ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಿಗ್ರಾಮಶಿಲೆಯ ಭೂವರಾಹಮೂರ್ತಿ

ದೇಗುಲ ಪರಿಚಯ
Last Updated 31 ಮೇ 2019, 19:30 IST
ಅಕ್ಷರ ಗಾತ್ರ

ಸುತ್ತ ಕಣ್ಣಾಯಿಸಿದಷ್ಟು ಹಸಿರು ತುಂಬಿದ ಬಯಲು. ಪಕ್ಕದಲ್ಲೇ ಹರಿಯುವ ಹೇಮಾವತಿ ನದಿಯ ಸೊಬಗು. ಈ ನದಿಯ ದಂಡೆಯ ಮೇಲಿರುವುದೇ ಲಕ್ಷ್ಮೀ ಭೂವರಾಹಸ್ವಾಮಿ ದೇಗುಲ. ಮಂಡ್ಯಜಿಲ್ಲೆಯ ಕೃಷ್ಣರಾಜಪೇಟೆಯ ಕಲ್ಲಹಳ್ಳಿ ಊರಿನ ದೇವಾಲಾಪುರದಲ್ಲಿದೆ ಈ ದೇಗುಲ.

ಶಾಸನವೊಂದರ ಪ್ರಕಾರ ಹೊಯ್ಸಳರ ಮುಮ್ಮುಡಿ ಬಲ್ಲಾಳನ ಕಾಲದಲ್ಲಿ ಹೇಮಾವತಿಯ ನದಿಯ ದಂಡೆಯ ಮೇಲೆ ಪುಟ್ಟದಾಗಿ ನಿರ್ಮಾಣವಾದ ದೇವಾಲಯವಿದು. ಸುಮಾರು ಕ್ರಿ.ಶ. 1334ರಲ್ಲಿ ಈ ದೇವಾಲಯ ನಿರ್ಮಾಣವಾಗಿರಬಹುದು ಎಂದು ಹೇಳುತ್ತಾರೆ. ಇಲ್ಲಿರುವ ಮೂರ್ತಿ ಅತ್ಯಂತ ಮನಮೋಹಕವಾಗಿದ್ದರೂ ಇತರ ಹೊಯ್ಸಳರ ಕಾಲದ ದೇವಾಲಯಗಳಂತೆ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿಲ್ಲ. ಈಗ ಹಳೆಯ ಗುಡಿಯನ್ನು ಕೆಡವಿ ಹೊಸ ದೇಗುಲವನ್ನು ನಿರ್ಮಿಸಲಾಗಿದೆ. ಹೊಯ್ಸಳ ರಾಜ ಸ್ಥಾಪಿಸಿದ ದೇಗಲವನ್ನು ಮುಂದೆ ಚೋಳರು, ವಿಜಯನಗರದ ಅರಸು ಪೋಷಿಸುತ್ತಾರೆ. ಬಳಿಕ ಮೈಸೂರು ಅರಸರ ಆಳ್ವಿಕೆಗೆ ಒಳಪಡುತ್ತದೆ. ಈಗ ಶ್ರೀಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದಿಂದ ದೇವಾಲಯವನ್ನು ಜೀಣೋದ್ಧಾರ ಮಾಡಲಾಗುತ್ತಿದೆ.

15 ಅಡಿಯ ವಿಗ್ರಹ: ಇಲ್ಲಿನ ದೇವರ ವಿಗ್ರಹವೇ ವಿಶಿಷ್ಟ. ಇದು 15 ಅಡಿ ಎತ್ತರದ ಸಾಲಿಗ್ರಾಮದ ಏಕಶಿಲೆಯಿಂದ ಕೆತ್ತಿದ್ದಾರೆ. ದೇವಾಲಯ ಪ್ರವೇಶಿಸುತ್ತಲೇ ಸಭಾ ಮಂಟಪದ ಎದರು ಗರ್ಭಗುಡಿ ಇದೆ. ಒಳಗಡೆ ಪೀಠದ ಮೇಲೆ ವರಾಹಸ್ವಾಮಿ ವಿಗ್ರಹ ವಿದೆ. ವರಾಹಾವತಾರದ ವಿಷ್ಣುವಿನ ಆಜಾನುಬಾಹು ದೇಹ, ಬಲಿಷ್ಠ ತೋಳುಗಳು, ಎತ್ತರವಾದ ನಿಲುವಿನ ಭಂಗಿಯಲ್ಲಿರುವ ಮೂರ್ತಿ, ಎಡತೊಡೆಯ ಮೇಲೆ ಪತ್ನಿ ಲಕ್ಷ್ಮೀ ಭೂದೇವಿಯನ್ನು ಕೂರಿಸಿಕೊಂಡಿರುವ ಭಂಗಿಯಲ್ಲಿದೆ. ಕೈಯಲ್ಲಿ ಕಮಲದ ಹೂವು. ವರಾಹಸ್ವಾಮಿಯ ಒಂದು ಕೈಯಲ್ಲಿ ಚಕ್ರ, ಮತ್ತೊಂದು ಕೈಯಲ್ಲಿ ಶಂಖ, ಎಡತೊಡೆಯ ಮೇಲೆ ಕುಳಿತಿರುವ ಪತ್ನಿ ಲಕ್ಷ್ಮಿಯನ್ನು (ಭೂದೇವಿ) ಎಡಗೈನಿಂದ ತಬ್ಬಿಕೊಂಡಿರುವಂತೆ ಕೆತ್ತಿರುವ ವಿಗ್ರಹವಿದು.

ಭಕ್ತರ ನಂಬಿಕೆ: ಈ ಭೂವರಾಹಸ್ವಾಮಿಗೆ ಹರಕೆ ಹೊತ್ತರೆ, ಭೂವಿವಾದಗಳು ಇತ್ಯರ್ಥವಾಗುತ್ತವೆ. ಮರಳು, ಮಣ್ಣು ಅಥವಾ ಇಟ್ಟಿಗೆಯನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿ, ದೇವಾಲಯದ ಪಕ್ಕದಲ್ಲಿ ಅದೇ ಸಾಮಗ್ರಿಗಳಿಂದ ಗೂಡು ಕಟ್ಟಿ ಹರಿಕೆ ಸಲ್ಲಿಸಿದರೆ, ಗೃಹನಿರ್ಮಾಣದ ಬಯಕೆ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ.

ಪುರಾಣ, ಪೂಜೆ ವಿಶೇಷ: ಹಿರಣ್ಯಕಶಿಪುವಿನ ಸೋದರ ಹಿರಣ್ಯಾಕ್ಷನು ಭೂದೇವಿಯನ್ನು ಹೊತ್ತೊಯ್ದು ಸಮುದ್ರದಲ್ಲಿ ಬಂಧಿಸಿಡುತ್ತಾನೆ. ಮಹಾವಿಷ್ಣುವು ವರಾಹಾವತಾರವನ್ನು ತಾಳಿ ಹಿರಾಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ರಕ್ಷಿಸಿದ ಎಂಬುದು ಪುರಾಣದ ಕಥೆ. ಈ ವರಾಹಾವತಾರದ ಮಹಿಮೆಯನ್ನು ಈ ಸುಂದರ ದೇವಾಲಯ ಹೇಳುತ್ತಿರುವಂತಿದೆ. ಆಲಯದ ಬಯಲಿನಲ್ಲಿ ಶಾಸನವೂ ದೊರೆತಿದೆ. ನರಸಿಂಹ ಜಯಂತಿ, ವೈಕುಂಠ ಏಕಾದಶಿಯಲ್ಲಿ ಮಾತ್ರವಲ್ಲದೆ, ಪ್ರತಿ ಶನಿವಾರ ಈ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ನಿತ್ಯವೂ ಬರುವ ಭಕ್ತರಿಗೆ ಮಧ್ಯಾಹ್ನದ ಪ್ರಸಾದ ವಿನಯೋಗದ ವ್ಯವಸ್ಥೆಯೂ ಇದೆ. ಪ್ರತಿ ನಿತ್ಯ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4ರಿಂದ 7 ಗಂಟೆಯವರೆಗೆ ಪೂಜೆ ನಡೆಯುತ್ತದೆ.

***

ತಲುಪುವುದು ಹೇಗೆ?

ಬೆಂಗಳೂರಿನಿಂದ 180ಕಿ.ಮೀ., ಮೈಸೂರಿನಿಂದ 53 ಕಿ.ಮೀ. ಕೆ.ಆರ್.ಪೇಟೆ ಮಾರ್ಗವಾಗಿ 18 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ. ಕೆ.ಆರ್.ಪೇಟೆ-ಮೇಲುಕೋಟೆ-ಕಲ್ಲಹಳ್ಳಿಗೆ ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಬರುವವರು ಈ ದೇವಾಲಯ ಭೇಟಿಯೊಂದಿಗೆ ಸುತ್ತಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT