋಡಿದ್ದವರು ಈಗ ಆಕೆ ಎನ್ನುವುದನ್ನು ಗುರುತಿಸಲು ಸಾಧ್ಯವೇ ಇರಲಿಲ್ಲ. ನಗುಮುಖದ ಅಕ್ಕನ ಮುಖದಲ್ಲೀಗ ನಗುವೇ ಇರಲಿಲ್ಲ. ಆಕೆ ಒಂದುವೇಳೆ ನಕ್ಕರೂ ಅದು ಎದುರಿದ್ದವರಿಗೆ ತಿಳಿಯುತ್ತಿರಲಿಲ್ಲ. ಮೊದಲು ಕಣ್ಗಳಲ್ಲೇ ಮಾತಾಡುತ್ತಿದ್ದ ಅಕ್ಕನ ಕಣ್ಣುಗಳೀಗ ಕಾಂತಿಯನ್ನು ಕಳೆದುಕೊಂಡಿದ್ದವು. ಅಂತಹ ಪರಿವರ್ತನೆಯಾಗಿತ್ತು. ಊಹಿಸಲಸಾಧ್ಯವಾದ ರೀತಿಯಲ್ಲಿ ಅವಳ ಮುಖ ಬದಲಾವಣೆಯನ್ನು ಕಂಡಿತ್ತು. ವಿರೂಪಗೊಂಡಿತ್ತು.

ಹೀಗೆ ಆ್ಯಸಿಡ್ ದಾಳಿಗೆ ಒಳಗಾದ ಅಕ್ಕ ಆ ಬಳಿಕ ಭಾವನಿಂದ ಹಂತಹಂತವಾಗಿ ತಿರಸ್ಕೃತಗೊಳ್ಳತೊಡಗಿದಳು. ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದವನಿಗೆ ಈಗ ಅವಳನ್ನು ಕಾಣುವುದೇ ಅಸಹ್ಯ ಉಂಟುಮಾಡುತ್ತಿತ್ತು. ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಅಕ್ಕನ ಜೊತೆಗೆ ಜಗಳ ಆಡತೊಡಗಿದ್ದ. ಕಾರ್ಯಕ್ರಮದಲ್ಲಿ ತನ್ನನ್ನು ಮಾತಾಡಿಸದೇ ಹೋದರೆಂದು ಮಾವನನ್ನು ಜರಿದಿದ್ದ. ಅದು ಬಹಳ ದೊಡ್ಡ ಅವಮಾನವೆಂದು ಹಾರಾಡಿದ್ದ.

ಏಕೋ ಏನೋ ಗೊತ್ತಿಲ್ಲ, ಅದೇ ಸಂದರ್ಭದಲ್ಲಿ ಅಕ್ಕನಿಗೆ ತಾನೊಂದು ಮಗುವಿಗೆ ಜನ್ಮ ನೀಡಬೇಕೆಂಬ ಆಸೆ ಮೊಳಕೆಯೊಡೆದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಕುರೂಪಿಯಾಗಿ ಬದಲಾಗಿದ್ದವಳನ್ನು ಹೆಂಡತಿಯಾಗಿಯೇ ಸ್ವೀಕರಿಸಲು ಸಿದ್ಧನಿಲ್ಲದ ಭಾವನ ಮನೋಭಾವದಿಂದಾಗಿ ಕುಟುಂಬದವರ ಪಾಲಿಗೆ ಸಮಾಜದ ಕಣ್ಣಿಗೆ ಅಕ್ಕ ಬಂಜೆಯಾಗುವಂತಾಗಿತ್ತು. ಸಂಧಾನಕ್ಕೆಂದು ಹಿಂದೆ ಮದ್ಲೆಪುರಕ್ಕೆ ಹೋಗಿದ್ದಾಗ ಮಾಲಿಂಗಯ್ಯನವರು ತಮ್ಮ ತೋಟದ ಅಂಚಿನಲ್ಲಿದ್ದ ಭೂಮಿಯ ಕಡೆಗೆ ಬೆರಳು ಚಾಚಿ ಹೇಳಿದ್ದರು- ‘ಯಾವ ಪ್ರಯೋಜನಕ್ಕೂ ಇಲ್ಲದ ಭೂಮಿಯದು. ಬಂಜರು ಭೂಮಿ. ನೋಡುವುದಕ್ಕೂ ಚಂದ ಇಲ್ಲ. ಸದ್ಯದಲ್ಲಿಯೇ ಅದನ್ನು ನನ್ನ ಜಾಗದಿಂದ ಹೊರಹಾಕುತ್ತೇನೆ. ಫಲವತ್ತತೆಯಿಲ್ಲದ ಮೇಲೆ ಭೂಮಿ ಯಾತಕ್ಕೆ?’ ತಕ್ಷಣದಲ್ಲಿ ಸುಂದರನಿಗೆ ಅವರ ಮಾತಿನಲ್ಲಿದ್ದ ನಿಗೂಢತೆ ಅರ್ಥ ಆಗಿರಲಿಲ್ಲ. ಅದು ಹೊಳೆದಾಗ ತೀವ್ರವಾದ ಖೇದವಾಗಿತ್ತು. ಹೆಣ್ಣಾದವಳು ಕಮಲದಂತಹ ಕಣ್ಣುಗಳನ್ನೇ ಹೊಂದಿರಬೇಕು, ಸಂಪಿಗೆ ಮೂಗಿರಬೇಕು, ದಾಳಿಂಬೆಯಂತಹ ಹಲ್ಲುಗಳು, ತೊಂಡೆಹಣ್ಣಿನಂತಹ ತುಟಿಗಳು ಎಲ್ಲವೂ ಬೇಕು. ಆದರೆ ಇವೆಲ್ಲವೂ ಇಲ್ಲದಿದ್ದರೆ ಹೆಣ್ಣಿಗೆ ಒಂದಷ್ಟೂ ಬೆಲೆಯಿಲ್ಲ.

ಹೆಣ್ಣಿನ ದೈಹಿಕ ಸೌಂದರ್ಯವನ್ನೇ ಮೂಲವಾಗಿರಿಸಿಕೊಂಡು ಅಧಿಕಾರ ಚಲಾಯಿಸಹೊರಡುವ ವ್ಯವಸ್ಥೆಯ ಬಗ್ಗೆ ಸುಂದರನಿಗೆ ವಿಪರೀತ ರೇಜಿಗೆ ಮೂಡಿತು. ಸುಂದರಿಯನ್ನು ಬಲಾತ್ಕರಿಸುವ, ಕುರೂಪಿಯನ್ನು ಹೀಗಳೆಯುವ ಮನೋಭಾವಗಳೆರಡೂ ವಿಕೃತಿಯ ಅತಿರೇಕಾವಸ್ಥೆಗಳಾಗಿ ಸುಂದರನಿಗೆ ಕಾಣಿಸಿದವು.

ಕುರೂಪಿಯಾದ ತನ್ನಕ್ಕನನ್ನೂ ಬಿಡದೆ ಮುಕ್ಕುವವರ ಬಗ್ಗೆ ಯೋಚಿಸಿದಾಗ ಅವನ ಸಹನೆಯ ಕಟ್ಟೆ ಒಡೆಯತೊಡಗಿತು. ರಂಗದ ಮೇಲಿನ ದೃಶ್ಯ ಅವನ ಕಣ್ಣಿಗೆ ರಾಚಿತು. ಮೊದಲೇ ಕ್ಷೋಭೆಗೊಂಡಿದ್ದ ಮನಸ್ಸು ಮತ್ತಷ್ಟು ಕ್ರೋಧಕ್ಕೊಳಗಾಯಿತು.

ದುಶ್ಯಾಸನ ಅಟ್ಟಹಾಸಗೈಯ್ಯುತ್ತಾ ದ್ರೌಪದಿಯ ಸೀರೆಯನ್ನು ಸೆಳೆಯತೊಡಗಿದಾಗ ಸುಂದರನಲ್ಲಿದ್ದ ಧರ್ಮರಾಯ ಇದ್ದಕ್ಕಿದ್ದಂತೆಯೇ ಸತ್ತುಹೋದ......ಗೋಗರೆಯುತ್ತಿದ್ದ ದ್ರೌಪದಿಯಲ್ಲಿ ತನ್ನ ಅಕ್ಕನನ್ನೂ, ದುಶ್ಯಾಸನ- ದುರ್ಯೋಧನರಲ್ಲಿ ಅವಳ ಮಾವ- ಗಂಡನನ್ನು ಕಂಡ ಅವನೊಳಗೆ ವಿಪರೀತ ಆವೇಶವೊಂದರ ಆವಾಹನೆಯಾಯಿತು......ತಕ್ಷಣವೇ ಮೇಲೆದ್ದು, ದುರ್ಯೋಧನ- ದುಶ್ಯಾಸನರನ್ನು ಬಡಿಯತೊಡಗಿದ......ಬಿಡದೆ ಬಡಿಯತೊಡಗಿದ......ವಿಚಿತ್ರವಾಗಿ ಅಟ್ಟಹಾಸಗೈಯ್ಯುತ್ತಾ ಆರ್ಭಟಿಸತೊಡಗಿದ......ರಂಗಸ್ಥಳವನ್ನೆಲ್ಲಾ ಆಕ್ರಮಿಸಿಕೊಂಡು ಆರ್ಭಟಿಸತೊಡಗಿದ......ಆರ್ಭಟಿಸತೊಡಗಿದ......

ದೇಹದೊಳಗೆ ಉಸಿರಿರುವವರೆಗೂ ಆರ್ಭಟಿಸುತ್ತಲೇ ಇದ್ದ......

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು