ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಿಮಾ ಭಟ್‌ ಬರೆದ ಕಥೆ: ಅದೋ ಮೂಡಣ

Last Updated 30 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಆ ಊರಲ್ಲಿ ನಟ್ಟ ಮಧ್ಯಾನ್ನದಲ್ಲೂ ಬಿಸಿಲು ತಲೆಮರೆಸಿಕೊಂಡಿತ್ತು. ಅದಕ್ಕೆ ಆ ಊರು ಎನ್ನುವುದೇ ಸೂಕ್ತ. ಪೇಟೆ ಕೈಗೆಟುಕುವಷ್ಟು ದೂರ. ಹುಲ್ಲಿನ ಮಾಡು ಅದರ ಮಧ್ಯೆ ಹೊಗೆ ಕೊಳವೆ ಹುದುಗಿ ಕುಂತ ಮನೆಗಳು ಅಲ್ಲೊಂದು ಇಲ್ಲೊಂದು ಇನ್ನೂ ಇವೆ ಆ ಊರಲ್ಲಿ. ಅಬ್ಬಿನೀರು ವರ್ಷಾವಧಿ ಹರಿಯುವ ಕಾರಣವೋ, ತೂಕದ ಕೊನೆ ಜೋತ ಅಡಕೆ ಮರಗಳಿಂದಾಗಿಯೋ, ಸದಾ ಕಪ್ಪುಹಸಿರು ಬಣ್ಣ ಹೊದ್ದ ತೋಟದಿಂದಲೋ ಅಂತೂ ಸಮೃದ್ಧಿ ಆ ಊರಲ್ಲಿ ಕಾಲು ಮುರಕೊಂಡು ಬಿದ್ದಂತಿತ್ತು.

ಲೆಕ್ಕ ಮಾಡಿದರೆ ಹನ್ನೊಂದೂವರೆ ಮನೆಗಳಿರುವ ಆ ಊರಲ್ಲಿ ಬೆಳಗಾದರೆ ಗಿಜಿಗಿಜಿ. ಹೆಗಡೇರ ಮನೆ ಬಾಗಿಲು ಬಂದ ತಕ್ಷಣ ಕಾರಣವಿಲ್ಲದೆ ಒತ್ತಿಸಿಕೊಳ್ಳುವ ಎಕ್ಸಲರೇಟರ್, ಕೆರೆದಂಡೆಯ ಮೇಲಿನ ಮೀನು ರಿಕ್ಷಾ, ರಿಕ್ಷಾದಲ್ಲಿ ಕುತ್ಬೂನ ಪಕ್ಕ ಭಿಡೆ ಇಲ್ಲದೇ ಕೂತ ನರ್ಸಮ್ಮ, ಓಮ್ನಿಯ ಕಿಟಕಿಯಲ್ಲಿ ತಲೆ ಹೊರಗೆ ಹಾಕಿರುವ ಶಾಲೆ ಮಕ್ಕಳು ಇವೇ ಕೆಲವು ಸಂಗತಿಗಳು ಆ ಊರಿನ ಬೆಳಗನ್ನು ಕಳೆಗಟ್ಟುತ್ತವೆ.

ಬೆಳಗಿನ ಹತ್ತೂವರೆಯ ಹೊತ್ತು. ಹೊರಜಗಲಿ ಹೇಡಿಗೆ ಮೇಲೆ ಕೂತ ಸಣ್ಣ ವೈದ್ತೇರು ಬಿಳಿಮಣಿ-ಕೆಂಪುಮಣಿಯ ಬೀಸಾಳೆ ಮಾಡುತ್ತಿದ್ದಳು. ಊರನ್ನ ಆ ಊರು ಅಂತ ಕರೆದ ಹಾಗೇ, ಇವಳನ್ನ ಸಣ್ಣ ವೈದ್ತೇರು ಅಂತ ಕರೆಯುವುದೇ ಸೂಕ್ತ. ವೈದ್ತೇರ ಪಟ್ಟ ಲಗ್ನದ ನಂತರ ಬಂದದ್ದೇ ಹೌದು. ಆದರೂ ಬೇರೆ ಯಾವ ಹೆಸರು ಇವಳಿಗೆ ಸೂಟಾಗುವ ಲಕ್ಷಣವೇ ಇಲ್ಲ. ಇವಳ ಅತ್ತೆ ಶೇಲೂ ವೈದ್ತೇರು. ಇವರ ತೋಟದ ಕೆಲಸಕ್ಕೆ ಮನೆ ಸಹಾಯಕ್ಕೆ ಬರುವ ಶಿದ್ದೇರು, ಈ ವೈದ್ಯರ ಮನೆ ಹೆಂಗಸರನ್ನ ಕರೆಯುವುದೇ ಹಾಗೆ. ಗಂಡಸರೆಲ್ಲಾ ವೈದ್ರು. ಹೆಂಗಸರು ವೈದ್ತೇರು. ‘ವೈದ್ತೇರೆ ಚಾ ಮಾಡ್ಕೊಡು, ಇನ್ನೂ ನಿದ್ದೆ ಮುಗದ್ದಿಲ್ಯ ನಿಂದು..’ ಶಿದ್ದೇರ ಹೆಂಗಸರು ವೈದ್ಯರ ಮನೆ ಹೆಂಗಸರನ್ನ ಮಧ್ಯಾನ್ನ ಎಬ್ಬಿಸುವುದೇ ಆಹಾ ಚಂದ!

ಅಕ್ಕಪಕ್ಕದಲ್ಲಿ ಹೆಗಡೇರ ಮನೆ, ಭಟ್ಟರ ಮನೆ ಸಾಕಷ್ಟು ಇದ್ದರೂ ಇವರದ್ದು ಮಾತ್ರ ವೈದ್ಯರ ಮನೆ. ಸುಮಾರು ಎಪ್ಪತ್ತು ವರ್ಷದ ಹಿಂದೆ ಈ ವೈದ್ಯ ಮನೆತನದವರು ಬೇರೆ ಊರಿಂದ ಎದ್ದು ಬಂದವರಂತೆ. ಪ್ರತಿ ತಲೆಮಾರಿಗೂ ಒಂದು ತಪ್ಪಿದರೆ ಎರಡು ಗಂಡು ಹಡೆದು, ಅಡಕೆ, ಕಾಳ್ಮೆಣಸು, ಯಾಲಕ್ಕಿ, ತೆಂಗು ಬೆಳೆದು ಜಮೀನು ಜಾಸ್ತಿ ಮಾಡಿಕೊಳ್ಳುತ್ತ ಬಂದವರು ಇವರು. ಮನ್‌ತನದಲ್ಲಿ ಹುಟ್ಟಿದ ಹೆಣ್ಮಕ್ಕಳನ್ನು ಬದಿಯ ಊರಿಗೋ - ದೊಡ್ಡ ಸಣ್ಣ ಸಿಟಿಯ ಕಡೆಗೋ ಅಚ್ಚೆಯಿಂದ ಮದುವೆ ಮಾಡಿ ಕೊಟ್ಟವರು.

ಆಚೇಕೇರಿಯ ಭೂತಪ್ಪನ ಕಟ್ಟೆ ತುದಿಯಲ್ಲಿ ಎರಡು ಬಿಡಾರ ಹೂಡಿಕೊಂಡಿರುವ ಶಿದ್ದೇರಿಗೂ, ವೈದ್ಯರ ಮನೆಗೂ ಎಷ್ಟೋ ವರ್ಷಗಳ ಬೆಸುಗೆ. ಶಿದ್ದೇರು, ವೈದ್ಯರ ತೋಟದಲ್ಲಿ ಹಾಗೂ ಮನೆಯಲ್ಲಿ ವರ್ಷ ಕಾಲಾವಧಿ ದುಡಿಯುತ್ತಿದ್ದರು. ಇಬ್ಬರೂ ಇನ್ನೆಲ್ಲಿಂದಲೋ ಗುಳೇಯೆದ್ದು ಬಂದದ್ದರಿಂದಲೇ ಈ ಪರಿ ನಂಟು ಎಂಬುದಾಗಿ ಆ ಊರಿನವರು ಯಾವಾಗಲೋ ನಿರ್ಧಾರಕ್ಕೆ ಬಂದಾಗಿತ್ತು. ಕಾಲ ಕಳೆದಂತೆ ಅಡಕೆ ಮರಕ್ಕೆ ಹಬ್ಬಿದ ಬಳ್ಳಿ, ಫಲ ಕೊಡುವ ಮೆಣಸೇ ಆಯಿತು ಹೊರತಾಗಿ ಮರದ ಜೀವ ತಿನ್ನುವ ಬಂದಳಿಕೆಯಾಗಲಿಲ್ಲ - ವೈದ್ಯರ ಶಿದ್ದೇರ ಜುಗಲಬಂದಿಯೂ ಹೀಗೇ.

-ಒಡಲು-

ಸಣ್ಣ ವೈದ್ತೇರ ತವರು ಇರುವುದು ಇಲ್ಲೇ ಹತ್ತು ಮೈಲಿ ದೂರದಲ್ಲಿ. ಮದುವೆಯಾಗಿ ಬಂದು ಮೂರು ವರ್ಷವಾಯಿತೇನೋ. ಹಳ್ಳೀಮನೆಯ ಗಂಡೋ, ಪೇಟೆ ಮೇಲಿನ ನೌಕರಿಯವರೋ ಎನ್ನುವ ಜಿಜ್ಞಾಸೆ ಮುಗಿಯುವ ಮುನ್ನವೇ ಆ ಊರಿನ ವೈದ್ಯರ ಮನೆಗೆ ಸೊಸೆಯಾಗಿ ಬಂದಾಗಿತ್ತು. ಡಿಗ್ರಿ ಮುಗಿಸಿಕೊಂಡಿದ್ದರೂ, ಮನೆಯ ಮುದ್ದಿನ ಮಗಳಾಗಿದ್ದರೂ ಮದುವೆಯಂತ ದೊಡ್ಡ ವಿಷಯದಲ್ಲೆಲ್ಲಾ ಅಪ್ಪಯ್ಯ ಹೇಳಿದ್ದೇ ಸೈ.

ಕೇರಿಯಲ್ಲಿ ಮೂರನೇ ಮನೆಯ ಶೀತಣ್ಣನ ಮಗಳು ಕಾಣಬಾರದ. ಓದಿದ್ದು ಬರೀ ಪೀಯೂಸಿ. ಅದರಲ್ಲೂ ಆರ್ಟ್ಸ್. ಅವಳ ಹಣೆಯಲ್ಲಿ ಬ್ರಹ್ಮ ಬರೆದಿದ್ದೇ ಚಲೋ ಇದ್ದಿತ್ತೋ, ಅವಳ ಗಂಡನ ನಸೀಬು ಗನಾ ಇದ್ದಿತ್ತೋ ಗೊತ್ತಿಲ್ಲ. ಮೊದಲು ಮೈಸೂರು, ನಂತರ ಬೆಂಗಳೂರು ಈಗಂತೂ ದುಬಾಯ್‌ ಅಂತೆ! ಯಾರಿಗೆ ಬೇಕು ಅಡಕೆ ಕೊಯ್ಲಿನಲ್ಲಿ ಮರ ಹತ್ತುವ ಗೌಡನಿಗೆ ಅನ್ನದ ಚರಿಗೆ ಎಳೆಯುವ ಕರ್ಮ.. ಪೇಟೆ ಜೀವನವೇ ಆರಾಮು ಅಂತೆಲ್ಲ ಸಣ್ಣ ವೈದ್ತೇರು ಮದುವೆಗೆ ಮುನ್ನ ಮನಸಲ್ಲಿ ಗುಣಾಕಾರ ಭಾಗಾಕಾರ ಹಾಕಿದ್ದೇ ಬಂತು.

ಒಂದು ರಾತ್ರಿ ಊಟದ ಪಂಕ್ತಿಯಲ್ಲಿ ಕೂತ ಅಪ್ಪಯ್ಯ ಗಂಟಲು ಸರಿಮಾಡಿಕೊಂಡ. ಅನ್ನದ ಅಗುಳನ್ನ ಸಾಲ್ ನೇರ್ಪಾಗಿ ಊಟದ ಬಾಳೆಯ ಬದಿಯಲ್ಲಿ ಇಡುತ್ತ ಹೇಳಿದ. ‘ಇವತ್ ಸೊಸೈಟಿಗೆ ಹೋದಾಗ ಗಪ್ಪೂ ಬಾವ ಸಿಕ್ಕಿದ್ದಿದ್ದ. ಅವ್ರ ಮನೆ ರಂಜು, ಗಂಟು ಮೂಟೆ ಕಟ್ಟಿ ಮಗಳನ್ನ ಕರಕಂಡು ಮನೀಗೆ ಬಂತಡ ನಿನ್ನೆ ಬೆಳಗ್ಗೆನ ಬಸ್ಸಿಗೆ. ಇನ್ನು ವಾಪಸ್ ಕಳ್ಸ ಕೆಲ್ಸ ಇಲ್ಲೆ. ಹತ್ರನೇ ಇರೋರಾದ್ರೆ ನಜರ್ ಇಟ್ಟು ಸಂಸಾರಾನ ದಡ ಹತ್ತಿಸಲೆ ಸಾಧ್ಯ ಇತ್ತು. ಶಹರದ ಸಾವಾಸಾ ಸಾಕಾತು. ಯಾರ್ ಸರಿ ಯಾರ್ ತಪ್ಪು ಗೊತ್ತಿಲ್ಲೆ. ನಂಗೆ ಮಗಳನ್ನ ಬಿಟ್ಟುಕೊಡಲೆ ಮನ್ಸಿಲ್ಲೆ. ಮುಂದೆ ಭಗವಂತ ನೆಡ್ಸಿದ್ ದಾರಿಲ್ ನೆಡ್ಯದು ಅಂದ ಗಪ್ಪೂ ಬಾವ..’

ಅಪ್ಪಯ್ಯನ ಬಾಯಲ್ಲಿ ಬಂದ ಆ ಐದಾರು ವಾಕ್ಯ ಹತ್ತು ಪುಟದಷ್ಟು ವಿವರಣೆ ಕೊಟ್ಟಿತು. ‘ಪಾಪ ಅಪ್ಪಯ್ಯ ಯನ್ನ ಒಳ್ಳೇದಕ್ಕೇ ಹೀಂಗೆ ಯೋಚ್ನೆ ಮಾಡ್ತ’ ಅಂಬೋದು ಸಣ್ಣ ವೈದ್ತೇರ ಅಭಿಪ್ರಾಯ. ‘ಗಪ್ಪೂ ಬಾವ ಇವತ್ತು ಸಿಕ್ಕಿದ್ದೇ ತಪ್ಪಾಗೋತು. ಯಾವ್ದಾರೂ ಚಲೋ ನೌಕರಿಲ್ಲಿ ಇರ ಪೋರಂಗೆ ನಮ್ಮನೆ ಕೂಸಿನ ಕೊಟ್ಟಿದ್ದಿದ್ರೆ ಬಂಗಾರಾಗ್ತಿತ್ತು. ಈ ಹಳ್ಳೀಮನೆ, ಸಗಣಿ ನೆಲ, ಕೊಟ್ಟಿಗೆ ದನದ ತಾಪತ್ರಯ, ಅಡ್ಕೆ ರೇಟಿನ ಚಿಂತೆ ಎಂತದೂ ಇರ್ತಾ ಇರಲಿಲ್ಲೆ’ ಸಣ್ಣ ವೈದ್ತೇರ ತಾಯಿ ಗೊಣಗುತ್ತಲೇ ಎಂಜಲು ಸಾರಿಸಿದಳು ಅವತ್ತು. ಆಮೇಲೆ ನಡೆದದ್ದೆಲ್ಲ ದೈವೇಚ್ಛೆ ಅಂದುಕೊಳ್ಳುವುದೇ ಸರಿ. ವೈದ್ಯರ ಮನೆ ಸೊಸೆಯಾಗಿ ಸಣ್ಣ ವೈದ್ತೇರ ಪಟ್ಟ ಹಗಲು ಮುರಿದು ರಾತ್ರಿಯಾಗುವುದಲ್ಲಿ ಬಂದೇ ಬಿಟ್ಟಿತು.

ಕೈಗೂಡಿಸಿದ ಮಂತ್ರ ಹೇಳುವಾಗ ಕೊನೇ ಕ್ಷಣದಲ್ಲಿ ಕೈ ಎಳೆದುಕೊಳ್ಳುವ ಹಂಬಲ. ಮಂಟಪದಲ್ಲೂ ಮನಸಿನ ಹೊಯ್ದಾಟವೇ. ಆಳುಗಳೇ ಎಲ್ಲ ಕೆಲಸವನ್ನೂ ಮಾಡಿಕೊಡುವಂತ ಮನೆಯ, ಎಕರೆಗಟ್ಟಲೆ ತೋಟವಿರುವ ಗಂಡಿನ ಹೆಂಡತಿಯಾಗಿ, ಅಮ್ಮೋರೆ ಎಂದು ಕರೆಸಿಕೊಂಡಂತೆ ಹಗಲುಗನಸು ಕಂಡು ಬೆಳದಿದ್ದೇ ಅಲ್ಲವೇ.. ಕುತ್ತಿಗೆಗೆ ಗೆಜ್ಜೆಟಿಕ್ಕಿ, ಕೈಗೆ ಸಿಂಹಕಡ ಹಾಕಿದಂತೆ, ಹೆಗಡೇರ ಹೆಂಡತಿಯಾಗಿ ಮೆರೆದಂತೆ ಸ್ವಪ್ನ ಎಷ್ಟುಬಾರಿ ಬಿದ್ದಿಲ್ಲ! ಚಿನ್ನ-ಬಣ್ಣ ಜಾಸ್ತಿ ಇಲ್ಲದಿದ್ದರೂ ಅಮ್ಮ, ಅತ್ತೆ, ಚಿಕ್ಕಮ್ಮಂದಿರನ್ನೆಲ್ಲ ನೋಡಿದ್ದೇ ಹಾಗಲ್ಲವೇ..

ಅಂತೂ ಮದುವೆಯ ಗರ್ದಿಯೆಲ್ಲ ಮುಗಿಯಿತು. ನಿಧಾನವಾಗಿ ನಿಮ್ಮನೆ ಇದ್ದಿದ್ದು ಯಮ್ಮನೆಯಾಗುವ ಹಂತಕ್ಕೆ ಬಂದಾದ ಮೇಲೆ ಸಣ್ಣ ವೈದ್ತೇರು ಎಷ್ಟೋ ನಿರಾಳವಾದಳು ಅಥವಾ ಆದಂತೆ ಹಾಗೆ ಕಂಡಳು. ಶಿದ್ದೇರು ವೈದ್ಯರ ಕೂಡಿ ಬಾಳುವಿಕೆ ನೋಡಿ ಬೆರಗಾದಳು. ದೊಡ್ಡ ವೈದ್ಯರು, ಶೇಲೂ ವೈದ್ತೇರು ಇಬ್ಬರಿಗೂ ಇವಳು ಸೊಸೆಮುದ್ದು. ಹೊಲಿಗೆ ಕ್ಲಾಸಿಗೆ ಹೋದರೂ ಹೂಂ, ಹಾರ್ಮೋನಿಯಂ ಕಲಿಯಲು ಹೋದರೂ ಹೂಂ! ಜಾತ್ರೆ ಪೇಟೆಗೆ ಮಗ ಸೊಸೆ ಬೈಕಲ್ಲಿ ಹೊರಟು ನಿಂತಾಗ, ಬೈಕೆಂತಾ ಬೈಕು, ನಾಳೆಯೇ ಬರಲಿ ಮನೆಗೆ ಮಾರುತಿ ಕಾರು ಎಂದರು ದೊಡ್ಡ ವೈದ್ಯರು.

ಶಿದ್ದೇರ ಈರನ ಹೆಂಡತಿ ಕಮಲಿ ಜತೆ ಸಣ್ಣ ವೈದ್ತೇರ ಸಲಿಗೆ ಜಾಸ್ತಿ. ನೆಟ್ಟ ಮಧ್ಯಾನ್ನದಲ್ಲಿ ಕಮಲಿ ಪಾತ್ರೆ ತೊಳೆಯುವ ಸಮಯ. ಮೋರಿಯ ಪಕ್ಕ ಸಿಮೆಂಟ್ ನೆಲದ ಮೇಲೆ ತುದಿ ಕಾಲಲ್ಲಿ ಚೂಪಗೆ ಕೂತ ಸಣ್ಣ ವೈದ್ತೇರು ಕಪ್ಪಗೆ ಮಿರಿಗುಟ್ಟುವ ಕಮಲಿಯ ಮೀನಖಂಡಗಳನ್ನೇ ಗಮನಿಸುವಳು. ಸಿಡಿದರೆ ಕಪ್ಪು ಬಣ್ಣದ ರಕ್ತವೇ ಚುಳ್ಳನೆ ಹಾರುವಂತಿದೆ. ಇತ್ತ ಕಮಲಿ, ಪಾತ್ರೆ ತಿಕ್ಕುತ್ತಲೇ ಸಣ್ಣ ವೈದ್ತೇರ ಪಾದವನ್ನ ವಾರೆಕಣ್ಣಲ್ಲಿ ನೋಡುವಳು. ಬೆರಳುಗಳೆಂದರೆ ಹೂಬೇಹೂಬ್ ಕೆಂಪು ದಾಸಾಳದ ಮೊಗ್ಗುಗಳು.. ಮೋರಿಯ ತುದಿಯಲ್ಲಿ ಚೊಳ ಚೊಳ ಹರಿಯುವ ನೀರಿನ ಸದ್ದು ಇವರ ಸುದ್ದಿಗೆ ಒಳ್ಳೆ ಹಿನ್ನೆಲೆ ಸಂಗೀತದಂತೆ ಇತ್ತು.

‘ಪ್ಯಾಟಿಗ್ ಹೊರಟು ನಿಂತಾಗ ಕೈಗಾರಿಕೆ ವಸ್ತು ತಗಳೂದು ಒಂದೂ ನೆನ್ಪಾಗೂದಿಲ್ಲ. ಇಲ್ಲಿ ಮನೀಗೆ ಬಂದು ನೋಡಿರೆ ದಾರ ಇದ್ರೆ ಮಣಿ ಇಲ್ಲಾ, ಮಣಿ ಇದ್ರೆ ಸೂಜಿ ಇಲ್ಲಾ. ಪ್ಯಾಟೆ ಮ್ಯಾಲ್‌ನವರ ಹಂಗೆ ನಿಂತ ಮೆಟ್ಟಿಗೆ ಅಂಗಡಿಗೆ ಹೋಗೂಕಾಗ್ತದ್ಯ ನಮ್ಮ ಹಳ್ಳೀಮ್ಯಾಲೆ?’ ಸಣ್ಣ ವೈದ್ತೇರು ಅಲವತ್ತುಕೊಳ್ಳುವಳು. ‘ಈ ಸಲ ಪ್ಯಾಟಿಗ್ ಹೋದಾಗ ನಮ್ ಗಿಡ್ಡಿ ಕಾಲ್ಗೆಜ್ಜೆ ಸರಿ ಮಾಡ್ಸಿ ತಗ ಬಾರೆ ಸಣ್ಣ ವೈದ್ತೇರೆ.. ನಾ ಬೇಕಾರೆ ದುಡ್ಡು ಕೊಡ್ತಿ ನಿಂಗೆ’ ಕಮಲಿ ಗೋಗರೆಯುವಳು. ಬಣ್ಣ, ಅಂತಸ್ತು, ಜಾತಿಯ ಯಾವ ದುರ್ನಾತವೂ ಈ ದೋಸ್ತಿಯೆನ್ನುವ ಸಂಬಂಧದ ನಡುವೆ ಸುಳಿಯದು. ಪ್ರೀತಿ, ಅಕ್ಕರಾಸ್ಥೆ, ಕಾಳಜಿ ಎಲ್ಲ ತೀರ ದೊಡ್ಡ ಮಾತು. ಕಮಲಿ ಸಣ್ಣ ವೈದ್ತೇರ ಈ ನೆಂಟ್ತನವನ್ನ ಅದರ ಪಾಡಿಗೆ ಬಿಟ್ಟುಬಿಡುವುದೇ ದೊಡ್ಡ ಉಪಕಾರ.

ಈರ, ಕಮಲಿಯ ಮಗಳು ಸೌಮಿತ್ರಿಗೆ ಮೂರೂವರೆ ವರ್ಷವಾಗಿತ್ತೇನೋ. ಆಗ ಸಣ್ಣ ವೈದ್ತೇರು ಮಗಳ ತಾಯಿಯಾದಳು. ಅತ್ತೆ ಸೊಸೆ ಲಲಿತಾಸಹಸ್ರನಾಮ, ದುರ್ಗಾಶತನಾಮಗಳನ್ನೆಲ್ಲ ತಡಕಾಡಿ ಮಗಳಿಗೆ ‘ಅವನಿ’ ಎಂದು ಹೆಸರಿಟ್ಟರು. ಈರ - ಕಮಲಿಗೆ ಈ ಹೆಸರು ಚೆಂದ ಕಂಡಿತು. ಅವರ ಜನವಿಡುವ ಸೌಮಿತ್ರಿ ಹೆಸರು ತುಂಬಾ ಸಾಧಾರಣ ಎನ್ನಿಸಿತು. ತಮ್ಮ ಮಗಳನ್ನು ಶಾಲೆಗೆ ಹೆಸರು ಹಚ್ಚುವಾಗ ‘ಪಾವನಿ’ ಎಂದು ದಾಖಲಿಸಿದರು. ಪಾವನಿಗೆ ಪಾವಿ, ಪಾನಿ ಅಂತೆಲ್ಲ ಅಡ್ಡಹೆಸರುಗಳು ಬಂದರೂ ಹುಟ್ಟಿದಾಗಿನಿಂದ ಮುದ್ದಿಗೆ ಕರೆದ ಗಿಡ್ಡಿ ಎಂಬ ಹೆಸರೇ ಖಾಯಂ ಆಯಿತು.

ಆ ಊರಿನಲ್ಲಿ ದಿನಗಳು ವಾರಗಳು ತಿಂಗಳುಗಳು ವರ್ಷಗಳು ತಮ್ಮ ಬಣ್ಣವನ್ನು ಬದಲಾಯಿಸುತ್ತ ಇರುವುದಿಲ್ಲ. ಅಡಕೆಗೆ ರೇಟ್ ಬಂದ ವರ್ಷ, ಊರಿಗೊಂದು ಹೊಸ ರಾಯಲ್ ಎನ್‌ಫೀಲ್ಡ್ ಬರಬಹುದು ಅಥವಾ ಕಲ್ಲು ರಸ್ತೆಗೆ ಒಗ್ಗುವ ಓಮ್ನಿ. ಎಲ್ಲೂ ಅತಿಶಯವಿಲ್ಲ. ಹಾಗಂತ ಸುಳ್ಳೇ ಸೋಗೂ ಇಲ್ಲ. ಯಾತ್ರೆ, ತೀರ್ಥ, ಸಾವು, ಹುಟ್ಟು ಎಲ್ಲವೂ ಹೆಚ್ಚೆಂದರೆ ಒಂದು ವಾರದ ಖಾಸೀಯತ್ತು ಅಷ್ಟೇ. ಮತ್ತೆ ಅದೇ ಗಿಜಿಗಿಜಿ ಬೆಳಗ್ಗೆ, ಸೂತಕ ಕವುಚಿಕೊಂಡಂತ ಮಧ್ಯಾನ್ನ, ಸೋತ ಅಥವಾ ಸೋತಂತೆ ಕಾಣುವ ಸಂಜೆ. ಇದು ಆ ಊರಿನ ದಿನಚರಿ.

-ತುದಿ-

ಆ ಊರು ಐಶಾರಾಮದಲ್ಲಿ ಕಾಲುಚಾಚಿ ಮಲಗಿದ್ದರೂ, ದಿನಗಳು ನಿಲ್ಲುವುದಿಲ್ಲವಲ್ಲ! ಎಲ್ಲ ಕಡೆಗಳಂತೆಯೇ ಆ ಊರಿನಲ್ಲೂ ವರ್ಷಗಳು ಕಳೆದವು. ದಶಕಗಳು ಪುಟ ತಿರುವಿದವು. ಈಗ ಊರು ಬದಲಾಗದಿದ್ದರೂ ಜನ ಬದಲಾದಂತೆ ಕಾಣುತ್ತಿದ್ದರು. ಸಣ್ಣ ವೈದ್ತೇರಿಗೂ ಸಧ್ಯ ನಲವತ್ತೈದರ ಆಸುಪಾಸು. ಅಲ್ಲಲ್ಲಿ ತುಸು ಬೆಳ್ಳಗಾದ ಕುಡಿಮಂಡೆ, ಕರು ತಿಂದು ಮರಿ ತಿಂದು ಹೆಬ್ಬುಲಿಯಂತಾದ ಸಣ್ಣ ವೈದ್ತೇರ ಕಥೆ ಹೇಳುವಂತೆ ತೋರುತ್ತಿತ್ತು. ‘ನೂರು ಕುದಿ ಬಂದ ಸಾರು ಚಂದ - ಮೂರು ತ್ವಾರಣಾ ಕಟ್ಟಿದ ತೇರು ಚಂದ’ ಎಂದು ಅತ್ತೆ ಆಗಾಗ ಹೇಳುವ ಡಯಲಾಗು ಅಸಹನೀಯ ಎನ್ನಿಸಲು ಸಣ್ಣ ವೈದ್ತೇರಿಗೆ ಶುರುವಾಗಿತ್ತು. ಪೇಟೆ ಮೇಲಿನ ಮಜಾ ಈ ಹಳ್ಳಿ ಮೂಲೇಲಿ ಎಲ್ಲಿ ಸಿಗಬೇಕು ಎಂದು ಹೆಜ್ಜೆಹೆಜ್ಜೆಗೂ ಅನ್ನಿಸುತ್ತಿತ್ತು. ರಾತ್ರಿ ನಿದ್ದೆ ಬರದೇ ಇರುವುದು, ಹಗಲು ಕಣ್ಣು ಕೂರುವುದು, ಮಗಳ ಮೇಲೆ ವಿನಾಕಾರಣ ಸಿಡುಕು.. ದಿನಾ ಇದೇ ರಾಮಾಯಣ. ಮುಟ್ಟು ಬಿಡುವ ಮುಂಚೆ ಎರಡೋ ಮೂರೋ ವರ್ಷ ಇದೇ ಪರಿ ಕಿರಿಕಿರಿಯಂತೆ, ಎಲ್ಲೋ ಓದಿದ ನೆನಪು ಸಣ್ಣ ವೈದ್ತೇರಿಗೆ. ‘ನಾಳೆ ಶಿದ್ದೇರ ಕಮಲಿ ಹತ್ತಿರವೂ ಕೇಳಿ ನೋಡಬೇಕು ಅವಳಿಗೆ ಜೀವದಲ್ಲಿ ಹೇಗುಂಟು ಅಂತ’ ಸಣ್ಣ ವೈದ್ತೇರು ಗೊಣಗೊಣ ಎಂದಳು.

ಶಿದ್ದೇರು, ವೈದ್ಯರ ನಂಟಿನ ಅಂಟು ಇನ್ನೂ ಇತ್ತು. ಆದರೂ ಮರಕಾಲು ಕಟ್ಟಿಕೊಂಡಂತೆ ಓಡುತ್ತಿದ್ದ ಸಮಯ, ಈ ನಂಟನ್ನು ಚೂರು ಸಡಿಲ ಮಾಡಿತ್ತು. ಸಡಿಲವೆಂದರೆ ಮತ್ತೇನಿಲ್ಲ, ತಲೆಮಾರು ಕಳೆದಂತೆ ತಲೆಗಳು ಒಂಚೂರು ಕೊಂಡಿ ಕಳಚಿಕೊಂಡು ಅಲ್ಲೊಂದು ಇಲ್ಲೊಂದು ಸರಿದಿತ್ತು. ಈರನ ತಮ್ಮನಿಗೆ ನಲವತ್ತು ಕಳೆದ ಮೇಲೆ ಪೇಟೆಯ ಮಗ್ಗುಲಲ್ಲಿ ಅಂಗಡಿ ಹಾಕುವ ಹುಕಿ ಬಂದಿತ್ತು. ಇನ್ನೊಬ್ಬ ಅಣ್ಣನ ಮಗ ಸಿಟಿಯ ಒಂದು ಬಾರಿನಲ್ಲಿ ಅದೇನೋ ಬೌನ್ಸರ್‌ ಆಗಿ ಸೇರಿದ್ದ. ಕಡುಗಪ್ಪು, ಕೆಂಚು ಮೈ, ತಲೆತುಂಬ ಕಂಬಳಿಹುಳಗಳು ಅಮರಿಕೊಂಡತೆ ಕಾಣುವ ಕೂದಲು, ತುಂಟತನ ಅಳಿಯದ ಕಣ್ಣು - ಬೌನ್ಸರ್ ಆಗಿ ಸಾವಿರ ಸಾವಿರ ಎಣಿಸದೇ ಇನ್ನೇನು?

ಕಮಲಿಯ ಮಗಳು ಗಿಡ್ಡಿ ಸಿಟಿಗೆ ಹೊರಟು ನಿಂತಿದ್ದಾಳೆ. ಆ ಊರಿನ ಹೆಗಡೇರ ಮೊಮ್ಮಗಳಿಗೆ ಸಿಟಿಯಲ್ಲಿ ಬಾಣಂತನವಂತೆ. ಅದು ಮುಗಿದು ಮಗು ಬೆಳೆಯುವವರೆಗೂ ಗಿಡ್ಡಿ ಅವರ ಸಹಾಯಕ್ಕೆ ನಿಲ್ಲಬೇಕಂತೆ. ಗಿಡ್ಡಿಯ ಮದುವೆಗೆ ಇನ್ನೂ ಎರಡ್ಮೂರು ವರ್ಷ ತಡ ಇದೆ. ಹಾಗಂದ ಮೇಲೆ ಮನೆಯಲ್ಲಿ ಸಂಜೆ ಟೀವಿ ನೋಡುತ್ತ, ಸಣ್ಣ ವೈದ್ತೇರ ಮಗಳ ಜತೆ ಬೇಕಾದ್ದು ಬೇಡಾದ್ದು ಹಲುಬುತ್ತ, ಕೆರೆ ಏರಿಯ ಮೇಲೆ ನಾಯ್ಕರ ಮಗ ಬಾಬು ಕಂಡಾಗಲೆಲ್ಲ ಕಿಸಿಕಿಸಿ ನಗುತ್ತ ಆ ಊರಲ್ಲೇ ಇದ್ದು ಕಡಿಯಬೇಕಾದ್ದು ಏನಿದೆ? ಹೋಗಿರಲಿ ಸಿಟಿಯಲ್ಲಿ. ನಾಲ್ಕು ಕಾಸು ಬ್ಯಾಂಕಿನಲ್ಲಿ ಜಮಾ ಆದರೆ ಮದುವೆಯ ಖರ್ಚಿಗಾಯಿತು. ವೈದ್ಯರ ಮನೆಯಲ್ಲಿ ಸಾಲ ಮಾಡುವುದು ತಪ್ಪಿದಂತಾಯಿತು. ಹೀಗೆಲ್ಲ ಈರ ಕಮಲಿ ಲೆಕ್ಕಾಚಾರ ಹಾಕಿದರು.

ಗಿಡ್ಡಿಯ ಸಿಟಿ ಪ್ರಯಾಣದ ಬೆನ್ನಲ್ಲೇ ಇತ್ತ ಸಣ್ಣ ವೈದ್ತೇರು ಮಗಳು - ಗಂಡನೊಟ್ಟಿಗೆ ಪೇಟೆಯಲ್ಲಿ, ಬಾಡಿಗೆ ಮನೆಯಲ್ಲಿ ಇರುವ ತಯಾರಿ ನಡೆಸಿದಳು. ಸಣ್ಣ ವೈದ್ತೇರ ಮಗಳು ಅವನಿ, ಪೇಟೆಯಲ್ಲಿ ಕಾಲೇಜಿಗೆ ಸೇರಿದ್ದೇ ನೆವ. ಮಗಳು ಮೈಕೈ ಸುಟ್ಟುಕೊಂಡು ಅಡುಗೆ ಮಾಡಿಕೊಂಡು ಓದುವ ಅವಶ್ಯತೆ ಏನು? ತಂದೆತಾಯಿಯರಾದ ತಾವು ಅಲ್ಲೇ ಪಟ್ಟಣಬಿಟ್ಟರೆ ಎಲ್ಲದಕ್ಕೂ ಸುಖ. ತಾನು ಆಗೀಗ ಬಿಡುವಾದಾಗ ಮಾಡುವ ಮಣಿಯ ಕೈಕುಸುರಿ, ಆರತಿ ಕಟ್ಟು ಎಲ್ಲದಕ್ಕೂ ಪೇಟೆಯಲ್ಲಿ ಬೆಲೆ ಜಾಸ್ತಿ. ಗಂಡನಂತೂ ಡಿಗ್ರಿ ಓದಿದವ. ಕೃಷಿಯಲ್ಲಿ ತಿಳುವಳಿಕೆ ಇದ್ದವ. ಪೇಟೆಯ ಸೊಸೈಟಿಯಲ್ಲಿ ಒಂದಲ್ಲ ಒಂದು ಕೆಲಸ ಹಿಡಿಯುವುದು ಇನ್ಯಾವ ಮಹಾಕಾರ್ಯ? ಇಲ್ಲಂತೂ ಕೊಟ್ಟಿಗೆ, ಕರು ಮರಿ ಎಲ್ಲವನ್ನೂ ಕೊಡವಿಕೊಂಡಾಗಿದೆ. ಅತ್ತೆ ಮಾವನಿಗೆ ವಯಸ್ಸಾಗಿದೆ ಹೌದು, ಹಾಗಂತ ನೆಲ ಹಿಡಿದಿಲ್ಲ. ಕೆಲಸ ಬೊಗಸೆಗೆ ಶಿದ್ದೇರು ಯಾವತ್ತಿಗೂ ಹಾಜರು. ಅಷ್ಟಕ್ಕೂ ಮೀರಿ ಕಷ್ಟ ಎಂದರೆ ವಾರಕ್ಕೊಮ್ಮೆ ಊರಿಗೆ ಬಂದರಾಯಿತು. ಎಡವಿ ಬಿದ್ದರೆ ಪೇಟೆ, ಅರ್ಧ ಗಂಟೆಯ ದಾರಿ.. ಸಣ್ಣ ವೈದ್ತೇರ ಯಾವ ತರ್ಕವೂ ಈ ಬಾರಿ ಹುಸಿ ಹೋಗಲಿಲ್ಲ.

ಫೋರ್‌ನಾಟ್‌ಸೆವೆನ್ನಿನ ಹಿಂಭಾಗದಲ್ಲಿ ಪೇಟೆಮನೆಗೆ ಬೇಕಾದ ಸಾಮಾನು ಸರಂಜಾಮು ತುಂಬಿಯಾಯಿತು. ಅಲ್ಲಲ್ಲಿ ತುಕ್ಕು ಹಿಡಿದ ಕಬ್ಬಿಣದ ಚಿಲುಕ ಗಾಡಿಯ ಬಾಗಿಲು ಭದ್ರಮಾಡಿತು. ಇನ್ನೇನು ಸಣ್ಣ ವೈದ್ತೇರು ಗಂಡ ಮಗಳನ್ನು ಒಡಗೊಂಡು ಗಾಡಿ ಹತ್ತಬೇಕು, ಆಗ ಶೇಲೂ ವೈದ್ತೇರು ಹೇಳಿದಳು ‘ನಿಂಗ ನಿಶ್ಚಿಂತ್ಯಿಂದಾ ಇರಿ ಅಲ್ಲಿ. ನಂಗಳ ಬಗ್ಗೆ ಚಿಂತೆ ಮಾಡಡಿ. ತೀರಾ ಕುಂಡ್ರಬಿದ್ದು, ಜ್ವರ ಜಾಪತ್ತು ಬಂದ ಕಾಲಕ್ಕೆ ನಂಗನೂ ನಿಂಗಳ ಕಾಲ್ ಬುಡಕೇ ಬಂದು ಬೀಳ್ತ್ಯ. ಇಲ್ಲಿ ಶಿದ್ದೇರ ಈರ ಕಮಲಿ ಎಲ್ಲಾ ಮೇನೇಜ್ ಮಾಡ್ತ..’ ಶೇಲೂ ವೈದ್ತೇರು ಹೇಳುತ್ತಲೇ ಹೋದಳು. ಸಣ್ಣ ವೈದ್ತೇರಿಗೆ ಮಾತ್ರ ಈ ಯಾವ ಮಾತಿನ ಮೇಲೂ ಲಕ್ಷ್ಯ ಇರಲಿಲ್ಲ. ಗಾಡಿಯ ಡುರುಡುರು ಶಬ್ದದ ನಡುವೆ ಶೇಲೂ ವೈದ್ತೇರ ಮಾತು ಕಿವಿಮೇಲೆ ಬೀಳುವಂತೆಯೂ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT