ಒಂದು ಕಡೆ ಜುಳು ಜುಳು ಹರಿಯುವ ನದಿ. ಮತ್ತೊಂದು ಕಡೆ ಸುಂಯ್ಯನೆ ಬೀಸುವ ತಂಗಾಳಿ. ಇನ್ನೊಂದು ಕಡೆ ಹಸಿರನ್ನು ಹೊದ್ದು ನಿಂತಿರುವ ಗಿಡ-ಮರಗಳ ಸೊಬಗು. ಮಗದೊಂದೆಡೆ ಹಕ್ಕಿ-ಪಕ್ಷಿಗಳ ಕಲರವ. ಇಂತಹ ನಯನ ಮನೋಹರ ಪರಿಸರದಲ್ಲಿ ಸಾಧುವೊಬ್ಬ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದ. ಪ್ರತಿನಿತ್ಯ ಅವನು ಅಲ್ಲಿ ಭಗವಂತನ ಧ್ಯಾನ ಮಾಡುತ್ತಿದ್ದ. ಅವನ ಗುಡಿಸಲಿನ ಎದುರಿಗಿದ್ದ ಇನ್ನೊಂದು ಗುಡಿಸಲಿನಲ್ಲಿ ಬೇಡನೊಬ್ಬ ತನ್ನ ಸಂಸಾರದೊಡನೆ ವಾಸವಾಗಿದ್ದ.

ಬೇಟೆಯಾಡುವುದು ಆ ಬೇಡನ ವೃತ್ತಿಯಾಗಿತ್ತು. ಹಾಗಾಗಿ ಅವನು ಕಾಡಿನಲ್ಲಿದ್ದ ಪ್ರಾಣಿ-ಪಕ್ಷಿಗಳನ್ನು ಪ್ರತಿದಿನ ಬೇಟೆಯಾಡಿ ಅವುಗಳನ್ನು ಕೊಂದು ತನ್ನ ಗುಡಿಸಲಿಗೆ ತರುತ್ತಿದ್ದ. ಅವುಗಳ ಮಾಂಸದಲ್ಲಿ ಅಷ್ಟಿಷ್ಟನ್ನು ತನಗೆ ಉಳಿಸಿಕೊಂಡು, ಮಿಕ್ಕಿದ್ದನ್ನು ಇತರರಿಗೆ ಮಾರಿ, ಅದರಿಂದ ಬರುವ ಹಣದಿಂದ ಜೀವನ ನಡೆಸುತ್ತಿದ್ದ. ಬೇಡನ ಕೆಲಸವನ್ನು ದಿನವೂ ನೋಡುತ್ತಿದ್ದ ಸಾಧುವಿಗೆ ಸಹಿಸಲು ಸಾಧ್ಯವಾಗಲಿಲ್ಲ. ಒಂದು ದಿನ, ಬೇಡನಿಗೆ ಬುದ್ಧಿ ಹೇಳಲೇಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದ.

ಮಾರನೆಯ ದಿನ ದಾರಿಯಲ್ಲಿ ಸಿಕ್ಕ ಬೇಡನ ಜೊತೆ ಸಾಧು ಮಾತಿಗೆ ಇಳಿದ. ‘ನೀನೊಬ್ಬ ಕೊಲೆಗಾರ. ಅಷ್ಟೇ ಅಲ್ಲ, ಮಹಾ ಪಾಪಿಷ್ಟ ನೀನು. ಒಂದು ಚೂರೂ ಕರುಣೆಯಿಲ್ಲದೆ ಪ್ರಾಣಿ-ಪಕ್ಷಿಗಳನ್ನು ಬೇಟೆಯಾಡಿ ಕೊಲ್ಲುವ ಕಟುಕ ನೀನು. ಇಂತಹ ಹೀನ ಕೆಲಸದಲ್ಲಿ ತೊಡಗಿರುವ ನಿನ್ನನ್ನು ಭಗವಂತ ಎಂದಿಗೂ ಕ್ಷಮಿಸುವುದಿಲ್ಲ. ಸತ್ತ ಮೇಲೆ ನಿನ್ನ ಗತಿ ಏನಾಗುತ್ತದೆಂದು ಗೊತ್ತೇ? ನಿನಗೆ ರೌರವ ನರಕವೇ ಗತಿ...’ ಎಂದು ಬೇಡನನ್ನು ಸಾಧು ನಿಂದಿಸಿದ.

ಸಾಧುವಿನ ಮಾತುಗಳನ್ನು ಕೇಳಿ ಬಹಳ ನೊಂದುಕೊಂಡ ಬೇಡ ಮೌನವಾಗಿ ತನ್ನ ಗುಡಿಸಲಿಗೆ ತೆರಳಿದ. ಅಲ್ಲಿ ತೂಗುಹಾಕಿದ್ದ ದೇವರ ಚಿತ್ರಪಟದ ಮುಂದೆ ಕೈಮುಗಿದು ನಿಂತು ಹೇಳಿದ... ‘ಆ ಮಹಾಮಹಿಮ ಸಾಧು ಹೇಳಿದ್ದು ನಿಜ. ಅಯ್ಯೋ, ನಾನೆಂತಹ ಘೋರ ತಪ್ಪು ಮಾಡುತ್ತಿರುವೆ. ಭಗವಂತಾ ಕರುಣೆಯಿಟ್ಟು ನನ್ನನ್ನು ಮನ್ನಿಸು. ನೀನಲ್ಲದೆ ನನ್ನನ್ನು ಕ್ಷಮಿಸುವರಾರು? ಇನ್ನೊಂದು ಜೀವವನ್ನು ಕೊಂದು ಬದುಕುವ ನನ್ನ ಬದುಕನ್ನು ಕಂಡು ನನಗೇ ಅಸಹ್ಯವಾಗುತ್ತಿದೆ. ಆದರೆ ನಾನೇನು ಮಾಡಲಿ, ಹೊಟ್ಟೆ ಪಾಡು. ನಾನು ಮತ್ತು ನನ್ನ ಸಂಸಾರ ಬದುಕಲೇ ಬೇಕಲ್ಲವೇ? ಬೇಟೆಯಾಡುವುದು ನಮ್ಮ ಕುಲ ಕಸುಬು... ಇದನ್ನು ಬಿಟ್ಟರೆ ಬೇರೆ ಕಸುಬು ನನಗೆ ಗೊತ್ತಿಲ್ಲ. ನನ್ನ ಜೀವನಕ್ಕೆ ನೀನೇ ಏನಾದರೂ ಬೇರೆ ದಾರಿ ತೋರಿಸು ಭಗವಂತಾ...’ ಎಂದು ಬೇಡ ದೇವರ ಮುಂದೆ ತನ್ನ ಪರಿಸ್ಥಿತಿ ಹೇಳಿಕೊಂಡು ಬೇಡಿಕೊಂಡ. ದುಃಖದಿಂದ ಗಳಗಳನೆ ಕಣ್ಣೀರು ಸುರಿಸಿದ.

ಒಂದೆರಡು ದಿನಗಳು ಕಳೆದವು. ಬೇಡನಿಗೆ ಜೀವನೋಪಾಯಕ್ಕೆ ಬೇರೊಂದು ದಾರಿ ಕಾಣಿಸಲೇ ಇಲ್ಲ. ಅವನು ತನ್ನ ಬೇಟೆಯ ವೃತ್ತಿಯನ್ನೇ ಮುಂದುವರೆಸಿದ. ಇದನ್ನ ಕಂಡು ಸಾಧುವಿಗೆ ವಿಪರೀತ ಕೋಪ ಬಂತು. ‘ಎಲಾ ಇವನಾ, ನಾನು ಅಷ್ಟು ಹೇಳಿದರೂ ಕೇಳದೆ ತನ್ನ ಪಾಪದ ಕೆಲಸವನ್ನೇ ಮಾಡುತ್ತಿದ್ದಾನಲ್ಲ ಈ ಅವಿವೇಕಿ’ ಎಂದು ಸಾಧು ಸಿಟ್ಟಿನಿಂದ ಕುದಿಯತೊಡಗಿದ. ‘ಇರಲಿ, ಅವನು ಅದೆಷ್ಟು ಜೀವ ತೆಗೆಯುತ್ತಾನೆಯೋ ನಾನೂ ನೋಡಿಯೇ ಬಿಡುತ್ತೇನೆ’ ಎಂದು ಮನಸ್ಸಿನಲ್ಲೇ ಸಾಧು ಹೇಳಿಕೊಂಡ.

