ಬುಧವಾರ, ಜೂನ್ 29, 2022
24 °C

ಮಂಜಯ್ಯ ದೇವರಮನಿ ಬರೆದ ಕಥೆ: ನಾಯಿಬುಡ್ಡನ ಪವಾಡ

ಮಂಜಯ್ಯ ದೇವರಮನಿ Updated:

ಅಕ್ಷರ ಗಾತ್ರ : | |

Prajavani

‘ಅಯ್ಯಾ ಪಂಚ್ಯಾತಿ ಎಲೆಕ್ಷಣ್ಣಿಗೆ ನಾಯಿಬುಡ್ಡ ನಿಲ್ತಾನಂತೆ’ ಎಂದು ಬೆಳಬೆಳಗ್ಗೆನೆ ಕೇರಿಗಳಿಗೆ ನೀರು ಬಿಡಲು ಹೋಗಿದ್ದ ನೀರಗಂಟಿ ಬಸಣ್ಣ ಮಾಜಿ ಚೇರ್ಮನ್ ಪುಟ್ಟಯ್ಯನಿಗೆ ಹೇಳಿದ. ಆಗ ತಾನೇ ಸ್ನಾನ ಮಾಡಿ ಪಾಣಿಪಂಚೆ ಸುತ್ತಿಗೆಂದು ಪೂಜೆಗೆಂದು ಹೂವು ಕೀಳುತಿದ್ದ ಚೇರ್ಮನ್ನರು ನೀರುಗಂಟಿ ಏನು ಹೇಳಿದ ಎಂಬುದನ್ನು ನಿಲುಕಿಸಿಕೊಳ್ಳದೆ ‘ಏನೆಂದೆ?’ ಎಂದು ಅವನ ಮುಖ ನೋಡಿದರು. ‘ನಾಯಿಬುಡ್ಡ ಎಲೆಕ್ಷಣ್ಣಿಗೆ ನಿಲ್ತಾನಂತೆ’.

‘ಆ ಅಡ್ಡಗಸಿಬೀನ ಯಾರು ನಿಲ್ಲಿಸ್ತಾರಂತೆ...’ ಉದಾಷಿನವಾಗಿ ಮರು ಪ್ರಶ್ನೆ ಹಾಕಿದ್ರು. ‘ಮೀಸೆ ರಾಚಪ್ಪ ನಿನ್ನೆದಿನ ನಾಯಿಬುಡ್ಡನ ಮನೆಗೆ ಹೋಗಿದ್ನಂತೆ, ಕೆಟಗೆರಿ ಬಂದಿತಿ ನೀನು ನಿಲ್ಲು ಗೆಲ್ಸಿ ಚೇರ್ಮನ್ ಮಾಡ್ತೀನಿ ಅಂತಾ ಹೇಳಿದ್ನಂತೆ’ ಎಂಬುವುದನ್ನು ಕೇಳುತ್ತಿದ್ದಂತೆ ಚೇರ್ಮನ್ನರು ಒಮ್ಮೆಲೆ ಗಂಭೀರವಾದರು. ಕೊರಳೊಳಗಿನ ಬೆಳ್ಳಿಯ ಕರಡಿಗೆ ಬಲಿಯುವ ಬಿಸಿಲಿಗೆ ಮಿರುಗುಟ್ಟುತಿತ್ತು. ಮನೆಯ ಮುಂದಿನ ಬೀದಿಯಲ್ಲಿ ಹಟ್ಟಿ ಸಾರಿಸಿದ ಸಗಣಿ ಪುಟ್ಟಿಗಳು ತಿಪ್ಪೆ ಸೇರಲು ಹೋಗುತ್ತಿದ್ದವು. ‘ಸಟ್ಟನೆ ಹೋಗಿ ಮೆಂಬರ್ ಹುಲಗಪ್ಪನ ಕರಕಂಡ್ ಬಾ ಹಂಗೆ ಮುದ್ದಾಚಾರಿ ಏನೇ ಹಣ್ಸಿಗೆಂತ ಕುಂತಿದ್ರು ಕುಲುಮಿ ಬಾಯಿಗೆ ನೀರು ಹಾಕಿ ಬರಬೇಕಂತ ಹೇಳು’ ಎಂದರು. ತೆಲೆಯಾಡಿಸಿದ ನೀರಗಂಟಿ ಸೈಕಲ್ ಹತ್ತಿಗೇಂದು ಬರ್ರನೆ ಹೋದ. ರಾಚಪ್ಪ ಸೋತು ಮಕ್ಕಾಡೆ ಮಕ್ಕಂದ್ರು ಮೀಸೆ ಮಣ್ಣಾಗಿಲ್ಲ. ಕಳ್ಳ ಹುನ್ನಾರ ಮಾಡಕತ್ಯಾನ. ಹುಚ್ಚು ನಾಯಿ ತಿರಿಗಿದಂಗ ತಿರಗೋ ನಾಯಿಬುಡ್ಡನ್ನ ನಿಲ್ಲಸ್ತಾನ... ಅವ್ನೆಲ್ಲಿ ನಿಲ್ಲಬೇಕು ಸೇದೋಕೆ ಕೊರಿ ಬೀಡಿ ದಿಕ್ಕಿಲ್ಲ... ನಿಲ್ಲಲ್ಲ ಅಂದ್ರು ತೆಲೆಕೆಡ್ಸಿ ನಿಲ್ಸಿದ್ರೇನು ಗತಿ? ತೆಲೆಯಲ್ಲಿ ಪ್ರಶ್ನೆಗಳು ಹುಟ್ಟಿಕೊಂಡವು. ಪೂಜೆ, ಜಪ, ತಪ ಅಂತಿದ್ದ ಪುಟ್ಟಯ್ಯ ಎರಡು ಸಲ ಎಲೆಕ್ಷನ್ನಲ್ಲಿ ಗೆದ್ದು ಕೊನೆ ಅವಧಿಗೆ ಚೇರ್ಮನ್ನರೂ ಆಗಿದ್ದರು. ರಾಜಕೀಯದ ರುಚಿಯನ್ನು ಚೆನ್ನಾಗಿ ಉಂಡಿದ್ದರು. ಮತ್ತೊಮ್ಮೆ ಅಖಾಡಕ್ಕಿಳಿಯುವ ಆಸೆಯಿತ್ತಾದರೂ ಕೆಟಗರಿ ಬಂದು ಆಣೆಕಟ್ಟು ಕಟ್ಟಿತ್ತು.

ಪೂಜೆ, ತೀರ್ಥ ದೇವರಕಾರ್ಯ ಮುಗಿಸೋದ್ರೊಳಗೆ ಮೆಂಬರ್ ಹುಲುಗಪ್ಪ ಮತ್ತು ಮುದ್ದಾಚಾರಿ ಇಬ್ಬರು ಗುಸು ಗುಸು ಮಾತಾಡ್ಕೇಂತ ಬಂದರು. ಬಂದವರೇ ಕಟಾಂಜನದ ಕಟ್ಟೆಯ ಮೇಲೆ ಹಾಸಿದ ಜಮಖಾನೆಯ ಮೇಲೆ ಕುಂತರು. ಬೆಳಗಿನ ಬಿಸಿಲು ಕಟಾಂಜನದ ಸರಳುಗಳಿಂದ ನಾಮದಪಟ್ಟೆ ಹಾಕಿತ್ತು. ಗಡಿಯಾರವು ಎಂಟು ಗಂಟೆ ತೋರಿಸುತ್ತಿತ್ತು. ಪೂಜೆ ದೇವರಕಾರ್ಯ ಮುಗಿದಿದೆ ಎಂಬುದನ್ನು ಚೇರ್ಮನ್ನರ ಮೈ ಮೇಲಿನ ಇಭೂತಿ ಕಂಬಿಗಳು ಹೇಳುತಿದ್ದವು. ಚೇರ್ಮನ್ನರು ಬಂದು ಕುಂತರು ಅವರ ಹಿಂದೆಯೇ ಚಾ ಲೋಟಗಳು ಬಂದವು.

ಬೆಳಗ್ಗೆನೇ ಕರೆಯಿಸಿದ್ಯಾಕೆ ಎಂಬ ಗುಂಗಿನಲ್ಲಿ ಹುಲುಗಪ್ಪ, ಮುದ್ದಾಚಾರಿ ಚೇರ್ಮನ್ನರ ಮುಖ ನೋಡಿದರು. ಚೇರ್ಮನ್ನರು ‘ಚಾ ಕುಡೀರಿ ಮಾತಾಡಿದ್ರಾತು’ ಎಂದು ಉಪಚರಿಸಿದರು. ನಂತರ ಸ್ವಲ್ಪ ಗಂಭೀರವಾಗಿ ‘ಆ ನಾಯಿಬುಡ್ಡ ಎಲೆಕ್ಷನ್ನಿಗೆ ನಿಲ್ತಾನಂತೆ. ಅದ್ಕೆ ನಮ್ಕಡೆಯಿಂದ ಯಾರನ್ನ ನಿಲ್ಸಿದ್ರೆ ಚಲೋ ಆಕ್ಕೆತಿ ಅಂತಾ ವಿಚಾರಿಸೋಕೆ ಹೇಳಿ ಕಳ್ಸಿದೆ’ ಎಂದು ವಿಷಯ ಹರುವಿದರು. ಚೇರ್ಮನ್ನರ ಕಾಲುಗೆರೆ ದಾಟದ ಹುಲುಗಪ್ಪ ‘ನಮ್ದೇನು ಐತೆ ಇಲ್ಲಿತಂಕ ನಿಮ್ಮ ಮಾತೆಲ್ಲಿ ತೆಗೆದು ಹಾಕಿದೀವಿ. ಇಪ್ಪಟ್ಟು ನಮ್ಕಡೆ ಯಾರು ನಿಲ್ಲಬೇಕು... ನೀವೇ ಹೇಳಿಬಿಡಿ’ ಎಂದು ಉತ್ತರಕ್ಕೆ ಕಾದರು. ಕೆಲ ಹೊತ್ತು ಅವರ ನಡುವೆ ಮೌನ ನೆಲಸಿತು. ಮುದ್ದಾಚಾರಿ ಕಡೆ ನೋಡಿ ‘ನೀನು ನಿಂದ್ರಬೌದಲ್ಲ ನಾನು ಎಲ್ಲಾ ನೋಡ್ಕೋತೀನಿ’ ಎಂದರು. ಮುದ್ದಾಚಾರಿ ಹುಳ್ಳುಮಳ್ಳಾದ.

ನಾಯಿಬುಡ್ಡನಿಗೆ ಕಾಲಲ್ಲಿ ನಾಯಿಗೆರೆಗಳಿವೆ ಎಂದು ಉಕ್ಕಡದಲ್ಲಿ ಜನಗಳು ಮಾತಾಡಿಕೊಳ್ಳುತ್ತಿದ್ದರು. ಹಗಲು ರಾತ್ರಿಯೆನ್ನದೆ ಬಿಸಿಲು ಮಳೆಯೆನ್ನದೆ ನೆತ್ತಿ ಅಮುಕಿದ ಹುಚ್ಚನಂತೆ ಗಣ ಗಣ ನಾಯಿ ತಿರುಗಿದಂಗೆ ತಿರುಗುತ್ತಿದ್ದ. ಕಾಲು ತೊಳೆದು ನೋಡಿದ್ದರೆ ನಾಯಿಗೆರೆಗಳಲ್ಲ ದೇವ್ರು ಗೀಚಿದ ಹಣೆಬರಹವೇ ಕಾಣುತಿತ್ತು. ಅವನ ನಾಲಿಗೆಯೋ ಉದ್ದವಾಗಿತ್ತು ನಾಯಿಯಂತೆ. ಒಂದಕ್ಕೆ ಹನ್ನೊಂದು ಸೇರಿಸಿ ಬುರುಡೆ ಬಿಡುತ್ತಿದ್ದ. ನೂರಕ್ಕೆ ಒಂದು ನಿಜ ಹೇಳುತಿದ್ದ. ಆದ್ರೆ ಜನ ನಂಬುತ್ತಿದ್ದಿಲ್ಲ. ಉಕ್ಕಡದಲ್ಲಿ ಈ ರೀತಿ ನಾಯಿಯಂತೆ ತಿರುಗುವವರು ಇದ್ದಾರಾದರೂ ಅವರಾರೂ ಬುಡ್ಡನಂತೆ ವಾಹಿನಿಯಾಗಿರಲಿಲ್ಲ. ಅವನನ್ನು ನೋಡಿದ್ರೆ ಪಕ್ಕನೆ ನಗಬೇಕು ಎಂಬಂತಿದ್ದ. ಆಕಾರ ಬಿದಿರಿಗೆ ಕಟ್ಟಿದ ಬೆದರುಗೊಂಬಿ, ಕಾಲು ಕೋಳಿಕಾಲು, ಕೈ ಒಳ್ಕಿಕಟ್ಟಿಗೆ, ತೆಲೆ ಕುರಿತೆಲೆ, ಬಾಯಿ ಕೊಛ್ಬಾಯಿ, ಕರೆಗಟ್ಟಿದ ಹುಳುಕು ಹಲ್ಲು, ಬಂಗಿನಿಂದ ಕರಿಬಡಿದ ಮುಖ, ಪಿಚ್ಚುಗಟ್ಟಿದ ಕಣ್ಣುಗಳು, ಕೊರಳಲ್ಲಿ ಕಟ್ಟಿದ ಚೈನು ಇವನ್ನೆಲ್ಲಾ ನೋಡಿದ್ರೆ ನಗದೇ ಇರಲಾಗುತ್ತದೆಯೇ? ಅದರಲ್ಲೂ ಚಿಟಿಕೆ ಹೊಡೆದು ಬಾಯಿ ತೆಗೆದನೆಂದ್ರೆ ಪಕ್ಕೆ ಮುರಿಯುವಂತೆ ನಗುಬೇಕು ಆಗಿದ್ದ ನಾಯಿಬುಡ್ಡ.

ನಾಯಿಬುಡ್ಡ ಉಕ್ಕಡದಲ್ಲಿ ಅತ್ಯಂತ ಪರಿಚಿತ ವ್ಯಕ್ತಿ. ಅವನು ಅಜ್ಜಯ್ಯನ ದೇವಾಲಯದಲ್ಲಿ ಸೆಕ್ಯೂರಿಟಿಯಾಗಿ ಸೇರಿಕೊಂಡಿದ್ದ. ತಾನು ಹಾಕಿಕೊಂಡ ಖಾಕಿಯಿಂದ ತಾನೊಬ್ಬ ಪೊಲೀಸ್ ಅಧಿಕಾರಿಯೆನ್ನುವಂತೆ ಹೆಮ್ಮೆಪಡುತ್ತಿದ್ದ. ಕೈಯೊಳಗಿನ ಲಾಠಿಗೆ ಜನಗಳಿರಲಿ ಬೀದಿನಾಯಿಗಳು ಕೂಡಾ ಹೆದರುತ್ತಿರಲಿಲ್ಲ. ಪರಂಪರಾಗತವಾಗಿ ಬಂದಿದ್ದ ವೃತ್ತಿ ಇವನಿಗೂ ದಾಟಿತ್ತು. ಪ್ರತಿ ಅಮಾಸಿಗೆ ಅಜ್ಜಯ್ಯನ ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರುತ್ತಿದ್ದರು. ದೆವ್ವ, ಭೂತ, ಪಿಶಾಚಿ ಮೆಟ್ಟಿಕೊಂಡವರಿಗೆ ಬಿಡಿಸುವ ಕೆಲಸ ಅಮಾಸಿಯಲ್ಲಿಯೇ! ಅಮಾಸಿ, ಅಮಾಸಿ ಮಾರನೆ ದಿನ ಬುಡ್ಡನಿಗೆ ಕೆಲಸ. ಆ ಎರಡು ದಿನ ಗಳಿಗೆಗೊಮ್ಮೆ ಜಗ್ಗುವ ಪೈಜ್ ಬೀಡಿ, ಮಾತಿಗೊಮ್ಮೆ ಹೊಡೆಯುವ ಬೆರಳ ಚಿಟುಗಿ ಸರಪಳಿ ಕಟ್ಟಿದ ನಾಯಿಯಾಗುತ್ತಿದ್ದವು. ಕೊತ್ರಾಸಿ ಕೆಲಸ ಮಾಡಿದನೆಂದರೆ ಮುಗಿಯಿತು ಇಡೀ ತಿಂಗಳು ಗಣ ಗಣ ತಿರುಗುವುದೆ ಅವನ ವಾರೆಯಾಗಿತ್ತು. ವಾರೆವು ಬಿಟ್ಟು ಈಗೇ ಪಾಲ್ತು ತಿರುಗುವುದು ಅವನಿಗೊಂದು ಚಾಳಿಯಾಗಿತ್ತು. ತಿಂಗಳಾಂತ್ಯಕ್ಕೆ ಬೀಡಿಗೂ ಕಾಸಿಲ್ಲದೆ ಅವರಿವರ ಬಳಿ ಬೇಡುತ್ತಿದ್ದ.

ಆರು ಕೊಟ್ಟರೆ ಅಕ್ಕನಂತೆ ಮೂರು ಕೊಟ್ಟರೆ ಮಾವನಂತೆ ಮಾತಾಡುತಿದ್ದ ಬುಡ್ಡ ತಿಂಗಳ ಕೊನೆಗೆ ಜಗದಣ್ಣನ ಅಂಗಡಿ ಹೋಗಿ ‘ಅಮಾಸಿಗೆ ನನ್ನ ಪಾಗಾರ ಬರೋದೈತಿ ದಿನಸಿ ಕೊಡಣ್ಣ, ಬಂದ್ಕೂಡ್ಲೆ ಉದ್ರಿ ಮುಟ್ಸಿಬಿಡ್ತೀನಿ ನಾನೇನು ಇಟ್ಕೋಣಕಿಲ್ಲಾ...’ ಎಂದು ದುಂಬಾಲು ಬೀಳುತ್ತಿದ್ದ. ಅದಕ್ಕೆ ಜಗದಣ್ಣ ‘ಅಯ್ಯೋ ಅಡ್ಡಗಸಬಿ ನಿನ್ನೆಣ್ತಿ ತಿಂಗಳ ಪಿಳ್ಳಿ ಬಗಲಿಗೆ ಕಟ್ಟಿಗೆಂದು ಕೆಟ್ಟ ಬ್ಯಾಸಗ್ಯಾಗ ಗಡಿ ಗಡಿ ತಿರುಗಿ ಆಡು ಮೇಯಿಸಿ ಜೀವನ ಮಾಡತೈತಿ ನೀನು ನೋಡಿದ್ರ ಯಾರೋ ಕೊಟ್ಟ ಪುಗಸಟ್ಟೆ ಬೀಡಿ ಜಗ್ಗೆಂದು ಹುಚ್ಚುನಾಯಿ ತಿರಿಗೆಂದೆಂಗ ತಿರುಗತಿಯಲ್ಲ. ನಿನ್ನ ಪಗಾರ ನಿಂಗೆ ಕುಡಿಯೋಕೆ ಆಗಲ್ಲ ಉದ್ರಿ ಎಲ್ಲಿಂದ ತಿರುಸ್ತಿ’ ಎಂದು ‘ಹೋಗಲಿ ತಗೋ’ ಎಂದು ಮುಖದ ಮ್ಯಾಲ ಚೀಟಿ ಪೈಜ್ ಬೀಡಿ ಎಸೆದಿದ್ದರು. ಚೀಟಿ ಪೈಜ್ ಆ ಕಾಲದ ಅಗ್ಗದ ಬಿಡಿಯಾಗಿತ್ತು. ಜೋಲು ಮುಖ ಮಾಡ್ಕೆಂದು ‘ಅಜ್ಜಯ್ಯನ ಮ್ಯಾಲ ಆಣೆ... ನಾಕು ದಿನ ಆತು ಮನ್ಯಾಗ ಕೂಳು ಬೇಸಿಲ್ಲ ಹೆಂಡ್ರು ಮಕ್ಕಳು ಉಪಾಸ ಬಿದ್ದಾವೇ ಆಡು ಮಾರಿಯಾದ್ರು ಉದ್ರಿ ಮುಟ್ಟಿಸ್ತೀನಿ ಕೊಡು ಮಾರಾಯ’ ಎಂದು ಮತ್ತೊಮ್ಮೆ ಅಲವಿಕೊಂಡಿದ್ದ. ತುಮ್ಮಿನಕಟ್ಟಿ ವರಗಪ್ಪ ಜಗದಣ್ಣನಿಗೆ ಪರಿಚಯದವನಾದ್ದರಿಂದಲೂ, ಅವನೇ ಊರಲ್ಲಿ ಕುರಿ ಮೇಕೆ ವ್ಯಾಪಾರ ಮಾಡುತಿದ್ದರಿಂದಲೂ ತನ್ನ ಉದ್ರಿಗೆ ಕೋತಾ ಆಗೋದಿಲ್ಲ ಎಂಬದನ್ನು ನಿಕ್ಕಿಮಾಡಿಕೊಂಡ ಜಗದಣ್ಣ ದಿನಸಿ ತೂಗಿ ಕೊಟ್ಟಿದ್ದ. ಇಂತಹ ನಾಯಿಬುಡ್ಡನ ಹೆಸರು ಉಕ್ಕಡದ ಪಂಚ್ಯಾತಿ ಎಲೆಕ್ಷನ್‌ಗೆ ಕೇಳಿಬಂದಿದ್ದೆ ಒಂದು ಅಜ್ಜಯ್ಯನ ಪವಾಡವಾಗಿತ್ತು. ನಾಯಿಬುಡ್ಡ ಜುಬ್ಬಾ ಹೊಲಿಸಿಕೊಂಡು ಒಂದು ಕೈ ನೋಡಿದ್ರಾತು ಅಂತಾ ಸಿದ್ದನಾಗಿದ್ದ.

ಪಂಚಾಯ್ತಿ ಚುನಾವಣೆಗೆ ಯಾರು ನಿಲ್ಲುತ್ತಾರೆ ಎನ್ನೋದಕ್ಕೆ ಉಕ್ಕಡದಲ್ಲಿ ನಾನು ನಿಲ್ಲುತ್ತೇನೆ, ನಾನು ನಿಲ್ಲುತ್ತೇನೆ ಎನ್ನುವವರ ಪಟ್ಟಿ ಬಿದಿರುಕೋಲಿನಂತೆ ಉದ್ದವಾಗಿ ಬೆಳೆಯಿತ್ತಿತ್ತು. ಅವನು ನಿಂತರೆ ಠೇವಣಿ ಮುಂಡಮೋಚುತ್ತದೆ. ಇವನೆಗೆಲ್ಲಿ ನಾಕು ಓಟು ಬೀಳೋದಿಲ್ಲ. ಅವನ ಜಾತಿಯವರು ತುಂಬಾ ಮಂದಿಯಿದ್ದಾರೆ ಅಜ್ಜಮಟ್ಟಿಗೆ ಹಾರಿಸಿ ಬರುತ್ತಾನೆ. ಯಾರಿದ್ದರೇನಂತೆ ಕತ್ತಲರಾತ್ರಿಯಲ್ಲಿ ದುಡ್ಡು ಚೆಲ್ಲದಿದ್ರೆ ನಾಯೀನು ಓಟು ಗುದ್ದಲ್ಲ.... ಎಂಬಿತ್ಯಾದಿ ಗುಲ್ಲುಗಳು ಊರು ತುಂಬಿದ್ದವು. ಮೀಸಲಾತಿ ಇವಕ್ಕೆಲ್ಲಾ ಎಳ್ಳುನೀರು ಬಿಟ್ಟಿತು. ಮತ್ಯಾರು ನಿಲ್ಲಬೇಕೆಂಬುದೇ ದೊಡ್ಡ ತೆಲೆನೋವಾಗಿತ್ತು. ಮೀಸೆ ರಾಚಪ್ಪನ ರಾಜಕೀಯ ಬುದ್ದಿಗೆ ಬಿದ್ದವನೇ ನಾಯಿಬುಡ್ಡ. ಮೀಸೆ ರಾಚಪ್ಪ ಬಿಟ್ಟು ಬಿಡದಂಗ ಎರಡು ಸಲ ಶಾಸ್ತ್ರದ ಪುಟ್ಟಯ್ಯನ ವಿರುದ್ಧ ನಿಂತು ಮಕ್ಕಾಡೆ ಬಿದ್ದಿದ್ದ. ಪಂಚ್ಯಾತಿ ಎಲೆಕ್ಷಣ್ಣು ಗೆಲ್ಲೊಕ್ಕಾಗದೆ ಇದ್ದುಬದ್ದದು ಕಳ್ಕಂದು ಮಖ ಓಣೆಸ್ಗೆಂದು ಊರಲ್ಲಿ ತೀಟಿಪೊಟಿಗೆ ಇಳಿದಿದ್ದ. ಆದ್ರೆ ಶಾಸ್ತ್ರದ ಪುಟ್ಟಯ್ಯ ಕವಡೆಹಾಕಿ ಗೆದ್ದು ಪಂಚ್ಯಾತಿ ದುಡ್ಡನ್ನೆಲ್ಲಾ ಚೆನ್ನಾಗಿ ಬೋಳ್ಸಿ ಊರಾಗ ದೊಡ್ಡು ಕುಳವೆಂಬತೆ ತೂಕ ಹೆಚ್ಚಿಸಿಗೆಂಡಿದ್ದ.

ಇಕ್ಕಟಾದ ಬೀದಿಗಳು, ಸಣ್ಣದಾದ ಮೂಡಿಕೆಸಾಲುಗಳು, ಕಡ್ಡಿಪೆಟ್ಟಿಗೆಯಂತ ಮನೆಗಳು, ಮನೆ ಮುಂದೆ ಕುಂತು ಕೌದಿ ಚುಚ್ಚುವ ಹೆಂಗಸರು. ಅಲ್ಲೇ ಸ್ನಾನ ಅಲ್ಲೇ ಊಟ ಅಲ್ಲೇ ಕಕ್ಕಸು. ಕಕ್ಕಸು ಮಾಡುಲು ಗುಂಡಿಗಳಿವೆ ಎಂಬುದನ್ನು ಅವರು ಕೇಳಿಯೇ ಇಲ್ಲ. ಚರಂಡಿಯಲ್ಲಿ ಮಲೆತ ಕೊಚ್ಚೆ, ಗಬ್ಬುನಾತ ಬೀರುವ ತಿಪ್ಪೆಗುಂಡಿಗಳು, ಪಕ್ಕದಲ್ಲಿಯೆ ಬೀಡಾ ಅಂಗಡಿ. ಗಾಳಿ ಬಿಸಿದಾಗೆಲ್ಲಾ ಹಾರಾಡುವ ಕೋಳಿಪುಕ್ಕಗಳು, ಹಿತ್ತಲ ಮುಂಚೆ ಬೇರೆಯಿಲ್ಲದ ಕೇರಿಯ ಕೊನೆಯ ಮನೆಯೇ ನಾಯಿಬುಡ್ಡನದು. ತನ್ನ ಕೇರಿ ಏನಾದರು ಬದಲಾಗಬಹುದು ಎಂಬ ಲೆಕ್ಕಾಚಾರದಲ್ಲಿ ನಾಯಿಬುಡ್ಡ ಎಲೆಕ್ಷನ್‌ಗೆ ನಿಂತಿದ್ದ. ನಾಯಿಬುಡ್ಡ ತನ್ನ ನಾಯಿ ಗುರುತಿಗೆ ಓಟು ಗುದ್ದಬೇಕು ಅಂತಾ ಕಂಡ ಕಂಡವರ ಕಾಲಿಗೆ ಬಿದ್ದು ಕೇಳಿಕೊಳ್ಳುತಿದ್ದ. ಇತ್ತಕಡೆ ಮುದ್ದಾಚಾರಿ ಕುಲುಮಿ ಗುರುತಿಗೆ ಓಟು ಹಾಕ್ರಿ ಎಂದು ಕೈ ಮುಗಿದು ಪ್ರಚಾರಕ್ಕಿಳಿದಿದ್ದ. ಕಬ್ಬಿಣದ ಸುತ್ತಿಗೆ ಹೊರತು ಬೇರೆ ಆಸ್ತಿಯಿಲ್ಲದ ಮುದ್ದಾಚಾರಿಯನ್ನು ಪುಟ್ಟಯ್ಯ ಚೆನ್ನಾಗಿ ಕಾಯಿಸಿ ಹಣಿಯುತ್ತಿದ್ದ. ಒಟ್ಟಿನಲ್ಲಿ ಗ್ರಾಮ ಸ್ವರಾಜ್ಯ ಚುನಾವಣೆ ಪ್ರಚಾರ ಜೋರು ಸಾಗಿತ್ತು.

ಬೆಳಕರದ್ರೆ ಎಲೆಕ್ಷಣ್ಣು. ಆ ರಾತ್ರಿ ಮಾಡೋ ಕಾಮೈತಿ ಯಾರನ್ನ ಬೇಕಾದ್ರು ಗೆಲ್ಲಿಸಬೌದು ಇಲ್ಲ ಮಕ್ಕಾಡೆ ಮಂಗಸಬೌದು. ಇದೆಲ್ಲಾ ನಡೆಯೋದು ಕತ್ತಲರಾತ್ರಿಯಲ್ಲಿ. ಇದನ್ನ ನಮ್ಮಕಡೆ ಗುದ್ದಲೇ ಗುರುಬಸ್ಯಾ ಅಂತೇಳಿ ಕರೀತಾರ. ರೊಕ್ಕ ಕೊಟ್ರೆ ರಿಣ ಇಟ್ಗೊಳ್ಳೋದಿಲ್ಲ ಅಂತಾ ಹೆಚ್ಚು ದುಡ್ಡು ಕೊಡ್ತಾರ. ನೋಟು ಸಿಕ್ಕೋರು ಓಟು ಗುದ್ದುತ್ತಾರೆ ಅಂತಾ ಎಲೆಕ್ಷನ್ನಿಗೆ ನಿಂತೋರ ಲೆಕ್ಕಾಚಾರ. ಆದ್ರೆ ಜನ ಎಲ್ರಕಡೇನೂ ಇಸಗೊಂದು ಬೇಕಾದವರೆಗೆ ಓಟು ಗುದ್ದೋದು! ಆ ರಾತ್ರಿ ಎಲೆಕ್ಷನ್ನು ನಿಂತೋರ ಚಡಪಡಿಕೆ ಹೇಳತೀರದ್ದು. ರಾಚಪ್ಪ ಕವ್ವರಾತ್ರೀಲಿ ಶೆಲ್ಯವು ದಬಾಕೊಂಡು ಮನಿ ಮನಿ ನುಗ್ಗಿ ‘ಇದೊಂಪಟ್ಟು ಓಟು ಗುದ್ದುರಿ ಅಮ್ಯಾಕಡೆ ಬಂದು ಕೇಳ್ರಿ ನಿಮ್ಗೆನು ಬೇಕು ಮಾಡ್ಸಿಕೊಡ್ತೀನಿ’ ಅಂತಾ ಒಳ್ಳೋಳಗೇ ಕಾಮೈತಿ ಸುರುವಿಟ್ಟುಕೊಳ್ಳುತ್ತಿದ್ದ.

‘ಇಪ್ಪಟ್ಟು ಏನಾದ್ರು ಸೋತ್ರೆ ಊರಾಗ ಮಖ ಇಟ್ಕೊಂಡು ತಿರುಗಾಡಕಕತೇನ್ಲೆ, ಏನಾರ ಮಾಡಿ ಶಾಸ್ತ್ರದ ಪುಟ್ಟಯ್ಯನ ಜುಟ್ಟು ಕತ್ರಿಸ್ಬೇಕು. ಪಂಚ್ಯಾತಿನ ಅವ್ನ ಮಾವನ ಮನಿ ಮಾಡಿಕೆಂಡನ, ಎಲ್ಲವೂ ಅವ್ನೆಳದಂಗೆ ಕೇಳ್ತಾವೆ. ಜವಾನ ಪರಸ್ಯ ಏನರ ಕೇಳಿದ್ರೆ ಮುಖ ತಿಕ್ಕಾಗೆ ಚೇರ್ಮನ್ನರ ಕೇಳ್ರಿ ಅಂತಾನ. ಅವ್ನಿಗೇರ ಎಷ್ಟು ಹುಳ ಕಡಿತಾವು ಅಂತೀಯಾ... ಇದ್ಕೆಲ್ಲಾ ಮಂಗಳ ಹಾಡಲಿಲ್ಲ ಅಂದ್ರೆ ಊರಾಗ ನಮ್ಮ ಕಿಮ್ಮತ್ತಿಲ್ಲ. ಅದ್ಕೆ ಬುಡ್ಡ ನೀನು ಈ ಸಾರಿ ನಿಂದ್ರು ನಾ ನೋಡ್ಕೋತೀನಿ’ ಅಂತೇಳಿ ನಾಯಿಬುಡ್ಡನನ್ನು ಪುಸಲಾಯಿಸಿದ್ದ. ನಾಯಿಬುಡ್ಡ ರಾಚಪ್ಪನ ಪುಸಲಾತಿಯಿಂದ ಬರೋಬ್ಬರಿ ನಾಕು ಓತಗಳನ್ನು ಹತ್ತು ಆಡುಮರಿಗಳನ್ನು ಕಡಿದು ಬರಬ್ಬೊರಿ ಬಾಡೂಟ ಅಣಿಮಾಡಿಕೆಂಡಿದ್ದ. ಅವನ ಹೆಂಡ್ತಿ ಗಂಗಮಾಳವ್ವ ಮಮ್ಮಲ ಮರುಗಿದ್ದಳು. ತನ್ನ ಗಂಡ ಯಾವತ್ತೂ ಖಂಡದ ಸಾರು ಮಾಡಿಕೊಡು ಅಂತಾ ಕೇಳಿದೋನಲ್ಲ; ಮಾರಿಹಬ್ಬದಲ್ಲಿ ‘ಹುಳ್ಳಿ ಮುದ್ದಿ ಬೆಲ್ಲದ ಹಾಲು ಮಾಡಿಕೊಡು ಜಬರ್ದಸ್ತ ಹಾಕ್ಕೆತಿ’ ಅಂತಾ ಬೆಲ್ಲದ ಹಾಲು ಹುಳ್ಳಿಮುದ್ದಿ ಕಲಿಸಿಕೆಂದು ತಿಂದು ಊರುಮುಂದಿನ ಅಗಸ್ಯಾಗ ಹೂಸು ಬಿಟ್ಟಿದ್ದ. ಎಲ್ಲರೂ ಒಳ್ಳೆ ಹುಳ್ಳಿಮುಕ್ಕ ಕೂಡಿದ್ನಪ್ಪಾ ಊರು ಹಬ್ಬದಾಗೂ ಹುಳ್ಳಿ ಮುದ್ದಿ ತಿಂದು ಬಂದಿಯಲ್ಲೋ ಅಂತಾ ಬಿದ್ದು ಬಿದ್ದು ನಕ್ಕಿದ್ದರು. ಇದೆಲ್ಲಾ ನೆನಪಾಗಿ ಗಂಗಮಾಳವ್ವನ ಕಣ್ಣುಗಳು ಕೆನ್ನೆ ತೊಯಿಸಿದವು. ನಮ್ಮೊಂತರಿಗೆ ಅಲ್ಲ ಎಲೆಕ್ಷಣ್ಣು. ಬೇಡ ಎಂದು ಗೋಗರೆದಳು. ‘ಆ ಹುಲುಗಪ್ಪನ್ನ ನೋಡು ಊರುಬಡ್ಡಿ ಜಾಲಿಗುಂಡಿಯಲ್ಲಿ ಜಾಲಿಕಂಟಿ ಕಡೀತಿದ್ದ. ಅವನ ಮೈ ಮ್ಯಾಣಾಗಿತ್ತು. ಅವನ ಬಟ್ಟೆಗಳೋ ನೀರು ಬಿದ್ದರೆ ಸಿಡೀತಿದ್ದವು. ಬೆಂಕಿಯಾಕಿದ್ರ ಸುಡ್ತಿದಿಲ್ಲ, ಮನ್ಯಾಗ ತಿನ್ನೋಕೆ ಕಡ್ಕಲು ರೊಟ್ಟಿ ಕೆಂಪಿಂಡಿ ಕೂಳು. ಅಂತೋನು ಪುಟ್ಟಯ್ಯನ ಕೀಲುಗೊಂಬಿಯಾಗಿ ಎಲೆಕ್ಷಣ್ಯಾಗ ಗೆದ್ದು ಮೆಂಬರ್ ಆಗಿ ಗರಿ ಗರಿ ಬಟ್ಟೆ ಹಾಕ್ಕೊಂಡು ಮೆರದಾಡ್ತಾನ’ ಎಂದು ಹೇಳಿ ಹಿರಿ ಹಿರಿ ಹಿಗ್ಗಿದ. ಅವನ ಹೆಂಡ್ತಿಗೆ ಅದ್ಯಾವುದು ಬೇಡವಾಗಿತ್ತು. ಇದ್ದುಬದ್ದ ಆಡು ಓತಗಳನ್ನು ಕೊಯ್ದು ಖಂಡದ ಸಾರು ಮಾಡಿಹಾಕಿ ಎಲೆಕ್ಷಣ್ಣು ಸೋತ್ರೆ ನಾಳೆ ಮುಂಜೇಲಿ ಮುಖ ಗುಬ್ರುಹಾಕ್ಕೆಂದು ಓಡಾಡಬೇಕಕ್ಕಾತಿ ಎನ್ನೋದು ಅವಳ ಚಿಂತೆಯಾಗಿತ್ತು. ಅವಳಿಗೆ ಇಡೀರಾತ್ರಿ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಊರು ಕೂಡಾ ಮಲಗಿರಲಿಲ್ಲ.

ಉಕ್ಕಡದ ಕೆರೆ ತುಂಬಿ ಜೀವದಿಂದ ಜೀಕುತಿತ್ತು. ಎಲ್ಲಾ ಬೋರುಗಳು ನೀರು ಉಗುಳುತ್ತಿದ್ದವು, ಬುಡ್ಡನ ಕೇರಿ ಕಾಂಕ್ರಿಟ್ ಮತ್ತು ಬಾಕ್ಸ್ ಚರಂಡಿಯಿಂದ ಹೊಸ ಹುಟ್ಟು ಪಡೆದಿತ್ತು. ಕೌದಿ ಚುಚ್ಚುವ ಹೆಂಗಸರು ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗುತ್ತಿದ್ದರು. ಎಲ್ಲಾ ಮನೆಗಳಿಗೂ ಗಂಗೆ ಬಂದಿದ್ದಳು. ಮನೆಗಳು ಕಕ್ಕಸ್ಸು ಗುಂಡಿ ಕಂಡಿದ್ದವು. ಪಂಚಾಯಿತಿ ಸುಣ್ಣ ಬಣ್ಣ ಬಳಿಸಿಕೊಂಡು ಗ್ರಾಮಸಭೆಗೆ ಸಜ್ಜಾಗಿತ್ತು. ಒಟ್ಟಿನಲ್ಲಿ ಉಕ್ಕಡದ ಚಿತ್ರಣ ನಾಯಿಬುಡ್ಡನಿಂದ ಸಂಪೂರ್ಣವಾಗಿ ಬದಲಾಗಿತ್ತು. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂಬುದನ್ನು ಹೇಳದಿದ್ದರೆ ನಾಯಿಬುಡ್ಡನ ಹೋರಾಟ ಗೊತ್ತಾಗುವುದಾದರು ಹೇಗೆ?

ಹೇಳುತ್ತೇನೆ ಕೇಳಿ ಅಂದು ಪಂಚಾಯಿತಿ ಫಲಿತಾಂಶ ಬಂದಿತ್ತು. ಖಂಡದಸಾರು ಮತ್ತು ಎಣ್ಣೆಗಿಂತ ನಾಯಿಬುಡ್ಡನನ್ನು ನಂಬಿ ಜನ ಓಟು ಗುದ್ದಿದ್ದರು. ಬುಡ್ಡ ಜುಬ್ಬಾ ಹೊಲಿಸಿದ್ದು ವ್ಯರ್ಥವಾಗಲಿಲ್ಲ. ಇತ್ತಕಡೆ ಪುಟ್ಟಯ್ಯನ ಗಂಟೆ ಸದ್ದು ಅಡಗಿತ್ತು. ರಾಚಪ್ಪ ಬುಡ್ಡನಿಗೆ ಹೂವಿನಹಾರ ಹಾಕಿ ಊರು ತುಂಬಾ ಮೆರವಣಿಗೆ ಮಾಡಿದ. ಮೊದಲ ಬಾರಿಗೆ ಬುಡ್ಡ ಪಂಚಾಯಿತಿ ಮೆಟ್ಟಿಲು ತುಳಿದ. ರಾಚಪ್ಪನ ಕಾಮೈತಿಯಿಂದ ಅಧ್ಯಕ್ಷನಾದ. ಆದರೆ ಪಿ.ಡಿ.ಒ ಹೇಳಿದ ಬಳಿ ಹೆಬ್ಬೆಟ್ಟು ಒತ್ತಬೇಕಾಗಿದ್ದು ನಾಯಿಬುಡ್ಡನಿಗೆ ಸರಿ ಬೀಳಲಿಲ್ಲ. ಅಧ್ಯಕ್ಷ ನಾನೋ ಇಲ್ಲವಾ ರಾಚಪ್ಪನೋ ಎಂದು ಒಮ್ಮೆ ಖಾರವಾಗಿಯೇ ಕೇಳಿದ್ದ. ಅದಕ್ಕೆ ಪಿ.ಡಿ.ಒ  ‘ಏನಿದ್ರೂ ರಾಚಪ್ಪನ ಮಾತೇ ನೆಡೆಯೋದು ಅವರನ್ನೇ ಕೇಳು’ ಎಂದು ಪಟ ಹಾರಿಸಿದ್ದ. ಕೆಲವೇ ದಿನಗಳಲ್ಲಿ ರಾಚಪ್ಪನ ಮಸಲತ್ತು ಬುಡ್ಡನಿಗೆ ಅರ್ಥವಾಯಿತು. ಊರ ಮುಂದಿನ ಕೆರೆ ಹೂಳೇತ್ತುವ ವಿಚಾರದಲ್ಲಿ ‘ಹಗ್ಗ ತಿನ್ನೋ ಹನುಮಂತರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯಾ’ ಎಂಬಂತೆ ರಾಚಪ್ಪ ನುಂಗುಬಾಕನಾಗಿದ್ದು ಬುಡ್ಡನಿಗೆ ಸರಿ ಎನ್ನಿಸಲಿಲ್ಲ. ‘ಜೆ.ಸಿ.ಬಿ ಹಚ್ಚಿ ನಾಕು ಟ್ರಿಪ್ ತೆಗಿದಿಲ್ಲ ಹೆಬ್ಬೆಟ್ಟು ಕೊಡು ಅಂತಿಯಲ್ಲ ನೀನೇಳ್ದಕ್ಕೆಲ್ಲಾ ಹೆಬ್ಬೆಟ್ಟು ಕೊಡಕಾಗಲ್ಲ ಸಾಹೇಬ್ರೆ. ನಮ್ಮ ಮಂದಿ ಕೆಲಸಯಿಲ್ಲದೆ ಕೌದಿ ಚುಚ್ಚಿಗೆಂದು ಕುಂತಾವೆ ಅವ್ರಿಗೆ ದಿಕ್ಕ ಬೇಡ್ವಾ! ಉದ್ಯೋಗ ಖಾತ್ರಿ ಕೆಲಸಕ್ಕೆ ಯಂತ್ರ ಬಳ್ಸೊಂಗಿಲ್ಲ ಅಂತಾ ನಿಮ್ಗೆ ಗೊತ್ತಿಲ್ವಾ’ ಎಂದು ಪಿ.ಡಿ.ಒನನ್ನು ಪ್ರಶ್ನೆಸಿದ್ದ. ಇದರಿಂದ ರಾಚಪ್ಪ ಒಳಗೊಳಗೇ ಕುದ್ದು ಹೋಗಿದ್ದ.

ಏನಾದರೂ ಮಾಡಿ ನಾಯಿಬುಡ್ಡನ ಕುರ್ಚಿ ಕಾಲು ಮುರಿಬೇಕು ಅಂತಾ ಮಾಡಿದ ಕಸರತ್ತುಗಳೆಲ್ಲವೂ ಮಕ್ಕಾಡೆ ಬಿದ್ದಿದ್ದಕ್ಕೆ ರಾಚಪ್ಪ ಎಂಎಲ್ಎ ಕಡೆಯಿಂದಲೂ ಹೇಳಿಸಿ ನೋಡಿದ್ದ. ಅದು ಕೂಡಾ ಕೈ ಹಿಡಿದಿರಲಿಲ್ಲ. ನಾಯಿಬುಡ್ಡ ಜಿಲ್ಲಾ ಪಂಚಾಯಿತಿ ಸಿ.ಇ.ಒ ಕಂಡು ಎಲ್ಲ ಹೇಳಿಕೊಂಡಿದ್ದ. ಸಿ.ಇ.ಒ ಸಾಹೇಬರು ಬುಡ್ಡನಿಗೆ ಮತ್ತು ಗ್ರಾಮ ಸ್ವರಾಜ್ಯಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದರು. ಉಕ್ಕಡದ ಜನ ‘ಹುಳ್ಳಿಕಾಳು ತಿನ್ನೋ ಮುಕ್ಕ ಊರಿಗೆಲ್ಲಾ ಒಬ್ಬಟ್ಟಿನ ಹೂರಣವನ್ನು ಉಣಿಸಿದ’ ಅಂತಾ ನಾಯಿಬುಡ್ಡನನ್ನು ಹಾಡಿ ಹೋಗಳಕಚ್ಚಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.