ಶುಕ್ರವಾರ, ಡಿಸೆಂಬರ್ 2, 2022
20 °C

ಸ್ಮಿತಾ ಮೈಸೂರ ಅವರ ಕಥೆ: ಮೌನ

ಸ್ಮಿತಾ ಮೈಸೂರ Updated:

ಅಕ್ಷರ ಗಾತ್ರ : | |

Prajavani

ಮುಕುಂದರಾಯರು ಮನೆಯಲ್ಲಿ ಒಂದೇ ಸಮನೆ ಅತ್ತಿಂದಿತ್ತ, ಇತ್ತಿಂದತ್ತ ಅಡ್ಡಾಡುತ್ತಿದ್ದರು. ಒಮ್ಮೆ ಅಡುಗೆ ಮನೆಗೆ, ಒಮ್ಮೆ ಪಡಸಾಲೆಗೆ, ಒಮ್ಮೆ ಹಿತ್ತಲಿಗೆ ಹೀಗೆ ಅಡ್ಡಾಡುತ್ತಲೇ ಇದ್ದರು. ಎಲ್ಲಿ ಹೋದರೂ ಬೆನ್ನು ಬಿಡದಂತೆ ಕಾಡುತ್ತಲೇ ಇತ್ತು ಒಂಟಿತನದ ಅನಾಥಭಾವ. ಹೀಗೇಕೆ ಅಡ್ಡಾಡುತ್ತಿದ್ದಿರಿ ಎಂದು ಕೇಳಲು ಸಹ ಯಾರೂ ಇಲ್ಲ ಮನೆಯಲ್ಲಿ. ಮಗ, ಸೊಸೆ ಇಬ್ಬರೂ ಸೊಸೆಯ ಊರಿಗೆ ಹೋದರೆ ಮೊಮ್ಮಕ್ಕಳಾದ ಸುಪ್ರಿಯಾ, ಸುರೇಂದ್ರ ಕಾಲೇಜಿಗೆ ಹೋಗಿದ್ದರು.

ಸುಮಾರು 75 ವರ್ಷದವರಾದ ಮುಕುಂದರಾಯರನ್ನ ಮಕ್ಕಳು, ಸೊಸೆ, ಮಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಸೊಸೆಯಂತೂ ಅವರನ್ನು ಬಿಡಲಾರದೆ ಬಿಟ್ಟುಹೋಗಿದ್ದಳು. ‘ಮಾವ, ಜ್ವಾಕಿ. ಭಾಳ ಹೊತ್ತು ಹೊರಗೆ ಹೋಗಬ್ಯಾಡ್ರಿ. ಭಾಳ ಟಿ.ವಿ ನೋಡಬ್ಯಾಡ್ರಿ, ವ್ಯಾಳ್ಯಾಕ ಸರಿಯಾಗಿ ಊಟ ಮಾಡ್ರಿ, ಒಳಗ ಲಾಕ್‌ ಮಾಡ್ಕೊಂಡು 9 ಅಂದ್ರ ಮಲಗಿಬಿಡ್ರಿ, ಸುಪ್ರಿಯಾ, ಸುರೇಂದ್ರ ಲಗೂನಾರs ಬರ್ಲಿ, ತಡಾ ಆಗಿ ಆರs ಬರ್ಲಿ ತಲಿ ಕೆಡಿಸಿಕೊಬ್ಯಾಡ್ರಿ. ಅವರು ಲಾಕ್‌ ತಕ್ಕೊಂಡು ಒಳಗ ಬರ್‍ತಾರ...’ ಒಂದs ಎರಡs ಮನಿಬಿಟ್ಟು ಹೋಗೋತನಕ ಸಲಹಾ ಸೂಚನಾ ಮುಗಿದೇ ಇಲ್ಲ. ಅವರ ಜೊತೆ ತಾನೂ ಹೋಗಿದ್ದರೆ ಆಗುತ್ತಿತ್ತು.

ಸೊಸೆಯ ಅಣ್ಣನ ಷಷ್ಠಬ್ಧ ಸಮಾರಂಭ. ಹೀಗಾಗಿ ಮಗ, ಸೊಸೆ ಹೋಗಲೇಬೇಕಿತ್ತು. ಆದರೆ, ಮುಕುಂದರಾಯರಿಗೆ ಸ್ಥಳ, ಹವೆ ಬದಲಾದರೆ ಆರೋಗ್ಯದಲ್ಲೂ ವ್ಯತ್ಯಾಸವಾಗುತ್ತಿತ್ತು. ಆದ್ದರಿಂದ ಹೋಗುವ ಮನಸ್ಸು ಮಾಡಿರಲಿಲ್ಲ. ಅವರಿಗೆ ತಮ್ಮ ಆರೋಗ್ಯದ ಕಾಳಜಿ ಬಹಳ. ತಿನ್ನುವುದರಲ್ಲಿ ಯಾವಾಗಲೂ ಹಿತಮಿತ. ಎಂದೂ ಬಾಯಿಚಪಲಕ್ಕೆ ಬಲಿಯಾಗುತ್ತಿರಲಿಲ್ಲ. ಹೀಗಾಗಿ ಅವರಿಗೆ ಆರೋಗ್ಯದ ಸಮಸ್ಯೆಗಳು ಕಡಿಮೆ. ಹೆಂಡತಿ ಮಂದಾಕಿನಿ ತೀರಿ ಹೋಗಿ ಎರಡು ವರ್ಷಗಳಾಗಿದ್ದವು.

ಎಲ್ಲಿ ನಿಂತರೂ, ಕುಳಿತರೂ ಸಮಾಧಾನವಾಗುತ್ತಿಲ್ಲ. ಈ ಬಡಾವಣೆಗಳೋ ತಮ್ಮನ್ನು ಕಾಡುತ್ತಿರುವ ಒಂಟಿತನಕ್ಕೆ ಪುಷ್ಟಿಕೊಡುವಂತಿವೆ. ಯಾವ ಮನೆ ನೋಡಿದರೂ ಮುಚ್ಚಿದ ಬಾಗಿಲು. ಅನವಶ್ಯಕವಾಗಿ ಯಾರೂ ಬಾಗಿಲು ತೆರೆಯುವುದಿಲ್ಲ. ಹೆಚ್ಚಿನ ಮನೆಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು. ಮಕ್ಕಳು ಶಾಲೆ ಕಾಲೇಜು ಅಂತ ಹೋದರೆ, ಮನೆಯಲ್ಲಿ ಇರುವವರು ಯಾರು? ಮುಚ್ಚಿದ ಗೇಟುಗಳು, ಇಂಟರಲಾಕ್‌ ಆದ ಬಾಗಿಲುಗಳು, ಉರಿಯುತ್ತಿರುವ ದೀಪ ಒಳಗೆ ಯಾರಾದರೂ ಇರಬಹುದೇನೋ ಎಂಬ ಭ್ರಮೆ ಹುಟ್ಟಿಸುತ್ತವೆ. ಸುಮಾರು 11 ಗಂಟೆಗೆ ಕಾಲೇಜಿಗೆ ಹೋದ ಸುಪ್ರಿಯಾ ಬರುವುದು 4ರ ನಂತರವೇ. ಹೋಗುವಾಗ ಅವಳ ಎಚ್ಚರಿಕೆಗಳು ಒಂದೇ ಎರಡೇ... ‘ಅಜ್ಜಾ, ನಾ ಬಂದು ಚಹಾ ತಿನಸು ಮಾಡ್ತೀನಿ. ಅಲ್ಲಿ ತನಕಾ ಆರಾಂ ಟಿ.ವಿ ನೋಡು. ನಿದ್ದೆ ಮಾಡು, ಲಾಕ್‌ ಮಾಡಿ ಒಳಗs ಇದ್ದಬಿಡು’. ಅಬ್ಬಾ ಇವರ ಮಾತು ಕೇಳಿ ಕೇಳಿ ಸಾಕಾಗಿ ಬಿಟ್ಟದ. ತಾವು ಹೊರಗ ಹೋಗೋದ್ರಿಂದ, ತಪ್ಪಿತಸ್ಥ ಮನೋಭಾವದಿಂದ ಹೇಳ್ತಾ ಇದ್ದಾರೋ ಬರೇ ಕಾಳಜಿಯಿಂದ ಹೇಳಲಿಕ್ಕೆ ಹತ್ಯಾರೋ ತಿಳಿವಲ್ಲದು.

ಇನ್ನ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಮಗನ ಫೋನು, ‘ಅಪ್ಪ ಅರಾಂ ಇದ್ದಿಯಲ್ಲ. ನಾ ಸೋಮವಾರ ಬರ್ತೇನಿ. ಕಾಳಜಿ ಮ್ಯಾಡಬೇಡ್ರಿ’. ಅವೇ ಮರುಕಳಿಸುವ ಮಾತುಗಳು. ಎಲ್ಲವೂ ಇದೇ. ಮನೆ, ಅಡ್ಡಾಡಲು ಕಾರು, ಕಾಳಜಿ ಮಾಡುವ ಮಗ, ಸೊಸೆ. ಆದರೂ ಯಾಕೆ ಇಂಥ ಶೂನ್ಯಭಾವ ಆವರಿಸುತ್ತಿದೆ?

ಮನಸ್ಸು ಬಾಲ್ಯ, ಹರಯದ ದಿನಗಳತ್ತ ಜಿಗಿಯಿತು. ಇದೇ ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಮುಕುಂದರಾಯರ ಮನೆ. ಮನೆ ತುಂಬಾ ಯಾವಾಗಲೂ ಜನ. ಅಪ್ಪ, ಅವ್ವ, ಅಜ್ಜ, ಅಜ್ಜಿ, ಅಜ್ಜನ ತಂಗಿ. ನಾವು ನಾಲ್ಕು ಜನ ಅಣ್ಣ ತಮ್ಮಂದಿರು, ಒಬ್ಬಳೇ ತಂಗಿ. ಆಗಾಗ ಬಂದು ಹೋಗುವ ತಾಯಿಯ ಅಕ್ಕ ತಂಗಿಯರು, ಅಣ್ಣ ತಮ್ಮಂದಿರು. ಅಪ್ಪನ ಅಕ್ಕತಂಗಿಯರು, ಸಮೀಪದಲ್ಲೇ ಇದ್ದ ಕಾಕಾ, ಕಾಕಿ.. ಓಹ್‌ ಯಾರಂತ ಹೇಳುವುದು? ಮನೆಯಲ್ಲಿ ಈಗಿನಂತೆ ಮೌನಕ್ಕೆ ಸ್ಥಾನವೇ ಇರಲಿಲ್ಲ. ಅಟ್ಟದ ಮೇಲೆ, ಅಂಗಳದಲ್ಲಿ, ಪಡಸಾಲೆಯಲ್ಲಿ ಅಡುಗೆ ಮನೆಯಲ್ಲಿ ಯಾರಾದರೂ ಇದ್ದೇ ಇರುತ್ತಿದ್ದರು. ಪಡಸಾಲೆಯಲ್ಲಿ ಅಜ್ಜ ಅಥವಾ ಅಪ್ಪ, ಬಂದವರ ಜೊತೆ ಮಾತನಾಡುತ್ತಿದ್ದರೆ, ಅಟ್ಟದ ಮೇಲೆ ತನ್ನ ಅಣ್ಣಂದಿರ ಶಾಲೆ, ಕಾಲೇಜಿನ ಅಭ್ಯಾಸ. ಅಡುಗೆ ಮನೆಯಲ್ಲಿ ಅವ್ವ, ಅಜ್ಜಿ ಹುರಿಯುವುದು, ಕುಟ್ಟುವುದು, ಬೀಸುವುದು, ಅಡುಗೆ ಮಾಡುವುದು ಹೀಗೆ ಏನಾದರೂ ಒಂದು ಕೆಲಸ. ತಂಗಿ ಅಂಗಳದಲ್ಲಿ ಗೆಳತಿಯರೊಡನೆ ಆಟವಾಡುತ್ತಿದ್ದ ದೃಶ್ಯ. ಎಲ್ಲವೂ ಮತ್ತೆ ಕಣ್ಣಿಗೆ ಕಟ್ಟುವಂತಿದೆ.

ಆ ದೃಶ್ಯಗಳು ಮತ್ತೆ ಕಾಣಬಹುದೇ ಎಂದು ಅಡುಗೆ ಮನೆ, ಪಡಸಾಲೆ, ವರಾಂಡಗಳಲ್ಲಿ ಹುಡುಕುವಂತೆ ಅಡ್ಡಾಡುತ್ತಾರೆ ಮುಕುಂದರಾಯರು. ಆದರೆ ಕಣ್ಣಿಗೆ ಬೀಳುವುದು ಅವೇ ನಿರ್ಜೀವ ಫರ್ನೀಚರಗಳು, ಟಿ.ವಿ., ಮೂಲೆಗಳನ್ನು ಅಲಂಕರಿಸಿದ ಹೂದಾನಿಗಳು. ರಸ್ತೆಯಲ್ಲಿ ಒಂದು ಕಾರು ಭರ್‍ರನೆ ಹೋಯಿತು. ಒಂದು ಕ್ಷಣ ನಿಶ್ಯಬ್ಧ ಮುರಿದಂತಾಗಿ ಮತ್ತೆ ಅದೇ ಮೌನ. ಮನಸ್ಸು ಮತ್ತೆ ಹಿಂದಕ್ಕೆ ಹಾರಿತು.

ಅಪ್ಪ ತರುತ್ತಿದ್ದ ಸಂಬಳ, ಅಜ್ಜನ ಪೆನ್ಷನ್‌, ಹೊಲದಿಂದ ಬರುತ್ತಿದ್ದ ಸ್ವಲ್ಪ ಕಾಳು, ಧಾನ್ಯ ಆಗ ನಮ್ಮ ಜೀವನಕ್ಕೆ ಸಾಕಾಗುತ್ತಿದ್ದವು. ಹಬ್ಬ ಮತ್ತು ಮನೆಯ ಎಲ್ಲ ಸಂಪ್ರದಾಯಗಳು, ಅನುಚಾನವಾಗಿ ತಪ್ಪದೇ ನಡೆಯುತ್ತಿದ್ದವು. ಪ್ರತಿ ಹಬ್ಬಕ್ಕೂ ಒಂದು ವಿಶಿಷ್ಟ ಊಟ. ಈಗ ಅದೆಲ್ಲ ಕನಸೇ ಸರಿ. ಇಬ್ಬರು ಅಣ್ಣಂದಿರಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕು ಹೋದರು. ತಂಗಿಗೆ ಮದುವೆಯಾಯಿತು. ಅಜ್ಜ ತನ್ನ 90ನೇ ವಯಸ್ಸಿನಲ್ಲಿ ತೀರಿಹೋದ. ಅಜ್ಜಿ ಮೊದಲೇ ಹೋಗಿದ್ದಳು. ಅಜ್ಜ ಹೋದ ವರ್ಷದಲ್ಲಿ ಅಜ್ಜನ ತಂಗಿಯೂ ಹೋದಳು. ತಮ್ಮ ಡಾಕ್ಟರ್‌ ಆಗಿ ಅಮೆರಿಕೆಗೆ ಹೋದ. ತಾಯಿ ತಂದೆ ನನ್ನ ಹತ್ತಿರವೇ ಉಳಿದರು. ನನಗೆ ಧಾರವಾಡದ ಕಾಲೇಜಿನಲ್ಲಿ ಅಧ್ಯಾಪಕ ಕೆಲಸ ಸಿಕ್ಕು ಹೊರಟಾಗ, ಅಪ್ಪ ಅವ್ವ ಬರಲೇ ಇಲ್ಲ. ಸವಣೂರಿನ ದೊಡ್ಡ ಮನೆ ಬಿಟ್ಟು ಬರಲು ಅವರಿಗೆ ಮನಸ್ಸು ಇರಲಿಲ್ಲ. ಆದರೆ, ಅಪ್ಪನಿಗೆ ಅನಾರೋಗ್ಯ ಉಂಟಾಗಿ ಡಾಕ್ಟರ್‌ ಹತ್ತಿರ ತೋರಿಸಲು ಧಾರವಾಡಕ್ಕೆ ಬಂದಾಗ ಅನಿವಾರ್ಯವಾಗಿ ಅವ್ವನೂ ಬಂದಳು. ಅಪ್ಪನಿಗೆ ದೀರ್ಘಕಾಲದ ಟ್ರೀಟ್‌ಮೆಂಟ್‌ ಆಗಿಯೂ ಉಳಿಸಿಕೊಳ್ಳಲಾಗಲೇ ಇಲ್ಲ. ಅಷ್ಟರಲ್ಲಿ ಮಂದಾಕಿನಿ ಮನೆ ತುಂಬಿ ಎರಡು ಮಕ್ಕಳೂ ಹುಟ್ಟಿದ್ದರು. ಅಪ್ಪ ಹೋಗಿ ಎರಡೇ ವರ್ಷದಲ್ಲಿ ಅವ್ವನೂ ಬಚ್ಚಲಲ್ಲಿ ಜಾರಿಬಿದ್ದ ನೆಪವಾಗಿ ಹೋಗೇಬಿಟ್ಟಳು. ಆಗ ಕಾಡಿದ ಅನಾಥಭಾವ ಈಗಿನಂಥದ್ದೇ... ಮುಕಂದರಾಯರು ಒಮ್ಮೆ ಮುಖ ಮೇಲೆತ್ತಿ ದಿಟ್ಟಿಸಿದರು.

ಸವಣೂರಿನ ಮನೆ, ಹೊಲ ನೋಡಿಕೊಳ್ಳುವವರಿಲ್ಲದೇ ಮಾರಲೇಬೇಕಾದ ಸ್ಥಿತಿ ಉಂಟಾಯಿತು. ತಂಗಿ, ತಂಗಿ ಮಕ್ಕಳು ಅಪ್ಪ, ಅವ್ವ ಇದ್ದಾಗ ಮೇಲಿಂದಮೇಲೆ ಬರುತ್ತಿದ್ದರು. ಆದರೆ, ನಂತರ ತಂಗಿಯ ಬರುವೂ ಕಡಿಮೆಯಾಯಿತು. ಈಗ ಅವಳಿಗೂ ವಯಸ್ಸಾಯಿತು. ಫೋನಿನಲ್ಲಿ ಮಾತನಾಡುತ್ತಾಳೆ. ‘ಅಣ್ಣ ನಾ ಬರಬೇಕಂದರ ನಂಜೋಡಿ ಯಾರಾರs ಬರಬೇಕು. ಯಾರಿಗೆ ಹೇಳಲಿ. ಮತ್ತ ಮಗನ್ನ ಕಾಡಬೇಕು. ಅವನಿಗೋ 108 ಕೆಲಸ’. ನನ್ನದೂ ಈಗ ಅದೇ ಸ್ಥಿತಿಯಲ್ಲವೇ. ನಾನು ಸ್ವತಂತ್ರವಾಗಿ ಹೋಗುವೆನೆಂದರೂ ಮಗ ಬೇಡವೆನ್ನುತ್ತಾನೆ. ನಾ ಕರೆದುಕೊಂಡು ಹೊಗ್ತೀನಿ ತಡಿ ಅನ್ನುತ್ತಾನೆ. ಹಟ ಮಾಡಿ ಎಲ್ಲಿಯಾದರೂ ಹೋದರೆ, ನಾ ಬರುವವರೆಗೆ ಮಗ, ಸೊಸೆ ಗಾಬರಿಯಿಂದ ಕಾಯುವುದು ನೆನೆದರೆ ಎಲ್ಲಿಯೂ ಹೋಗುವುದು ಬೇಡ ಅನ್ನಿಸುತ್ತದೆ. ಸವಣೂರಿನ ಮನೆಗೆ ಕಾಕಂದಿರು, ಅಪ್ಪನ ಕಾಕಾ, ಕಾಕು, ಅಪ್ಪನ ಅತ್ತೆ, ಮಾಮಾ ಅವರೆಲ್ಲ ಎಷ್ಟು ಅರಾಂ ಆಗಿ ಬರುತ್ತಿದ್ದರು. ಯಾರಾದರೂ ಅವರೊಡನೆ ಇದ್ದೇ ಇರುತ್ತಿದ್ದರು. ಆಗೆಲ್ಲ ಅವರಿಗೂ ಸಾಕಷ್ಟ ಬಿಡುವು. ಮನೆಯ ಹತ್ತಿರ, ಬಾಯ್ತುಂಬ ಹರಟೆ, ನಗು, ನಡುನಡುವೆ ಬರುತ್ತಿದ್ದ ಅವರಿವರ ಬಗೆಗಿನ ಟೀಕೆಗಳು, ಎಲ್ಲವೂ ಮನೆಯಲ್ಲಿ ಮೌನವಾದ ಜಾಗ ಎಲ್ಲಿದೆ? ರಾಯರ ತಲೆಯಲ್ಲಿ ನೂರೆಂಟು ಪ್ರಶ್ನೆಗಳು.

ಮಂದಾಕಿನಿ ಇರುವವರೆಗೆ, ಅಧ್ಯಾಪನ ವೃತ್ತಿಯಲ್ಲಿ ಇದ್ದಾಗ ಈ ಒಂಟಿತನ, ಮೌನ ಅಷ್ಟಾಗಿ ಕಾಡಿರಲಿಲ್ಲ. ಮಕ್ಕಳ ವಿದ್ಯಾಭ್ಯಾಸ, ಅವರ ಮದುವೆ, ತಮಗೆ ಹೆಂಡತಿಗೆ ಹೊಂದಿಕೊಂಡ ಸೊಸೆ ಯಾವುದೂ ತೊಂದರೆ ತರಲೇ ಇಲ್ಲ. ಅಡುಗೆಯಲ್ಲಿ ಮನೆಕೆಲಸದಲ್ಲಿ ಹೆಂಡತಿಗೆ, ಸೊಸೆಗೆ ನೆರವಾಗುವುದು, ವಾಕಿಂಗ್‌, ನನ್ನಂತೆ ನಿವೃತ್ತರಾದವರೊಡನೆ ಹರಟೆ, ಎಲ್ಲವೂ ಅರಾಂ ಆಗಿ ಸಾಗಿತ್ತು. ಆದರೆ, ಮಂದಾಕಿನಿ ಕ್ಯಾನ್ಸರ್‌ನಿಂದ ತೀರಿ ಹೋದಾಗ, ನಾನು ತೀರ ಒಂಟಿಯಾದೆ ಅನ್ನಿಸಿತು. 6 ತಿಂಗಳು ತಾನು ಮನುಷ್ಯನೇ ಆಗಿರಲಿಲ್ಲ. ದೂರದ ದೆಹಲಿಯಲ್ಲಿನ ಮಗಳ ಮನೆಗೆ ಹೋಗಿ, ಅಲ್ಲಿನ ಹವೆ, ಭಾಷೆ ಹೊಂದಾಣಿಕೆ ಆಗದೇ ಮತ್ತೆ ಧಾರವಾಡಕ್ಕೇ ಮರಳಿದ್ದೆ. ನನಗೂ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದಿದ್ದರೆ ಒಳ್ಳೆಯದಿತ್ತೇನೋ? ರಾಯರ ಯೋಚನೆಗೆ ಅವರಿಗೇ ನಂಗು ಬಂತು. ಇಬ್ಬರಿಗೆ ವಿದ್ಯಾಭ್ಯಾಸ, ಮದುವೆ ಈಗಿನ ಕಾಲದಲ್ಲಿ ಎಷ್ಟು ಕಠಿಣ. ಅಂಥದ್ದರಲ್ಲಿ? ರಾಯರಿಗೆ ತಮಗೆ ನೌಕರಿ ಸಿಕ್ಕಾಗಿನ ಒಂದು ಘಟನೆ ನೆನಪಾಯಿತು. ಕಾಲೇಜಿನ ನೌಕರಿಗೆ ತಾವು ಧಾರವಾಡಕ್ಕೆ ಹೊರಟಾಗ ಅವ್ವ ಕಣ್ಣು ತುಂಬಿಕೊಂಡು ಕೇಳಿದ್ದಳು, ‘ಮುಕುಂದ ನೀನೂ ದೂರ ಹೋಗ್ತೀಯಾ?’

‘ನೀವಿಬ್ಬರೂ ಎಷ್ಟು ದಿನ ಇಲ್ಲೇ ಇರ್‍ತೀರಿ. ಅಲ್ಲೇ ನನ್ನ ಜೋಡಿ ಬಂದ ಬಿಡ್ರಿ’

‘ನಿಮ್ಮಪ್ಪ, ಒಪ್ಪಬೇಕಲ್ಲಪಾ’

ತಾವು ಹುಟ್ಟಿ ಬೆಳೆದ ಮನೆ ಬಿಟ್ಟು ಬರಲು ಅಪ್ಪ ಒಪ್ಪಲೇ ಇಲ್ಲ. ಆದರೆ ನಂತರ ಅಪ್ಪನ ಅನಾರೋಗ್ಯದ ಕಾರಣ ನನ್ನ ಹತ್ತಿರ ಬಂದರು. ಅಪ್ಪ ಅವ್ವನ ಭೇಟಿಗೆ ಅಣ್ಣಂದಿರು, ಕಾಕಂದಿರು, ತಂಗಿ ಬರುತ್ತಿದ್ದರು. ಆಗೆಲ್ಲ ಮನೆ ತುಂಬ ಮಾತು, ಹರಟೆ. ಅಪ್ಪನೂ ತಮ್ಮ ಅನಾರೋಗ್ಯ ಮರೆತು ಮಾತಿನಲ್ಲಿ ಪಾಲ್ಗೊಳ್ಳುತ್ತಿದ್ದರು. ಕೇವಲ 25 ವರ್ಷಗಳ ಹಿಂದಿನ ವಾತಾವರಣ, ಸಂಬಂಧಗಳು ಈಗೇಕಿಲ್ಲ. ಬಸ್ಸು, ರೈಲು ಏನೆಲ್ಲ ಅನುಕೂಲವಿದ್ದರೂ ಆ ಗದ್ದಲ, ಜನಸಂದಣಿಯಿಂದ ಎಲ್ಲಿಯೂ ಹೋಗಲಾಗುತ್ತಿಲ್ಲವೇ? ಅಥವಾ ಸಂಬಂಧಗಳು ಯಾರ ಮನೆಗೆ ಹೋಗಬೇಕಾದರೂ, ಯಾರು ಮನೆಗೆ ಬಂದರೂ ಕಾರಣ ಹುಡುಕುತ್ತೇವೆ. ಏನು ಕೆಲಸ ಎಂಬಂತೆ ಮುಖ ನೋಡುತ್ತೇವೆ. ಯಾಕೆ ಹೀಗೆ? ಮುಕುಂದರಾಯರು ಎದ್ದು ಮತ್ತೆ ಅಡ್ಡಾಡತೊಡಗಿದರು.

ಟೆಲಿಫೋನ್‌, ಮೊಬೈಲ್‌, ಇಂಟರ್‌ನೆಟ್‌ ಆ ಕ್ಷಣದ ಮಾತುಕತೆ ಪೂರೈಸಿಕೊಡುತ್ತವೆ. ಇವುಗಳಿಂದ ಮನುಷ್ಯ ಸಂಬಂಧಗಳು ಹತ್ತಿರವಾಗುವ ಬದಲು ದೂರವಾಗುತ್ತಿವೆ. ಮನದುಂಬಿ ಮಾತನಾಡಿ, ನಕ್ಕು ಎಷ್ಟು ಕಾಲವಾಯಿತೋ? ಸಂಜೆ ವಾಕಿಂಗ್‌ ಹೋದಾಗ ನನ್ನ ವಯಸ್ಸಿನವರೇ ಸಾಕಷ್ಟು ಜನ ಸಿಗುತ್ತಾರೆ. ಹೆಚ್ಚಿನ ಮಾತುಕತೆ ರಿಪೀಟ್‌ ಆಗುತ್ತವೆ... ಹೀಗೆ ಯೋಚಿಸುತ್ತಲೇ ರಾಯರು ಟಿ.ವಿ ಹಚ್ಚಿ ತಮ್ಮ ಪ್ರೀತಿಯ ಕೌಟುಂಬಿಕ ಧಾರಾವಾಹಿಯಲ್ಲಿ ಮೈಮರೆತರು. ಮನುಷ್ಯನಿಗೆ ಸಿಟ್ಟು, ದುಃಖ, ಸಂತೋಷ, ಅಸೂಯೆ, ದ್ವೇಷ, ಪ್ರೀತಿ ಇದ್ದಾಗಲೇ ಜೀವನ ಅನುಭವಿಸಬಹುದು ಅನ್ನಿಸಿತು.

ಟಿ.ವಿ. ನೋಡುತ್ತಲೇ ನಿದ್ದೆ ಹೋದ ಮುಕುಂದರಾಯರಿಗೆ ಎಚ್ಚರವಾಗಿದ್ದು, ಮೊಮ್ಮಗಳು ಬಂದು ಟಿ.ವಿ. ಆಫ್‌ ಮಾಡಿ ಅವರನ್ನು ಎಬ್ಬಿಸಿದಾಗಲೇ. ‘ಯಾಕಮ್ಮ, ಟಿ.ವಿ. ಆಫ್‌ ಮಾಡ್ದೆ’.

‘ಅಜ್ಜ, ನಿದ್ದೆ ಮಾಡ್ಲಿಕ್ಕಾ ಹತ್ತಿದ್ದೆ. ಟಿ.ವಿ ಎಲ್ಲಿ ನೋಡ್ತಿದ್ದೆ’ ಎಂದು ಅಜ್ಜನ ಕೈಹಿಡಿದು ಎಬ್ಬಿಸಿ ಮಂಚದ ಮೇಲೆ ಮಲಗಿಸಿ ಕತ್ತಿನವರೆಗೂ ರಗ್ಗು ಹೊದಿಸಿದಳು.

ಸಂಜೆ 5ಕ್ಕ ಅಜ್ಜನನ್ನು ಎಬ್ಬಿಸಿ, ತಿಂಡಿ, ಚಹಾ ಅಜ್ಜನ ಕೈಗೆ ಕೊಟ್ಟಳು. ‘ಅಜ್ಜ, ನನಗ 6ಕ್ಕ ಟ್ಯೂಷನ್‌ ಅದ. ನಾ ಹೋಗುವಾಗ ಬಾಗಿಲು ಲಾಕ್‌ ಮಾಡಿಕೊಂಡು ಹೋಗ್ತೀನಿ’ ಅಂದಾಗ ರಾಯರು, ‘ಬ್ಯಾಡ್‌, ನಾನೂ ವಾಕಿಂಗ್‌ಗೆ ಹೋಗ್ತೀನಿ. ಹೋಗುವಾಗ ಲಾಕ್‌ ಮಾಡಿಕೊಂಡು ಹೋಗ್ತೀನೇಳು’..

‘ಹಂಗ ಮಾಡು, ನೋಡಿ ಸರಿಯಾಗಿ ಲಾಕ್‌ ಮಾಡ ಮತ್ತ’

‘ಯಾಕ ನಿನಗ ಸಂಶಯ ಏನು? ನೀನs ಲಾಕ್‌ ಮಾಡು. ನಾನು ಹೊಂಟೆ ವಾಕಿಂಗ್‌ಗೆ’ ರಾಯರು ಎದ್ದೇಬಿಟ್ಟರು.

ಪೆಚ್ಚಾದ ಸುಪ್ರಿಯಾ ಮಾತು ಬದಲಿಸಿ, ‘ನೀ ವಾಕಿಂಗ್‌ಗೆ ಹೋಗೋದು ಅದS ರೈಲ್ವೆ ಗೇಟ ಹತ್ತಿರ ಅಲ್ಲ’

‘ಯಾಕ, ನೀ ಹುಡುಕಲಿಕ್ಕ ಬರೂವಾಕಿ’ ಎಂದಾಗ, ‘ಅಜ್ಜಾ, ಯಾಕ ಮಾತ್‌ ಮಾತಿಗೆ ಸಿಟ್ಟಿಗೇಳ್ತಿ? ಓಕೆ. ನಾ ರೆಡಿ ಆಗ್ತೇನಿ’ ಎನ್ನುತ್ತಾ ಒಳಹೋದಳು. ‘ಸುರೇಂದ್ರ ಯಾವಾಗ ಬರ್ತಾನೆ ಗೊತ್ತಿಲ್ಲ ಅಜ್ಜ, ಒಂಬತ್ತು ಒಂಬತ್ತೂವರಿ ಆಗ್ತದ ಬಹುಶಃ’ ಎಂದಳು ಸುಪ್ರಿಯಾ.

ಅಜ್ಜ ಮೊಮ್ಮಗಳು ಇಬ್ಬರೂ ಮನೆ ಬಿಟ್ಟರು. ಮುಕುಂದರಾಯರು ತಮ್ಮ ಗೆಳೆಯರನ್ನು ಹುಡುಕುತ್ತಾ ವಾಕಿಂಗ್‌ ಹೊರಟರು. ವಾಕಿಂಗ್‌ನಲ್ಲಿ ಸಿಕ್ಕ ಗೆಳೆಯರ ಜೊತೆಗೂ ಅದೇ ಮಾತನಾಡಿದರು.

ಮನೆಗೆ ಬರುವ ಹೊತ್ತಿಗೆ ಮಗ ಊರಿನಿಂದ ಬಂದುಬಿಟ್ಟಿದ್ದ. ‘ನಾಳೆ ಬರ್ತೀನಿ ಅಂದಿದ್ದಲ್ಲ’ ಎಂದರು.

‘ಹೌದಪ್ಪ, ಏನೋ ಕೆಲಸ ಬಂತು. ಬಂದುಬಿಟ್ಟೆ’ ಎಂದ ಮಗ. ಆದರೆ ಸುಪ್ರಿಯಾ ಅಪ್ಪನಿಗೆ ಫೋನ್‌ ಮಾಡಿ, ಅಜ್ಜ, ತೀರ ಸಿಟ್ಟಿನಿಂದ ಮಾತಾಡಿದ್ದು ಹೇಳಿ ಅಪ್ಪನಿಗೆ ಬರುವಂತೆ ಹೇಳಿದ್ದು ರಾಯರಿಗೆ ಗೊತ್ತಾಗಲೇ ಇಲ್ಲ. ಮಗನನ್ನೇ ಒಂದು ಕ್ಷಣ ದಿಟ್ಟಿಸಿದ ರಾಯರು ಎದ್ದು ಮಲಗುವ ಕೋಣೆಗೆ ಹೊರಟರು. ಮಗ ಅವರ ಹಿಂದೆಯೇ ಬಂದು, ‘ಅಪ್ಪಾ, ಅರಾಂ ಇದ್ದೀಯಲ್ಲ’ ಎಂದಾಗ ರಾಯರು ನಕ್ಕು, ‘ನನಗೇನ ಆಗೇದೋ? ಏನಾರ ನನಗ ಅರಾಂ ಇಲ್ಲ ಅನ್ನಸಲಿಕ್ಕೆ ಹತ್ತದೇನ ಮತ್ತ?’ ಎಂದರು. ‘ಹಂಗಲ್ಲಪ್ಪ’ ಎಂದ ಮಗ. ಆಗ ಮುಕುಂದರಾಯರು ನಗುತ್ತಾ, ‘ಈಗೀಗ ಎಲ್ಲರೂ ಹಂಗS ಕೇಳ್ತಾರ. ನೀ ಮಗಾ ಕೇಳೂದು ನಿನ್ನ ಕರ್ತವ್ಯ. ಆದರ ದಾರಿ ಒಳಗ ಭೆಟ್ಟಿ ಆದವರೂ ಸಹಿತ ಅರಾಂ ಇದ್ದೀರಲ್ಲ ಮುಕುಂದರಾಯರೇ ಅಂತಾರ. ಬ್ಯಾರೆ ಮಾತು ಹೊಳಿಯೋದೇ ಇಲ್ಲೇನ ಅವರಿಗೆ ಅಥವಾ ಈ ಮುದುಕನ ಜೊತಿ ಏನ ಮಾತು? ಅಂತ ವಿಚಾರ ಮಾಡ್ತಾರೋ ಏನೋ? ಎಂದು ತಮ್ಮಲ್ಲೇ ಗೊಣಗತೊಡಗಿದರು.

ಅಪ್ಪನಿಗೆ ಈಗ ಬೇಕಾದದ್ದು ಆರೈಕೆ ಎಂದು ಮಗ ಪ್ರಸನ್ನನಿಗೆ ಅನ್ನಿಸಿ, ‘ತಡಿ ಅಪ್ಪಾ ಚಹಾ ಮಾಡ್ತೀನಿ’ ಎನ್ನುತ್ತಾ ಒಳಗೆ ಹೋದ. ಚಹಾ ಕಪ್‌ ಹಿಡಿದು ಬಂದು ಅಪ್ಪನಿಗೂ ಕೊಟ್ಟು ಸುದ್ದಿಯ ಚಾನೆಲ್‌ ಹಾಕಿದ. ಆದರೆ, ಮುಕುಂದರಾಯರು, ‘ಊಟದ ಹೊತ್ತಿನ್ಯಾಗ ಚಹಾ ಯಾಕೋ?’ ಎಂದು ಸ್ವಲ್ಪವೇ ಕುಡಿದು ಇಟ್ಟರು. ‘ಪ್ರಸನ್ನ ನಾಳೆ ನಿನಗ ಸೂಟಿ ಅಲ್ಲ’. ‘ಇಲ್ಲಪ್ಪ ಮಧ್ಯಾಹ್ನದ ಮ್ಯಾಲೆ ಹೋಗಬೇಕು. ಯಾಕಪ್ಪಾ’ ಎಂದ. ‘ಒಂದ ಕೆಲಸ ಮಾಡು. ಮುಂಜಾನೆ ಹೋಗುವಾಗ ಸುಶೀಲನ್ನ ಮನಿಗೆ ನನ್ನ ಬಿಟ್ಟು ಹೋಗು. ಸಂಜಿ ಮುಂದ ಕರಿಲಿಕ್ಕೆ ಬಾ’ ಎಂದರು. ‘ಸುಶೀಲಾ ಅತ್ಯಾನ್ನ ಮನಿಗೇs ಆಗಲಿಬಿಡು. ಅಂದ್ಹಂಗ ಊರಾಗ ಇದ್ದಾಳೇ ಇಲ್ಲ ತಡಿ ಫೋನ್‌ ಮಾಡಿ ಕೇಳ್ತೀನಿ’ ಎಂದು ಫೋನ್‌ ಮಾಡಿದಾಗ ಸುಶೀಲ ಊರಲ್ಲೇ ಇದ್ದದ್ದು ತಿಳಿಯಿತು. ಅಲ್ಲದೇ ಅವಳು ಇವರು ಬರುವ ಸುದ್ದಿ ತಿಳಿದು ಬಹಳ ಸಂತೋಷಪಟ್ಟಳು.

ಮರುದಿನ ಮುಕುಂದರಾಯರು ಎಲ್ಲರಿಗಿಂತ ಬೇಗನೇ ಎದ್ದು ತಯಾರಾದರು. ಅಪ್ಪನ ಆತುರ ಕಂಡು ಪ್ರಸನ್ನ ತಾನೂ ಬೇಗ ರೆಡಿಯಾಗಿ ಕಾರನ್ನು ಹೊರತೆಗೆದ. ಆಗ ಮುಕುಂದರಾಯರಿಗೆ ನೆನಪಾಯಿತು. ‘ಅಲ್ಲೋ ಪ್ರಸನ್ನ ತಿನಿಸು ಆಗಲೇ ಇಲ್ಲ’. ‘ಅತ್ಯಾನ್ನ ಮನಿಗೆ ಹೊಂಟೀವಿ, ಚಿಂತಿಯಾಕ ಅಲ್ಲೇ ಎಲ್ಲ ಆಗ್ತದೆ’. ಹೌದಲ್ಲ ಅನ್ನಿಸಿತು ಮುಕುಂದರಾಯರಿಗೆ. ಸುಶೀಲಾಳ ಜೊತೆ ಹರಟುತ್ತಾ ತಿನಿಸು, ಚಹಾ, ಸೇವಿಸುವ ಸುಖ ಮತ್ತೆ ಯಾವಾಗ ಸಿಗುವುದೋ... ಸುಶೀಲಾಳಿಗೂ ಇವರನ್ನು ಕಂಡು ಬಹಳ ಸಂತೋಷವಾಯಿತು. ಆದರೆ, ಮನೆಯಲ್ಲಿ ಸುಶೀಲಾಳ ಹೊರತಾಗಿ ಯಾರೂ ಇರಲಿಲ್ಲ. ಮಗ ಕಚೇರಿಗೆ, ಸೊಸೆ ಯಾರದೋ ಮದುವೆಗೆ ಹೋಗಿದ್ದಳು. ಇವರಿಗಾಗಿ ತಿನ್ನಲು ಏನನ್ನಾದರೂ ಮಾಡಲು ಅವಳು ಎದ್ದಾಗ ಪ್ರಸನ್ನ, ಅವಳನ್ನು ಕೂಡ್ರಿಸಿ ತಾನೇ ಒಳಗೆ ಹೋಗಿ ಅವಲಕ್ಕಿ ಚಹಾ ಮಾಡಿ ತಂದ. ಎಲ್ಲರೂ ಮಾತನಾಡುತ್ತಾ ತಿಂದರು. ಸುಶೀಲಾ ಅಪ್ಪ ಅವ್ವನನ್ನು ನೆನೆದು ಕಣ್ಣೀರು ತೆಗೆದಳು. ಮುಕುಂದರಾಯರೇ ಸಮಾಧಾನ ಮಾಡಬೇಕಾಯಿತು. ‘ನಡಿ, ಸುಶೀಲ ನಮ್ಮ ಮನಿಗೆ ಹೋಗೋಣ. ಅಲ್ಲೇ ಊಟ ಮಾಡೂಣಂತ’ ಎಂದಾಗ ‘ಮಧ್ಯಾಹ್ನ ಸುರೇಶ ಮನಿಗೆ ಬರ್ತಾನ. ಅನ್ನ ಸಾರು ಮಾಡಬೇಕು. ನೀವು ಇಬ್ಬರೂ ಇಲ್ಲೇ ಇದ್ದ ಬಿಡ್ರಿ. ಊಟ ಮಾಡೀರಂತ’ ಎಂದಳು ಸುಶೀಲ. ಆಗ ಪ್ರಸನ್ನ, ನೀನು ಅಪ್ಪ ಊಟಾಮಾಡ್ರಿ. ನನಗೆ ಕೆಲಸ ಅದ. ರಾತ್ರಿ 8ಕ್ಕೆ ಬಂದು ಅಪ್ಪನ್ನ ಮನಿಗೆ ಕರೆದೊಯ್ಯತೀನಿ’ ಎಂದು ಎದ್ದ.

ಅಣ್ಣ, ತಂಗಿ ಹರಟುತ್ತಾ ಕುಳಿತರು. ಆಗ ಮುಕುಂದರಾಯರು, ತಮ್ಮನ್ನು ಇತ್ತೀಚೆಗೆ ಬಿಟ್ಟು ಬಿಡದೇ ಕಾಡುತ್ತಿರುವ ಮೌನ, ಒಂಟಿತನದ ಪ್ರಜ್ಞೆಯನ್ನು ಹೇಳಿಕೊಂಡರು. ‘ಸುಶೀಲಾ ಮನಿ ಒಳಗೆ ಎಲ್ಲ ಅದ. ಅಡ್ಡಾಡಲಿಕ್ಕ ಕಾರು, ಕೂತಲ್ಲೇ ಕಾಣಿಸುವ ಸಿನಿಮಾ, ಆದ್ರ ನಾವ ಸಣ್ಣವರಿದ್ದಾಗ ಅಡ್ಡಾಡಲಿಕ್ಕೆ ಸೈಕಲ್‌ ಸಹಿತ ಇರಲಿಲ್ಲ. ಸಿನಿಮಾ ನೋಡಬೇಕು ಅಂದ್ರ ಟೆಂಟ್‌ ಸಿನಿಮಾನೆ ಗತಿ. ಆದ್ರ, ಆವಾಗ ಮನ್ಯಾಗ ಸಂತೋಷ, ನೆಮ್ಮದಿ ಎಲ್ಲ ಇತ್ತು. ಈಗ್ಹಿನಂಗ ವಯಸ್ಸಾದವರಿಗೆ ಅನಾಥಭಾವ, ಒಂಟಿತನ ಕಾಡ್ತಿರಲಿಲ್ಲ. ಮನ್ಯಾಗ ಎಲ್ಲ ಇದ್ದರೂ ಮನಿ ತುಂಬಾ ತುಂಬಿರೋ ಮೌನ, ನಿಶ್ಯಬ್ಧ, ಬೇಸರ ಬೆನ್ನ ಬಿಡದೆ ಕಾಡ್ತಾವ. ಒಂದ ನಮೂನಿ ಹುಚ್ಚ ಹಿಡಿದ್ಹಂಗ ಆಗ್ತದ’.

‘ಅಣ್ಣ ನೀ ಹೇಳೂದು ಖರೆ. ಈಗ ವಯಸ್ಸಾದವರಿಗೆ ಹಿಂದೆಲ್ಲ ಆಗೋದು ಸಹಜ. ಅದಕ್ಕ ನಾನು ಗುರುಚರಿತ್ರೆ ಓದುಕೋತ ಕೂತಬಿಡ್ತೀನಿ’. ‘ನಿನ್ನ ಮಾತು ಒಪ್ತೀನಿ. ಆದ್ರ, ನಮ್ಮಪ್ಪ ಅವ್ವ, ಅಜ್ಜ, ಅಜ್ಜಿ, ಕಾಕಾ, ಕಾಕು, ಅತ್ಯಾ ಎಲ್ಲರೂ ಎಷ್ಟ ವಯಸ್ಸಾದ್ರೂ ಎಷ್ಟ ಖುಷಿಯಿಂದ ಇದ್ದರು. ಅವರ ಮಾತಿಗೆ, ವಟಗುಟ್ಟುದಕ್ಕ ಕಿವಿ ಆಗವರು ಅಂದ್ರ ಕೇಳವರು ಒಬ್ಬರಲ್ಲ, ಒಬ್ಬರು ಇದ್ದೆ ಇರ್ತಿದ್ರು. ಮಕ್ಕಳಿಗೆ, ಮೊಮ್ಮಕ್ಕಳಿಗೆ ಕಥಿ ಹೇಳೋದು, ತಮ್ಮ ಅನುಭವ ಹೇಳೂದು ಇದೆಲ್ಲದರಿಂದ ಅವರಿಗೆ ತಾವು ಒಂಟಿ ಅನ್ನು ಭಾವನೆ ಬರ್ತಾನ ಇರಲಿಲ್ಲ’.

‘ಹೌದು, ಆದರ ಈಗ ನಮ್ಮ ಮಾತು ಕಥಿ ಯಾರಿಗೆ ಬೇಕು ಹೇಳು. ಅವರ ಆಫೀಸು, ಕಾಲೇಜು ಅವರ ಫ್ರೆಂಡ್ಸ್‌ ನಮ್ಮ ಜೊತಿ ಮಾತ ಆಡ್ಲಿಕ್ಕೆ ವ್ಯಾಳ್ಯಾನು ಇರೂದಿಲ್ಲ. ಲಗೂನ ಹುಡುಗರಿಗೆ ನಾಲ್ಕು ಅಕ್ಕಿಕಾಳು ಹಾಕಿ ಮದುವಿ ಮಾಡಿ ಮರಿಮಕ್ಕಳು ಅವರ ಜೊತೆ ಮಾತಾಡೂಣ ಅಂದ್ರ, ಈ ಅಜ್ಜಿಗೆ ಬರೆ ನಮ್ಮ ಮದುವಿ ಚಿಂತಿನ ಅಂತ ದೂರ ಹೋಗಿ ಬಿಡ್ತಾರ. ನೀನು ವಾಕಿಂಗ್‌ ಅಂತ ಹೊರಗ ನಾಲ್ಕಮಂದಿ ಜೊತೆ ಮಾತಾಡ್ತಿ. ನಾನೂ ಇನ್ನ ಮ್ಯಾಲೆ ದಿನಾ ಗುಡಿಗಾರ ಹೋಗಬೇಕು ಅಂತ ಮಾಡೀನಿ. ನೀ ಒಬ್ಬಕಿನ ಹೆಂಗ ಹೋಗ್ತಿ ಅಂತ ಮಗಾ. ಅದೇನರ ಆಗಲಿ. ಹೋಗೇಬಿಡೂದು ಅನ್ನಕೊಂಡಿನಿ’ ಎಂದಳು ಸುಶೀಲ. ಅವಳ ಧ್ವನಿಯಲ್ಲಿ ನಿಟ್ಟುಸಿರು ಎದ್ದು ಕಾಣುತ್ತಿತ್ತು.

ಮುಕುಂದರಾಯರು ಅವಳ ಮಾತನ್ನು ಅನುಮೋದಿಸುವಂತೆ, ‘ಹೌದು ಸುಶೀಲ, ಏನರೇ ಒಂದು ಹವ್ಯಾಸ ಹಚ್ಚಕೊಬೇಕು. ಇಲ್ಲದಿದ್ದ ಹುಚ್ಚು ಹಿಡಿದ್ಹಂಗ ಆಗ್ತದ. ನಿನ್ನ ನಾ ಮಾತಾಡಿದು ಕೇಳಿ ಸುಪ್ರಿಯಾ ಗಾಬರಿ ಆಗಿಬಿಟ್ಟಳು. ಹೋದ ವಾರದ್ದ ಇರಬೇಕು. ಸುಧಾ ವಾರಪತ್ರಿಕೆಯೊಳಗ ಇಂಥಾದ್ದ ವಿಷಯದ ಬಗ್ಗೆ ಬರದಿದ್ರು. ಇಂಥಾ ಸಂದರ್ಭದಾಗ ನಿಮ್ಮ ಊರಿನ ಅನಾಥಾಶ್ರಮಕ್ಕ ಭೇಟಿಕೊಡ್ರಿ. ಅಲ್ಲಿನ ಮಕ್ಕಳಿಗೆ ನಿಮ್ಮ ಜ್ಞಾನದಧಾರೆ ಹರಸ್ರಿ. ಇಂದಿನ ಈ ಬದಲಾದ ಜಗತ್ತಿನಲ್ಲಿ, ನಮ್ಮನ್ನು ಕಾಡುವ ಅನಾಥಭಾವಕ್ಕ ಪರಿಹಾರ ಆಗಬಹುದು ಅಂತ’.

ಅದಕ್ಕೆ ಸುಶೀಲಾ, ‘ಅನಾಥರಿಗೆ, ಅನಾಥರ ಜೊತೆಗಾರರು ಅಂದ್ಹಂಗಾತು ಹಂಗಾರ’ ಎಂದಳು.

ಅವಳ ತಮಾಷೆಗೆ ನಗುವ ಸ್ಥಿತಿಯಲ್ಲಿ ಮುಕುಂದರಾಯರು ಇರಲಿಲ್ಲ. ತಮ್ಮ ಆಲೋಚನೆಯಲ್ಲೆ ಮುಳುಗಿದ್ದರು.

ಜೀವನದಲ್ಲಿ ಎಲ್ಲ ಅನುಭವಿಸಿ, ಎಲ್ಲ ಸುಖ ಹೊಂದಿ ತಾವು ಅನಾಥರು, ಒಂಟಿತನದ ಬಲಿಪಶು ಅಂದುಕೊಳ್ಳುತ್ತೇವೆ. ಬದಲಾದ ಕಾಲ, ಸುಖದ ಜೊತೆ ದುಃಖವನ್ನು ತಂದಿದೆ ಅಷ್ಟೇ. ಆದರೆ ಅನಾಥ ಮಕ್ಕಳನ್ನು ಕಾಡುವ ನೋವು, ನಿರಾಶೆ ಎಂಥದ್ದು? ಹುಟ್ಟುತ್ತಲೇ ತಂದೆ ತಾಯಿಯಿಂದ ದೂರವಾಗಿ, ಪ್ರೀತಿ ವಾತ್ಸಲ್ಯದ ಕೊರತೆಯಿಂದ ಮನಸ್ಸಿನಲ್ಲಿ ಮಡುಗಟ್ಟಿದ ದುಃಖ, ಅದು ತರುವ ಅನಾಥಭಾವ, ಸಹಿಸಲಾಗದ ಮೌನ... ಇದನ್ನು ಆ ಮಕ್ಕಳು ಹೇಗೆ ಸಹಿಸಿಕೊಳ್ಳಬಲ್ಲರು. ತಾವು ಅವರೊಡನೆ ಇದ್ದು ತಾವು ಅನುಭವಿಸಿದ ಸುಖ, ಸಂತೋಷ, ಪ್ರೀತಿ ವಾತ್ಸಲ್ಯಗಳನ್ನು ಅವರಿಗೇಕೆ ಧಾರೆ ಎರೆಯಬಾರದು? ನಮ್ಮ ಅನುಭವ ವಿಚಾರಗಳನ್ನು ಅವರಿಗೆ ನೀಡಿ, ನಮ್ಮನ್ನು ಕಾಡುವ ಮೌನ, ಒಂಟಿತನಗಳನ್ನು ಹತ್ತಿರಬಾರದಂತೆ ದೂರ ಓಡಿಸಬಾರದೇಕೆ ಎನ್ನಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.