ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ವಿಕೇಂದ್ರೀಕರಣಕ್ಕೆ ಒತ್ತು

Last Updated 13 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

* ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಕೈಗೊಂಡಿರುವ ಹೊಸ ಯೋಜನೆಗಳ ಬಗ್ಗೆ ಹೇಳಿ.
ನಿಯಮಾವಳಿಗಳ ಅನ್ವಯವೇ ಅಕಾಡೆಮಿಯ ಕಾರ್ಯ ಯೋಜನೆ ವಿಸ್ತರಿಸುವುದು ನನ್ನ ಉದ್ದೇಶ. ಮಂಗಳೂರಿನಲ್ಲಿ ನಡೆದ ಪ್ರಾದೇಶಿಕ ಚಲನಚಿತ್ರೋತ್ಸವ ಇದರ ಮೊದಲ ಹೆಜ್ಜೆ. ಅಲ್ಲಿ ತುಳು, ಕೊಡವ, ಬ್ಯಾರಿ, ಕೊಂಕಣಿ, ಲಂಬಾಣಿ ಭಾಷೆಯ ಹತ್ತು ಚಿತ್ರಗಳ ಪ್ರದರ್ಶನ ನಡೆಯಿತು. ಸೋದರ ಭಾಷೆಗಳಿಗೆ ಪ್ರಾತಿನಿಧ್ಯ ನೀಡಬೇಕು. ಆ ಭಾಷೆಗಳು ಸಮೃದ್ಧವಾಗಿರುವ ಸ್ಥಳದಲ್ಲಿಯೇ ಚಿತ್ರೋತ್ಸವ ನಡೆಸಬೇಕು. ಇದರಲ್ಲಿ ಯಶಸ್ಸು ಸಿಕ್ಕಿದೆ. ದಸರಾ ಮುಗಿದ ಬಳಿಕ ಬೆಳಗಾವಿ, ಗುಲ್ಬರ್ಗದಲ್ಲಿ ಚಿತ್ರೋತ್ಸವಕ್ಕೆ ನಿರ್ಧರಿಸಿದ್ದೇನೆ.

* ಸಾಂಸ್ಕೃತಿಕ ವಿಕೇಂದ್ರೀಕರಣಕ್ಕೆ ಕೈಗೊಂಡಿರುವ ಕ್ರಮಗಳೇನು?
ಚಲನಚಿತ್ರೋತ್ಸವಗಳು ಬೆಂಗಳೂರಿಗೆ ಸೀಮಿತಗೊಂಡಿವೆ. ಜಿಲ್ಲಾಮಟ್ಟಕ್ಕೂ ಕೊಂಡೊಯ್ಯಬೇಕಿದೆ. ಇದಕ್ಕಾಗಿ ಚಿತ್ರ ಸಮಾಜಗಳನ್ನು ಗುರುತಿಸುವ ಕೆಲಸ ನಡೆದಿದೆ. ಸುಳ್ಯ, ಮಂಡ್ಯ, ಧಾರವಾಡ, ಶಿವಮೊಗ್ಗ, ಗುಲ್ಬರ್ಗ, ಹುಳಿಯಾರಿನಲ್ಲಿ ಸಿನಿಮಾ ಕ್ಲಬ್‌ಗಳಿವೆ. ಅವು ಕ್ರಿಯಾಶೀಲವಾಗಿವೆ. ಅಲ್ಲಿನ ಮುಖ್ಯಸ್ಥರ ಸಭೆ ಕರೆಯಲಾಗುವುದು. ವಾರದಲ್ಲಿ ಮೂರು ದಿನಗಳ ಕಾಲ ಈ ಕ್ಲಬ್‌ಗಳ ಮೂಲಕ ಅಲ್ಲಿನ ಜನರಿಗೆ ಸಿನಿಮಾ ತೋರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅಕಾಡೆಮಿಯಿಂದಲೇ ಅವರಿಗೆ ಒಳ್ಳೆಯ ಸಿನಿಮಾಗಳನ್ನು ಪೂರೈಸುತ್ತೇವೆ.

* ಬೆಂಗಳೂರು ಅಂತರರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ನ ಅಧ್ವಾನಗಳಿಗೆ ಕೊನೆ ಇಲ್ಲವೇ?
ಬೆಂಗಳೂರು ಅಂತರರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ ನಿರ್ದಿಷ್ಟ ದಿನದಂದು ನಡೆಯುತ್ತಿಲ್ಲ. ಇದರಿಂದ ಚಿತ್ರೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಸಿಗುವುದು ಕಷ್ಟಕರ. ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ. ಪ್ರತಿವರ್ಷ ನಿಗದಿತ ದಿನದಂದು ಫೆಸ್ಟಿವಲ್‌ ನಡೆಸಲು ಕ್ರಮವಹಿಸಲಾಗುತ್ತದೆ. ವಿಶ್ವದ ಬೇರೆ ಬೇರೆ ಸ್ಥಳಗಳಲ್ಲೂ ಫೆಸ್ಟಿವಲ್‌ಗಳು ನಡೆಯುತ್ತವೆ. ಹಾಗಾಗಿ, ಸಮಯ ಹೊಂದಾಣಿಕೆ ಮಾಡಿಕೊಂಡು ಮುಂಬರುವ ಜನವರಿ ಬಳಿಕ ಚಿತ್ರೋತ್ಸವ ನಡೆಸುವುದು ಸೂಕ್ತ. ಹಿಂದೆ ನಡೆದ ಫೆಸ್ಟಿವಲ್‌ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಎಲ್ಲರ ಅಭಿಪ್ರಾಯವನ್ನು ಕ್ರೋಡೀಕರಿಸಿ ಲೋಪದೋಷವಿಲ್ಲದೆ ಪ್ರಜಾಸತ್ತಾತ್ಮಕವಾಗಿ ಚಿತ್ರೋತ್ಸವ ನಡೆಸುತ್ತೇನೆ.

* ಅಕಾಡೆಮಿಗೆ ಶೈಕ್ಷಣಿಕ ಸ್ವರೂಪ ನೀಡಲು ಏನು ಮಾಡುತ್ತಿದ್ದೀರಿ?
ಕನ್ನಡದಲ್ಲಿ ಸಿನಿಮಾ ಕುರಿತ ಪುಸ್ತಕಗಳು ವಿರಳ. ಟೆಂಟ್‌ ಶಾಲೆ ನಡೆಸುತ್ತಿರುವ ನನಗೆ ಇದರ ಅರಿವಿದೆ. ಚಲನಚಿತ್ರದ ವಿವಿಧ ಆಯಾಮಗಳನ್ನು ಕುರಿತ ಪುಸ್ತಕಗಳ ಪ್ರಕಟಣೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇನೆ. ಚಿತ್ರಕಥೆ ಕುರಿತು ಎನ್‌.ಎಸ್. ಶಂಕರ್‌ ಪುಸ್ತಕ ಬರೆದಿದ್ದಾರೆ. ಈ ತಿಂಗಳಾತ್ಯದಲ್ಲಿ ಇದು ಬಿಡುಗಡೆಯಾಗಲಿದೆ. ಸಿನಿಮಾ ಕುರಿತ ಸಾಕಷ್ಟು ಇಂಗ್ಲಿಷ್‌ ಪುಸ್ತಕಗಳನ್ನು ತರಿಸಿದ್ದೇನೆ. ಆದರೆ, ಅನುವಾದಕರ ಕೊರತೆ ಇದೆ. ಇದಕ್ಕೊಂದು ಸಮಿತಿ ರಚಿಸಿ ಅನುವಾದಕ್ಕೆ ಕ್ರಮವಹಿಸಲಾಗುವುದು. ಆರ್.ಎಂ. ಕೃಷ್ಣಪ್ರಸಾದ್‌ ‘ಸಿನಿಮಾ ಛಾಯಾಗ್ರಹಣ’ ಎಂಬ ಪುಸ್ತಕ ಬರೆದಿದ್ದಾರೆ. ಹಳೆಯ ಕಾಲದ ಸಿನಿಮಾ ಕ್ಯಾಮೆರಾಗಳ ಬಳಕೆ ಮೇಲೆ ಇದು ಬೆಳಕು ಚೆಲ್ಲುತ್ತದೆ. ಬಹಳ ಉಪಯುಕ್ತ ಪುಸ್ತಕ. ಡಿಜಿಟಲ್ ಕ್ಯಾಮೆರಾಗಳು ಬಂದರೂ ನೆರಳಿನ ಸಂಯೋಜನೆ ಬಳಸಿ ಚಿತ್ರೀಕರಿಸುವ ಬಿಂಬಗ್ರಹಣ ಬದಲಾಗುವುದಿಲ್ಲ. ಹೊಸ ಕಾಲದ ಕ್ಯಾಮೆರಾಗಳ ಬಗ್ಗೆಯೂ ಈ ಪುಸ್ತಕದಲ್ಲಿ ಸೇರಿಸಲಾಗುತ್ತಿದೆ. ಈಗಾಗಲೇ, ಒಂದು ಅಧ್ಯಾಯ ಮುಗಿದಿದೆ. ಎರಡನೇ ಅಧ್ಯಾಯ ಪೂರ್ಣಗೊಂಡ ಬಳಿಕ ಈ ಪುಸ್ತಕ ಪರಿಷ್ಕೃತ ಮುದ್ರಣ ಕಾಣಲಿದೆ.

* ಚಿತ್ರರಂಗಕ್ಕೆ ಬರುವ ಹೊಸಬರಿಗೆ ಅಕಾಡೆಮಿಯಿಂದ ಕೈಗೊಂಡಿರುವ ಯೋಜನೆಗಳೇನು?
ಸಿನಿಮಾ ಅಸೋಸಿಯೇಷನ್ ಕೋರ್ಸ್‌ ಸಂಬಂಧ ಪುಣೆಯ ಫಿಲ್ಮ್‌ ಇನ್‌ನ್ಟಿಟ್ಯೂಟ್‌ ಜೊತೆಗೆ ಒ‍ಪ್ಪಂದ ಮಾಡಿಕೊಳ್ಳಲಾಗಿದೆ. ನವೆಂಬರ್‌ನಲ್ಲಿ ಐದು ದಿನಗಳ ಕಾಲ ಕಾರ್ಯಾಗಾರ ನಡೆಯಲಿದೆ. ಸಾಕಷ್ಟು ಯುವಜನರು ಕಿರುಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಉತ್ತಮ ಮಾರ್ಗದರ್ಶನ ನೀಡುವ ಅಗತ್ಯವಿದೆ. ಮೈಸೂರಿನ ವಿಜ್ಞಾನ ಭವನದಲ್ಲಿ ಕಿರುಚಿತ್ರ ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಗಿದೆ. ಪ್ರದರ್ಶನದ ಜೊತೆಗೆ ಉಪನ್ಯಾಸ, ಸಂವಾದ ನಡೆಯಲಿದೆ. ಅಮೆರಿಕದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲಿಯೂ ಅಕಾಡೆಮಿಯಿಂದ ಕಿರುಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ‘ಕನ್ನಡ ಕಲಿ’ ಹೆಸರಿನಡಿ ನಡೆದ ಈ ಪ್ರದರ್ಶನ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ನಾಲ್ಕು ಅತ್ಯುತ್ತಮ ಚಿತ್ರಗಳಿಗೆ ನಾನೇ ಅಕಾಡೆಮಿಯಿಂದ ಪ್ರಶಸ್ತಿ ನೀಡಿ ಅಭಿನಂದಿಸಿದೆ.

* ಹೊರರಾಜ್ಯಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಯಾವ ಕ್ರಮ ವಹಿಸಿದ್ದೀರಿ?
ದೆಹಲಿ, ಮುಂಬೈ, ಹೈದರಾಬಾದ್‌, ಕೋಲ್ಕತ್ತ, ಪುಣೆಯಲ್ಲಿ ಕನ್ನಡ ಚಿತ್ರೋತ್ಸವ ನಡೆಸುವ ಯೋಜನೆ ಇದೆ. ಈಗಾಗಲೇ, ದೆಹಲಿ ಕನ್ನಡ ಸಂಘದಿಂದ ಚಿತ್ರೋತ್ಸವ ಸಂಘಟಿಸುವಂತೆ ಆಹ್ವಾನ ಬಂದಿದೆ. ಮುಂಬೈನ ಕೆಲವು ಕನ್ನಡ ಸಂಘಟನೆಗಳ ಸ್ನೇಹಿತರು ಕೂಡ ಮುಂದೆ ಬಂದಿದ್ದಾರೆ. ದಸರಾ ಮುಗಿದ ಬಳಿಕ ಹೊರ ರಾಜ್ಯಗಳಲ್ಲಿ ಕನ್ನಡ ಚಿತ್ರೋತ್ಸವ ಆಯೋಜಿಸುತ್ತೇವೆ.

* ಅಕಾಡೆಮಿಗೆ ಇನ್ನೂ ಸದಸ್ಯರ ನೇಮಕವಾಗಿಲ್ಲ. ನಿಮ್ಮದು ಏಕಪಾತ್ರಾಭಿಯನವೇ?
ಹ್ಹಹ್ಹಹ್ಹ... ಒಂದರ್ಥದಲ್ಲಿ ಏಕಪಾತ್ರಾಭಿನಯವೇ ಆಗಿದೆ. ಅಂತರರಾಷ್ಟ್ರೀಯ ಚಿತ್ರೋತ್ಸವ ನಿಯಮಾವಳಿಗಳ ಪ್ರಕಾರ ನಡೆಯುತ್ತದೆ. ಆದರೆ, ಸೃಜನಾತ್ಮಕ ಯೋಜನೆ ರೂಪಿಸಿ ಅದರ ಕಾರ್ಯಗತಕ್ಕೆ ಇಳಿಯುವಾಗ ಆತಂಕ ಸಹಜ. ಇಂತಹ ಕಾರ್ಯಗಳ ಅನುಷ್ಠಾನಕ್ಕೆ ಸದಸ್ಯರ ಸಹಕಾರ, ಅನುಮತಿ ಮುಖ್ಯ. ಹೊಸ ಸದಸ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿರುವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಕೆಲವು ಸದಸ್ಯರ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಅವರನ್ನು ಮುಂದುವರಿಸಬೇಕೇ ಅಥವಾ ಹೊಸಬರನ್ನು ನೇಮಿಸಬೇಕೇ ಎನ್ನುವುದು ಸರ್ಕಾರಕ್ಕೆ ಬಿಟ್ಟ ವಿಚಾರ.

* ಚಿತ್ರನಗರಿ ನಿರ್ಮಾಣ ಕಗ್ಗಂಟಾಗಿ ಉಳಿದಿದೆಯಲ್ಲಾ?
ಚಿತ್ರನಗರಿ ನಿರ್ಮಾಣದ ವಿಚಾರದಲ್ಲಿ ಅಕಾಡೆಮಿ ಮೂಗು ತೂರಿಸಲು ಬರುವುದಿಲ್ಲ. ಮೈಸೂರು ಅಥವಾ ರಾಮನಗರ ಎಲ್ಲಿ ನಿರ್ಮಿಸುತ್ತಾರೆಂಬುದು ನನಗೆ ಗೊತ್ತಿಲ್ಲ. ನನ್ನನ್ನು ಒಳಗೊಂಡಾಗ ನಾನು ಅದರ ಭಾಗವಾಗಿ ಕೆಲಸ ಮಾಡಲು ಸಿದ್ಧ.

* ಮೈಸೂರು ದಸರಾದಲ್ಲಿ ಚಿತ್ರೋತ್ಸವಕ್ಕೆ ಸಿದ್ಧತೆ ಹೇಗೆ ನಡೆದಿದೆ?
ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಯುವ ವೇಳೆಯಲ್ಲಿಯೇ ಮೈಸೂರಿನಲ್ಲಿ ಚಿತ್ರೋತ್ಸವ ನಡೆಸಲು ಸಾಧ್ಯವಿಲ್ಲ. ಇಲ್ಲಿಗೆ ಬರುವ ಅತಿಥಿಗಳನ್ನು ಅಲ್ಲಿಗೆ ಕರೆದೊಯ್ಯಲು ತಾಂತ್ರಿಕ ತೊಡಕುಗಳು ಎದುರಾಗುತ್ತವೆ. ಸ್ವಯಂ ಸೇವಕರ ಕೊರತೆ ಕಾಡುತ್ತದೆ. ಹಾಗಾಗಿ, ದಸರಾದ ನೆಪದಲ್ಲಿ ಅಲ್ಲಿ ಚಿತ್ರೋತ್ಸವ ಆಯೋಜಿಸಲಾಗಿದೆ. ಭಾರತೀಯ ಪನೋರಮ ವಿಭಾಗದ 24 ಚಿತ್ರಗಳು ಅಲ್ಲಿ ಪ್ರದರ್ಶನಗೊಳ್ಳಲಿವೆ. ನಾನೇ ದೆಹಲಿಗೆ ಹೋಗಿ ಚಿತ್ರಗಳನ್ನು ಆಯ್ಕೆಮಾಡಿ ತಂದಿದ್ದೇನೆ.ಮಂಗಳೂರಿನ ಪ್ರಾದೇಶಿಕ ಚಿತ್ರೋತ್ಸವದಲ್ಲಿ ಕೊಡವ ಭಾಷೆಯ ‘ತಂದಳ್‌ ನೀರ್’ ಚಿತ್ರ ಪ್ರದರ್ಶನ ಕಂಡಿತು. ಕೊಡಗಿನ ಸಂಸ್ಕೃತಿ ಬಿಂಬಿಸುವ ಚಿತ್ರ ಇದು. ದೇಶಕ್ಕೆ ವೀರಯೋಧರನ್ನು ನೀಡಿದ ಹಿರಿಮೆ ಕೊಡಗಿನದ್ದು. ಅಲ್ಲಿನ ಪರಿಸ್ಥಿತಿ ಈಗ ಸಂಪೂರ್ಣ ಬದಲಾಗಿದೆ. ಅಲ್ಲಿನವರು ವಾಚ್‌ಮನ್‌ಗಳಾಗುತ್ತಿರುವ ಬಗೆಯನ್ನು ಚಿತ್ರ ಕಟ್ಟಿಕೊಡುತ್ತದೆ. ಇಂತಹ ಚಿತ್ರಗಳಿಗೆ ಮಾರುಕಟ್ಟೆ ಇರುವುದಿಲ್ಲ. ಇನ್ನೊಂದೆಡೆ ಬಿಡುಗಡೆ ಕೂಡ ಕಷ್ಟ. ಜನರಿಗೂ ತಲುಪುವುದಿಲ್ಲ. ದಸರಾ ಚಿತ್ರೋತ್ಸವದಲ್ಲಿ ಈ ಸಿನಿಮಾವನ್ನು ಪ್ರದರ್ಶಿಸಲಾಗುವುದು.

* ನಿಮ್ಮ ಹೊಸ ಸಿನಿಮಾ ಕುರಿತು ಹೇಳಿ.
ಲಂಡನ್‌ನಲ್ಲಿ ಶೇಕಡ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಉಳಿದ ಭಾಗದ ಚಿತ್ರೀಕರಣವನ್ನು ಇಲ್ಲಿಯೇ ನಡೆಸಬೇಕಿದೆ. ದೆಹಲಿ ಸೇರಿದಂತೆ ಕರ್ನಾಟಕದ ಕೆಲವು ಭಾಗದ ಚಿತ್ರೀಕರಣ ಬಾಕಿ ಉಳಿದಿದೆ. ಅಕಾಡೆಮಿಯ ಕೆಲಸದ ನಡುವೆಯೇ ಶೂಟಿಂಗ್‌ ಕೂಡ ಮಾಡುತ್ತೇನೆ. ಸಿನಿಮಾ ನನ್ನ ವೃತ್ತಿ. ಅಕಾಡೆಮಿಗಾಗಿ ಸಿನಿಮಾವನ್ನು ತ್ಯಾಗ ಮಾಡಲಾರೆ. ಎರಡನ್ನೂ ಸಮಾನಾಂತರವಾಗಿ ನಿರ್ವಹಿಸುತ್ತಿದ್ದೇನೆ.

*
ಚಿತ್ರನಗರಿ ನಿರ್ಮಾಣದ ವಿಚಾರದಲ್ಲಿ ಅಕಾಡೆಮಿ ಮೂಗು ತೂರಿಸಲು ಬರುವುದಿಲ್ಲ.
–ನಾಗತಿಹಳ್ಳಿ ಚೆಂದ್ರಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT