ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಏಕತೆ

Last Updated 10 ಮೇ 2019, 19:30 IST
ಅಕ್ಷರ ಗಾತ್ರ

‘ಸಂಸ್ಕೃತಿ ಮಾತ್ರವೇ ಆಘಾತಗಳನ್ನು ಸಹಿಸಿಕೊಳ್ಳಬಲ್ಲುದು, ಜ್ಞಾನದ ರಾಶಿಯಲ್ಲ. ನೀವು ಜ್ಞಾನದ ರಾಶಿಯಿಂದ ಪ್ರಪಂಚವನ್ನೇ ತುಂಬಿಬಿಟ್ಟರೂ ಅದರಿಂದೇನೂ ಹೆಚ್ಚು ಒಳಿತಾದಂತಾಗುವುದಿಲ್ಲ. ಸಂಸ್ಕೃತಿಯು ರಕ್ತದಲ್ಲಿ ಬೆರೆಯಬೇಕು. ಜ್ಞಾನ ಚರ್ಮದ ಹೊದಿಕೆಯಂತೆ, ನಾಗರಿಕತೆಯಂತೆ. ಸ್ವಲ್ಪ ಬಗೆದರೂ ಒಳಗಿನ ಪಾಶವೀ ಶಕ್ತಿ ಹೊರಬರುವುದು....ಜನರಿಗೆ ಸಂಸ್ಕೃತಿಯನ್ನು ನೀಡಿ.’

- ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಅನೇಕ ಚಿಂತನೆಗಳು ಅವರ ಹೇಳಿಕೆಗಳಲ್ಲಿ ಅಡಕಗೊಂಡಿವೆ. ಈ ಮೇಲಿನ ಹೇಳಿಕೆ ಅವರ ಮದ್ರಾಸಿನ ಭಾಷಣವೊಂದರ ಆಯ್ದ ಭಾಗ. ‘ಭವಿಷ್ಯ ಭಾರತ’ ( ‘ವರ್ತಮಾನ ಭಾರತ’ ಎಂದೂ ಇದನ್ನು ಅನುವಾದಿಸುತ್ತಾರೆ) ಅಥವಾ ‘ದಿ ಫ್ಯೂಚರ್ ಆಫ್ ಇಂಡಿಯಾ’ ಎಂಬ ಆಂಗ್ಲಭಾಷಣದಲ್ಲಿ ಅವರು ಬಹಳ ವಿಸ್ತೃತವಾದ ವಿಚಾರವನ್ನು ಮಂಡಿಸಿದ್ದಾರೆ. ಶಿಕ್ಷಣ, ಧರ್ಮ, ಜಾತಿ-ವರ್ಣಪದ್ಧತಿ, ಆರ್ಯ ಆಕ್ರಮಣ ಸಿದ್ಧಾಂತ, ಸಂಸ್ಕೃತ ಕಲಿಕೆ, ಬ್ರಾಹ್ಮಣತ್ವ, ನಿಮ್ನವರ್ಗಗಳ ಉದ್ಧಾರ–ಇವೆಲ್ಲ ವಿಚಾರಗಳು ಈ ಭಾಷಣದಲ್ಲಿ ಬರುತ್ತವೆ. ಅವರ ಇನ್ನೂ ಅನೇಕ ಪ್ರಸಿದ್ಧ ಉಕ್ತಿಗಳು ಈ ಭಾಷಣದಲ್ಲೇ ಅಡಗಿವೆ. ವಿವೇಕಾನಂದರ ವಿಚಾರಸರಣಿಯ ಮೂಲಸ್ರೋತಗಳನ್ನು ನಾವು ಇಲ್ಲಿ ಗುರುತಿಸಬಹುದು. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯ ಮೂರನೆಯ ಸಂಪುಟದಲ್ಲಿ ಅಥವಾ ಅವರ ‘ಕೊಲಂಬೊದಿಂದ ಆಲ್ಮೋರದವರೆಗೆ’ ಪುಸ್ತಕದಲ್ಲಿ ಈ ಭಾಷಣದ ಪೂರ್ಣಪಾಠವನ್ನು ನೋಡಬಹುದು.
ಅವರ ಎಲ್ಲ ಚಿಂತನೆಗಳ ತಳಹದಿಯಂತೆ ಅವರ ಸಂಸ್ಕೃತಿಯ ವಿಶ್ಲೇಷಣೆಗೂ ಧರ್ಮವೇ ಮೂಲ. ಅದರ ಆಧಾರದ ಮೇಲೆಯೇ ಉಳಿದೆಲ್ಲವನ್ನು ಕಟ್ಟಬೇಕೆಂಬುದು ಅವರ ಖಚಿತ ಅಭಿಪ್ರಾಯ. ಧಾರ್ಮಿಕ ಏಕತೆಯೇ (unity in religion) ಭಾರತದ ಭವಿಷ್ಯಕ್ಕೆ ತಳಹದಿ ಎನ್ನುತ್ತಾರೆ. ಮರುಕ್ಷಣದಲ್ಲಿಯೇ ಅವರು ಏಕಧರ್ಮ ತಮ್ಮ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಭಾರತದಲ್ಲಿರುವ ವಿವಿಧ ಧರ್ಮಗಳ ಸಾಮಾನ್ಯ ಅಂಶಗಳನ್ನು ಸರ್ವರೂ ಪಾಲಿಸುವ ಮೂಲಕ ಏಕಸೂತ್ರತೆಯನ್ನು ಕಂಡುಕೊಳ್ಳಬೇಕೆಂಬುದು ತಮ್ಮ ಅಭಿಪ್ರಾಯವೆಂದು ತಿಳಿಸುತ್ತಾರೆ. ಪರಸ್ಪರ ಕಚ್ಚಾಟ ದಿಂದ ಪ್ರಗತಿ ಸಾಧ್ಯವಿಲ್ಲ, ದೇಶದ ಜೀವ-ನಾಡಿಗಳು, ರಕ್ತನಾಳಗಳು ಶುದ್ಧಗೊಂಡಾಗ ಅದರಲ್ಲಿ ಹೊಸ ಶಕ್ತಿ ಪ್ರವಹಿಸುತ್ತದೆ. ಆಗ ರಾಜಕೀಯ, ಸಾಮಾಜಿಕ ಮತ್ತಿತರ ಕ್ಷೇತ್ರಗಳಲ್ಲಿ ಬೆಳವಣಿಗೆ ಕಾಣುತ್ತೇವೆ ಎನ್ನುತ್ತಾರೆ. ದುರ್ಬಲ ಗೊಳಿಸುವ, ವಿಷವೆನಿಸುವ ಬಾಹ್ಯ ಅಂಶಗಳನ್ನು ಸಮಾಜಪುರುಷ ಸಾರಾಸಗಟಾಗಿ ತಿರಸ್ಕರಿಸಬೇಕು, ಅಂತಹ ಸಕಾರಾತ್ಮಕ ವಿಚಾರಗಳನ್ನು ಎಳೆಮನಗಳಲ್ಲಿ ತುಂಬುವ ಶಿಕ್ಷಣ ನೀಡಬೇಕು ಎಂದು ಅವರು ತಿಳಿಸುತ್ತಾರೆ. ಸಂಸ್ಕೃತ ಭಾಷೆ ಕೇವಲ ಕೆಲವರ ಸೊತ್ತಾಗದಂತೆ ಅದನ್ನು ಸಮಾಜದ ಎಲ್ಲ ವರ್ಗದ ಜನರು ಕಲಿತು ಜ್ಞಾನವೃದ್ಧಿಯ ಜೊತೆಗೆ ಆತ್ಮವಿಶ್ವಾಸವನ್ನೂ ಪಡೆದುಕೊಳ್ಳಬೇಕು. ಸಂಸ್ಕತವು ವಿದ್ಯಾರ್ಥಿಯಲ್ಲಿ ಸ್ವಾಭಿಮಾನ ಹೆಚ್ಚಿಸುತ್ತದೆ. ಆರ್ಯರು ಆಕ್ರಮಿಸಿ ದ್ರಾವಿಡರನ್ನು ಆಳಿದರೆಂಬ ಅಡುಗೂಲಜ್ಜಿಯ ಕಥೆಯನ್ನು ನಂಬಬೇಡಿ ಎಂದು ಹೇಳುವ ವಿವೇಕಾನಂದರು, ಕೇವಲ ಬೆರಳೆಣಿಕೆಯಷ್ಟು ಮಂದಿ ಆರ್ಯರು ಎಲ್ಲಿಂದಲೋ ಬಂದು ದಕ್ಷಿಣದ ದ್ರಾವಿಡರನ್ನು ದಮನಿಸಿದರು ಎಂಬುದನ್ನು ನಂಬ ಲಾಗದು ಎನ್ನುತ್ತಾರೆ. ಅಸಂಖ್ಯ ದ್ರಾವಿಡರು ಈ ಬೆರಳೆಣಿಕೆಯ ಆರ್ಯರನ್ನು ‘ಚಟ್ನಿ’ ಮಾಡಿಬಿಡುತ್ತಿದ್ದರು. ಇದು ಐರೋಪ್ಯ ಚರಿತ್ರಕಾರರ ಕಟ್ಟುಕಥೆ. ಭಾರತೀಯ ಚರಿತ್ರೆಯನ್ನು ಅದರದೇ ಸಾಂಸ್ಕೃತಿಕ ಅಂಶಗಳ ಆಧಾರದ ಮೇಲೆ ಅರ್ಥಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ. ಸರಿಯಾದ ಶಿಕ್ಷಣದ ಮೂಲಕ ಸಂಸ್ಕೃತಿಯನ್ನು ಕಟ್ಟಿಕೊಳ್ಳಬೇಕು, ಸ್ತ್ರೀಯರನ್ನೂ ಮುಖ್ಯವಾಹಿನಿಗೆ ತರಬೇಕು, ನಿಮ್ನವರ್ಗದವರಿಗೆ ಅವರು ಕಳೆದುಕೊಂಡುದನ್ನು ಸಮಾಜ ಮರಳಿ ನೀಡ ಬೇಕು ಎಂಬುದನ್ನೂ ಸ್ವಾಮಿ ವಿವೇಕಾನಂದರು ಈ ಸಂದರ್ಭ ದಲ್ಲಿ ಧ್ವನಿಸಿದ್ದಾರೆ. ಸ್ವಾಮಿ ವಿವೇಕಾನಂದರ ‘ಸಂಸ್ಕೃತಿ’ ವ್ಯಷ್ಟಿ-ಸಮಷ್ಟಿಯ ಸರ್ವಗುಣ ಸಂಪನ್ನತೆ, ಉನ್ನತಿ ಮತ್ತು ಸಮನ್ವಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT