ಸೋಮವಾರ, ಆಗಸ್ಟ್ 8, 2022
22 °C

ಮುಕ್ತಿ: ಹಿಂದಿಯ ಪ್ರಖ್ಯಾತ ಸಾಹಿತಿ ಅಸಗರ್ ವಜಾಹತ್ ಅವರ ಮೂರು ಕಥೆಗಳು

ಮೂಲ: ಅಸಗರ್ ವಜಾಹತ್‌ ಕನ್ನಡಕ್ಕೆ: ಡಿ.ಎನ್.ಶ್ರೀನಾಥ್ Updated:

ಅಕ್ಷರ ಗಾತ್ರ : | |

Prajavani

ಶಿಷ್ಯನ ಮನಸ್ಸು ನೊಂದಿತ್ತು. ಅವನು ಬೇಸರಗೊಂಡಿದ್ದ. ಆದರೆ ಅವನು ಕವನ ಬರೆಯುವಷ್ಟು ಬೇಸರಗೊಂಡಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬೇಸರಗೊಂಡಿರಲಿಲ್ಲ. ಬೇಸರದಲ್ಲಿಯೇ ಮುಕ್ತಿ ಕಾಣುವಷ್ಟು ಸಹ ಬೇಸರಗೊಂಡಿರಲಿಲ್ಲ. ಅವನು ಕಡಿಮೆಗಿಂತ ಹೆಚ್ಚು ಮತ್ತು ಹೆಚ್ಚಿಗಿಂತ ಕಡಿಮೆ ಬೇಸರಗೊಂಡಿದ್ದ. ಇಂಥ ನಾಜೂಕು ಪರಿಸ್ಥಿತಿಯಲ್ಲಿ ಅವನು, ಗುರುಗಳ ಬಳಿ ಸಲಹೆ ಪಡೆಯಲು ಬಂದ. ಗುರುಗಳು ಧ್ಯಾನಮಗ್ನರಾಗಿದ್ದರು. ಅವರ ಕಣ್ಣುಗಳು ಮುಚ್ಚಿದ್ದವು. ಅವರು ಕಣ್ಣುಗಳನ್ನು ತೆರಯುವ ಕ್ಷಣವನ್ನು ಶಿಷ್ಯ ನಿರೀಕ್ಷಿಸಲಾರಂಭಿಸಿದ. ಆದರೆ ಗುರುಗಳ ಕಣ್ಣುಗಳು ನಮ್ಮ ದೇಶದ ಅದೃಷ್ಟದಂತಾಗಿತ್ತು. ಕಣ್ಣುಗಳು ತೆರೆಯುವುದನ್ನು ಕಾದು-ಕಾದು ಶಿಷ್ಯನ ಬೇಸರ, ಕಡೆಗೆ ಸಿಟ್ಟಿನಲ್ಲಿ ಪರಿವರ್ತನೆಗೊಂಡಿತು. ಸಮೀಪದಲ್ಲಿಯೇ ಇದ್ದ ಪಾದರಕ್ಷೆ ಮತ್ತು ಗುರುಗಳ ಬೋಳು ತಲೆಯ ಪರಸ್ಪರ ತಾಳಮೇಳದಿಂದ ಹುಟ್ಟುವ ಶಬ್ದದಿಂದ ಗುರುಗಳ ಗಮನವನ್ನು ಆಕರ್ಷಿಸಬೇಕೆಂದು ಶಿಷ್ಯನಿಗೆ ಮನಸ್ಸಾಯಿತು. ಆದರೆ ಶಿಷ್ಯ ಗುರುಗಳನ್ನು ಗೌರವಿಸುತ್ತಿದ್ದರಿಂದ ಅವನು ಪಾದರಕ್ಷೆಗಳನ್ನು ಎತ್ತಿಕೊಂಡು ತನ್ನ ತಲೆಗೇ ಹೊಡೆದುಕೊಂಡ. ಗುರುಗಳ ಗಮನ ಚದುರಿತು. ಅವರು ಕಣ್ಣುಗಳನ್ನು ತೆರೆದು ನೋಡಿದರು: ಶಿಷ್ಯ ಬೇಸರಗೊಂಡಿದ್ದಾನೆ. ಗುರುಗಳ ತುಟಿಗಳಲ್ಲಿ ಮುಗುಳ್ನಗು ತೇಲಿತು. ಗುರು ಮತ್ತು ಶಿಷ್ಯರಲ್ಲಿ ಈ ರೀತಿ ಸಂಭಾಷಣೆ ನಡೆಯಿತು:

    ಗುರು: “ಶಿಷ್ಯ, ಯಾಕೆ ಬೇಸರಗೊಂಡಿದ್ದೀಯ?”

    ಶಿಷ್ಯ: “ಗುರುದೇವ, ಎಷ್ಟು ಪ್ರಯತ್ನಿಸಿದರೂ ನನಗೆ ನೌಕರಿ ಸಿಗಲಿಲ್ಲ, ಯಾವುದೇ ಕೆಲಸವಿಲ್ಲ, ನಿರುದ್ಯೋಗದಿಂದಾಗಿ ದುಃಖಿಯಾಗಿದ್ದೇನೆ.”

    ಗುರು:  “ನಿನಗೆ ನೌಕರಿ ಸಿಗುತ್ತದೆ, ಆದರೆ ಒಂದು ಶರತ್ತಿದೆ.”

    ಶಿಷ್ಯ:  “ನಾನು ಎಲ್ಲಾ ಶರತ್ತುಗಳನ್ನು ಒಪ್ಪಿಕೊಳ್ಳಲು ಸಿದ್ಧನಿದ್ದೇನೆ. ನೀವು ಹೇಳಿದರೆ 

ಕೊಲೆಯನ್ನು ಸಹ ಮಾಡಬಲ್ಲೆ. ನೀವು ಹೇಳಿದರೆ ಹುಡುಗಿಯನ್ನು ಬಲಾತ್ಕರಿಸಬಲ್ಲೆ, ನೀವು ಹೇಳಿದರೆ ಗುಂಡು ಹೊಡೆದು ಜನರನ್ನು ಸಾಯಿಸಬಲ್ಲೆ.”

    ಗುರು: “ಬೇಡ-ಬೇಡ, ಶಿಷ್ಯ. ಇಷ್ಟು ಸಾಮಾನ್ಯ ಮತ್ತು ಸಹಜ ಕೆಲಸವನ್ನು ಮಾಡಲು ನಾನು ನಿನಗೆ ಹೇಳುವುದಿಲ್ಲ, ಈ ಕೆಲಸಗಳು ದೇಶದಲ್ಲಿ ತನ್ನಷ್ಟಕ್ಕೆ ತಾನೇ ನಡೆಯುತ್ತಿವೆ.”

    ಶಿಷ್ಯ:  “ಮತ್ತೇನು ಮಾಡಲಿ, ಗುರುದೇವ?”

    ಗುರು:  “ನೀನು ನೌಕರಿ ಹುಡುಕುವುದನ್ನು ನಿಲ್ಲಿಸಿದರೆ ನಿನಗೆ ನೌಕರಿ ಸಿಗುತ್ತದೆ.”

    ಶಿಷ್ಯ:   “ಇದು ಹೇಗೆ ಗುರುದೇವ?”

    ಗುರು: “ಹುಡುಕಿದರೆ ದೇವರು ಸಿಗುವುದಿಲ್ಲವೆಂಬುವುದನ್ನು ನೀನು ಕೇಳಿದ್ದೀಯ, ಇಂದು ನೌಕರಿ ಮತ್ತು ದೇವರ ಪರಿಸ್ಥಿತಿ ಒಂದೇ ಆಗಿದೆ. ಇನ್ನೂ ಹೇಳಬೇಕೆಂದರೆ ದೇವರು ಸಹ ಸಿಗುತ್ತಾನೆ, ನೌಕರಿ ಸಿಗುವ ಪರಿಸ್ಥಿತಿ ಅದಕ್ಕಿಂತಲೂ ಹದಗೆಟ್ಟಿದೆ.”

    ಶಿಷ್ಯ:  “ಆದರೆ ಹುಡುಕದೆ ನೌಕರಿ ಹೇಗೆ ಸಿಗುವುದು?”

    ಆಗ ಗುರುಗಳು ಶಿಷ್ಯನ ಕುತೂಹಲವನ್ನು ಈ ರೀತಿಯಲ್ಲಿ ತಣಿಸಿದರು-

    “ಒಂದು ನಗರದಲ್ಲಿ ಒಬ್ಬ ಸಭ್ಯ ಮನುಷ್ಯನಿದ್ದ. ಸಭ್ಯ ಮನುಷ್ಯರಂತೆ ಈ ಸಭ್ಯನೂ ಸಹ ನಿರುದ್ಯೋಗಿಯಾಗಿದ್ದ. ಹೀಗಾಗಿ ವ್ಯಗ್ರನಾಗಿದ್ದ. ಸಭ್ಯ ಮನುಷ್ಯ ನೌಕರಿಗಾಗಿ ತುಂಬಾ ಅಲೆದಾಡಿದ, ಆದರೆ ಸಿಗಲಿಲ್ಲ. ಒಂದು ದಿನ ಅವನು ತೀವ್ರ ತೊಂದರೆಗೊಳಗಾದ. ಆಗ ಅವನಿಗೆ ನೌಕರಿ ಸಿಗದೇ ಇರುವುದರ ರಹಸ್ಯ ತಿಳಿಯಿತು. ಅವನಿಗೆ ಜ್ಞಾನ ಪ್ರಾಪ್ತಿಯಾಯಿತು. ಅವನು ಯಾವುದೇ ಮರದ ಕೆಳಗೆ ಕೂತಿರಲಿಲ್ಲ, ಪ್ರತಿಯಾಗಿ ಬಸ್ ಸ್ಟ್ಯಾಂಡಿನ ಕೆಳಗೆ ನಿಂತಿದ್ದ. ನೌಕರಿ ಸಿಗದೇ ಇರುವುದಕ್ಕೆ ಸಜ್ಜನತೆಯೇ ಕಾರಣ ಎಂದು ಅನ್ನಿಸಿತು. ಅವನು ತನ್ನ ಹೆಗಲ ಮೇಲಿಂದ ಸಜ್ಜನತೆಯ ಚಾದರವನ್ನು ಕಳಚಿದ. ನಂತರ ಎಲ್ಲರ ಕಣ್ಣುಗಳನ್ನು ತಪ್ಪಿಸಿ  ಅದನ್ನು ಬಸ್  ಸ್ಟ್ಯಾಂಡಿನಲ್ಲಿಟ್ಟ.  ಆಗಲೇ  ಧ್ವನಿ  ಕೇಳಿಸಿತು-“ಬೇಡ-ಬೇಡ,  ಚಾದರವನ್ನು  ನನ್ನ ಮೇಲಿಡಬೇಡ, ಇದು ನನ್ನ ಪ್ರಾರ್ಥನೆ. ಒಂದು ವೇಳೆ ಇಲ್ಲಿ ಚಾದರವನ್ನಿಟ್ಟರೆ, ಭವಿಷ್ಯದಲ್ಲಿ ಇಲ್ಲೆಂದೂ ಯಾವುದೇ ಬಸ್ ನಿಲ್ಲುವುದಿಲ್ಲ. ಯಾವ ಪ್ರಯಾಣಿಕನೂ ಬರುವುದಿಲ್ಲ.”

ಸಭ್ಯ ಮನುಷ್ಯ ಕಳವಳಗೊಂಡ. ಇದು ಬಸ್ ಸ್ಟ್ಯಾಂಡಿನ ರೋದನವಾಗಿತ್ತು. ಆಗ ಸಭ್ಯ ಮನುಷ್ಯ ಕಣ್ ತಪ್ಪಿಸಿ ಚಾದರವನ್ನು ಒಬ್ಬ ಕುಂಟ ಭಿಕ್ಷುಕನ ಹೆಗಲುಗಳ ಮೇಲೆ ಹಾಕಲು ಬಯಸಿದ, ಆದರೆ ಆಶ್ಚರ್ಯ! ಕುಂಟ ಭಿಕ್ಷುಕ ಊರುಗೋಲುಗಳನ್ನು ಬಿಟ್ಟು ಪಿ.ಟಿ.ಉಷಾಳ ವೇಗದಲ್ಲಿ ಓಟಕಿತ್ತ. ನಂತರ ಸಭ್ಯ ಮನುಷ್ಯ ಸಜ್ಜನತೆಯ ಚಾದರವನ್ನು ನಾಯಿಯ ಮೇಲೆ ಹಾಕಲು ಬಯಸಿದ, ಆದರೆ ನಾಯಿ ಕೈಮುಗಿದು ಹೇಳಿತು, “ಇದೇನು ಮಾಡುತ್ತಿದ್ದೀಯ, ನಾನು ನಾಯಿಯಾಗಿಯೇ ಇರಲು ಬಿಡು. ನನಗೆ ಯಾರೂ ರೊಟ್ಟಿಯ ತುಂಡನ್ನು ಕೊಡುವುದಿಲ್ಲ. ಯಾರೂ ಮಣ್ಣು ಹೆಂಟೆಯಿಂದಲೂ ಹೊಡೆಯುವುದಿಲ್ಲ, ಯಾರೂ ಸಹ ನಾಯಿ ಅಂತಲೂ ಕರೆಯುವುದಿಲ್ಲ.” ಆಗ ಸಭ್ಯ ಮನುಷ್ಯ, ಚಾದರವನ್ನು ಸಾಧು ಅಥವಾ ಸಂತನಿಗೆ ಕೊಡಲು ತೀರ್ಮಾನಿಸಿದ. ಅವನು ಚಾದರದೊಂದಿಗೆ ದೇವಸ್ಥಾನಕ್ಕೆ ಹೋದ, ಚಾದರವನ್ನು ನೋಡುತ್ತಲೇ ಪೂಜಾರಿಗಳು ಓಟಕಿತ್ತರು. ಭಕ್ತರು ಮಾತ್ರ ಉಳಿದರು. ಭಕ್ತರು ಸಮಸ್ಯೆಯನ್ನು ಆಲಿಸಿದಾಗ ಚತುರ ಭಕ್ತನೊಬ್ಬ, ಚಾದರವನ್ನು ಸಾಯುತ್ತಿರುವ ವ್ಯಕ್ತಿಯ ಮೇಲೆ ಹಾಕು ಎಂದು ಸಲಹೆಯಿತ್ತ. ಹೀಗೆ ಸಭ್ಯ ಮನುಷ್ಯನಿಗೆ ಸಜ್ಜನತೆಯ ಚಾದರದಿಂದ ಮುಕ್ತಿ ಲಭಿಸಿತು. ಈಗ ಆ ಸಭ್ಯ ಮನುಷ್ಯ, ಮನುಷ್ಯ ಮಾತ್ರನಾಗಿ ಉಳಿದ. ಅವನು ನೌಕರಿ ಅರಸುವುದನ್ನು ತ್ಯಜಿಸಿ ಖುದ್ದು ನೌಕರಿ ಕೊಡಿಸುವ ಏಜೆನ್ಸಿಯನ್ನು ತೆರೆದ. ಜನರನ್ನು ವಿದೇಶಕ್ಕೆ ಕಳುಹಿಸಲಾರಂಭಿಸಿದ. ಸಂಕ್ಷೇಪದಲ್ಲಿ ಹೇಳುವುದಾದರೆ, ಇಂದು ಅವನ ಬಳಿ ವಿದೇಶಿ ಕಾರುಗಳುವೆ, ಬಂಗ್ಲೆಗಳಿವೆ. ಅವನು ಬೇಸಿಗೆ ದಿನಗಳಲ್ಲಿ ಯುರೋಪ್‍ಗೆ, ಚಳಿಗಾಲದಲ್ಲಿ ಸೌದಿ ಅರಬ್‍ಗೆ ಹೋಗುತ್ತಾನೆ. ಆದ್ದರಿಂದ ಶಿಷ್ಯನೇ, ನೌಕರಿ ಹುಡುಕುವುದನ್ನು ಬಿಡು.”

     “ನನ್ನ ಚಾದರವನ್ನು ಏನು ಮಾಡಲಿ?”

     “ಓಹ್, ನಿನ್ನ ಬಳಿಯೂ ಚಾದರವಿದೆಯೇ?” ಗುರುಗಳಿಗೆ ಆಶ್ಚರ್ಯವಾಯಿತು.

     “ಹೌದು ಗುರುದೇವ, ಇದೆ. ಇದರಿಂದಾಗಿಯೇ ನಾನು ಪಾದರಕ್ಷೆಯನ್ನು ನನ್ನ ತಲೆಗೆ ಹೊಡೆದುಕೊಂಡೆ, ಇಲ್ಲದಿದ್ದಲ್ಲಿ ನಿಮ್ಮ ತಲೆಯೂ ಇತ್ತು.”

     ಈ ಮಾತನ್ನು ಕೇಳಿ ಗುರುಗಳು ಗಂಭೀರರಾಗಿ ಹೇಳಿದರು, “ನೀನು ಖಂಡಿತವಾಗಿಯೂ ಕಳಪೆ ವಿಶ್ವವಿದ್ಯಾಲಯದಿಂದ ಡಿಗ್ರಿಯನ್ನು ಪಡೆದಿದ್ದೀಯ. ಖಂಡಿತ ನಿನ್ನ ಅಧ್ಯಾಪಕರು ತುಚ್ಛಮಟ್ಟದ ವಿದ್ವಾಂಸರಿರಬೇಕು. ಖಂಡಿತ ನೀನು ಸಂಸ್ಕಾರ-ಹೀನ ಪರಿವಾರದಲ್ಲಿ ಜನಿಸಿರಬೇಕು. ಖಂಡಿತವಾಗಿಯೂ ನಿನ್ನ ಸ್ನೇಹಿತರು ನಿನ್ನಂತೆಯೇ ಇರಬೇಕು.”

     ಶಿಷ್ಯ ಈ ಎಲ್ಲಾ ಸತ್ಯಗಳನ್ನು ಒಂದೊಂದಾಗಿ ಒಪ್ಪಿಕೊಂಡ. ಆದರೆ ಗುರುಗಳ ಚರಣಗಳಲ್ಲಿ ತಲೆಯಿಟ್ಟು ಹೇಳಿದ, “ಗುರುಗಳೇ, ಈಗ ನೀವು ನನ್ನ ಕಣ್ಣುಗಳನ್ನು ತೆರೆಸಿದಿರಿ. ಈ ಚಾದರದಿಂದ ನನ್ನನ್ನು ಮುಕ್ತಗೊಳಿಸಿ, ಇಲ್ಲದಿದ್ದಲ್ಲಿ ನಾನೆಲ್ಲೂ ಸಲ್ಲಲಾರೆ.”

     ಗುರುಗಳು ಹೇಳಿದರು, “ಕೆಲಸ ಕಷ್ಟ. ಯಾಕೆಂದರೆ ಇಂದು ಈ ಚಾದರಕ್ಕೆ ಬೆಲೆಯೇ ಇಲ್ಲ...ಕೋಟ್ಯಂತರ ರೂಪಾಯಿಗಳನ್ನು ಕೊಟ್ಟರೂ ಸಹ ಯಾರೂ ಇದನ್ನು ತೆಗೆದುಕೊಳ್ಳುವುದಿಲ್ಲ.”

     “ಈಗೇನು ಮಾಡಲಿ ಗುರುಗಳೇ?”

     ಆಗ ಶಿಷ್ಯ ಗುರುಗಳು ಹೇಳಿದಂತೆಯೇ ಮಾಡಿದ. ಅದರ ವಿವರಣೆ ಹೀಗಿದೆ-

     ಶಿಷ್ಯ ಚಾದರಗಳನ್ನು ಮಾರುವ ವ್ಯಾಪಾರಿಯ ಬಳಿಗೆ ಹೋದ. ನೀವು ಈ ಚಾದರವನ್ನು ನಿಮ್ಮ ಚಾದರಗಳಲ್ಲಿ ಅಡಗಿಸಿ ಯಾರಿಗಾದರೂ ಮಾರಿ ಎಂದು ತನ್ನಿಚ್ಛೆಯನ್ನು ತಿಳಿಸಿದ. ಬೇರೆ ಚಾದರದೊಂದಿಗೆ ಇದು ಹೊಂದಾಣಿಕೆಯಾಗುವುದಿಲ್ಲ, ಈ ಚಾದರವನ್ನು ನನ್ನ ಅಂಗಡಿಯಲ್ಲಿಟ್ಟರೆ, ಅಂಗಡಿಯನ್ನೇ ಮುಚ್ಚಬೇಕಾಗುವುದು, ಗಿರಾಕಿಗಳು ಅಂಗಡಿಗೆ ಬರುವುದನ್ನು ನಿಲ್ಲಿಸುತ್ತಾರೆ ಎಂದ ವ್ಯಾಪಾರಿ.

ಆಗ ಶಿಷ್ಯನಿಗೆ ಗುರುಗಳು, ದೇಶದ ಅತ್ಯಂತ ದೊಡ್ಡ ಸಂಸ್ಥೆಯ ಗಮನಕ್ಕೆ ಈ ವಿಷಯವನ್ನು ತರುವಂತೆ ಸಲಹೆಯಿತ್ತರು. ಸರ್ವೋಚ್ಚ ಸಂಸ್ಥೆಯವರೆಗೆ ಹೋಗುವುದು ಸುಲಭವಾಗಿರಲಿಲ್ಲ. ಶಿಷ್ಯ ಈ ಕೆಲಸಕ್ಕೆ ಪ್ರೆಸ್‍ನ ಸಹಾಯವನ್ನು ಪಡೆಯಲು ಬಯಸಿದ. ಶಿಷ್ಯ ಪತ್ರಿಕೆಯ ಕಚೇರಿಗೆ ತನ್ನ ಚಾದರದೊಂದಿಗೆ ಹೋದಾಗ ಅಲ್ಲಿಂದ ಎಲ್ಲರೂ ಓಡಿ ಹೋಗಲು ಆರಂಭಿಸಿದರು. ಹಿರಿಯ ಸಂಪಾದಕರೊಬ್ಬರು ಹೇಳಿದರು, “ಚಾದರವನ್ನು ಹೊರಗಿಟ್ಟು ಬಂದು ಮಾತನಾಡಿ. ಇಲ್ಲಿ ಇದನ್ನು ತರುವುದನ್ನು ನಿಷೇಧಿಸಲಾಗಿದೆ.”

ಶಿಷ್ಯ ಚಾದರವನ್ನು ಹೊರಗಿಟ್ಟು, ಪತ್ರಿಕೆಯ ಕಚೇರಿಯೊಳಗೆ ಹೋದ. ಅಲ್ಲಿ ನಡೆದ ಸಂಭಾಷಣೆ ಹೀಗಿದೆ-

    “ಈ ಚಾದರ ನಿಮಗೆ ಹೇಗೆ ಸಿಕ್ಕಿತು?”

    “ಇದೊಂದು ದುಃಖದ ಕಥೆ.”

    “ನಿಮ್ಮ ಕಥೆಯಲ್ಲಿ ಯಾವುದಾದರೂ ‘ಸ್ಕ್ಯಾಂಡಲ್’ ಇದೆಯೇ?”

    “ಇಲ್ಲ.”

     “ನೀವೇಕೆ ಈ ಚಾದರದಿಂದ ತಪ್ಪಿಸಿಕೊಳ್ಳಲು ಬಯಸುತ್ತೀರ?”

    “ನಾನು ಬದುಕಿರಲು ಬಯಸುತ್ತೇನೆ.”

    “ಈ ಚಾದರವನ್ನು ನಿಮ್ಮಿಂದ ಬೇರೆಯವರು ತೆಗೆದುಕೊಳ್ಳಲು ಯಾಕೆ ಸಿದ್ಧರಿಲ್ಲ?”

    “ಎಲ್ಲರೂ ಬದುಕಿರಲು ಬಯಸುತ್ತಾರೆ?”

    “ನಿಮ್ಮನ್ನು ಹೊರತುಪಡಿಸಿ ಬೇರೆ ಯಾರಾದರ ಬಳಿ ಈ ಚಾದರವಿದೆಯೇ?”

    “ನಮ್ಮವರೆಲ್ಲರೂ ಖಾಯಿಲೆಯಿಂದ ಸತ್ತರು.”

    “ಓಹೋ, ನೀವು ಕವಿಗಳೂ ಹೌದೇ?”

    “ಕವಿ ಅಂತ ವಾದವನ್ನಂತೂ ಮಾಡಲ್ಲ.”

    “ನೀವು ದೇಶದ ಸರ್ವೋಚ್ಚ ಪ್ರಜಾಪ್ರಭುತ್ವ ಸಂಸ್ಥೆ ಎದುರು ಏನು ಹೇಳಲು ಬಯಸುತ್ತೀರಿ?”

     “ನನ್ನ ಚಾದರವನ್ನು ತೆಗೆದುಕೊಳ್ಳಿ, ನನ್ನ ಜೀವ ಉಳಿಯುತ್ತೆ ಅಂತ ಹೇಳಲು ಬಯಸುತ್ತೇನೆ.”

     “ನೀವು ನಿಮ್ಮ ಸಮಸ್ಯೆಯನ್ನು ಸರ್ವೋಚ್ಚ ನ್ಯಾಯಾಲಯದೆದರು ಯಾಕೆ ಇಡಲಿಲ್ಲ?”

     “ವಕೀಲರು ಸಿಗಲಿಲ್ಲ.”

     “ಯಾಕೆ, ನೀವು ಫೀಸು ಕೊಡುತ್ತಿರಲಿಲ್ಲವೇ?”

     “ತುಂಬಾ ಫೀಸು ಕೊಡುತ್ತಿದ್ದೆ.”

     “ಮತ್ತ್ಯಾಕೆ...?”                                                             

     “ಚಾದರವನ್ನು ನೋಡುತ್ತಲೇ ವಕೀಲರು ನೆಗೆದು ಹಾರಿ ದೂರಕ್ಕೆ ಓಡಿ ಹೋಗುತ್ತಿದ್ದರು.”

     “ಮತ್ತೆ?”

     “ಮತ್ತೇನು, ವಕೀಲರೇ ಸಿಗದಿದ್ದಾಗ ನ್ಯಾಯಾಧೀಶರು ನಕ್ಕು ಕೇಸನ್ನು ಅಲ್ಲಗೆಳೆದರು.”

     “ಸರ್ವೋಚ್ಚ ಸಂವಿಧಾನದ ಸಂಸ್ಥೆ ಎದುರು ಹೋಗುವ ಬಗ್ಗೆ ನಿಮಗೆ ಆಶಾ ಭಾವನೆ ಇದೆಯೇ?”

     “ಹೂಂ, ಹೋಗ ಬಲ್ಲೆ, ಆದರೆ ಅಲ್ಲಿ ಜನಪ್ರತಿನಿಧಿಗಳು ಇರುವುದು ಸಹ ಅವಶ್ಯವಾಗಿದೆ.”

     “ನಿಮಗೆ ಇಂಥ ಅನುಭವವಾಗಿದೆಯೇ?”

     “ಹೌದು, ಪೊಲೀಸರು ನನ್ನನ್ನು ಸ್ಟೇಷನ್ ಎದುರಿನಿಂದ ಹಾದು ಹೋಗಲು ಬಿಡುವುದಿಲ್ಲ.”

     “ಒಂದು ವೇಳೆ ಸರ್ವೋಚ್ಚ ನ್ಯಾಯಾಲಯ ನಿಮ್ಮ ಚಾದರವನ್ನು ತೆಗೆದುಕೊಳ್ಳದಿದ್ದರೆ ಏನು ಮಾಡುವಿರಿ?”

     “ಆತ್ಮಹತ್ಯೆ ಮಾಡಿಕೊಳ್ತೀನಿ.”

     “ಆಗ ನಿಮ್ಮ ಶವದ ಗತಿ ಏನಾಗಬಹುದು?”

     “ಯಾರೂ ಸಹ ಅದರ ಸಮೀಪಕ್ಕೆ ಬರುವುದಿಲ್ಲ...ಯಾಕೆಂದರೆ ನನ್ನ ಶವದ ಮೇಲೆ ಚಾದರ ಬಿದ್ದಿರಬಹುದು.”

      “ಎಲ್ಲಿಯವರೆಗೆ ನಿಮ್ಮ ಶವದ ಮೇಲೆ ಚಾದರ ಬಿದ್ದಿರುತ್ತದೆ?”

      “ಯಾರಾದರು ಎತ್ತಿ ಕೊಳ್ಳದವರೆಗೆ.”

      “ಎಂದಾದರೂ, ಯಾರಾದರೂ ಎತ್ತಿಕೊಳ್ಳುವರೇ?”

      “ನಾನು ಹೀಗೆ ತಿಳಿಯುತ್ತೇನೆ.”

      “ಗಿನ್ನೀಸ್ ಬುಕ್ ಆಫ್ ರಿಕಾರ್ಡ್‍ನಲ್ಲಿ ನಿಮ್ಮ ಹೆಸರು ಬಂದಿರಬೇಕು?”

      “ಇಲ್ಲ, ಅವರು ಯಾವುದೇ ಚಾದರದ ಅಸ್ತಿತ್ವದ ಬಗ್ಗೆ ನಂಬಲ್ಲ.”

     ಕಡೆಗೆ ಶಿಷ್ಯ ಚಾದರದೊಂದಿಗೆ ಒಂದು ವಿಶಾಲ ಮತ್ತು ವಿರಾಟ ಭವನದೆದುರು ಬಂದು ನಿಂತ. ಅಲ್ಲಿ ಪೊಲೀಸರ ಕಾವಲಿತ್ತು. ಠಾಣೆ-ಕಚೇರಿಗಳಿದ್ದವು. ಆನೆ-ಕುದುರೆಗಳಿದ್ದವು. ಕತ್ತಿಗಳು-ಬಂದೂಕುಗಳಿದ್ದವು. ಫಿರಂಗಿವಾಹನಗಳು ಹಾಗೂ ವಿಮಾನವನ್ನು ಭೇದಿಸುವ ಫಿರಂಗಿಗಳಿದ್ದವು. ಶಿಷ್ಯ ಚಾದರ ಹಿಡಿದು ಅಲ್ಲಿಗೆ ಹೋದಾಗ ಸೈನಿಕರು-ಕಾವಲುಗಾರರು ಗಾಬರಿಯಾದರು.

        “ನೀವೇಕೆ ಇಲ್ಲಿಗೆ ಬಂದಿರಿ?...ಬೇಗ ಇಲ್ಲಿಂದ ಹೊರಟು ಹೋಗಿ.” 

        “ನಾನು ನನ್ನ ಚಾದರವನ್ನು ಸರ್ವೋಚ್ಚ ಸಂಸ್ಥೆಗೆ ಒಪ್ಪಿಸಲು ಬಂದಿದ್ದೇನೆ.”

        “ನಿಮ್ಮ ಬಳಿ ಒಳಗೆ ಹೋಗಲು ಅನುಮತಿ-ಪತ್ರವಿದೆಯೇ?”

        “ಇಲ್ಲ.”

        “ಹಾಗಾದರೆ ನಾವು ಹೋಗಲು ಬಿಡುವುದಿಲ್ಲ.”

        “ಹಾಗಾದರೆ ನಾನು ನಿಮಗೇ ಈ ಚಾದರವನ್ನು ಒಪ್ಪಿಸಿ ಹೋಗುತ್ತೇನೆ.”

 ಈ ಮಾತನ್ನು ಕೇಳುತ್ತಲೇ ಸೈನಿಕರು ಅವನನ್ನು ಗೌರವಪೂರ್ವಕವಾಗಿ ಒಳಗೆ ಹೋಗಲು ಬಿಟ್ಟರು. ಒಳಗೆ ಸ್ವಾಗತ-ಕೊಠಡಿಯಲ್ಲಿ ಒಬ್ಬರು ವೃದ್ಧರು ಮತ್ತು ಗೂಬೆ ಮೂತಿಯ ಸ್ವಾಗತಾಧಿಕಾರಿಗಳು ಕೂತಿದ್ದರು. ಅವರು ಶಿಷ್ಯ ಬರುವುದನ್ನು ನೋಡಿ ಕೇಳಿದರು, “ನೀವು ಯಾರನ್ನು ಭೇಟಿಯಾಗಬೇಕು?”

        “ಎಲ್ಲಾ ಜನಪ್ರತಿನಿಧಿಗಳನ್ನು.”

        “ಒಂದು ವೇಳೆ ನಾನು ನಿಮ್ಮನ್ನು ಒಳಗೆ ಬಿಟ್ಟರೆ, ನಾನು ನನ್ನ ನೌಕರಿಯನ್ನು ಕಳೆದುಕೊಳ್ಳಬೇಕಾಗುವುದು.”

        “ಏಕೆ?”

        “ನಿಮ್ಮ ಬಳಿ ಇರುವ ಈ ಚಾದರ ಆತಂಕವಾದಿಗಳ ಅಪ್ಪ. ಇಷ್ಟು ದೊಡ್ಡ ವಿಸ್ಫೋಟಕ ವಸ್ತುವಿನೊಂದಿಗೆ ನೀವು ಒಳಗೆ ಹೋಗಲಾರಿರಿ.”

        “ಹಾಗಾದರೆ ಇದನ್ನು ನೀವೇ ಒಯ್ಯಿರಿ.”

        “ಇಲ್ಲ-ಇಲ್ಲ, ನಮ್ಮ ಮೇಲೆ ದಯೆತೋರಿ. ನಮ್ಮ ನಿವೃತ್ತಿಗೆ ಕೆಲವೇ ದಿನಗಳು ಉಳಿದಿವೆ.”

        “ಹಾಗಾದರೆ ನನ್ನನ್ನು ಒಳಗೆ ಬಿಡಿ.”

        ಶಿಷ್ಯ ಒಳಗೆ ಹೋದಾಗ, ತಾನು ಬೆಂಡೆಕಾಯಿ ಮಂಡಿಗೆ ಬಂದಿದ್ದೇನೆಂದು ಅನ್ನಿಸಿತು. ಅವನು ಆಶ್ಚರ್ಯದಿಂದ ಕಣ್ಣುಗಳನ್ನು ದೊಡ್ಡದು ಮಾಡಿ ಅತ್ತ-ಇತ್ತ ನೋಡಿದ. ಕ್ರಮೇಣ ವಸ್ತುಗಳು ಸ್ಪಷ್ಟವಾಗಲಾರಂಭಿಸಿತು. ಸ್ವಲ್ಪ ಹೊತ್ತಿನ ನಂತರ ಸದಸ್ಯರು ಅವನನ್ನು ನೋಡಿದರು. ಪ್ರಪ್ರಥಮವಾಗಿ ಆಡಳಿತ ಪಕ್ಷದ ಸದಸ್ಯರು ತಮ್ಮ-ತಮ್ಮ ಟೇಬಲ್ ಕೆಳಗೆ ನುಗ್ಗಿದರು. ನಂತರ ವಿರೋಧ ಪಕ್ಷದ ಸದಸ್ಯರಲ್ಲಿ ಒಂದು ಗುಂಪು ಬೇಗ-ಬೇಗನೆ ತಮ್ಮ ಚಾದರಗಳನ್ನು ಹೊದ್ದುಕೊಂಡಿತು. ಇನ್ನೊಂದು ವಿರೋಧದ ಗುಂಪು ಹೊರಗೆ ಓಡಿ ಹೋಗುವುದೇ ಉಚಿತವೆಂದು ತಿಳಿಯಿತು. ಎಡಪಂಥೀಯ ಗುಂಪು ತನ್ನೆದುರು ಹಾಳೆಯ ಗೋಡೆಯನ್ನು ನಿಲ್ಲಿಸಿತು. ಇಡೀ ಕಟ್ಟಡ ಶಾಂತವಾಗಿತ್ತು. ಯಾರೂ ಸಹ ತಮ್ಮ-ತಮ್ಮ ಜಾಗದಲ್ಲಿರಲಿಲ್ಲ. ಶಿಷ್ಯ ತನಗಿಷ್ಟ ಬಂದಲ್ಲಿ ಹೋಗಿ ಕೂರಬಹುದಿತ್ತು. ಆದರೆ ಶಿಷ್ಯನಿಗೆ, ಕುರ್ಚಿಯಲ್ಲಿ ಕೂರುವುದರಿಂದ ಏನೂ ಆಗುವುದಿಲ್ಲ ಎಂಬುದು ತಿಳಿದಿತ್ತು. ಅವನು ಮೆಲ್ಲ-ಮೆಲ್ಲನೆ ಮುಂದೆ ಹೋಗಿ ಹೇಳಿದ, “ನೀವೀಗ ಸುರಕ್ಷಿತವಾಗಿದ್ದೀರ. ನಾನು ನನ್ನ ಚಾದರವನ್ನು ಸರ್ಕಾರದ ಮೇಲೆ ಹಾಕಲು ಬಯಸುವುದಿಲ್ಲ, ವಿರೋಧ ಪಕ್ಷದವರ ಮೇಲೂ ಹಾಕಲು ಬಯಸುವುದಿಲ್ಲ; ಬಲ ಪಂಥೀಯರಿಗೂ ಚಾಲೇಂಜ್ ಹಾಕುತ್ತಿಲ್ಲ, ಎಡ ಪಂಥೀಯರಿಗೂ ಚಾಲೇಂಜ್ ಹಾಕುತ್ತಿಲ್ಲ. ನನಗೆ ಸಹಾಯ ಮಾಡಿ ಎಂದಷ್ಟೇ ನಾನು ಕೈಮುಗಿದು ನಿಮ್ಮಲ್ಲಿ ಪ್ರಾರ್ಥಿಸುತ್ತಿದ್ದೇನೆ.”

ಮೆಲ್ಲ-ಮೆಲ್ಲನೆ ಸದಸ್ಯರು ಟೇಬಲ್ ಕೆಳಗಿನಿಂದ ಹೊರ ಬರಲಾರಂಭಿಸಿದರು.

ಶಿಷ್ಯ ಹೇಳಿದ, “ನಾನು ನನ್ನ ಚಾದರವನ್ನು ನಿಮಗೆ ಒಪ್ಪಿಸಲು ಬಂದಿದ್ದೆ. ನೀವೆಲ್ಲರೂ ಈ ಭಾರವನ್ನು ಒಟ್ಟಾಗಿ ಎತ್ತಬೇಕಾಗುವುದು.” ಎಲ್ಲಾ ಸದಸ್ಯರು ಒಟ್ಟಾಗಿ ತಿರಸ್ಕರಿಸುತ್ತಾ ಹೇಳಿದರು, “ನಮ್ಮಿಂದ ಇದು ಸಾಧ್ಯವಿಲ್ಲ. ದೇಶದ ಭಾರವನ್ನು ನಮ್ಮಿಂದ ಎತ್ತಿಸಿಕೊಳ್ಳಿ ಅಥವಾ ಈ ಚಾದರದ ಭಾರವನ್ನು ನಮ್ಮಿಂದ ಎತ್ತಿಸಿಕೊಳ್ಳಿ.”

   ಆಗ ಕೆಲವು ಸದಸ್ಯರು, ಈ ಕಟ್ಟಡದಲ್ಲಿ ಸತ್ಯ-ಪತ್ಯ ಎಂದೆಲ್ಲಾ  ಬರೆದಿದೆಯಲ್ಲ, ಅವುಗಳ ಮೇಲೆ ನಿಮ್ಮ ಚಾದರವನ್ನು ಹಾಕಿ ಎಂದರು. ಶಿಷ್ಯನ ಕಣ್ಣುಗಳು ಅದೆಷ್ಟು ಬೆರಗಾದವೆಂದರೆ, ಅವನು ಪೂರ್ಣ ವಾಕ್ಯವನ್ನು ಓದದಾದ. ಆದರೆ ಅವನಿಗೆ, ಇದೇ ಮುಕ್ತಿಯ ಸ್ಥಳ ಎಂದು ಅನ್ನಿಸಿತು. ನಂತರ ಅವನು ಹಿಂದು-ಮುಂದು ನೋಡದೆ ಚಾದರವನ್ನು ಸತ್ಯದ ಮೇಲೆ ಹಾಕಿದ. ಆಗ ರಭಸದ ವಿಸ್ಫೋಟವೊಂದು ಸಂಭವಿಸಿತು. ಆ ವಾಕ್ಯ ಬರೆದಿದ್ದ ಹಿತ್ತಾಳೆಯ ದೊಡ್ಡ ಪ್ಲೇಟ್ ಮತ್ತು ಅದಕ್ಕೆ ಬೆಸುಗೆ ಹಾಕಿದ್ದ ಕಲ್ಲು, ಎರಡೂ ತುಂಡು-ತುಂಡಾದವು. ಕಟ್ಟಡದಲ್ಲಿ ನೀರವತೆ ಆವರಿಸಿತು. ನಂತರ ಅಕಸ್ಮಾತ್ ಕೇಕೆ-ನಗುವಿನ ಕಾರಂಜಿ ಚಿಮ್ಮಿತು.

***

ಪೊಲೀಸ್, ಪಿ.ಸಿ. ಮತ್ತು ಮೆಂಟಲ್ ಹಾಸ್ಪಿಟಲ್                    

ಪೊಲೀಸ್ ಕಮೀಶನರ್ [ಪಿಸಿ] ತಮ್ಮ ಕಚೇರಿಯಲ್ಲಿ ಕೂತಿದ್ದರು. ಅವರ ಎದುರಿಗೆ ಫೈಲ್‍ಗಳಿದ್ದವು. ಅಕಸ್ಮಾತ್ ಬಾಗಿಲು ತೆರೆದುಕೊಂಡಿತು, ಒಬ್ಬ ಸಾಮಾನ್ಯ ಪೊಲೀಸನೊಬ್ಬ ಒಳಗೆ ಬಂದ. ಪಿಸಿ ಅವರಿಗೆ ತುಂಬಾ ಆಶ್ಚರ್ಯವಾಯಿತು. ಅವರ ಚೇಂಬರಿಗೆ ಹೀಗೆ ಅನುಮತಿಯಿಲ್ಲದೆ ಡಿ.ಸಿ.ಪಿ. ಸಹ ಬರುತ್ತಿರಲಿಲ್ಲ. ಮೊದಲು ಪಿಸಿ ಅವರು ತಮ್ಮ ಪಿ.ಎ. ಮತ್ತು ಡ್ಯೂಟಿಯಲ್ಲಿರುವ ಪೊಲೀಸರನ್ನು ಸಸ್ಪೆಂಡ್ ಮಾಡಲು ಯೋಚಿಸಿದರು. ಹೀಗೆ ಯೋಚಿಸುತ್ತಿರುವಾಗಲೇ, ಆ ಪೊಲೀಸು ನೇರವಾಗಿ ಮುಂದೆ ಬಂದು, ಕುರ್ಚಿಯನ್ನು ಎಳೆದುಕೊಂಡು ಕುರ್ಚಿಯಲ್ಲಿ ಆರಾಮಾಗಿ ಕೂತ. ಪಿಸಿಗೆ ಮತ್ತೂ ಆಶ್ಚರ್ಯವಾಯಿತು. ಮೊದಲು ಅವರಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅವರು ಕನ್ನಡಕ ಕಳಚಿ ನೋಡಿ, ಮತ್ತೆ ಹಾಕಿಕೊಂಡು ಗಮನವಿಟ್ಟು ನೋಡಿದರು. ಪೊಲೀಸು ಅವರನ್ನು ಕೇಳದೆ ಅವರೆದುರು ಕುರ್ಚಿಯಲ್ಲಿ ಕೂತಿದ್ದ. ಈ ದೃಶ್ಯ ನಿಜವೇ? ಅವರನ್ನು ಸ್ವಲ್ಪ ಅನುಮಾನ ಕಾಡಿತು.

    ಪೊಲೀಸು ಕುರ್ಚಿಯಲ್ಲಿ ಮೌನವಾಗಿ ಕೂತಿದ್ದ. ಅವನು ಪಿಸಿ ಅವರನ್ನು ಒಂದೇ ಸಮನೆ ನೋಡುತ್ತಿದ್ದ, ಪಿಸಿ ಅವರು ಸಹ ಅವನನ್ನು ನೋಡುತ್ತಿದ್ದರು. ಇಬ್ಬರ ಕಣ್ಣುಗಳು ನಾಲ್ಕಾದವು, ಆದರೂ ಸಹ ಅಸಹಾಯಕತೆಯ ಆಭಾಸವಾಗುತ್ತಿತ್ತು. ಅಕಸ್ಮಾತ್ ಪಿಸಿ ಅವರು ಸಂಭಾಳಿಸಿಕೊಂಡು ತಮ್ಮ ಧ್ವನಿಯನ್ನು ಕಲ್ಲು ಮತ್ತು ಮುಳ್ಳಿನಂತೆ ಮಾಡಿಕೊಂಡು ಕೇಳಿದರು, “ನೀನು ಯಾವ ಸ್ಟೇಷನ್‍ಗೆ ಸಂಬಂಧಿಸಿದ ಪೊಲೀಸು?”

    “ತ್ರಿಲೋಕಪುರಿ.” ಪೊಲೀಸು ತನ್ನ ಹೆಂಡತಿಗೆ, ಇಂದು ಸಹ ನಾನು ಬರುವುದು ತಡವಾಗುವುದು, ನೀನು ಊಟಮಾಡಿ ಮಲಗು ಎಂದು ಹೇಳುವಂತೆ ಹೇಳಿದ.

    “ಹೂಂ.” ಪಿಸಿ ಮತ್ತೆ ಗಮನವಿಟ್ಟು ನೋಡಿದರು. ಪೊಲೀಸು ಏನಾದರೂ ಹೇಳಬಹುದೆಂದು ನಿರೀಕ್ಷಿಸಿದರು. ಆದರೆ ಅವನು ಮೌನವಾಗಿದ್ದ. ಪಿಸಿ ಕಾಲಿಂಗ್ ಬೆಲ್ ಒತ್ತಿದರು. ಆಗ ಎಲ್ಲಾ ಧ್ವನಿಗಳು ಕಾಲಿಂಗ್ ಬೆಲ್‍ನಲ್ಲಿಯೇ ಅಡಿಗಿದಂತೆ ಕಂಡಿತು. ಪಿ.ಎ. ಓಡೋಡಿ ಒಳಗೆ ಬಂದ.

    ಪಿ.ಎ. ಪೊಲೀಸು ಪಿಸಿ ಎದುರು ಕುರ್ಚಿಯಲ್ಲಿ ಕೂತಿರುವದನ್ನು ನೋಡಿದಾಗ ಅವನಿಗೆ ತನ್ನ ಕಾಲಿಗೆ ಲಕ್ವ ಹೊಡೆದಂತೆ ಅನ್ನಿಸಿತು. ಅವನ ಬಾಯಿಯಿಂದ ಮಾತೇ ಹೊರಡಲಿಲ್ಲ.

    “ನಿನ್ನ ಹೆಸರೇನು?” ಪಿಸಿ ಅವರು ಪೊಲೀಸನ್ನು ಕೇಳಿದರು.

    “ಪೊಲೀಸು...”

    “ಆಮೇಲೆ?” ಪೊಲೀಸು ಶಬ್ದದ ನಂತರ ಅವನು ತನ್ನ ಹೆಸರನ್ನು ಹೇಳುತ್ತಾನೆಂದು ಪಿಸಿ ತಿಳಿದರು.

    “ಪೊಲೀಸು...” ಎಂದ ಪೊಲೀಸು.

    “ಪೊಲೀಸು ಯಾರು?” ಪಿಸಿ ಪ್ರಶ್ನಿಸಿದರು.

    “ಪೊಲೀಸು, ಪೊಲೀಸು.” ಎಂದ ಪೊಲೀಸು.

    “ನಿನಗೆ ಹೆಸರಿರಬೇಕಲ್ಲ!” ಪಿಸಿ ಕೇಳಿದರು.

    “ಹೂಂ, ಇತ್ತು.” ಪೊಲೀಸು ಬೇಸರದಿಂದ ಹೇಳಿದ.

    “ಹೂಂ...” ಪಿಸಿ ಯೋಚಿಸಿ ಕೇಳಿದರು, “ಏನು ಕೆಲಸ, ಇಲ್ಲಿಗೇಕೆ ಬಂದಿದ್ದೀಯ?”

    “ಕೆಲಸವೇನಿಲ್ಲ.” ಎಂದ ಪೊಲೀಸು.

    “ಕೆಲಸವೇನಿಲ್ಲ?” ಪಿಸಿ ರೇಗಿದರು.

    “ಹೂಂ, ಕೆಲಸವೇನಿಲ್ಲ.”

    “ಮತ್ತೇಕೆ ಬಂದಿದ್ದೀಯ?”

    “ಇತ್ತ ಕಡೆಯಿಂದ ಹಾದು ಹೋಗುತ್ತಿದ್ದೆ, ನಿಮ್ಮನ್ನು ನೋಡೋಣ ಅಂತ ಬಂದೆ.”

    ಈ ಮಾತು ಕೇಳಿ ಪಿಸಿ ಅವರಿಗೆ ಕರಗುವ ಜ್ವಾಲೆ ತಮ್ಮ ಮೇಲೆ ಬೀಳುತ್ತಿದೆ ಎಂದು ಅನ್ನಿಸಿತು.

    ಅಕಸ್ಮಾತ್ ಪಿ.ಎ. ‘ಯಸ್ ಸಾರ್’, ‘ಯಸ್ ಸಾರ್’, ‘ಯಸ್ ಸಾರ್’ ಎಂದು ಬಾಯಿಪಾಠ ಮಾಡಲಾರಂಭಿಸಿದ. ಅವನು ‘ಯಸ್ ಸಾರ್’ನಿಂದ ಮುಂದಕ್ಕೆ ಮಾತನಾಡುತ್ತಿರಲಿಲ್ಲ. ಅದು ‘ಬ್ಯಾಕ್ ಗ್ರೌಂಡ್ ಮ್ಯೂಸಿಕ್’ ನಂತೆ ಭಾಸವಾಗುತ್ತಿತ್ತು.

    ಪಿಸಿ ಮತ್ತೆ ಕಾಲಿಂಗ್ ಬೆಲ್ ಒತ್ತಿದರು. ವೈರಲೆಸ್‍ಗಳು ಕಟಕಟ ಶಬ್ದ ಮಾಡಿದವು. ಫೋನಿನ ಮೇಲೆ ಫೋನ್‍ಗಳು ರಿಂಗಾದವು. ತ್ರಿಲೋಕಪುರಿಯ ಡಿ.ಸಿ.ಪಿ., ಎಸ್.ಎಸಿ.ಪಿ. ಮತ್ತು ಸ್ಟೇಷನ್‍ನ ಇನ್‍ಚಾರ್ಜ್, ಜಿನ್ ಅಥವಾ ಭೂತದಂತೆ ಪಿಸಿಯ ಚೇಂಬರ್‌ಗೆ ಬಂದರು. ಅವರೆಲ್ಲರಿಗೂ ಪೊಲೀಸು ಪಿಸಿ ಎದುರು ಕೂತಿರುವುದನ್ನು ನೋಡಿ ಅತ್ಯಾಶ್ಚರ್ಯವಾಯಿತು. ಪೊಲೀಸೊಬ್ಬ ಪಿಸಿ ಎದುರು ಕುರ್ಚಿಯಲ್ಲಿ ಕೂರುವುದು ಭಾರತೀಯ ದಂಡ ಸಂಹಿತೆಯ ಯಾವ ಸೆಕ್ಷನ್ ಅಡಿಯಲ್ಲಿ ಅಪರಾಧ ಎಂಬ ಬಗ್ಗೆ ಎಲ್ಲರೂ ಯೋಚಿಸುತ್ತಿದ್ದರು.

     “ದೀನ್ ದಯಾಳ್ ನಿಂತ್ಕೋ,” ತ್ರಿಲೋಕಪುರಿ ಸ್ಟೇಷನ್ನಿನ ಇನ್‍ಚಾರ್ಜ್ ಆದೇಶಿಸಿದರು. ದೀನ್ ದಯಾಳ್ ಪೊಲೀಸ್ ಎದ್ದು ನಿಂತ.

    “ಡಿ.ಸಿ.ಪಿ.” ಪಿಸಿ ಆದೇಶದ ಸ್ವರದಲ್ಲಿ ಹೇಳಿದರು.

    “ಯಸ್ ಸಾರ್.” ಡಿ.ಸಿ.ಪಿ. ಹಿಮ್ಮಡಿ ಎತ್ತಿ ಸಲ್ಯೂಟ್ ಹೊಡೆದರು.

    “ದೀನ್ ದಯಾಳನನ್ನು ಮೆಂಟಲ್ ಹಾಸ್ಪಿಟಲ್‍ಗೆ ಕರೆದೊಯ್ಯಿರಿ.”

    “ಯಸ್ ಸಾರ್.” ಎಂದರು ಡಿ.ಸಿ.ಪಿ.

    “ಆದರೆ ನಾನು ನಿಮ್ಮನ್ನು ಮೆಂಟಲ್ ಹಾಸ್ಪಿಟಲ್‍ಗೆ ಕರೆದೊಯ್ಯಲು ಬಂದಿದ್ದೇನೆ.” ದೀನ್ ದಯಾಳ್ ಪಿಸಿ ಅವರಿಗೆ ಹೇಳಿದ. ಇದನ್ನು ಕೇಳಿ ನಿಶ್ಶಬ್ದ, ಬಾಂಬಿನಂತೆ ಸಿಡಿಯಿತು. ಇಷ್ಟು ದೊಡ್ಡ ಅಪರಾಧಕಕ್ಕೆ ಪಿಸಿ ಅವರೇ ಮಹತ್ವದ ಆದೇಶವನ್ನು ಕೊಡಬಲ್ಲರು. ಈಗ ‘ಸಬ್‍ಆರ್ಡಿನೇಟ್’ ಏನು ತಾನೇ ಹೇಳುತ್ತಾರೆ? ಅವರು ಆದೇಶವನ್ನು ನಿರೀಕ್ಷಿಸುತ್ತಾ ನಿಂತರು.

    “ನೀನು ನನ್ನನ್ನು ‘ಮೆಂಟಲ್ ಹಾಸ್ಪಿಟಲ್’ಗೆ ಕರೆದೊಯ್ಯಲು ಬಯಸುತ್ತೀಯ?” ಪಿಸಿ ಅವರು ದೀನ್ ದಯಾಳನನ್ನು ದುರುಗುಟ್ಟಿ ನೋಡಿದರು.

    “ಯಸ್ ಸಾರ್.” ಪೊಲೀಸ್ ದೀನ್ ದಯಾಳ್ ಹೌದೆಂದು ತಲೆಯಾಡಿಸಿದ.

    “ನಡಿ, ಹೋಗೋಣ.” ಎಂದರು ಪಿಸಿ.

    ಪಿಸಿ ಅವರು ಡ್ರೈವರ್‌ನೊಂದಿಗೆ ದೀನ್ ದಯಾಳನಿಗೆ ಕೂರಲು ಹೇಳಿ, ತಾವು ಹಿಂದಿನ ಸೀಟಿನಲ್ಲಿ ಕೂತರು. ಜೀಪ್ ಸೈರನ್ ಬಾರಿಸುತ್ತಾ, ಕೆಂಪು ದೀಪಗಳನ್ನು ಹೊಳಪಿಸುತ್ತಾ, ಕ್ರಾಸಿಂಗ್‍ನ ಕೆಂಪು ದೀಪಗಳನ್ನು ಕ್ರಾಸ್ ಮಾಡುತ್ತಾ ಮೆಂಟಲ್ ಹಾಸ್ಪಿಟಲ್ ತಲುಪಿತು. ಪಿಸಿ ಮತ್ತು ದೀನ್ ದಯಾಳ್ ಇಬ್ಬರೂ ಆಸ್ಪತ್ರೆಯ ಒಳಗೆ ಹೋದರು. ವೈದ್ಯರು ಈ ದೃಶ್ಯವನ್ನು ನೋಡಿ ತಲೆಯನ್ನು ಚಚ್ಚಿಕೊಂಡರು. ಆಸ್ಪತ್ರೆಯ ಹಿರಿಯ ವೈದ್ಯರು ಪಿಸಿ ಅವರನ್ನು ದಾಖಲಿಸಿಕೊಳ್ಳಲು ಒಪ್ಪಲಿಲ್ಲ.

    ದೀನ್ ದಯಾಳ್ ಪಿಸಿ ಅವರನ್ನು ಇನ್ನೊಂದು ಮೆಂಟಲ್ ಆಸ್ಪತ್ರೆಯ ವೈದ್ಯರ ಬಳಿಗೆ ಕರೆದುಕೊಂಡು ಹೋದ. ಆ ಆಸ್ಪತ್ರೆ ವಿ.ಐ.ಪಿ.ಗಳಿಗೆ ಮಾತ್ರ ಮೀಸಲಾಗಿತ್ತು. ಅಲ್ಲಿಯ ವೈದ್ಯರು ಸಹ ಪಿಸಿ ಅವರನ್ನು ನೋಡಿ, ಅವರನ್ನು ದಾಖಲಿಸಿಕೊಳ್ಳುವ ಆವಶ್ಯಕತೆಯಿಲ್ಲ ಎಂದರು. ತದನಂತರ ದೀನ್ ದಯಾಳ್ ಪಿಸಿ ಅವರನ್ನು ವಿ.ವಿ.ಐ.ಪಿ., ಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳಿಗಾಗಿಯೇ ಇದ್ದ ಮೆಂಟಲ್ ಹಾಸ್ಪಿಟಲ್‍ಗೆ ಕರೆದೊಯ್ದ. ಅಲ್ಲಿಯ ಪ್ರಮುಖ ವೈದ್ಯರು ಪಿಸಿ ಅವರನ್ನು ನೋಡುತ್ತಾ ಹೇಳಿದರು, “ಇಲ್ಲ, ಇವರನ್ನು ದಾಖಲಿಸಿಕೊಳ್ಳುವುದಿಲ್ಲ.”

    “ಯಾಕೆ?” ದೀನ್ ದಯಾಳ್ ಕೇಳಿದ.

    “ಇವರಿಗೆ ಅವಶ್ಯಕತೆಯಿಲ್ಲ.”

    “ಯಾಕೆ?” ದೀನ್ ದಯಾಳ್ ಮತ್ತೆ ಕೇಳಿದ.

    “ಮೆಂಟಲ್ ಆಸ್ಪತ್ರೆಯನ್ನು ನಾವು ಸಚಿವಾಲಯ, ನಿರ್ದೇಶನಾಲಯ, ಹೆಡ್ ಕ್ವಾರ್ಟರ್‍ಗಳಾಗಿ ಬದಲಾಯಿಸಲು ಸಾಧ್ಯವಿಲ್ಲ.” ಅವರು ಸ್ಪಷ್ಟ ಮಾತಿನಲ್ಲಿ ಹೇಳಿದರು.

     ದೀನ್ ದಯಾಳ್ ಪಿಸಿ ಅವರನ್ನು ಮರಳಿ ಪೊಲೀಸ್ ಮುಖ್ಯ ಕಾರ್ಯಾಲಯಕ್ಕೆ ಕರೆತಂದ. ಅವರನ್ನು ಅವರ ಕುರ್ಚಿಯಲ್ಲಿ ಕೂರಿಸಿ ಅವನು ಖುದ್ದು ‘ಜನತಾ ಮೆಂಟಲ್ ಹಾಸ್ಪಿಟಲ್’ಗೆ ಹೋಗಿ ದಾಖಲಾದ. 

***

ಡೆಡ್ ಲೈನ್

ಸಾಕಷ್ಟು ಓಡಾಟ ಮತ್ತು ತಂತ್ರದ ನಂತರ ಆ ಕೆಲಸ ನಮ್ಮ ಏಜೆನ್ಸಿಗೆ ಲಭಿಸಿತ್ತು. ಅಂದರೆ ಉಳಿದ ಕೆಲಸಗಳು ಯಾವುದೇ ಓಡಾಟ ಮತ್ತು ತಂತ್ರಗಳಿಲ್ಲದೆ ಸಿಗುತ್ತಿದ್ದವು ಎಂದು ಇದರ ಅರ್ಥ ಖಂಡತ ಅಲ್ಲ. ಕೆಲಸ ದೊಡ್ಡದಿತ್ತು, ಉತ್ತಮ ಮಾರ್ಜಿನ್ ಲಭಿಸುತ್ತಿತ್ತು, ಮುಂದೆಯೂ ಕಲೆಸ ನಿರಂತರವಾಗಿ ಸಿಗುವ ಭರವಸೆಯಿತ್ತು. ಅಲ್ಲದೆ ಈ ಕೆಲಸದಲ್ಲಿ ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಆಸಕ್ತಿಯನ್ನು ತೋರಿಸುತ್ತಿದ್ದರು. ಯಾಕೆಂದರೆ, ಅವರ ಪ್ರಾಂತದ ವಾರ್ಷಿಕ ವರದಿ ಪುಸ್ತಕದ ಮುಖಪುಟದಲ್ಲಿ ಅವರ ಫೋಟೋ ಮುದ್ರಿತವಾಗುವುದಿತ್ತು. ಒಂದು ವೇಳೆ ಚಿತ್ರ ನಾಲ್ಕು ಬಣ್ಣಗಳಲ್ಲಿ ಆಫ್‍ಸೆಟ್‍ನಿಂದ ಚೆನ್ನಾಗಿ ಮುದ್ರಣಗೊಂಡರೆ, ಮುಖ್ಯಮಂತ್ರಿಗಳು ನಮ್ಮ ಏಜೆನ್ಸಿಗೆ ತಮ್ಮ ಪ್ರಾಂತದ ಇನ್ನೂ  ಅನೇಕ ಹೆಚ್ಚಿನ ಕೆಲಸಗಳನ್ನು ಕೊಡಿಸಬಲ್ಲರು ಎಂಬ ಪೂರ್ಣ ವಿಶ್ವಾಸ ನಮಗಿತ್ತು. ವಾಸ್ತವವಾಗಿ ಹೇಳಬೇಕೆಂದರೆ, ನಮ್ಮ ದೃಷ್ಟಿ ಅವರ ಪ್ರಾಂತದ ಸಂಚಾರ ವಿಭಾಗದ ಮೇಲಿತ್ತು, ಅದರ ಬಳಿ ಪಬ್ಲಿಸಿಟಿಯ ದೊಡ್ಡ ಬಜೆಟ್ ಇದೆ.

     ಅದು ಡಿಸೆಂಬರ್ ತಿಂಗಳ ಚಳಿ ಸಂಜೆಯಾಗಿತ್ತು. ಕಚೇರಿ ಸುಮಾರಾಗಿ ಮುಚ್ಚಿತ್ತು. ಅಂದರೆ ಬಿಗ್-ಬಾಸ್‍ನ ನೌಕರ ಮತ್ತು ಸ್ಟೆನೋ ಮಿಸ್ ಮಲ್ಹೋತ್ರಾರನ್ನು ಹೊರತುಪಡಿಸಿ ಎಲ್ಲರೂ ಹೊರಟು ಹೋಗಿದ್ದರು. ನನ್ನ ಕ್ಯಾಬಿನ್‍ನಿಂದ ಹೊರಡುವಾಗ ಬಿಗ್-ಬಾಸ್ ದೃಷ್ಟಿ ನನ್ನ ಮೇಲೆ ಬೀಳಲಿ, ಜೋಶಿ ಆರು ಗಂಟೆಯವರೆಗೆ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ನನ್ನ ಬಗ್ಗೆ ಹೆಮ್ಮೆ ಪಡಲೆಂದು ನನ್ನ ಮೇಜಿನ ಮೇಲಿದ್ದ ಪತ್ರಗಳನ್ನು ಅತ್ತ-ಇತ್ತ ಸರಿಪಡಿಸುತ್ತಿದ್ದೆ. ಟೇಬಲ್ ಮೇಲೆ ನಾಲ್ಕೂ ಕಡೆ ಆರ್ಟ್ ವರ್ಕ್ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನಾನು ಕಚೇರಿಯಿಂದ ಬೇಗನೆ ಹೊರಡಬೇಕಿತ್ತು, ಯಾಕೆಂದರೆ ಮೂರು ತಿಂಗಳ ನಂತರ ಗೀತಾಳನ್ನು ಫಿಲ್ಮ್ ತೋರಿಸಲು ಕರೆದುಕೊಂಡು ಹೋಗಬೇಕಿತ್ತು. ಮದುವೆಯ ನಂತರ ನಾನು ಅವಳನ್ನು ಫಿಲ್ಮ್‍ಗೆ ಕರೆದೊಯ್ಯುವುದಿಲ್ಲ ಎಂಬುದು ಗೀತಾಳ ಕಂಪ್ಲೇಂಟ್ ಬುಕ್‍ನಲ್ಲಿನ ದೊಡ್ಡ ದೂರಾಗಿತ್ತು. ಈಗ ನನ್ನ ಜೇಬಿನಲ್ಲಿ ಸಂಜೆ ಸಿನೆಮಾದ ಎರಡು ಟಿಕೇಟ್‍ಗಳಿದ್ದವು. ಗೀತಾ ಪ್ಲಾಜಾದೆದುರು ನಿಂತು ನನ್ನನ್ನು ಕಾಯುತ್ತಿರಬಹುದು, ನನ್ನನ್ನು ನಿಂದಿಸುತ್ತಲೂ ಇರಬಹುದೆಂಬ ಪೂರ್ಣ ಭರವಸೆ ನನಗಿತ್ತು. ನಾನು ಮನಸ್ಸಿನಲ್ಲಿ ಬಿಗ್-ಬಾಸ್‍ರನ್ನು ನಿಂದಿಸುತ್ತಿದ್ದೆ, ಅವರು ಕುರ್ಚಿಯಲ್ಲಿ ಫೆವಿಕಾಲ್‍ಗೆ ಅಂಟಿ ಕೂತಂತೆ ಕೂತಿದ್ದಾರಲ್ಲ!

    “ದೊಡ್ಡ ಸಾಹೇಬರು ಕರೆದಿದ್ದಾರೆ.” ಎದುರು ಬಿಗ್-ಬಾಸ್‍ರ ನೌಕರ ನಿಂತಿದ್ದ. ಅವನ ಕಪಾಳಕ್ಕೆ ಹೊಡೆದು, ನಂತರ ನಾನು ಹೊಡೆದುಕೊಳ್ಳಬೇಕು, ಕಾಡು ಉಳಿದಿದ್ದರೆ ಅಲ್ಲಿಗೆ ಓಡಿ ಹೋಗಬೇಕು ಎಂದು ಮನಸ್ಸಾಯಿತು. ನಾನು ಎದ್ದು ನಿಂತೆ.

    “ಮಿಸ್ಟರ್ ಜೋಶಿ...” ಬಾಸ್ ಒಂದು ಫೈಲನ್ನು ನೋಡುತ್ತಾ ಕೇಳಿ, ಸ್ವಲ್ಪ ತಡೆದರು.

    “ಯಸ್ ಸಾರ್,” ನಾನು ಅವರನ್ನು ಗೌರವ-ಶ್ರದ್ಧೆ ಮತ್ತು ಕುತೂಹಲದಿಂದ ನೋಡಿದೆ.

    “ಐ ಯಾಮ್ ಸಾರಿ, ಬಟ್ ಹಿಯರ್ ಈಸ್ ವೆರಿ ಅರ್ಜೆಂಟ್ ವರ್ಕ್ ಟು ಬಿ ಡನ್.”

    “ಯಸ್ ಸಾರ್.” ಬಿಗ್-ಬಾಸ್ ಸದಾ, ‘ಐ ಡೋಂಟ್ ವಾಂಟ್ ಟು ಹಿಯರ್ ಎನಿಥಿಂಗ್ ಎಕ್ಸೆಪ್ಟ್ ಯಸ್ ಸಾರ್’ ಎಂದು ಹೇಳುತ್ತಿರುತ್ತಾರೆ ಎಂಬುದು ನನಗೆ ತಿಳಿದಿತ್ತು.

    “ನೀವು ಈಗಲೇ ಇಂಟರ್‍ಕಾಂಟಿನೆಂಟಲ್‍ಗೆ ಹೋಗಬೇಕು...ಡ್ರಿಂಕ್ಸ್ ಎಂಡ್ ಡಿನರ್...ಮಿಸ್ಟರ್ ಮಲಾನಿಯವರು ನಿಮಗೆ ಗೊತ್ತಿರಬೇಕು?”

     “ಯಸ್ ಸಾರ್.”

     “ವೆರಿ ಗುಡ್...ಅಲ್ಲಿ ಅವರನ್ನು ಎಂಟರಟೇನ್ ಮಾಡಬೇಕು...ಡೂ ಯೂ ಅಂಡರ್ ಸ್ಟ್ಯಾಂಡ್, ಎಂಟರಟೇನ್?” ಬಿಗ್-ಬಾಸ್ ಎಂಟರಟೇನ್‍ಗೆ ಒತ್ತು ಕೊಟ್ಟು ಹೇಳಿದರು.

     “ಯಸ್ ಸಾರ್.”

     “ಡೋಂಟ್ ಆಫರ್ ಹಿಮ್ ಲೆಸ್ ದೆನ್ ಶೀವಾಜ್ ರೀಗಲ್...” ನಂತರ ಬಿಗ್-ಬಾಸ್ ಸ್ವರವನ್ನು ಬದಲಿಸಿ ಹೇಳಿದರು, “ಅವನಪ್ಪ ಸಹ ಎಂದೂ ನೋಡಿರಲಿಕ್ಕಿಲ್ಲ. ಪಿ.ಆರ್.ಓ. ಸಹ ಸ್ಟೇಟ್‍ವೊಂದರ ಶೀವಾಜನನ್ನು ಒಮ್ಮೆಯಾದರೂ ಕುಡಿಯಲು ಸಾಧ್ಯವೆ? ಐ ಮೀನ್ ಫ್ರಮ್ ಹಿಸ್ ಓನ್ ಪಾಕೇಟ್?”

    “ಯೂ ಆರ್ ರೈಟ್ ಸಾರ್.”

    “ಕಾರ್ ನಿಂತಿದೆ, ಡ್ರೈವರ್‍ಗೆ ಹೇಳಲಾಗಿದೆ. ಯೂ ಟೇಕ್ ಮಿಸ್ ಮಲ್ಹೋತ್ರಾ ವಿದ್ ಯೂ...ಒಳ್ಳೆಯ ಪಾರ್ಟಿ ಇರುತ್ತೆ... ರೂಮ್ ನಂಬರ್ ಥ್ರೀ ಓ ಸಿಕ್ಸ್...ರಿಸೆಪ್ಶನ್‍ನಲ್ಲಿ ನನ್ನ ಕಾರ್ಡ್ ತೋರಿಸಿ...ಯೂ ವಿಲ್ ಗೆಟ್  ಏವರಿಥಿಂಗ್  ರೆಡಿ...ಓ.ಕೆ?”  ಬಿಗ್-ಬಾಸ್ ಕಾರ್ಡ್‍ನ್ನು  ಮುಂದಕ್ಕೆ  ಚಾಚಿದರು.  ನಾನು  ತುಂಬಾ ಶ್ರದ್ಧೆಯಿಂದ, ತುಲಸೀದಾಸರ ರಾಮಚರಿತಮಾನಸವನ್ನು ತೆಗೆದುಕೊಳ್ಳುವಂತೆ ಅವರ ಕಾರ್ಡ್ ತೆಗೆದುಕೊಂಡೆ. ನಂತರ ಕ್ಯಾಬಿನ್ ಹೊರಗೆ ಬಂದು ನೇರವಾಗಿ ಬಾಥ್‍ರೂಮಿಗೆ ಬಂದೆ, ಟೈ ಸರಿಪಡಿಸಿಕೊಂಡೆ. ಬಾಚಣಿಕೆಯಿಂದ ತಲೆಯನ್ನು ಬಾಚಿಕೊಂಡೆ. ಕೋಟ್ ಮೇಲೆ ಬ್ರಶ್ ಆಡಿಸಿಕೊಂಡು ಹೊರ ಬಂದೆ. ಮಿಸ್ ಮಲ್ಹೋತ್ರಾ ಅವರನ್ನು ಛೇಡಿಸಲು ಮನಸ್ಸಾಯಿತು. ಬಿಗ್-ಬಾಸ್‍ರ ಅಭ್ಯಾಸಗಳನ್ನು ನಾನು ಬಲ್ಲೆ. ಅವರು ಮಿಸ್ ಮಲ್ಹೋತ್ರಾರಿಗೆ ಇದುವರೆಗೆ, ಅವರು ನನ್ನೊಂದಿಗೆ ಹೋಗಬೇಕೆಂಬ ವಿಷಯವನ್ನು ಹೇಳದಿರಬಹುದು.

    “ಮಿಸ್ ಮಲ್ಹೋತ್ರಾ, ಹೌ ಆರ್ ಯೂ?”

    “ಐ ಯಾಮ್ ವೆರಿ ಟೈರ್ಡ್,” ಅವಳು ತನ್ನ ಬ್ಯಾಗಿನಲ್ಲಿ ಲಂಚ್ ಬಾಕ್ಸ್ ಇಟ್ಟುಕೊಳ್ಳುತ್ತಾ ಹೇಳಿದಳು.

    “ವುಡ್ ಯೂ ಲೈಕ್ ಟು ಹ್ಯಾವ್ ಡ್ರಿಂಕ್ ವಿಥ್ ಮಿ?”

    “ನೋ, ಥ್ಯಾಂಕ್ ಯೂ ಡಿಯರ್.”

    “ಬಟ್ ಯೂ ಹ್ಯಾವ್ ಟೂ ಹ್ಯಾವ್ ಮೈ ಡಿಯರ್.”

ಮಿಸ್ ಮಲ್ಹೋತ್ರಾರ ಸುಂದರ ಕಣ್ಣುಗಳಲ್ಲಿ ಸಿಟ್ಟು ಕಂಡು ಬಂತು.

     “ಇಟ್ಸ್ ಆರ್ಡರ್.”

     “ಫ್ರಮ್ ಹೂಮ್?”

     “ಬಿಗ್-ಬಾಸ್.”

     “ಹ್ಯಾಸ್ ಹಿ ಗಾನ್ ಮ್ಯಾಡ್.”

     “ನೋ, ವಿ ಆರ್ ಮ್ಯಾಡ್.”

     “ವಿಷಯ ಏನು?”

     “ಬಿಜಿನೆಸ್...ಬಿಜಿನೆಸ್ ಬಿಟ್ಟು ಬೇರೇನಿರುತ್ತೆ?”

     ಅಷ್ಟರಲ್ಲಿ ಬಿಗ್-ಬಾಸ್ ತಮ್ಮ ಕ್ಯಾಬಿನ್‍ನಿಂದ ಹೊರ ಬಂದರು. ಕೋಟಿನ ಇನ್ನೊಂದು ತೋಳಿನಲ್ಲಿ ಕೈ ಹಾಕುತ್ತಾ ಹೇಳಿದರು, “ಮಿಸ್ ಮಲ್ಹೋತ್ರಾ, ಯೂ ಆರ್ ಗೋಯಿಂಗ್ ವಿದ್ ಜೋಶಿ...ಗುಡ್‍ಲಕ್.” ಹೀಗೆಂದು ಅವರು ತಕ್ಷಣ ಹೊರಗೆ ಹೋದರು.

     ಮಿಸ್ ಮಲ್ಹೋತ್ರಾರ ಮೂಡ್ ಎಷ್ಟು ಆಫ್ ಆಗಿತ್ತೆಂದರೆ, ಆಫೀಸಿನಿಂದ  ಹೋಗುವುದಕ್ಕೂ  ಮೊದಲು

ಅವರು ತಮ್ಮ ಲಿಪಸ್ಟಿಕ್ ಸಹ ಸರಿಪಡಿಸಿಕೊಳ್ಳಲಿಲ್ಲ, ಇದು ನನಗೆ ತುಂಬಾ ಆಶ್ಚರ್ಯದ ಸಂಗತಿಯಾಗಿತ್ತು.

    ನಾನು ಡ್ರೈವರ್‍ಗೆ ಹೇಳಿದೆ, “ರಾಮಸಿಂಗ್, ಹೊಟೇಲ್ ಹೋಗುವುದಕ್ಕೆ ಮೊದಲು ಸ್ವಲ್ಪ ಪ್ಲಾಜಾಕ್ಕೆ ಹೋಗು.”

    “ಯಾಕೆ?” ಮಿಸ್ ಮಲ್ಹೋತ್ರಾ ಬೆಕ್ಕಿನಂತೆ ಗುರ್ ಎಂದಳು.

    “ದುರದೃಷ್ಟ...ಅಲ್ಲಿ ಗೀತಾ ಫಿಲ್ಮ್ ನೋಡಲು ನನಗಾಗಿ ಕಾಯುತ್ತಿರಬೇಕು. ಸಿನೆಮಾ ಟಿಕೇಟ್ ನನ್ನ ಜೇಬಿನಲ್ಲಿದೆ.”

    “ಚಪ್ಪಲಿ ಹೊಡೆತ ತಿನ್ನಿ.” ಈಗ ಮಿಸ್ ಮಲ್ಹೋತ್ರಾಗೆ ನಗು ಬಂತು.

    “ಅದನ್ನು ನಿತ್ಯ ತಿನ್ತೀನಿ, ಈ ನೌಕರಿಗಾಗಿ.”

    ಹೊರಗೆ ಚಳಿ ಆವರಿಸಿತ್ತು. ಗೀತಾ ಪ್ಲಾಜಾ ಎದುರು ನಿಂತಿದ್ದಳು.

    ನನ್ನನ್ನು ನೋಡುತ್ತಲೇ ಅವಳ ಮುಖದಲ್ಲಿ ದೂರುಗಳ ಕಚೇರಿಯೇ ತೆರೆಯಿತು.

    “ಐ ಯಾಮ್ ವೆರಿ ಸಾರಿ ಡಾರ್ಲಿಂಗ್.”

    “ಒಳಗೆ ಬನ್ನಿ...ಸಾರಿ-ಪಾರಿ ಅಲ್ಲಿಯೇ ಹೇಳುವಿರಂತೆ.”

    “ನಾನು ಕಚೇರಿಯ ಕಾರಿನಲ್ಲಿ ಬಂದಿದ್ದೇನೆ.”

    “ಅಂದರೆ?”

    “ಆಫೀಸ್ ಕೆಲಸವಿದೆ. ವೆರಿ ಅರ್ಜೆಂಟ್.”

    “ಯೂ ಆರ್ ಮೀನ್.”

    “ಸ್ವಲ್ಪ ನನ್ನ ಮಾತು ಕೇಳು.”

    “ಐ ಸೆಡ್, ಯೂ ಆರ್ ಮೀನ್.”

    “ಅಲ್ನೋಡು, ಕಾರು ನಿಂತಿದೆ.”

    “ಒಳಗೆ ಯಾರು ಕೂತಿದ್ದಾರೆ?”

    “ಮಿಸ್ ಮಲ್ಹೋತ್ರಾ...ಐ ಮೀನ್ ನನ್ನ ಬಿಗ್-ಬಾಸ್‍ನ...”

    “ಹೋಗಿ, ಮಜಾ ಮಾಡಿ...ನನ್ನನ್ನೇಕೆ ಇಲ್ಲಿಗೆ ಕರೆದಿದ್ದಿರಿ?”

    “ಸ್ವಲ್ಪ ಕೇಳು...” ಅವಳು ತ್ವರಿತವಾಗಿ ಬಸ್-ಸ್ಟಾಪ್ ಕಡೆಗೆ ಹೊರಟಳು. ನಾನು ಎರಡು-ಮೂರು ಹೆಜ್ಜೆ ಅವಳ  ಹಿಂದೆ  ಓಡಿದೆ.  ಆಗ  ನನಗೆ ಮಿಸ್ಟರ್ ಮಲಾನಿ ಹೊಟೇಲ್‍ನ್ನು ಪ್ರವೇಶಿಸುತ್ತಿರಬಹುದು  ಎಂಬುದು ನೆನಪಾಯಿತು. ನಾನು ವೇಗವಾಗಿ ಹೋಗಿ ಕಾರಿನ ಬಾಗಿಲು ತೆರೆದು ಒಳಗೆ ಜಿಗಿದೆ.”

     ಕಾರು ಹೊರಟಿತು.

     “ಏನಾಯ್ತು?” ಮಿಸ್ ಮಲ್ಹೋತ್ರಾ ಕೇಳಿದರು.

     “ನಾನೇಕೆ ನೌಕರಿಯನ್ನು ಮಾಡುತ್ತೇನೆ, ಯಾರಿಗಾಗಿ ಮಾಡುತ್ತೇನೆ ಎಂದು ನಾನು ಆಗಾಗ ಯೋಚಿಸುತ್ತೇನೆ.”

     “ಇಷ್ಟು ಬೇಗನೇ ಫಿಲಾಸಫರ್ ಆದಿರಾ?”

     “ಇಲ್ಲ ರಿಕಿ.” ಕಚೇರಿಯಲ್ಲಿ ಎಲ್ಲರೂ ಮಿಸೆಸ್ ಮಲ್ಹೋತ್ರಾರನ್ನು ಇದೇ ಹೆಸರಿನಿಂದ ಕರೆಯಲು ಇಷ್ಟ ಪಡುತ್ತಾರೆ. ವಿಶೇಷವಾಗಿ ಆತ್ಮೀಯ ಕ್ಷಣಗಳಲ್ಲಿ ರುಕ್ಮಣಿ ಮಲ್ಹೋತ್ರಾ ‘ರಿಕಿ’ ಆಗುತ್ತಾರೆ.

    “ಏನ್ ವಿಷಯ?”

    “ನೋಡಿ, ನಾನು ಮನೆಯಿಂದ ಬೆಳಿಗ್ಗೆ ಎಂಟೂವರೆಗೆ ಹೊರಡುತ್ತೇನೆ. ಸಂಜೆ ಏಳು ಗಂಟೆಗೆ ಮನೆಗೆ ಹೋಗ್ತೇನೆ. ದಣಿದೋ ಅಥವಾ ಸತ್ತೋ ಎಂದು ಹೇಳಿ. ಹೋದೊಡನೆ ಹಾಸಿಗೆಯಲ್ಲಿ ಮಲಗುತ್ತೇನೆ. ಆಗ ಗೀತಾ ಅಡುಗೆ ಮಾಡುತ್ತಿರುತ್ತಾಳೆ. ಎಂಟೂವರೆಗೆ ಅಡುಗೆ  ಆಗುತ್ತೆ,  ಊಟ  ಮಾಡುತ್ತಲೇ  ನಿದ್ರೆ  ಆವರಿಸುತ್ತೆ...ನನ್ನ ಹತ್ತಿರ  ಗೀತಾಳಿಗೆ ಕೊಡಲು  ಟೈಮ್ ಇಲ್ಲ. ಇನ್ನು  ಗೆಳೆಯರು  ಮತ್ತು ಸಂಬಂಧಿಕರನ್ನು                                                                                 

ಭೇಟಿಯಾಗುವ ವಿಷಯ ದೂರವೇ. ಹೇಳಿ, ನಾನು ನೌಕರಿ ಮಾಡುವುದು ಯಾಕಾಗಿ? ನಾನು ಮತ್ತು ನನ್ನ ಫ್ಯಾಮಿಲಿ ಬದುಕಿರುವುದಕ್ಕೆ ಮಾತ್ರವೇ? ಸಾವಿರದ ಐದನೂರು ರೂಪಾಯಿಯಲ್ಲಿ ನಾಲ್ಕು ನೂರು ರೂಪಾಯಿಗಳನ್ನು ಮನೆ ಬಾಡಿಗೆ ಕೊಡುವ ಮನುಷ್ಯ ದಿಲ್ಲಿಯಂಥ ನಗರದಲ್ಲಿ ಎಂಥ ಸುಖ ಪಡುತ್ತಾನೆ ಎನ್ನುವುದು ನಿಮಗೆ ಗೊತ್ತೇಯಿದೆ.”

    “ಪೂರ್ ಚಾಪ್,” ರಿಕಿ ತನ್ನ ಕೋಮಲ ಕೈಯನ್ನು ನನ್ನ ಕೈಯಲ್ಲಿಟ್ಟಳು, ಇದರಿಂದಾಗಿ ನನಗೆ ಸ್ವಲ್ಪ ನೆಮ್ಮದಿಯೆನಿಸಿತು.

    “ಕಳೆದ ವರ್ಷ ನಾನು ಏಜೆನ್ಸಿಗೆ ಹನ್ನೆರಡು ಲಕ್ಷದ ಅಕೌಂಟ್‍ಗಳನ್ನು ಕೊಟ್ಟಿದ್ದೆ. ಲೆಕ್ಕ ಹಾಕಿದರೆ ಮುವತ್ತು ಪರ್ಸೆಂಟ್ ಲೆಕ್ಕಾಚಾರದಂತೆ ಮೂರು ಲಕ್ಷ ಅರವತ್ತು ಸಾವಿರವಾಗುತ್ತದೆ. ಆದರೆ ನನಗೆ ವರ್ಷವಿಡಿ ಕಂಪನಿ ಏನು ಕೊಡ್ತು? ಹದಿನೆಂಟು ಸಾವಿರ...ಉಳಿದ ಹಣ ಯಾರ ಜೇಬಿಗೆ ಹೋಯ್ತು?”

    “ಮತ್ತೇನು ಮಾಡ್ತೀರ?”

    “ಮಾಡುವುದೇನು, ಗುಲಾಮಗಿರಿ ಮಾಡ್ತಾ ಇರ್ತೀನಿ.” ಕಾರಿನಿಂದ ನೋಡಿದಾಗ ಪಾರ್ಲಿಮೆಂಟ್ ಕಾಣಿಸುತ್ತಿತ್ತು.

    “ಜೋಶಿಯವರೇ, ಕೇಳಿ...ಈ ಮಿಸ್ಟರ್ ಮಲಾನಿ ಎಂಥ ಮನುಷ್ಯ?”

    “ಮನುಷ್ಯ ಏನು ಬಂತು, ಅವನು ನಾಯಿ.”

    “ಎಲ್ಲಾದರೂ ನನ್ನೊಂದಿಗೆ..ಐ ಮೀನ್ ಅನ್‍ಡ್ಯೂ ಅಡ್ವಾನ್‍ಟೇಜ್...”

    “ಇಲ್ಲ ಬಿಡಿ...ನಿಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡರೆ ಅವನ ಹಲ್ಲು ಮುರಿದು ಬಿಡ್ತೀನಿ. ನೀವೀಗ ನನ್ನನ್ನು ಅಷ್ಟು ಹೆಂಗಸು ಅಂತ ತಿಳಿಯಬೇಡಿ. ಬಿಜಿನೆಸ್‍ಗೆ ಬೇಕಾದರೆ ಬೆಂಕಿ ಬೀಳಲಿ.”

     ರಿಕಿ ಪ್ರೀತಿಯಿಂದ ನನ್ನನ್ನು ನೋಡಿದಳು. ತನ್ನ ಅದರಗಳನ್ನು ಕಚ್ಚಿಕೊಳ್ಳುತ್ತಾ ಬಿಟ್ಟು, ಮತ್ತೆ ನಕ್ಕಳು.

     “ಟ್ರಸ್ಟ್ ಮಿ.”

     “ಯಸ್...ಐ ಟ್ರಸ್ಟ್ ಯೂ.”

     ವಾತಾನುಕೂಲದ ಕೋಣೆಯಲ್ಲಿನ ಒಂದು ಸೋಪಾದಲ್ಲಿ ಕೂತಿದ್ದ ಭೀಮಕಾಯದ ಮಲಾನಿ ತನ್ನ ಬಾಯಿ, ಬಾಯಿಯಲ್ಲ ಕರಟ; ಹೊಟ್ಟೆ, ಹೊಟ್ಟೆಯಲ್ಲ ಪಿಪಾಯಿ ಎಂಬಂತೆ ಕುಡಿಯುತ್ತಿದ್ದ. ಜೊತೆಕೊಡಲು ನಾವಿಬ್ಬರು ಸಹ ನಮ್ಮ ಗ್ಲಾಸ್‍ಗಳನ್ನು ಎದುರಿಗೆ ಇಟ್ಟುಕೊಂಡಿದ್ದೆವು. ಮಾತುಕತೆ ಸಾಗುತ್ತಿತ್ತು. ನಾನು ನನ್ನ ಜೋಕ್ಸ್ ಪುಸ್ತಕವನ್ನು ತೆರೆದಿಟ್ಟುಕೊಂಡು ಮಲಾನಿಗೆ ಜೋಕ್ಸ್‍ಗಳನ್ನು ಹೇಳುತ್ತಿದ್ದೆ. ಅವನು ಅವುಗಳನ್ನು ಅರ್ಥ ಮಾಡಿಕೊಂಡು ನಗುತ್ತಲೂ ಇದ್ದ. ಪಾರ್ಟಿ ಉಚಿತವಾಗಿ ನಡೆಯುತ್ತಿದೆ ಎಂದು ನಾವಿಬ್ಬರೂ ಖುಷಿಯಲ್ಲಿದ್ದೆವು. ಮುಖ್ಯಮಂತ್ರಿಗಳ ಭಾವಚಿತ್ರವನ್ನು ಮುದ್ರಿಸುವ ಗೌರವ ನಮ್ಮ ಏಜೆನ್ಸಿಗೆ ಲಭಿಸುತ್ತದೆ. ಆದರೆ ಮದ್ಯದ ಅಮಲಿನಲ್ಲಿ ಮಲಾನಿ ರಿಕಿಯನ್ನು ಛೇಡಿಸಿದರೆ ಎಂಬ ಭಯ ಕಾಡುತ್ತಿತ್ತು. ಮಲಾನಿ ಇದಕ್ಕೆ ಸಮಯ ಕಾಯುತ್ತಿದ್ದಾನೆ ಎಂದು ನನಗೆ ಅನುಮಾನ ಬಂತು. ಅವನು ಆರಂಭವನ್ನು ಹೀಗೆ ಮಾಡಿದ:

    “ನೀವು ಕುಡಿಯಿರಿ,” ಮಲಾನಿ ರಿಕಿಯ ಗ್ಲಾಸ್‍ಯೆಡೆಗೆ ಸಂಜ್ಞೆ ಮಾಡಿದ.

    “ಮಿಸ್ಟರ್ ಮಲಾನಿ, ಇವರು ಖಂಡಿತ ಕುಡಿಯುವುದಿಲ್ಲ, ಆದರೆ ನಿಮಗೆ ಕಂಪನಿ ಕೊಡಲು ಸ್ವಲ್ಪ ತೆಗೆದುಕೊಂಡಿದ್ದಾರೆ.” ಹೀಗೆಂದು ತಕ್ಷಣ ಟಾಪಿಕ್ ಬದಲಿಸಿ ಇದೇ ವಾಕ್ಯದೊಂದಿಗೆ ಹೇಳಿದೆ, “ಮಿಸ್ಟರ್ ಮಲಾನಿ, ನೀವು ಒಂದು ಜೋಕ್ ಕೇಳಿರಬೇಕಲ್ಲ, ಅಂದರೆ ಕಪ್ಪೆಯೊಂದು ತನ್ನನ್ನು ಸಿಂಹವೆಂದು ತಿಳಿಯುತ್ತಿತ್ತು ಎಂಬ ಜೋಕ್?”

 “ಓಹೋ, ಕಪ್ಪೆ ಸಿಂಹವಾಗಿತ್ತು,” ಅವನು ಹೋ-ಹೋ ಎಂದು ನಕ್ಕ. ನಾನು ನೆಮ್ಮದಿಯಿಂದ ಉಸಿರಾಡಿದೆ.                                                                                 

    ರಾತ್ರಿಯ ಒಂಭತ್ತು ಗಂಟೆಯಾಗಿತ್ತು. ಮಲಾನಿ ಬೇಕಾದಷ್ಟು ಕುಡಿಯಲಿ, ಆದರೆ ಬೇಗ ಕುಡಿಯಲಿ; ಅವನು ಎಷ್ಟೇ ತಿನ್ನಲಿ, ಆದರೆ ಬೇಗ ತಿಂದು ಹೋಗಲಿ ಎಂಬ ಬಗ್ಗೆ ಮಾತ್ರ ನಮಗೆ ಆಸಕ್ತಿಯಿತ್ತು.

    ಅವನು ಕುರ್ಚಿಯಿಂದ ಏಳಲು ಪ್ರಯತ್ನಿಸಿದ. ಮಲಾನಿ ಬಾಥ್‍ರೂಮಿಗೆ ಹೋಗಲು ಬಯಸುತ್ತಾನೆ ಎಂದು ಅರ್ಥ ಮಾಡಿಕೊಂಡು ನಾನು ಬಾಥ್‍ರೂಮಿನ ಬಾಗಿಲನ್ನು ತೆರೆದು, ಲೈಟ್ ಹಾಕಿದೆ. ಆದರೆ ಅವನ ಪ್ಯಾಂಟಿನ ಜಿಪ್ ತೆರೆಯುವುದನ್ನು ಮರೆತೆ. ನಾನು ಮರಳಿ ಬಂದು ರಿಕಿ ಹತ್ತಿರ ಕೂತೆ.

    “ಇವನಿಗೆ ಇನ್ನಷ್ಟು ಕೊಡೋಣವೇ?” ನಾನು ರಿಕಿಯನ್ನು ಕೇಳಿದೆ.

    “ತುಂಬಾ ಜಾಸ್ತಿಯಾಯ್ತು. ಸತ್ತು ಹೋಗ್ತಾನೆ.”

    “ಸತ್ತು ಹೋಗಲಿ, ನನ್ಮಗ. ಆದರೆ ಕಾಂಟ್ರಾಕ್ಟ್ ಆದ ನಂತರ ಸಾಯಲಿ.”

    ರಿಕಿ ನಕ್ಕಳು.

    “ಸರಿ, ಈಗ ಆಟವನ್ನು ಮುಗಿಸೋಣ.” ಎಂದೆ.

    “ಓ.ಕೆ.”

    ಮಲಾನಿ ಬಂದು ಕೂತ. ಅವನ ಉಸಿರಾಟ ತೀವ್ರವಾಗಿ ನಡೆಯುತ್ತಿತ್ತು. ಗ್ಲಾಸ್ ತುಂಬಿತ್ತು. ಅವನು ದೀರ್ಘ ಸಿಪ್ ತೆಗೆದುಕೊಂಡ.

    “ಮಲಾನಿಯವರೇ, ಇಷ್ಟೆಲ್ಲಾ ಸಂಬಂಧವಿದ್ದರೂ, ನಿಮ್ಮಲ್ಲಿಂದ ನಮಗೆ ಕೆಲಸ ಸಿಗುವುದಿಲ್ಲವೇ?” ನಾನು ಅಂಗಲಾಚಿದೆ.

     “ಸಿಗುತ್ತೆ, ಯಾಕೆ ಸಿಗಲ್ಲ...ಖಂಡಿತ ಕೆಲಸ ಸಿಗುತ್ತೆ.”

     ಮಲಾನಿಯ ಗ್ಲಾಸ್ ಖಾಲಿಯಾಗಿತ್ತು. ನಾನು ಖಾಲಿ ಕೈಯನ್ನು ಮುಂದಕ್ಕೆ ಚಾಚಿದಾಗ ರಿಕಿ ನನ್ನ ಕೈಯನ್ನು ಹಿಡಿದುಕೊಂಡಳು.

    “ಯಾಕೆ?” ಎಂದು ನಾನು ಮಲಾನಿ ಕಡೆಗೆ ನೋಡಿದೆ. ರಿಕಿ ಏನು ಹೇಳಲು ಹೋಗುತ್ತಿದ್ದಾಳೆ ಎಂಬುದು ನನಗೆ ತಿಳಿದಿತ್ತು. ಈ ಎಲ್ಲಾ ಉಪಾಯಗಳು ಏಜೆನ್ಸಿಯವರಾದ ನಮ್ಮ ತಿಳಿವಳಿಕೆಗೆ ಸಂಬಂಧಿಸಿದ್ದಾಗಿರುತ್ತದೆ.

    ರಿಕಿ ತುಂಬಾ ನಿರ್ಭೀತ ಮುಗುಳ್ನಗೆಯನ್ನು ಮಲಾನಿಯೆಡೆಗೆ ಚೆಲ್ಲುತ್ತಾ, ಅವನ ಕಣ್ಣುಗಳನ್ನೇ ನೋಡುತ್ತಾ ಹೇಳಿದಳು, “ಹೆವಿ ಡ್ರಿಂಕಿಂಗ್ ಈಸ್ ವೆರಿ ಬ್ಯಾಡ್ ಫಾರ್ ಹೆಲ್ತ್.”

    ರಿಕಿಯ ಮುಗುಳ್ನಗೆ ಮತ್ತು ಅವಳ ತೋರ್ಪಡಿಕೆಯ ಆತ್ಮೀಯತೆಯ ಎದುರು ಮಲಾನಿ ಮಾತನಾಡದಾದ. ಅವನು ಮೆಲ್ಲನೆ ನಕ್ಕ.

    “ಒಂದು ಚಿಕ್ಕ ಫಾರ್ ದ ರೋಡ್.” ಎಂದೆ.

    “ನೋ ಜೋಶಿ,” ರಿಕಿ ಹೆಚ್ಚು ವೈಯ್ಯಾರದಿಂದ ಹೇಳಿದಳು.

    “ಸರಿ, ನಿನಗೆ ಹಸಿವಾಗುತ್ತಿರಬೇಕು.” ನಾನು ರಿಕಿಗೆ ಹೇಳಿ ವಾಚ್ ನೋಡಿಕೊಂಡೆ. ಮಲಾನಿ ಸಹ ವಾಚ್ ನೋಡಿಕೊಂಡಳು.

    ಮಲಾನಿ ತುಂಬಾ ಉತ್ಸಾಹದಿಂದ ಹೇಳಿದ, “ಹೊಟ್ಟೆ ಹಸಿದಿದ್ದರೆ, ಊಟ ಮಾಡೋಣ?” ಬಾಣ ಗುರಿ ತಲುಪಿತು.

    “ಇಲ್ಲಿಯೇ ಊಟ ಮಾಡೋಣವೋ ಅಥವಾ ಕೆಳಗೆ ಹೋಗೋಣವೋ?”

    “ಕೆಳಗೆ ಹೋಗೋಣ, ಊಟವನ್ನೂ ಮಾಡೋಣ, ಕ್ಯಾಬರೆ ಸಹ ನೋಡೋಣ, ಇಲ್ಲೇನಿದೆ?” ಮಲಾನಿ ಕುರ್ಚಿಯಿಂದ ಏಳಲು ಪ್ರಯತ್ನಿಸಿದ.

     ಮಲಾನಿಗೆ ಊಟ ಮಾಡಿಸಿದಾಗ ಹನ್ನೆರಡು ಗಂಟೆಯಾಯಿತು. ಹೋಗುವಾಗ ಅವನು ತುಂಬಾ ಹೊತ್ತು ನನ್ನ ಕೈಕಳನ್ನು ಕುಲುಕಿದ, ಯಾಕೆಂದರೆ ಅವನು ರಿಕಿಯ ಕೈಯನ್ನೂ ಕುಲುಕಲು ಬಯಸುತ್ತಿದ್ದ. ರಾತ್ರಿಯ ಹನ್ನೆರಡೂವರೆ ಗಂಟೆಗೆ ರಿಕಿಯ ಮನೆ ಎದುರು ಕಾರು ನಿಂತಾಗ,  ಅವಳು  ನಿದ್ರಿಸುತ್ತಿದ್ದಳು. ಅವಳ  ಮಗಳು

ಇಲಾ ಸಹ ಆಯಾಳ ಮಡಿಲಿನಲ್ಲಿ ಅಳುತ್ತಾ, ಮಮ್ಮಿ-ಮಮ್ಮಿ ಎಂದು ಜಪಿಸುತ್ತಾ ನಿದ್ರಿಸಿರಬೇಕು. ನಿದ್ರಿಸುವುದಕ್ಕೆ ಮೊದಲು ಅವಳು ಸಾಕಷ್ಟು ಹೊತ್ತು ಬಿಕ್ಕಳಿಸಿರಬೇಕು. ನಿದ್ರಿಸುತ್ತಿದ್ದಾಗ ಅವಳ ಹೂವಿನಂಥ ಗಲ್ಲಗಳಲ್ಲಿ ಕಣ್ಣೀರು ಒಣಗಿರಬೇಕು. ರಿಕಿಯ ಪತಿ ಇಂದು ಮತ್ತೆ ಎರಡು ಮೊಟ್ಟೆಗಳ ಆಮ್ಲೆಟ್ ಮತ್ತು ನಾಲ್ಕು ಸ್ಲೈಸ್ ತಿಂದು ತಮ್ಮ ಪತ್ನಿ ಮರಳುವ ನಿರೀಕ್ಷೆಯಲ್ಲಿರಬೇಕು. ಅವರು ರಿಕಿ ಎಲ್ಲಿದ್ದಾರೆಂದು ತಿಳಿಯಲು ಫೋನ್ ಸಹ ಮಾಡಿರಬೇಕು.

    ಹೀಗೆ ಅಂದರೆ ಇದಕ್ಕಿಂತ ಹೆಚ್ಚು ಕಷ್ಟವನ್ನು ಅನುಭವಿಸಿ ಕಾಂಟ್ರಾಕ್ಟ್‍ಗೆ ಸೈನ್ ಬಿದ್ದಿತ್ತು. ಬಿಗ್-ಬಾಸ್ ಖುಷಿಯಾಗಿದ್ದರು. ಅವರು ನನ್ನ ಬೆನ್ನು ತಟ್ಟಿದ್ದರು. ಇನ್ನು ನನಗೆ ಒಳ್ಳೆಯ ಇನ್‍ಕ್ರಿಮೆಂಟ್ ಸಿಗುವುದು ಎಂಬ ಭರವಸೆ ನನಗಿತ್ತು. ಆದರೆ ಗೀತಾ ಸಂತಸದಿಂದಿರಲಿಲ್ಲ.

ಈಗ ಮುಖ್ಯಮಂತ್ರಿಗಳ ಟ್ರಾನ್ಸ್‌ಪರೆನ್ಸಿಯ ಸಮಸ್ಯೆಯಿತ್ತು. ದಿಲ್ಲಿಯ ಒಬ್ಬ ಫೋಟೋಗ್ರಾಫರ್ ಬಳಿ ಕೆಲವು ಪೊಟ್ರೆಟ್‍ಗಳಿರುವುದು ತಿಳಿದು ಬಂತು. ಮರುದಿನ ಅವುಗಳನ್ನೆಲ್ಲಾ ತರಲಾಯಿತು. ಬಿಗ್-ಬಾಸ್ ಎಲ್ಲವನ್ನೂ ನೋಡಿ, ಎರಡನ್ನು ಇಷ್ಟಪಟ್ಟರು. ಎರಡನ್ನೂ ಮುಖ್ಯಮಂತ್ರಿಗಳ ಬಳಿಗೆ ಕಳುಹಿಸಲಾಯಿತು. ಮುಖ್ಯಮಂತ್ರಿಗಳು ಎರಡನ್ನೂ ಸಹ ತಿರಸ್ಕರಿಸಿದರು. ಮತ್ತೆ ಗದ್ದಲ ಹಬ್ಬಿತು. ನನಗೆ ಎಲ್ಲಿಂದಲಾದರೂ ಮುಖ್ಯಮಂತ್ರಿಗಳ ಫೋಟೋವನ್ನು, ಅದೂ ಬಣ್ಣದ ಫೋಟೋವನ್ನು ತರುವ ಕೆಲಸಕ್ಕೆ ನೇಮಿಸಲಾಯಿತು. ಫೋನ್‍ಗಳು ಫೋನಾಯಿಸಿದವು, ಕಾರುಗಳು ಓಡಾಡಿದವು. ಕಡೆಗೆ ಜಾಲಂಧರ್‍ನ ಫೋಟೋಗ್ರಾಫರನ ವಿಳಾಸ ಸಿಕ್ಕಿತು. ಅವನಿಂದ ಮೂರು ಟ್ರಾನ್ಸ್‌ಪರೆನ್ಸಿಗಳು ಸಿಕ್ಕವು. ಪ್ರಿಟಂಗ್ ಎಕ್ಸ್‌ಪರ್ಟ್ ನೋಡಿದಾಗ, ಮೂರೂ ಮುದ್ರಣವಾಗಲಾರವು, ಹಳೆಯ ರೀಲನ್ನು ಉಪಯೋಗಿಸಲಾಗಿದೆ ಎಂದ. ಮತ್ತೆ ಓಡಾಟ ಆರಂಭವಾಯಿತು.

ಈಗ ರಾಷ್ಟ್ರಮಟ್ಟದಲ್ಲಿ ಖ್ಯಾತಿವೆತ್ತ ಫೋಟೋಗ್ರಾಫರ್‍ರಿಂದ ಫೋಟೋವನ್ನು ತೆಗೆಸಲು ನಿರ್ಧರಿಸಲಾಯಿತು. ಸಿ.ಸಿ.ಕೌಲ್‍ರೊಂದಿಗೆ ಮಾತುಕತೆ ನಡೆಯಿತು. ಅವರು ತುಂಬಾ ಬಿಜಿಯಾಗಿದ್ದರು. ಅವರು ಒಂದು ವಾರದ ಕಾಲಾವಕಾಶ ಕೇಳುತ್ತಿದ್ದರು. ಇದಕ್ಕೆ ಬಿಗ್-ಬಾಸ್ ತುಂಬಾ ರೇಗಿ, ನಾವು ಬೈ-ಏರ್ ತಗೊಂಡು ಹೋಗೋಣ, ಮೂರು ದಿನದೊಳಗೆ ಕೆಲಸವಾಗಬೇಕು ಎಂದರು. ಸಿ.ಸಿ.ಕೌಲ್ ಒಪ್ಪಿದರು. ಆದರೆ ಮತ್ತೆ, ಮುಂದಿನ ವಾರ ಮುಖ್ಯಮಂತ್ರಿಗಳು ದಿಲ್ಲಿಗೆ ಬರುತ್ತಿರುವ ಸುದ್ದಿ ಸಿಕ್ಕಿತು. ಅಗ್ಗದಲ್ಲಿ ಕೆಲಸವಾಗುವುದೆಂದು ಬಿಗ್-ಬಾಸ್ ಯೋಚಿಸಿದರು. ಅವರು ತಡೆದರು. ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿಗಳ ಟೂರ್ ಕ್ಯಾನ್ಸಲ್ ಆಯಿತು. ಮುಖ್ಯಮಂತ್ರಿಗಳು ಯಾವುದೋ ಕಾಂಡದಿಂದ ಅಲ್ಪದರಲ್ಲಿ ಪಾರಾದರು ಎಂಬ ಕಾರಣ ನಂತರ ತಿಳಿಯಿತು. ಸರಿ, ಕೌಲ್ ಹೋಗಿ, ಭಾವಚಿತ್ರಗಳನ್ನು ತೆಗೆದುಕೊಂಡು ಬಂದರು. ಅವರು ಒಟ್ಟು ಎಪ್ಪತ್ತು ಚಿತ್ರಗಳನ್ನು ತೆಗೆದಿದ್ದರು. ಬಿಗ್-ಬಾಸ್ ಸಂತಸದಲ್ಲಿದ್ದರೂ ಸಹ ವ್ಯಗ್ರರಾಗಿದ್ದರು. ಯಾಕೆಂದರೆ ಡೆಡ್-ಲೈನ್‍ಗೆ ಕಡಿಮೆ ದಿನಗಳು ಉಳಿದಿದ್ದವು. ಬಿಗ್-ಬಾಸ್ ನಾಲ್ಕು ಟ್ರಾನ್ಸ್‌ಪರೆನ್ಸಿಗಳನ್ನು ಇಷ್ಟ ಪಟ್ಟರು. ಮುಖ್ಯಮಂತ್ರಿಗಳಿಗೆ ಅವುಗಳನ್ನು ಕಳುಹಿಸಲಾಯಿತು. ಮುಖ್ಯಮಂತ್ರಿಗಳು ಆಗ ವಿಶ್ವ ರಕ್ಷಣೆಯ ಸಮ್ಮೇಳನವನ್ನು ಉದ್ಘಾಟಿಸಲು ಜಮಾಲಪುರಕ್ಕೆ ಹೋಗಿದ್ದರು. ಅವರು ಮರಳಿ ಬಂದು ಒಂದು ಫೋಟೋವನ್ನು ಇಷ್ಟಪಟ್ಟರು. ದಿಲ್ಲಿಯಲ್ಲಿ ಕಲರ್ ಸೆಪ್ರೆಶನ್ ಸರಿಯಾಗಿ ಆಗುವುದಿಲ್ಲವಾದ್ದರಿಂದ ಟ್ರಾನ್ಸ್‌ಪರೆನ್ಸಿಯನ್ನು ತಕ್ಷಣ ಮುಂಬೈಗೆ ಕಳುಹಿಸಲಾಯಿತು. ಕಳುಹಿಸದ ನಂತರ, ಯಾವ ಲ್ಯಾಬಿಗೆ ಅದನ್ನು ಕಳುಹಿಸಲಾಗಿತ್ತೋ, ಅಲ್ಲಿ ಸ್ಟ್ರೈಕ್ ಇದೆ ಎಂಬ ವಿಷಯ ತಿಳಿಯಿತು. ಮಾಸ್ಟರ್ ನೆಗೆಟಿವ್‍ನಿಂದ ಮತ್ತೆ ಟ್ರಾನ್ಸ್‌ಪರೆನ್ಸಿ ಮಾಡಲಾಯಿತು, ದಿಲ್ಲಿಯಲ್ಲಿಯೇ ಕಲರ್-ಸೆಪ್ರೆಶನ್ ಆಯಿತು. ಪ್ಲೇಟ್ ಆಯಿತು. ಪ್ರೂಫ್‌ ಮುದ್ರಣಗೊಂಡು ಬಂದಾಗ ಬಿಗ್-ಬಾಸ್‍ಗೆ ಇಷ್ಟವಾಗಲಿಲ್ಲ, ಯಾಕೆಂದರೆ ಅವರ ಕಣ್ಣು, ಮುಖ್ಯಮಂತ್ರಿಗಳ ಫಲವತ್ತಾದ ಪ್ರದೇಶದ ಪರ್ಯಟನ ಸಚಿವಾಲಯದ ಬಜೆಟ್ ಮೇಲಿತ್ತು. ಕಲರ್-ಸೆಪ್ರೆಶನ್ ಬೇರೆಯವರಿಂದ ಮಾಡಿಸಲು ನಿರ್ಧರಿಸಲಾಯಿತು. ಕಡೆಗೆ ಇಂದು ಬೆಳಿಗ್ಗೆ ಹೊಸ ಪ್ರೂಫ್‍ಗಳು ಬಂದಿದ್ದವು, ಅವುಗಳನ್ನು ತೋರಿಸಲು ನಾನು ಮಿಸ್ಟರ್ ಮಲಾನಿಯವರ ಬಳಿಗೆ ಹೋಗುತ್ತಿದ್ದೆ.

    ಪ್ರತಿಯೊಂದು ರಾಜ್ಯದ ಸರ್ಕಾರಗಳು ದಿಲ್ಲಿಯಲ್ಲಿ ತಮ್ಮ ಭವ್ಯ ಭವನಗಳನ್ನು ನಿರ್ಮಿಸಿವೆ. ಇಲ್ಲಿ ಕೇಂದ್ರಲ್ಲಿ, ರಾಜ್ಯದ ಹಿತಕ್ಕಾಗಿ ಕಡಿಮೆ ಕೆಲಸ, ರಾಜ್ಯದಿಂದ ಬರುವ ಉನ್ನತ ದರ್ಜೆಯ ಸರ್ಕಾರಿ ಕರ್ಮಚಾರಿಗಳು, ಮಂತ್ರಿಗಳು, ಎಂ.ಪಿ.ಓ.ಗಳನ್ನು ಸತ್ಕರಿಸುವ ಕೆಲಸವೇ ಪ್ರಧಾನವಾಗಿರುತ್ತದೆ. ಅಲ್ಲಿಗೆ ಟ್ಯಾಕ್ಸಿಯಲ್ಲಿ ಹೋಗಲು ಹತ್ತು-ಹನ್ನೆರಡು ನಿಮಿಷಗಳು ಹಿಡಿಯುತ್ತಿತ್ತು. ನಾನು ಹಿಂದಿನ ಸೀಟಿನಲ್ಲಿ ಆರಾಮಾಗಿ ಕಣ್ಣುಗಳನ್ನು ಮುಚ್ಚಿ ಕೂತಿದ್ದೆ. ಯಾಕೆಂದರೆ, ಟ್ಯಾಕ್ಸಿ ಭವನದಲ್ಲಿ ನುಸುಳಲು ಒಂದು ತೀಕ್ಷ್ಣ ತಿರುವನ್ನು ತೆಗೆದುಕೊಳ್ಳುತ್ತದೆ, ಆಗ ನಾನು ಕಣ್ಣುಗಳನ್ನು ತೆರೆಯುವೆ ಎಂಬುದು ನನಗೆ ತಿಳಿದಿತ್ತು. ಕೆಲವು ನಿಮಿಷಗಳ ನಂತರ ಟ್ಯಾಕ್ಸಿ ತಿರುವನ್ನು ತೆಗೆದುಕೊಂಡಿತು, ಆಗ ಒಂದು ವಿಶಲ್ ಶಬ್ದ ಕೇಳಿಸಿತು. ನಾನು ಕಣ್ಣುಗಳನ್ನು ತೆರೆದೆ. ವೃದ್ಧನಾಗಿದ್ದ ಟ್ಯಾಕ್ಸಿ ಡ್ರೈವರ್, ಟ್ಯಾಕ್ಸಿಯನ್ನು ಪೋರ್ಟಿಕೋ ಕೆಳಗೆ ನಿಲ್ಲಿಸಿದ್ದ. ಗೇಟ್ ಭಾಗದಿಂದ ಗೇಟ್‍ಕೀಪರ್ ರೇಗುತ್ತಾ ನಮ್ಮ ಕಡೆಗೆ ಬರುತ್ತಿದ್ದ.

    “ಹಲ್ಲೋ, ಟ್ಯಾಕ್ಸಿ ಅಲ್ಲಿ ನಿಲ್ಲಿಸಬಾರದು.” ಎಂದ ಗೇಟ್‍ಕೀಪರ್.

    “ಏನ್ ವಿಷಯ ಸಾರ್? ನಾವು ಹೆಚ್ಚು ಹೊತ್ತು ತಗೋಳಲ್ಲ. ಈಗಲೇ ತೆಗೀತೀನಿ.” ವೃದ್ಧ ಪಂಜಾಬಿ ಡ್ರೈವರ್ ಹೇಳಿದ.

     “ಇವತ್ತು ಇಲ್ಲಿ ಕಾರು ತರಲು ಆದೇಶ ಇಲ್ವಾ?”

     “ಯಾರಾದರು ವಿ.ಐ.ಪಿ.ಗಳು ಬರುತ್ತಿರುವರೇ?” ನಾನು ಕೇಳಿದೆ.

     “ಹೌದು ಸಾರ್.” ಎಂದ ಗೇಟ್‍ಕೀಪರ್.

     “ದುಡ್ಡು ಎಷ್ಟಾಯ್ತು, ಹೇಳಪ್ಪ?” ನಾನು ಟ್ಯಾಕ್ಸಿ ಡ್ರೈವರ್‍ನನ್ನು ನೋಡಿದೆ.

     “ಐದು ರೂಪಾಯಿ ಎಪ್ಪತ್ತು ಪೈಸೆ.”

     ನಾನು ಹತ್ತರ ನೋಟನ್ನು ಅವನೆಡೆಗೆ ಚಾಚಿದೆ. ವೃದ್ಧ ಡ್ರೈವರ್ ನೋಟನ್ನು  ಕೈಯಲ್ಲಿ  ತೆಗೆದು ಕೊಳ್ಳಬೇಕೆಂದಿದ್ದ, ಆಗಲೇ ಅಮಲಿಗೊಶವಾಗಿದ್ದ ಮದಭರಿತ ಆನೆಯೊಂದರಂತೆ ವಿದೇಶಿ ಕಾರೊಂದು ಇತ್ತ ಕಡೆಗೆ ಬರುವುದು ಕಂಡಿತು. ಟ್ಯಾಕ್ಸಿ ಮುಂದೆ ಹೋಗಿ ಒಂದು ಜಾಗದಲ್ಲಿ ನಿಂತಿತು; ಅಲ್ಲಿಂದ ವಿ.ಐ.ಪಿ.ಯನ್ನು ನಾವು ನೋಡಬಹುದಿತ್ತು, ಆದರೆ ಅವರು ನಮ್ಮನ್ನು ನೋಡಲು ಸಾಧ್ಯವಿರಲಿಲ್ಲ.

    ಅನೇಕ ಮದೋನ್ಮತ್ತ ಕಾರುಗಳ ನಡುವೆ ಒಂದು ದೊಡ್ಡ ಮದೋನ್ಮತ್ತ, ಕಪ್ಪು ಬಣ್ಣದ ಕಾರೊಂದರ ಮೇಲೆ ಧ್ವಜವನ್ನು ಹಾಕಲಾಗಿತ್ತು. ಆ ಕಾರು ಒಳಗೆ ನುಗ್ಗುತ್ತಲೇ ಚುರುಕಾದ ಅಧಿಕಾರಿಗಳ ಗುಂಪು ಪೋರ್ಟಿಕೋದಲ್ಲಿ ಬಂದು ನಿಂತಿತ್ತು. ಅದರಲ್ಲಿ ಮಿಸ್ಟರ್ ಮಲಾನಿ ಸಹ ಇದ್ದರು. ಎಲ್ಲರೂ ಅಲರ್ಟ್ ಆದರು. ವೃದ್ಧ ಪಂಜಾಬಿ ಟ್ಯಾಕ್ಸಿ ಡ್ರೈವರ್ ಸಹ ಅತ್ತಲೇ ನೋಡುತ್ತಿದ್ದ. ಕಪ್ಪು ಮದೋನ್ಮತ್ತ ಕಾರು ನಿಲ್ಲುವುದಕ್ಕೂ ಮೊದಲು, ಅದು ನೆಲದ ಮೇಲಲ್ಲ, ನೀರಿನಲ್ಲಿ ಈಜುತ್ತಿದೆ ಎಂಬಂತೆ ಅನೇಕ ಬಾರಿ ಕುಲುಕಾಡಿತು.

    ಸೂಟುಧಾರಿಯೊಬ್ಬ ಹಾರಿ ಬಂದು ಹಿಂದಿನ ಬಾಗಿಲನ್ನು ತೆರೆದ, ತೆರೆದು ಹಾಗೆಯೇ ನಿಂತ. ಇಡೀ ದೇಶದ ಸೂಟುಧಾರಿಗಳು ಮತ್ತು ಖಾದಿಧಾರಿಗಳ ನಡುವೆ ಸ್ಥಿರ ಒಪ್ಪಂದವೊಂದು ಆಗಿದೆ ಎಂಬಂತೆ ಕಂಡು ಬರುತ್ತಿತ್ತು. ಸುಮಾರು ನಿಮಿಷ-ಒಂದೂವರೆ ನಿಮಿಷದ ನಂತರ ಗಿಡ್ಡ ದೇಹದ, ಗಟ್ಟಿಮುಟ್ಟಾದ ಘೇಂಡಾಮೃತದಂಥ ವ್ಯಕ್ತಿಯೊಬ್ಬ, ಬಿಳಿ ಖಾದಿಯನ್ನು ಸುತ್ತಿಕೊಂಡು ಹೊರ ಬಂದ, ಅವನ ತಲೆಗೂದಲುಗಳು ಟೂಥ್ ಬ್ರಶ್‍ನ ಕೂದಲುಗಳಂತೆ ಚಿಕ್ಕದಾಗಿದ್ದು, ಬಿಳುಪಾಗಿದ್ದವು. ಅವು ನೇರವಾಗಿ ನಿಂತಿದ್ದವು. ಅವನ ಮುಖ ಸಿಟ್ಟಿನಿಂದ ಕೆಂಡವಾಗಿತ್ತು.

    ಮರುಕ್ಷಣ ಘಟಿಸಿದ್ದನ್ನು ಊಹಿಸುವುದು ಸುಮಾರಾಗಿ ಅಸಾಧ್ಯವಾಗಿತ್ತು. ಅಂದರೆ ವೃದ್ಧ ಪಂಜಾಬಿ ಟ್ಯಾಕ್ಸ್ ಡ್ರೈವರ್ ವೇಗವಾಗಿ ವಿ.ಐ.ಪಿ. ಕಡೆಗೆ ಹಾರಿ ಹೋಗಿ ಅವರನ್ನು ಅಪ್ಪಿಕೊಂಡ. ವಿ.ಐ.ಪಿ. ಅವನ ಸೊಂಟವನ್ನು ಬಳಸಿ ಅವನನ್ನು ಒಳಗೆ ಕರೆದೊಯ್ದರು.

    ನಾನೇನು ಮಾಡಲಿ? ಗೂಬೆಯಂತೆ ಟ್ಯಾಕ್ಸಿಯ ಬಳಿ ನಿಂತು, ಈಗ ನೋಡಿರುವುದೆಲ್ಲವೂ ನಿಜವೇ ಎಂದು ಯೋಚಿಸಿದೆ. ಸುಮಾರು ಹದಿನೈದು ನಿಮಿಷಗಳ ನಂತರ ಒಳಗಿನಿಂದ ವೃದ್ಧ ಪಂಜಾಬಿ ಟ್ಯಾಕ್ಸಿ ಡ್ರೈವರ್ ಬರುವುದು ಕಂಡಿತು.

    “ತಗೊಳ್ಳಿ ನಿಮ್ಮ ಹಣ?” ಅವನು ಜೇಬಿನಿಂದ ದುಡ್ಡನ್ನು ಹೊರತೆಗೆದ. ಈಗ ಅವನಿಂದ ಚಿಲ್ಲರೆಯನ್ನು ತೆಗೆದುಕೊಳ್ಳುವುದು ಸಹ ನನಗೆ ಉಚಿತವೆನಿಸುತ್ತಿರಲಿಲ್ಲ. ಈಗ ಈ ವೃದ್ಧನನ್ನು ಇನ್ನೂ ಚೆನ್ನಾಗಿ ಉಪಯೋಗಿಸಿಕೊಳ್ಳಬಹುದು. ಇವನಿಂದ ನಾಲ್ಕು ರೂಪಾಯಿ, ಮುವತ್ತು ಪೈಸೆ ತೆಗೆದುಕೊಳ್ಳುವುದು ಮೂರ್ಖತನ.

   “ಬೇಡ-ಬೇಡ, ನೀವೂ ಸಹ ವಿ.ಐ.ಪಿ. ಅವರ ಗೆಳೆಯರು.”

   “ಗೆಳೆಯರೇನು ಬಂತು, ಎಲ್ಲವೂ ಅವರವರ ಅದೃಷ್ಟ.”

   “ನಿಮಗೆ ಅವರು ಗೊತ್ತಾ?”

   “ಗೊತ್ತಾ? ಇವರನ್ನು ನಲ್ವತ್ತು ವರ್ಷಗಳ ನಂತರ ನೋಡಿದ್ದೇನೆ.”

   “ನಲ್ವತ್ತು ವರ್ಷಗಳ ಹಿಂದೆ ಎಲ್ಲಿ ಭೇಟಿಯಾಗಿದ್ದಿರಿ?”

   “ನಾನು ಕಶ್ಮೀರಿ ಗೇಟಿನ ಟ್ಯಾಕ್ಸಿ ಸ್ಟ್ಯಾಂಡಿನಲ್ಲಿ ನನ್ನ ಟ್ಯಾಕ್ಸಿ ನಿಲ್ಲಿಸುತ್ತಿದ್ದೆ. ಅಲ್ಲಿಯೇ ಇವರ ವರ್ಕ್‍ಶಾಪ್ ಇತ್ತು. ನಮ್ಮ ವಾಹನಗಳನ್ನು ರಿಪೇರಿ ಮಾಡುತ್ತಿದ್ದ.

   “ನಲ್ವತ್ತು ವರ್ಷಗಳ ನಂತರ ಗುರುತಿಸಿದಿರ?”

   “ಗುರುತಿಸದೇ ಏನು ಬಂತು? ನಾವಿಬ್ಬರೂ ಸೇರಿ ಬಹಳಷ್ಟು ಪಾಪ-ಕಾರ್ಯಗಳನ್ನು ಮಾಡಿದ್ದೇವೆ.”

    ಮಿಸ್ಟರ್ ಮಲಾನಿ ಎದುಸಿರು ಬಿಡುತ್ತಾ ವೇಗವಾಗಿ ನಮ್ಮ ಕಡೆಗೆ ಬರುತ್ತಿದ್ದರು. ಇನ್ನು ನನ್ನ ಸರದಿ ಎಂದು ಮನಸ್ಸಿನಲ್ಲಿ ಯೋಚಿಸಿದೆ. ವೃದ್ಧ ಪಂಜಾಬಿ ಟ್ಯಾಕ್ಸಿ ಡ್ರೈವರ್ ನನ್ನ ದೊಡ್ಡಪ್ಪನ ಆಪ್ತ ಗೆಳೆಯನಂತೂ ಆಗುತ್ತಾನೆ.

    “ಒಳಗೆ ಬನ್ನಿ.” ಅವರು ನನ್ನೊಂದಿಗೆ ವೃದ್ಧ ಟ್ಯಾಕ್ಸಿ ಡ್ರೈವರನನ್ನೂ ಸಹ ಒಳಗೆ ಎಳೆದುಕೊಂಡರು.

     “ನೋಡಿ, ನೀವು ಇಲ್ಲಿಂದ ಸುಮ್ಮನೆ ಹೋಗಲು ಹೇಗೆ ಸಾಧ್ಯ? ಬನ್ನಿ-ಬನ್ನಿ, ಜೋಶಿಯವರೇ ಬನ್ನಿ.” ಮಲಾನಿ ವೃದ್ಧ ಪಂಜಾಬಿ ಟ್ಯಾಕ್ಸಿ ಡ್ರೈವರನ ಭುಜವನ್ನೇ ಹಿಡಿದುಕೊಂಡಿದ್ದ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.