ಶುಕ್ರವಾರ, ಫೆಬ್ರವರಿ 3, 2023
20 °C
ಇಂದ್ರಕುಮಾರ್‌ಗೆ ಕಥಾ, ಮಂಜುಳಾಗೆ ಕವನ ಪ್ರಶಸ್ತಿ

ಪ್ರಜಾವಾಣಿ ದೀಪಾವಳಿ ಕಥೆ – ಕವನ ಸ್ಪರ್ಧೆ ಫಲಿತಾಂಶ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2022ನೇ ಸಾಲಿನ ಪ್ರತಿಷ್ಠಿತ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ ಮತ್ತು ‘ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ’ಗಳ ಫಲಿತಾಂಶ ಪ್ರಕಟವಾಗಿದೆ. ಇಂದ್ರಕುಮಾರ್‌ ಎಚ್‌.ಬಿ. ಅವರ ‘ನೀಲಿ ಹಣೆಯ ಗಂಪತಿಗೇಕೆ ಸಿಂಪಥಿ?’ ಕಥಾ ಸ್ಪರ್ಧೆಯಲ್ಲಿ ಹಾಗೂ ಮಂಜುಳಾ ಹಿರೇಮಠ ಅವರ ‘ನಾನು ಮರಳಿ ಹೋಗುವೆ’ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿವೆ. 

ಕಥಾಸ್ಪರ್ಧೆಯಲ್ಲಿ ಬಿ.ಎಂ.ಭಾರತಿ ಹಾದಿಗೆ ಅವರ ‘ಉಣ್ಣರ ಪುಣ್ಯ ಅಂಬಲಿ ಮಡಿಕಿಲಿ’ ಹಾಗೂ ಕಾವ್ಯಾ ಕಡಮೆ ಅವರ ‘ರಾಷ್ಟ್ರಗೀತೆ’ ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನಕ್ಕೆ ಭಾಜನವಾಗಿವೆ. ಜಯರಾಮಾಚಾರಿ ಅವರ ‘ಭವದ ಕೇಡು’, ಶ್ವೇತಾ ಹೊಸಬಾಳೆ ಅವರ ‘ವಿಧ್ಯುಕ್ತ’ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಕವನ ಸ್ಪರ್ಧೆಯಲ್ಲಿ ಪ್ರಕಾಶ ಮರಗಾಲ ಅವರ ‘ನನಗವರ ಅಂಜಿಕೆಯಿಲ್ಲ’ ಮತ್ತು ರತ್ನಾಕರ ಸಿ.ಕುನುಗೋಡು ಅವರ ‘ಅನಾದಿ ಬೇರು ಆದಿಮ ಕರುಳು’ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಚೀಮನಹಳ್ಳಿ ರಮೇಶಬಾಬು ಅವರ ‘ಬೆತ್ತ’, ಎಂ.ಎಸ್‌.ಶೇಖರ್‌ ಅವರ ‘ಜೋಡೆಲೆ ಜೊನ್ನೆ’ ಮತ್ತು ಶಿವ ವಿಷ್ಣುವಲ್ಲಭ ಅವರ ‘ಶಿವಜಂಗಮನ ಘೋರ ಹಸಿವು’ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ. ವಿಮರ್ಶಕ ಎಚ್‌.ಎಸ್‌.ರಾಘವೇಂದ್ರ ರಾವ್‌ ಹಾಗೂ ಕಥೆಗಾರ್ತಿ ವಿನಯಾ ಒಕ್ಕುಂದ ಅವರು ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕವಿ ಬಿ.ಆರ್‌. ಲಕ್ಷ್ಮಣರಾವ್‌ ಹಾಗೂ ಕವಯಿತ್ರಿ ಪ್ರತಿಭಾ ನಂದಕುಮಾರ್‌ ಅವರು ಕವನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಬಹುಮಾನದ ವಿವರ

ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಕಥೆಗಳಿಗೆ ಕ್ರಮವಾಗಿ ಪ್ರಥಮ ₹20 ಸಾವಿರ, ದ್ವಿತೀಯ ₹15 ಸಾವಿರ ಹಾಗೂ ತೃತೀಯ ₹10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಲಭಿಸಲಿದೆ. ಕವನ ಸ್ಪರ್ಧೆ ಮೊದಲ ಮೂರು ಸ್ಥಾನ ಪಡೆದ ಕವನಗಳಿಗೆ ಕ್ರಮವಾಗಿ ಪ್ರಥಮ ₹5,000, ದ್ವಿತೀಯ ₹3,000 ಹಾಗೂ ತೃತೀಯ ₹2,500 ನಗದು ಹಾಗೂ ಪ್ರಶಸ್ತಿ ಪತ್ರ ದೊರೆಯಲಿದೆ.

ತೀರ್ಪುಗಾರರ ಟಿಪ್ಪಣಿ

ಈ ಕಥೆಗಳು ಕರ್ನಾಟಕದ ವಿಭಿನ್ನ ಭಾಗಗಳಿಂದ ಬಂದಿದ್ದವು. ಶ್ರೀಮಂತರಿಂದ ಮೊದಲಾಗಿ ಕಡುಬಡವರವರೆಗೆ ಎಲ್ಲರ ಸನ್ನಿಧಿಯೂ ಇಲ್ಲಿದ್ದವು. ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕಗಳು ಹಾಸುಹೊಕ್ಕಾಗಿದ್ದವು. ಅತಿಯೆನಿಸಿದ ಆರ್ದ್ರತೆಯು ಎಲ್ಲ ಕಥೆಗಳಲ್ಲೂ ಇದ್ದವು. ಕನ್ನಡದ ನಾಳೆಗಳಾದ ಈ ಕಥೆಗಾರ್ತಿ-ಕಥೆಗಾರರು ವಿನಯ ಮತ್ತು ಆತ್ಮವಿಶ್ವಾಸಗಳನ್ನು ಕಾಪಾಡಿಕೊಂಡು, ಲೋಕದ ತಲ್ಲಣಗಳನ್ನು ಹೀರಿಕೊಂಡು, ವೈಚಾರಿಕ ಒತ್ತಡಗಳಿಗೆ ಮರುಳಾಗದೆ ತಮ್ಮದೇ ವೈಚಾರಿಕ ಅನನ್ಯತೆಯನ್ನು ರೂಪಿಸಿಕೊಳ್ಳಲೆಂಬ ಹಂಬಲ ನಮ್ಮದು

–ಎಚ್‌.ಎಸ್‌.ರಾಘವೇಂದ್ರ ರಾವ್‌ ಹಾಗೂ ವಿನಯಾ ಒಕ್ಕುಂದ

ನನ್ನ ಮಟ್ಟಿಗೆ, ಕಾವ್ಯವೆಂದರೆ ಅದೊಂದು ಕಲಾಮಾಧ್ಯಮ. ಅದೊಂದು ವಿಶೇಷ ಅನುಭವ, ವಿಶಿಷ್ಟ ಅನುಭೂತಿ. ಅದಕ್ಕೆ ಆಶಯದಷ್ಟೇ ಆಕೃತಿಯೂ ಮುಖ್ಯ. ಪ್ರತಿಭೆಯಷ್ಟೇ ಪರಿಶ್ರಮವೂ ಮುಖ್ಯ. ರೂಪಕ ನಿರ್ಮಾಣ ಅದರ ಅನನ್ಯತೆ. ಈ ನಿರೀಕ್ಷೆ ಇಟ್ಟುಕೊಂಡು ಸ್ಪರ್ಧೆಗೆ ಬಂದ ಕಾವ್ಯಗಳನ್ನು ನೋಡಿದಾಗ ನನ್ನಲ್ಲಿ ಅಂತಹ ಉತ್ಸಾಹವೇನೂ ಮೂಡಲಿಲ್ಲ. ಆದರೂ ಕೆಲವು ಪರವಾಗಿಲ್ಲ ಅನ್ನಿಸಿದವು

–ಬಿ.ಆರ್‌.ಲಕ್ಷ್ಮಣರಾವ್‌

ಹೊಸಬರ ಕಾವ್ಯವನ್ನು ಆಸಕ್ತಿಯಿಂದ ಹುಡುಕಿ ಓದುವುದು ಹೊಸತನದ ಚಮತ್ಕಾರ ಕಾಣಿಸುತ್ತದೆಯೇ ಅನ್ನುವ ಕುತೂಹಲದಲ್ಲಿ. ಹೊಸ ಪೀಳಿಗೆಯ ಆಸಕ್ತಿಗಳೇನು, ಅವರನ್ನು ಕಾಡುವ ಸಂಗತಿಗಳು ಯಾವುವು ಎನ್ನುವುದು ನನ್ನ ಕೌತುಕ. ವೃತ್ತಿಗಾಗಿ ಏನೇನೋ ಕಲಿತು ಪ್ರವೃತ್ತಿಗಾಗಿ ಕನ್ನಡದಲ್ಲಿ ಕವನ ಬರೆಯುವ ಅವರ ಹುಮ್ಮಸ್ಸಿಗೇ ಒಂದು ಸಲಾಮು 

–ಪ್ರತಿಭಾ ನಂದಕುಮಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು