ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಆಶಾ ಜಗದೀಶ್ ಅವರ ‘ನದಿ-ಪಾತ್ರ’

Last Updated 6 ಫೆಬ್ರುವರಿ 2022, 10:16 IST
ಅಕ್ಷರ ಗಾತ್ರ

ಸಂಜೆಯ ಹೊತ್ತಿಗೆ ಶುರುವಾಗಿದ್ದ ಮಳೆ, ಆಕಾಶಕ್ಕೆ ತೂತು ಹೊಡೆದು ಜರಡಿ ಮಾಡಿರುವಂತೆ ಧೋ ಎಂದು ಸೋರಿ ಸುರಿಯುತ್ತಲೇ ಇತ್ತು. ತೀವ್ರವಾದ ಚಳಿಗೆ ಎಲೆಎಲೆಯೂ ಪತರಗುಡುತ್ತಿತ್ತು. ಒಂದೇ ಒಂದು ರಾತ್ರಿಗೆ ಪಟ್ಟಣವೇ ಸುಸ್ತಾಗಿ ಹೋಗಿತ್ತು. ಮಳೆ ಎರಡನೇ ದಿನಕ್ಕೂ ಸಾಂಘವಾಗಿ ಕಾಲಿಟ್ಟಾಗ ಎಲ್ಲರಿಗೂ ಕೊಂಚ ಇರುಸುಮುರುಸಾದಾರೂ, 'ಒಳ್ಳೆ ಮಳೆ ಒಳ್ಳೇ ಮಳೆ" ಅಂತ ಬರಿ ಬಾಯಲ್ಲೆ ಅನ್ನುತ್ತಾ ನಾಳೆ ನಿಲ್ಲಬಹುದು ಬಿಡು ಎಂದುಕೊಂಡರು. ಆದರೆ ಅದು ಹಾಗಾಗಲೇ ಇಲ್ಲ. ನಾಲ್ಕು ದಿನ ಹಗಲೂ ರಾತ್ರಿ ಎನ್ನದೇ ಮಳೆ ಸುರಿಯಿತು. ಈ ಪಟ್ಟಣಕ್ಕೆ ಅಷ್ಟು ಸುಲಭವಾಗಿ ಮುಳುಗುವಂಥದ್ದೇನೂ ಆಗಿರಲಿಲ್ಲ. ಆದರೆ ಊರಿನ ನಡುಮಧ್ಯದಲ್ಲಿ ಬೈತಲೆಯಂತೆ ಇರುವ ಉತ್ತರ ಪಿನಾಕಿನಿಯ ನದಿ ಪಾತ್ರ ಮಾತ್ರ ಕೊಂಚ ಹೆದರಿಸುತ್ತಿತ್ತು ಅಷ್ಟೇ. ಊರನ್ನು ಇಬ್ಬಾಗಿಸುವಂತಹ ಜಾಗದಲ್ಲಿ ಇರುವ ಸೇತುವೆಯವರೆಗೂ ಉತ್ತರ ಪಿನಾಕಿನಿ ಹರಿದು ಯಾವ ಕಾಲವಾಗಿದೆಯೋ... ಈ ನದಿಯನ್ನು ನೋಡಲು ಶುರುಮಾಡಿ ಬಹುಶಃ ಹದಿನೈದೋ ಹದಿನಾರೋ ವರ್ಷಗಳಾಗಿರಬಹುದು. ಅಂದಿನಿಂದಲೂ ಇದರ ಬೆನ್ನಿಗಂಟಿದ ಹೊಟ್ಟೆಯೇ ಜನರಿಗೆ ಕಂಡಿರುವುದು. ಕ್ರಮೇಣ ನದಿಪಾತ್ರವನ್ನು ಒತ್ತಿಕೊಳ್ಳುತ್ತಾ ಅಕ್ರಮವಾಗಿ ಅತಿಕ್ರಮಿಸುತೊಡಗಿದರು ಜನ. 'ನದಿ ತುಂಬುವಂತಹ ಮಳೆ ಇನ್ನು ಮುಂದೆ ಬರುವುದೇ ಇಲ್ಲ, ಬಂದರೂ ಇಲ್ಲಿಯವರೆಗೂ ಹರಿಯುವುದಿಲ್ಲ, ನಾವು ಆಕ್ರಮಿಸಿಬಿಟ್ಟರೆ ನದಿ ನಮ್ಮ ಹತ್ತಿರವೇ ಬರದೆ ತನ್ನ ದಾರಿ ಬದಲಿಸಿಕೊಂಡು ಹರಿದುಬಿಡುತ್ತದೆ’ ಎನ್ನುವಂತಹ ಭಂಡ ಆಲೋಚನೆಗಳನ್ನು ಮಾಡಿಕೊಂಡ ಜನರನ್ನು ಹೆದರಿಸಲಿಕ್ಕೇ ಉತ್ತರಪಿನಾಕಿನಿ ಮೈಕೊಡವಿ ಎದ್ದಿರಬೇಕು ಈಗ. ಹಳ್ಳ ಕೊಳ್ಳ, ಕೆರೆಗಳ ಜಾಗವನ್ನೆಲ್ಲಾ ಕಬಳಿಸಿಯಾಯಿತು. ಇನ್ನು ನದಿಗಳ ಜಾಗವನ್ನೂ ಹೊಟ್ಟೆಗೆ ಸುರಿದುಕೊಳ್ಳುವ ದುರಾಸೆಗೆ ಶಿಕ್ಷೆ ನೀಡುವ ದುರಾಲೋಚನೆಯೇನಾದರೂ ಉತ್ತರ ಪಿನಾಕಿನಿಗೆ ಇದೆಯಾ ಎಂದು ಜನ ಭಯಭೀತರಾಗಿದ್ದರು. ಗಿಣಿ ಶಾಸ್ತ್ರದವರು, ಹಾಲಕ್ಕಿಯವರು, ಗೊರವಯ್ಯಗಳು ಎಂದಿಗಿಂತ ಹೆಚ್ಚಾಗಿ ಪಟ್ಟಣದ ಬೀದಿಗಳಲ್ಲಿ ಕಾಣಿಸಿಕೊಂಡರು. ಜನ, ಭಯ ಭಕ್ತಿಯಿಂದ ತುಸು ಹೆಚ್ಚೇ ದಕ್ಷಿಣೆಯನ್ನು ಕೊಟ್ಟು ಅವರ ಉದರವನ್ನು ತಣಿಸತೊಡಗಿದ್ದರು. ಅವರ ಭವಿಷ್ಯ ನಿಜವಾಗುತ್ತದಾ ಇಲ್ಲವಾ ಯಾರಿಗೂ ಗೊತ್ತಿಲ್ಲ. ಆದರೆ ಕೊನೆಯಲ್ಲಿ ಅವನಾಡುವ ಹಾರೈಕೆ ಮಾತುಗಳನ್ನು ಕೇಳಿ ಸಮಾಧಾನಗೊಳ್ಳಲು ಎಲ್ಲರೂ ಬಯಸುತ್ತಿದ್ದರು. ಈ ಮೂಲಕ ಆ ಜನಕ್ಕೂ ಉದರೋಪಾಯಕ್ಕೊಂದು ದಾರಿಯಾಗಿತ್ತು. ಎಲ್ಲಕ್ಕೂ, ಎಲ್ಲರಿಗೂ ಒಂದು ಕಾಲ ಬರುತ್ತದಲ್ಲ ಹಾಗೆ... ಎಲ್ಲರ ಹೊಟ್ಟೆ ತುಂಬಿಸುವ ಹುಟ್ಟಿಸಿದ ದೇವರ ಲೀಲೆಗೆ ಮಾರುಹೋಗಬೇಕಷ್ಟೇ... ಆದರೆ ಇವೆಲ್ಲ ನಾಟಕಗಳು ನಡೆದದ್ದು ಬೆರಳೆಣಿಕೆಯ ದಿನಗಳು ಮಾತ್ರ.

ಇದೆಲ್ಲ ನಾಲ್ಕು ದಿನದ ಆಟವಾಗಿದ್ದರೆ ಎಲ್ಲರಿಗೂ ಮಜಾ ಸಿಕ್ಕಿರುತ್ತಿತ್ತೇನೋ... ನಾಲ್ಕು ಐದು ಆರನ್ನೂ ದಾಟಿ ಮಳೆ ಸುರಿಯುತ್ತಲೇ ಹೋಯಿತು. ಜನ ಹೊರಗೆ ಬರುವುದೂ ಕಷ್ಟವಾಗತೊಡಗಿತು. ಶಾಲೆ ಕಾಲೇಜುಗಳಿಗೆ ರಜೆ ಘೋಷಣೆಯಾಯಿತು. ಇನ್ನು ಎದ್ದು ಹರಿಯಲಾರಳು ಎಂದುಕೊಂಡಿದ್ದ ಉತ್ತರ ಪಿನಾಕಿನಿ ಮರುಜನ್ಮ ಪಡೆದಿದ್ದಳು. ಇಂತಹ ಅಕಾಲಿಕ ಮಳೆಗೆ ಸಿಕ್ಕು ನಲುಗಿ ಹೋದ ತೃಣಕಾಷ್ಠಗಳಲ್ಲಿ ಒಬ್ಬನಾಗಿದ್ದ ರಮೇಶ. ಈಗ್ಗೆ ಒಂದಷ್ಟು ವರ್ಷಗಳ ಹಿಂದೆ ಪುಕ್ಕಟೆ ಭೂಮಿ ಎಂದು, ನದಿಪಾತ್ರದಲ್ಲಿ ಒತ್ತುವರಿ ಮಾಡಿಕೊಂಡು, ಮನೆ ನಿರ್ಮಿಸಿಕೊಂಡ ಒಂದಷ್ಟು ಜನರಲ್ಲಿ ರಮೇಶನೂ ಒಬ್ಬನಾಗಿದ್ದ. ರಮೇಶ ಶ್ರಮಿಕನಾಗಿದ್ದ. ಕಷ್ಟಪಟ್ಟು ದುಡಿಯುವ ಸ್ವಾಭಿಮಾನಿ ಹುಡುಗನಾಗಿದ್ದ. ಹಾಗಂತ ಅವನೇನು ಸ್ಥಿತಿವಂತನೇನೂ ಆಗಿರಲಿಲ್ಲ. ಅವನು ಹುಟ್ಟಿದಾಗ ಮನೆಯಲ್ಲಿ ಬಡತನ ತಾಂಡವವಾಡುತ್ತಿತ್ತು. ಅವನ ಅಪ್ಪ ಅಮ್ಮ ನಿರ್ಗತಿಕರು. ಇರಲು ಸರಿಯಾದುದೊಂದು ಮನೆಯೂ ಇರಲಿಲ್ಲ. ಒಂದು ಕೋಣೆಯ ಗುಡಿಸಲಿನಂತಹ ಆದರೆ ಗುಡಿಸಲಿಗಿಂತ ಕೊಂಚವೇ ಕೊಂಚ ಸುಭದ್ರವಾಗಿದ್ದ ಮನೆಯಷ್ಟೇ ಇದ್ದದ್ದು. ಅಷ್ಟಕ್ಕೂ ಇಂತಹ ಮನೆಯಲ್ಲಿ ರಮೇಶ ಬೇಕಾಗಿ ಹುಟ್ಟಿದ್ದನಾ, ಬೇಡವಾಗಿ ಹುಟ್ಟಿದ್ದನಾ ಎಂದೇ ಅವನಿಗೆ ತಿಳಿಯುತ್ತಿರಲಿಲ್ಲ. ಕಾರಣ ಅವನ ಅಪ್ಪನಾಗಲೀ ಅಮ್ಮನಾಗಲೀ ಒಂದು ದಿನಕ್ಕಾದರೂ ಅವನನ್ನು ಎತ್ತಿ ಮುದ್ದಿಸಿದ್ದೇ ಅವನಿಗೆ ನೆನಪಿಲ್ಲ. ಕನಿಷ್ಟ ಅಮವಾಸ್ಯೆ ಹುಣ್ಣಿಮೆಗಾದರೂ ಹನಿ ಪ್ರೀತಿ ದಕ್ಕಿದ್ದು ಅವನಿಗೆ ನೆನಪಾಗುವುದಿಲ್ಲ. ಸದಾ ಅಪ್ಪ ಅಮ್ಮನ ಕಾಡು ಜಗಳ, ಕಾಡು ಪ್ರೀತಿಯನ್ನಷ್ಟೇ ನೋಡುತ್ತಾ ಬೆಳೆದವನು ಅವನು. ಹಗಲು, ಮುಡಿ ಕಿತ್ತು ಸೀರೆ ಹರಿಯುವಂತೆ ಅಮ್ಮನನ್ನು ಹೊಡೆಯುತ್ತಿದ್ದ ಅಪ್ಪ, ಹರಿದ ಮೆಟ್ಟನ್ನು ಅಪ್ಪನ ಮೇಲೆ ಎಸೆದು ಸೇಡು ತೀರಿಸಿಕೊಳ್ಳುತ್ತಿದ್ದ ಅಮ್ಮ, ರಾತ್ರಿಯಾದರೆ ಸಾಕು ಒಟ್ಟಿಗೇ ಸರಾಯಿ ಏರಿಸಿಕೊಂಡು, ಮತ್ತಲ್ಲಿ ಅಳುತ್ತಾ ರಾಜಿಯಾಗಿ, ಮಕ್ಕಳಿನ್ನೂ ಎಚ್ಚರವಾಗಿದ್ದಾರೆ ಎನ್ನುವ ಪರಿವೆಯೂ ಇಲ್ಲದೆ ಮೈಥುನದಲ್ಲಿ ತೊಡಗಿಬಿಡುತ್ತಿದ್ದರು. ಇಂತಹ ಹೇಸಿಗೆ ವಾತಾವರಣದಲ್ಲಿಯೇ ರಮೇಶ ಮತ್ತು ಅವನ ತಂಗಿ ರಾಜಿ ಬೆಳೆದದ್ದು.

ರಮೇಶ ಬುದ್ದಿ ಬಂದ ಮೇಲೆ ಮನೆಯಲ್ಲಿ ಮಲಗುವುದನ್ನೇ ಬಿಟ್ಟುಬಿಟ್ಟಿದ್ದ. ಆದರೆ ಅಪ್ಪ ಅಮ್ಮಂದಿರ ವಡ್ಡುತನದಲ್ಲಿ ಅಕ್ಷರಶಃ ನಲುಗಿದವಳೆಂದರೆ ರಾಜಿಯೇ. ಪುಟ್ಟ ರಾಜಿ ಅದೆಷ್ಟು ಮುದ್ದಾಗಿದ್ದಳು. ಆದರೆ ಈ ಮನೆಯಲ್ಲಿ ಇಂಥ ಅಪ್ಪ ಅಮ್ಮನಿಗೆ ಹುಟ್ಟಿದ್ದು ಅವಳದೇ ತಪ್ಪು. ಯಾಕಾದರೂ ಹುಟ್ಟಬೇಕಿತ್ತು...ಅವಳ ಅರಳುಗಣ್ಣುಗಳು ಸದಾ ಚಿಂತಾಕ್ರಾಂತವಾಗಿರುತ್ತಿದ್ದವು. ಒಂಚೂರೂ ಲವಲವಿಕೆ ಇಲ್ಲದೆ ಸದಾ ಗುಮ್ಮಗೆ ಇರುತ್ತಿದ್ದಳು ರಾಜಿ. ಅವಳ ವರ್ತನೆಯನ್ನು ಗಮನಿಸಿದ್ದ ಅವಳ ಟೀಚರೊಬ್ಬರು ಒಮ್ಮೆ ಮನೆಗೆ ಬಂದು ಅವಳ ಮಾನಸಿಕ ಸ್ಥಿತಿಯ ಬಗ್ಗೆ ಅವಳ ಅಪ್ಪ ಅಮ್ಮನಲ್ಲಿ ಹೇಳಲೂ ಪ್ರಯತ್ನಿಸಿದ್ದರು. ಆದರೆ ಈ ಅಪ್ಪ ಅಮ್ಮ ಬಂದ ಅವರನ್ನೇ ಹಿಗ್ಗಾ ಮುಗ್ಗಾ ಬೈದು ಕಳಿಸಿದ್ದರು. ನಂತರದ ದಿನಗಳಲ್ಲಿ ರಾಜಿಯ ಖಿನ್ನತೆ ಹೆಚ್ಚುತ್ತಲೇ ಹೋಯಿತು. ಅವಳ ಮನಸನ್ನು ಒಳೊಳಗೇ ಕೊರೆಯುತ್ತಿದ್ದ ಹುಳುವಾದರೂ ಯಾವುದಿತ್ತೋ ಗೊತ್ತಿಲ್ಲ. ಮನೆಯ ಪರಿಸ್ಥಿತಿಯೋ ಬಡತನವೋ ಅಪ್ಪ ಅಮ್ಮನ ಹೇಸಿದ ವರ್ತನೆಯೋ... ಕೊನೆಗೆ ರಾಜಿ ಎಂಟನೆ ತರಗತಿಯಲ್ಲಿದ್ದಾಗ ಅದೊಂದು ದಿನ ಶಾಲೆಗಂತ ಹೋದವಳು ಊರ ಹೊರಗಿನ ಕೆರೆಯಲ್ಲಿ ಹೆಣವಾಗಿ ಹೋಗಿದ್ದಳು. ಸ್ಥಳದ ಮಹಜರ್ ಮಾಡಿದ ಪೋಲೀಸರು, ಇದು ಆತ್ಮಹತ್ಯೆಯ ಕೇಸು ಎಂದು ದಾಖಲಿಸಿದ್ದರು. ಕೊನೆಗೆ ಪೋಸ್ಟ್ ಮಾರ್ಟಮ್ ರಿಪೋರ್ಟೂ ಅದಕ್ಕೆ ಪೂರಕವಾಗಿಯೇ ಬಂದಿತ್ತು. ಮುದ್ದಾದ ರಾಜಿ ಕರಗಿ ಹೋಗಿದ್ದಳು. ಎರಡು ದಿನ ಮಗಳಿಗಾಗಿ ಕಣ್ಣೀರು ಹಾಕಿ ಅತ್ತಂತೆ ಮಾಡಿದ ರಮೇಶನ ಅಪ್ಪ ಅಮ್ಮ, ಮೂರನೆ ದಿನ ಯಥಾಪ್ರಕಾರ ಕಂಠಪೂರ್ತಿ ಕುಡಿದು ಅವಳನ್ನು ಮರೆತಿದ್ದರು. ರಮೇಶನೊಬ್ಬನೇ ರಾಜಿಯನ್ನು ಮರೆಯಲಾಗದೆ ಒದ್ದಾಡಿ ಹೋಗಿದ್ದ. ಅಣ್ಣ ಎಂದು ಕರೆಯುತ್ತಿದ್ದ ಅವಳ ನವಿರು ದನಿ ಇಲ್ಲವಾಗಿದ್ದನ್ನು ಅವನ ಮನಸು ಒಪ್ಪಿಕೊಳ್ಳಲು ಕಷ್ಟಪಡುತ್ತಿತ್ತು. ತಾನಾದರೂ ತನ್ನ ತಂಗಿಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು, ಅವಳನ್ನು ಜೋಪಾನ ಮಾಡಬೇಕಿತ್ತು ಎಂದೆಲ್ಲಾ ಮರುಗುತ್ತಿದ್ದ. ಆದರೆ ಅವನೂ ಸಹ ಸಣ್ಣ ವಯಸ್ಸಿನವನೇ ಆಗಿದ್ದ. ತನ್ನ ಅಪ್ಪ ಅಮ್ಮನ ಬಗ್ಗೆ ಎಂತಹ ತಿರಸ್ಕಾರ ಹುಟ್ಟಿತ್ತು ಅವನಲ್ಲಿ ಎಂದರೆ ಅವನಿಗೆ ತಂಗಿಯ ಬಗ್ಗೆ ಯೋಚಿಸುವುದೋ ಸಾಧ್ಯವಾಗಿರಲಿಲ್ಲವೇನೋ. ಪರಿಸ್ಥಿತಿಯನ್ನು ನಿಭಾಯಿಸುವ ಪ್ರಬುದ್ಧತೆ ಅವನ ಎಳೆತನಕ್ಕೆ ಸಾಧ್ಯವೂ ಇರಲಿಲ್ಲ. ಆದರೆ ಅವಳು ಇಲ್ಲವಾದಾಗ ಮಾತ್ರ ಅವನ ಪ್ರಪಂಚವೇ ಬರಿದಾಗಿಬಿಟ್ಟಿತ್ತು. ರಾಜಿಯನ್ನು ಮರೆಯಲು ರಮೇಶನಿಗೆ ವರ್ಷಗಳೇ ಬೇಕಾಯಿತು. ಅಪ್ಪ ಅಮ್ಮನಿಂದ ಸಂಪೂರ್ಣ ದೂರವಾಗಿ ಬದುಕತೊಡಗಿದ್ದ. ಯಾರೇ ಕೂಲಿಗೆ ಕರೆದರೂ ಹೋಗುವುದು, ಕಷ್ಟ ಪಟ್ಟು ದುಡಿಯುವುದು, ಅವರು ಕೊಟ್ಟಿದ್ದರಲ್ಲಿಯೇ ಹೊಟ್ಟೆ ಬಟ್ಟೆ ನೋಡಿಕೊಳ್ಳುವುದು ಹೀಗೆ ಅವನ ಜೀವನ ಸಾಗಿತ್ತು. ಹೀಗಿದ್ದ ರಮೇಶ ಯಾವುದೋ ಮಾಯದಲ್ಲಿ ಚಂದ್ರಕಾಂತಿಯ ಪ್ರೇಮಪಾಶದಲ್ಲಿ ಸೆರೆಯಾಗಿ ಹೋಗಿದ್ದ. ಅದೊಂದು ಶುಭ ದಿನ ಇಬ್ಬರೂ, ಯಾರಿಗೂ ಹೇಳದೆ ಕೇಳದೆ, ಓಡಿ ಹೋಗಿ ಮದುವೆಯಾಗಿ ಬಂದುಬಿಟ್ಟಿದ್ದರು. ಚಂದ್ರಕಾಂತಿಯ ಅಪ್ಪ ಅವ್ವ ಮಗಳನ್ನು ಮನಸಿನಿಂದಲೂ ಹೊರಹಾಕಿಬಿಟ್ಟರು. ತಿರಸ್ಕಾರದ ನಡುವೆಯೇ ಹುಟ್ಟಿ ಬೆಳೆದ ರಮೇಶನಿಗೆ ಇದೇನೂ ಹೊಸದು ಅಂತ ಅನಿಸಲಿಲ್ಲ. ತನ್ನ ಒಬ್ಬಂಟಿ ಬಾಳಿಗೆ ಜೊತೆಯಾಗಿ ಬಂದ ಕಾಂತಿಯನ್ನು ಮತ್ತಷ್ಟು ಹುಚ್ಚಾಗಿ ಹೆಚ್ಚಾಗಿ ಹಚ್ಚಿಕೊಂಡು ಪ್ರೀತಿಸಿದ. ತನ್ನೊಳಗೆ ಕಟ್ಟಿಕೊಂಡಿದ್ದ ಪ್ರೀತಿಯ ಅಣೆಕಟ್ಟನ್ನೆಲ್ಲಾ ಅವಳಿಗೆ ಎರೆದ. ತನ್ನ ಪ್ರೀತಿಯ ಐಸಿರಿಯಲ್ಲಿ ಅವಳನ್ನು ಮಹಾರಾಣಿಯಂತೆ ನೋಡಿಕೊಂಡ. ತನ್ನ ರಟ್ಟೆಯ ರಕ್ತ ಬಸಿದು ಅವಳನ್ನು ಸುಖವಾಗಿ ಇಟ್ಟ. ಇದನ್ನೆಲ್ಲ ಮೂರನೆಯವರಿಂದ ತಿಳಿದುಕೊಳ್ಳುತ್ತಿದ್ದ ಕಾಂತಿಯ ತಂದೆ ತಾಯಿ ಅಳಿಯನ ಒಳ್ಳೆಯತನಕ್ಕೆ ಕರಗುತ್ತಿದ್ದರು. ಇನ್ನೇನು ಎಲ್ಲ ಸರಿ ಹೋಗುವ ಸೂಚನೆಗಳು ದಟ್ಟವಾಗಿದ್ದವು...

ರಮೇಶನಿಗೆ ತನ್ನ ಸಂಸಾರವನ್ನು ದೊಡ್ಡದು ಮಾಡಿಕೊಳ್ಳುವ ಮೊದಲು ಬೆಚ್ಚನೊಂದು ಗೂಡು ಕಟ್ಟಬೇಕು, ನಂತರ ತನ್ನ ಸಂಸಾರವನ್ನು ವಿಸ್ತರಿಸಬೇಕು ಎನ್ನುವ ಆಸೆಯಿತ್ತು. ಹಾಗೆಂದೇ ಅವನು ಹತಾಶನಾಗಿ ಸೈಟೊಂದನ್ನು ಹುಡುಕುತ್ತಿದ್ದ. ನಗರಗಳ ದುಃಸ್ಥಿತಿ ಪಟ್ಟಣಗಳಿಗೂ ಬೀಸುತ್ತಿರುವ ಪರಿಣಾಮ ಸೈಟುಗಳ ಬೆಲೆ ಗಗನ ಮುಟ್ಟಿದೆ. ಇನ್ನು ಬಡವರ ಕೈಗೆ ಸೈಟೊಂದು ಎಟುಕಿ, ಗೂಡು ಕಟ್ಟಿಕೊಳ್ಳಬೇಕು ಎನ್ನುವ ಕನಸಂತೂ ಮರೀಚಿಕೆಯೇ ಸರಿ. ಹೀಗಿದ್ದ ಪರಿಸ್ಥಿತಿಯಲ್ಲಿ, ನದಿ ಹರಿಯುತ್ತಿದ್ದ ಜಾಗವನ್ನ ಒತ್ತುವರಿ ಮಾಡಿಕೊಂಡು ಅಣಬೆಗಳಂತೆ ತಲೆಯೆತ್ತುತ್ತಿದ್ದ ಮನೆಗಳನ್ನು ಕಂಡು ರಮೇಶನಿಗೂ ಆಸೆ ಹುಟ್ಟಿತ್ತು. ಧೈರ್ಯ ಮಾಡಿ ಇಲ್ಲೇ ತಾನೂ ಒಂದು ಮನೆ ಕಟ್ಟಿಬಿಡುವುದೆಂದು ನಿರ್ಧರಿಸಿಬಿಟ್ಟಿದ್ದ. ಅದಕ್ಕಾಗಿ ಹಗಲು ರಾತ್ರಿ ಒಂದಾಗಿಸಿ, ಹೊಟ್ಟೆ ಬಟ್ಟೆ ಕಟ್ಟಿ, ಕಾಸಿಗೆ ಕಾಸು ಉಳಿಸಿ ಒಂದಷ್ಟು ಹಣವನ್ನು ಹೊಂದಿಸಿಕೊಂಡಿದ್ದ. ಅಂತೂ ಇಂತೂ ತನ್ನದೆನ್ನುವ ಶೀಟು ಹೊದೆಸಿದ ಪುಟ್ಟ ಮನೆಯೊಂದನ್ನು ಕಟ್ಟುವ ಹೊತ್ತಿಗೆ ಎಂಥದೋ ರಾಜ್ಯ ಗೆದ್ದ ಅನುಭವ. ಆಗ ಅವನಿಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಇನ್ನು ತಾನು ಅಪ್ಪನಾಗಲು ಯಾವ ಅಡ್ಡಿ ಆತಂಕವೂ ಇಲ್ಲ, ತಾನೂ ಸಹ ಹೆಂಡತಿ ಮಕ್ಕಳ ಜೊತೆ ನೆಮ್ಮದಿಯಾಗಿ ಬದುಕಬಹುದು ಎಂದೆಲ್ಲಾ ಸಂಭ್ರಮಿಸಿದ್ದ. ಅದರಂತೇ ಮನೆ ಪ್ರವೇಶ ಮಾಡಿ ವರ್ಷ ತುಂಬುವುದರೊಳಗಾಗಿ ಕಾಂತಿ ಗರ್ಭಿಣಿಯಾಗಿ ಅವನ ಮನದಾಸೆಯನ್ನು ಸಾಕಾರಗೊಳಿಸಿದ್ದಳು. ತಮ್ಮ ಮುದ್ದಿನ ಮಗಳು ಪ್ರಪಂಚಕ್ಕೆ ಬಂದಾಗ ಅವರಿಗಾಗಿದ್ದ ಸಂತೋಷ ಅಷ್ಟಿಷ್ಟಲ್ಲ. ಬಡವರ ಮನೆಯಲ್ಲಿ ಮಕ್ಕಳೇ ಸಿರಿವಂತಿಕೆ. ಅವನ ಬಾಳು ಬಂಗಾರವಾಗಿತ್ತು.

ಎಲ್ಲವೂ ಸುಖಾಂತವಾಯಿತು. ಬದುಕು ಹಳಿಗೆ ಬರತೊಡಗಿತು ಎಂದು ನಿಟ್ಟುಸಿರು ಇಡುವಾಗ, ಅದೆಲ್ಲಿತ್ತೋ ಈ ಮಳೆ ಬೆಂಬಿಡದ ಬೇತಾಳನಂತೆ ಬೆನ್ನಿಗೆ ಬಿದ್ದು ರಮೇಶನ ಪುಟ್ಟ ಸಂಸಾರವನ್ನು ನಡುಗಿಸಿಬಿಟ್ಟಿತ್ತು. ನಂದಿಬೆಟ್ಟದ ತಪ್ಪಲಿನಲ್ಲಿ ಹುಟ್ಟಿ ಹರಿಯುವ ಉತ್ತರ ಪಿನಾಕಿನಿ ಒಂದು ಕಾಲದಲ್ಲಿ ಈ ಭಾಗದ ಜೀವ ನದಿ ಎನಿಸಿದ್ದವಳು. ಯಥೇಚ್ಛ ನೀರನ್ನು ಒದಗಿಸಿ ಭತ್ತ, ಕಬ್ಬು, ಸೊಪ್ಪು, ಹಣ್ಣು, ಹೂವು, ತರಕಾರಿ... ಮುಂತಾದ ಬೆಳೆಗಳಿಗೆ ವರವಾಗಿದ್ದವಳು. ಜನರ ಸುಭಿಕ್ಷವೇ ಅವಳಾಗಿದ್ದಳು. ಆದರೆ ಅದ್ಯಾವ ಶಾಪ ತಟ್ಟಿತೋ ಉತ್ತರ ಪಿನಾಕಿನಿ ಒಣಗಹತ್ತಿದಳು. ಕಡೆಗೆ ಸಂಪೂರ್ಣ ಒಣಗಿ ಬರಿದಾಗಿ ಹೋದಳು. ನೋಡ ನೋಡುತ್ತಲೇ ರೈತರು ಹೆಚ್ಚು ನೀರು ಬೇಡುವ ಕಬ್ಬು ಬೆಳೆಯುವುದನ್ನೇ ನಿಲ್ಲಿಸಿಬಿಟ್ಟರು. ಬೃಹತ್ ಶುಗರ್ ಫ್ಯಾಕ್ಟರಿಗಳೆಲ್ಲ ಲಾಕ್ ಔಟ್ ಆಗಿ ಹೋದವು. ಕರ್ಮಿಕರೆಷ್ಟೋ ಬೀದಿಗೆ ಬಿದ್ದರು. ಬೀದಿಗೆ ಬಿದ್ದವರಲ್ಲಿ ಕೆಲವು ಮಂದಿ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದರು. ಉಳಿದವರೊಂದಿಷ್ಟು ಜನ ಹಪ್ಪಳ ಸಂಡಿಗೆ ಮಾಡಿ ಮಾರತೊಡಗಿದರು. ಅದೇ ಕ್ರಮೇಣ ಸಣ್ಣ ಪ್ರಮಾಣದ ಉದ್ಯಮವಾಗತೊಡಗಿತು. ಈಗಂತೂ ಈ ಊರಿನ ಹಪ್ಪಳಗಳು ಪರ ಊರುಗಳಿಗೆ ರಫ್ತಾಗುತ್ತವೆ. ಇಲ್ಲಿನ ಹಪ್ಪಳಗಳಿಗೆ ಒಂದು ನಿರ್ದಿಷ್ಟ ಗುರುತಿದೆ. ಹೀಗೆ ಬದುಕು ಬಂದಂತೆ ಸ್ವೀಕರಿಸುತ್ತಾ ಬದಲಾಗುವ ಜನ ಉತ್ತರ ಪಿನಾಕಿನಿಯನ್ನಾದರೂ ಹೇಗೆ ನೆನಪಿಟ್ಟಾರು... ಸತ್ತಂತೆ ಕಣ್ಮರೆಯಾದ ಉತ್ತರ ಪಿನಾಕಿನಿಯನ್ನು ಜನರೂ ಮರೆತು ಬಿಟ್ಟರು. ಅವಳಿಲ್ಲದೇ ಬದುಕುವುದನ್ನು ಕಲಿತರು. ಅವಳು ಹರಿಯುತ್ತಿದ್ದ ಜಾಗವನ್ನೆಲ್ಲ ಮೆಲ್ಲಗೆ ಆಕ್ರಮಿಸಿಕೊಳ್ಳತೊಡಗಿದರು...

ಆದರೆ ಇಂಥಾದ್ದೊಂದು ದಿನ ಬರಬಹುದೆಂದು ಯಾರೂ ನಿರೀಕ್ಷಿಸಿರಲೇ ಇಲ್ಲ. ದಿನಗಳು ವಾರವಾಯಿತು, ವಾರ ತಿಂಗಳಾಯಿತು... ಅತಿಥಿಯಂತೆ ಬಂದ ಸೈಕ್ಲೋನ್ ಹೊರಡುವ ಸೂಚನೆಯನ್ನೇ ಕೊಡದೆ, ಬರಸಿಡಿಲಿನಂತೆ ಅಪ್ಪಳಿಸಬಹುದೆಂದು ಯಾರಿಗೆಂದರೆ ಯಾರಿಗೂ ತಿಳಿದಿರಲಿಲ್ಲ. ಆದರೆ ಉತ್ತರ ಪಿನಾಕಿನಿ ಮರುಜನ್ಮ ಪಡೆದುಬಿಟ್ಟಿದ್ದಳು. ಅಬ್ಬರಿಸುತ್ತಾ ಭೋರ್ಗರೆದು ಬರತೊಡಗಿದ್ದಳು. ಸುರಿಯುತ್ತಲೇ ನಡೆದಿದ್ದ ಮಳೆ ಹರಿಯುವ ಕಸುವನ್ನು ಮೊಗೆಮೊಗೆದು ಕೊಡತೊಡಗಿತ್ತು. ನಂದಿಬೆಟ್ಟದ ತಪ್ಪಲಿಂದ ಹಾರಿ ತನ್ನ ಪಾತ್ರಗಳನ್ನು ಆವಾಹಿಸಿಕೊಳ್ಳುತ್ತಾ, ಮೈದುಂಬಿಕೊಳ್ಳುತ್ತಾ ಪಿನಾಕಿನಿ ಹರಿದುಬರತೊಡಗಿದ್ದಳು. ಪ್ರತಿದಿನ ಊರ ತುಂಬ ಇದೇ ಗುಲ್ಲು. ಅಲ್ಲಿಯವರೆಗೂ ಬಂದಿದ್ದಾಳೆ, ಇಲ್ಲಿಯವರೆಗೂ ಬಂದಿದ್ದಾಳೆ, ನಮ್ಮಲ್ಲಿಗೂ ಬರುತ್ತಾಳೆ ಈ ಸರ್ತಿ ಎನ್ನುವ ಮಾತೇ ಎಲ್ಲರ ಬಾಯಲ್ಲೂ... ನದಿ ಪಾತ್ರಗಳಲ್ಲಿ ಮನೆ ಕಟ್ಟಿಕೊಂಡಿದ್ದ ಜನರನ್ನು ಪೋಲೀಸರು ಅಲರ್ಟ್ ಮಾಡತೊಡಗಿದ್ದರು. ಯಾವುದೇ ಕ್ಷಣದಲ್ಲಾದರೂ ನೀರು ನುಗ್ಗಬಹುದು, ಸಾಧ್ಯವಾದಷ್ಟು ಬೇಗ ಮನೆಯನ್ನು ಖಾಲಿ ಮಾಡಿ ಬೇರೆಡೆ ಉಳಿದುಕೊಳ್ಳಿ ಎಂದು. ಎಲ್ಲ ಮನೆಗಳೂ ನಿಧಾನವಾಗಿ ಖಾಲಿಯಾಗತೊಡಗಿದ್ದವು. ಯಾವ ದಾರಿ ದಿಕ್ಕೂ ಇಲ್ಲದ ರಮೇಶ ಮನೆ ಖಾಲಿ ಮಾಡಲು ಆಗದೆ, ಹೋಗಿ ಉಳಿದುಕೊಳ್ಳಲು ಜಾಗವಿಲ್ಲದೆ ಒದ್ದಾಡತೊಡಗಿದ್ದ. ಮನೆಯಲ್ಲಿ ಮೂರು ತಿಂಗಳ ಕೂಸು, ಬಾಣಂತಿ ಬೇರೆ. ಸಾಧ್ಯವಾದಷ್ಟೂ ಕಾಂತಿಯ ಎದುರು ತನ್ನ ಆತಂಕವನ್ನು ತೋರಿಸಿಕೊಳ್ಳದೆ, ಏನಾದರೂ ದಾರಿ ಸಿಗುತ್ತದಾ ಎಂದು ಹುಡುಕುತ್ತಿದ್ದ. ಮಾವನ ಮನೆಯ ಮುಂದೆ ಹೋಗಿ ನಿಲ್ಲಲು ಅವನ ಸ್ವಾಭಿಮಾನ ಒಪ್ಪಿರಲಿಲ್ಲ.

ನೀರು ಜಕ್ಕಲ ಮಡುಗು ಜಲಾಶಯ ತುಂಬಿ ಹರಿಯುತ್ತಿದೆಯಂತೆ, ಶ್ರೀನಿವಾಸ ಸಾಗರವನ್ನೂ ತುಂಬಿ ಮುಂದಕ್ಕೆ ನೀರು ಹರಿದು ಬರುತ್ತಿದೆಯಂತೆ ಎಂದೆಲ್ಲ ಸುದ್ದಿ ಬಂದಾಗ ಅವನ ಆತಂಕ ಹೇಳತೀರದು. ಗೆಳೆಯರು, ಸಂಬಂಧಿಕರು, ಪರಿಚಯಸ್ಥರು... ಊಹ್ಞೂ ಅವನ ಬಳಗದ ಯಾರೂ ಅವನ ಸಹಾಯಕ್ಕೆ ಬರದೆ ಹೋದರು. ಬೀದಿ ಬದಿಯಲ್ಲಾದರೂ ಸರಿ ಉಳಿದರಾಯಿತು, ಮೊದಲು ಮನೆ ಖಾಲಿ ಮಾಡಬೇಕು, ಜೀವವಿದ್ದರೆ ತಾನೆ ಬದುಕು ಎಂದು ತೀರ್ಮಾನಿಸಿಕೊಂಡ. ಪ್ರತಿದಿನದಂತೆಯೇ ಇದೊಂದು ರಾತ್ರಿ ಕಾಪಾಡು ಶಿವನೇ ಎನ್ನುತ್ತಲೇ ಇಂದು ರಾತ್ರಿಯೂ ಮಲಗಲು ನೋಡಿದ. ರಾತ್ರಿ ಸರ್ವತ್ತಾದರೂ ನಿದ್ದೆ ಸುಳಿಯಲಿಲ್ಲ. ಅಂಡು ಸುಟ್ಟ ಬೆಕ್ಕಿನಂತೆ ಒಳಗೆ ಹೊರಗೆ ಸುತ್ತಾಡುತ್ತಿದ್ದ ರಮೇಶ. ಆಗಾಗ ಮಗು ಎದ್ದು ಗಲಾಟೆ ಮಾಡುತ್ತಿತ್ತು. ಕಾಂತಿ ಮೆತ್ತಗೆ ಲಾಲಿ ಹಾಡುತ್ತಾ ಮೊಲೆಯನ್ನು ಮಗುವಿನ ಬಾಯಿಗೆ ತುರುಕಿ ಸುಮ್ಮನಿರಿಸತೊಡಗಿದ್ದಳು. ಮಗು ಯಾಕೋ ಇವತ್ತು ಎಂದಿನಂತಿಲ್ಲ ಎನಿಸಿತು ರಮೇಶನಿಗೆ. ರಾತ್ರಿಯಿಡೀ ನೆಮ್ಮದಿಯಿಂದ ಮಲಗಲೇ ಇಲ್ಲ ಮಗು. ಕಾಂತಿ ಗಾಬರಿಯಾದಳು. ಮೊಲೆಯಲ್ಲಿ ಹಾಲು ಬರುತ್ತಿದೆಯಾ ಇಲ್ಲವಾ ಎಂದು ಮೊಲೆ ತೊಟ್ಟನೊಮ್ಮೆ ಹಿಂಡಿ ನೋಡಿದಳು. ಎಷ್ಟು ಹಿಂಡಿದರೂ ತೊಟ್ಟು ಹಾಲೂ ಜಿನುಗಲಿಲ್ಲ. ಕಣ್ಣೀರು ಉಕ್ಕಿ ಬಂತು ಅವಳಿಗೆ. ಮನೆಯಲ್ಲಿ ಹಾಲೂ ಇರಲಿಲ್ಲ. ಹಾಲಿನ ಬಾಟಲಿಗೆ ಸಕ್ಕರೆ ಬೆರೆಸಿದ ನೀರು ತುಂಬಿಸಿ ಬಾಯಿಗಿಟ್ಟು ಮಗುವನ್ನು ಸುಮ್ಮನಿರಿಸಲು ಪ್ರಯತ್ನಿಸಿದಳು. ಎನೇ ಮಾಡಿದರೂ ಮಗು ಸುಮ್ಮನಾಗಲಿಲ್ಲ. ರಮೇಶನಿಗೂ ಏನು ಮಾಡುವುದೆಂದು ತಿಳಿಯಲಿಲ್ಲ. ಕೊನೆಗೆ ಕಾಂತಿ ತಡೆಯಲಾರದೆ ಪೂರ್ಣಿಮಕ್ಕನಿಗೆ ಕಾಲ್ ಮಾಡಿ ಒಂದು ಲೋಟ ಹಾಲು ಕೇಳಿ ಇಸಿದುಕೊಂಡು ಬಂದಳು. ಆ ಸರಹೊತ್ತಿನಲ್ಲಿ ಹಾಲನ್ನು ನಸು ಬೆಚ್ಚಗೆ ಮಾಡಿ ಮಗುವಿಗೆ ಕುಡಿಸಿದಳು. ಮಗು ಮಲಗಿ ನಿದ್ರಿಸಿತು. ಮಗುವನ್ನು ಮಲಗಿಸುತ್ತಾ ಕಾಂತಿ ತಾನೂ ನಿದ್ದೆಗೆ ಜಾರಿದಳು.

ರಮೇಶನ ನಿದ್ದೆ ಮಾತ್ರ ಹಾರಿ ಹೋಗಿತ್ತು. ಗಡಿಯಾರ ನೋಡಿದ. ಬೆಳಗಿನ ಜಾವ ನಾಲಕ್ಕಾಗಿತ್ತು. ಕಾಂತಿಗೆ ‘ಜೆಸಿಬಿ ಕೆಲಸ ಇದೆ ಇವತ್ತು. ಬೇಗ ಹೋಗಬೇಕು. ಬೇಗ ಮರಳಿ ಬರುವೆ, ಸಾಧ್ಯವಾದಷ್ಟು ಮನೆ ಸಾಮಾನನ್ನು ಕಟ್ಟಿ ಇಟ್ಟುಕೋ’ ಎಂದು ಹೇಳಿ ಬೈಪಾಸ್ ರಸ್ತೆಯಲ್ಲಿದ್ದ ಬ್ರಿಡ್ಜಿನ ಬಳಿ ಬಂದ. ಸದ್ಯ ನೀರಿನ್ನೂ ಅಲ್ಲಿಯವರೆಗೆ ಬಂದಿರಲಿಲ್ಲ. ಬೆಳಕು ಹರಿಯುತ್ತಲೇ ಹೆಂಡತಿಯೊಂದಿಗೆ ಮನೆ ಖಾಲಿ ಮಾಡಬೇಕು ಎಂದುಕೊಂಡ. ಬೆಳಕು ಹರಿಯುವುದನ್ನೇ ಕಾಯುತ್ತಾ ಅಲ್ಲೇ ನಿಂತ. ಹತ್ತು ನಿಮಿಷ ಕಳೆಯುತ್ತಿತ್ತು. ಮುಂದೆ ಏನು ಮಾಡುವುದು ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದ್ದ ರಮೇಶ. ಆಕಾಶದಲ್ಲಿ ಬೆಳಕು ಕಷ್ಟಪಟ್ಟು ಹೊರಬರುತ್ತಿತ್ತು. ಚುಕ್ಕಿಗಳೆಲ್ಲಾ ರೌದ್ರ ಸೈಕ್ಲೋನಿಗೆ ಹೆದರಿ ಬಚ್ಚಿಟ್ಟುಕೊಂಡಿದ್ದವು. ಆಗ ಇದ್ದಕ್ಕಿದ್ದಂತೆ ಅದೆಲ್ಲಿಂದ ಬಂತೋ ನದಿ, ನೋಡ ನೋಡುತ್ತಲೇ ಬ್ರಿಡ್ಜನ್ನು ದಾಟಿ ಮುಂದಕ್ಕೆ ಓಡತೊಡಗಿತು. ಅನ್ಯಮನಸ್ಕನಾಗಿ ನಿಂತಿದ್ದ ರಮೇಶ, ಒಮ್ಮೆಲೆ ಅಯ್ಯಯ್ಯೋ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಲೇ ಮನೆಕಡೆ ಓಡತೊಡಗಿದ. ಬಸ್‌ಸ್ಟ್ಯಾಂಡ್‌ ಹತ್ತಿರದ ಬ್ರಿಡ್ಜ್ ಬಳಿಗೆ ಬರುವ ಹೊತ್ತಿಗೆಲ್ಲಾ ನದಿ ಬಿಡ್ಜನ್ನೂ ಮುಳುಗಿಸಿ ರಸ್ತೆಯ ಮೇಲೆ ಮೂರಡಿ ಹರಿಯುತ್ತಾ ಮುಂದಕ್ಕೆ ಹಾದುಬಿಟ್ಟಿತ್ತು. ಅಲ್ಲಿಂದ ರಸ್ತೆ ದಾಟುವುದು ಕಷ್ಟವಾಗಿತ್ತು. ನದಿಯ ಸೆಳೆವನ್ನು ಕಂಡ ಜನ ಹೌಹಾರಿದ್ದರು. ಮನೆಗೆ ತಲುಪಲಿಕ್ಕಿದ್ದ ಹತ್ತಿರದ ದಾರಿಯೇ ಮುಚ್ಚಿಹೋದಂತಾಗಿತ್ತು ರಮೇಶನಿಗೆ. ಏನು ಮಾಡುವುದೆಂದು ತೋಚದೇ ಪೇಚಾಡಿದ. ಕಣ್ಣ ಮುಂದೆ ಕಾಂತಿ ಮತ್ತು ಅವನ ಹಸುಗೂಸು ಬಂದರು. ಕಣ್ಣೀರು ಕೋಡಿಬಿದ್ದು ಹರಿಯತೊಡಗಿತು. ಮತ್ತೊಂದು ದಾರಿ ಹಿಡಿದರೆ ಮನೆ ತಲುಪಲು ತಡವಾಗುತ್ತದೆ ಎಂದು ಗೊತ್ತಿದ್ದ ಅವನು, ಹಿಂದೆ ಮುಂದೆ ಯೋಚಿಸದೇ, ರಭಸದಿಂದ ಹರಿಯುತ್ತಿದ್ದ ನದಿಯನ್ನೂ ಲೆಕ್ಕಿಸದೇ ರಸ್ತೆ ದಾಟಲು ಹೊರಟ. ಅಲ್ಲಿದ್ದವರು ಎಷ್ಟೇ ಬೇಡವೆಂದು ಬೊಬ್ಬೆಯಿಟ್ಟರೂ ಅದನ್ನವನು ಕೇಳಿಸಿಕೊಳ್ಳಲೇ ಇಲ್ಲ. ಬ್ರಿಡ್ಜನ್ನು ಅರ್ಧ ದಾಟುವುದರೊಳಗಾಗಿ, ಏರಿ ಬರುತ್ತಿದ್ದ ನದಿ ಅವನನ್ನು ಪ್ಲಾಸ್ಟಿಕ್ ಬೊಂಬೆಯಷ್ಟೇ ಸಾರಾಗವಾಗಿ ಕೊಚ್ಚಿಕೊಂಡು ಹೊರಟೇ ಹೋಯಿತು. ಜನ ಜೋರಾಗಿ ಕಿರುಚತೊಡಗಿದರು. ಸೆಲ್ಫೀ ತೆಗೆದುಕೊಳ್ಳುವುದರಲ್ಲಿ, ನೀರು ಹರಿಯುವುದನ್ನು ವೀಡಿಯೋ ಮಾಡುವುದರಲ್ಲಿ ನಿರತರಾಗಿದ್ದ ಒಂದಷ್ಟು ಜನ, ರಮೇಶ ಉತ್ತರ ಪಿನಾಕಿನಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನೂ ವಿಡಿಯೋ ಮಾಡಿಕೊಳ್ಳತೊಡಗಿದರು. ಅಷ್ಟರೊಳಗೆ ಪಕ್ಕದಲ್ಲಿದ್ದ ಪೋಲೀಸ್ ಸ್ಟೇಶನ್ನಿನಿಂದ ಪೋಲೀಸರು ಧಾವಿಸಿ ಬಂದರು. ರೆಸ್ಕ್ಯು ಟೀಮನ್ನು ಸಂರ್ಕಿಸತೊಡಗಿದರು. ಅಸಹಾಯಕರಂತೆ ನೋಡುತ್ತ ನಿಂತಿದ್ದ ಜನರ ಗುಂಪಲ್ಲಿ ಈಜು ಬರುವ ಧೈರ್ಯವಂತರಿದ್ದರೂ ಅಪಾಯದ ತುತ್ತತುದಿಯಲ್ಲಿ ನಿಂತು ಹರಿಯುತ್ತಿದ್ದ ಪಿನಾಕಿಗೆ ಇಳಿಯಲು ಭಯಪಟ್ಟರು. ತನ್ನನ್ನು ಮರೆತದ್ದಕ್ಕೆ, ತನ್ನ ಪಾತ್ರವನ್ನೆಲ್ಲ ಕಬಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲೆಂಬಂತೆ ರೌದ್ರ ನರ್ತನ ಮಾಡುತ್ತಾ ಹರಿಯುತ್ತಿದ್ದ ಉತ್ತರ ಪಿನಾಕಿನಿಯಲ್ಲಿ ಇಳಿಯಲು ಭಯಪಟ್ಟು ಹಿಂಜರಿದರು.

ಅಲ್ಲಿಂದ ಕೆಲವೇ ಕೆಲವು ಫರ್ಲಾಂಗಿನಷ್ಟೇ ದೂರದಲ್ಲಿದ್ದ ರಮೇಶನ ಮನೆಗೆ ಪಿನಾಕಿನಿ ಹಟಾತ್ ನುಗ್ಗಿಯೇ ಬಿಟ್ಟಾಗ, ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಹಾಲುಣಿಸುತ್ತಿದ್ದ ಕಾಂತಿ ಹೌಹಾರಿ ‘ಅಯ್ಯಯ್ಯೋ.. ಅಪ್ಪಪ್ಪೋ.. ನನ್ ಮಗು... ನನ್ ಮಗು... ಯಾರಾನ ಉಳುಸ್ರಪ್ಪೋ...’ ಎಂದು ಬೊಬ್ಬಿರಿಯತೊಡಗಿದ್ದು ಕೇರಿಯನ್ನೆಲ್ಲಾ ಮಾರ್ಧ್ವನಿಸಿ ಜನ ಮನೆಯಿಂದ ಹೊರಬಂದು ನಿಂತು ಭಯಕ್ರಾಂತರಾಗಿ ನೋಡತೊಡಗಿದರು...

ಆಗ ಅದೆಲ್ಲಿತ್ತೋ ನಸುಗಪ್ಪು ಮೊಡದೊಳಕ್ಕೆ ತೂರಿ ಬಂದ ಕಡುಗಪ್ಪು ಮೋಡದ ರಾಶಿ ಗುಡುಗುತ್ತಾ ಮಿಂಚುತ್ತಾ ಕಾಳಿಯ ರೂಪತಾಳಿ ಮಳೆಯಾಗಿ ಸುರಿಯತೊಡಗಿತು... ಎಲ್ಲ ದನಿಗಳನ್ನೂ ಮಳೆಯ ಶಬ್ದ ತಿಂದುಕೊಂಡಿತು. ಪಿನಾಕಿನಿ ಮತ್ತೂ ವಿಜೃಂಭಿಸುತ್ತಾ ಹರಿಯತೊಡಗಿದಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT