ಅಕ್ಕಾ.. ದಲ್ಲಾಳಿ ಪಾರ್ರೋತಿ ಅಕ್ಕನ ಮಗಳ ಕತೆ ಗೊತ್ತುಂಟಾ ನಿನಗೆ? ಅಕ್ಕ ಪ್ರತಿಮಾಗೆ ಹೇಮಾ ಮೈಸೂರಿನಿಂದ ಪೋನಾಯಿಸುತ್ತಿದ್ದಾಳೆ.
'ನನಗೆ ಆ ಊರಿನ ವಿಚಾರ ನೀ ಅಲ್ಲದೆ ಇನ್ಯಾರು ಹೇಳಬೇಕು ನೋಡು? ಅಮ್ಮನ ವಿಚಾರ ನಿಂಗೆ ಗೊತ್ತುಂಟು ಅಲಾ, ಅವಳಿಗೆ ಬೇಕಾದವರ ವಿಚಾರ ಒಳ್ಳೆದಾದರೆ ಮಾತ್ರ ಹೇಳಿಯಾಳೇ ಬಿಟ್ಟರೆ, ಏನಾರು ಹೆಚ್ಚು ಕಮ್ಮಿ ಆದರೆ ಉಸ್ಕುಡಂ ಅಂದರೂ ಆಕೆ ಬಾಯಿ ಬಿಡಲಾರಳು’.
ಅಂದ ಹಾಗೆ ನಿನ್ನೆ ಅಮ್ಮ ಕರೆ ಮಾಡಿದ್ದಳು. ಪಾರ್ರೋತಿ ಅಕ್ಕನ ವಿಚಾರ ಏನೂ ಹೇಳಿಲ್ಲ ಅಂದರೆ ಏನೋ ಮೇಲು ಕೆಳಗು ಆಗಿರಬಹುದು ಅನ್ನುವ ಅನುಮಾನ ನಂಗೆ. ಇರಲಿ, ಏನಾಯಿತು ನೀನೇ ಹೇಳಿ ಬಿಡು.
ಅದೇ ಅಕ್ಕಾ..ಪಾರ್ರೋತಿ ಅಕ್ಕನ ಮಗಳು ನಳಿನಿ ಇದ್ದಾಳಲ್ಲ..
ಹ್ಮ್ , ಗೊತ್ತು ಬಿಡು ಭಾರೀ ಶ್ರೀಮಂತರು ಅಂತ ಹಾಸನ ಕಡೆಗೆ ಮದುವೆ ಮಾಡಿ ಕೊಟ್ಟಿದ್ದಲ್ಲ, ನನಗಿಂತ ಎರಡು ವರ್ಷ ಸಣ್ಣ ಅಷ್ಟೆ. ಏನೇ ಆದರೂ ಆಕೆಗೆ ಓದು ಅಷ್ಟಾಗಿ ತಲೆ ಹತ್ತುತ್ತಿರಲಿಲ್ಲ. ದಿಸೆ ಚೆನ್ನಾಗಿತ್ತು. ಹಂಗೆ ಒಳ್ಳೆ ಕಡೆ ಮದುವೆ ಅಂತೂ ಆಗಿ ಹೋಗಿದ್ದಳು. ಹುಡುಗ ದೊಡ್ಡ ಬಿಜಿನೆಸ್ ಮ್ಯಾನ್ ಅಂತ ಕೇಳಿದ್ದೆ. ಏನೇ ಆದರೂ ಹೆಣ್ಮಕ್ಕಳು ಚೆನ್ನಾಗಿದ್ದರೆ ಸಾಕಪ್ಪ.
ಹ್ಮ್. ಇದೆಲ್ಲ ಕಾಂಚಾಣದ ಕರಾಮತ್ತು ಅಕ್ಕಾ, ಅದಕ್ಕೇ ತಾನೇ ಇದೆಲ್ಲಾ ಆಗುವುದು. ದುಡ್ಡು ಎಲ್ಲವನ್ನೂ ಹೇಗೆ ಮುಚ್ಚಿಸಿ ಹಾಕಿಬಿಡುತ್ತೆ ನೋಡು. ಆದರೆ ಸತ್ಯವನ್ನು ಹೆಚ್ಚು ಕಾಲ ಬಚ್ಚಿಡಲು ಆಗುವುದಿಲ್ಲವಲ್ಲಾ? ಅದೊಂತರಾ ಉಡಿಯೊಳಗಿಟ್ಟ ಕೆಂಡದಂತೆ.
ಏನಾಯ್ತೀಗ..? ಹೇಮಾಳಿಗೆ ಆತಂಕದ ಕುತೂಹಲ.
ನಳಿನಿಯ ಗಂಡ ಅಶೋಕನಿಗೆ ಇದಾಗಲೇ ಒಂದು ಮದುವೆ ಆಗಿ ಒಂದು ಮಗು ಬೇರೆ ಉಂಟಂತೆ. ಆದರೆ ಅದು ಅಧಿಕೃತವಾಗಿ ಆದ ಮದುವೆ ಅಲ್ಲವಂತೆ. ಪಕ್ಕದ ಊರಲ್ಲಿ ಇವನ ವ್ಯವಹಾರ ಜೋರು ಅಂತೆ. ಇವನ ಗೋಡಾನಿನ ಕಾವಲು ಕಾಯುವ ನಿಂಗಪ್ಪನ ಮಗಳ ಜೊತೆ ಗುಟ್ಟಿನಲ್ಲಿ ಮದುವೆ ಆಗಿತ್ತಂತೆ. ಅದೇಗೋ ಅಶೋಕನ ಅಪ್ಪ ಅಮ್ಮನಿಗೆ ಗೊತ್ತಾಗಿ ಸರೀಕರ ಎದುರು ನಮ್ಮ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಗುವುದು ಬೇಡ ಅಂತ ಗಡಿಬಿಡಿಯಲ್ಲಿ ಸ್ವಜಾತಿ ಸಂಬಂಧ ನೋಡಿ ಈ ಮದುವೆ ಮಾಡಿಸಿದ್ದರಂತೆ. ಇಂತಹ ಅಂತೆಕಂತೆಗಳೆಲ್ಲಾ ಈಗ ಹೊರಗೆ ಬರುತ್ತಿದೆ.
‘ಹೋ..ದೇವರೇ..ಇದು ಅನ್ಯಾಯ! ಹೀಗೆ ಆಗಬಾರದಿತ್ತು’.
ಅವತ್ತೇ ಒಳಮನಸ್ಸಿಗೆ ಏನೋ ಎಡವಟ್ಟು ಆಗಿದೆ ಅಂತ ಅನ್ನಿಸುತ್ತಿತ್ತು.
ಇಲ್ಲದಿದ್ದರೆ ಈ ಸಂಬಂಧ ಅದು ಹೇಗೆ ಕುದುರಲು ಸಾಧ್ಯ? ಅಂತ.
ಇನ್ನು ಹೇಗೂ ಕವಡೆ ನರಸಣ್ಣನ ಕೃಪಕಟಾಕ್ಷ ಪಾರ್ರೋತಿ ಅಕ್ಕನ ಮನೆಯವರ ಮನೆ ಮೇಲೆ ಸದಾ ಉಂಟಲ್ಲ. ಹಾಗಾಗಿ ಇದೆಲ್ಲ ಸಾಧ್ಯ ಅಂತನೂ ಭಾವಿಸಿಕೊಂಡಿದ್ದೆ.
ಅಕ್ಕಾ, ಅದು ನಿಜವೇ ತಾನೇ. ನರಸಣ್ಣನ ತಾಯಿಯ ಕಡೆಯ ಸಂಬಂಧಿಯ ಮಗನೇ ಅಂತೆ ಅಶೋಕ. ಇದೆಲ್ಲಾ ಈಗ ಹೊರ ಬರುತ್ತಿರುವ ಸುದ್ದಿ. ಇನ್ನು ಏನೇನು ಇದೆಯೋ ಒಳ ವಿಚಾರಗಳು. ಬೆಂಕಿ ಆರುವ ತನಕ ಬಿಸಿ ಸುದ್ದಿಯ ಹೊಗೆ ಗುಸು ಗುಸು ಅಂತ ಹಬ್ಬಿಕೊಂಡೇ ಇರುತ್ತದೆ.
ಅದಿರಲಿ, ಇಷ್ಟು ದಿನ ಇಲ್ಲದ್ದು ಈಗ ಅದು ಹೇಗೆ ಗೊತ್ತಾಯ್ತು?
ಹ್ಮ್, ಅದೇ.. ಮೊದಲು ಮದುವೆ ಆದ ಹುಡುಗಿಯ ಮನೆಯಲ್ಲಿ ಹೇಗೂ ಬಡತನ, ಕದ್ದು ಮುಚ್ಚಿ ಆದ ಮದುವೆ ಬೇರೆ. ಹೇಗೋ ಇವನ ಮದುವೆಯ ವಿಚಾರ ಗೊತ್ತಾಗಿಯೂ, ಸತ್ತೋಗಲಿ ನಮ್ಮ ಮಗಳ ನಸೀಬು ಇಷ್ಟೇ ಅಂತ ಸುಮ್ಮನಾಗಿದ್ದರಂತೆ. ಎಷ್ಟಾದರೂ ಸಿರಿವಂತರ ವಹಿವಾಟು ಆಗಲಿಕ್ಕಿಲ್ಲ. ತಮ್ಮ ಮಗಳದ್ದೂ ತಪ್ಪಿದೆ ತಾನೇ? ನಿಜವಾದ ಪ್ರೀತಿ ಆಗಿದ್ದರೆ ಅವ ಯಾಕೆ ಬಿಟ್ಟು ಹೋಗುತ್ತಿದ್ದ? ಬಡತನ ಕೆಲವೊಮ್ಮೆ ಎಂತ ಶಾಪ ಕೊಟ್ಟು ಬಿಡುತ್ತದೆ? ಕಡೇ ತನಕ ಮರೆಯಲಾರದಂತದ್ದು. ಕೊನೇಗೆ ಬಲಿಪಶುವಾಗುವುದು ನಮ್ಮ ಹೆಣ್ಣು ಮಕ್ಕಳೇ ತಾನೇ? ಅಂತ ನಿಂಗಪ್ಪ ಕಣ್ಣೀರು ಹಾಕುತ್ತಿದ್ದ ಅಂತೆ. ಸದ್ಯ! ಯಾರಿಗೂ ಗೊತ್ತಾಗಲಿಲ್ಲ. ಯಾರಾದರೂ ಸಿಕ್ಕಿದರೆ ಮದುವೆ ಮಾಡಿಬಿಡಬೇಕು ಅನ್ನುವ ತರಾತುರಿಯಲ್ಲಿ ಇರುವಾಗಲೇ..
ಅವಳೀಗೀಗ ಆರು ತಿಂಗಳು !
ಅನ್ನುವ ವಿಚಾರ ಗೊತ್ತಾದು. ನಿಂಗಪ್ಪ ಅಶೋಕನಲ್ಲಿ ಈ ಸಂಗತಿ ಹೇಳಿದ್ದಕ್ಕೆ, ಇನ್ನು ಈ ವಿಚಾರ ಇಲ್ಲಿವರೆಗೆ ಆಗಾಗ್ಗೆ ತರಬೇಡ ಅಂತ ಅಗತ್ಯಕ್ಕಿಂತ ಹೆಚ್ಚೇ ಕಿಸೆ ಬಿಸಿ ಮಾಡಿ ಕಣ್ಣಿನಲ್ಲೇ ಎಚ್ಚರಿಕೆ ಕೊಟ್ಟಿದ್ದನಂತೆ.
ಏನೇ ಆದರೂ ವೈದ್ಯರು ಗರ್ಭ ತೆಗೆಸಲು ಒಪ್ಪಲಿಲ್ಲವಂತೆ. ತಾಯಿಗೆ ಇದರಿಂದ ಅಪಾಯ ಇದೆ ಅಂತ ಅಂದಕಾರಣ ಇವರಿಗೆ ಮತ್ತೆ ಬೇರೆ ದಾರಿ ಇರಲಿಲ್ಲ. ಆಶಾ ಕಾರ್ಯಕರ್ತೆಯರು ನಿಂಗಪ್ಪನ ಮನೆಗೆ ಎರೆಡೆರಡು ಬಾರಿ ಬಂದು ಹೋದ ಮೇಲೆ ನೆರೆಕರೆ ಸುದ್ದಿ ಹರಡಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ನಿಂಗಪ್ಪನ ಹೆಂಡತಿಯ ಸ್ತ್ರೀ ಶಕ್ತಿ ಸಂಘದವರು ಆದದ್ದು ಆಗಲಿ ನೋಡಿಯೇ ಬಿಡುವ ಅಂತ ಅಶೋಕನ ಮನೆಯವರೆಗೆ ಬಂದು ಮಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರಂತೆ.
‘ಹೋ..ದೇವರೇ..ಇಬ್ಬರು ಹೆಣ್ಣುಮಕ್ಕಳ ಪರಿಸ್ಥಿತಿಯೂ ಶೋಚನೀಯ. ಇಂತಹ ಕಡುಕಷ್ಟ ಯಾರಿಗೂ ಬರಬಾರದು ನೋಡು’!
ಅದೇ ಅಕ್ಕ.. ಈಗ ನಳಿನಿ ತವರಿಗೆ ಬಂದಿದ್ದಾಳಂತೆ. ಈಗ ಅವಳಿಗೆ ಒಂದು ರೀತಿಯ ಮತಿಭ್ರಮಣೆ ಆದಂತಾಗಿ, ಆಗಾಗ್ಗೆ ಕವಡೆ ನರಸಣ್ಣನ ಹತ್ತಿರ ಹೋಗಿ, ನನಗೆ ಮದುವೆ ಯೋಗ ಉಂಟಾ ..ನೊಡಿ ಹೇಳಿ ಸ್ವಾಮಿ.. ಬೇಗಬೇಗ ಕವಡೆ ಹಾಕಿ.. ಕವಡೆ ಹಾಕಿ ..ಅಂತ ಪೀಡಿಸುತ್ತಲೇ ಇರುತ್ತಾಳಂತೆ.
ಅಕ್ಕಾ..ಬಿಡು ,ಇನ್ನು ಇದರ ಕುರಿತು ಚಿಂತಿಸಿ ಪ್ರಯೋಜನ ಇಲ್ಲ.
ಆದರೆ ನೀನು ಆವತ್ತು ನನ್ನ ಜೊತೆಗೆ ಬಲವಾಗಿ ನಿಲ್ಲದಿದ್ದರೆ..ನನ್ನ ಜಾತಕವನ್ನೂ ನರಸಣ್ಣನೇ ನಿರ್ಧರಿಸಿ ಬಿಡುತ್ತಿದ್ದ ತಾನೇ?!
ಅವಳ ಸಂತೋಷಕ್ಕೆ ನಾನು ಕಾರಣಳಾಗಿದ್ದೇನೆ ಅನ್ನುವುದು ನನಗೆ ಸಾರ್ಥಕ ಭಾವ ಮೂಡಿಸುತ್ತಿದೆ. ಇಂತಹ ಸಣ್ಣ ದೈರ್ಯ ನನಗೆ ಆವತ್ತು ಒಬ್ಬರು ಕೊಟ್ಟಿದ್ದರೂ ಸಾಕಿತ್ತು ಅಲ್ವಾ..? ಇಂತಹ ಯೋಚನೆ ಬಂದಾಗಲೆಲ್ಲ ಪ್ರತಿಮಾ ಹಿಂದೆ ತಿರುಗಿ ನೋಡುತ್ತಾಳೆ.
ಬೇಡವೆಂದರೂ ಮರುಕಳಿಸುವ ನೆನಪಿಗೆ ಬೇಲಿ ಹಾಕಲು ಸಾಧ್ಯವೇ?
** ** ** **
ಆ ರಾತ್ರಿಯಿಡೀ ನಾನು ಅತ್ತು ಕರೆದಿದದ್ದೆ. ಈಗಲೇ ನನಗೆ ಮದುವೆ ಬೇಕಿರಲಿಲ್ಲ. ಮುಂದೆ ಓದಬೇಕಿತ್ತು. ಸಣ್ಣ ಕೆಲಸವಾದರೂ ಹಿಡಿಯಬೇಕಿತ್ತು. ಆರ್ಥಿಕವಾಗಿ ಸ್ವಾವಲಂಬಿಯಾಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಸಣ್ಣ ಕೆಲಸ ಆದರೂ ಸರಿಯೇ, ಕೆಲಸದಲ್ಲಿ ಇರುವ ಹುಡುಗನನ್ನ ಮದುವೆಯಾಗಬೇಕಿತ್ತು. ಅಂತಹುದರಲ್ಲಿ ಇನ್ನೂ ಡಿಗ್ರಿ ಕೊನೆಯ ಪರೀಕ್ಷೆ ಕೂಡ ಮುಗಿದಿರಲಿಲ್ಲ. ಹೇಳದೆ ಕೇಳದೆ ಮನೆಗೆ ನೆಂಟರು ಬರುತ್ತಾರೆ ಆಂತ ಹೇಳಿ,ಈ ರೀತಿ ಕದ್ದು ಮುಚ್ಚಿ ಮದುವೆ ಮಾಡುವ ಅಗತ್ಯವಾದರೂ ಏನಿತ್ತು? ನೆಂಟರು ಬಂದು ಹೋಗಿ ಅವರು ಒಪ್ಪಿಗೆ ಕೊಟ್ಟ ಮೇಲೆ ಅಮ್ಮ ಮೆಲ್ಲನೆ ಪೀಠಿಕೆ ತೆರೆದು ಅವರು ಒಪ್ಪಿಗೆ ಕೊಟ್ಟ ವಿಷಯ ಹೇಳಿದಾಗಲೇ ನನ್ನೆಲ್ಲ ಕನಸುಗಳು ಬುಡ ಕಳಚಿ ಬಿದ್ದಿದ್ದವು. ಇದೆಲ್ಲ ಆದದ್ದು ಅಮ್ಮನ ಗುಂಪಿನ ಗೆಳತಿ ಪಾರ್ವತಿ ಅಕ್ಕನಿಂದಲೇ. ಅವರ ಮನೆಯಲ್ಲಿ ಮಗಳನ್ನು ಇಟ್ಟು ಕೊಂಡು ಊರಿಗೆಲ್ಲ ಮದುವೆ ಮಾಡಿಸುವ ತರಾತುರಿ ಇವರಿಗೆ ಯಾಕೆ? ನನಗೆ ಸಿಟ್ಟು ದುಃಖವೂ ಒತ್ತರಿಸಿ ಬರುತ್ತಿತ್ತು.
ಇಲ್ಲ.. ನನಗೆ ಈ ಮದುವೆ ಬೇಡ ಗಟ್ಟಿಯಾಗಿ ಹೇಳಿದೆ.
‘ಇವರು ಯಾವುದೇ ವರದಕ್ಷಿಣೆ ಬೇಡದೆ ನಿನ್ನ ಕೇಳುವುದೇ ಹೆಚ್ಚು, ಅಷ್ಟಕ್ಕೂ ನಮಗೆ ಇಲ್ಲಿ ಏನಿದೆ? ಇನ್ನು ನೀನು ಹೇಳಿದಂತೆ ಕೆಲಸದಲ್ಲಿ ಇದ್ದ ಹುಡುಗನನ್ನು ಯಾರು ಹುಡುಕಿ ತರುವುದು? ಅವರಿಗೆ ವರದಕ್ಷಿಣೆ ಎಲ್ಲಿಂದ ತರುವುದು? ಇನ್ನೆರಡು ವರುಷ ಕಳೆದರೆ ನಿನ್ನ ತಂಗಿಯರಿಗೆ ಹುಡುಗರು ಕೇಳಿಕೊಂಡು ಬರುವಾಗ ಏನು ಮಾಡುವುದು?’
ಎಲ್ಲದಕ್ಕೂ ಕಾರಣ ನಾನಾಗಿದ್ದೆ.
ಸುರ ಸುಂದರಿಯರಾದ ತಂಗಿಯರ ಮುಂದೆ ನಾನು ತುಸು ಎಣ್ಣೆಗಪ್ಪಿನ ಹುಡುಗಿಯಾದ ಕಾರಣವೇ ಈ ತಾತ್ಸರವೇ? ಇಂತಹ ಅಮ್ಮಂದಿರೂ ಲೋಕದಲ್ಲಿ ಇರುತ್ತಾರಾ? ಅವರೆಲ್ಲರ ದಾರಿ ಸರಿ ಮಾಡಿ ಕೊಡಬೇಕೆಂದರೆ ನನ್ನ ಮದುವೆಯಾಗಬೇಕು ಎನ್ನುವುದು ಯಾವ ನ್ಯಾಯ? ಅದೂ ಅಲ್ಲದೆ ನಿನ್ನ ಜಾತಕದಲ್ಲಿ ದೋಷ ಇರುವುದು ನಿನಗೆ ಗೊತ್ತುಂಟ? ಮೊನ್ನೆ ಕವಡೆ ನರಸಣ್ಣನ ಹತ್ತಿರ ನಾನು ಎಲ್ಲ ತೋರಿಸಿ ಸರಿಗಟ್ಟು ಆದ ಮೇಲೆಯೇ ನಿನಗೆ ಹೇಳಿದ್ದು. ನಿನ್ನ ಜಾತಕ ದೋಷದಿಂದ ಈ ವರುಷ ನಿನ್ನ ಮದುವೆ ಮಾಡಿ ಕೊಡದಿದ್ದರೆ ಬಾರೀ ಕಷ್ಟ ಇದೆಯಂತೆ. ಈ ಜಾತಕ ಎಷ್ಟು ಚೆನ್ನಾಗಿ ಕೂಡಿ ಬರುತ್ತದೆಂದರೆ ಹುಡುಗ ಅಪ್ಪಿ ತಪ್ಪಿಯೂ ಆಚೆ ಈಚೆ ನೋಡುವವನಲ್ಲ. ಮೂವತ್ತ ಎರಡು ಸಾಲವಳಿ ಕೂಡಿ ಬರುತ್ತದೆ. ಇಂತಹ ಜಾತಕ ನಾನು ಇಲ್ಲಿ ತನಕ ನೋಡಿಲ್ಲ. ಈ ವರುಷ ನೀವು ಮದುವೆ ಮಾಡಿ ಕೊಡುವುದೇ ಒಳ್ಳೆಯದು. ಇಲ್ಲದಿದ್ದರೆ ಇನ್ನು ಹತ್ತು ವರುಷ ಆಕೆಗೆ ಕಂಕಣ ಭಾಗ್ಯ ಇಲ್ಲ ಅಂತ ಕವಡೆ ನರಸಣ್ಣ ಕಣಿ ಹೇಳಿದ ಮೇಲೆ ಇನ್ನೇನು? ನರಸಣ್ಣನ ಜಾತಕ ಅಂದರೆ ಗೊತ್ತುಂಟಲ್ಲ. ನಂಬದವರೂ ನಂಬುತ್ತಾರೆ . ಅಮ್ಮನ ಸಮರ್ಥನೆಗಳಿಗೆ ಕೊನೆಯೇ ಇರಲಿಲ್ಲ.
*** **** ***
ಮತ್ತಿಗಾರು ಗ್ರಾಮದ ನರಸಣ್ಣನ ಬಗ್ಗೆ ಈಗ ಆಸು ಪಾಸು ಗೊತ್ತಿಲ್ಲದವರು ಯಾರು? ಈಗಂತೂ ಪರ ಊರಿಂದಲೂ ಜಾತಕ ತಕೊಂಡು ಬರುತ್ತಾರೆ. ಮೊದಲೆಲ್ಲ ಕಣ್ಣು ಮುಚ್ಚಿ ಊರ ದೇವರ ನೆನೆದು ಕವಡೆ ಹಾಕಿ ,ಯಾವುದೋ ಸಮಾಧಿ ಸ್ಥಿತಿಗೆ ಹೋಗಿ ಒಮ್ಮೆ ಕಣ್ಣು ಬಿಟ್ಟು ತಲೆ ಕೆಳಗು,ಮೇಲಾಗಿ ಬಿದ್ದ ಕವಡೆಗಳನ್ನು ಅರೆಕ್ಷಣ ದಿಟ್ಟಿಸಿ, ಮನಸಿನೊಳಗೆ ಏನೋ ಲೆಕ್ಕ ಚಾರ ಹಾಕಿ ಮತ್ತೆ ಕಣ್ಣು ಮುಚ್ಚಿ ಕೇಳುವವರ ಜಾತಕ ಹೇಳಿದರೆಂದರೆ ಅದು ಪಕ್ಕ ಹಾಗೇ ಆಗುತ್ತದೆ, ದೂಸ್ರ ಮಾತೇ ಇಲ್ಲ ಅನ್ನುವಷ್ಟು. ಇತ್ತೀಚೆಗಂತೂ ಕವಡೆ ನರಸಣ್ಣನ ಖ್ಯಾತಿ ಅದೆಷ್ಟೆಂದರೆ ಪಕ್ಕದವೂರು,ಪರವೂರು ಎಲ್ಲ ಕಡೆಯಿಂದಲೂ ಬರುವವರೇ. ಈ ಕವಡೆ ನರಸಣ್ಣನಿಂದಾಗಿ ಅಕ್ಕಪಕ್ಕದ ಜಾತಕದ ಜೋತಿಸರ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದು ಬರೇ ಪೂಜೆ, ಉಪನಯನ ಇಷ್ಟರಲ್ಲೇ ತೃಪ್ತಿ ಪಡ ಬೇಕಾಯಿತು. ಕವಡೆ ನರಸಣ್ಣನ ಮನೆಯ ಮುಂದೆ ಸರತಿ ಸಾಲು ಹೇಗಿತ್ತೆಂದರೆ ಅವರಿಗೆ ಕವಡೆ ಹಾಕಿ ಕೈ ಸೋಲುವಷ್ಟು.
ಅದೂ ಅಲ್ಲದೆ, ಕವಡೆ ನರಸಣ್ಣನದು ಹೆಚ್ಚೇನೂ ಬೇಡಿಕೆ ಇಲ್ಲ. ಅವರು ಕೊಟ್ಟದ್ದು ಇವರು ತಗೊಳುವುದು ಅಷ್ಟೇ. ಆದರೆ ಜನರೇ ತಮ್ಮ ಸ್ವ ಇಚ್ಛೆಯಿಂದ ಹೆಚ್ಚೇ ಕೊಟ್ಟು ಹೋಗುವಾಗ ಕಣ್ಣು ಮುಚ್ಚಿ ಕೈ ಮುಗಿದು ಅದನ್ನೇ ಪ್ರಸಾದ ಅಂತ ಕಣ್ಣಿಗೊತ್ತಿ ಜೋಳಿಗೆಯಲ್ಲಿ ಇಡುವ ಮನುಷ್ಯ.
ಹಾಗೆ ನೋಡಿದರೆ ನರಸಣ್ಣನದು ಹುಟ್ಟಿನಿಂದ ಜಾತಕ ನೋಡುವ ವೃತ್ತಿ ಅಲ್ಲ. ಮನೆ ಕಡೆ ಏನೂ ಇಲ್ಲ. ಏಳನೇ ತರಗತಿವರೆಗೆ ಓದಿ ಶಾಲೆ ಬಿಟ್ಟ ನರಸಪ್ಪ, ಬಡತನದ ದೆಸೆಯಿಂದ ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡುತ್ತಿದ್ದ. ಒಂದು ಸಲ ತಡ ರಾತ್ರಿಯಾಗಿತ್ತು. ಪೇಟೆಯಿಂದ ಬರುತ್ತಿರುವಾಗ ಒಡೆಯ ಜೋಯಿಸರ ಮಗಳು ಶಾಲಿನಿ, ಅಡಿಕೆ ಮಂಡಿಯ ಮಾಲೀಕ ಶರೀಫ್ ಜೊತೆ ಸಿನೇಮಾ ಟಾಕೀಸಿನಿಂದ ಹೊರ ಬರುವುದು ಕಂಡಾಗ ಎದೆ ಧಸಕ್ ಎಂದಿತ್ತು. ಯಜಮಾನ ಜೊತೆ ಹೇಳುವ ಹಾಗೂ ಇಲ್ಲ, ಹೇಳದೆಯೂ ಇಲ್ಲ.
ನರಸಪ್ಪನಿಗೆ ಮಧ್ಯಾಹ್ನ ಊಟ ಮಾಡಿ ಎಲೆ ಅಡಿಕೆ ಜಗಿಯುತ್ತಾ ಮೋನುವಿನ ಜೊತೆಗೆ ಕವಡೆ ಆಡುವ ಹುಚ್ಚು. ಕವಡೆಯೆಂದರೆ ತೋಟದಲ್ಲಿ ಬಿದ್ದ ಬೈನೆ ಮರದ ಬೀಜಗಳನ್ನು ಆಯ್ದು ಅದರಲ್ಲಿ ಆಡುವ ಆಟ. ಬೈನೇ ಮರದ ಬೀಜವೂ ಕಪ್ಪಾಗಿ ಆಕಾರದಲ್ಲಿ ಕವಡೆಯನ್ನೇ ಹೋಲುತ್ತದೆ. ನರಸಪ್ಪ ಈ ಕವಡೆ ಕುಟ್ಟುವುದರಲ್ಲಿ ಎಷ್ಟು ನಿಸ್ಸೀಮನೆಂದರೆ ಪ್ರತೀ ಸಾರೀ ಅವನಿಗೇ ಗೆಲುವು. ಕೆಲವೊಮ್ಮೆ ಜೋಯಿಸರೂ ಶಾಸ್ತ್ರ ಹೇಳಲು ಯಾರೂ ಜನವಿಲ್ಲದಾಗ ಬೇಸರ ಕಳೆಯಲು ನರಸಪ್ಪನ ಜೊತೆಗೂಡಿ ಆಡುವುದುಂಟು. ಸಂದರ್ಭ ನೋಡಿ,ಒಮ್ಮೆ ನರಸಪ್ಪನೇ ಶುರು ಮಾಡಿದ..
ಜೋಯಿಸರೇ, ಇವತ್ತು ಈ ಕವಡೆಯಲ್ಲಿ ನಾನು ಜಾತಕ ಹೇಳುತ್ತೇನೆ ಅಂತ ಕುಶಾಲಿಗೆಂಬಂತೆ ಹೇಳುತ್ತಾ 'ನಿಮ್ಮ ಮಗಳನ್ನು ಬೇಗ ಸ್ವಜಾತಿ ಸಂಬಂಧ ನೋಡಿ ಮದುವೆ ಮಾಡಿ . ಅವಳಿಗೆ ಅನ್ಯ ಧರ್ಮೀಯ ಮದುವೆ ಯೋಗ ಉಂಟು, ಹಾಗೆ ಮದುವೆ ಆದರೂ ಚೆನ್ನಾಗಿರುತ್ತಾಳೆ,ಭಯ ಬೀಳುವಂತದ್ದೇನು ಇಲ್ಲ' ಅಂತ ಸುಮ್ಮಗೆ ಕವಡೆ ಹಾಕಿ ಹೇಳಿದ್ದ.
‘ಹಾಳು ಮೂಳು ಏನೆಲ್ಲ ವದರುವ ಧೈರ್ಯವೋ.. ನರಸತ್ತವನೇ ? ಅವಳು ನನ್ನ ಮಗಳು! ನಾನೇ ಜಾತಕ ನೋಡಿ ಇಟ್ಟಿರುವೆ. ಅವಳದ್ದು ಮಹಾ ಕೇಸರಿ ಯೋಗ ಅಂತ ಬರೆದಿದೆ. ನಿನ್ನ ಬಾಯಿಗಿಷ್ಟು ಬೆಂಕಿ ಹಾಕ..!' ಅನ್ನುತ್ತಾ ಶಲ್ಯ ಜಾಡಿಸಿ ಎಲೆ ಅಡಿಕೆ ತಟ್ಟೆ ನೂಕಿ ಹೋಗಿದ್ದರು. ನರಸಪ್ಪನಿಗೆ ತಾನು ಹೇಳದೆ ತೆಪ್ಪಗೆ ಇರಬೇಕಿತ್ತೇನೋ ಅನ್ನಿಸದಿರಲಿಲ್ಲ. ಅವರವರ ಕರ್ಮ ಅವರು ಅನುಭವಿಸುತ್ತಿದ್ದರು.
ಇದೆಲ್ಲಾ ಆಗಿ ಒಂದು ವಾರ ಆಗಿರಲಿಲ್ಲ. ಅಷ್ಟರಲ್ಲಿ ಶಾಲಿನಿ ಶರೀಫ್ ಊರು ಬಿಟ್ಟು ಓಡಿ ಹೋದ ಸುದ್ದಿ ಜಗಜ್ಜಾಹೀರಾಗಿ, ಜೋಯಿಸರು ಶಾಸ್ತ್ರ ಹೇಳುವುದ ನಿಲ್ಲಿಸಿ ಬಿಟ್ಟರು. ಇದಾದ ಮೇಲೆ ಮೇಲೆ ನರಸಪ್ಪನ ಮಾತು ಊರಿಡೀ ಹಬ್ಬಿ, ಜನರಿಗೆ ಅವನ ಬಗ್ಗೆ ವಿಶೇಷ ಗೌರವ ಉಂಟಾಗಿ,ಅವನು ಕವಡೆ ಹಾಕಿ ಹೇಳಿದ್ದೆಲ್ಲ ನಿಜವಾಗಿ ಮತ್ತೆ ಕೂಲಿ ಕೆಲಸ ಬಿಟ್ಟು , ಇದೇ ವೃತ್ತಿ ಮಾಡಿಕೊಂಡ ನರಸಪ್ಪ, ಕ್ರಮೇಣ ಕವಡೆ ನರಸಣ್ಣನಾಗಿ ಬಿಟ್ಟ.
**** ***** ******
ಅಮ್ಮಾ..ನೀನೂ ಇದನ್ನೆಲ್ಲ ಈ ಕಾಲದಲ್ಲಿ ನಂಬುತ್ತೀಯ..? ದಯನೀಯವಾಗಿತ್ತು ಪ್ರತೀಮಾಳ ದ್ವನಿ.
ನೋಡು! ನನಗೂ ನಂಬುಗೆ ಇರಲಿಲ್ಲ. ಆವತ್ತೊಮ್ಮೆ ಪಾರ್ವತಿಯಕ್ಕನಿಗೆ ಹೇಳಿದ್ದು ನಿಜ ಅಂತ ಗೊತ್ತಾದ ಮೇಲೆಯೇ ಅವರು ಒಮ್ಮೆ ನನ್ನನ್ನು ಕರೆದು ಕೊಂಡು ಹೋದು ನೋಡು. ನೀನೂ ಇದ್ದೆ ತಾನೇ. ನಿಮ್ಮ ಮನೆಯ ಆಧಾರ ಸ್ತಂಭವೇ ಕುಸಿದಿದೆ ಅಂತ ಹೇಳಿದ್ದರ ಅರ್ಥ ಏನು? ನಿನ್ನ ಅಪ್ಪನ ಕುರಿತೇ ಹೇಳಿದ್ದು ತಾನೇ?
ಅಲ್ಲ ಅಮ್ಮಾ,.ಆವತ್ತು ಇವಳು ಓದಿ ಹುಷಾರು ಆಗುತ್ತಾಳೆ. ಸರಕಾರಿ ನೌಕರಿ ಸಿಕ್ಕೇ ಸಿಗುತ್ತೆ. ಇವಳಿಗೆ ವಿದೇಶಕ್ಕೆ ಹೋಗುವ ಮಹಾ ಯೋಗ ಉಂಟು ಅಂತ ಅಪ್ಪನ ಜಾತಕ ತೋರಿಸುವಾಗ ಅವರೇ ಹೇಳಿದ್ದು ತಾನೇ? ಅಷ್ಟು ಬೇಗ ಅವರೇ ಹೇಳಿದ ಜಾತಕ ಬದಲಾಗಿ ಬಿಡುತ್ತದಾ?
‘ಯಾರಿಗೆ ಗೊತ್ತು? ನಿನಗೆ ಮದುವೆ ಆದ ಮೇಲೂ ಆ ಯೋಗ ಇರಬಹುದು. ಬದುಕು ಇನ್ನೂ ಎಷ್ಟು ಉದ್ದ ಉಂಟು. ಇವತ್ತು ನಾಳೆಗೆ ಎಲ್ಲ ಮುಗಿದು ಹೋಗುವುದಿಲ್ಲ ತಾನೇ?'
ನೋಡು, ಬೈಲು ಮನೆ ಚಿನ್ನಪ್ಪ ಗೌಡರ ಮಗ ಪ್ರದೀಪನಿಗೆ ಹೆಣ್ಣು ನೋಡಿದ್ದಕ್ಕೆ ಲೆಕ್ಕ ಉಂಟಾ? ವಯಸ್ಸು ಮೂವತ್ತು ಆದರೂ ಒಂದು ಹುಡುಗಿಯೂ ಸೆಟ್ ಆಗಲಿಲ್ಲ. ಅವನಿಗೇನು ಚೆಂದಕ್ಕೆ ಕಡಿಮೆಯ? ನೂರು ಎಕರೆ ಜಮೀನಿನ ವಾರಸುದಾರನಿಗೆ ಹೆಣ್ಣು ಸಿಗುವುದಿಲ್ಲ ಹೇಳಿದರೆ? ಇದೇ ಪಾರ್ವತಕ್ಕ ಪ್ರದೀಪನನ್ನು ನರಸಣ್ಣನ ಹತ್ರ ಕರೆದು ಕೊಂಡು ಹೋದ ಮೇಲೆ ಅವರು ಹೇಳಿದ ಹಾಗೆ ಆಯ್ತು ನೋಡು. ಪಡು ದಿಕ್ಕಿನ ಕಡೆಯಿಂದಲೇ ಹೆಣ್ಣು ಆಗುವುದು, ಒಬ್ಬಳೇ ಮಗಳು ಇರುವ ಕಡೆಯಿಂದನೇ ಆಗುವುದು, ಮದುವೆ ಆಗುವ ಹುಡುಗಿಯ ಎದೆಯ ಎಡಬಾಗದಲ್ಲಿ ಒಂದು ಮಚ್ಚೆ ಇದೇ ಹೇಳಿದ್ದು ಎಲ್ಲ ಸತ್ಯ ತಾನೇ? ಎಲ್ಲ ಸತ್ಯ ಆಗಿ ಮದುವೆ ಹೂ ಎತ್ತಿದಷ್ಟು ಸುಸೂತ್ರ ಆದದ್ದಕ್ಕೆ ಇದೆಲ್ಲ ನಂಬದ ಪ್ರದೀಪನೇ ತನ್ನ ಕುತ್ತಿಗೆಲಿ ಇದ್ದ ಐದು ಪವನಿನ ಗಟ್ಟಿ ಬಂಗಾರದ ಸರವನ್ನೇ ನರಸಣ್ಣನಿಗೆ ಕೊಟ್ಟು ಬಿಟ್ಟಿದ್ದಾನೆ.
ಈಗ ನೋಡು ಅವ ಎಷ್ಟು ಬರ್ಕತ್ ಆಗಿದ್ದಾನೆ. ಈ ಪಾರ್ವತಿಯೇ ಅವರ ಬಳಿ ಕರೆದು ಕೊಂಡು ಹೋಗಿ,ಜಾತಕ ತೋರಿಸಿ ಎಷ್ಟೋ ಸಂಬಂಧಗಳನ್ನು ಹೊಂದಿಸಿದ್ದಾಳೆ. ಅವಳಿಗೇನು ಲಾಭ ಉಂಟು ಇದರಲ್ಲಿ ಅಂತೀಯ?
ಅಮ್ಮ ಒಮ್ಮೆ ಹಠ ಹಿಡಿದರೆ ಮತ್ತೆ ಅದನ್ನು ಬಿಡುವುದಿಲ್ಲ ಎನ್ನುವುದು ಅವಳಿಗೆ ಗೊತ್ತಿತ್ತು. ಮನೆಯಲ್ಲಿ ದುಡಿಯುವ ಜೀವ ಅವಳೊಬ್ಬಳೇ. ಒಂದೊಂದು ವರುಷದ ಅವಧಿಯಲ್ಲಿ ಹುಟ್ಟಿದ ಮೂರು ಹೆಣ್ಣು ಮಕ್ಕಳು. ಗಂಡ ಶೀನಪ್ಪ ತೋಟದ ಕೆಲಸ ಮುಗಿಸಿ ಸ್ನಾನಕ್ಕೆ ಹೋಗುವಾಗ ಒಂದು ದಿನ ಬಿದ್ದು ಎಡ ಭಾಗ ಸ್ವಾಧೀನ ಕಳೆದು ಕೊಂಡ ಮೇಲೆ ಎಲ್ಲ ಜವಾಬ್ದಾರಿ ಅಮ್ಮ ಸುಮತಿಯ ಮೇಲೆ. ಆವತ್ತು ಪಾರ್ವತಿಯಕ್ಕ ಕೇಳಿಸಲು ಕರೆದುಕೊಂಡು ಹೋದಾಗ ನರಸಣ್ಣ ಪೂಜೆ ಪುರಸ್ಕಾರ ಮಾಡಲು ಹೇಳಿದ್ದರು. ನಾನು ಆ ಮಾತು ಕೇಳಿ ಅದನ್ನು ಮಾಡಿದ್ದರೆ ಇವತ್ತು ಇವರಿಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ ಎಷ್ಟೋ ಸಲ ತನ್ನನ್ನು ತಾನೇ ಹಳಿದುಕೊಂಡಿದ್ದಳು.
ಇರುವ ಸಣ್ಣ ಅಡಿಕೆ ತೋಟ, ಒಂದಿಷ್ಟು, ಬಾಳೆ, ತೆಂಗು, ಕರಿ ಮೆಣಸು ಇವುಗಳಲ್ಲಿ ಇವಳೇ ಕೆಲಸ ಮಾಡಿ, ಅಗತ್ಯ ಬಿದ್ದರೆ ಮಾತ್ರ ಚೀಂಕ್ರನನ್ನು ಅಡಿಕೆ ಕೊಯ್ಯುವ,ಕಾಯಿ ಕೊಯ್ಯುವ ಕೆಲಸಕ್ಕೆ ಕರೆಯುತ್ತಿದ್ದಳು. ಸುಮತಿ ಜವಾಬ್ದಾರಿ ವಹಿಸಿಕೊಂಡ ಮೇಲೆ, ಶೀನ ಗಡಂಗಿಗೆ ಹಾಕುವ ದುಡ್ಡೆಲ್ಲ ಉಳಿದು ಮನೆಯ ಸ್ಥಿತಿ ಸುಧಾರಿಸಿದೆ. ಆದರೆ ಅದೆಲ್ಲ ನರಸಣ್ಣನ ದಯೆಯಿಂದಲೇ ಅನ್ನುವುದು ಅವಳ ನಂಬಿಗೆ. ಹಾಗಾಗಿ ಅವಳು ಒಂದಷ್ಟು ಉದಾರವಾಗಿ ಕೈ ಬಿಚ್ಚಿ ಕೊಡುವುದು ನರಸಣ್ಣನಿಗೆ ಮಾತ್ರ. ಈಗೀಗ ನರಸಣ್ಣ ದೊಡ್ಡ ಮಹಡಿ ಮನೆ ಕಟ್ಟಿ, ಓಡಾಟಕ್ಕೆ ಇನೋವಾ ಕಾರು ಬಂದಿದೆ. ಇತ್ತ ಪಾರ್ವತಿಯಕ್ಕನ ಮನೆ ಪರಿಸ್ಥಿತಿ ಸುಧಾರಿಸಿ, ಅವರಿವರ ಮನೆ ಅಡುಗೆ ಹೋಗುವುದನ್ನು ಬಿಟ್ಟು, ನರಸಣ್ಣನ ಮನೆಯಲ್ಲಿ ಹೋಗುವವರು ಬರುವವರು ಇರುವ ಕಾರಣ ಕಾಯಂ ಆಗಿ ಮಧ್ಯಾಹ್ನದ ಅಡುಗೆಗೆ ಅಲ್ಲಿ ನಿಂತುಕೊಂಡಿದ್ದಾಳೆ. ಉಳಿದಂತೆ ಈಗ ಪೂರ್ತಿಯಾಗಿ ಹೆಣ್ಣು ಗಂಡು ಮಾಡುವುದರಲ್ಲೇ ಆಕೆ ವ್ಯಸ್ತಳಾಗಿ ಆಕೆಯ ಹೆಸರಿನ ಮುಂದೆ ದಲ್ಲಾಳಿ ಹೆಸರು ಅಂಟಿಕೊಂಡು ಆಕೆ ಈಗ ದಲ್ಲಾಳಿ ಪಾರ್ರೋತಿಯಕ್ಕನಾಗಿ ಜನರ ನಾಲಗೆ ತುದಿಯಲ್ಲಿ ಓಡುತ್ತಿದ್ದಾಳೆ.
ಮದುವೆ ಸುಸೂತ್ರವಾಗಿ ನಡೆಯಿತು. ಪಾರ್ರೋತಿ ಅಕ್ಕನಿಗೆ ಅಮ್ಮ ಚೆಂದದ ಸೀರೆ ಉಡುಗೊರೆ ಕೊಟ್ಟದ್ದು ಆಯ್ತು. ನಿಮ್ಮ ಎರಡನೇ ಮಗಳಿಗೆ ನಾನೇ ಗಂಡು ನೋಡಿ ಮದುವೆ ಮಾಡುವುದು. ಮಕ್ಕಳು ಚೆನ್ನಾಗಿದ್ದರಷ್ಟೇ ಸಾಕು ನೋಡಿ ನಮಗೆ! ಅದಾಗಲೇ ಮುಂದಿನ ಜವಾಬ್ದಾರಿಯೂ ತನ್ನದೂ ಅನ್ನುವಂತೆ ಭರವಸೆ ಕೊಟ್ಟು ಸೀರೆ ಕಣ್ಣಿಗೊತ್ತಿಕೊಂಡಳು.
ಗಂಡನ ಮನೆ ಸೇರಿದ ಮೇಲೆ ಈ ಹೆಣ್ಣು ಮಕ್ಕಳು ಯಾಕೆ ಎಲ್ಲ ಅಡಗಿಸಿಟ್ಟುಕೊಳ್ಳುತ್ತಾರೋ? ಪ್ರತಿಮಾಳ ಎಲ್ಲ ಮಹಾಯೋಗ ಬುಡ ಮೇಲಾಗಿ ಅತ್ತೆಯ ದಬ್ಬಾಳಿಕೆ , ಕೆಲಸ ಇಲ್ಲದ ಗಂಡನ ಸೋಮಾರಿತನ,ಮನೆ ಕೆಲಸಕ್ಕೆ ಬರುವ ಪುಷ್ಪ ಜತೆಗೆನ ಸಲಿಗೆ.. ಯಾರಿಗೆ ಹೇಳುವುದು? ಮೇಲೆ ಉಗಿದರೆ ನನ್ನ ಮುಖಕ್ಕೇ ಬೀಳುವುದು ಅನ್ನುವುದು ಅವಳಿಗೆ ಚೆನ್ನಾಗಿ ಗೊತ್ತಿದೆ. ನರಸಣ್ಣ ನೋಡಿದ ಜಾತಕ ಹೀಗಾಗುವುದು ಹೇಗೆ ಸಾಧ್ಯ? ಮರೆ ಸಿಕ್ಕಲೆಲ್ಲ ಪ್ರತಿಮಾ ಬಿಕ್ಕಳಿಸುತ್ತಾಳೆ…
ಇನ್ನು ಒಂದು ವರ್ಷ ಆಗಿಲ್ಲ ತನ್ನ ಮದುವೆಯಾಗಿ, ಅದಾಗಲೇ ತಂಗಿ ಹೇಮಾಳಿಗೆ ಪಾರ್ರೋತಿ ಅಕ್ಕನೇ ಗಂಡು ನೋಡಿದ್ದಾರೆ ಅಂತೆ. ನಿನ್ನೆ ನರಸಣ್ಣನ ಹತ್ತಿರ ಜಾತಕ ತೋರಿಸಿದಾಗ ಇವಳಿಗೆ ಕುಜ ದೋಷ ಇದೆ, ಹಾಗಾಗಿ ಕುಜ ದೋಷ ಇರುವ ಹುಡುಗನೇ ಆಗಬೇಕೆಂದು ಅವರನ್ನೇ ಹುಡುಕಿದ್ದಾಳೆ ಅಂತೆ. ಉಳಿದಂತೆ ಇವಳದ್ದು
ಅಕ್ಕನಿಗಿಂತ ಚೆಂದದ ಯೋಗ ಅಂತ ಅಮ್ಮನೊಂದಿಗೆ ಹೇಳುತ್ತಾಳೆ.
ಏನು ಮಾಡುವುದು ಅಕ್ಕ? ಅಮ್ಮನನ್ನು ಎದುರು ಹಾಕಿ ಕೊಳ್ಳುವುದು ಕಷ್ಟ. ಮದುವೆಯೊಂದೇ ಬದುಕಿನ ಅಂತಿಮ ಗುರಿ ಅನ್ನುವುದು ಅವಳ ತಲೆಯಲ್ಲಿ ತುಂಬಿ ಹೋಗಿದೆಯೋ, ಅಥವಾ ವಯಸ್ಸು ಮೀರಿದರೆ ಮತ್ತೆ ಮದುವೆ ಕಷ್ಟ ಅನ್ನುವ ದೂರದ ಆಲೋಚನೆಯೋ ಗೊತ್ತಿಲ್ಲ. ಆದರೆ ನನಗೆ ಈ ಮದುವೆ ಇಷ್ಟ ಇಲ್ಲ ಅಂತ ಅವಳಂದಾಗ ಪ್ರತಿಮಾಗೆ ಈ ಯೋಗ ,ದೆಸೆ,ಫಲ ನೆನೆದು ಹೊಟ್ಟೆ ತೊಳೆಸಿದಂತಾಯಿತು.
ಇಲ್ಲ !ಹೀಗೆ ಬಿಡಬಾರದು. ನನಗಾದರೋ ದೈರ್ಯಕ್ಕೆ ಯಾರೂ ಇರಲಿಲ್ಲ. ಅವಳಿಗೆ ಬೆಂಬಲಕ್ಕೆ ನಾ ಇದ್ದೇನೆ. ಕಪಾಟಿನಲ್ಲಿರುವ ನಿನ್ನ ಜಾತಕ ಪುಸ್ತಕ ಒಲೆಯುರಿಗೆ ಹಾಕಿ, ಈ ಮದುವೆ ಬೇಡ ಖಡಾ ಖಂಡಿತವಾಗಿ ಹೇಳಿಬಿಡು. ಮುಂದಿನದು ಮತ್ತೆ ನೋಡುವ..ಅದೆಲ್ಲಿಂದ ಬಂತೋ ಧೈರ್ಯ ನನಗೆ..ಕಚ್ಚದಿದ್ದರು ಒಮ್ಮೆ ತಲೆಯೆತ್ತಿ ಆದರೂ ಬುಸುಗುಟ್ಟಿಯಾದರೂ ನೋಡಬೇಕು..
ಪ್ರತಿಮಾಗೆ ಎಲ್ಲವೂ ನೆನಪಿಗೆ ಬಂದು ಕಣ್ಣಾಲಿಗಳು ತುಂಬಿಕೊಂಡವು..
ಇರಲಿ ಬಿಡು ಹೇಮಾ, ಅದೆಲ್ಲ ಈಗ ಯಾಕೆ? ಈ ಯೋಗ ಅನ್ನುವುದು ನಾವು ಮಾಡಿಕೊಳ್ಳುವುದೋ, ಅದಾಗಿಯೇ ಕೂಡಿ ಬರುವುದೋ ಇನ್ನೂ ಅರ್ಥಕ್ಕೆ ನಿಲುಕುದಿಲ್ಲ ನೋಡು. ಈಗ ಆ ಎರಡು ಹೆಣ್ಮಕ್ಕಳ ಭವಿಷ್ಯವನ್ನು ನಿರ್ಧರಿಸುವರು ಯಾರು? ಕಾಲವೇ ನಿರ್ಧರಿಸುತ್ತದೆ ಅನ್ನುವ ಒಣ ಉಪದೇಶ ನಾವು ಕೊಡಬೇಕು ಅಷ್ಟೆ. ನರಸಣ್ಣನ ಕವಡೆ ಏನು ಹೇಳಿಯಾತು ಈಗ?
** *** *** *** **
ಸಮಯ ಹೇಗೆ ಓಡುತ್ತದೆಯೋ ಗೊತ್ತೇ ಆಗುವುದಿಲ್ಲ. ಹೇಮಳ ಮದುವೆ ನಿಕ್ಕಿಯಾಗಿದೆ. ಅವನೂ ಕಾಲೇಜೊಂದರಲ್ಲಿ ಪ್ರೊಪೆಸರ್. ಅಮ್ಮನೂ ಈಗ ಮೊದಲಿನಂತೆ ಇಲ್ಲ. ತುಸು ಗೆಲುವಾಗಿದ್ದಾರೆ. ಯಾವಾಗದರೊಮ್ಮೆ ಮಾತಿನ ನಡುವೆ,
'ನಾ ಸ್ವಲ್ಪ ನಿನ್ನ ವಿಷಯದಲ್ಲಿ ಅವಸರ ಮಾಡಿಬಿಟ್ಟೆ. ಇರಲಿ ಬಿಡು. ಯಾರಿಗೆ ಎಲ್ಲೆಲ್ಲಿ ಯೋಗ ಉಂಟೋ ಅಲ್ಲಿಯೇ ಆಗುವುದು. ನಿನ್ನ ಮಕ್ಕಳಿಂದ ಮಾತ್ರ ನಿನಗೆ ತುಂಬಾ ನೆಮ್ಮದಿ ಉಂಟು.'
ಇರಲಿ ಬಿಡು, ಈಗ್ಯಾಕೆ ಇದರ ಮಾತು. ಏನೇ ಆದರೂ ನೆಮ್ಮದಿ ನಾವು ಕಂಡು ಕೊಳ್ಳುವಂತದ್ದು. ಒಂದೊಂದು ಅನುಭವವೂ ನಮ್ಮನ್ನು ಗಟ್ಟಿ ಗೊಳಿಸುತ್ತದೆ ಮತ್ತು ಬೇರೆಯವರನ್ನು ನಾವು ಅರ್ಥ ಮಾಡಿಕೊಳ್ಳುವ ರೀತಿಯೇ ಬದಲಾಗುತ್ತದೆ. ಅಮ್ಮನಿಗೆ ನಾನೇ ದೈರ್ಯ ತುಂಬುತ್ತಿದ್ದೆ.
ಅದಿರಲಿ, ಜಾತಕ ಎಲ್ಲಿ ತೋರಿಸಿದೆ? ಕೇಳಿದೆ.
ಜಾತಕ ಗೀತಕ ಒಂದೂ ಇಲ್ಲ, ನಾನೇ ಪಂಚಾಗ ಇಟ್ಟು ನೋಡಿದರೆ ಸಾಲಾವಳಿ ಕೂಡಿ ಬರುತ್ತದೆ ಅಷ್ಟು ಸಾಕು ಅಂದಾಗ,
ಅರೆ! ಇದು ಅಮ್ಮನಾ ಅಚ್ಚರಿಯಾಯಿತು. ಅಂದ ಹಾಗೆ ಈ ಸಲ ಪಾರ್ರೋತಿ ಅಕ್ಕನಿಗೆ ಕೊಡುವ ಸೀರೆ ಉಳೀತು ಹೇಳು, ನಕ್ಕಿದ್ದೆ.
ಅಯ್ಯೋ ಆಕೆದು ದೊಡ್ಡ ಕತೆ. ನಿಂಗೆ ಗೊತ್ತಿಲ್ವಾ? ಕೇಳಿದಳು.
ನೀ ಹೇಳಿದರೆ ತಾನೇ ಗೊತ್ತಾಗುವುದು ಅಂದೆ.
ಹೇಮಾ ಮದುವೆ ಗಡಿಬಿಡಿಯಲ್ಲಿ ಇದನ್ನೆಲ್ಲಾ ಹೇಳಲು ಮರೆತಿರಬೇಕು ಅಂದುಕೊಂಡೆ.
ಪಾರ್ರೋತಿ ಆಸ್ತಿ ಮಾರಿ ಮಗಳ ಕರೆದುಕೊಂಡು ಎಲ್ಲೋ ಬೇರೆ ಕಡೆ ಹೋಗಿದ್ದಾಳೆ. ಅವಳ ಗಂಡ ಹೋಗುವಾಗ ಮಾತ್ರ ಮನೆಗೆ ಬಂದು ಹೇಳಿ ಹೋದ. ಎಲ್ಲಿಗೆ ಅಂತ ಹೇಳಲಿಲ್ಲ. ನಾನೂ ವಿಚಾರಿಸಲಿಲ್ಲ. ಯಾಕೋ ಆ ಹೆಣ್ಣು ಮಗಳನ್ನ ನೆನೆಯುವಾಗ ಕರಳು ಕಿತ್ತು ಬರುತ್ತದೆ.
ಅದಾದ ಮೇಲೆ ಕವಡೆ ನರಸಣ್ಣನೂ ಕವಡೆ ಹಾಕುವುದು ಬಿಟ್ಟಿದ್ದಾನೆ ಅನ್ನುವುದು ಸುದ್ದಿ.
ಯಾಕೋ…ಮನಸು ಮ್ಲಾನವಾಯ್ತು. ಬೇರೆ ಏನಾದರೂ ಮಾತಾಡುವ ಅಂತ ಮಾತು ತಿರುಗಿಸಿದೆ.
ಮದುವೆ ಎಲ್ಲಿ ಅಂತ ತೀರ್ಮಾನ ಮಾಡಿದ್ರಿ? ಯಾವ ಛತ್ರ? ಬೇಗ ಗೊತ್ತು ಮಾಡಬೇಕು. ಈಗ ಮದುವೆ ಸೀಸನ್ . ಛತ್ರಗಳೆಲ್ಲ ಅದಾಗಲೇ ದಿನ ನಿಗದಿ ಮಾಡಿ ಇಟ್ಟು ಬಿಡುತ್ತವೆ.
ಹೋ, ನಿಂಗೆ ಹೇಳಿಲ್ಲವಾ ಹೇಮಾ, ಅವಳಿಗೆ ಮಂತ್ರ ಮಾಂಗಲ್ಯ ಮದುವೆ ಸಾಕಂತೆ. ಹುಡುಗನಿಗೂ ಒಪ್ಪಿಗೆ ಉಂಟಂತೆ. ಅವನ ಮನೆಯವರ ಜೊತೆ ಈ ವಿಚಾರ ಮಾತನಾಡಲು ಹೋಗಿದ್ದಾಳೆ.
ಅಮ್ಮ ಹೇಳುತ್ತಲೇ ಇದ್ದಳು. ನಾ ಅವಕ್ಕಾಗಿ ಕೇಳಿಸಿಕೊಳ್ಳುತ್ತಲೇ ಇದ್ದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.