ಶುಕ್ರವಾರ, ಜೂನ್ 5, 2020
27 °C

ಕಥೆ | ರೇಡಿಯೋ

ಮುನವ್ವರ್‌ ಜೋಗಿಬೆಟ್ಟು Updated:

ಅಕ್ಷರ ಗಾತ್ರ : | |

Prajavani

ಅಬ್ಬೊನು ಸಾಬರ ಎದೆಯ ಮೇಲಿದ್ದ ರಾಶಿ ಕೂದಲುಗಳ ಮಧ್ಯೆ ರೆಡಿಯೋ ಗಂಟಲು ಸರಿಪಡಿಸಿಕೊಳ್ಳತೊಡಗಿತೆಂದರೆ ಆ ಹೊತ್ತಿಗೆ ಊರಿಗೆ ಬೆಳಕು ಮೂಡುತ್ತಿದೆ ಅಂತನೇ ಅರ್ಥ. ಬನ್ನೆಂಗಳಕ್ಕೆ ಅಬ್ಬೊನು ಸಾಬು ಎಂದರೆ ನಡುಗುವಷ್ಟು ಭಯ ಮತ್ತು ಗೌರವ. ಬೆಳಗ್ಗಿನ ಹೊತ್ತಿಗೆ "ಸಂಸ್ಕೃತ ವಾರ್ತಾಹ ಶ್ರೂಯಂತಾಂ" ಎಂದು ಮೊಳಗತೊಡಗುವಾಗ ಅಬ್ಬೊನು ಸಾಬರು ಮೆಲ್ಲಗೆ ರೇಡಿಯೋ ಕಿವಿ ಹಿಂಡುತ್ತಾರೆ. ಅಷ್ಟರಲ್ಲೇ ಪ್ಞೀ.. ಎಂಬ ಕೀರಲುಗುಟ್ಟುವ ಸದ್ದಿನ ಮಧ್ಯೆ ಸುದ್ದಿ ಬಿತ್ತರಗೊಳ್ಳತೊಡಗುತ್ತದೆ.

ಆ ಶಬ್ದಕ್ಕೆ ಮಕ್ಕಳು ಮರಿಮಕ್ಕಳು ಎಚ್ಚರಗೊಳ್ಳುತ್ತಾರಾದರೂ ಅಳಹತ್ತುವ ಮೊದಲೇ ಸೊಸೆಯಂದಿರು ಸಮಾಧಾನಪಡಿಸಿ ಎಬ್ಬಿಸಿರುತ್ತಾರೆ. ಇಲ್ಲದಿದ್ದರೆ ವಾರ್ತೆ ಕೇಳಲಾಗದ ಅಬ್ಬೊನು ಸಾಬರ ರಣರಂಪಕ್ಕೆ ನಾಯಿ ಕೂಡ ಗಂಜಿ ಬಿಟ್ಟು ಓಡಿ ಹೋಗುವಷ್ಟು ಕೆಟ್ಟದಾಗಿ ಅವರ ಬಯ್ಗುಳ ಶುರುವಾಗಿಬಿಡುತ್ತದೆ. ಸಂಸ್ಕೃತ ವಾರ್ತೆ ಏನೇನೂ ಅರ್ಥವಾಗದಿದ್ದರೂ ಅದನ್ನು ಏಕೆ ಕೇಳಿಸಿ‌ಕೊಳ್ಳುತ್ತಾರೆಂದು ಕೇಳಿದರೆ, ... ಹೋ, ಆ ಪ್ರಶ್ನೆಯನ್ನಾದರೂ ಹೇಗೆ ಕೇಳಿಯಾರು? ಅಷ್ಟು ದೊಡ್ಡ ಜಗಳಗಂಟ ಮನುಷ್ಯ.

ಆ ಬಳಿಕ ನೂರೋ ಅದಕ್ಕೂ ಹೆಚ್ಚೋ ಇರುವ ಸ್ಟೇಶನ್‌ಗಳ ಮೇಲೆ ಜಾರುವ ಸೂಜಿಮುಳ್ಳು ಕೊನೆಗೊಂದು ಸ್ಥಳದಲ್ಲಿ "ವಾರ್ತೆಗಳ್ ವಾಯಿಕ್ಕುನ್ನದ್ ಹಕೀಂ‌ ಕೂಟ್ಟಾಯ್" ಎಂದು ಹೇಳುತ್ತಾ ಮಲಯಾಳಮ್ ವಾರ್ತೆ ಒದರತೊಡಗುತ್ತದೆ. ಅದು ಮುಗಿದ ಬೆನ್ನಿಗೇ ಅಬ್ಬೊನು ಸಾಬರ ಕೈ ರೇಡಿಯೋ ಕಿವಿ ಹಿಂಡುತ್ತದೆ. ಮುಂದೆ "ವಾರ್ತೆಗಳು ಓದುತ್ತಿರುವವರು ಶ್ಯಾಮರಾಜ್" ಅನ್ನುವಾಗ ಎದ್ದು ಕುಳಿತುಕೊಂಡು ಕಿವಿ ನೆಟ್ಟಗಾಗಿಸಿ ಕನ್ನಡ ವಾರ್ತೆಗಳನ್ನು ಕೇಳಿಸಿಕೊಳ್ಳುತ್ತಾರೆ. ದಿನವೂ ಈ ರೇಡಿಯೋದ ಮಾತುಗಳಿಂದ ಬೆರಗಾಗುವ ಮಕ್ಕಳು 'ಅದೊರಳಗೆ ಮನುಷ್ಯರಿದ್ದಾರೆಯೇ?' ಎಂದು ಕುತೂಹಲ ಹುಟ್ಟಿ ಪರೀಕ್ಷಿಸಲು ಆಗದೆ ಹೆದರಿ ದೂರದಿಂದಲೇ ನೋಡಿ ಆಡಲು ಹೋಗುತ್ತಿದ್ದರು.

ವಾರ್ತೆ ಮುಗಿದ ನಂತರ ಹೆಂಚಿನ ಮನೆಯ ಜಗಲಿ ದಾಟಿ ಹಳೆಯ ಚರ್ಮದ ಚಪ್ಪಲಿ ಮೆಟ್ಟಿಕೊಂಡು ಹೊರಟರೆಂದರೆ ಅವರ ಹಿಂದೆಯೇ ಡಾಬರ್‌ಮನ್ ಜಾತಿಯ ನಾಯಿಯೊಂದು ಬಾಲ ಅಲ್ಲಾಡಿಸಿಕೊಂಡು ಹೊರಟು ಬಿಡುತ್ತದೆ. ಎದುರಿನ ಗದ್ದೆ ಮತ್ತು ಅಂಗಳ ಸಂಧಿಸುವಲ್ಲಿ ಈಗ್ಗೆ ಮಾಡಿಸಿದ ಕಾಂಕ್ರೀಟಿನ ಸೇತುವೆ ದಾಟಿದರೆ ಸ್ವರ್ಗಕ್ಕೆ ಮೂರೇ ಗೇಣು. ಮಳೆ, ಬೇಸಿಗೆ, ಚಳಿಗಾಲಗಳಲ್ಲಿ ಆ ಸೇತುವೆ ಕೆಳಗೆ ಹರಿವ ಸ್ಫಟಿಕ ಶುಭ್ರ ತಿಳಿ ನೀರು. ಎದುರಲ್ಲಿ ಹಸಿರು ಗದ್ದೆ. ಮೀನು ಹಿಡಿಯಲು ಬರುವ ಕೊಕ್ಕರೆಗಳು ಹಳ್ಳದ ನೀರಿನಲ್ಲೂ ಗದ್ದೆಯಲ್ಲೂ ಮಜಬೂತಾಗಿ ಮೀನುಗಳನ್ನು ಹಿಡಿದು ತಿನ್ನುತ್ತಿದ್ದವು.

ಗದ್ದೆ ಬದುವಿನಲ್ಲಿ ಉದ್ದಕ್ಕೆ ನಡೆಯುತ್ತಾ‌ ಹೊರಟರೆ ಅಬ್ಬೊನು ಸಾಬರದ್ದೇ ಅಡಿಕೆ ತೋಟ. ಮತ್ತೊಮ್ಮೆ ತಿರುಗಿ ಮನೆಯ ಕಡೆಗೆ ನೋಟವಿಟ್ಟರೆ ಮನೆಯ ಹಿಂಬದಿಯಲ್ಲಿ ಕಗ್ಗತ್ತಲೆಯ ಪ್ರತೀತಿ ತೋರುವ ಗಮ್ಯ ಕಾಡು. ಮಧ್ಯಕ್ಕೆ ಮನೆಗಾಗಿ ಮಾಡಿಟ್ಟ ಮಣ್ಣಿನ ದಾರಿ. ಒಂದು ಸಣ್ಣ ತಿರುವಿನಲ್ಲಿ ಆಳೆತ್ತರಕ್ಕೆ‌ ನಿಂತ ಕಾಸರಕನ ಮರ. ಮಧ್ಯಾಹ್ನಕ್ಕೆ ಅದರ ನೆರಳು ನೇರವಾಗಿ ಮನೆಯ ಹೆಂಚಿನ ಮೇಲೆ ಹಾದು ಗದ್ದೆಯ ಮೇಲೂ ವ್ಯಾಪಿಸುತ್ತಿತ್ತು.

ಅಬ್ಬೊನು ಸಾಬರು ಆ ದಿನ ರೇಡಿಯೋ ವಾರ್ತೆ ಕೇಳಿಸಿಕೊಳ್ಳುತ್ತಿರುವ ಹೊತ್ತಿಗೆ ಹೊರಗೆ ಯಾರೋ ಚಪ್ಪಲಿ ಕಳಚಿಟ್ಟ ಸಪ್ಪಳ ಕೇಳಿತು. ‘ಕಾಕಾ.. ಕಾಕ’ ಎಂದು ಕರೆಯುವ ಸದ್ದಿಗೆ ಹೊರ ಬಂದ ಮಗ ‘ಶ್ಶ್!..’ ಎಂದು ತುಟಿಯ ಮೇಲೆ ಕೈಯ್ಯಿಡುತ್ತಾ ಹೊರಗೆ ನಿಂತವರಿಗೆ ಸೂಚನೆ ಕೊಟ್ಟ. ಚಪ್ಪಲಿ ಸಪ್ಪಳಕ್ಕೆ ಬಂದದ್ದು ಅಬ್ಬಾಸ್ ಎಂಬುವುದರಲ್ಲಿ ಯಾವ ಸಂಶಯವೂ ಉಳಿದಿರಲಿಲ್ಲ. ವಾರ್ತೆಯ ಮಧ್ಯೆ ಕರೆದದ್ದೂ ಕೇಳಿಯೂ ಕೇಳಿಸಿಕೊಳ್ಳದಂತೆ ಮತ್ತೆ ಕಲ್ಲಾಗಿ ಕುಳಿತಿದ್ದ ಅಬ್ಬೊನು ಸಾಬರು ವಾರ್ತೆ‌ ಮುಗಿದಂತೆಯೇ ಹೊರಬಂದರು. ಅಷ್ಟೊತ್ತಿಗೆ ಜಗಲಿಯಲ್ಲಿ ಕುಳಿತುಕೊಂಡಿದ್ದ ಅಬ್ಬಾಸ್ ಎತ್ತಿ ಕಟ್ಟಿದ ಪಂಚೆಯನ್ನು ನೆಲಕ್ಕೆ ಬಿಟ್ಟು ಕೈಕಟ್ಟಿ ನಿಂತ‌.

"ಅಲ್ಲ ಅಬ್ಬಾಸ್, ನಿನಗೆಷ್ಟು ಸಲ ಹೇಳುವುದು. ವಾರ್ತೆ ಆಗುತ್ತಿರುವಾಗ ಗದ್ದಲ ಮಾಡಬಾರದೆಂದು. ನಿನಗೆ ಹತ್ತು ಕತ್ತೆಯ ವಯಸ್ಸಾಯಿತಲ್ಲಾ. ಹೇಳಿದ್ದನ್ನೇ ಯಾವಾಗಲೂ ಹೇಳುತ್ತಿರಬೇಕಾ?" ಎಂದು ಜೋರು ಮಾಡಿದರೆ, ಅಬ್ಬಾಸ್ ನಸುನಗುತ್ತ ತಲೆತಗ್ಗಿಸಿ ಸುಮ್ಮನೆ ನಿಂತ. ಅಬ್ಬಾಸ್ ಅವರ ದೂರದ ಸಂಬಂಧಿ. ಆಗೊಮ್ಮೆ ಈಗೊಮ್ಮೆ ಅಬ್ಬೊನು ಸಾಬರ ಮನೆಗೆ ಬಂದರೆ ತೆಂಗಿನಕಾಯಿಯೋ, ಅಕ್ಕಿಯೋ ಪಡಕೊಂಡು ಹೊರಡುವುದುಂಟು. ಟ್ಯಾಂಕರ್ ಲಾರಿಯ ಕಂಡಕ್ಟರಾಗಿ ಹೋಗುತ್ತಿದ್ದವನು ಮದರಾಸು, ಮುಂಬೈ, ಮಹಾರಾಷ್ಟ್ರ ಅಂಥ ಊರೂರು ಸುತ್ತುತ್ತಿದ್ದವನು.

"ಇರಲಿ, ಕುಳಿತು ಕೋ. ಮತ್ತೆ ಹೇಗಿದೆ ಮುಂಬೈ?" ಎಂದು ಕೇಳಿದರೆ ಅಬ್ಬಾಸ್ "ಎಂಥ ಕಾಕ, ಫುಲ್ ಜನಾನೇ ಅಲ್ವಾ? ನಾವು ಲೋಡ್ ಮಾಡುವುದು ಬರುವುದು" ಅಂತ ಅತಿವಿನಯದಿಂದ ಮತ್ತು‌ ಮುಗ್ಧತೆಯಿಂದ ಉತ್ತರಿಸಿದ. ಅಷ್ಟರಲ್ಲಿ "ಅಲ್ವಾ... ಮುಂಬೈ ಕಡಲಲ್ಲಿ ಪೆಟ್ರೋಲಿಯಂ ಹೊಸ ನಿಕ್ಷೇಪ ತೆರೆದಿದ್ದಾರಂತೆ ಹೌದಾ? ರೇಡಿಯೋದವರು ಹೇಳುತ್ತಿದ್ದರು. ಓಹ್ ಹೋಗಿ ಹೋಗಿ‌ ನಿನ್ನಲ್ಲಿ ಕೇಳುತ್ತಿದ್ದೀನಲ್ವಾ?" ಅನ್ನುತ್ತಾ‌ ಮೀಸೆ‌ ಮಧ್ಯೆ‌ ಸಣ್ಣಗೆ‌‌ ನಕ್ಕರು. "ನಿಮಗೆ ರೇಡಿಯೋ ಎಲ್ಲಾ ಹೇಳುತ್ತೆ. ನಮಗೆಂಥ ಗೊತ್ತಿರುತ್ತೆ" ಎಂಬ ಅಬ್ಬಾಸನ‌ ಮರುತ್ತರ ಬಂತು. ಅಷ್ಟರಲ್ಲಿ ಹೆಂಡತಿ ತಂದು ಕೊಟ್ಟ ಚಹಾವನ್ನು ಸೊರ್ರನೆಳೆದುಕೊಂಡು ಅಬ್ಬೊನು ಸಾಬರು ಆರಾಮಕುರ್ಚಿಯ ಮೇಲೆ ಮೈಚೆಲ್ಲಿದರು.

ಸ್ವಲ್ಪ ಮೆಲ್ಲಗೆ ಕೆಮ್ಮಿದ ಅಬ್ಬಾಸ್ ಮತ್ತೆ ಮಾತಿಗೆ ಶುರುವಿಟ್ಟ. "ನಿನ್ನೆ ರಾತ್ರಿ ಎಂಥ ಆಯ್ತು ಗೊತ್ತಾ? ನಾನು ಟ್ಯಾಂಕರ್ ಬಿಟ್ಟು ಉಪ್ಪಿನಂಗಡಿಯಿಂದ ನಡೆಯುತ್ತಾ ಬರ್ತಿರ್ಬೇಕಾದ್ರೆ ಯಾರೋ ಮುಂದೆ ನಡೀತಾ ಬರ್ತಾ‌‌ ಇದ್ರು" ಅದು ಕೇಳಿ ಅಬ್ಬೊನು ಸಾಬರಿಗೆ ಕುತೂಹಲ ಹುಟ್ಟಿರಬೇಕು. "ಹೂಂ ಹೇಗೂ ಬಂಡಾಲ್ ಬಿಡೋಕೆ ಪ್ರಾರಂಭಿಸಿದ್ದಿ ಕೇಳಿಸ್ಕೋತಿನಿ" ಅಂತ ಅಬ್ಬಾಸನಿಗೂ ಒಂದು ಗ್ಲಾಸ್ ಚಹಾ ತರಿಸಿಕೊಟ್ಟು ಕೇಳಿಸಿಕೊಳ್ಳಲು ಕಿವಿ ನಿಮಿರಿಸಿ ಕುಳಿತರು‌‌.

‘ಹಾ ಮುಂದೇನಾಯ್ತು?’ ಎಂದು ಕೇಳಿಯೇ ಬಿಟ್ಟರು.

‘ಹಾಗೇ ನಡೀತಾ ಬಂದೆ, ಬೆಳ್ತಂಗಡಿ ರಸ್ತೆಯಿಂದ ದಾರಿ ಬದಲಿಸುವ ತಿರುವಿನವರೆಗೂ ಆ ಜೀವ ನಡೆಯುತ್ತಲೇ ಇತ್ತು. ನೋಡಿದ್ರೆ ಥೇಟ್, ನಮ್ಮ ಈಸುಬು ಹಾಜಿ ಥರಾನೇ. ಸ್ವಲ್ಪ ಕುಂಟುತ್ತಾ ನಡೆಯುತ್ತಿತ್ತು. ಎಷ್ಟು ಕರೆದರೂ ಕೇಳಿಸಿಕೊಳ್ಳುವುದುಂಟೇ’
‘ಎಂಥ ಮಾರಾಯ! ಅದು ಈಸುಬು ಹಾಜಿ ಇರ್ಬೇಕು ಮಾರಯ!’
‘ಎಂಥ ಕಾಕ, ಅವ್ರಾಗಿದ್ರೆ ನಿಮ್ಮಲ್ಲಿ ಹೇಳ್ತಿದ್ನಾ‌, ನಾನು ಅವರ ಹಿಂಬಾಲಿಸಿಕೊಂಡು ಎಷ್ಟು ವೇಗವಾಗಿ ನಡೆದ್ರೂ ನನ್ಗೆ ಅವ್ರನ್ನೂ ಹಿಂಬಾಲಿಸಲಾಗಲಿಲ್ಲ ಅಂತ. ಕೊನೆಗೆ ಅದು ನಮ್ಮ ಓ ಅಲ್ಲಿ ಕಾಣ್ತಿದೆಯಲ್ವಾ ಆ ದೊಡ್ಡ ಕಾಸರಕನ ಮರದ ಬಳಿ ಬಂದಾಗ ಆ ವ್ಯಕ್ತಿಯೂ ಮಾಯ!’ ಅಂತ ಕೊಂಚ ಬೆದರುವ ಧ್ವನಿಯಲ್ಲೇ ಹೇಳಿದ. ಅವನ ಮೈ ರೋಮಗಳು ಹೆದರಿಕೆಯಿಂದ ಎದ್ದು ನಿಂತಿದ್ದವು‌.

‘ಓ, ಈ ಕಾಸರಕನ ಮರ ಅಲ್ವಾ?! ಅವತ್ತು ಬೀರನ ಮಗ ಕೂಡ ಇಲ್ಲೇ ಸತ್ತ‌. ಪಂಜುರ್ಲಿ ಅಟ್ಟಾಡಿಸಿ ಹೊಡೆಯಿತು ಅಂತ ಹೇಳಿಲ್ವಾ. ಎಂಥದೋ ಆ ಮರದಲ್ಲುಂಟು ಮಾರಾಯಾ! ನೋಡುವ ಇದಕ್ಕೊಂದು ಗತಿ ಕಾಣಿಸದಿದ್ದರೆ ಕಷ್ಟ’ ಎಂದು ಏನೋ ನಿರ್ಧರಿಸಿದವರಂತೆ ಮೆಟ್ಟಿಲ ಬಳಿಯ ಚರ್ಮದ ಚಪ್ಪಲಿ ಮೆಟ್ಟಿಕೊಂಡು ತೋಟಕ್ಕೆ ನಡೆದು ಬಿಟ್ಟರು‌. ಆದಾಗಲೇ ಸೂರ್ಯನ ಮುಂಜಾನೆಯ ಚಿನ್ನದ ಎರಕ ಗದ್ದೆಯ ಮೇಲೆ ಮೂಡುತ್ತಿದ್ದವು. ದೂರದಲ್ಲೆಲ್ಲೋ ಯಾರನ್ನೋ ಕಂಡಂತೆ ದಿಟ್ಟಿಸಿ ನೋಡಿ ಸಣ್ಣಗೆ ‘ಬೌ’ ಅಂತ ಬೊಗಳಿ ಡಾಬರ್‌ಮನ್ ನಾಯಿ ಸಾಬರ ಹಿಂದೆಯೇ ಹೆಜ್ಜೆ ಹಾಕತೊಡಗಿತು. ಆ ಬರವನ್ನು ತಿಳಿದ ನಾಲ್ಕಾರು ಕೊಕ್ಕೆರೆಗಳು ನೆಲ ಬಿಟ್ಟು ಪಕಪಕನೆ ರೆಕ್ಕೆಬಡಿಯುತ್ತ ಹಾರಿ ಬಿಟ್ಟವು. ಅದಾಗಲೇ ಎದುರಿನ ಸೇತುವೆ ದಾಟಿದ್ದ ಅಬ್ಬೊನು ಸಾಬರು ಮನೆಯ ಕಡೆಗೊಮ್ಮೆ ತಿರುಗಿ ನೋಡಿದರೆ ಆ ಭಾರೀ ಕಾಸರಕನ ಮರ ಭೀತಿ ಹುಟ್ಟಿಸುತ್ತ ಗಹಗಹಿಸುವಂತೆ ಕಂಡಿತು. ಗದ್ದೆ ಬದುವಿನಲ್ಲಿ ಹಸಿರು ಆಸ್ವಾದಿಸುತ್ತ ನಡೆಯುತ್ತಿರಬೇಕಾದರೆ ದೂರದಲ್ಲಿ ಪೆರ್ನು ಬರುತ್ತಿದ್ದ. ಪೆರ್ನು ಅಂದರೆ ಅಬ್ಬೊನು ಸಾಬರ ಮನೆಯ ಐನಾತಿ. ಹಿಂದೆ ಅವರ ಮನೆಕೆಲಸಕ್ಕೆ ಬರುತ್ತಿದ್ದ ಅಂಗರೆಯ ಮಗ. ಅಂಗರೆ ಕೆಲವು ದಿನಗಳ ಹಿಂದೆ ಕಾಸರಕನ ಮರದ ಬಳಿ ನಡೆದುಕೊಂಡು ಬರುತ್ತಿದ್ದಾಗ ತಲೆ ತಿರುಗಿ ಬಿದ್ದು, ಆ ಬಳಿಕ ವಾತರೋಗ ಅಂಟಿ ಮನೆಯಲ್ಲಿ ಚಾಪೆ ಸಮಾನಳಾಗಿ ಹೋಗಿದ್ದಳು.

"ಸಾವುಕಾರ್ರೇ, ನಮಸ್ಕಾರ ಉಂಟು" ಹತ್ತಿರ ಬಂದ ಪೆರ್ನು ವಂದಿಸಿದ. "ಹಾ ಪೆರ್ನುವಾ ಅಮ್ಮ ಹೇಗಿದ್ದಾಳೆ?, ಸುಧಾರಿಸಿದ್ದಾಳ?" ಅಬ್ಬೊನು ಸಾಬರು ಕುಶಲ ಅನ್ವೇಷಣೆ ಮಾಡಿದರು. "ಎಂಥ ಹೇಳುವುದು ಸಾಹೇಬ್ರೇ, ಆ ಪಿಶಾಚಿಯ ಮರದ ಹತ್ತಿರ ಏನೋ ಹೋಮ ಮಾಡಬೇಕಾಗಿದೆ ಅಂತ ಒಬ್ಬ ಮಂತ್ರವಾದಿ ಹೇಳಿದ್ದ. ಆ ಬಳಿಕ ಅಲ್ಲಿಗೆ ಬಂದ ಅರ್ಧ ಗಂಟೆಯೊಳಗೆ ನನಗಿದು ಆಗಲ್ಲ ಅಂತ ಜಾಗ ಖಾಲಿ ಮಾಡಿದ" ಎಂದು ಹೇಳಿ ನಿಟ್ಟುಸಿರು ಬಿಟ್ಟ.

"ಸರಿ, ನೀನಿಗ ಒಂದು ಕೆಲಸಮಾಡು ನಮ್ಮ ದಾಯಿದ ಪೊರ್ಬುವಿನಲ್ಲಿ ಹೇಳಿ ಆ ಮರವನ್ನೊಮ್ಮೆ ಕಡಿಸಿ ಬಿಡು. ಸಂಬಳ ನಾನು ಕೊಡ್ತೇನೆ. ಜೊತೆಗೆ ಬೀರ ಮತ್ತು ಐತ್ತನನ್ನು ಕರೆಸ್ಕೋ. ಸಾಹೇಬ್ರು ಹೇಳಿದ್ದಾರೆ ಅಂತಲೂ ಹೇಳು" ಎಂದು ಪೆರ್ನುನಿಗೆ ಆದೇಶ ಮಾಡಿದವರೇ ಸರಸರನೆ ಅವರ ಸಮೃದ್ಧ ತೋಟದೊಳಗೆ ನುಸುಳಿದರು. ಪೆರ್ನು ಕೂಡಾ ಹೊರಟು ಹೋದ. ಒಂದು ಸುತ್ತು ತಿರುಗಿ ಬರುವಷ್ಟರಲ್ಲಿ ಅವರಿಗೆ ಸುಸ್ತು ಅನಿಸಿರಬೇಕು. ತಿರುಗಿ ಮನೆಯ ಕಡೆ ಬರುತ್ತಿರುವಾಗ ಮೇಲಿನ ದಾರಿಯಲ್ಲಿ ಯಾರೋ ನಾಲ್ಕೈದು ಜನರು ಅಡ್ಡಾಡುವುದು ಕಂಡಿತು. ಬಹುಶಃ ಕಾಸರಕನ ಮರ ಕಡಿಯಲು ಅವರೆಲ್ಲಾ ಬಂದಿರಬೇಕು. ಅಬ್ಬೊನು ಸಾಬರು ಸೀದಾ ಬಂದು ಮನೆಯ ಚಾವಡಿಯಲ್ಲಿ ಕುಳಿತರು. ರೇಡಿಯೋದ ಕಿವಿ ಹಿಂಡುತ್ತ ಮಡಿಲಲ್ಲಿ ಇರಿಸಿಕೊಂಡರು.

"ಈಗ ಚಿತ್ರಗೀತೆಗಳು ಪ್ರಸಾರವಾಗುತ್ತದೆ" ಎಂದು ಒದರಿಕೊಂಡ ರೇಡಿಯೋ ಗೊಗ್ಗರು ಸ್ವರದಲ್ಲಿ ಹಾಡು ಹೇಳತೊಡಗಿತು. ಅಲ್ಲೇ ನಿದ್ರೆ ತೂಗುತ್ತಾ ಮಲಗಿದವರಿಗೆ ಎಚ್ಚರವಾಗಿದ್ದು "ಧಡಾಳ್" ಎಂದು ಮನೆಯ ಮೇಲಿನ ದಾರಿಯಲ್ಲಿ ಉರುಳಿದ ಕಾಸರಕನ ಮರ ಬಿದ್ದ ಸದ್ದು ಕೇಳಿದಾಗಲೇ. ಅಷ್ಟರಲ್ಲಿ ಅಂಗಳದಲ್ಲಿ ಮಲಗಿದ್ದ ನಾಯಿ ಏನು ನಡೆಯುತ್ತಿದೆ ಎಂದರಿಯದೆ ಗೊಂದಲದಿಂದ ಜೋರಾಗಿ ಬೊಗಳತೊಡಗಿತು‌. ‘ತಥ್! ಸ್ವಲ್ಪ ಸುಮ್ಮನಿರ್ಬಾರ್ದಾ?’ ಅಂಥ ಅಬ್ಬೊನು ಸಾಬರು ಗದರಿಸಿದಾಗ ಅದೂ ತಣ್ಣಗಾಯ್ತು. ಒಂದರ್ಧ ಗಂಟೆ ಕಳೆದಿರಬೇಕು. ಅವರೆಲ್ಲಾ ಕೆಲಸ ಮುಗಿಸಿ ಮನೆಯ ಕಡೆ ಬರುತ್ತಿರುವುದು ಕಂಡಿತು. ರೇಡಿಯೋ ಆಫ್ ಮಾಡಿ ಒಳಗೆ ಹೋದ ಅಬ್ಬೊನು ಸಾಬರು ಒಂದಿಷ್ಟು ನೋಟಿನ ಕಂತೆಗಳನ್ನು ತಂದು ಅವರಿಗೆ ಹಂಚಿ ಬೀಳ್ಕೊಟ್ಟರು.

***
ಮರುದಿನ ರೇಡಿಯೋದಲ್ಲಿ ಯಾವ ಸ್ಟೇಶನ್ ತಿರುಗಿಸಿದರೂ "ಶ್ಶ್" ಎಂಬ ಸದ್ದು ಮಾತ್ರ. ಏನೋ ಬ್ಯಾಟರಿ ಮುಗಿದಿರಬಹುದೆಂದು, ತಂದಿಟ್ಟಿದ್ದ ಹೊಸ ಬ್ಯಾಟರಿ ಹಾಕಿ ಪರೀಕ್ಷಿಸಿದರು. ಮತ್ತದೇ ರಾಗ. ರೇಗಿ ಆ ಧ್ಯಾನಸ್ಥ ರೇಡಿಯೋವನ್ನು ತಂದು ವಾರ್ತೆಯನ್ನು ಎಲ್ಲಿ ಕಳೆದುಕೊಳ್ಳುವೆನೋ ಎಂಬ ಭಯದಿಂದ ತುರಾತುರಿಯಲ್ಲಿ ಹೊರಗೆ ಒಳಗೆ ನಡೆಯತೊಡಗಿದರು. ಅಷ್ಟರಲ್ಲೇ ಅಬ್ಬಾಸ್ "ಕಾಕ ಕಾಕ" ಎಂದು ಕರೆದದ್ದು ಕೇಳಿತು. ಪಿತ್ತ ನೆತ್ತಿಗೇರಿ, "ಎಂಥ ಸಾಯ್ತಿ ಮಾರಾಯ. ಬೊಗಳು ಒಮ್ಮೆ" ಅಂತ ಬೈಯುತ್ತಾ‌ ಜಗಲಿಗೆ ಬಂದರು. ಅಬ್ಬಾಸನ ಮುಖದಲ್ಲಿ ಭಯವಿತ್ತು.

"ಕಾಕಾ.. ತೋಟದಲ್ಲಿ ಒಂದು ಆಡನ್ನು ಹೆಬ್ಬಾವು ಹಿಡಿದಿದೆ" ಎಂದು ಬೇಸರದಿಂದಲೇ ಹೇಳಿ ಮುಗಿಸಿದ. ರೇಡಿಯೋ ಮಾತನಾಡದ ಸಿಟ್ಟು ಅಬ್ಬೊನು ಸಾಬರಲ್ಲಿ ಮೊದಲೇ ಇದ್ದುದರಿಂದ ಮನೆಯ ಗೋಡೆಗೆ ತೂಗು ಹಾಕಿದ ಬಂದೂಕು ತೆಗೆದು ಹೆಗಲಿಗೇರಿಸಿಕೊಂಡರು. "ಬಾ" ಅಂತ ಅದಲು ಬದಲು ಚಪ್ಪಲಿ ಹಾಕಿಕೊಂಡು, ಯದ್ವಾತದ್ವಾ ನಡೆಯುತ್ತಾ ಹೊರಟು ಬಿಟ್ಟರು. ಸೇತುವೆ ದಾಟಿ ಹೋಗಬೇಕಾದರೆ ಬಿಸಿಲು ಕಾಸರಕನ ಮರವಿಲ್ಲದೆ ನೇರ ಅಲ್ಲೆಲ್ಲಾ ಬೀಳುತ್ತಿರುವುದು ಸ್ಪಷ್ಟವಾಗಿ ಗುರುತಿಸಬಹುದಿತ್ತು. ಬಿರಬಿರನೆ ತೋಟದೆಡೆಗೆ ನಡೆದವರ ಹಿಂದೆ ಅಬ್ಬಾಸನಿದ್ದ. ಅವರಿಬ್ಬರ ಹಿಂದೆ ಅಬ್ಬೊನು ಸಾಬರ ಡಾಬರ್‌ಮನ್ ನಾಯಿಯೂ.

ತೋಟದ ಮಧ್ಯೆ ಎಲ್ಲೋ ಆಡಿನ ಕ್ಷೀಣ ಆರ್ತನಾದ ಕೇಳುತ್ತಿತ್ತು. ಹತ್ತಿರ ಬರುವಷ್ಟರಲ್ಲಿ ಹೆಬ್ಬಾವು ಆಡಿನ ಮುಕ್ಕಾಲು ಭಾಗವನ್ನು ಹೊಟ್ಟೆಗಿಳಿಸಿತ್ತು. ಕೋಪ ಎಲ್ಲಿತ್ತೋ ಗೊತ್ತಿಲ್ಲ. ಬಂದೂಕು ಗುರಿಹಿಡಿದು ಅಬ್ಬೊನು ಸಾಬರು ಟ್ರಿಗ್ಗರ್ ಒತ್ತಿದರು. ಭಯಂಕರ ಆಸ್ಫೋಟನೆ ತೋಟದ ತುಂಬಾ ಪ್ರತಿಧ್ವನಿಸಿತು. ಹಾವು ವಿಲವಿಲನೆ ಒದ್ದಾಡುತ್ತಿದ್ದಂತೆ ಗುಂಡು ಹೊಕ್ಕ ತಲೆ ಛಿದ್ರಗೊಂಡು ನೇತಾಡುತ್ತಿತ್ತು. ಐದೇ ನಿಮಿಷದಲ್ಲಿ ಹೆಬ್ಬಾವು ಸ್ತಬ್ಧವಾಯಿತು. ಅಷ್ಟರಲ್ಲೇ ಅಲ್ಲಿಗೆ ತಲುಪಿದ್ದ ಪೆರ್ನು ಮತ್ತು ಬೀರ ನೋಡುತ್ತಲೇ ಇದ್ದರು. ಹಾವು ಸತ್ತದ್ದೇ ಅಬ್ಬೊನು ಸಾಬರು ಅದೇ ವೇಗದಲ್ಲಿ ಬುಸುಗುಡುತ್ತಾ ಮನೆಯ ಕಡೆ ಬಂದರು.

ಮರುದಿನವೂ ರೇಡಿಯೋದ ರೋಗ ಶಮನಗೊಳ್ಳಲಿಲ್ಲ. ಅಬ್ಬೊನು ಸಾಬರು ಸಣ್ಣ ವಿಷಯಕ್ಕೂ ಕ್ರೋಧಗೊಳ್ಳತೊಡಗಿದರು. 'ಯಾರೋ ರೇಡಿಯೋ ಹಾಳು ಮಾಡಿದ್ದಾರೆ' ಎಂದು ಮನೆಯ ಎಲ್ಲರಿಗೂ ಬೈಯ್ಯತೊಡಗಿದರು. ಈ ಬೈಗುಳ ಸಹಿಸಲಾಗದೆ ಮಗ ರಿಪೇರಿಗೆಂದು ರೇಡಿಯೋ ಕೊಂಡು ಹೋದ. ಎಲ್ಲಿ ಹುಡುಕಿದರೂ ರೇಡಿಯೋ ಅಂಗಡಿಗಳೇ ಇಲ್ಲ. ಪೇಟೆಯಲ್ಲೊಬ್ಬ ಟಿ.ವಿ ಅಂಗಡಿಯವನಲ್ಲಿ ಕೇಳಿದರೆ "ಈ ಕಾಲಕ್ಕೆ ಯಾರು ಸರ್ ರೇಡಿಯೋ ಕೇಳ್ತಾರೆ" ಅಂಥ ಮರು ಉತ್ತರ ನೀಡಿದ. ಪುತ್ತೂರಿನಲ್ಲಿ ಯಾರೋ ಒಬ್ಬ ಇದ್ದಾರೆ ಎಂದು ಕೇಳಿದಾಗ ನಗರದಿಂದ ಇಪ್ಪತ್ತು ಕಿ.ಮೀ ಹೋಗಿ ನೋಡಿದರೆ ರೇಡಿಯೋ ಅಂಗಡಿ ಸಿಕ್ಕಿತು.
"ಸ್ವಾಮಿ, ರೇಡಿಯೋ ಸರಿ ಇಲ್ಲ" ಅಂದ.
"ಆತ ಕೈಗೆತ್ತಿಕೊಂಡು ಸ್ಟೇಶನ್ ಸರಿಪಡಿಸಿ ಚಾಲೂ ಮಾಡಿದ"
"ಈ ವಾರ್ತೆಯನ್ನು ಆಕಾಶವಾಣಿಯಿಂದ ಕೇಳುತ್ತಿದ್ದೀರಿ" ಅಂತ ರೇಡಿಯೋ ಹೇಳಿಕೊಂಡಿತು.

"ಸರಿಯಾಗಿಯೇ ಇದೆಯಲ್ವಾ? ಎಂದು ಹೇಳಿ ಅವನು ಹಿಂತಿರುಗಿಸಿದ. ಲಗುಬಗೆಯಿಂದ ಮನೆಗೆ ಹೊರಟು ಬಂದ ಮಗ ರೇಡಿಯೋ ಸರಿಯಾಗಿಯೇ ಇದೆಯೆಂದು ಹೇಳಿದ. ಆ ಹೊತ್ತಿಗೆ ಯಾವುದೇ ಕಾರ್ಯಕ್ರಮವಿಲ್ಲದಿದ್ದರಿಂದ ಪರೀಕ್ಷಿಸುವುದು ಸಾಧ್ಯವಿರಲಿಲ್ಲ. ರಾತ್ರಿಯ ವಾರ್ತೆಗಾಗಿ ಕಾದು ಕುಳಿತ ಅಬ್ಬೊನು ಸಾಬರಿಗೆ ಒಂದೊಂದು ನಿಮಿಷವೂ ಗಂಟೆಗಳಂತೆ ಸರಿಯಿತು. ಏಳು ಗಂಟೆಗೆ ರೇಡಿಯೋ ಆನ್ ಮಾಡಿದರು. ಆದರೆ ಫಲಿತಾಂಶ ಶೂನ್ಯ! ರೆಡಿಯೋ "ಶ್ಶ್!" ಎಂಬ ಸದ್ದಲ್ಲದೆ ಇನ್ನೇನೂ ಹೇಳಲಿಲ್ಲ.

ಅಬ್ಬೊನು ಸಾಬರ ಕೋಪ ನೆತ್ತಿಗೇರಿತು‌. "ನಾಳೆ ನಾನೇ ಬರ್ತೇನೆ" ಎಂದು ಮಗನಲ್ಲಿ ಹೇಳಿದ್ದರು. ಮರು ದಿನ ಬೆಳಗೆದ್ದವರು ಮತ್ತೆ ರೇಡಿಯೋ ಕಿವಿ ಹಿಂಡಿದರು. ಯಾವುದೇ ಮಾತಿಲ್ಲ. ಬೇಸರಗೊಂಡು ಕುಳಿತುಕೊಂಡಿರಬೇಕಾದರೆ ಅಂಗಳಕ್ಕೆ ಅಂಟಿಕೊಂಡಿದ್ದ ದಾರಿಯಲ್ಲಿ ಪೆರ್ನು ಓಡಿಕೊಂಡು ಬರುವುದು ಕಂಡಿತು. "ದಾಯಿದ ಪೊರ್ಬುವಿಗೆ ರಾತ್ರಿ ಹಾವು ಕಡಿದು ತೀರಿಕೊಂಡರಂತೆ‌".

"ಓಹ್! ಹೌದೊ" ಎಂದು ವಿಷಾದವದನನಾಗಿ ಬೈರಾಸು ಹೆಗಲ ಮೇಲೆ ಹಾಕಿಕೊಂಡು ಅಬ್ಬೊನು ಸಾಬರು ಇಳಿದೇ ಬಿಟ್ಟರು. ಮತ್ತೊಮ್ಮೆ ಆ ಸೇತುವೆ ದಾಟಬೇಕಾದರೆ ಅಲ್ಲಿದ್ದ ಭಾರೀ ಕಾಸರಕನ ಮರದ ನೆರಳು ಇಲ್ಲದೆ ತೀಕ್ಷ್ಣವಾದ ಬಿಸಿಲು ನೇರವಾಗಿ ಬೀಳುತ್ತಿದ್ದುದ್ದು ಅವರೆಲ್ಲರ ಅರಿವಿಗೆ ಬಂತು. ಅಬ್ಬೊನು ಸಾಬರ ಮನಸ್ಸಲ್ಲಿ ಚಿಂತೆಗಳು ತುಂಬಿದ್ದವು. ಎರಡು ದಿನದ ಹಿಂದೆ ಉರುಳಿದ ಕಾಸರಕನ ಮರ, ಆಡು ನುಂಗಿದ ಹೆಬ್ಬಾವು, ಮಾತನಾಡದ ರೇಡಿಯೋ, ದಾಯಿದ ಪೊರ್ಬುವಿನ ಸಾವು; ಈ ಎಲ್ಲ ವಿಷಯಗಳನ್ನೂ ನೆನೆದು ಅವರಿಗೆ ಹೈರಾಣಾಗುತ್ತಿರುವಂತೆ ಅನ್ನಿಸಿತು. ನಿಜಕ್ಕೂ ಆ ಕಾಸರಕನ ಮರದ ಸಾವೇ ಕಾರಣವೆ? ಅಥವಾ ಅದರಲ್ಲಿ ಬದುಕು ಸವೆಸುತ್ತಿದ್ದ ಭೂತಗಳ ಕಿರುಕುಳವೆ? ಒಂದೂ ತಿಳಿಯದೇ ತೋಟ ದಾಟಿ ಅಬ್ಬೊನು ಸಾಬರು ಪೊರ್ಬುವಿನ ಮನೆಗೆ ತಲುಪಿದರು. ಅಂತ್ಯಕ್ರಿಯೆ ಮುಗಿದು, ಯಾರಾದರೂ ಮಂತ್ರವಾದಿ ಬಳಿ ತೆರಳಬೇಕೆಂದು ತೀರ್ಮಾನಿಸಿದರು. ಬರುವ ದಾರಿಯಲ್ಲಿ ಕಾಸರಕನ ನೆರಳ ನೇರಕ್ಕೆ ಬರುತ್ತಿದ್ದ ಅಷ್ಟೂ ಗದ್ದೆಯ ಸಸಿಗಳು ಹಳದಿ‌ಯಾಗಿ ಸುಟ್ಟಂತೆ ಕಂಡಿತು.

ಹಾಗೆ ಒಂದೇ ದಿನದಲ್ಲಿ ಚಿತ್ರವಿಚಿತ್ರ ತಿರುವುಗಳಲ್ಲಿ ನಡೆದ ಘಟನೆಗಳಿಂದ ಸೋತ ಮೈ ಹೊತ್ತು ಬಂದು ಮಲಗಿದ ಅಬ್ಬೊನು ಸಾಬರಿಗೆ ವಿಚಿತ್ರ ರೋಗವೊಂದು ಆವರಿಸಿಕೊಂಡು ಬಿಟ್ಟಿತು. ಚುರುಕಿನಿಂದ ಓಡಾಡುತ್ತಿದ್ದ ಸಾಬರು ಕುಸಿದರು. ಅವರ ಅಬ್ಬರದ ದನಿ ಉಡುಗಿತು. ಮಲಗಿದಲ್ಲಿಯೇ ಮಲಗಿದರು. ಕೈ ಕಾಲುಗಳು ಎದ್ದು ನಿಂತುಕೊಳ್ಳಲಾಗದಷ್ಟು ಕಂಗಾಲಾದರು. ಮಾತಿಲ್ಲ, ಕತೆಯಿಲ್ಲ. ಗಂಜಿ ಒತ್ತಾಯ ಪೂರ್ವಕವಾಗಿ ಕುಡಿಯುತ್ತಾರೆ‌. ಮತ್ತೆ ಸ್ವಲ್ಪ ಹೊತ್ತು "ಶ್ಶ್" ಎಂದುಸುರುವ ರೇಡಿಯೋ ಆನ್ ಮಾಡುತ್ತಾರೆ. ಮತ್ತೆ ಆಫ್ ಮಾಡುತ್ತಾರೆ. ಮನೆಗೆ ಡಾಕ್ಟರ್ ಬಂದು ಮದ್ದು ಕೊಡುತ್ತಾರೆ. ಯಾವುದೇ ಫಲವಿಲ್ಲ. ಊರಿನ ಯಾರೊಬ್ಬರೂ ಅಬ್ಬೊನು ಸಾಬರ ಇರುವಿಲ್ಲದೆ ಪೇಲವಮುಖ ಹೊತ್ತು ಸತ್ತ ಮನೆಯಂತೆ ವರ್ತಿಸುತ್ತಿದ್ದಾರೆ. ಮಂತ್ರವಾದಿ ಬಂದಾಯಿತು, ಹಣ ಪೋಲಾಯಿತೆ ವಿನಃ ಯಾವ ಪ್ರಯೋಜನವೂ ಬಾರಲಿಲ್ಲ.

ಇದೇ ಸ್ಥಿತಿಯಲ್ಲಿ ಒಂದು ತಿಂಗಳು ಕಳೆದಿರಬೇಕು; ಒಂದು ಸಂಜೆಗೆ ಮೋಡಗಳು ಕಾಡಾನೆ ಗುಂಪಿನಂತೆ ನೆರೆದು ಇಡೀ ಊರನ್ನೇ ಬೇಗ ರಾತ್ರಿಯಾಗಿಸಿಬಿಟ್ಟವು‌. ಜೋರಾಗಿ ಬೀಸುವ ಗಾಳಿ. ದೂರದಲ್ಲಿ ಆಗೊಮ್ಮೆ ಈಗೊಮ್ಮೆ ಲಟಲಟನೆ ಗೆಲ್ಲುಗಳು ಮುರಿಯುವ ಸದ್ದು. ಸ್ಟುಡಿಯೋದ ಕತ್ತಲಲ್ಲಿ ಕ್ಯಾಮೆರಾ ಮಿಂಚಿಸುವಂತಹ ಕೋರೈಸುವ ಮಿಂಚು. ಹೆದರಿಕೆಯಿಂದ ಗುಂಪಾಗಿ ಹಾರುತ್ತಾ ಸದ್ದು ಎತ್ತರಿಸುತ್ತಿರುವ ಹಕ್ಕಿಗಳು. "ಬೇ" ಎಂದು ಸಾಮೂಹಿಕವಾಗಿ ಅರಚುತ್ತಿರುವ ದನ ಕರುಗಳು. ಕ್ಷಣಾರ್ಧದಲ್ಲಿ ದೊಣ್ಣೆ ಎಸೆದಂತೆ ದೊಡ್ಡ ಮಳೆ ಹನಿಗಳು ಭೂಮಿಗೆ ಮುತ್ತತೊಡಗಿದವು. ಭಯಂಕರ ಮಳೆ. ತೋಟೆ ಮದ್ದಿನಲ್ಲಿ ಬಂಡೆ ಒಡೆದಂತೆ ಕೇಳಿಸುವ ವಿಪರೀತ ಗುಡುಗು.

ಮಳೆಯ ಹೊಯ್ದಾಟದಲ್ಲಿ ಜಗಲಿ ತುಂಬಾ ನೀರು. ಗುಡುಗು ಕರೆಂಟಿಗೆ ಎಳೆದು ಅಪಾಯ ಬಾರದಿರಲೆಂದು ಮಗ ಹೊರ ಹೋಗಿ ಉದ್ದದ ಕಬ್ಬಿಣದ ಸಲಾಕಿಗೆ ಅಡ್ಡಲಾಗಿ ಕಟ್ಟಿದ ತುಂಡು ಕಬ್ಬಿಣ ಸಲಾಕೆಯನ್ನು ತಂದ. ಮೆಲ್ಲಗೆ ಮಳೆಯಲ್ಲಿ ತೋಯುತ್ತಾ ಮನೆಯ ಮಾಡಿನ ಬದಿಗೆ ಬಲವಾಗಿ ಕಟ್ಟಿದ. ಮಳೆ ಇನ್ನಷ್ಟು ಜೋರಾಯ್ತು. ಮೂರು ಗಂಟೆಗಳ ಕಾಲ ಸುರಿದ ಮಳೆ ತಣ್ಣಗಾಯ್ತು. ಗುಡುಗು, ಮಿಂಚು ನಿಂತಿತು. ಮನಸೋ ಇಚ್ಫೆ ಅತ್ತು ಮುಗಿಸಿದಷ್ಟು ಬಾನು ಹಗುರಾಯಿತು. ಮಳೆ ಸಂಪೂರ್ಣ ನಿಂತು ಹೊರಗೆ ಜಿಟಿಜಿಟಿ ಹನಿಯುತ್ತಿತ್ತು.

ಆಗ ಸುಮಾರು ಗಂಟೆ ಏಳಾಗಿರಬಹುದು. ಅಭ್ಯಾಸ ಬಲದಂತೆ ಅಬ್ಬೊನು ಸಾಬರು ಮೆಲ್ಲಗೆ ರೇಡಿಯೋ ತಿರುಗಿಸಿದರು. ರೇಡಿಯೋ ಮೆಲ್ಲಗೆ ಮಾತನಾಡಲಾರಂಭಿಸಿತು. "ರಾಜ್ಯದಲ್ಲಿ ಅನಿರೀಕ್ಷಿತ ಭಾರೀ ಮಳೆ" ಎಂದು ಸ್ಪಷ್ಟವಾಗಿ ಓದುತ್ತಿರುವುದು ಕೇಳಿತು. ವಾರ್ತೆ ಓದಿ ಮುಗಿದಂತೆ ಅಬ್ಬೊನು ಸಾಬರಿಗೆ ಹಿಂದಿನ ಹುರುಪು ಮರಳಿತು. ಒಂದು ತಿಂಗಳು ಪ್ರಶಾಂತ ಮೌನದಿಂದ ಮುಚ್ಚಿದ್ದ ಆ ಕೊಠಡಿಯ ಬಾಗಿಲು ತೆರೆಯಲ್ಪಟ್ಟಿತು. ನಡೆಯಲಾಗದೆ ಮಲಗಿದ್ದ ಆ ಹಿರಿ ಜೀವ ರೇಡಿಯೋವನ್ನು ಮಗುವಿನಂತೆ ಎತ್ತಿಕೊಂಡು ಜಗಲಿಗೆ ಬಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.