ಮಂಗಳವಾರ, ಸೆಪ್ಟೆಂಬರ್ 28, 2021
21 °C

ಕಥೆ: ಅಲ್ಲಿ ಆ ಅಳುವು ಈ ಚಣವೂ...

ಎಸ್.ಗಂಗಾಧರಯ್ಯ Updated:

ಅಕ್ಷರ ಗಾತ್ರ : | |

Prajavani

ಉಡುದಾರದಿಂದ ನುಣುಚಿಕೊಳ್ಳುತ್ತಿದ್ದ ಚೆಡ್ಡಿಯನ್ನು ಮತ್ಮತ್ತೆ ಸಿಕ್ಕಿಸಿಕೊಳ್ಳುತ್ತಾ ದುಕ್ಲಿಸ್ಕಂಡು ಅಳುತ್ತಾ ಮಲ್ಲೇಶ ಸೈಕಲ್ ತಳ್ಳುತ್ತಿದ್ದ. ಸೊಸೈಟಿಯಲ್ಲಿ ಬಡ್ಮಲ್ಲಜ್ಜ ತಗಂಡಿದ್ದ ಅಕ್ಕಿಯ ಚೀಲವನ್ನು ಸೈಕಲ್ಲಿನ ಕ್ಯಾರಿಯರ‍್ರಿನಲ್ಲಿಟ್ಟು ಉಪೂರಕ್ಕೆ ಅದನ್ನಿಡಿದುಕೊಂಡು ನಡೆಯುತ್ತಿದ್ದ. ಮೊಮ್ಮಗನ ಅಳು ಸದ್ಯಕ್ಕೆ ಕಲಾಸಾಗುವಂತೆ ಕಾಣದೇ ಹೋದ್ದರಿಂದ, ‘ಇದ್ಯಾಕ್ಲ ಅಪ್ಪಣ್ಣಿ ಈ ನಾಡಿ ರೋಸ್ತಿಯಾ ಅಂತೀನಿ?’ ಅಂದ ಬಡ್ಮಲ್ಲಜ್ಜ. ಅವರು ನಡೆಯುತ್ತಿದ್ದ ಕಾಲಾದಿಯ ಇಕ್ಕೆಲಗಳಲ್ಲೂ ಇದ್ದ ರಾಗಿ ಹೊಲಗಳಲ್ಲಿ ಕೊಯ್ಲು ಮುಗಿದಿತ್ತು. ಕೂಳೆ ಹೊಲಗಳ ನಡುವೆ ಒಟ್ಟಿದ್ದ ಮೆದೆಗಳು ಎದ್ದು ಕಾಣುತ್ತಿದ್ದವು. ಅಕ್ಕಡಿ ಸಾಲುಗಳಲ್ಲಿ ತೆನೆಗಟ್ಟಿದ್ದ ಅವರೆ ತೊಗರಿ ಜೋಳ ಸಜ್ಜೆ ನವಣೆ ಗಿಡಗಳು ಹಾಗೂ ಬದುವೊಂದರಲಿದ್ದ ಹಲಸಿನ ಮರದ ಗೆಲ್ಲು ಗೆಲ್ಲುಗಳಲ್ಲೂ ಇಣುಕುತ್ತಿದ್ದ ಮುಸುಕುಗಳು ಇಳಿ ಹೊತ್ತಿನ ಬೆಳಕಲ್ಲಿ ಒಂಥರಾ ಹೊಳಪಿನಲ್ಲಿ ಮೀಯುತ್ತಿದ್ದವು. ಗಾಳಿಯಲ್ಲಿ ಅವರೆ ಕಾಯಿ ಸೊಗಡಿನ ಘಮಲಿತ್ತು. ಆ ಗಾಳಿ ಸಂಜೆಗೇ ತದುಕಬಹುದಾದ ಚಳಿಯ ಸೂಚನೆಯನ್ನೊತ್ತು ಅಡ್ಡಾಡುತ್ತಿತ್ತು.

ತಾತನ ಮಾತು ಕೇಳುತ್ತಲೇ ಮಲ್ಲೇಶನ ಸಂಕಟ ಮತ್ತೂ ಉಮ್ಮಳಿಸಿ ದೊಡ್ಡೆಜ್ಜೆಯಲ್ಲಿ ಸೈಕಲ್ಲನ್ನು ತಳ್ಳತೊಡಗಿದ. ‘ಅದ್ಯಕೀನಾಡಿ ಅವುಸ್ರ ಅಂತೀನಿ?’ ಅಂದ ಬಡ್ಮಲ್ಲಜ್ಜ ಆ ಬಿರುವಿಗೆ ದೇಗಲಾಗದೆ. ‘ನಾನಿಂಗೇ ವೋಗಾದು,’ ಅಂದ ಮಲ್ಲೇಶ ಅಳುತ್ತಲೇ. ‘ನಿನ್ ಸಮ್ಕೆ ನಾನು ನಡ್ಯಾಕಾದಾತ ಕಂದಾ?’ ಅಂದ ಬಡ್ಮಲ್ಲಜ ಮೆಲುವಾಗಿ. ಮಲ್ಲೇಶ ಒಮ್ಮೆ ತಾತನತ್ತ ತಿರುಗಿ ನೋಡಿದ. ತಾತನ ಅಣೆಯಲ್ಲಿ ಬೆವರು ಮಣಿಗಟ್ಟಿತ್ತು. ನಡಿಗೆಯ ಬಿರುವನ್ನು ಕೊಂಚ ತಗ್ಗಿಸಿ, ‘ಅಂಗಾರೆ ತುಂಗಕ್ಕುನ್ನ ಕರ್ಕಂಡ್ ಬಾ ಮತ್ತೆ,’ ಅಂದ. ‘ನಮ್ಮಪ್ಪಾ ನಿಂದೊಳ್ಳೇ ವಾರ್ತೆ ಆತು. ಮದ್ವಾಗಿ ವೋಗಿರಾ ಮಗ ಎಂಗ್ ಬಂದ್ಬುಡುತ್ತೆ ನೀನು ಬಾ ಅಂದಾಗ್ಲೆಲ್ಲಾ? ಇಸ್ಕೂಲಿಗ್ ಬ್ಯಾರೆ ವೋಗ್ತೀಯಾ ಆಟು ತಿಳಿವಲ್ದ ನಿಂಗೆ?’, ಬಡ್ಮಲ್ಲಜ್ಜ ಗದರಿಸಿಕೊಂಡ. ಒಂದು ಚಣ ತಾತನನ್ನೇ ದಿಟ್ಟಿಸಿದ ಮಲ್ಲೇಶ, 'ಹೋಗಂಗಾರೆ ನಾನು ಮನಿಗ್ ಬರಾದೇ ಇಲ್ಲ,’ ಅಂದವನೇ ಸೈಕಲ್ಲನ್ನಲ್ಲೇ ನಿಲ್ಲಿಸಿ ಕೂತುಬಿಟ್ಟ. ಕಣ್ಣೀರು ಕಪಾಳಗಳನ್ನು ತಟಾಯುತ್ತಿತ್ತು. ಕಣ್ಣುಗಳು ಕೆಂಪಿಗೆ ತಿರುಗಿದ್ದವು. ಕಲ್ಲೆಸೆಯೋ ದೂರದಲ್ಲಿ ಊರಿದೆ ಅನ್ನುವಾಗ ಮೊಮ್ಮಗನ ಮಂಡಾಟದಿಂದ ಬಡ್ಮಲ್ಲಜ್ಜನ ಪಿತ್ಥ ನೆತ್ತಿಗೇರಿತು. ಆದರದನ್ನು ಆಳ್ತದಲ್ಲಿಟ್ಟುಕೊಂಡು, 'ಯಾಕ್ ಕಂದಾ ಇಂಗಾಡ್ತೀಯಾ? ನೋಡ್ಬೇಕು ಅನ್ಸಿದ್ರೆ ನಾವೇ ವೋಗಿ ನೋಡ್ಕಂಡ್ ಬಂದ್ರಾತಪ್ಪ,’ ರಮಿಸುತ್ತಾ ಪಕ್ಕದಲ್ಲಿ ಕೂತು ಕಣ್ಣೀರೊರೆಸತೊಡಗಿದ. ‘ನೋಡ್ಕಂಡ್ ಬರಾದೂ ಬ್ಯಾಡ ಗೀರ್ಕಂಡ್ ಬರಾದೂ ಬ್ಯಾಡ, ತುಂಗಕ್ಕ ಇನ್‍ಮ್ಯಾಕೆ ನಂ ಜತೇಲೇ ಇರ್ಬೇಕು ಅಷ್ಟೆಯಾ,’ ಅಂದ ಮಲ್ಲೇಶ ತಾತನ ಕೈಗಳನ್ನು ತಳ್ಳುತ್ತಾ. ‘ಅಂದೆಂಗಾಗುತ್ಲಾ ಅಡ್ನಾಡಿ? ಆಡಿದ್ನೇ ಆಡ್ತೀಯಾ ಕಿಸ್ಬಾಯಿ ದಾಸ್ನಂಗೆ? ಇಂಗೇ ಆಡಿದ್ರೆ ನಾಕು ನೇದ್ಬುಡ್ತೀನಿ ನೋಡು,’ ಅನ್ನುತ್ತಾ ಬಡ್ಮಲ್ಲಜ್ಜ ತಾಳ್ಮೆ ಕಳೆದುಕೊಂಡ. ಮಲ್ಲೇಶನ ಅಳುವಿನ ಲಯ ಮತ್ತೊಂದು ಧಾಟಿಗೆ ತಿರುಗಿತು. ಒಂದರೆಗಳಿಗೆ ಅದನ್ನು ನುಡಿಸಿದ ಮಲ್ಲೇಶ ಮರು ಚಣಕ್ಕೆ ಬಿದ್ದು ಒದ್ದಾಡತೊಡಗಿದ. ‘ನಿಂಗೆ ಇಂಗೆ ಬರೆ ಬಾಯ್ಲಿ ಹೇಳಿದ್ರೆಲ್ಲಿ ಕೇಳ್ತೀಯಾ ತಡಿ ಮಾಡ್ತೀನಿ,’ ಅಂದವನೇ ಬಡ್ಮಲ್ಲಜ್ಜ ಮೇಲೆದ್ದು ಹತ್ತಿರದಲ್ಲಿದ್ದ ತಂಗಡೆ ಗಿಡದಿಂದ ಸಿಲುಪೆ ಕಡ್ಡಿಯೊಂದನ್ನು ಮುರಿದುಕೊಳ್ಳಲೋಸುಗ ಬಗ್ಗಿದ. ಅದರಾ ಗಿಡ ಮುರುಕಂಡು ಬೀಳುವಷ್ಟು ಬಿಟ್ಟಿದ್ದ ಹಳದಿ ಹೂಗಳನ್ನು ನೋಡುತ್ತಲೇ ಮೆತುವಾದ. ಮಲ್ಲೇಶ ಕಿರುಗಣ್ಣಲ್ಲೇ ತಾತನನ್ನು ನಿರುಕಿಸಿದ. ಕಜ್ಜಾಯ ಬೀಳೋದು ಗ್ಯಾರಂಟಿ ಅನಿಸುತ್ತಲೇ ಮೇಲೆದ್ದು ಕಣ್ಣುಗಳನ್ನು ವರ್ಸಿಕೊಳ್ಳುತ್ತಾ ಸೈಕಲ್ಲನ್ನು ತಳ್ಳಿಕೊಂಡು ಹೊರಟ. ಅಳು ಆಡುತ್ತಲೇ ಇತ್ತು. ಮೊಮ್ಮಗನ ಪೇಚಾಟಕ್ಕೆ ತಾತನ ಜೀವ ಕಳಿಕ್ ಅಂದು ಅಲ್ಲೂ ಕಣ್ಣೀರು ವಸಕಾಡಿತು.

2.

ಮಲ್ಲೇಶ ಮತ್ತು ತುಂಗಾ ಬಡ್ಮಲ್ಲಜ್ಜ ಹಾಗೂ ಗುರಜ್ಜಿಯ ಮೊಮ್ಮಕ್ಕಳು. ಒಂದಿನವೂ ಒಬ್ಬರನ್ನೊಬ್ಬರು ಬಿಟ್ಟಿರದಿದ್ದವರು. ತನಗಿಂತ ಆರು ವರ್ಷ ಚಿಕ್ಕವನಾಗಿದ್ದ ಮಲ್ಲೇಶನನ್ನು ಸ್ಕೂಲಿಗೆ ಸೇರಿಸಿದ ಲಾಗಾಯ್ತಿನಿಂದ ತುಂಗಾ ತನ್ನ ಜೊತೆಗಾಕಿಕೊಂಡೇ ಕರೆದೊಯ್ಯುತ್ತಿದ್ದಳು. ಊರಿನಿಂದ ಮೂರು ಮೈಲಿ ದೂರವಿದ್ದ ಸ್ಕೂಲಿಗೆ ಅಕ್ಕನ ಕೂಡೇ ದಿನವೂ ಸೈಕಲ್ಲಿನಲ್ಲಿ ಹೋಗುವುದೆಂದರೆ ಮಲ್ಲೇಶನಿಗೆ ಖುಷಿಯೋ ಖುಷಿ. ಮನೆಯಲ್ಲಿ ನೀರು ತರುವುದರಿಂದ ಹಿಡಿದು ಸಣ್ಣಪುಟ್ಟ ಕೈಗೆಲಸಗಳಲ್ಲಿ ಮಲ್ಲೇಶ ಅಕ್ಕನ ಆಸರೆಗಿರುತ್ತಿದ್ದ. ರಾತ್ರಿ ಮಲಗುವಾಗಲೂ ಅಕ್ಕ ಪಕ್ಕವೇ ಇರಬೇಕಿತ್ತು. ಅವಳ ಮೇಲೆ ಕಾಲೇರಿಕೊಂಡೇ ಮಲಗೇಕಿತ್ತು. ಯಾವಾಗಲೂ ಅಕ್ಕನ ಬಾಲದಂಗೇ ಹಿಂದಿಂದೇ ಸುತ್ತುತ್ತಿದ್ದ ಕಾರಣಕ್ಕೆ, ‘ಇಲ್ಲೀರೋರೆಲ್ಲಾ ಹುಡ್ಗೇರು ಕಣೋ ನೀನ್ಯಾಕೋ ಬತ್ತೀಯಾ ಇಲ್ಲಿ?’ ಅಂತ ತುಂಗಾಳ ಗೆಳತಿಯರು ಕೆಲವೊಮ್ಮೆ ರೇಗಿಸುತ್ತಿದ್ದರು. ಆಗ ಮಾತ್ರ ಹಂಗೆ ಹೋದೋನಂಗೆ ಮಾಡಿ ತಿರುಗಿ ಬಂದು ಅಲ್ಲೇ ವಸ್ತಾಡುತ್ತಿದ್ದ. ಹಿಂಗಿರುವಾಗ ಹಂಗೊಂದು ದಿನ ಅಕ್ಕನದು ತಟುಕ್ಕಂಥ ಮದುವೆಯಾಗಿ ತನ್ನಿಂದ ದೂರಾಗಿಬಿಟ್ಟಿದ್ದ ಸಂಕಟ ಅವನನ್ನು ಇನ್ನಿಲ್ಲದಂತೆ ರಪ್ಪಡಿಸಿತ್ತು.

ಮೊಮ್ಮಗಳು ಮದುವೆಯಾಗಿ ಹೋದಾಗಿಂದಲೂ ಮೊಮ್ಮಗ ಮಲ್ಲೇಶ ದಿನೇದಿನೇ ಮಂಕಾಗುತ್ತಿದ್ದದ್ದು ಅಜ್ಜ ಅಜ್ಜಿಯರ ಎದೆಯಲ್ಲಿ ನೋವಿನ ಚಳುಕಾಡಿಸುತ್ತಿತ್ತು. ಏಟೆಲ್ಲಾ ತಮಣೆ ಮಾಡಿದರೂ ತಗ್ಗದ ಅವನ ಒಳಗುದಿ ಅವರನ್ನು ದಿಗಿಲಿಗೂ ತಳ್ಳುತ್ತಿತ್ತು. ರಮಿಸ ಹೋದರೆ ಕಿರಿಕಿರಿಗೊಂಡವನಂತೆ ಒಂದೋ ಮೌನಿಯಾಗಿಬಿಡುತ್ತಿದ್ದ. ಇಲ್ಲಾ ಅಳುವಿಗೆ ತಿರುಗಿಬಿಡುತ್ತಿದ್ದ. ಹಂಗಾಗಿ ಅವನನ್ನು ಮತ್ತೆ ಮಾಮೂಲಿ ದಾರಿಗೆ ತರುವ ಅವರ ಪ್ರಯತ್ನಗಳೆಲ್ಲಾ ಮಕಾಡೆ ಮಲಗಿದ್ದವು. ಇರುಳಿನಲ್ಲಂತೂ ಮಲ್ಲೇಶ ಒಂದರೆಗಳಿಗೆ ಮಲಗಿದರೆ ಮತ್ತೊಂದು ಗಳಿಗೆಗೆಲ್ಲಾ ಬೆಚ್ಚಿದವನಂತೆ ಎದ್ದು ಕೂತುಬಿಡುತ್ತಿದ್ದ. ಆಗವನ ಕುಸುಕಾಟ ಇರುಳ ಎದೆಯಲ್ಲಿ ಅನಾಥ ದನಿಯಾಗಿ ತೆವಳುತ್ತಿತ್ತು. ಮಾತಾಡಿಸಿದರೆ ಮತ್ತೆಲ್ಲಿ ರಂಪ ಮಾಡಿಬಿಡುತ್ತಾನೋ ಅನ್ನುವ ಭಯದಿಂದ ಅಜ್ಜ ಅಜ್ಜಿ ಕೇಳಿಸಿಕೊಂಡರೂ ತುಟಿಕ್‍ಪಿಟಿಕ್ ಅನ್ನುತ್ತಿರಲಿಲ್ಲ. ತಮ್ಮ ಕೂಡೆ ಮಲಗುವಂತೆ ಪೀಡಿಸಿದರೂ ಒಪ್ಪುತ್ತಿರಲಿಲ್ಲ. ಮಾತೆತ್ತಿದರೆ, ‘ತಿನ್ನಾಕೇನಾರಾ ಕೊಡು,’ ಅಂತ ಪೀಡಿಸುತ್ತಿದ್ದ, ‘ಇವ್ನೊಬ್ಬ ವಟ್ಯಾಳ,’ ಅಂತ ಅಜ್ಜಿಯಿಂದ ಬೈಸಿಕೊಳ್ಳುತ್ತಿದ್ದ ಮಲ್ಲೇಶನ ತಿನ್ನುವುದರ ಮೇಲಿನ ಗ್ಯಾನವೂ ಅಷ್ಟಕ್ಕಷೇ ಆಗೋಗಿತ್ತು. ಇದು ಯಾಕೋ ತಮ್ಮ ಕೈಮೀರಿ ಹೋಗುತ್ತಿದೆ ಅನಿಸುತ್ತಲೇ ಮಗ ಮುನಿಯ ಹಾಗೂ ಸೊಸೆ ನಂದಮ್ಮನನ್ನು ಒಂದಷ್ಟು ದಿನ ಕರೆಸಿಕೊಂಡಿದ್ದಳು ಗುರಜ್ಜಿ. ಕಡೆಗೆ ಅವರಿಬ್ಬರೂ ಹೇಳಿ ನೋಡಿ ಸೋತು, ‘ಇನ್ನೇಸ್ ದಿಸಾಂತ ಇಂಗಾಡ್ತನೆ, ಅಂಗಾಡ್ಕೆಂಡು ಸುಮ್ಕಾಗ್ತನೆ ತಗಾ,’ ಅಂತ ಹೇಳಿ ಮತ್ತೆ ತಮ್ಮ ಮಾಮೂಲಿ ಕೆಲಸಕ್ಕೆ ಹಿಂದಿರುಗಿದ್ದರು.

ಮುನಿಯ ಹಾಗೂ ನಂದಮ್ಮ ತಮ್ಮಿಬ್ಬರು ಮಕ್ಕಳನ್ನೂ ಅಪ್ಪ ಅವ್ವಂದಿರ ಸುಪರ್ಧಿಗೊಪ್ಪಿಸಿ ಕಳೆದೈದು ವರ್ಷಗಳಿಂದ ದೂರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಹಬ್ಬಗಳಿಗೋ ಇಲ್ಲಾ ಜಾತ್ರೆಗೋ ಆಗಾಗ ಬಂದೋಗುತ್ತಿದ್ದರು. ಮನೆ ಖರ್ಚಿಗೆ ಮಕ್ಕಳ ಬಟ್ಟೆ ಬರೆ ಸ್ಕೂಲಿನ ಫೀಜಿಗೆ ಆಗುವಷ್ಟು ಕಾಸು ಕಳಿಸಿ ಮಿಕ್ಕಿದ್ದನ್ನು ಮಗಳ ಮದುವೆಗೆ ಹಾಗೂ ಮಾರಿದ್ದ ಹೊಲವನ್ನು ಮತ್ತೆ ತಮ್ಮದಾಗಿಸಿಕೊಳ್ಳುವ ಸಲುವಾಗಿ ಕಾಸಿಗೆ ಕಾಸು ಕೂಡಾಕುತ್ತಿದ್ದರು. ಇನ್ನು ಬಡ್ಮಲ್ಲಜ್ಜ ಹಾಗೂ ಗುರಜ್ಜಿ ತಮ್ಮ ವೃದ್ಧಾಪ್ಯವೇತನ ಹಾಗೂ ಅನ್ನಭಾಗ್ಯದ ಅಕ್ಕಿಯಲ್ಲಿ ಸಂಸಾರ ನೀಗಿಸುತ್ತಿದ್ದರು. ಸಾಲದ್ದಕ್ಕೆ ಊಟದೆಲೆ ಹಚ್ಚಿದ್ದರಿಂದ ಹಾಗೂ ಇನ್ನಿತರ ಸಣ್ಣಪುಟ್ಟ ಬಾಬ್ತುಗಳಿಂದ ಬರುತ್ತಿದ್ದ ಪುಡಿಗಾಸನ್ನು ಕಾಯಿಲೆ ಕಸಾಲೆಗೆ ಇರಲಿ ಅಂತ ಆಟೋ ಈಟೋ ಕೂಡಿಕ್ಕುತ್ತಿದ್ದರು. ಮಗ ಮುನಿಯನ ಕಾಯಿಲೆಗಾಗಿ ಇದ್ದೊಂಚೂರು ಹೊಲವನ್ನೂ, ‘ಅವ್ನು ಬದ್ಕಿದ್ರೆ ಇಂಥಾ ವಲಾ ಯಾವ ಲೆಕ್ಕ?’ ಅಂದುಕೊಂಡು ಆರಕ್ಕೆ ಮೂರರಂಗೆ ಸೀದು ದೊಡ್ಡಾಸ್ಪತ್ರೆಗೆ ಸೇರಿಸಿ ಮಗನನ್ನು ಬದುಕಿಸಿಕೊಂಡಿದ್ದ ಬಡ್ಮಲ್ಲಜ್ಜ. ಈಗ ಅದೇ ಹೊಲದ ತಡಿಗಾಸಿಗೇ ಎತ್ತಿನ ಹೊಳೆ ನೀರಿನ ಕಾಲುವೆ ಹಾದು ಹೋಗುತ್ತಿತ್ತು. ಅದನ್ನು ನೋಡಿದಾಗಲೆಲ್ಲಾ ಅವನ ಹೊಟ್ಟೆಗೆ ಬೆಂಕಿ ಬಿದ್ದಂಗಾಗುತ್ತಿತ್ತು. ‘ಒಂದ್ ಪಕ್ಷ ತಗಂಡಿರಾನು ಕೊಡ್ತೀನಿ ತಗಳ್ರಪ್ಪ ನಿಮ್ಮೊಲಾನ ನಿಮ್ಗೆ ಅಂದ್ರೂ ನಾವೀಗ ಅದುನ್ನ ತಗಣಾಕಾದಾತಾ? ಅದ್ಕೀಗ ಚಿನ್ನದ ಬೆಲೆ, ಅದೇನಾರಾ ಈಗ ಇದ್ದುದ್ರೆ ಬರೇ ತರ್ಕಾರಿ ಬೆಳ್ದೇ ಇದ್‍ಬದ್ ಭಂಗಾನೆಲ್ಲಾ ನೀಗಿಕೋಬೋದಿತ್ತು,’ ಅಂತ ನಿಟ್ಟುಸಿರಾಗುತ್ತಿದ್ದ.

3.

ಮೊಮ್ಮಗಳು ತುಂಗಾಳಿಗೆ ಮದುವೆ ಮಾಡಿದಾಗ ಹದಿನೈದು ತುಂಬಿ ಹದಿನಾರಕ್ಕೆ ಬಿದ್ದಿತ್ತು. ಹೈಸ್ಕೂಲು ಮುಗಿಸಿ ಕಾಲೇಜು ಸೇರಿಕೊಂಡಿದ್ದಳು. ಕೊರೊನಾ ಅನ್ನೋದೊಂದು ಬಾರದೇ ಹೋಗಿದ್ದಲ್ಲಿ ತಾನೀ ಮದುವೆಯಾಬೇಕಿರಲಿಲ್ಲವೇನೋ? ತನ್ನ ವಾರಿಗೆಯ ಪಂಕಜಾಳ ಮದುವೆಯಾಗದೇ ಹೋಗಿದ್ದರೂ ತಾನದರಿಂದ ಬಚಾವಾಗುತ್ತಿದ್ದನೇನೋ? ಅಂತ ತುಂಗಾಳಿಗೆ ಬಹಳಷ್ಟು ಸಲ ಅನಿಸಿತ್ತು. ಆದರದೆಲ್ಲಾ ಕೊರೊನಾ ನೆಪದಲ್ಲಿ ಎಂಟತ್ತು ತಿಂಗಳು ಕಾಲೇಜಿನ ಬಾಗಿಲು ಮುಚ್ಚಿದ್ದೇ ಅವಳಿಗೆ ಅಂಥದ್ದೊಂದು ಸ್ಥಿತಿ ಬಂದೊದಗಿತ್ತು. ಆ ಹೊತ್ತಲ್ಲಿ ಎಂದೂ ಕಾಣದ ಕೇಳದ ದೂರದ ಬಡಗಲ ಸೀಮೆಯವರು ಹೆಣ್ಣುಗಳ ಹುಡುಕಾಟದಲ್ಲಿ ತುಂಗಾಳ ಊರಿಗೆ ಕಾಲಿಟ್ಟಿದ್ದರು. ಆಗವರಿಗೆ ಓನಂ ಪ್ರಥಮಕ್ಕೆ ಕುದುರಿದ್ದೇ ಬೊಮ್ಲಿಂಗಪ್ಪನ ಮನೆಯಲ್ಲಿ. ಬಾಳ್ತನದಲ್ಲಿ ಅಷ್ಟಕ್ಕಷ್ಟೇ ಅನ್ನುವಂತಿದ್ದ ಬೊಮ್ಲಿಂಗಪ್ಪ ಅವರ ಐಭೋಗಕ್ಕೆ ಚಿತ್ತಾಗಿ, ‘ಓದಿ ಬೂದಿ ಹಾಕಾದು ಅಷ್ಟ್ರಲ್ಲೇ ಐಯ್ತೆ, ನಾವಾಗೆ ಕಣ್ಣಿಗೆ ಎಣ್ಣೆ ಬಿಟ್ಕಂಡು ಹುಡ್ಕಿದ್ರೂ ಇಂಥಾ ಸಂಬಂಧಾನಾ ಹುಡ್ಕಾಕಾಗ್ತುರ್ಲಿಲ್ಲ,’ ಅಂತ ಮಗಳು ಪಂಕಜಾಳ ಓದು ಬಿಡಿಸಿ ಮದುವೆ ಮಾಡಿಕೊಟ್ಟಿದ್ದರು. ಆಗ ಪಂಕಾಜಾಳ ಗೋಳು ತುಂಗಾಳನ್ನು ಕದಡಿಬಿಟ್ಟಿತ್ತು.

ಹಿಂಗಿರುವಾಗ ಅಂಥಾ ಹೊತ್ತಲ್ಲೇ ಅಂಥದ್ದೇ ಭಾರೀ ಕುಳವೊಂದು ಬಡ್ಮಲ್ಲಜ್ಜನ ಬಡುಕ್ಲು ಮನೆಯ ಬಾಗಿಲನ್ನೂ ಬಡಿದಿತ್ತು. ‘ಆಡಾ ಮಗೀಗೆ ಅದೆಂಥ ಮದುವೆ,’ ಅಂತ ಬಡ್ಮಲ್ಲಜ್ಜ ಹಾಗೂ ಗುರುಜ್ಜಿ ಅದನ್ನು ತಳ್ಳಾಕಿ ಕಾಟಾಚಾರಕ್ಕೆ ಹಿಂಗಿಂಗೆ ಬಂದಿದ್ದರು ಅಂತ ಮಗ ಸೊಸೆಯ ಕಿವಿಗಾಕಿದ್ದರು. ಅದೇ ಅವರು ಮಾಡಿದ್ದ ತಪ್ಪಾಗಿತ್ತು. ಯಾಕೆಂದರೆ ಸುದ್ದಿ ತಿಳಿಯುತ್ತಲೇ ಅವರಿಬ್ಬರೂ ಹಾಜರಾಗಿಬಿಟ್ಟಿದ್ದರು. ‘ಅವುನ್ಯಾವನೋ ತಲ್ಕೆಟ್ಟೋನು ಲಗ್ನ ಮಾಡಿ ಕೊಟ್ಟವ್ನೆ ಅಂತ ನೀನೂ ಆಗ್ಲೇ ತುದ್ಗಾಲಲ್ಲಿ ನಿಂತುದೀಯಲ್ಲ?’ ಅಂತ ಮಗನ ತರಾತುರಿಗೆ ತಡೆಯೊಡ್ಡಲು ನೋಡಿದ್ದ ಬಡ್ಮಲ್ಲಜ್ಜ. ‘ನಿಂಗಿದೆಲ್ಲಾ ತಿಳಿವಲ್ದು ಸುಮ್ಕಿರಪ್ಪ,’ ಮುನಿಯ ಅಪ್ಪನ ಬಾಯಿ ಮುಚ್ಚಿಸಿದ್ದ. ಅದೊಂದು ದಿನ ಬೊಮ್ಲಿಂಗಪ್ಪನ ಕೂಡೇ ಗಂಡಹೆಂಡಿರಿಬ್ಬರೂ ಆ ದೂರದೂರಿನ ಭಾರೀ ಕುಳದ ಮನೆಯ ದಾರಿ ಹಿಡಿದಿದ್ದರು. ಕಂಬಸಾಲಿನ ದೊಡ್ಡ ಮನೆ ಅದರ ಮುಂದೆ ನಿಂತಿದ್ದ ಎರಡು ಕಾರು ಟ್ರ್ಯಾಕ್ಟರ್‌ಗಳು ಐವತ್ತು ಎಕರೆಗೂ ಮಿಗಿಲಾಗಿದ್ದ ಆಸ್ತಿಯನ್ನು ನೋಡುತ್ತಲೇ ನಿಬ್ಬೆರಗಾಗಿದ್ದರು. ‘ಮದ್ವೇಗೇಂತ ಒಂದು ಬಿಡ್ಗಾಸ್ನೂ ನೀವು ಕೊಡ್ಬೇಡಿ, ಎಲ್ಲಾದ್ನೂ ನಾವೇ ನೋಡ್ಕಂತೀವಿ, ಹಂಗೇ ಹೆಣ್ಮಗೀಗೂ ಮೈ ತುಂಬಾ ಒಡ್ವೇನೂ ಹಾಕ್ತೀವಿ,’ ಅಂದಾಗಲಂತೂ ಗಂಡಹೆಂಡ್ತಿ ಉಬ್ಬಿಹೋಗಿದ್ದರು. ಇದರಿಂದ ಒಳ್ಳೆಯ ಕಡೆಗೆ ಮಗಳು ಸಿಕ್ಕಿದಂತೆಯೂ ಆಗುತ್ತೆ ಅದಕ್ಕಾಗಿ ಕೈಕಚ್ಚಬಹುದಾಗಿದ್ದ ಕೂಡಿಟ್ಟಿದ್ದ ಕಾಸೂ ಉಳಿಯುತ್ತೆ ಅನ್ನುವುದು ಅವರಿಬ್ಬರ ಅಂಬೋಣವಾಗಿತ್ತು.

ಗೆಳತಿ ದೂರಾದ ಗಾಯದ ನೋವೇ ಮಾಯದಿರುವಾಗ ತನಗೂ ಮದುವೆ ಅನ್ನುತ್ತಲೇ ಅತ್ತು ಕರೆದು ರಂಪಮಾಡಿದ್ದಳು. ನಾನಿನ್ನೂ ಓದಬೇಕು ಅಂತ ಗೋಗರೆದಿದ್ದಳು. ಮೊಮ್ಮಗಳ ಗೋಳಾಟ ನೋಡಲಾಗದೆ, ‘ಲೇ ಮಗಾ ಹೋಗ್ಲಿ ಬಿಡೋ ಅತ್ಲಾಗಿ, ಮದ್ವೇ ಬ್ಯಾಡ್ವೇ ಬ್ಯಾಡ ಇಸ್ಕೂಲ್ಗೋಗ್ತೀನಿ ಅಂತ ರಚ್ಚೆ ಇಡ್ಕಂಡ್ ಕೂತೈತೆ. ಅವ್ಳ ನಸೀಬು ಎಂಗಿದ್ದಾದೋ ಅಂಗಾಗುತ್ತೆ,’ ಅಂತ ಮಗನಿಗೆ ಮಾತಾಕಿದ್ದ. ‘ಕೋಳಿ ಕೇಳಿ ಖಾರ ಅರ್ಯಾಕಾಗುತ್ತಾ? ಯಾವ್ಯಾವಾಗ ಏನೇನ್ ಆಗ್ಬೇಕು ಅಂತಿದ್ಯೋ ಅದುನ್ನ ಯಾರೂವೇ ತಪ್ಸಾಕಾಗಲ್ಲ,’ ಅಂತ ಅವನಂದಿದ್ದ. ‘ಯಂಗೋಪ್ಪ ಅದ್ ನಿಂಗ್ಬುಟ್ಟುದ್ದು,’ ಅಂತ ಮೇಲ್ಮಾತಾಡಿದ್ದ ಬಡ್ಮಲ್ಲಜ್ಜ. ತಾತನ ಮಾತನ್ನ ಅಪ್ಪ ತಗುದಾಕಲ್ಲ ಏನೇ ಆದ್ರೂ ತಾತ ತನ್ನ ಮೈಯ್ಯಾಕ್ಕೆಂಡೇ ಹಾಕ್ಕೆಣುತ್ತೆ ಅಂತ ನಂಬಿಕೊಂಡಿದ್ದ ತುಂಗಾಳನ್ನದು ಘಾಸಿಗೊಳಿಸಿತ್ತು. 

ಈ ಪ್ರಕಾರವಾಗಿ ಬಡ್ಮಲ್ಲಜನ ಮನೆಯಲ್ಲಿ ಬೇಕು ಬೇಡಗಳು ವಾದಿಸಾಡುತ್ತಿದ್ದಾಗ ಒಂದಿನ ತಾಲ್ಲೂಕು ಶಿಶು ಸಂರಕ್ಷಣಾಧಿಕಾರಿ ಹೊನ್ನಪ್ಪ ವತಾರೆಗೇ ಮನೆಗೆ ಬಿಜಯಂಗೈದು ಜಗಲಿಯಲ್ಲಿ ಪವಡಿಸಿಬಿಟ್ಟಿದ್ದ. ಅವತ್ತು ಮುನಿಯನೂ ಮನೆಯಲ್ಲಿದ್ದ. ‘ನೋಡಪ್ಪಾ ನೀನೀಗ ಮಾಡ್ತಿರೋದು ಬಾಲ್ಯ ವಿವಾಹ. ಅದು ಎಂಥ ಅಪರಾಧ ಅಂತ ಗೋತ್ತಾ? ಮದ್ವೆ ಮಾಡೋನು, ಮದ್ವೆ ಆಗೋನೂ ಇಬ್ರೂ ಕಂಬಿ ಎಣುಸ್‍ಬೇಕಾಗುತ್ತೆ ತಿಳ್ಕಾ!’ ಅಂತ ಗದರಿಸಿದ್ದ. ಇದರಿಂದ ಕಕ್ಕಾಬಿಕ್ಕಿಯಾಗಿದ್ದ ಮುನಿಯ, ‘ಏನೋ ಯಾವ್ದೋ ಗಳ್ಗೇಲಿ ಎತ್ಲುದೋ ಗ್ಯಾನ್ದಾಗೆ ಹಂಗಂದುಕೊಂಡು ಬಿಟ್ಟಿದ್ವಿ. ನೀವು ಇಂಗೆಲ್ಲಾ ಹೇಳಿದ್ ಮ್ಯಾಕೆ ಅದ್ರ ವಿಸ್ಯ ಕೈ ಬಿಟ್ಟಂಗೇ ಬಿಡಿ,’ ಅಂತ ಯಾಸದ ಮಾತಾಡಿದ್ದ. ‘ನಾನು ಯಾಕೇಳ್ತೀನಿ ಅಂದ್ರೆ, ಇದಿನ್ನೂ ಚಿಗ್ರೋ ಹುಲ್ಲೆಸಳಿದ್ದಂಗೆ, ಅದ್ರು ಮ್ಯಾಗೆ ಯಾಕಪ್ಪ ಈಗ್ಲೇ ಈ ಭಾರಾನಾ ಹೊರುಸ್ತೀರ? ಇದ್ಕೆ ಮದ್ವೆ ಮಕ್ಳು ಅನ್ನೋದಿರ್ಲಿ ಇದು ಈ ಬದ್ಕಿಗೇ ಇನ್ನೂ ಸರ‍್ಯಾಗಿ ಕಣ್ಬಿಟ್ಟಿಲ್ಲ. ಸಾಲದ್ದಕ್ಕೆ ಚೆನ್ನಾಗಿ ಓದಿ ಬುದ್ಧಿವಂತೆಯಾದ್ರೆ ನೀನೀಗ ಹುಡ್ಕಿದೀಯಲ್ಲ ಅದ್ರ ಅಪ್ಪನಂತ ಗಂಡು ಸಿಗ್ತಾನೇ ತಿಳ್ಕ. ಒಂದು ಪಕ್ಷ ನಮ್ ಮಾತುನ್ನೇನಾರಾ ತದ್ಗಾಕಿ ಮದ್ವೆ ಮಾಡ್ದೆ ಅಂತ ಇಟ್ಕೋ ಆಗ ಆಗಾದೇ ಬ್ಯಾರೆ ತಿಳ್ಕಾ,’ ಅಂತ ಅಂದಿದ್ದ ಹೊನ್ನಪ್ಪ. ಅದೆಲ್ಲದಕೂ ಬಡ್ಮಲ್ಲಜ್ಜ ಒಳಗೇ ಕೂತು ಕಿವಿಯಾಗಿದ್ದ. ‘ಇನ್ಯಾತವ ಕಿಸಿತಾನೆ ಮದ್ವೆಯಾ?’ ಅಂತ ಅಂದುಕೊಂಡಿದ್ದ. ಆದರೆ ಅದೇನೋ ಹೆಂಗೋ ಇದು ತನ್ನ ಅಪ್ಪಂದೇ ಒಳೇಟು ಅಂತ ಅಂದಾಜಿಸಿದ್ದ ಮುನಿಯ ಅಪ್ಪನ ಮೇಲೆ ಗುರುಗುಟ್ಟಿದ್ದ.

ಮುನಿಯನ ಇಂಥ ಅನುಮಾನಕ್ಕೆ ಕಾರಣವೊಂದಿತ್ತು. ನಂದಮ್ಮನಿಗೆ ಪುಟ್ರಾಮ ಅಂತ ತಮ್ಮನೊಬ್ಬನಿದ್ದ. ಹೈಸ್ಕೂಲಿನವರೆಗೂ ಓದಿದ್ದ ಪುಟ್ರಾಮ ಪಟ್ಟಣದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸುತ್ತಲ ಸೀಮೆಯಲ್ಲೆಲ್ಲಾ ಹೆಣ್ಣುಗಳಿಗಾಗಿ ಪಲ್ಟಿ ಹೊಡೆದಿದ್ದ. ಯಾವೊಂದು ಸಂಬಂಧವೂ ಕುದುರಿರಲಿಲ್ಲ. ಕಳೆದ ಸಲ ಅಕ್ಕನಿಗೆ ಗೌರಿ ಹಬ್ಬದಲ್ಲಿ ಬಾಗಿಣ ಕೊಡಲು ಅವರಿದ್ದಲ್ಲಿಗೆ ಹೋಗಿದ್ದ. ಆಗ ನಂದಮ್ಮ, ‘ಅಲ್ಲ ಕಣೋ ಪುಟ್ರಾಮ ಮುವ್ವತ್ತೆರ್ಡು ವರ್ಷ ತುಂಬ್ತಾ ಬಂತು ಇನ್ನೂ ಯಾವಾಗ ಲಗ್ನ ಮಾಡ್ಕಂತೀಯೋ?’ ಅಂತ ಅಂದಿದ್ದಳು. ಎದ್ದೋಗೋ ಮಾತೊಂದು ಬಿದ್ದೋಗ್ಲಿ ಅನ್ನುವಂತೆ ಅಳುಕಿನಿಂದಲೇ, ‘ಅಲ್ಲಿ ಇಲ್ಲಿ ಯಾಕೆ ಹುಡುಕ್ಲಿ ನಿನ್ ಮಗುಳ್ನೇ ಕೊಟ್ಟು ಮಾಡಿದ್ರಾತವ್ವ,’ ಅಂದಿದ್ದ ತಮಾಷೆಯ ದನಿಯಲ್ಲಿ. ಒಂದಿನವೂ ಹಂಗೆ ಯೋಚಿಸದಿದ್ದ ನಂದಮ್ಮನಿಗೆ ಇದ್ದಕ್ಕಿದ್ದಂತೆ ಪುಟ್ರಾಮ ಕೇಳೋದರಲ್ಲಿ ತಪ್ಪೇನಿದೆ ಅನಿಸಿಬಿಟ್ಟಿತ್ತು. ಅವನಿಗೂ ತುಂಗಾಳಿಗೂ ಏನಿಲ್ಲಾ ಅಂದ್ರೂ ಹದಿನೈದು ವರ್ಷಗಳಷ್ಟು ಅಂತರವಿತ್ತು. ಆದರೂ ಯಾರೋ ದಿಕ್ಕುದೆಸೆ ಇಲ್ಲದವನಿಗೆ ಕೊಡೋದಕ್ಕಿಂತ ಆಟೋ ಈಟೋ ಆಸ್ತಿ ಇದ್ದ ಪುಟ್ರಾಮನೇ ಆ ಚಣ ನಂದಮ್ಮನಿಗೆ ವೈನಾಗಿ ಕಂಡಿದ್ದ. ಹಂಗಾಗಿದ್ದೇ ಆದಲ್ಲಿ ತವರು ಮನೆಯೂ ಉಳಿಯುತ್ತೆ ಜೊತೆಗೆ ಮೊಮ್ಮಗಳು ಅನ್ನುವ ಕಾರಣಕ್ಕೆ ಅವಳಿಗಲ್ಲಿ ಅತ್ತೆ ಮಾವಂದಿರ ಕಾಟವೂ ಇರಲ್ಲ ಅಂದುಕೊಂಡು, ‘ನೋಡಾನಾ ತಗ,’ ಅಂದಿದ್ದಳು ನಂದಮ್ಮ. ಆ ಎರಡು ಮಾತುಗಳು ಹಂಗೆ ಪುಟ್ರಾಮನೊಳಗೆ ಪಗಡುದಸ್ತಾಗಿ ಕೂತುಬಿಟ್ಟಿದ್ದವು. ಅದಾದ ಮೇಲೆ ಅವನು ಆಗಾಗ ತುಂಗಾಳನ್ನು ನೋಡುವ ಸಲುವಾಗಿ ಬಡ್ಮಲ್ಲಜ್ಜನ ಮನೆಗೆ ಹೋಗತೊಡಗಿದ್ದ. ಇದು ಬಡ್ಮಲ್ಲಜ್ಜ ಮತ್ತು ಗುರಜ್ಜಿಯನ್ನು ಇರುಸುಮುರುಸಿಗೆ ತಳ್ಳಿತ್ತು. ‘ನೀನು ಅಗ್ಲೆಲ್ಲಾ ಬಂದು ಹಿಂಗೆ ಹೊಕ್ಕಾಡ ಹತ್ತಿದ್ರೆ ನೋಡ್ದವ್ರು ಏನಂದ್ಕಂಡಾರು?’ ಅಂತ ಬಡ್ಮಲ್ಲಜ್ಜ ಖುದ್ದು ಪುಟ್ರಾಮನಿಗೆ ಹೇಳಿದ್ದ. ಅದು ತನಗಾದ ಅವಮಾನವೆಂದೇ ಭಾವಿಸಿದ್ದ ಪುಟ್ರಾಮ ಅದನ್ನು ಅಕ್ಕನ ಕಿವಿಗಾಕ್ತಿದ್ದ. ಇದರಿಂದ ನಂದಮ್ಮ ಕುದ್ದೋಗಿದ್ದಳು. ‘ಇದೆಲ್ಲಾ ಆ ಗೊಸ್ಲುಂಗೆ ಯಾಕ್ಬೇಕು ಅಂತೀನಿ? ನಮ್ ಮಗ್ಳುನ್ನ ಹೆಂಗ್ ಬೆಳುಸ್ಬೇಕು ಏನ್ಮಾಡ್ಬೇಕು ಅನ್ನಾದು ನಮಿಗ್ಗೊತ್ತಿಲ್ವಾ?’ ಅಂತ ಗಂಡನೆದುರು ಬುಸುಗುಟ್ಟಿದ್ದಳು. ಈ ಮಾತುಗಳ ತಲೆಬುಡ ಒಂದೂ ತಿಳಿಯದೆ, ‘ಅಯ್ಯೋ ಅದ್ಯಾರು ಏನ್‍ಮಾಡವ್ರೆ? ಏನ್ ಅಂದವ್ರೆ?,’ ಅಂದಿದ್ದ ಮುನಿಯ. ಆಗವಳು ಇಂಗಿಂಗೆ ಈ ಥರ ಅಂತ ಹೇಳುತ್ತಲೇ ದಂಗಾಗಿಹೋಗಿದ್ದ. ‘ಇದೇನ್ ಆಗಾ ವೋಗಾ ಮಾತಾ? ಅಲ್ಲಾ ಅ ಮಗಾ ಇವುನ್ನ ಒಪ್ಕೆಂಡಾರಾ ಒಪ್ಕೆಣುತ್ತ? ನಿಂಗೆಲ್ಲೋ ಭ್ರಾಂತು,’ ಅಂತ ಅಂದುಬಿಟ್ಟಿದ್ದ. ‘ಇದೂ ಆ ಮುದಿಯಂದೇ ಕೆಲ್ಸ! ನಿನ್ ಕಿವೀನೂ ಹಿಂಡವ್ನೆ ಆಗ್ಲೆಯಾ,’ ಅಂತ ಬಡ್ಮಲ್ಲಜ್ಜನನ್ನು ಮತ್ತೊಮ್ಮೆ ಶಪಿಸಿದ್ದಳು.

ಅದಾದ ಕೆಲ ದಿನಕ್ಕೆ ಮುನಿಯ ಊರಿಗೋಗಿದ್ದ. ಆಗ ಬಡ್ಮಲ್ಲಜ್ಜನೇ, ‘ನೋಡ್ಲಾ ಮಗ ನಿನ್ನ ಬಾಮೈದ ಅಗಗ್ಲಾ ಮನೆಗ್ಬರಾಕೆ ಸುರ್ವಚ್ಕಂಡಿದ್ದ. ಅದು ನಂಗ್ಯಾಕೋ ಸರಿ ಕಾಣ್ಲುಲ್ಲ. ಮಕುಕ್ ಹೊಡ್ದಂಗೆ ಹೇಳಿದೀನಿ. ಒಂದ್ ಪಕ್ಸ ನೀನು ನಿನ್ನ ಹೆಂಡ್ರೂ ಸೇರ್ಕಂಡು ಅಂಥದೇನಾರಾ ಯೋಚ್ನೆ ಮಾಡಿದ್ರೀ ಅಂದ್ರೆ ನನ್ನ ಘಟ ಬಿದ್ದೋದ್ರೂ ನಾನದುಕ್ಕೆ ಬುಡಲ್ಲ ತಿಳ್ಕೋ. ಅವ್ನ ವಯಸ್ಸೇನು ಈ ಮಗೀನಾ ವಯಸ್ಸೇನು? ಓದೋ ಮಗೀಗೆ ಈಗ್ಲೇ ಮದ್ವೆ ಗಿದ್ವೆ ಅಂತ ಏನಾರಾ ರಾಗ ಎಳುದ್ರೆ ಅಷ್ಟೇಯಾ...ಉಪ್ಪುಪ್ಪೆ ಕಡ್ಡಿ ಆಟಾನೆಲ್ಲಾ ನಂತಾವ ಇಟ್ಕಾಬ್ಯಾಡ...,’ ಅಂತ ಬಡ್ಮಲ್ಲಜ್ಜ ಸಿಟ್ಟಿಗೆದ್ದಿದ್ದ. ಅಪ್ಪನ ಜೋರು ಮುನಿಯನನ್ನು ಮೆತ್ತಗಾಗಿಸಿತ್ತು. ‘ಅಯ್ಯೋ ಇಲ್ದುದ್ನೆಲ್ಲಾ ನೀನೇ ಕತೆ ಕಟ್ಕೆಂಡು ಮಾತಾಡ್ತಿದೀಯಲ್ಲ? ನಾನೇನ್ ಕಿವೀಗೆ ಹೂ ಮುಡ್ಕಂಡುದೀನಾ?’ ಅಂತ ಅಂದಿದ್ದ. ಹಂಗಾಗಿ ಈ ಸಾರ್ತೀನೂ ಮೊಮ್ಮಗಳ ಮದುವೆ ನಿಲ್ಲಿಸೋ ಸಲುವಾಗಿ ಅಪ್ಪ ಇಂಥದ್ದೊಂದು ಆಟ ಹಾಕಿರಬಹುದಾ? ಅನ್ನೋ ಅನುಮಾನ ಮುನಿಯನನ್ನು ಮೆಟ್ಟಿಕೊಂಡಿತ್ತು.

ಮುನಿಯನ ಅನುಮಾನ ನಿಜವೂ ಆಗಿತ್ತು. ಬಡ್ಮಲ್ಲಜ್ಜ ಅಂಥಾದ್ದೊಂದು ಆಟವನ್ನು ಸುಖಾಸುಮ್ಮನೆ ಹಾಕಿರಲಿಲ್ಲ. ಇದಕ್ಕೂ ಮುನ್ನ. ಮದುವೆಯ ಶುರುವಾತಿನಲ್ಲಿ. ಮಗ ತನ್ನ ಮಾತುಗಳನ್ನೆಲ್ಲಾ ಕಾಲ ಕಸ ಮಾಡಿಕೊಂಡು ಮದುವೆ ಮಾಡುವ ಜಿದ್ದಿಗೆ ಬಿದ್ದದ್ದು ಕೆರಳಿಸಿತ್ತು. ಮೊಮ್ಮಗಳನ್ನು ನೋಡಿದಾಗೆಲ್ಲಾ ಬಡ್ಮಲ್ಲಜ್ಜನೊಳಗೆ ಸಂಕಟ ಎರಚಾಡುತ್ತಿತ್ತು. ‘ಆ ಮಗೀಗೇನೂ ವಯಸ್ಸಾಗಿ ಕೂತೈತಾ ನಿಂತ್ ನಿಲುವ್ಗೆಯ ಲಗ್ನ ಮಾಡಾಕೆ? ಅದ್ರ ನಸೀಬು ಹೆಂಗುದ್ದದೋ ಅಂಗಾಗುತ್ತೆ. ಅಂಥದ್ರಾಗೆ ಈ ನನ್ಮಗ ಐಲ್‍ಪೈಲ್ ಆಡ್ದಂಗೆ ಆಡ್ತಾವ್ನೆ. ಏಟ್ ಏಳಿದ್ರೂ ಅವ್ನಾಟ್ವೇ ಅವುನ್ದಾಗೈತೆ.’ ಅಂತ ಬಡ್ಮಲ್ಲಜ್ಜ ಹೆಂಡತಿ ಗುರಜ್ಜಿಯೆದುರು ತನ್ನಳಲನ್ನು ತೋಡಿಕೊಂಡಿದ್ದ. ‘ನಂಗೂ ಅಂಗೇ ಅನುಸ್ತಾ ಐತೆ, ಆದ್ರೇನ್ಮಾಡಾಕಾದಾತು ನಮ್ ಕೈಲಿ?’ ಅಂತ ಗುರಜ್ಜಿಯೂ ನಿಟ್ಟುಸಿರಾಗುತ್ತಿದ್ದಳು. ಬಡ್ಮಲ್ಲಜ್ಜನಿಗೆ ಮಗನ ಬೈರೂಪದ ಬಗ್ಗೆ ಅನುಮಾನವಿದ್ದೇ ಇತ್ತು. ಯಾವ ಮಾಯದಾಗಾರಾ ಮಂಕುಬೂದಿ ಎರಚಿಬಿಡುತ್ತಾನೆ ಅಂತಾನೂ ಗೊತ್ತಿತ್ತು. ಆದ ಪ್ರಯುಕ್ತ ಹೆಂಗಾರಾ ಮಾಡಿ ಮದ್ವೆ ನಡೆಯ ಕೊಡಗೂಡದು ಅನ್ನೋ ಜಿದ್ದಿನ ಭಾವ ಬಡ್ಮಲ್ಲಜ್ಜನೊಳಗೂ ಎದ್ದು ಕೂತಿತ್ತು.

ಅದೇ ಬಡ್ಮಲ್ಲಜ್ಜನನ್ನು ಪ್ರಿನ್ಸಿಪಾಲರನ್ನು ಕಾಣುವಂತೆ ಮಾಡಿತ್ತು. ಮುನಿಯ ಹೈಸ್ಕೂಲಿನಲ್ಲಿದ್ದಾಗ ವಿದ್ಯಾರ್ಥಿ ವೇತನಕ್ಕೆ ಸಹಿ ಹಾಕುವ ಸಲುವಾಗಿ ಒಂದೆರಡು ಸಲ ಮಾತ್ರ ಅತ್ತ ಹೋಗಿದ್ದ. ಮುನಿಯನ ಓದು ಹೈಸ್ಕೂಲಿಗೇ ಕಲಾಸಾಗಿತ್ತು. ಹಂಗಾಗಿ ಮತ್ತೆ ಅತ್ತ ಹೋಗುವ ಪ್ರಮೇಯವೂ ಬಂದಿರಲಿಲ್ಲ. ಮಾರಿಗೆ ಬನಿಯನ್ನು ಅದರ ಮೇಲೊಂದು ಹತ್ತಾರು ತ್ಯಾಪೆಗಳಿದ್ದ ಮಾಸಿ ಕಿಮುಟಾಗಿದ್ದ ಕರಿ ಕೋಟು ಮಂಡಿಯಿಂದ ಒಂಚೂರು ಕೆಳಕ್ಕಿದ್ದ ಮಾಸಲು ಪಂಚೆ ಕೈಯ್ಯಲ್ಲೊಂದು ದೊಂಕಾಪಂಕಾ ಬಿದಿರಿನ ಊರುಗೋಲು ಬೋಳು ತಲೆಯ ಮೇಲೆ ವಲ್ಲಿಯ ಗುಪ್ಪೆ ಹಾಕಿಕೊಂಡಿದ್ದ ಬಡ್ಮಲ್ಲಜ್ಜ ಪ್ರಿನ್ಸಿಪಾಲರ ರೂಮನ್ನು ಹೊಕ್ಕವನೇ ಸದರಿ ಸಂಗತಿಯನ್ನು ಹೆಂಗೆ ಹೇಳಬೇಕೆಂಬುದು ತೋಚದೆ ಪರದಾಡುತ್ತಾ `ತುಂಗಾ ಅಂತೊಂದು ಹೆಣ್ಮಗ ಬರುತ್ತಲ್ಲಾ ಅದ್ರ ಅಜ್ಜ ಸ್ವಾಮಿ ನಾನು,’ ಅಂತಂದು ಚಣೊತ್ತು ಉಸುರು ತಿರುಗಿಸಿಕೊಂಡಿದ್ದ. `ಹೌದೇನಜ್ಜ ಏನಾಗ್ಬೇಕು ಹೇಳಿ? ಇನ್ನೂ ಸಧ್ಯಕ್ಕೆ ಈಗ್ಲೇ ಕಾಲೇಜು ಓಪನ್ ಆಗಲ್ಲ,’ ಅಂದಿದ್ದರು ಪ್ರಿನ್ಸಿಪಾಲರು. `ಅದೇ ಸ್ವಾಮಿ ಯಡ್ವಟ್ಟಾಗಿರಾದು, ನೀವೂ ನಂಗೆ ಮಗ ಇದ್ದಂಗೆ,ಒಂದ್ ಇಸ್ಯಾ ಹೇಳ್ತೀನಿ ಎಂಗರಾ ಮಾಡಿ ನೀವೇ ಅದ್ಕೊಂದ್ ದಾರಿ ತೋರುಸ್ಬೇಕು ಕಣ್ರಾ’ ಅಂದಿದ್ದ ಬಡ್ಮಲ್ಲಜ್ಜ. ಎದುರು ಗೋಡೆಯಲ್ಲಿ ನೇತಾಕಿದ್ದ ಗಾಂಧಿ ಅಂಬೇಡ್ಕರ್ ಬಸವ ಮುಂತಾದವರ ಪಟಗಳನ್ನೇ ದಿಟ್ಟಿಸುತ್ತಾ ಮೊಮ್ಮಗಳ ಮದುವೆಯ ವಿಚಾರವನ್ನು ಹೇಳುತ್ತಾ ಕಣ್ಣೀರಾಗಿದ್ದ ಬಡ್ಮಲ್ಲಜ್ಜ. ಪ್ರಿನ್ಸಿಪಾಲರು, `ಹೂಂ ಕಣಜ್ಜ ಕೊರೋನಾ ಅಂತ ಸ್ಕೂಲು ಕಾಲೇಜ್‌ಗೆ ರಜಾ ಕೊಟ್ಟ ಮೇಲೆ ನಮ್ ಕಾಲೇಜ್ನಾಗೆ ಇಂಥಾವು ಐದು ಮದ್ವೆ ಆಗಿದಾವೆ. ಆದ್ರೆ ಯಾರೊಬ್ರೂ ಬಂದು ಹಿಂಗಿಂಗೆ ಅಂತ ಹೇಳ್ಕಂಡಿರ್ಲಿಲ್ಲ,’ ಅಂದವರೇ ಆಗಲೇ ಶಿಶು ಸಂರಕ್ಷಣಾ ಅಧಿಕಾರಿ ಹೊನ್ನಪ್ಪನಿಗೆ ಫೋನ್ ಮಾಡಿದ್ದರು. ಅದು ಬಡ್ಮಲ್ಲಜ್ಜನನ್ನು ಗೆಲುವಾಗಿಸಿತ್ತು. `ಸ್ವಾಮಿ ನಾನ್ ಬಂದಿದ್ನ ಯಾರ್ಕುಟ್ಟಾರಾವಾ ಬಾಯ್ಗೀಯ್ ಬಿಟ್ಟೀರಾ, ಎಲ್ಲಾ ಪತಗೆಟ್ಟು ವೋಗುತ್ತೆ’ ಅಂತ ಹೊರಡುವಾಗ ಬಿನೈಸಿಕೊಂಡಿದ್ದ.

4.

ಹೊನ್ನಪ್ಪ ಬಂದೋದ ಲಾಗಾಯ್ತಿನಿಂದಲೂ ಮಗ ಸೊಸೆ ಮುಗುಮ್ಮಾಗಿದ್ದದ್ದರ ಮಳ್ಳಾಟದ ಮರ್ಮ ಮದುವೆ ನಾಳೆ ಅನ್ನವಾಗ ನಿಜರೂಪಗೈದಿತ್ತು. ಅವತ್ತು ರಾತ್ರಿ ಊಟವಾಗಿ ಇನ್ನೇನು ಮಲಗಬೇಕು ಅನ್ನುವಾಗ ಮುನಿಯ ಬಡ್ಮಲ್ಲಜ್ಜನ ಬಳಿ ಬಂದು `ಬೆಳ್ಗಿನ್ ಜಾವ್ಕೆಯ ಮನೆ ಬಿಡ್ಬೇಕು ಇಬ್ರೂ ಆಟೊತ್ಗೆಯಾ ಎದ್ದು ಹೊರುಡ್ರಿ,’ ಅಂದಾಗ ಬಡ್ಮಲ್ಲಜ್ಜ ದಡಬಡಿಸಿದ್ದ. ತುಂಗಾ, `ನಾನು ಓದ್ತೀನಿ ತಾತ, ಹೆಂಗಾರ ಮಾಡಿ ಮದ್ವೆ ನಿಲ್ಸು, ನಿಮ್ಮುನ್ನೆಲ್ಲಾ ಬಿಟ್ಟು ನಾನೆಲ್ಲೂ ಹೋಗಲ್ಲ,’ ಅಂತ ಗೋಗರೆದಿದ್ದಳು. `ನಾನು ಪಿಗ್ಗಿ ಬಿದ್ಬುಟ್ಟೆ ಕಣೆ ನನ್ ತಾಯಿ’ ಅಂತ ತುಂಗಾಳನ್ನು ತಬ್ಬಿಕೊಂಡು ತಾನೂ ಅತ್ತಿದ್ದ. ಸಾಲದ್ದಕ್ಕೆ, `ಈನಾಡಿ ಯಾತ್ನೆ ಅನ್ಬವಿಸ್ಕಂಡು ಲಗ್ನ ಆದ್ಮ್ಯಾಕೆ ಎಂಗೆ ಬಾಳಿ ಬದ್ಕುತ್ತೋ’, ಅನ್ನೋ ಆತಂಕಕ್ಕೊಳಗಾಗಿದ್ದ. ಇದನ್ನೆಲ್ಲಾ ಗಮನಿಸುತ್ತಿದ್ದ ಮಲ್ಲೇಶನಿಗೆ `ಮದ್ವೆ ಆದ್ನೇಲೆ ನಾನು ನಿನ್ನ ಬಿಟ್ಟು ಹೋಗ್ತೀನಿ ಕಣೋ,’ ಅಂತ ಅವತ್ತೊಂದು ದಿನ ತುಂಗಾ ಅಂದಿದ್ದ ಮಾತುಗಳು ಮತ್ಮತ್ತೆ ನೆನಪಾಗುತ್ತಾ ತತ್ತರಿಸಿಹೋಗಿದ್ದ. ಬಡ್ಮಲ್ಲಜ್ಜ ಆ ರಾತ್ರಿ ಅದೆಷ್ಟೋ ಸಾರ್ತಿ ಹೊನ್ನಪ್ಪನಿಗೆ ಫೋನ್ ಮಾಡೇ ಮಾಡಿದ್ದ. ಆದರದು ಸ್ವಿಚ್ಡ್ ಆಫ್ ಅಂತಾನೇ ಬರ್ತಿತ್ತು. 

ಬಡ್ಮಲ್ಲಜ್ಜ ತನಗೆ ತೋಚಿದಂತೆ ತಾನು ತೋಡಿದ್ದ ಖೇಡ್ಡದಲ್ಲಿ ಮಗನನ್ನು ಕೆಡವಿ ಮೀಸೆ ತಿರುವಲು ಅಣಿಯಾಗುತ್ತಿದ್ದ. ಆದರದು ಮುನಿಯನ ತಿರುಮಂತ್ರದೆದುರು ನೆಗದು ಬಿದ್ದೋಗಿತ್ತು. ಹೊನ್ನಪ್ಪ ಜಗಲಿಯಲ್ಲಿ ಕೂತು ಎದ್ದೋದ ದಿನದಿಂದ ಮುನಿಯ ಅಳೆದೂ ತೂಗಿ ಹೆಜ್ಜೆಯಿಡತೊಡಗಿದ್ದ. ಇದರ ಅರಿವಿಲ್ಲದಿದ್ದ ನಂದಮ್ಮ ಮಾತ್ರ ಆ ಹೊತ್ತಿಗಾಗಲೇ ಮಗಳಿಗೆ ಗಂಡಿನ ಕಡೆಯವರು ಮಾಡಿಸಿಕೊಟ್ಟಿದ್ದ ಎರಡೆಳೆ ಚಿನ್ನದ ಸರ ಎರಡೂ ಕೈಗೆ ಎರಡೆರಡು ಬಳೆಗಳು ಕಂಚಿಗೋಗಿ ಖರೀದಿಸಿದ್ದ ರೇಷ್ಮೆ ಸೀರೆಗಳಿಂದಾಗಿ ಅಪಾರ ಪುಳಕದಲ್ಲಿದ್ದಳು. ಮುನಿಯ ಸದರಿ ಸಂಗತಿಯನ್ನು ತಿಳಿಸುತ್ತಲೇ ಅವಳೂ ಚಿಂತೆಗೀಡಾಗಿದ್ದಳು. ಕೂಡಲೇ ಗಂಡಿನ ಕಡೆಯವರಿಗದನ್ನು ತಿಳಿಸಿದ್ದರು. ತತ್ಪರಿಣಾಮ ದೂರದ ದೇವಸ್ಥಾನದಲ್ಲಿ ಮದುವೆ ಮಾಡುವ ಗುಟ್ಟಾದ ಯೇಜೀಪೊಂದನ್ನು ಮಾಡಿಕೊಂಡಿದ್ದರು.

ಮದುವೆಯ ದಿನ. ಅಚ್ಚಗಾಗಲು ಬಾಳಾ ಹೊತ್ತಿತ್ತು. ನಂದಮ್ಮ ಹಾಗೂ ಮುನಿಯ ಆಗಲೇ ಎದ್ದಿದ್ದರು. ಅದಕ್ಕೂ ಮುಂಚೆಯೇ ಗುರಜ್ಜಿ ಹಾಗೂ ಬಡ್ಮಲ್ಲಜ್ಜ ಅಂಗಳದ ಕಟ್ಟೆಯಲ್ಲಿ ಕೂತಿದ್ದರು. ಅವರಿಬ್ಬರ ತೊಡೆಗಳ ಮೇಲೆ ಮಲ್ಲೇಶ ತುಂಗಾ ತಲೆ ಹಾಕಿದ್ದರು. ಹೊರಡೋದ ಬಿಟ್ಟು ಹಂಗೆ ಕೂತಿದ್ದವರನ್ನು ಕಾಣುತ್ತಲೇ ಮುನಿಯಗೆ ರೇಗಿ ಹೋಗಿತ್ತು. `ನಿಮ್ಗೆ ಯಾವ್ದಾರಾ ಅರಾಸೈತಾ? ರಾತ್ರೇನೇ ಹೇಳಿರೂ ಇಂಗೆ ಬಿಗುತ್ಕಂಡು ಕೂತಿದೀರಲ್ಲ,’ ಅಂದಿದ್ದ ಕಟ್ಟೆಯ ಹತ್ತಿರ ಹೋಗಿ. `ಲೇ ನಾವಿನ್ನೂ ನಿನ್ ಪಾಲ್ಗೆ ಬದ್ಕಿದೀವೇನೋ? ಯಾವ ಮಕಾ ಇಕ್ಕೆಂಡು ಕರೀತಿದೀಯೋ ಗ್ರಾಸ್ಥ?’ ಬಡ್ಮಲ್ಲಜ್ಜನ ಅಳುವಿನ ಕಟ್ಟೆಯೊಡೆದಿತ್ತು. `ನಿನ್ ಕೈ ಮುಗುದ್ ಕೇಳ್ಕಂತೀನಿ ಅದುನ್ನ ಗೋಳಾಡಿಸ್ಬೇಡ ಕಣಪ್ಪ,’ ಅನ್ನುತ್ತಾ ಗುರಜ್ಜಿಯೂ ಅಳುವಿಗೊಳಗಾದ್ದಳು. ಅದ ನೋಡುತ್ತಲೇ ಮೊಮ್ಮಕ್ಕಳಿಬ್ಬರು ಪೆಚ್ಚಾಗಿ ಅಳತೊಡಗಿದ್ದರು. ಮನೆಯೊಳಗಿಂದ ಓಡಿ ಬಂದ ನಂದಮ್ಮ ದಿಢೀರನೇ ಅತ್ತೆ ಮಾವನ ಕಾಲಿಗೆರಗಿದ್ದಳು. `ದಮ್ಮಯ್ಯಾಂತೀನಿ ಇದೊಂದ್ ಸಲ...’ಅಂತ ಅವಳೂ ಬಿಕ್ಕಿದ್ದಳು. ಮೆಲ್ಲಗೆ ಅಚ್ಚಾಗಾಗತೊಡಗಿತ್ತು. ಅಳು ಉಮೇದು ಕಳಕೊಳ್ಳತೊಡಗಿತ್ತು. ಕಡೆಗದು ಮಲ್ಲೇಶ ತುಂಗಾಳ ಬಿಕ್ಕೆಗಳಿಗೆ ಬಂದು ನಿಂತಿತ್ತು. ಅದೇ ಹೊತ್ತಿಗೆ ಬೊಮ್ಲಿಂಗಪ್ಪ ಕೂತಿದ್ದ ಬಾಡಿಗೆಯ ಕಾರು ರಸ್ತೆಯಿಂದ ಬಡ್ಮಲ್ಲಜ್ಜನ ಮನೆಯ ಗಾಡಿ ಜಾಡಿನತ್ತ ತಿರುಗಿಕೊಂಡಿತ್ತು. ಮದುವೆ ಮುಗಿದು ಅವತ್ತೇ ಗಂಡಿನ ಕಡೆಯವರು ಸೊಸೆಯನ್ನು ಮನೆತುಂಬಿಸಿಕೊಂಡಿದ್ದರು. 

ತುಂಗಾಳ ಒಲ್ಲದ ಮದುವೆಯ ಗಾಯವೇ ಇನ್ನೂ ಮಾಯದಿರುವಾಗ ಆ ಗಾಯಕ್ಕೇ ಮತ್ತೊಂದು ಬರೆಬಿದ್ದಿತ್ತು. ತುಂಗಾಳ ಗಂಡನಿಗವಳು ಎರಡನೆಯ ಹೆಂಡತಿಯಾಗಿದ್ದಳು. ವರ್ಷದ ಮಗುವೊಂದಕ್ಕೆ ಮಲತಾಯಿಯಾಗಿದ್ದಳು. ತುಂಗಾಳಿಗಿದು ತಿಳಿಯತ್ತಲೇ ಅಳುವಿನ ಹೊರತು ಮತ್ತೇನೂ ತೋಚಲಿಲ್ಲ. ಅತ್ತೆ ಮೊದಲ ಹೆಂಡತಿಯ ಮಣಗಟ್ಟಲೆ ಬಂಗಾರವನ್ನು ತೋರಿಸಿ, ‘ಇದೆಲ್ಲಾ ನಿಂದೇ, ನಿಂಗಿಲ್ಲಿ ಏನು ಕ್ವರ್ತೆ ಆಗೈತೆ? ರಾಣಿ ಇದ್ದಂಗೆ ಇರ್ಬವ್ದು,’ ಅಂದಿದ್ದಳು. ಯಾವ ಮಾತುಗಳೂ ಯಾರ ಮಾತುಗಳೂ ಅವಳ ಸಂಕಟಕ್ಕೆ ಮದ್ದಾಗಲು ಸಾಧ್ಯವಿರಲಿಲ್ಲ. ಮೊದಮೊದಲು ಅವಳ ಆ ಅಳು ಆ ಮೌನವನ್ನು ಅನುಕಂಪದಲ್ಲಿ ನೋಡಿದ ಮನೆಯವರಿಗೆ ಅದು ಬರಬರುತ್ತಾ ರೇಜಿಗೆ ಅನಿಸತೊಡಗಿತ್ತು. ತುಂಗಾಳನ್ನು ಹೆತ್ತವರು ಅದಕ್ಕಾಗಿ ಅಲ್ಲಿಗೆ ಹೋಗಬೇಕಾಗಿ ಬಂದಿತ್ತು. ಚಿಗರೆಯಂತೆ ಪುಟಿಯುತ್ತಾ ಮೈ ಕೈ ತುಂಬಿಕೊಂಡು ಮುದ್ದಾಗಿದ್ದ ಮಗಳು ನವೆದು ಕೋಲಿನಂತಾಗಿದ್ದನ್ನು ನೋಡುತ್ತಲೇ ಅವರಿಬ್ಬರ ಎದೆ ಧಸಕ್ಕೆಂದಿತ್ತು. ಒಂದೆರಡು ದಿನ ಉಳಿದು ಹೇಳಬೇಕಾದ್ದನ್ನೆಲ್ಲಾ ಹೇಳಿ ಹೊರಟಾಗ, ‘ಅಮ್ಮ ನಂಗಿಲ್ಲಿ ಇರಾಕಾಗಲ್ಲ, ನಾನು ಅಜ್ಜ ಅಜ್ಜಿ ಮಲ್ಲೇಶನ್ನ ನೋಡ್ಬೇಕು, ಸ್ಕೂಲಿಗೆ ಕಳುಸ್ದುದ್ರೂ ಪರ್ವಾಗಿಲ್ಲ ನನ್ನ ಕರ್ಕಂಡೋಗಿ,’ ಅಂತ ನಂದಮ್ಮನಿಗೆ ಜೋತು ಬಿದ್ದಿದ್ದಳು. ಆಗಲ್ಲಿ ಅಳುವಿನ ನದಿಯೇ ಹರಿದಿತ್ತು.

ಮಗಳಿಗದು ಎರಡನೆಯ ಮದುವೆ ಅಂತ ಮುನಿಯ ಮತ್ತವನ ಹೆಂಡತಿಗೆ ತಿಳಿದದ್ದೂ ಮದುವೆಯ ಮಾತುಕತೆಯೆಲ್ಲಾ ಮುಗಿದ ಮೇಲೆಯೇ. ಇದನ್ನು ಕೇಳುತ್ತಲೇ ಅವರಿಬ್ಬರೂ ಭೂಮಿಗಿಳಿದುಹೋಗಿದ್ದರು. ಮಗಳು ಒಳ್ಳೇಯ ಕಡೆ ಸಿಕ್ಕ ಅತೀವ ಆನಂದದಲ್ಲಿದ್ದ ನಂದಮ್ಮ, ‘ಅಯ್ಯೋ ಇದ್ರ ಅಣೆ ಬರವೇ,’ ಅಂತ ಗೋಳಾಡುತ್ತಾ, ‘ಇಂಗೆ ಹೆಂಡ್ತಿ ತಿಂದ್ಕಂಡವುನ್ಗೆ ಕೊಡಾದ್ಕಿಂತ ನನ್ ತಮ್ಮುನ್ಗೇ ಕೊಟ್ಟುದ್ರೆ ಏಟೋ ಪಾಡಾಗಿರಾದಲ್ಲಾ ಸಿವ್ನೇ’ ಅಂತ ಹಣೆಹಣೆ ಚಚ್ಚಿಕೊಂಡಿದ್ದಳು. ಅದರೂ ಮುನಿಯನಿಗೆ ಯಾಕೋ ಆ ಸಂಬಂಧವನ್ನು ಏಕ್ದಂ ಕಿತ್ತಾಕೊಳ್ಳಲು ಮನಸಾಗಿರಲಿಲ್ಲ. ‘ಮಗಾನಾ ತಗಂಡೋಗಿ ಎರಡ್ನೇ ಮದ್ವೇಗೆ ನೂಕಾಕೆ ನಂಗಿಷ್ಟವಿಲ್ಲ,’ಅಂತ ನಂದಮ್ಮ ಪ್ರತಿರೋಧಿಸಿದ್ದಳು. ‘ಅದು ಅವ್ನು ಬೇಕೂಂತ ಮಾಡ್ಕಂಡಿರಾದ? ಅಲ್ವಲ್ಲ ಅವ್ಳ ಅಣೇಬರ ಅಂಗುತ್ತು ಅವ್ಳು ಸತ್ತೋದ್ಳು. ಅಷ್ಟುಕ್ಕೂವೇ ಅವ್ನಿಗೇನು ವಯಸ್ಸಾಗೋಗೈತಾ?’ಅಂತ ಸಜಾಯಿಸಿಯ ಮಾತಾಡಿದ್ದ ಮುನಿಯ. ‘ವಯಸ್ಸಾಗಿಲ್ಲ ಅಂತಾವಾ ಹೆಣ್ತಿ ಸತ್ತೋನ್ಗೆ ಕೊಡಾಕಾಗುತ್ತಾ? ಯಾರಾರ ಏನಂತಾರೆ? ಇದ್ಯಾಕೋ ಸರಿಬರಲ್ಲ,ಬ್ಯಾಡ್ವೇ ಬ್ಯಾಡ’ ನಂದಮ್ಮ ಪಟ್ಟು ಪಿಟ್ಟಾಗಿತ್ತು. ಇದು ಮುನಿಯನನ್ನು ಧರ್ಮಸಂಕಟಕ್ಕೆ ಸಿಲುಕಿಸಿತ್ತು. ಆದರೂ ‘ಕುಡುದ್ ನೀರು ಅಳ್ಳಾಡ್ದಂಗೆ ಇರ್ತಾಳೆ, ಅಂಥಾದ್ರಲ್ಲಿ...’ಅನ್ನೋ ಮಂಡತನಕ್ಕಿಳಿದಿದ್ದ.

ಮದುವೆ ವಾರವಿದೆ ಅನ್ನುವಾಗಲೂ ನಂದಮ್ಮ ಪಟ್ಟು ಬಿಟ್ಟಿರಲಿಲ್ಲ. ಅದನ್ನು ಸಡಿಲಿಸುವ ಮುನಿಯನ ಅಸ್ತ್ರಗಳೆಲ್ಲವೂ ಕಲಾಸಾಗಿದ್ದವು. ವಿಧಿಯಿಲ್ಲದೆ ಬೊಮ್ಲಿಂಗಪ್ಪನಿಗೆ ಗಂಟುಬಿದ್ದಿದ್ದ. ಬೊಮ್ಲಿಂಗಪ್ಪ ಖುದ್ದು ಮುನಿಯ ಕೆಲಸ ಮಾಡುತ್ತಿದ್ದ ಕಾಫಿ ತೋಟಕ್ಕೇ ದೌಡಾಯಿಸಿದ್ದ. ‘ನೋಡ್ ತಾಯಿ ನಿನ್ ಮಗ್ಳು ಬ್ಯಾರೆ ಅಲ್ಲ, ನನ್ ಮಗ್ಳು ಬ್ಯಾರೆ ಅಲ್ಲ, ಅವುರ್ ಮನ್ಯಾಗೆ ಲಕ್ಷ್ಮೀ ಅನ್ನೋಳು ಕಾಲ್ಮುರ್ಕಂಡ್ ಬಿದ್ದವ್ಳೆ, ಯಾವುದ್ಕೆ ಎಂಗೆ ಅನ್ನಂಗಿಲ್ಲ,ಯಾವ್ದೋ ಕೆಟ್ ಗಳ್ಗೇಲಿ ಹೆಣ್ತಿ ತೀರೋದ್ಳು, ಅಂಗಂತ ಅವ್ನು ಸಾಯಾಗಂಟ ಅಂಗೇ ಇರಾಕಾಗುತ್ತಾ? ನೀನಲ್ದುದ್ರೆ ಇನ್ಯಾರಾರಾ ಹೆಣ್ ಕೊಟ್ಟೇ ಕೊಡ್ತಾರೆ. ಏನೋ ನಾವಾಡ್ಸಿದ್ ಮಕ್ಳು ನಮ್ ಕಣ್ಮುಂದೆ ಚೆನ್ನಾಗಿದ್ರೆ ಅದ್ಕಿಂತ ಇನ್ನೇನ್ ಬೇಕು ಹೇಳ್ತಾಯಿ ಈ ಜನ್ಮುಕ್ಕೆ? ಇಷ್ಟ್ರು ಮ್ಯಾಲೂವೇ ನಿಮ್ಮಿಷ್ಟ. ಶುಭ ಕಾರ್ಯಾ ಮಾಡ್ವಾಗ ಮನ್ಸು ಹೂವ್ನಂಗೆ ಇರ್ಬೇಕು ತಾಯಿ.’ ಬೊಮ್ಲಿಂಗಪ್ಪನ ಮಾತುಗಳು ನಂದಮ್ಮನಿಗೆ ವೈನಾಗೇ ತಾಕಿದ್ದವು. ’ಅದ್ರ ರುಣ ಅಲ್ಲೇ ಐತೆ ಅನ್ನೋದಾದ್ರೆ ಹಂಗಂತ ಅದ್ರ ಅಣೇಲಿ ಬರ್ದುದ್ರೆ ಯಾರ್ತಾನೇ ತಪ್ಸಕಾಗುತ್ತೆ?’ಅಂದುಕೊಂಡು ಸಂಕಟವನ್ನು ನುಂಗಿಕೊಂಡಿದ್ದಳು.

ಇದು ಬಡ್ಮಲ್ಲಜ್ಜನ ಕಿವಿಗೆ ಬಿದ್ದದ್ದೇ ರಾಂಗಾಗಿಹೋಗಿದ್ದ. ‘ಇಂಥ ಮನೆ ಮುರ್ಕ ಕೆಲ್ಸ ಮಾಡದ್ಕಿಂತ ಯಾವ್ದಾರಾ ಹಾಳ್ಬಾವಿಗೆ ತಳ್ಳಿದ್ರಾಗದು? ಅಯ್ಯೋ ನಿಮ್ ಜನ್ಮುಕ್ಕಿಷ್ಟು ಬೆಂಕಿ ಹಾಕ. ಆ ಕಂದಾ ಬ್ಯಾಡ ಬ್ಯಾಡ ಅಂತ ಬಡ್ಕಂತು ಅಯ್ಯೋ ಸಿವ್ನೇ, ಅಂಥಾ ಮಗೀಗೆ ಇಂಥಾ ಕೆಲ್ಸ ಮಾಡಾಕೆ ನಿಮ್ಗೆ ಮನ್ಸಾದ್ರೂ ಹೆಂಗ್ ಬಂತು?’ ಅಂತ ಬೋರಿಟ್ಟಿದ್ದ. ‘ಅಯ್ಯೋ ಅದೇನಂಥಾ ಆಗ್ಬಾರುದ್ ಆಗೊಗೈತೆ ಇಂಗಾಡಕೆ? ಒಳ್ಳೇ ಕಡೀಕೆ ಸಿಕ್ಕೆವ್ಳಲ್ಲಾ ಅಂತ ಖುಷಿ ಪಡಾದ ಬಿಟ್ಬುಟ್ಟು...’ ಅಂದಿದ್ದ ಮುನಿಯ. ‘ಲೇ ಅಡ್‍ಕಸ್ಬಿ ಏನೂಂತ ಮಾತಾಡ್ತೀಯೋ? ಅದೇನ್ ಕರ್ಮ ಮಾಡಿ ಆ ಕಂದ ನಿಮ್ ವಟ್ಟೇಲಿ ಹುಟ್ತೋ? ಆ ಮಗೀನ ಗೋಳು ನಿಮ್ಗೆ ತಟ್ದಂಗೆ ಇರುತ್ತಾ?’ಬಡ್ಮಲ್ಲಜ್ಜ ರೋಧಿಸಿದ್ದ. ‘ಅಯ್ಯೋ ಅವ್ರ ಮಗುಳ್ನ ಹೆಂಗೋ ಬೇಕೋ ಅಂಗೆ ಮಾಡ್ಕಂಡವ್ರೆ ನಾವ್ಯಾರಪ್ಪ ಅವ್ರಿಗೆ ಕೇಳಾಕೆ? ಅಷ್ಟುಕ್ಕೂ ಇಲ್ಲಿ ನಮ್ದೇನು ನಡ್ದಾತು? ಯಾಕ್ ಸುಮ್ಕೆ ಮನಿಸ್ಗೆ ಅಚ್ಕಂಡು ಕೊರುಗ್ತೀಯಾ ಸುಮ್ಕಿರು,’ ಗುರಜ್ಜಿ ಸಮಾಧಾನಿಸಿದ್ದಳು. ‘ಯಂತಾ ಮಾತೂಂತ ಆಡ್ತೀಯಾ? ಚಿಗ್ರೋ ಕುಡೀನಾ ಚಿವುಟಾಕ್ದಂಗೆ ಆತಲಮ್ಮಿ!’ಅಂತ ಬಡ್ಮಲ್ಲಜ್ಜ ಬಡಬಡಿಸಿದ್ದ.

5.

ಮದುವೆಯಾಗಿ ತಿಂಗಳೆರಡು ಕಳೆದಿದ್ದವು. ಮುನಿಯ ಹೆಂಡತಿಯೊಂದಿಗೆ ಎರಡು ಸಾರ್ತಿ ಮಗಳ ಮನೆಗೋಗಿ ಬಂದಿದ್ದ. ಜನರಲ್ಲಿ ಕೊರೊನಾ ಭಯ ಕಡಿಮೆಯಾಗತೊಡಗಿತ್ತು. ಸ್ಕೂಲುಗಳೂ ಮತ್ತೆ ತೆರೆಯುವ ತಯಾರಿ ನಡೆಸಿದ್ದವು. ಮಕ್ಕಳೆಲ್ಲಾ ಸ್ಕೂಲಿಗೋಗುವ ಹುರುಪಿನಲ್ಲಿದ್ದರು. ‘ಇಸ್ಕೂಲಿನ ಕಡೀಕೆ ಮಕಾ ಹಾಕಿದ್ರೆ ಗೆಲುವಾಗ್ತಾನೆ,’ ಅಂತ ಅಂದುಕೊಂಡಿದ್ದ ಬಡ್ಮಲ್ಲಜ್ಜ. ಮಲ್ಲೇಶ ಮಾತ್ರ ತನಗದು ಸಂಬಂಧಿಸಿದ್ದು ಅಲ್ಲವೇ ಅಲ್ಲ ಅನ್ನುವಂತೆ ಅಕ್ಕನ ನೆನಪಿನಲ್ಲೇ ಕೊರಗುತ್ತಿದ್ದ.  ‘ಈಗೇನು ನೀನು ನಿಮ್ಮಕ್ಕನ್ನ ನೋಡ್ಬೇಕು ಅಷ್ಟೇ ತಾನೆ? ನಾನು ಕರ್ಕಂಡು ವೋಗ್ತೀನಿ, ಆದ್ರೆ ನೀನ್ ಮಾತ್ರ ಇಸ್ಕೂಲ್ಗೆ ತಪ್ಪಿಸ್ಕಾಬಾರ್ದು ತಿಳೀತಾ?’ ಅಂತ ಬಡ್ಮಲ್ಲಜ್ಜ ಗಿಲೀಟುಮಾಡತೊಡಗಿದ್ದ. ‘ನೀನು ಯಾಕೆ ಹೇಳ್ತಿದೀಯಾ ಅಂತ ನಂಗೊತ್ತು. ಮೊದ್ಲು ಕರ್ಕಂಡು ವೋಗು,’ ಅಂಬೋದು ಮಲ್ಲೇಶನ ವರಾತವಾಗಿತ್ತು.

ಉಪಾಯಗಾಣದಾಗಿದ್ದ ಬಡ್ಮಲ್ಲಜ್ಜ. ಮುನಿಯನಿಗದು ತಿಳಿಯುತ್ತಲೇ, ‘ಅದ್ಕಂತೂ ಏನೂ ತಿಳ್ಯಲ್ಲ ಅಂದ್ರೆ ಅವ್ನು ಕುಣ್ದಂಗೇ ನೀನೂ ಕುಣೀತಿದೀಯಲ್ಲ?’ ಅಂತ ಮುನಿಯ ದುಮುಗುಟ್ಟಿದ್ದ. ‘ಯಾಕ್ಲ ಯಾವಾಗ್ಲೂ ಒಳ್ಳೆ ಉರ್ಪಂಗಿ ದಾಸ ಆಡ್ದಂಗೆ ಆಡ್ತೀಯಾ? ಈ ಮಗೀಗೆ ಆಟೆಲ್ಲಾ ತಿಳ್ಯಂಗುದ್ರೆ ಯಾಕಿಂಗೆ ಆಡ್ತುತ್ತು? ಎದ್ರೂ ಬಿದ್ರೂ ಅಕ್ಕನ ಬಾಲ್ದಂಗೆ ಇದ್ದ ಕೂಸ್ಗೆ ಇದ್ಕಿದ್ದಂಗೇ ಇಂಗಾದ್ರೆ ಸಂಕ್ಟ ಆಗಲ್ವೇನ್ಲ?’ ಅಂತ ತಿರುಗಿಸಿ ಅಂದಿದ್ದ. ‘ಅಂಗಂತಾವ ತಲೆ ಮ್ಯಾಲೆ ಕೂರುಸ್ಕಂಡ್ರೆ ಸ್ಕೂಲ್ಗೂ ಮಣ್ಬೀಳುತ್ತೆ ತಗಾ,’ ಮುನಿಯ ರೇಗಿದ್ದ. ‘ಎಂಗೋ ಅಂಗೆ ಗಪ್ಪಾಗಿ ವೋದ್ಕೆಂಡಿದ್ದ ಆ ಕಂದುನ್ನೇ ಕಂಡುಲ್ಲ ಕೇಳಿಲ್ಲುದ್ ತಾವ್ಗೆ ತಾಂಡೋಗಿ ನೂಕಿದೀಯಾ, ಈಗ್ ನೋಡಿದ್ರೆ ಇಸ್ಕೂಲಿನ್ ಮಾತಾಡ್ತೀಯಾ? ಎಳ್ಗರಾನಾ ಆರ‍್ಗೆ ಊಡಾರು ನಿನ್ನಂಥ ಅಡ್ನಾಡಿ ಅಲ್ದೆ ಇನ್ಯಾರು?’ ಅಂದಿದ್ದ ಬಡ್ಮಲ್ಲಜ್ಜನೂ ದನಿಯೇರಿಸಿ. ‘ಅವ್ಳು ಹುಡ್ಗಿ ಏಟ್ ಓದಿದ್ರೂ ಆಟೇಯಾ ಕಂಡೋರ್ ಮನೆ ಮುಸ್ರೆ ತಿಕ್ಕಾದು ತಪ್ಪುತ್ತಾ?’ ಮುನಿಯ ಕೊರಗುಟ್ಟಿದ್ದ.

ಮಗನನ್ನು ನೆಚ್ಚಿಕೊಂಡರೆ ಮೊಮ್ಮಗನ ಸ್ಕೂಲಿಗೂ ಎಳ್ಳೂ ನೀರು ಬಿಟ್ಟಂಗೆಯಾ ಅನ್ನೋದು ಬಡ್ಮಲ್ಲಜ್ಜನಿಗೆ ನಿಕ್ಕಿಯಾಗಿಹೋಗಿತ್ತು. ಹಂಗಾಗಿ ಹೆಂಗಾರಾ ಮಾಡಿ ಒಂದು ದಪನಾದ್ರೂ ಅವನನ್ನು ಕರಕಂಡೋಗಿ ಅಕ್ಕನನ್ನು ತೋರಿಸಿಕೊಂಡು ಬರೋದೊಂದೇ ಅವನಿಗಿದ್ದ ಏಕೈಕ ದಾರಿಯಾಗಿತ್ತು. ಆದರದು ಸುಲಭದ ಮಾತಾಗಿರಲಿಲ್ಲ. ಯಾಕೆಂದರೆ ಮೊಮ್ಮಗಳನ್ನು ಕೊಟ್ಟಿರುವ ಊರು ತುಂಬಾ ದೂರದಲ್ಲಿದೆ ಅನ್ನೋದನ್ನ ಬಿಟ್ಟರೆ ಅದು ಎಲ್ಲಿದೆ ಎಂಬುದು ಬಡ್ಮಲ್ಲಜ್ಜನಿಗೆ ರುತಾ ಗೊತ್ತಿರಲಿಲ್ಲ. ಜೊತೆಗೆ ಆಟೊಂದು ದೂರ ಒಬ್ಬನೇ ಹೋಗಿ ಬರುವಷ್ಟು ಸತುವೂ ಇರಲಿಲ್ಲ. ಹಂಗಾಗಿ ಒಂದಿನ ಬೊಮ್ಲಿಂಗಪ್ಪನನ್ನು ಕಂಡು, ‘ನಮ್ಮ ಮಲ್ಲೇಸ ಒಂದೇ ಸಮ್ಕೆ ಅಕ್ಕುನ್ ನೋಡ್ಬೇಕು ಅಂತ ರಚ್ಚೆ ಇಡ್ಕಂಡು ಕೂತ್ಬುಟೈತೈ ಎಂಗಾರಾ ಮಾಡಿ ಒಂದ್ ದಪಾವಾ ಕರ್ಕಂಡು ವೋಗು ಮತ್ತೆ,’ ಅಂತ ಕೇಳಿಕೊಂಡಿದ್ದ. ‘ಅದೇನ್ ಇಲ್ಲೇ ಐತೇನಜ್ಜ ತಟುಕ್ಕಂತ ಇಂಗ್ ವೋಗಿ ಪಟುಕ್ ಅಂತ ಅಂಗ್ ಬಂದುಬುಡಾಕೆ? ವೋಗಾಕೊಂದಿನ ಬರಾಕೊಂದಿನ ಏನುಲ್ಲಾ ಅಂದ್ರೂ ಮೂರ್ನಾಕು ದಿನುದ್ ಮಾತು,’ ಅಂತ ಅಂದಿದ್ದ ಬೊಮ್ಲಿಂಗಪ್ಪ. ‘ದಮ್ಮಯ್ಯ ಅಂತೀನೀ ಆ ಮಗಿನ್ ಗೋಳ್ ನೋಡಾಕಾಗ್ತುಲ್ಲ. ದೊಡ್ಮನ್ಸು ಮಾಡಪ್ಪ ಬೇಕಾರೆ ಬಸ್ ಚಾರ್ಜ್ ನಾನೇ ಆಕ್ಕೆಂತೀನಿ,’ ಅಂತ ಕಾಡಿದ್ದ. ‘ಕಣ್ಗಾಲ ಮುಗೀಲಿ ವಸಿ ತಡಿ ಆಮಾಕೆ ವೋಗ್ಬಂದ್ರಾತು,’ ಬೊಮ್ಲಿಂಗಪ್ಪ ಮಾತು ಕೊಟ್ಟಿದ್ದ. ‘ಆದ್ರು ಮಾತ್ರಾವಾ ಇದುನ್ನ ನಮ್ ಮುನಿಯನ ಕಿವಿಗ್ ಹಾಕ್‍ಗೀಕೀಯಾ,’ ಅಂತ ಕೇಳಿಕೊಂಡಿದ್ದ ಬಡ್ಮಲ್ಲಜ್ಜ.

ಸುಗ್ಗಿಯ ಕಾಲದ ನಡುವೆ ಸ್ಕೂಲು ಕಾಲೇಜುಗಳು ಪ್ರಾರಂಭವಾಗಿದ್ದವು. ಬೊಮ್ಲಿಂಗಪ್ಪನ ಮಾತುಗಳು ಬಡ್ಮಲ್ಲಜ್ಜನನ್ನು ಗೆಲುವಾಗಿಸಿದ್ದವು. ಬಡ್ಮಲ್ಲಜ್ಜ ವೃದ್ಧಾಪ್ಯ ವೇತನ ಹಾಗೂ ಊಟದೆಲೆಯಿಂದ ಬರುತ್ತಿದ್ದ ಕಾಸಿನಲ್ಲಿ ಕೆಲವು ಖರ್ಚಿನ ಬಾಬ್ತುಗಳನ್ನು ಕುಗ್ಗಿಸಿದ್ದ ಕಾಸೇ ಮೂರು ಸಾವಿರದಷ್ಟಾಗಿತ್ತು. ‘ಎಲ್ಲಾರೂವೆ ಇಸ್ಕೂಲ್ಗೋಗ್ತಾವ್ರೆ ನೀನೂ ವೋಗಪ್ಪ’ ಅಂತ ಮೊಮ್ಮಗನನ್ನು ದಿನವೂ ಪುಸಲಾಯಿಸುತ್ತಿದ್ದ ಬಡ್ಮಲ್ಲಜ್ಜ. ‘ನಾನೋಗಲ್ಲ’. ‘ಇಸ್ಕೂಲ್ಗೋದ್ರೆ ನಿಮ್ಮಕ್ಕುಂತಾಕೆ ಕರ್ಕಂಡೋಗ್ತೀನಿ.’ ‘ನಂಗೊತೈತೆ ನೀನ್ ಕರ್ಕಂಡ್ ಹೋಗಾದು.’ ‘ಲೇ ಬಂಗಾರ ನಾನು ನಿಂಗೆ ಸುಳ್ಳೇಳ್ತೀನೇನೋ?’ ‘ಈಸ್ ದಿನುತ್ತಕಾವಾ ಇನ್ನೇನ್ ಮತ್ತೆ ಹೇಳಿದ್ದು?’ ಬಡ್ಮಲ್ಲಜ್ಜನ ಸಕಲೋಪಾಯಗಳು ಗಿರ್ಗಿಟ್ಳೆ ಹೊಡೆದಿದ್ದವು. ಬೊಮ್ಲಿಂಗಪ್ಪನ ಕಣದಲ್ಲಿ ರಾಶಿ ಕೆಲಸ ನಡೆಯುತ್ತಿತ್ತು. ಒಂದೆರಡು ದಿನದಲ್ಲಿ ಕಣಗೆಲಸ ಮುಗಿಯೋದರಲ್ಲಿತ್ತು. ದಿನವೂ ಬಡ್ಮಲ್ಲಜ್ಜನ ಸವಾರಿ ಅತ್ತ ಹೋಗುತ್ತಿತ್ತು. ಬಡ್ಮಲ್ಲಜ್ಜನೂ ಮೊಮ್ಮಗಳನ್ನು ನೋಡುವ ಕಾತರಕ್ಕೊಳಗಾಗಿದ್ದ. ಮೊಮ್ಮಗಳಿಲ್ಲದ ಮನೆಗೆ ಮಂಕು ಬಡಿದಂಗಾಗಿತ್ತು. ತುಂಗಾಳ ರಂಗೋಲಿಯಿಲ್ಲದ ಅಂಗಳ ಬೋಳುಬೋಳಾಗಿ ಕಾಣತೊಡಗಿತ್ತು. ಅವಳು ಬೆಳೆಸಿದ್ದ ಹೂವಿನ ಗಿಡಗಳು ತರಕಾರಿ ಗಿಡಗಳು ನಿಗವಿಲ್ಲದೆ ಮುಖ ಇಳಿಬಿಟ್ಟುಕೊಂಡಿದ್ದವು. ‘ನಾವೆಷ್ಟೇ ನೋಡ್ಕಂಡ್ರೂ ಅಂಗೇ ಕೊರುಗ್ತಾವೆ ನೋಡು,’ ಅಂತ ಗುರಜ್ಜಿಯೂ ಅವುಗಳನ್ನು ನೋಡುತ್ತಲೇ ಕಣ್ಣೀರಾಗಿಬಿಡುತ್ತಿದ್ದಳು.

ತುಂಗಾ ಮಲ್ಲೇಶರಿಗೆ ಅಜ್ಜ ಅಜ್ಜಿ ಅಂದರೆ ಅವ್ವ ಅಪ್ಪ ಎಲ್ಲವೂ. ಮಗಳು ಮೈ ನೆರೆಯುತ್ತಲೇ ನಂದಮ್ಮನಿಗೆ ಮಗಳನ್ನು ತಾವಿರುವಲ್ಲಿಗೇ ಕರಕಂಡೋಗಿ ಅಲ್ಲೇ ಸ್ಕೂಲಿಗೆ ಸೇರಿಸುವ ಅಂದುಕೊಂಡಿದ್ದಳು. ಆದರೆ ತುಂಗಾ ಮಾತ್ರ ಬಿಲ್ಕುಲ್ ಬರಲ್ಲ ಅಂತ ತಲೆಯಾಡಿಸಿಬಿಟ್ಟಿದ್ದಳು. ಬೇಡ ಅಂತ ಮಲ್ಲೇಶನೂ ಚಂಡಿ ಹಿಡಿದಿದ್ದ. ನಂದಮ್ಮ ತೆಪ್ಪಗಾಗಿದ್ದಳು. ಸ್ಕೂಲು ಮುಗಿಸಿ ಬರುತ್ತಿದ್ದಂತೆ ತುಂಗಾ ಅಜ್ಜ ಅಜ್ಜಿಯರ ಕೂಡೇ ಊಟದ ಎಲೆಗಳನ್ನು ಹಚ್ಚುತ್ತಿದ್ದಳು. ಹಚ್ಚಿದ ಎಲೆಗಳನ್ನು ನೀಟಾಗಿ ದುಂಡಾಗಿ ಕತ್ತರಿಸಿ ಜೋಡಿಸುತ್ತಿದ್ದಳು. ರಜಾ ಬಂದರೆ ಅವರೊಂದಿಗೆ ಮುತ್ತುಗದ ಎಲೆಗಳಿಗಾಗಿ ಕಾಡಿಗೆ ಹೋಗುತ್ತಿದ್ದಳು. ಎಲೆಗಳ ಪಿಂಡಿಗಳನ್ನು ಸೈಕಲ್ಲಿನಲ್ಲಿಟ್ಟುಕೊಂಡು ಗೊತ್ತು ಮಾಡಿಕೊಂಡಿದ್ದ ಅಂಗಡಿಗಳಿಗೆ ತಲುಪಿಸುತ್ತಿದ್ದಳು. ಅವರು ಕೊಡುತ್ತಿದ್ದ ಕಾಸನ್ನು ಜೋಪಾನವಾಗಿ ಅಜ್ಜನ ಕೈಗೆ ತಂದೊಪ್ಪಿಸುತ್ತಿದ್ದಳು. ಗುರಜ್ಜಿ ಮನೆಯ ಅಂಗಳದಲ್ಲಿ ಬೆಳಸಿಕೊಂಡಿದ್ದ ಹತ್ತಿಯ ಗಿಡಗಳಿಂದ ಹತ್ತಿಯನ್ನು ಬಿಡಿಸಿ ಬತ್ತಿ ಹಾಗೂ ಗೆಜ್ಬತ್ತಿಗಳನ್ನು ಹೊಸೆಯುತ್ತಿತ್ತು. ತಮಗಾಗಿ ಮಿಕ್ಕದ್ದನ್ನು ಮಾರಾಟ ಮಾಡುತ್ತಿತ್ತು. ಆಗ ತುಂಗಾ ಅಜ್ಜಿಗೆ ಹತ್ತಿಯನ್ನು ಗಿಡಗಳಿಂದ ಕಿತ್ತು ಕೊಡುತ್ತಿದ್ದಳು. ಅದನ್ನ ಇಂಜಿ ಕಡ್ಡಿ ಕಸಾಲು ಇಲ್ಲದಂತೆ ಹೊಸೆಯಲು ಹಸನು ಮಾಡಿಕೊಡುತ್ತಿದ್ದಳು. ಹೊಸೆದ ಬತ್ತಿಗಳನ್ನು ಎಣಿಸಿ ಇಷ್ಟಿಷ್ಟು ಅಂತ ಒಂದೊಂದು ಕಟ್ಟು ಕಟ್ಟಿ ಇಡುತ್ತಿದ್ದಳು. ‘ಇವ್ಳು ಮೊಮ್ಮಗ್ಳಲ್ಲ ಮಗ್ಳೇ ಕಣ್ರಪ್ಪ’ ಅನ್ನುತ್ತಿತ್ತು ಗುರಜ್ಜಿ ಅವರಿವರ ಹತ್ತಿರ.

ಹಿಂಗೆ ಆ ಮನೆಯಲ್ಲಿ ಸಂಕಟ ಅಂಬೋದು ಒಬ್ಬಬ್ಬರೊಳಗೂ ಒಂದೊಂದು ತೆರನಾಗಿ ಆಡಿಕೊಳ್ಳುತ್ತಿತ್ತು. ಮಲ್ಲೇಶನಿಗೆ ತುಂಗಾ ಅವ್ವನೇ ಆಗಿದ್ದಳು. ಅವಳು ದೂರಾಗುತ್ತಲೇ ಮಲ್ಲೇಶ ಅನಾಥ ಭಾವಕ್ಕೊಳಗಾಗಿದ್ದ. ಮತ್ತೆ ತಾನವಳನ್ನು ನೋಡುತ್ತೇನೋ ಇಲ್ಲವೋ ಅನ್ನುವ ಅವ್ಯಕ್ತ ಭಯಾಧೀನನಾಗಿದ್ದ. ಇದೆಲ್ಲಾ ಅಪ್ಪ ಅವ್ವನಿಂದಲೇ ಆದದ್ದು ಅಂತ ಅವರ ಮೇಲೆ ಮುನಿಸಿಕೊಂಡಿದ್ದ. ಜಾಗ ಬದಲಾಯಿಸಿದ್ರೆ ಸರಿ ಹೋಗಬಹುದು ಅಂತ ಅವರು ತಾವಿರುವಲ್ಲಿಗೆ ಕರದೇ ಕರೆದರು. ಅದರಿಂದ ಮಲ್ಲೇಶ ಮತ್ತೂ ಸೆಟೆದುಕೊಂಡಿದ್ದ. ಮನೆಯಿಂದಾಚೆ ಕಾಲಿಡದೇ ಕೂತುಬಿಟ್ಟಿದ್ದ. ಅಜ್ಜ ಇಲ್ಲಾ ಅಜ್ಜಿ ಜುಲುಮೆ ಮಾಡಿದರೆ ಒಂಚೂರು ತಿನ್ನುತ್ತಿದ್ದ. ಬಡ್ಮಲ್ಲಜ್ಜ ಬೊಮ್ಲಿಂಗಪ್ಪನ ಕಣಗೆಲಸ ಮುಗಿಯೋದಕ್ಕಾಗೇ ಕಾದು ಕೂತಿದ್ದ. 

6.

ಇಂತಿಪ್ಪ ಹೊತ್ತಲ್ಲಿ...

ಅವತ್ತು ಎಂದಿನಂತೆ ಮುಂಜಾನೆಗೇ ಎದ್ದಿದ್ದಳು ಗುರಜ್ಜಿ. ತನ್ನ ಅರೆ ಬಗ್ಗಿದ್ದ ಸೊಂಟಕ್ಕೆ ಕೈಯ್ಯೊಂದನ್ನು ಆನಿಸಿಕೊಂಡು ಬಗ್ಗಡದಟ್ಟಿಯ ಕಸ ಗುಡಿಸಿ ನೀರು ಚಿಮುಕಿಸಿ ರಂಗೋಲಿ ಬಿಡಿಸೋ ಹೊತ್ತಿಗೆ ಬಡ್ಮಲ್ಲಜ್ಜನೂ ಎದ್ದು ಬಂದು ಹಟ್ಟಿಯ ವಾರಾಸಿಗಿದ್ದ ಹೊಂಗೆ ಗಿಡಕ್ಕೆ ಕಟ್ಟಿದ್ದ ಕಾಡುಗಲ್ಲಿನ ಕಟ್ಟೆಯ ಮೇಲೆ ಕೂತು ಮೋಟು ಬೀಡಿಯೊಂದಕ್ಕೆ ಜೀವ ಕೊಡುತ್ತಾ, ‘ಅಮ್ಮಿ ಪಾಪಣ್ಣಿ ಒಳ್ಗೆಲ್ಲೂ ಕಾಣ್ಲುಲ್ಲ ನಿನ್ಜೊತೇಲೇನಾರಾ ಎದ್ ಬಂದುತ್ತಾ ಆಚಿಕೆ?’ ಗುರಜ್ಜಿಗೆ ಕೇಳಿದ. ‘ಇಲ್ಲಪ್ಪ, ಎಲ್ಲೋ ಎದ್ದು ಆಚೀಕೆ ವೋಗಿರ್ತಾನೆ ತಗಾ ಬತ್ತಾನೆ, ಅವ್ನೇನು ಎಳೆ ಕಿಸ್ಲೇನಾ?’ ಅನ್ನುತ್ತಾ ಗುರಜ್ಜಿ ಪೊರಕೆಯನ್ನು ಅದರ ಮಾಮೂಲಿ ತಾವಿನಲ್ಲಿಸಿ ತಂಬಿಗೆಯ ತಳದಲ್ಲಿದ್ದ ನೀರನ್ನು ಅಲ್ಲೊಂದು ಹೂವಿನ ಗಿಡಕ್ಕೆ ಬಗ್ಗಿಸಿ ಒಳ ನಡೆದಳು. ಮುಗಿಲು ಗೂಡ್ರುಗಟ್ಟಿಕೊಂಡಿತ್ತು. ಸಣ್ಣಗೆ ಅಡ್ಡಾಡುತ್ತಿದ್ದ ಮಾಗಿ ಕಾಲದ ಚಳಿ ಕೂಕ್ ಅನ್ನುತ್ತಿತ್ತು. ‘ಅಯ್ಯೋ ಒಳ್ಳೆ ಕಣಗಾಲ್ದಾಗೆ ಕೆಡ್ಸಪ್ಪುನ್ ಕತೆ ಮಾಡಾಕೆ ಬತ್ತುರಂಗೈತೆ,’ ಅಂತ ಅಂದುಕೊಂಡ ಬಡ್ಮಲ್ಲಜ್ಜ ಮೇಲೆದ್ದು ಕಟ್ಟೆಯ ಪಕ್ಕದಲ್ಲಿ ಬಿದ್ದಿದ್ದ ಹುಚ್ಚಳ್ಳಿನ ಪುಳ್ಳೆಗಳನ್ನು ಹತ್ತಿಸಿ ಮೈ ಕಾಸಿಕೊಳ್ಳತೊಡಗಿದ.

ಇದ್ದಬದ್ದ ಪುಳ್ಳೆಗಳೆಲ್ಲಾ ಮುಗಿದವು. ಇದ್ದೊಂದೆರಡು ಬೀಡಿಗಳೂ ಅಖೈರಾಗುತ್ತಲೇ ಮೇಲೆದ್ದು ತಿಪ್ಪೆಯ ಮೇಲಿದ್ದ ಸೋರೆ ಗಿಡದತ್ತ ಹೋದ. ಸೋರೆಕಾಯೊಂದನ್ನು ಕಿತ್ತು ತಂದು ಕಟ್ಟೆಯ ಮೇಲಿಟ್ಟ. ಊರೊಳಗಿನ ದೇವಸ್ಥಾನದ ಧ್ವನಿವರ್ಧಕ ಸ್ತೋತ್ರವೊಂದನ್ನು ಜೋರು ದನಿಯಲ್ಲಿ ವದರುತ್ತಿತ್ತು. ಆಗ ಬತ್ತಾನೆ ಈಗ ಬತ್ತಾನೆ ಅಂತ ಬಡ್ಮಲ್ಲಜ್ಜ ಕಾದೇ ಕಾದ. ಗಂಟೆ ಎಂಟಾಯ್ತು. ಮಲ್ಲೇಶನ ಸುಳಿವಿಲ್ಲ. ಬಡ್ಮಲ್ಲಜ್ಜ ದಿಗಿಲಿಗೆ ಬಿದ್ದ. ಊರಿನ ಬೀದಿಯನ್ನೊಂದು ಸುತ್ತಾಕಿದ. ಎಲ್ಲೂ ಕಣ್ಣಿಗೆ ಬೀಳಲಿಲ್ಲ. ‘ಅಯ್ಯೋ ಇದ್ರಪ್ನ ಇದೆಲ್ಲೋತೂಂತೀನೀ ಈಟೊತ್ಗೆಯಾ?’ ಅಂದುಕೊಂಡು ಅವನ ವಾರಿಗೆಯವರ ಮನೆಗಳನ್ನು ಎಡತಾಕಿದ. ಅಲ್ಲೂ ಕಾಣಲಿಲ್ಲ. ಎದೆ ಧಡಗುಡತೊಡಗಿತು. ಊರ ಹೊರಪಾರಿಯಲ್ಲಿ ತೋಟ ತುಡಿಕೆಗಳಲ್ಲೆಲ್ಲಾ ಸಿದುಕಿದ. ಕಾಣದೇ ಹೋದ್ದರಿಂದ, ‘ಒಂದ್ವೇಳೆ ಈಟೊತ್ಗೇನಾರಾ ಮಂತಕ್ಕೋಗಿರ್ಬವ್ದಾ?’ ಅಂತಂದುಕೊಂಡು ಸೀದಾ ಮನೆಗೆ ಬಂದ. ತಿಂಡಿಯ ಹೊತ್ತು ಮೀರೋಗಿತ್ತು. ‘ಅದೆಲ್ಲೋಗಿದ್ರಿ ಇಬ್ರೂ ಎದಾಳ್ತುದ್ದಂಗೆಯಾ ಅಂತೀನಿ? ಕೈಕಾಲ್ ಮಕಾ ತೊಳ್ಕಂಡು ಬನ್ರಿ ತಿಂಡಾಗೈತೆ,’ ಅಂದಳು ಗುರಜ್ಜಿ. ‘ಅಯ್ಯೋ ತಿಂಡಿ ಮನಾಳಾತು, ತಿನ್ನಾದು ವತ್ತಟ್ಗಿರ್ಲಿ ಎಲ್ಲುಡ್ಕಿದ್ರೂ ಮಗಾನೇ ಕಾಣ್ತುಲ್ಲ ಕಣಮ್ಮಿ,’ ಅಂದ ಬಡ್ಮಲ್ಲಜ್ಜ. ದನಿ ನಡುಗುತ್ತಿತ್ತು. ‘ಅಯ್ಯೋ ಸಿವ್ನೆ ಅದೆಲ್ಲಿ ವೋತೂಂತೀನಿ?’ ಅನ್ನುತ್ತಾ ಗುರಜ್ಜಿ ರೊಟ್ಟಿ ತೊಟ್ಟುತ್ತಿದ್ದ ಕೈಗಳಲ್ಲಿದ್ದ ಹಿಟ್ಟಿನ ಉಂಡೆಯೊಂದಿಗೇ ಪಡಸಾಲೆಗೆ ಬಂದಳು. ಕಣ್ಣೀರಾಗಿದ್ದ ಬಡ್ಮಲ್ಲಜ್ಜನ ಸಂಕಟದೊಳಗೊಂದಾಗಿ ಪಣತದ ಪಕ್ಕ ಕುಸಿದಳು. ಮಾತುಗಳು ಕೆಲಸ ಕಳಕಂಡವು. ಹೊತ್ತು ತಿಣುಕಾಡಿತು. ಆಗ ಇದ್ದಕ್ಕಿದ್ದಂತೆ ಏನೋ ನೆನಪಾದವನಂತೆ ಪುಸುಕ್ಕನೆ ಎದ್ದ ಬಡ್ಮಲ್ಲಜ್ಜ ಒಳಗೋದ. ಅಲ್ಲಿಂದ, ‘ಲೇ ಅಮ್ಮೀ ವಸಿ ಬಾರೇ ಇಲ್ಲಿ,’ ಅಂತ ಕೂಗಿದ ಭಯ ಹಿಡುಕಂಡಿದ್ದ ದನಿಯಲ್ಲಿ. ಗುರಜ್ಜಿಯ ಎದೆ ಧಸಕ್ಕೆಂತು. ಏನೋ ಎಂತೋ ಅಂತ ಗದಗುಡುವ ಎದೆಯಲ್ಲಿ ಎದ್ದು ಒಳಗೋದಳು. ಬಡ್ಮಲ್ಲಜ್ಜ ತಾನು ಅಲ್ಲೀತಂಕ ಕೂಡಿಟ್ಟಿದ್ದ ಕಾಸಿನ ಖಾಲಿ ಕವರನ್ನು ತೋರಿಸುತ್ತಾ ಬಿಕ್ಕಳಿಸತೊಡಗಿದ. ಒತ್ತರಿಸಿಕೊಂಡು ಬಂದ ಅಳುವನ್ನು ಹತ್ತಿಕ್ಕಲಾಗದ ಗುರಜ್ಜಿಯೂ ಅಳುವಿಗೊಳಗಾದಳು.

ಅಲ್ಲಿ ಆ ಅಳುವು ಈ ಚಣವೂ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.