ಆ ಬೇಡ ಬೇಟೆಯಾಡಿ, ಕೊಂದು ತರುವ ಪ್ರಾಣಿ-ಪಕ್ಷಿಗಳನ್ನು ಸಾಧು ಅಂದಿನಿಂದ ಪ್ರತಿನಿತ್ಯ ಲೆಕ್ಕವಿಡತೊಡಗಿದ. ಬೇಟೆಗೆ ಬಲಿಯಾದ ಪ್ರಾಣಿ, ಪಕ್ಷಿಗಳ ಲೆಕ್ಕ ಇಡಲು ಅಲ್ಲೇ ಮೂಲೆಯೊಂದರಲ್ಲಿ ಒಂದೊಂದು ಕಲ್ಲನ್ನು ಹಾಕತೊಡಗಿದ. ಈ ಲೆಕ್ಕಾಚಾರದಲ್ಲಿ ಮುಳುಗಿದ ಸಾಧು, ಭಗವಂತನ ಧ್ಯಾನ ಮಾಡುವುದನ್ನೂ ಮರೆತುಬಿಟ್ಟ. ಆದರೆ ಬೇಡ ಮಾತ್ರ ಮರೆಯದೆ ತನ್ನ ಬೇಟೆಯ ಕಾಯಕದ ಜೊತೆಗೆ ಭಗವಂತನನ್ನು ಪೂಜಿಸುವ ಕೆಲಸ ಮುಂದುವರಿಸಿದ್ದ. ವಿಧಿಯಿಲ್ಲದೆ ತಾನು ಈ ಕಸುಬು ಮಾಡುತ್ತಿರುವುದಾಗಿ ದೇವರಲ್ಲಿ ಮೊರೆಯಿಡುತ್ತಿದ್ದ.

ಹೀಗೆ ಒಂದೆಡೆ ಬೇಡನ ಬೇಟೆಯಾಡುವ ಕಾಯಕ. ಮತ್ತೊಂದೆಡೆ ಅವನು ಬೇಟೆಯಾಡಿ ಕೊಂದು ತರುವ ಪ್ರಾಣಿ-ಪಕ್ಷಿಗಳನ್ನು ಲೆಕ್ಕಹಾಕಿ ಅದರ ಸಂಕೇತವಾಗಿ ಒಂದೊಂದು ಕಲ್ಲುಗಳನ್ನು ಪೇರಿಸುವ ಸಾಧುವಿನ ಕೆಲಸ ವರ್ಷಗಟ್ಟಲೆ ನಡೆಯಿತು. ಸಾಧು ಪೇರಿಸಿಟ್ಟ ಕಲ್ಲುಗಳು ಬೆಟ್ಟದ ಗಾತ್ರಕ್ಕೆ ಬೆಳೆದವು. ಒಂದು ದಿನ ಬೇಡನನ್ನು ತನ್ನ ಬಳಿಗೆ ಕರೆದ ಸಾಧು ‘ಈ ಕಲ್ಲುಗಳ ಬೆಟ್ಟ ನೋಡು, ಇಲ್ಲಿರುವ ಒಂದೊಂದು ಕಲ್ಲು ಕೂಡ ನಿನ್ನ ಪಾಪ ಕಾರ್ಯವನ್ನು ಸಾರಿ ಹೇಳುತ್ತಿವೆ. ಈಗಲಾದರೂ ಬೇಟೆಯಾಡುವ ನಿನ್ನ ಪಾಪದ ವೃತ್ತಿಯನ್ನು ಬಿಟ್ಟುಬಿಡು’ ಎಂದು ಕೋಪೋದ್ರೇಕದಿಂದ ಕೂಗಾಡಿದ. ಬೇಡ ತಿರುಗಿ ಒಂದು ಮಾತನ್ನೂ ಆಡದೆ ಸೀದಾ ತನ್ನ ಗುಡಿಸಲಿಗೆ ತೆರಳಿದ.

ಅಲ್ಲಿದ್ದ ದೇವರ ಚಿತ್ರಪಟವನ್ನೇ ನೋಡುತ್ತಾ ‘ಭಗವಂತಾ, ಈ ಸಾಧುವಿನ ಚುಚ್ಚು ಮಾತುಗಳನ್ನು ನಾನಿನ್ನು ಕೇಳಲಾರೆ, ತಾಳಲಾರೆ. ನನಗೆ ಈ ಪಾಪದ ಬದುಕು ಸಾಕು. ನಿನ್ನ ಬಳಿಗೆ ನನ್ನನ್ನು ಕರೆದುಕೋ’ ಎಂದು ಪ್ರಾರ್ಥಿಸಿದ. ತಕ್ಷಣವೇ ಭಗವಂತನು, ಬೇಡನನ್ನೂ ಸಾಧುವನ್ನೂ ಮೃತ್ಯುಪಾಶ ಬಿಗಿದು ಕರೆತರುವಂತೆ ಯಮನಿಗೆ ಸೂಚಿಸಿದ. ಅವರಿಬ್ಬರನ್ನು ಕರೆತಂದೊಡನೆ ಬೇಡನನ್ನು ಸ್ವರ್ಗಕ್ಕೂ, ಸಾಧುವನ್ನು ನರಕಕ್ಕೂ ಕಳಿಸುವಂತೆ ಅಪ್ಪಣೆ ಹೊರಡಿಸಿದ.

ಭಗವಂತನ ಈ ನ್ಯಾಯವನ್ನು ಕೇಳಿ ಕೆರಳಿ ಕೆಂಡವಾದ ಸಾಧು ‘ಇದು ಅನ್ಯಾಯ. ಮಹಾನ್ ದೈವ ಭಕ್ತನಾದ, ಧ್ಯಾನ ನಿಷ್ಠನಾದ, ಸಾತ್ವಿಕ ಆಹಾರ ಸ್ವೀಕರಿಸುವ ನನಗೆ ನರಕ. ಆದರೆ ಸಿಕ್ಕ ಸಿಕ್ಕ ಪ್ರಾಣಿ-ಪಕ್ಷಿಗಳನ್ನು ಕೊಂದು ತಿನ್ನುವ ಕೊಲೆಗಡುಕ ಬೇಡನಿಗೆ ಸ್ವರ್ಗ. ಇದು ಘನ ಘೋರ ಅನ್ಯಾಯ...’ ಎಂದು ಹುಚ್ಚು ಹಿಡಿದವನಂತೆ ಕಿರುಚಿಕೊಂಡ. ‘ಹೌದು, ಇದೇ ನ್ಯಾಯ. ನೀನು ಸಾಧುವಾಗಿದ್ದರೂ ಸಾಧುವಿನಂತೆ ನಡೆದುಕೊಳ್ಳಲಿಲ್ಲ. ದ್ವೇಷವನ್ನು ತುಂಬಿಕೊಂಡು ವಿನಾಕಾರಣ ಬೇಡನ ಬದುಕಲ್ಲಿ ಪ್ರವೇಶಿಸಿ ಅವನಿಗೆ ತೊಂದರೆ ಕೊಟ್ಟೆ. ಇಂತಹ ಕೆಟ್ಟ ಕೆಲಸದಲ್ಲಿ ನಿರತನಾದ ನೀನು ನಿನ್ನ ಕಾಯಕವನ್ನೇ ಮರೆತೆ. ಧ್ಯಾನವನ್ನೂ ಬಿಟ್ಟೆ. ಆದರೆ ಆ ಬೇಡ ಪಾಪ ಪ್ರಜ್ಞೆಯ ಬೆಂಕಿಯಲ್ಲಿ ನಿತ್ಯ ಬೆಂದು ಅಪರಂಜಿಯಾದ. ತನ್ನ ಪಾಪ ಕಾರ್ಯಗಳಿಂದ ಮುಕ್ತನಾದ. ನೀನಾದರೋ ಅವನ ಪಾಪಗಳನ್ನು ಕಲ್ಲುಗಳಿಂದ ಲೆಕ್ಕ ಹಾಕುತ್ತಾ ಭಾರವಾದೆ. ಅವನು ಎಲ್ಲವನ್ನೂ ಕಳೆದುಕೊಂಡು ಹಗುರವಾದ. ಆದ್ದರಿಂದಲೇ ಬೇಡ ಸ್ವರ್ಗಕ್ಕೆ ಭೂಷಣನಾದ. ಆಹಾರ ಅವರವರ ಇಚ್ಛೆ, ವೃತ್ತಿ ಕೂಡ ಅವರವರ ಇಷ್ಟಕ್ಕೆ ಸೇರಿದ್ದು. ಆದರೆ ಇದನ್ನು ಅರಿಯದೆ ನೀನು ಬೇಡನ ಜೀವನದಲ್ಲಿ ಮೂಗು ತೂರಿಸಿ ಮಾನಸಿಕವಾಗಿ ಪ್ರತಿನಿತ್ಯ ಅವನನ್ನು ಕೊಂದೆ. ನಿಜವಾದ ಕೊಲೆಗಾರ ನೀನು. ಅದಕ್ಕೇ ನಿನಗೆ ನರಕ ಪ್ರಾಪ್ತಿಯಾಗಿದೆ’ ಎಂದ ಭಗವಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.