ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥಾ ಸ್ಪರ್ಧೆ 2021: ಮಂಜುನಾಥ್ ಹಿಲಿಯಾಣ ಅವರ ಕಥೆ ‘ಜಲಬಾಂಬು‘..!

Last Updated 20 ನವೆಂಬರ್ 2021, 22:00 IST
ಅಕ್ಷರ ಗಾತ್ರ

‘ಈ ಬಾನಿಗೊಂದು ಬಾಂಬು ಬಿದ್ದಿತ ಕಾಂತು. ಹಂಗಾರೆ ಈ ಚಿರಿ..ಚಿರಿ ಮಳಿಗೆ ಮುಕ್ತಿಯೇ ಇಲ್ಯಾ. ನಿನ್ನೆಯಿಂದ ಒಂದೇ ಸಮ ಬೆರ‍್ಸಕಂಡು ಬಂದವರ ತರಹ ಹೊಡಿತ ಇತ್ತಲೆ. ಮೈಮಂಡಿಯೆಲ್ಲ ಗಡ ಗಡ ಅಂಬೊ ಚಳಿ ಬ್ಯಾರೆ. ಮನಿ ಕಣ್ಣದವರಿಗೆ ಬಂದು ಮುಟ್ಟಿರುವ ಈ ಹೊಳಿ ಅಬ್ಬರು ಕಂಡ್ರೆ ಏದಿ ನಡುಗುತ್ತು. ಹಟ್ಟಿಯಂಗೆ ಗಂಟಿ ಕರುಗಳು ಮೇವಿಲ್ದೆ ಒರಲ್ತಿದ್ದೋ.. ಮುಂದೆ ಎಂತ ಆತ್ತೋ ಆ ತೆಂಕ್ಲಾಯಿ ಜಟ್ಟಿಂಗನೇ ಬಲ್ಲ’

ಧೋ..ಎಂದು ಎಡಬಿಡದೇ ಸುರಿಯುತ್ತಿರುವ ಅಸಾಡಿ ತಿಂಗ್ಳ ಜಮ ಮಳೆಗೆ ಹಿಡಿ ಶಾಪ ಹಾಕುವುದು ಬಿಟ್ಟು ಬೇರೆನೂ ತೋರುತಿಲ್ಲ ರುಕ್ಕಿಗೆ. ನಿಮಿಷಕ್ಕೊಂದು ಸಲ ಕೂತಲಿಂದೆದ್ದು ಹೊರ ನೀಕಿದಾಗ ಉಕ್ಕಿ-ಸೊಕ್ಕಿ ಹರಿಯುತ್ತಿರುವ ಕಮಲ ನದಿಯ ರೌದ್ರ ಅವತಾರು ಕಂಡಾಗ ಎದಿಯೊಳ್ಗೆ ಮುಯಿಡು ಮೀನು ಉಯಿಡಾಡಿದಂತ ಭಾವ.

ರುಕ್ಕಿ ತನ್ನ ಅರವತ್ತು ವರ್ಷದ ಜೀವನದಂಗೆ ಹೊಳಿ ನೀರು ಇಷ್ಟು ಭರ್ತಿಯಾದುದ್ದನ್ನು ಕಂಡಿದ್ದೆ ಇಲ್ಲ. ಇಂತಹ ನೂರುಪಟ್ಟು ರಾಪಿನ ಮಳಿ ಈ ಮುಂಚಿನ ಮಳಗಾಲದಂಗೆ ಬಂದು ಹೋಗಿದೆ. ವಾರಗಟ್ಲೆ ಸಂದೂ ಕಡಿಯದಂತೆ ಬಾರ‍್ಸಿದೆ. ಆದ್ರೆ ಕಮಲಾ ಅದೆಲ್ಲವನ್ನು ಆರಾಮಾಗಿ ಹೊತ್ತು ಸರಾಗವಾಗಿ ಹರಿದು ತನ್ನ ಹಿರಿಯಬ್ಬೆ ವಾರಾಹಿ ನದಿಯ ಒಡಲಿಗೆ ನೂಕಿ ನ್ಯಗೆ ಚೆಲ್ಲುತ್ತಿದ್ದಳು. ಹೊಳಿ ನೀರು ಉಕ್ಕಿ ಬೆಳಿ ನಾಶ ಆಯ್ತು ಅಂದು ಮರ್‍ಕಿದ ಒಬ್ಬ ರೈತನನ್ನು ಈ ಹಸರೂರಂಗೆ ರುಕ್ಕಿ ಇದುವರೆಗೆ ಕಂಡಿಲ್ಲ. ಆದ್ರೆ ಎರಡು ವರ್ಷದ ಈಚೆಗೆ ಊರಿಗೊಂದು ಹಪ್ಪು ಮಾರಿ ಬಂದು ವಕ್ಕರ್ಸಿತ್ತು. ಅದ್ರ ದಸಿಯಿಂದೆ ಹೊಸದೊಂದು ತೊಂದ್ರಿ.. ತಾಪತ್ರಯ ಊರಿಗೆ ಬಂದು ಕೂತಿತು.


ಕಳೆದ ಬ್ಯಾಸಿಗಿ ತಿಂಗಳ ಒಂದಿನ ಹೊರಗಿನ ರಣ ಬಿಸ್ಲಿಗೆ ಹೆದರಿ ಮನಿಯೊಳಗೆ ಕಾಲುನೀಡಿ ಕೂತು ಮಂಡಿಗೆ ಬಾಚಣಿಗೆ ಹಾಕಿಕೊಳ್ತಾ ಇದ್ಲು ರುಕ್ಕಿ. ದೇವಿ ಮಹಾತ್ಮೆ ಆಟದಂಗೆ ಸೂಡಿ ಹಿಡ್ಕಂಡು ಓಡಿ ಬಪ್ಪೋ ಕೋಣನ (ಮಹಿಷ) ಅವತಾರ ಕಂಡಂಗೆ ರಾಪಿನಿಂದ ಬಂದು ರುಕ್ಕಿ ಮನಿಯೆದ್ರು ನಿಂತ ಊರಿನ ದೊಡ್ಡ ಕುಳ ಮಾದೇ ಗೌಡ. ಇದ್ಯಾರು ಬಂದದ್ದು ನೋಡುವ ಅಂದು ರುಕ್ಕಿ ಹೊರ ನೀಕಿದ್ದೆ ತಡ.. ಬೆರಳು ಮುಂದೆ ಮಾಡಿ ‘ನೋಡು ರುಕ್ಕಿ.. ಈ ಬ್ಯಾಸಿ ತಿಂಗಳ ಅಕೇರಿ ಒಳ್ಗೆ ನೀನು ಈ ಹೊಳಿ ಬದಿಯಿಂದ ಬಿಡಾರ ಕಳಚ್ಕಾತ್ತು’ ಅಂದುಬಿಟ್ಟ ಏಕಾಏಕಿ. ರುಕ್ಕಿಗೆ ಎನು ಎತ್ತ ಅಂದಳಿ ತಿಳಿದೇ ಗರ ಬಡಿದು ‘ಇದೆಂತ ಅಂದಳಿ ಮಾತಾಡ್ತ್ರಿ ಒಡಿಯರೇ. ಯಾಕೆ ನಾನು ಬಿಡಾರ ತೆಗಿಕು?.. ತಿಳಿತಿಲ್ಲೆ’ ಅಂದು ಚಪ್ಪೆ ಸೊಡ್ಡು ಮಾಡಿದ್ದಳು. ‘ಅದೆಲ್ಲ ನಿಂಗೆ ಬಿಡ್ಸಿ ಹೇಳುವಷ್ಟು ವ್ಯವಧಾನು ನಂಗಿಲ್ಲ; ನಂಗೆ ಬೇರೆ ನೂರು ಹರಬು ಇತ್ತು. ಆಮೇಲೆ ಒಡಿಯರು ಹೇಳಲೇ ಇಲ್ಯ.. ನನ್ನ ಬಿಡಾರ ಹೊಳೆಯಂಗೆ ಕೊಚ್ಕಂಡು ಹೊಯಿತು ಅಂದಳಿ ಮದ್ಯ ಮಳ್ಗಾಲದಂಗೆ ಮರ್‍ಕಬೇಡ.. ಈಗ್ಲೆ ಹೇಳಿದಿ’ ಅಂದಳಿ ರಾಪು ಹಾರ‍್ಸಿ ಮೀಸಿ ತಿರುವಿ ಹೋಗಿದ್ದ. ‘ಅಯ್ಯೋ ದೇವ್ರೆ ಈ ಹಪ್ಪು ಗಂಡ್ಸು ಇದ್ಯಾಕೆ ಹೀಂಗೆ ಅಂಡಿಪಿರ‍್ಕಿ ತರಹ ತಲಿಬುಡ ಇಲ್ದೆ ಇರೋ ಮಾತಾಡುತ್ತು’ ಅಂದಳಿ ತಿಳಿದೇ ರುಕ್ಕಿ ಅವರಿವರ ಹತ್ರ ಕೇಳ್ದಾಗ್ಲೆ ಹೊಸ ಇಚಾರು ಕೆಮಿಗೆ ಬಿದ್ದದ್ದು; ಅದುವೆ ಹೊಳಿಬದಿ ರೆಸಾರ್‍ಟು.

ಅಲ್ಲೆಲ್ಲೋ ಘಟ್ಟದ ಬರಿಯಂಗೆ ಉಜರಾಗಿ ಹುಟ್ಟಿ ಹೈಮಲಿ ಮಾಡ್ತಾ ಕೆಳಗಿಳ್ದು ನೂರಾರು ತೋಡು ದಿನ್ನೆಗಳಲಿ ಹರ್‍ದು ಈ ಊರಿಗೆ ಕಾಲಿಡುವತಿಗೆ ಸುಮಾರು ದೊಡ್ಡ ನದಿಯಾಗೇ ಹರಿತಿದ್ಲು ಕಮಲ. ಅವಳ ಒಡಲಂಗೆ ಹಿಂದೆ ಕಮಲದ ಹೂ ಮಸ್ತು ಬೆಳಿತಿದ್ದೀತು ಅಂದು ಹಿರೀಕರು ಹೇಳುದು. ಅದ್ಕೆ ಈ ಹೆಸ್ರು ಇರ್‍ಕು. ಈ ನದಿ ನೀರನ್ನೇ ನಂಬ್ಕೊಂಡು ಈ ಹಸರೂರಂಗೆ ನೂರಾರು ರೈತರು ಭತ್ತದ ಬ್ಯಾಸಯ ಮಾಡುದು. ಅಡಿಕೆ ತೆಂಗಿನ ತ್ವಾಂಟ ಉಸುರಾಡುದು. ಯಾವ ಬದಿ ಕಂಡ್ರೂ ಹಸುರು ಮೈತುಂಬ್ಕಂಡು ಮಲ್ಕಂಡಿತ್ತು. ಇದನ್ನೇ ಬಂಡವಾಳ ಮಾಡ್ಕಂಡು ಯಾಪಾರ ಮಾಡೂಕೆ ಹೊರಟ ಖದೀಮನೇ ಈ ಮಾದೇ ಗೌಡ. ನದಿ ದಂಡಿಯಂಗೆ ಕೋಟಿಗಟ್ಲೆ ಖರ್ಚು ಮಾಡಿ ಲಕ ಲಕ ಅಂಬೋ ರೆಸಾರ‍್ಟು ಕಟ್ಟಿದ್ದ. ಪ್ಯಾಟಿ ಜನ್ರನ್ನ ಇಲ್ಲಿನ ಹಸುರು ತೋರ್ಸಿ ಬಿನ್ನಾಣ ಮಾಡಿ ಕರ‍್ಕೊಂಡು ಬತ್ತಾ. ಕೂತದಕ್ಕೆ ನಿಂತದಕ್ಕೆ ಮೀಸಾಡಿದಕ್ಕೆ ಚಾರ್ಜು ಮಾಡಿ ದುಡ್ಡು ಹೊಡಿತ. ಈ ಮನಿಹಾಳ ಮಾಡೋ ಪಿಲೇನು ಅವನಿಗೆ ಯಾರು ಕೊಟ್ರೋ ಆ ಮುಕ್ಕಣ್ಣನೇ ಬಲ್ಲ.

ಬರೀ ಬಾಯಿ ಮಾತಿಗೆ ಹೇಳುದಲ್ಲ. ಈ ಮಾದೇ ಗೌಡನ ಅಪ್ಪಯ್ಯ ಮಂಜಯ್ಯ ಗೌಡ್ರೂ ಹಸರೂರಂಗೆ ಒಳ್ಳೆ ಗುಣ-ನ್ಯಡತಿ ಇಪ್ಪೋ ಒಡಿಯರು ಅಂದಳಿಯೇ ಹೆಸರು ತಕ್ಕಂಡವರು. ಬಡ-ಬಗ್ರನ್ನ ಕಂಡರೆ ಅವರಿಗೆ ಪಿರುತಿ. ಸಹಾಯ ಕೇಳಿ ಬಂದ ಯಾರನ್ನೂ ಬರೀ ಕೈಯಂಗೆ ವಾಪಸ್ಸು ಕಳಿಸಿದವರಲ್ಲ. ಇದರ ಲಾಭ ಪಡಕೊಂಡ ಹಲವರಲ್ಲಿ ರುಕ್ಕಿ ಕೂಡ ಒಬ್ಳು. ಕಟ್ಟಿಕೊಂಡ ಗಂಡ ಮದ್ಯಪ್ರಾಯದಂಗೆ ತೀರ‍್ಕೊಂಡು ಮುಂಡೆಯಾದಾಗ ಗಂಡನ ಮನಿಯರು ಮಕ್ಳು ಮರಿ ಇಲ್ದೆ ಇರೋ ಹೆಣ್ಣೆಂಗ್ಸು ಅಂದಳಿ ಕಾಣದೇ ದೂರ ಬಿಸುಟಾಗ ಆದಾರವಾಗಿ ನಿಂತದ್ದು ಇದೇ ಮಂಜಯ್ಯ ಗೌಡ್ರು. ಬದ್ಕುಕೇ ತಮ್ಮದೇ ತೋಟದಂಗೆ ಕೆಲಸ ಕೊಟ್ಟು ಇಪ್ಪುಕೆ ತಮ್ಮದೇ ಯಜಮಾನಿಕೆ ಬಾಗವಾಗಿ ಇಪ್ಪೋ ಈ ಹೊಳಿಬದಿಯಂಗೆ ಬಿಡಾರು ಕಟ್ಟಿಕೊಟ್ಟಿದ್ರು. ಇದ್ಕೆ ಸುಣ್ಣು-ಬಣ್ಣ ಬಳ್ಕಂಡು ಗಟ್ಟಿ ಮಾಡಿಕೊಂಡಿದ್ಲು ರುಕ್ಕಿ.

ಅಪ್ಪ ದಾನಶೂರ ಕರ್ಣು ಆದ್ರೆ ಮಗ ಮಾತ್ರ ಕಂಜೂಸು ಪಿಟ್ಟಾಸಿ. ಉಂಡ ಎಂಜಲು ಕೈಯಂಗೆ ಮೂಕು ಪ್ರಾಣಿಗಳನ್ನ ಒಡ್ಸೋ ಕೇಡಿ ಗುಣದವನು. ಬೆಂಗಳೂರು ಪ್ಯಾಟಿಯಂಗೆ ಇಂಗ್ಲೀಷು ಓದಿ ಬಂದವನಂಬ್ರು. ಅಪ್ಪ ಇಪ್ಪತಿಗೆ ಈ ರೆಸಾರ‍್ಟು ಮಾಡ್ತೆ ಅಂದಳಿ ಸಾಕಷ್ಟು ಕೊಣ್ದಿದ್ದ. ಆದ್ರೆ ಅವನ ಮಂಗನ್ಯಾಸಕ್ಕೆ ಅಪ್ಪ ಅಡ್ಗೋಲು ಹಾಕ್ತಿದ್ರು. ಆದ್ರೆ ಎರಡು ವರ್ಷದ ಹಿಂದೆ ಪಕ್ಷವಾತ ಬೀಸಿ ಮಂಜಯ್ಯ ಗೌಡ್ರು ತೀರ‍್ಕೊಂಡ ಮೇಲೆ ಇವನ ಮೂಗಿಗೆ ಮೂಗುದಾರ ಹಾಕುವರೇ ಇಲ್ಲದಾಯಿ ಹೋಯ್ತು ಕಾಣಿ.

ಮೊದಮೊದ್ಲು ಲೋಡುಗಟ್ಲೆ ಮಣ್ಣು ತಂದು ಹೊಳಿಗೆ ಸುರಿತಿದ್ದ. ಅಪ್ಪ ಮಾಡಿಟ್ಟಿರುದ್ನ ಮಗ ಹೊಡಿ ಹಾರಿಸ್ತಾ ಅಂದಳಿ ಜನ ನ್ಯಗೆ ಆಡ್ಕಂಡು ಸುಮ್ನಾದ್ರು. ಅದೇ ದೊಡ್ಡ ತಪ್ಪಾಯ್ತು ಕಾಣಿ.. ಚೆಂಗು ಬಂದ ಕರು ತರಹ ಸುಂಯ್ಯಂದಳಿ ಹರಿತಿದ್ದ ಕಮಲೆಯ ಒಡ್ಲಿಗೆ ಲೋಡುಗಟ್ಲೆ ಮಣ್ಣು ಸುರ‍್ದ.. ನದಿ ಹರಿವುನಾ ನಿದಾನ ಮಾಡ್ದ. ದೊಡ್ಡ ದೊಡ್ಡ ಕಲ್ಲುತಂದು ಹಾಕಿ ಹೊಳಿನೇ ಒತ್ತುವರಿ ಮಾಡಿ ಅರ‍್ಮನಿ ತರಹದ ಬಂಗ್ಲೆ ಕಟ್ಟಿದ. ಇಂಗ್ಲೀಷು ಹೆಸ್ರು ಬೆಚ್ಚಿ ಯಾಪಾರ ಮಾಡುಕೆ ಹೊರಟಿದ್ದ. ಪ್ಯಾಟಿ ಮಂದಿ ಕಾರು ಬಸ್ಸಂಗೆ ಬಂದು ಮಜಾ ಉಡಾಯಿಸಿ ಹೋತ್ರು. ಅರ್ದ ಚಡ್ಡಿ ಹಯ್ಕಂಡು ಮಿಡ್ಕತಾ ಬಪ್ಪೋ ಅವುಗಳ ಯ್ಯಾಸ ಕಂಡ್ರೆ ಸಾಕು. ಶನಿವಾರ ಬಾನುವಾರ ಬಂದ್ರೆ ಜನ ಕ್ಯೂ ಇರ್‍ತ್ರು. ಅವುಗಳ ಕೊಣ್ತ ಎನು? ಗೌಜೇನು? ಕಾಂಬುಕೆ ಸಾದ್ಯ ಇಲ್ಲ.

ಹಸರೂರಿನ ಜನ ಮೊದ್ಲೆ ಎಚ್ಚರ ಆಗಿದ್ರೆ ಸಮಸ್ಯೆ ಇಷ್ಟು ದೊಡ್ಡದು ಆಗ್ತಿರಲಿಲ್ಲ; ಆದ್ರೆ ಹೊಟ್ಟಿಕಿಚ್ಚು ಬಿಡ್ಕಲೇ.. ‘ನೆರ‍್ಮನಿ ಹಾಳಾದ್ರೆ ಕರೀನ ಕಟ್ಟೂಕೆ ಜಾಗ ಆಯ್ತು’ ಅಂಬೋ ಗಾದಿ ಕಣಂಗೆ ಜನ ಅವರ ಮನಿ ಸಮಸ್ಯೆಯೇ ಅಲ್ಲ ಅಂದಳಿ ಮೊದಲು ಸುಮ್ನೆ ಬಾಯಿಗೆ ಬೀಗ ಹಯ್ಕಂಡು ಕೂತ್ರು. ಇದ್ರ ನೇರ ಹೊಡ್ತ ಬಿದ್ದದ್ದು ಊರಿನ ಬಡಬಗ್ರಿಗೆ.

ಕಳ್ದ ವರ್ಷವೇ ಮಳೆಗಾಲದಂಗೆ ನೆರಿ ನೀರು ಹೊಳಿಯಂಗೆ ಸರಾಗವಾಗಿ ಹರ‍್ದು ಹೋಗ್ದೆ ಹೊರಗೆ ಉಕ್ಕಿ ಸುಮಾರು ಭತ್ತದ ಬೆಳೆ ನಾಶ ಆಯ್ತು. ಅಡ್ಕಿ ತೆಂಗಿನ ತ್ವಾಟದಂಗೆ ರಾಶಿಗಟ್ಲೆ ಪ್ಲಾಸ್ಟಿಕ್ ತಟ್ಟಿ ಲೋಟ ಬಂದು ಬಳೂಕೆ ಶುರು ಆಯ್ತು. ಆಮೇಲೆ ಊರಿನ ಜನ ಎಚ್ಚೆತ್ಕಂಡು ಸರ್ಕಾರಕ್ಕೆ ಅರ್ಜಿ ಬರ್‍ದ್ರು. ಸರ್ಕಾರಿ ಆಪೀಸರು ವಿಸಿಟು ಮಾಡಿ ಎಚ್ಚರಿಕ್ಕೆ ಕೊಟ್ಟು ಹೋದ್ರು.. ಇಂವ ಖದೀಮ ಅವರದ್ದು ಕೈಬಿಸಿಯೂ ಲಾಯಿಕು ಮಾಡಿ ಕಳಿಸರ‍್ಕು ಬಿಡಿ.

ಅದ್ರ ಮದ್ಯೆ ಕಳೆದ ಆರು ತಿಂಗಳ ಈಚೆಗೆ ಈ ಮಾದೇ ಗೌಡ ಹೊಳಿಯಂಗೆ ಅದೆಂತದೋ ಬೋಟಿಂಗ್ ಶುರು ಮಾಡ್ಕು ಅಂದಳಿ ಕೊಣಿತಿದ್ದ. ಅದ್ಕೆ ಮುಂಚಿತವಾಗಿ ಹೊಳಿ ಬದಿಯಂಗೆ ಇಪ್ಪೋರಿಗೆಲ್ಲ ಐಸೆಂಟ್ಸು ಮನಿ ಆಸಿ ತರ‍್ಸಿ ಸಾಗ ಹಾಕೋ ಪಿಲೇನು ಹೂಡಿದ್ದ. ಅದ್ರ ಭಾಗವಾಗಿಯೇ ರುಕ್ಕಿನ ಮೊನ್ನೆ ಪುನಃ ಅಡ್ಡಹಾಕಿ ‘ಸರ್ಕಾರಕ್ಕೆ ಅರ್ಜಿ ಬರ್‍ಸಿ ಅಯಿಸೆಂಟ್ಸು ಮನಿ ನಿಂಗೆ ಮಾಡಿ ಕೊಡುವ. ಅದು ಬಿಟ್ಟು ಬೂಲಂಗೆ ಬೇರು ಬಂದವರ ತರಹ ಇನ್ನೂ ಇಲ್ಲೇ ಟಿಕಾಣಿ ಹೂಡ್ಕಂಡು ಕೂತಿರುದಲ್ಲ. ನನ್ನಪ್ಪ ಬರೀ ಬಾಯಿ ಮಾತಂಗೆ ನಿಂಗೆ ಕೊಟ್ಟಿರೋ ಜಾಗ ಇದು. ಹಕ್ಕು ಇನ್ನೂ ನಮ್ಮೆಸ್ರಂಗೆ ಇತ್ತು. ನಾನು ಬೇಕಿದ್ರೆ ನಾಳೆಯೇ ನಿನ್ನ ಎಬ್ಬಿಸ್ಲಕ್ಕು. ನೀನು ಎಳದಿದ್ರೂ ಈ ಮಳ್ಗಾಲದಂಗೆ ಹೊಳಿ ನೀರು ಉಕ್ಕಿ ಮನಿ ಸಮೇತ ಕೊಚ್ಕಂಡು ಹ್ವಾತೆ’ ಅಂದಳಿ ಹಲ್ಲುಕಚ್ಚಿ ರೋಪು ಹರ‍್ಸಿದ್ದ. ‘ನೀವು ಹೇಳೂಕೆ ಬಾರೀ ಸುಲಭದಂಗೆ ಹೇಳ್ತ‍್ರಿ ಸಾಹುಕಾರೆ.. ಮಕ್ಳು ಮರಿ ಆಧಾರ ಇಲ್ದೆ ಇರೋ ಹೆಂಗ್ಸು ನಾನು. ನಾಲ್ಕು ಕರವು ದ್ಯನ್ಗಳು ಇದ್ದೋ. ಅದ್ನೆಲ್ಲಾ ಬಿಟ್ಟು ಈ ಪ್ರಾಯದಂಗೆ ಐಸೆಂಟ್ಸು ಮನಿಗೆ ಹೋಗಿ ನಾನೆಂತ ಮಣ್ಣು ತಿಂಬುದಾ? ಈ ಪ್ರಾಯದಂಗೆ ಕೂಲಿ ಮಾಡುಕೆ ರಟ್ಟೆಯಂಗೆ ತ್ರಾಣ ಇಲ್ಲ. ಜಪ್ಪಯ್ಯ ಅಂದ್ರೂ ಬಿಡಾರ ಬಿಟ್ಟು ಹ್ವಾಪಳಲ್ಲ..ತಿಳ್ಕಣಿ’ ಅಂದು ರುಕ್ಕಿಯೂ ತಿರುಗಿ ಬಾಯಿ ಹಾರ‍್ಸಿದ್ದಳು. ಮಾದೇ ಗೌಡ ಅವುಡು ಕಚ್ಚುತ್ತಾ ನಿಂತ್ಕಡಿರುವುದು ಇನ್ನೂ ಅವಳ ಮನಸ್ಸಂಗೆ ಹಸುರಾಗಿಯೇ ಇತ್ತು.

ಆದ್ರೆ ಇಂದು ಪಾಂತಾಳ ಬೆಮ್ಮರನ ತರಹ ಸೊಕ್ಕಿ ಉಕ್ಕಿ ಹರಿತಿಪ್ಪೋ ಹೊಳಿನ ಕಂಡ್ರೆ ನಿಜ ರುಕ್ಕಿಗೆ ಭಯ ಆರ‍್ಸುಕೇ ಶುರು ಆಯ್ತು. ಹೊರಬದಿಯಂಗೆ ಕತ್ಲೆ ಬೇರೆ ಇವತ್ತು ಬೇಗ ತನ್ನ ಪಾರುಪತ್ಯ ಮೆರುಕೆ ಗಡಿಬಿಡಿ ಮಾಡ್ತಿತ್ತು. ‘ಎಂತಕೂ ಹಟ್ಟಿಯಂಗೆ ಇಪ್ಪೋ ದನಕರುಗಳನ್ನ ಬಿಡ್ಸಿ ಸೀತಾ ಗುಡ್ಡಕ್ಕೆ ಎಬ್ತೆ.. ರಾತ್ರಿ ಕಥಿ ಎಂತದೋ? ನೆರೆ ಇಳ್ದ ಮೇಲೆ ನಾಳೆ ಹುಡುಕಿ ಎಬ್ಕಂಡು ಬಂದ್ರಾಯ್ತು’ ಎಂದೆಣಿಸಿದ ರುಕ್ಕಿ ಕೈಯಂಗೆ ಜಬ್ಕಟಿ ಕೊಡಿ ಹಿಡ್ಕಂಡು ಮೆಲ್ಲಗೆ ಮನಿ ಬಾಗಲನ್ನು ತರ‍್ದು ಹೊರಗೆ ಅಡಿಯಿಟ್ಟಳು.

ಅದಾಗ್ಲೆ ಹೊಳಿ ನೀರು ಭರ್ತಿ ಆಗಿ ರುಕ್ಕಿ ಮನಿಅಂಗಳದವರಿಗೂ ಬಂದು ಕೂತಿತ್ತು. ಕಾಲು ಜಾರ‍್ದಂತೆ ಬಾರೀ ಜಾಗ್ರತಿಯಂಗೆ ಕೆಸರು ತುಂಬಿದ ನೀರಂಗೆ ಕಾಲಿಡ್ತಾ ಹಟ್ಟಿಗೆ ಬಂದ ರುಕ್ಕಿ ಒಂದೊಂದೆ ಗಂಟಿಕರುಗಳನ್ನ ಬಿಡ್ಸಿ ಸೀತಾ ಗುಡ್ಡದ ಬದೀಗೆ ಎಬ್ಬುವತಿಕೆ ಹೊತ್ತು ಸಮಾ ಕಂತಿ ಹೊಯ್ತು. ಹೊರಬದಿಯಂಗೆ ಕಣ್ಣಿಗೆ ಎಡದ್ರೂ ತೋರುದಿಲ್ಲ ಅಂಬಷ್ಟು ಕಾರಂಕತ್ಲಿ ಆವರ‍್ಸಿ ಕೂತಿತು. ಒಂದು ಅಂದಾಜಿನಂಗೆ ರುಕ್ಕಿ ಬೆಳಚ್ತಾ ಮನಿ ಬದೀಗೆ ಬಪ್ಪೂಕೆ ಶುರು ಮಾಡಿದ್ಲು.

ಅಷ್ಟೋತ್ತಿಗೆ ಸಮವಾಗಿ ಚಟ ಚಟ ಸಿಡಿಲಿನೊಂದಿಗೆ ಗಾಳಿಯೂ ಸೇರಿ ಮಳಿ ಜಮ್ ಕುಟ್ಟಿ ಹೊಡೆಯುದಕ್ಕೆ ಶುರು ಆಯ್ತು. ರುಕ್ಕಿ ಕೈಯಂಗೆ ಇದ್ದ ಕೊಡೆ ಗಾಳಿ ಬಾರ ತಾಳೂಕೆ ಆಯ್ದೆ ಕೈತಪ್ಪಿ ಎಲ್ಲೋ ಹಾರಿ ಹೋಯ್ತು.. ಅಂಗಳ ತುಂಬ್ತಾ ಇರುವ ಹೊಳಿ ನೀರು ರುಕ್ಕಿ ಮುಂಗಾಲುಗೆಂಟಿನವರಿಗೆ ಬಂದು ಕೂತಿತು. ಎದೆಯೊಳ್ಗೆ ಹೆದರಿಕಿಯ ನಗಾರಿ. ತರ ತರ ನಡುಗ್ತಿಪ್ಪೋ ದೇಹನ ನಿಯಂತ್ರಿಸುದಕ್ಕೆ ಆಗ್ದೆ ಆಯತಪ್ಪಿ ಧಡಾಲೆಂದು ನೀರಿಗೆ ಬಿದ್ದುಬಿಟ್ಟಳು ರುಕ್ಕಿ..

ಮಳೆಯ ರಾಪು ಮತ್ತೂ ಜೋರಾಯ್ತು..!
:
:
:

ಹೊಳಿ ಬದಿ ಮನಿ ರುಕ್ಕಿ ನೆರಿ ನೀರಂಗೆ ಕೊಚ್ಕಂಡು ಹ್ವಾದಳು ಅಂಬೋ ಸುದ್ದಿ ಕೇಳಿ ಮನಸ್ಸೊಳಗೆ ಬಾರೀ ಖುಷಿಪಟ್ಟ ಮಾದೇ ಗೌಡ.. ಅಪ್ಪನ ದಾನಶೂರ ಬುದ್ದಿಯಿಂದ ತಮ್ಮ ಖಾಸ ಭೂಮಿಯಂಗೆ ಆ ರುಕ್ಕಿ ಬಿಡಾರ ಕಟ್ಕೊಂಡು ಮೊನ್ನೆ ತನ್ನ ವಿರುದ್ದವೇ ಗುಟುರು ಹಾಕಿದ್ದು ನೆನಪಾದಾಗೆಲ್ಲ ಅವನಿಗೆ ಮೈಯೆಲ್ಲ ಉರಿತಿತ್ತು. ಅದು ಅಲ್ದೆ ಕಳೆದ ವರ್ಷ ಒಂದಿನ ಇಂಜಿನಿಯರೊಬ್ಬ ಈ ರುಕ್ಕಿ ಮನಿ ಇಪ್ಪೋ ಜಾಗನ ತೋರ‍್ಸಿ ‘ಇಲ್ಲಿಂದ ಶುರು ಮಾಡಿ ಆ ಹೊಳಿ ಬದೀ ಮೂಲಿವರಿಗೆ ಬೋಟಿಂಗ್ ಮಾಡುದುದಾದ್ರೆ ಲಗತ್ತು ಆತ್ತು ಕಾಣಿ’ ಅಂತ ಪಿಲೇನು ಕೊಟ್ಟ ಮೇಲಂತೂ ರುಕ್ಕಿನ ಕಂಡ್ರೆ ಬಿಸಿ ಕೆಂಡದ ಕಣಂಗೆ ಮಾಡ್ತಿದ್ದ. ‘ಆ ಹಪ್ಪು ಹೆಂಗಸ್ಸಿನ ಮ್ಯಾಳಿ ಒತ್ತಿ ಕೊಂದ್ಹಾಕಿಯಾದ್ರೂ ಬರುವ ವರ್ಷ ಬೋಟಿಂಗು ಶುರು ಮಾಡ್ಕು’ ಅಂದು ಲೆಕ್ಕ ಹಾಕಿದ್ದ. ಈಗ ರಗ್ಳೆ ತಾನಾಗೇ ತಪ್ಪೀತು ಅಂದು ಗಿರೇಸಿ ನಿರುಮ್ಮಳನಾದ.

ಈ ಮದ್ಯೆ ಅವನ ರೆಸಾರ‍್ಟಿನ ಖಾಸ ಆಳು ಪಿಣಿಯ ಓಡಿ ಬಂದು ‘ಒಡಿಯರೇ ಈ ವರ್ಷ ಹೊಳಿ ಹೊಯ್ಲು ಬಾರೀ ಜೋರಿತ್ತು. ರೆಸಾರ‍್ಟು ಕಂಪೌಂಡುವರಿಗೂ ನೀರು ಬಂದು ಕೂತಿತು. ಮಳಿ ಕಡಿಮೆ ಆಗೋ ಲಕ್ಷಣ ಕಾಣಿಸ್ತಿಲ್ಯ. ಎಂತ ಮಾಡುದಯ್ಯ’ ಎಂದು ಹೇಳಿದ್ದು ಚೂರು ಚಿಂತಿಗೀಡು ಮಾಡಿತ್ತು. ಅದೇ ಮಂಡೆಬಿಸಿಗೆ ರಾತ್ರಿ ಚೂರು ಜಾಸ್ತಿಯೇ ಪೆಗ್ಗೇರಿಸಿ ಮಲಗಿದ್ದ.

ಬೆಳಿಗ್ಗೆ ಬೇಗ ಹೊತ್ತು ಮೂಡೂ ಮಂಚೇ ಮನಿ ಬಾಗಿಲನ್ನು ಯಾರೋ ಧಡ..ದಢ ಬಾರಿಸುದು ಕೇಳಿಸಿತು. ಗಡಿಬಿಡಿಯಿಂದ ಎದ್ದುಬಂದು ಬಾಗಿಲು ತೆರೆದರೆ ಪಿಣಿಯ ಎದೆ ಉಸ್ರು ಬಿಡ್ತಾ ನಿಂತಿದ್ದ. ‘ಒಡಿಯರೇ ಎಲ್ಲ ಮುಂಡಾಮುಚ್ಚಿ ಹೋಯ್ತು.. ಅಲ್ಲಿ ರೆಸಾರ‍್ಟು..’ ಅಂದು ತೊದಲಿದ. ‘ಎನಾಯ್ತ ನಮ್ಮ ರೆಸಾರ‍್ಟಿಗೆ’ ಎಂದು ಭಯದಿಂದ ಮನೆಯ ಅಂಗಳಕ್ಕೆ ನಾಲ್ಕೇ ದಾಪಿನಲ್ಲಿ ಧಾವಿಸಿ ಬಂದ ಮಾದೇ ಗೌಡ ದೂರದ ಹೊಳೆಯ ದಂಡೆಯಲ್ಲಿ ತಾನು ಕೋಟಿ ರೂಪಾಯಿ ಖರ್ಚು ಮಾಡಿ ಕಟ್ಟಿದ್ದ ರೆಸಾರ‍್ಟಿನತ್ತ ಕಂಡರೆ ಕಾಂಬುದೇನು?

ನಿನ್ನೆ ರಾತ್ರಿ ಬಾನಿಗೆ ಯಾರೋ ‘ಜಲಬಾಂಬು’ ಎಸೆದಿದ್ರೇನೋ ಎಂಬಂತೆ ಬೆಳಗಾಪಲೋರಿಗೂ ಮಳೆ ಜಮಕುಟ್ಟಿ ಬರ‍್ಸಿತ್ತು. ಪರಿಣಾಮು ಕಮಲೆಗೆ ಹರಿವುದಕ್ಕೆ ತನ್ನಿರುವು ಸಾಕಾಗ್ದೆ ಪ್ರವಾಹ ರೂಪಿಯಾಗಿ ಬದ್ಲಾಗಿಬಿಟ್ಲು. ತನ್ನ ದಾರಿಯ ಎಲ್ಲ ಅಡೆತಡೆಗಳನ್ನು ಕೊಚ್ಚಿ ಮುನ್ನುಗ್ಗಿ ಬಿಟ್ಟಳು. ತನ್ನ ಒಡ್ಲಿನ ಮೇಲೆ ಕಟ್ಟಿದ್ದ ರೆಸಾರ‍್ಟನ್ನು ಬುಡಸಮೇತ ಕಿತ್ತು ಮಗುಚಿದ್ದಳು. ಈ ಮುಂಚೆ ತನ್ನಧಿಕಾರ ಯಾವ ಜಾಗದಲ್ಲೆಲ್ಲಾ ಇತ್ತೋ ಅಲ್ಲೆಲ್ಲಾ ಹರ‍್ದು ತಾನು ಯಾವ ಗಮ್ಯವನ್ನು ಸೇರಬೇಕೋ ಅಲ್ಲಿಗೆ ಸೇರಿದ್ದಳು.

ಇದೀಗ ಕೊಳೆಯನ್ನು ತೊಳಕೊಂಡು ಶುದ್ದ ಆದವಳಂತೆ ತನ್ನ ಅಬ್ಬರವನ್ನು ಇಂಚಿಂಚೆ ಕಡಿಮೆ ಮಾಡುತ್ತಾ ಮಂದವಾಗುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT