ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ಕಥೆ: ಸೇವಂತಿ.. ಅಚ್ಚುತ.. ಚಂದ್ರಾ

Last Updated 6 ಮಾರ್ಚ್ 2021, 19:31 IST
ಅಕ್ಷರ ಗಾತ್ರ

‘ಮತ್ತು ಅವರೆಲ್ಲಾ ಸುಖವಾಗಿದ್ದರು’ ಅನ್ನುವ ಸಾಲು ಯಾವತ್ತೂ ಕತೆಯ ಕಡೇಗೆ ಬರಬೇಕು.
ಒಂದು ಕಾಲವಿತ್ತು, ನಾವು ಸುಖವಾಗಿದ್ದೆವು. ಹೀಗೆ ಶುರುವಾಗುವ ನನ್ನ ಕತೆಯಲ್ಲಿ ಮೂವರಿದ್ದೆವು. ನಾನು ಅಂದರೆ ಸೇವಂತಿ, ನಾನು ಅಂದರೆ ಅಚ್ಚುತ ಮತ್ತು ನಾನು ಅಂದರೆ ಚಂದ್ರಶೇಖರ. ಇಲ್ಲಿ ನಾನು ಅಂದರೆ ನಮ್ಮ ಮೂವರಲ್ಲಿ ಯಾರೊಬ್ಬರೂ. ಅದೊಂದು ತೀವ್ರವಾದ ಭಾವಬಂಧ. ಹೇಳಬೇಕೆಂದರೆ, ತೀವ್ರತೆ ಅನ್ನುವುದು ನಿಜಕ್ಕೂ ಸಾಮಾನ್ಯ ಮನಸ್ಥಿತಿಯೇ ಅಲ್ಲ. ಕಡುಪ್ರೀತಿಗೂ ಮತ್ತು ಕಡುದ್ವೇಷಕ್ಕೂ ಯಾವಾಗಲೂ ಒಂದೇ ಮನಸ್ಥಿತಿ. ಅದು ನಮ್ಮನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ನಾನು ಸೇವಂತಿ, ನಾನು ಅಚ್ಚುತ, ನಾನು ಚಂದ್ರ ಇದೇ ತೀವ್ರತೆಯವರು. ಒಂದು ಕಾಲಕ್ಕೆ ನಮ್ಮನ್ನು ಕಟ್ಟಿಹಾಕಿದ್ದು ಕಡುಪ್ರೀತಿ. ಕಡೆ ಕಡೆಗೆ ನಾವು ಬೆಳೆದೆವು, ದೊಡ್ಡವರಾದೆವು, ಬುದ್ಧಿವಂತರಾದೆವು, ಸೂಕ್ಷ್ಮತೆಯ ಸೂಕ್ಷ್ಮತೆ ತಿಳಿಯಿತು, ಕಡುಪ್ರೀತಿಯ ಪ್ರೀತಿಯಿಂದ ಪ್ರೀತಿಯ ಲೋಭ ಶುರುವಾಯಿತು, ಮೋಹಿಸಿದೆವು, ಕಾಮಿಸಿದೆವು, ಮದ ಅನ್ನುವುದು ಮುಖ್ಯವಾಗಿ ಎದೆಗೆ ಬಡಿಯುವ ಸಂಗತಿ, ಮತ್ಸರವೂ ಶುರುವಾಯಿತು, ಕ್ರೋಧ ಇವೆಲ್ಲದರ ಮಧ್ಯೆ ಯಕಃಶ್ಚಿತ್.

***

ಅಚ್ಚುತ ಉರುಫ್ ಪ್ರೊಫೆಸರ್ ಅಚ್ಯುತ ರಾಮ್ : ನನಗೆ ಗೊತ್ತಿತ್ತು, ನೆಮ್ಮದಿ ಇಷ್ಟು ಸಸ್ತಾ ಸಿಗುವುದಿಲ್ಲಾಂತ. ಜಗತ್ತಿನೆದುರು ಅವನನ್ನು ಬೆತ್ತಲೆ ಮಾಡಿಯೂ ನನ್ನೊಳಗಿನ ದ್ವೇಷದ ಕಾವು ಸುಖಿಸುತ್ತಿಲ್ಲವೆಂದರೆ..? ಹತ್ತಾರು ಮೈಕ್‌ಗಳ ಮುಂದೆ ನಿಂತು ನಾನು ಎಷ್ಟು ವರ್ಷಗಳ ನೋವನ್ನು ಚೀರಿ ಚೀರಿ ‘ಅವನೊಬ್ಬ ಕೊಲೆಗಾರ’ ಅಂತ ಹೇಳಿದ ಮೇಲೂ ಅವನು ಅದೇ ಸ್ಥಿತಪ್ರಜ್ಞತೆ ತೋರಿಸಿಕೊಂಡು ನಿಂತಿದ್ದನ್ನು ನನಗೆ ಸಹಿಸಲಾಗುತ್ತಿಲ್ಲ. ಆಕಾಶ ಹತ್ತಿರ ಇದೆ ಅನ್ನಿಸುವ ಈ ಬಾಲ್ಕನಿಯಲ್ಲಿ ಮೋಡಗಳು ಸುತ್ತುವರಿದಿದ್ದರೂ ಹಿಡಿದು ಹನಿಸಲಾಗುತ್ತದಾ? ಎದೆಯೊಳಗೆ ಹೆಪ್ಪಾದ ಚೀರುಗಳನ್ನು ಹೇಗೆ ಹನಿಸುವುದು..

ನನಗವನು ಗೊತ್ತು, ಅವನೊಳಗೂ ನನ್ನಷ್ಟೇ ಚೀರುಗಳಿದ್ದಾವೆ, ಆದರೆ ಅವನು ಬೆಂಕಿಯೂ ತನ್ನನ್ನು ಸುಡಲಾರದು ಅನ್ನುವಂತೆ ನಟಿಸುತ್ತಾನೆ. ಅವನು ಸಾಯುವಷ್ಟಾದರೂ ಬೇಯುತ್ತಾನೆ, ಹಾಗಂತ ಆ ಗಾಯಗಳಿಗೆ ಗಾಳಿ ಉರುವಿ ಮುಲಾಮು ಹಚ್ಚಿಕೊಳ್ಳುವುದನ್ನು ಸುಲಭವಾಗಿ ಮುಚ್ಚಿಡುತ್ತಾನೆ. ಅವನಿಗೆ ಯಾವುದನ್ನೂ ತೋರಿಸಿಕೊಂಡು ಗೊತ್ತಿಲ್ಲ. ಚೀರು, ಕಣ್ಣೀರು.. ಪ್ರೀತಿ, ಮಮತೆಯನ್ನು ತೋರಿಸಿಯೂ ಗೊತ್ತಿಲ್ಲ. ಆದರೆ ನನಗವನು ಗೊತ್ತು, ಅವನೊಳಗೆ ಅದೆಲ್ಲಾ ಇದೆ, ಢಾಳಾಗಿದೆ. ಪಾಪಿಷ್ಟ ತೋರಿಸುವುದಿಲ್ಲಷ್ಟೇ, ಗುರೂಜಿಯಂತೆ ಗುರೂಜಿ.. ಮಹಾನ್ ಸಂತನಾಗಿದ್ದೀನಿ ಅಂದುಕೊಂಡಿದ್ದಾನೆ, ಅವನು ಯಕಃಶ್ಚಿತ್ ಮನುಷ್ಯ ಅನ್ನುವುದನ್ನು ನಾನು ಅವನಿಗೆ ಹೇಳಬೇಕಿತ್ತು..
ಈ ಹೊತ್ತಿಗೆ ಅವನೇ ಪರಮಗುರು ಅಂತ ಮುಗಿಬೀಳುತ್ತಿದ್ದ ಜನ ಕನಿಷ್ಠ ಅವನನ್ನು ಅನುಮಾನದ ಕಣ್ಣಿಂದ ನೋಡಲು ಶುರುಮಾಡಿರುತ್ತಾರಾ? ಹಾಂ ಕೆಲವರಾದರೂ..., ಅವನ ಬಣ್ಣದ ಮಾತುಗಳಿಗೆ, ಪ್ರೀತಿ-ಕರುಣೆ-ಸಾಂಗತ್ಯ-ಪಾವಿತ್ರ್ಯ ಅನ್ನುವ ಸೋ ಕಾಲ್ಡ್ ಬುಲ್‌ಶಿಟ್‌ಗಳಿಗೆ ಮರುಳಾಗಿದ್ದ ಜನ ಇವನ ಬದುಕಿನ ಇತಿಹಾಸದ ಕತೆಗಳಿಗೆ ಕಣ್ಣುಬಾಯಿ ಬಿಟ್ಟು ಹೂಂಗುಟ್ಟುತ್ತಿರುತ್ತಾರಾ, ಕೆಲವರಾದರೂ? ಅದು ಅಷ್ಟೊಂದು ಮುಖ್ಯವಲ್ಲ ನನಗೆ.

ಆದರೆ, ಅವನು ಕಟ್ಟಿಕೊಂಡ ಕೋಟೆ ಚೂರು ಅಲುಗಿದರೂ ಅವನಿಗೆ ವ್ಯತ್ಯಾಸವಾಗುತ್ತದೆ. ಅವನು ಚಡಪಡಿಸುತ್ತಾನೆ. ಅವನು ಚಡಪಡಿಸುವುದನ್ನು ಯಾರೂ ಗುರುತುಹಿಡಿಯದಿರಲಿ ಅಂತ ಹೋರಾಡಿ ಹೋರಾಡಿ ಹೈರಾಣಾಗುತ್ತಾನೆ, ಅವನು ಒಂಟಿಯಾಗುತ್ತಾನೆ. ಸೇವಂತಿಯಾಗಿದ್ದಕ್ಕಿಂತ ಹೆಚ್ಚು ಒಂಟಿಯಾಗುತ್ತಾನೆ, ನಾನಿರುವುದಕ್ಕಿಂದ ಒಂಟಿಯಾಗುತ್ತಾನೆ, ಈಗ ಅವನು ಜಯಿಸಿದ್ದ ಜಗತ್ತಿನಲ್ಲಿ ಜಗತ್ತಿದ್ದೂ ಅವನು ಮಾತ್ರ ಅವನಿಂದಲೇ ಒಂಟಿಯಾಗುತ್ತಾನೆ. ಅಷ್ಟಾದರೂ ಸಾಕು.. ಅಷ್ಟಾಗುತ್ತದೆ. ಮತ್ತೂ ನನಗೆ ಖುಷಿ ಅನಿಸುತ್ತಿಲ್ಲ. ಅವನನ್ನು ಹಣಿಯುವ, ನೋಯಿಸುವ ಅಲ್ಟಿಮೇಟಮ್ ಸಿಕ್ಕಿದೆ ಅಂದುಕೊಂಡ ಮರುಕ್ಷಣಕ್ಕೇ ಅವನನ್ನು ಶಿಕ್ಷಿಸುವ, ನರಳಿಸುವ ಪ್ರಯತ್ನದಲ್ಲಿ ಜಗತ್ತಿನೆದುರು ಸಣ್ಣವನಾದೆ ಅಂತ ಅನ್ನಿಸುತ್ತಿದೆ ಸೇವಂತಿ. ಆದರೆ ನಾನು ಸಣ್ಣವನು ದೊಡ್ಡವನು ಅನ್ನುವುದು ನನ್ನ ಒಳಪ್ರಪಂಚ. ನಾನು ತೋರಿಸಿಯೂ ಅರ್ಥವಾಗದ ಪ್ರಪಂಚ, ನಿನಗಾದರೆ ಮಾತ್ರ ಅದು ಅರ್ಥವಾಗುತ್ತಿತ್ತು. ಹೀಗೆಲ್ಲಾ ಮಾಡಿ ನಾನು ಖುಷಿಯಾಗಿರುವುದಿಲ್ಲ ಅನ್ನುವುದೂ ನಿನಗೆ ಅರ್ಥವಾಗುತ್ತಿತ್ತು, ಆದರೂ ಮಾಡಿದೆ. ಆದರೂ ಖುಷಿಯಾಗಿಲ್ಲ.. ಸಮಾಧಾನವಿಲ್ಲ. ಏನೆಲ್ಲಾ ಬಡಬಡಿಸಿದೆ ನಾನು, ಆ ಚಂದ್ರಶೇಖರ ಗುರೂಜಿ ಅಷ್ಟಕ್ಕೂ ನಮ್ಮ ಚಂದ್ರ.. ಚಂದ್ರಾ ಅಲ್ಲವಾ ಸೇವಂತಿ! ನಿನ್ನ ಕೊಲ್ಲುತ್ತಾನಾ?
***
ಚಂದ್ರ ಉರುಫ್ ಶ್ರೀ ಚಂದ್ರಶೇಖರ ಗುರೂಜಿ : 'ಎದೆಯ ಸಂಕಟಗಳಿರುತ್ತಲ್ಲ, ಅದರ ನಿಟ್ಟುಸಿರೇ ಶಾಪ. ಶಾಪ ಯಾರನ್ನೂ ತಟ್ಟದಿರಲಿ ಅನ್ನುವುದು ಹೇಗೆ ಮನುಷ್ಯತ್ವವೋ.... ಅದು ತಟ್ಟಬೇಕಾದ ಕಡೆ ಖಂಡಿತಾ ತಟ್ಲಿ ಅನ್ನೋದು ಮನುಷ್ಯತ್ವವೇ.. ಒಳ್ಳೇವರೋ, ಕೆಟ್ಟವರೋ ಅವರವರ ನೋವಿಗೆ ಅವರದ್ದೇ ಪ್ರಾಮಾಣಿಕತೆ ಇರತ್ತೆ. ಅವರವರ ಬೇಗುದಿಗೆ ಅವರದ್ದೇ ರೀತಿಯ ಸಮಾಧಾನ ಬೇಕಿರತ್ತೆ. ನಾನು ಮುಟ್ಟಿಸಿಕೊಳ್ಳದೇ ಹೋದ ಆವತ್ತಿನ ನೋವೇ ಇವತ್ತು ನನ್ನನ್ನ ಶಾಪವಾಗಿ ಕಾಡ್ತಿದೆ ಅಂದರೆ... ಅಚ್ಚುತನಿಗೆ ಮುಟ್ಟದಲೇ ಇರೋ ನನ್ನ ನೋವು, ಅದೇ ತಿರುಗಿ ಅವನಿಗೆ ಶಾಪ ಆಗಿ...??? ಹೌದು, ಅವರವರ ನೋವಿಗೆ ಅವರದ್ದೇ ಪ್ರಾಮಾಣಿಕತೆ ಇರತ್ತೆ. ಅಚ್ಚುತನ ನೋವಿಗೂ.. ನನ್ನ ನೋವಿಗೂ...'

'ನಾನು ಅವಳನ್ನು ಸಾಯಿಸಲಿಲ್ಲ ಅಚ್ಚುತ, ನಾನೇ ಸತ್ತುಹೋದೆ”
ಹೀಗೆಲ್ಲಾ ಬಡಬಡಿಸೋದು ನಿಲ್ಲಿಸಿ ಎಷ್ಟೋ ವರ್ಷಗಳೇ ಆಗಿಹೋಗಿತ್ತು. ವಯಸ್ಸು ಐವತ್ತು ಅನ್ನುವುದು ನನಗೆ ಈಗ ಆದ ವಯಸ್ಸಲ್ಲ, ಸೇವಂತಿ ಹೋದ ಮೇಲೆ ಉದ್ದುದ್ದ ಗಡ್ಡ, ದೊಗಲೆ ಮೇಲಂಗಿ ಶಲ್ಯ ಹೊದ್ದು ಕೂತು, ಮಾತು ಮೌನಗಳ ಕಡೆಯುತ್ತಲೇ ಬಂದ ಈ ಹದಿಮೂರು ಮುಕ್ಕಾಲು ವರ್ಷದಲ್ಲಿ ಮನಸ್ಸಿನ ಗಡಿಯಾರ ಗತದಲ್ಲೇ ನಿಂತುಹೋಗಿದೆ, ವಯಸ್ಸು ಗರಿಷ್ಠ ಬಿಂದುವಿನಲ್ಲಿ ಎಂದೋ ತಟಸ್ಥವಾಗಿದೆ. ಆಗಿಂದ ನಾನು ಮಾತಾಡಿಕೊಂಡು ಬಂದದ್ದೆಲ್ಲ ತಾಳ್ಮೆಯ ಬಗ್ಗೆ, ನಿರ್ಮೋಹದ ಬಗ್ಗೆ, ಉದಾಸೀನ ಮತ್ತು ಪ್ರಾಮಾಣಿಕತೆಯ ಬಗ್ಗೆ.

ಈಗಲೂ ನಾನು ಮಾತಾಡುತ್ತಿರುವ ಶಾಪವೂ ಪ್ರಾಮಾಣಿಕತೆಯದ್ದೇ. ಆದರೆ ಈ ಪ್ರಾಮಾಣಿಕತೆ ಒಳ್ಳೇತನದ ಮುಲಾಜಿಗೆ ಬೀಳುವಂಥದ್ದಲ್ಲ, ಪ್ರೀತಿಯ ಜೇನು ಸವರಿಕೊಂಡದ್ದಲ್ಲ. ಈ ಪ್ರಾಮಾಣಿಕತೆ ಅಂದರೆ ಅದು ಯಾವುದೇ ಮೊಟ್ಟಮೊದಲ ಮತ್ತು ಕಟ್ಟ ಕಡೆಯ ಮನುಷ್ಯನಲ್ಲೂ ಎಚ್ಚರಾಗುವ ಅಂತಃಸತ್ವ. ಬದುಕುವ ಕಲೆ, ಸದಾಚಾರಗಳ ಬಗ್ಗೆ ಬೋಧಿಸುವ ನನ್ನಂಥ ಸುಪ್ರಸಿದ್ಧ ಗುರೂಜಿಯ ಒಳಗಿನ ಸ್ಪಷ್ಟ ಮತ್ತು ಸ್ವಚ್ಛ ಅಸಹನೆಯ ಪ್ರಾಮಾಣಿಕತೆ.
ನನಗೊಂದು ಪೂರ್ವಾಶ್ರಮವಿದೆ.. ಅಲ್ಲಿದ್ದಾಗ ನನಗೆ ಸ್ವಾರ್ಥ ಕೆಟ್ಟದು ಅನಿಸುತ್ತಿತ್ತು. ಈ ಸನ್ಯಾಸತ್ವದಲ್ಲಿ ಸ್ವಾರ್ಥ ಒಳ್ಳೆಯದು ಅನ್ನಿಸುತ್ತದೆ. ಆಗ ಪ್ರೀತಿ ಅಂದರೆ ಬದುಕುವಾಗಿನ ಆಯ್ಕೆಯಾಗಿತ್ತು. ಸನ್ಯಾಸತ್ವದಲ್ಲಿ ಪ್ರೀತಿಯೊಂದೇ ಆಯ್ಕೆ. ನಾನು ದೇವರಿಗಾಗಿ ಎಲ್ಲಾ ಬಿಟ್ಟವನಲ್ಲ. ನನ್ನದು ನನ್ನಲ್ಲಿಲ್ಲ ಅನ್ನುವುದು ಗೊತ್ತಾದ ಮೇಲೆ ತೊರೆಯುವಿಕೆಯನ್ನ ಒಪ್ಪಿಕೊಂಡವನು.

ನನ್ನ ಇತಿಹಾಸದ ದಿನಗಳು! ಎಮೋಷನಲಿ ಲಾಜಿಕಲ್ ಆಗಿದ್ದ ಆ ದಿನಗಳು. ಭಾವನೆಗಳಿಗಾಗಿಯೇ ಲೆಕ್ಕ ಕಲಿತಿದ್ದೆ. ಭಾವನೆಗಳನ್ನ ಬದುಕುವುದಕ್ಕೆ ಬದುಕಿರಬೇಕು ಮತ್ತು ಬದುಕುವುದಕ್ಕೆ ಸೂರು ನೀರು, ಅನ್ನ ಬಟ್ಟೆಯಷ್ಟೇ ಮುಖ್ಯವಾಗಿ ಇನ್ನೂ ಸಾಕಷ್ಟು ಬೇಕಾಗುತ್ತದೆ ಅನ್ನುವುದು, ಅದನ್ನೆಲ್ಲ ಗಳಿಸಿ ಯಶಸ್ವೀ ಗಂಡಸಾಗಬೇಕು ಅಂದುಕೊಂಡದ್ದೂ ಸೇವಂತಿಗೆ ಒಬ್ಬ ಅದ್ಭುತ ಗಂಡನಾಗಬೇಕು ಅನ್ನುವ ಮಹತ್ವಾಕಾಂಕ್ಷೆಯಿಂದ ಮಾತ್ರ. ‘ಸೇವಂತಿ’ ಅವಳು ನನ್ನ ಮಹತ್ವಾಕಾಂಕ್ಷೆಯ ಹೆಸರು !

ಪ್ರೊಫೆಸರ್ ಅಚ್ಯುತ ರಾಮ ಅನ್ನುವವನೂ ನನ್ನ ಅಚ್ಚುತನೇ. ನನಗವನು ಗೊತ್ತು. ಕಾರಿಕೊಳ್ಳುವುದೆಲ್ಲಾ ಬರೀ ಬುರುಗು.. ಒಳಗೆ ಅವನೂ ಶುದ್ಧ. ಆತ ಯಾವತ್ತಿಗೂ ನನ್ನನ್ನು ದ್ವೇಷಿಸಲಾರ. ಆದರೆ ಸೇವಂತಿಯನ್ನು ಪ್ರೀತಿಸುತ್ತಾನೆ.. ಬಂಡಿಯಾಗಿ ಪ್ರೀತಿಸುತ್ತಾನೆ. ನೀನು ಸಿಗದ ಕೋಪದಲ್ಲೂ ಸುಖವಾಗಿದ್ದ ಅವನು ನೀನು ಇಲ್ಲದ್ದಕ್ಕಾಗಿ ಹತಾಶನಾಗಿದ್ದಾನೆ ಸೇವಂತಿ.. ಮನಸ್ಸಿನ ಗಡಿಯಾರ ನನ್ನೊಬ್ಬನದೇ ನಿಂತಿಲ್ಲ, ಅವನದ್ದೂ.
***

ಕತೆಗಳು ವಿವರಣೆ ಕೇಳುತ್ತವೆ. ಬದುಕು ಸುಮ್ಮನೆ ಸಾಗಿಹೋಗುತ್ತದೆ. ನಮ್ಮ ಬದುಕು ಮೂರು ಚುಕ್ಕಿಗಳ ಸೇರಿ ಎಳೆದ ಒಂದು ಸರಳರೇಖೆ. ಹೆಚ್ಚಿಗೇನು ರಸಗಳಿಲ್ಲದ ‘ನಾನು ಸೇವಂತಿ’ ‘ನಾನು ಅಚ್ಚುತ’ ‘ನಾನು ಚಂದ್ರ’ ಅನ್ನುವ ಸಾತ್ವಿಕ ದಿನಚರಿಗಳು.

ರಸ್ತೆಗಳಿಂದಲೇ ದೂರವಿದ್ದ ಒಂದು ಕಾಲುಹಾದಿಯ ತುದಿಯಲ್ಲಿ ತೆರೆದುಕೊಳ್ಳುವ ಊರೆಂದರೆ ಅದು ಊರಲ್ಲ ನಮ್ಮ ಜಗತ್ತು. ಗಾಳಿಗೆ ಉದುರಿಬಿದ್ದ ಒಂದು ಹೂವಿನ ಪಕಳೆಗಳು ಅಲ್ಲೊಂದು ಇಲ್ಲೊಂದು ಹಾರಿ ಕೂತಂತ ಮನೆಗಳ ಸುತ್ತ ಅಚ್ಚ ಹಸಿರು ಕಾಡು. ಅಲ್ಲಿಂದ ಚೂರು ಚೂರೇ ಮುಂದೆ ಬಂದರೆ ಖಾಲೀ ಮಂಟಿ. ಅದರ ನಟ್ಟನಡುವೆ ಒಂದು ಹಳೇ ಮರದ ಕೆಳಗೆ ‘ನಾನು ಚಂದ್ರ’ ಪುಟ್ಟ ಬಾವಿ ತೋಡುತ್ತಿದ್ದೆ, ‘ನಾನು ಅಚ್ಚುತ’ ಪುಟ್ಟ ಲಿಂಗ ಮಾಡಿದರೆ, ‘ನಾನು ಸೇವಂತಿ' ತುಂಬೆ ಹೂವಿನ ಹಾರ ಕಟ್ಟಿ ಪೂಜೆ ಮಾಡುತ್ತಿದ್ದೆ. ದೇವರು ನಮ್ಮವನೇ ಆದ್ದರಿಂದ ಪೂಜೆಯ ವಿಧಾನಗಳು ನಮ್ಮ ಸ್ವಂತದ್ದವೇ. ಅವನು ನೆರವೇರಿಸಿಕೊಡಬೇಕಾದ ಜರೂರಿನದೇನೂ ನಮಗಿಲ್ಲದ್ದರಿಂದ ಅವನು ಕೇಳಿಸಿಕೊಳ್ಳುತ್ತಿದ್ದನಾ ಅನ್ನುವುದೂ ನಮಗೆ ಬೇಡದ ವಿಷಯ, ಆದರೂ ನಾವು ಪೂಜಿಸುತ್ತಿದ್ದೆವು. ಚಂದ್ರಶೇಖರನಿಗೆ ಬೇಕಾದ್ದೇನು? ಅಚ್ಯುತರಾಮನಿಗೆ ಬೇಕಾದ್ದೇನು? ಅನ್ನುವುದರಲ್ಲಿ ಸೇವಂತಿಗೆ ಪ್ರತ್ಯೇಕತೆಗಳಿರಲಿಲ್ಲ.

ಕಾಡುಮೇಡು ಸುತ್ತಿ ಆಗಾಗ ನಮ್ಮ ಮನೆ ತಿರುವಿಗೇ ಹೊಳೆ ಬರುತ್ತಿತ್ತು. ಅದೇ ಹೊಳೆಬೈಲಿನ ನಡುವೆ ಮುಳುಗಿದ್ದ ಚಂದ್ರನ ಹಳೇಮನೆ ಪಾಯದ ಕಲ್ಲುಗಳು, ಜಗುಲಿಗಲ್ಲು ನೀರಿಲ್ಲದಾಗ ಎಷ್ಟು ಬಿಡುಬೀಸಾಗಿ ಬಿಸಿಲಲ್ಲಿ ಸುಟ್ಟುಹೋಗುತ್ತಿದ್ದವೆಂದರೆ ಅವನ್ನು ತಣ್ಣಗಾಗಿಸುವ ಹೊಳೆ ಮತ್ತೆಂದೂ ಹರಿಯುವುದೇ ಇಲ್ಲವೇನೋ ಅನ್ನಿಸುತ್ತಿತ್ತು. ಆದರೆ ಮತ್ತೆ ಬರುತ್ತಿದ್ದ ಹೊಳೆಗೆ ಮತ್ತೆ ಮುಳುಗುವ ಅವುಗಳ ಕಸು ಸೇವಂತಿ, ಅಚ್ಚುತ, ಚಂದ್ರನಿಗೆ ಪ್ರತಿ ವರ್ಷ ಹೊಸ ಪಾಠ ಹೇಳಿಕೊಡುತ್ತಿದ್ದವು. ಈಗ ಈ ಕತೆಯಲ್ಲಿನ ನಾನು ಸೇವಂತಿ, ಚಂದ್ರ, ಅಚ್ಚುತ ಮುಳುಗುವ ಆ ಕಲ್ಲುಗಳ ಹಾಗೇ ಮುಳುಗುತ್ತಾ ಒಣಗುತ್ತಾ, ಸುಡುತ್ತಾ ಮತ್ತೆ ತಣ್ಣಗಾಗುತ್ತಾ ಖುದ್ದು ಪಾಠವಾಗುತ್ತಿದ್ದೇವೆ.
***
ಅಚ್ಚುತ : ಸುಮಾರೇನಲ್ಲ, ಆಗ ನನಗೆ ಹತ್ತು ವರ್ಷದ ಮೇಲೆ ಎರಡು ತಿಂಗಳು. ನನ್ನ ಚಿಕ್ಕಮ್ಮನ ಮದುವೆ. ಅಷ್ಟರ ತನಕ ಆಡಿಕೊಂಡಿದ್ದ ಚಿಕ್ಕಿ ಆಡಾಡುತ್ತಲೇ ಮದುವೆಯಾಗಿ ಹೋದಾಗ ಪ್ರಸನ್ನ ಮಾಮ ಸತ್ತು ಹೋಗುವಷ್ಟು ಅತ್ತಿದ್ದ. ಊಟ ತಿಂಡಿ ಬಿಟ್ಟು ಕೊರಗಿ ಹಾಸಿಗೆ ಹಿಡಿದವನನ್ನು ಸುಧತ್ತೆ ಊರಿಗೆ ಕರೆದುಕೊಂಡು ಹೋಗಿದ್ದರು. ಆರು ತಿಂಗಳಾದರೂ ಪ್ರಸನ್ನ ಮಾಮ ತಿರುಗಿ ಬರುವ ಸುದ್ದಿ ಎತ್ತಲೇ ಇಲ್ಲ. ಚಿಕ್ಕಿ ಇಲ್ಲದ ಮನೆಗೆ ಬರುವುದು ಅವನಿಗೆ ಒಪ್ಪಿಗೆ ಇರಲಿಲ್ಲ. ನಾನು ಆವತ್ತೇ ಅದೇ ಮಂಟಿ ಮೇಲಿನ ಮರದ ಕೆಳಗೆ ಲಿಂಗದ ಸಾಕ್ಷಿಯಾಗಿ ಸೇವಂತಿ ನನ್ನೇ ಮದುವೆಯಾಗಬೇಕು, ನನ್ನ ಬಿಟ್ಟು ಹೋಗಬಾರದು ಅಂತ ಚಂದ್ರನಿಗೂ, ಸೇವಂತಿಗೂ ಘಂಟಾಘೋಷವಾಗಿ ಹೇಳಿದ್ದೆ. ಹಸೀ ಎಲೆಯಲ್ಲಿ ಬಟ್ಟಲು ಮಾಡಿ ಇಲ್ಲದ ಎಣ್ಣೆ ಕೈಗಚ್ಚಿಕೊಂಡು ತಲೆಸವರುವ ಸೇವಂತಿ, ಅಂಗೈಯೊಳಗೆ ಕೈ ತೆಗೆದುಕೊಂಡು ಲಿಟಿಕೆ ಮುರಿಯುವ ಸೇವಂತಿ, ಹುಣಸೆಹಣ್ಣಿಗೆ ಜೀರಿಗೆ ಮೆಣಸಿನಕಾಯಿ ಜಜ್ಜಿ ಹಂಚಿಕಡ್ಡಿಗೆ ಸಿಕ್ಕಿಸಿ ಕೊಡುವ ಸೇವಂತಿ, ನನ್ನೆಲ್ಲಾ ಮಾತಿಗೂ ಹೂಂಗುಟ್ಟುವ ಸೇವಂತಿ, ನಾನು ಬಿದ್ದರೆ ಕಾಳಜಿ ಮಾಡುವ ಸೇವಂತಿ.. ಚಿಕ್ಕಿ ಪ್ರಸನ್ನ ಮಾಮನನ್ನು ಬಿಟ್ಟುಹೋದಂತೆ ನಾನು ಬಿಟ್ಟುಕೊಡುವುದಿಲ್ಲ. ಸೇವಂತಿ ನನ್ನೇ ಮದುವೆಯಾಗಬೇಕು ಎಂದೆ. ಸೇವಂತಿ ನಕ್ಕಳಷ್ಟೇ. ಚಂದ್ರ ಅದೊಂದು ಸಂಗತಿಯೇ ಅಲ್ಲ ಅಂದುಕೊಂಡಿದ್ದ. ಆದರೆ ನನಗದು ಜೀವನರ‍್ಯಂತಕ್ಕೆ ಮಾಡಿಕೊಂಡ ಒಪ್ಪಂದವಾಗಿತ್ತು. ಮುಂದೆ ಆಟ ಪಾಠ ತಿರುಗಾಟಗಳ ಮಧ್ಯೆ ನಾನು ದೂರವಿದ್ದರು ನಾವು ಮೂವರೂ ಹತ್ತಿರವೇ ಇದ್ದೆವು, ಸೇವಂತಿ ನನಗೆ ಹೆಂಡತಿಯೇ ಅನಿಸಿದ್ದಳು.

ಚಂದ್ರ ಮತ್ತು ಸೇವಂತಿಯ ಮದುವೆಯಾದಾಗ ಅವರಿಬ್ಬರಿಗೂ 22 ವರ್ಷ. ನನಗೆ 20. ಹಸಿರುನಾಡಿನ ಆಚೆಗೆ ಬಂದು ಈ ದೊಡ್ಡ ಯೂನಿವರ್ಸಿಟಿಯ ಕ್ಯಾಂಪಸ್ಸಿನಲ್ಲಿ ಚಿಗುರು ಹೀರೋ ಥರ ಮಾನ್ಯತೆ ಸಿಕ್ಕ ನಂತರವೂ ನನಗೆ ಸೇವಂತಿ ಅಂದರೆ ನನ್ನ ಅಂಟಿಕೊಂಡಿದ್ದ ಗಾಢ ಘಮಲು.. ಪ್ರೀತಿ ಹುಟ್ಟುವ ಬೆಳೆಯುವ ನಮ್ಮನ್ನು ಭರ್ತಿ ಭರ್ತಿ ಅಡರಿಕೊಳ್ಳುವ, ಅವುಚಿಕೊಳ್ಳುವ ಪರಿಣಾಮಗಳನ್ನೆಲ್ಲಾ ಓದಿಕೊಂಡಷ್ಟೂ ಸೇವಂತಿ ಮಾತ್ರ ನನ್ನೊಳಗೇ ಬರೆದುಕೊಳ್ಳುತ್ತಿದ್ದ ಸಮಯ ಅದು, ಅವರಿಬ್ಬರೂ ಮದುವೆಯಾದರು. ನಾನು ಪ್ರಶ್ನಿಸಲಿಲ್ಲ..

ಸೇವಂತಿ ನನ್ನ ಕೈ ಹಿಡಿದುಕೊಂಡೇ ಮತ್ತೆ ಹೊಸತೆನಿಸುವಂತೆ ಚಂದ್ರನ ಮನೆ ತೋರಿಸಿದಳು. ಅವಳು ಖುಷಿಯಾಗಿದ್ದಳು. ಅಷ್ಟರ ಮೇಲೂ ನಾವು ಅದೇ ಮರದ ಬಳಿ ಹೋಗಿ ಅಂದಿನಂತೆ ಬಾವಿ ತೋಡಿ, ಲಿಂಗ ಮಾಡಿ, ಸೇವಂತಿ ಮಾಡಿದ ತುಂಬೆ ಹಾರ ಹಾಕಿ ಪೂಜೆ ಮಾಡಿದೆವು. ಸೇವಂತಿ ಎಂದಿನಂತೆ ನನ್ನ ಆತು ಕೂರದೆಯೂ ಆವರಿಸಿದ್ದಳು. ಅವಳು ನಾನು ಮಿಂದು ತೊಳೆಯಬಹುದಾದ ಘಮಲಲ್ಲ, ಆಂರ‍್ಯದ್ದು ಅನ್ನುವಷ್ಟು ತೀವ್ರವಾಗಿ ಉಮ್ಮಳಿಸಿ ಬರುವಾಗ ಎದ್ದು ಬಂದೆ. ಸೇವಂತಿ ಚಂದ್ರನನ್ನು ಆತು ಕೂತಳು.

ಆಮೇಲೆ..

ಏಳುಸಮುದ್ರಗಳಾಚೆ, ಏಳು ಬೆಟ್ಟಗಳಾಚೆ, ಏಳುಮಲ್ಲಿಗೆ ತೂಕದ ನನ್ನ ಸೇವಂತಿ ಇಲ್ಲದೆಯೂ ನಾನು ನೆಮ್ಮದಿಯಾಗಿದ್ದೆ. ಹಿಮದ ದೇಶದಲ್ಲಿ ನಾನು ಸೇವಂತಿಗೆ ಗಿಡ ನೆಟ್ಟುಕೊಂಡು ಹೂವಿಗೆ ಕಾಯುವುದು ಹಿಂಸೆ ಅನ್ನಿಸಿದರೂ.. ತಾಳ್ಮೆ ಖುಷಿ ಅನ್ನಿಸುತ್ತಿತ್ತು. ಕಾಲಾಯ ತಸ್ಮೈ ನಮಃ.. ಊರು, ಮಂಟಿ, ಮರ, ಹೊಳೆ, ಮುಳುಗಿದ ಪಾಯದ ಕಲ್ಲಿನಿಂದ ನಾವು ಮೂವರು ಆಚೆಗೆ ಬಂದಾಗಿತ್ತು. ಎಲ್ಲಾ ದೊಡ್ಡದಾಗಿ, ಹೊಸದಾಗಿ, ಪ್ರತ್ಯೇಕ ದೇಶದ ಮಹಾನಗರಗಳಲ್ಲಿ ನಾವು ಒಬ್ಬರೊಬ್ಬರಿಗೆ ನೆನಪಾಗದಷ್ಟು ಜೊತೆಗೇ ಇದ್ದರೂ ಮತ್ತೆ ಮೊದಲಿನಂತೆ ಮಾತು ಸಾಧ್ಯವಾಗುತ್ತಿರಲಿಲ್ಲ.
ಯಾವಾಗಾದರೋ ಒಮ್ಮೆ, ನಾನು ಪುಟ್ಟಸೇವಂತಿ ಹುಟ್ಟಲಿ ಅಂತ ಹರಸಿ ಕೊಟ್ಟಿದ್ದ ಕಾಲ್ಗೆಜ್ಜೆಯನ್ನು ಮಣಿಕಟ್ಟಿಗೆ ಕಟ್ಟಿಕೊಂಡು ಸದ್ದುಮಾಡುತ್ತಿದ್ದಳು ಸೇವಂತಿ. ತನಗಾಗಿ ಅರಮನೆ ಕಟ್ಟಿಸಿದ ಚಂದ್ರ ರೇಷಿಮೆ ಮೇಲೆ ನಡೆಸಿ ಬಂಗಾರದ ಗೊಂಬೆಯಂತೆ ಜೋಪಾನ ಮಾಡುತ್ತಾನೆ ಅಂತ ಒಂದು ದಿನ ನಕ್ಕಿದ್ದಳು.. ನನಗೆ ಸೇವಂತಿಗೆ ಬಾಡಿದ್ದು ಗೊತ್ತೇ ಆಗಲಿಲ್ಲ.
***
ಚಂದ್ರ : ಹೌದು, ಅರಮನೆಯಂಥ ಮನೆಯಲ್ಲಿ ನಾನು ಅವಳನ್ನು ರೇಷಿಮೆಯಂತೆ ನೋಡಿಕೊಂಡೆ. ಬಂಗಾರದ ಗೊಂಬೆಯಷ್ಟೇ ಜತನ ಮಾಡಿದೆ. ಜೊತೆಯಲ್ಲೇ ಬೆಳೆದದ್ದಲ್ಲವಾ.. ಅವಳ ಕಣ್ಣ ಕನಸುಗಳೆಲ್ಲಾ ನನಗೆ ಗೊತ್ತಿತ್ತು. ಅದನ್ನೆಲ್ಲಾ ನಿಜ ಮಾಡಬೇಕಿತ್ತು. ಊರ ಜಾತ್ರೆಯಲ್ಲಿ ಗಿಲೀಟಿನ ಒಡವೆ ನೋಡುತ್ತಾ ನಿಲ್ಲುತ್ತಿದ್ದ ಅವಳ ಆಸೆ ತೀರಿಸಬೇಕಿತ್ತು. ಅಪರೂಪಕ್ಕೆ ಕಾಣಿಸುತ್ತಿದ್ದ ಏರೋಪ್ಲೇನಿಗೆ ಕೈ ಬೀಸುವ ಅವಳ ಸಂಭ್ರಮವನ್ನು ಮೋಡಗಳ ನಡುವೆ ಹಾರಿಸಿ ತೋರಿಸಬೇಕಿತ್ತು. ನಡೆದು ನಡೆದು ಒಡೆದ ಪಾದಗಳಿಗೆ ಮುಲಾಮಾಗಿ ಅವಳನ್ನು ಹೂಹಾಸಿನ ಮೇಲೆ ನಡೆಸಬೇಕಿತ್ತು.

ನನಗೆ ಸೇವಂತಿ ಮುಖ್ಯವಾಗಿದ್ದಳು, ಗೆಳತಿಯಾ, ಪ್ರೇಯಸಿಯಾ ಅನ್ನುವುದೆಲ್ಲಾ ನನಗೆ ಅರ್ಥವಾಗುತ್ತಿರಲಿಲ್ಲ. ಸರಳರೇಖೆ ಮೇಲೇ ಹೋಗುವ ಕಷ್ಟದ ಬದುಕಿನ ಸಂಪ್ರದಾಯಸ್ಥ ಹಳ್ಳಿಮನೆಯಲ್ಲಿದ್ದ ನನ್ನ ಮನಸ್ಥಿತಿ ಹೇಗೂ ಸಿನಿಕವಾಗಲು ಸಾಧ್ಯವೇ ಇರಲಿಲ್ಲ. ಜೊತೆಗಿದ್ದೆವು, ನಮ್ಮಗಳ ಮಧ್ಯೆ ಕಾಳಜಿ ಇತ್ತು ಅಷ್ಟೇ.
ಸೇವಂತಿಯನ್ನು ಮದುವೆಯಾಗುವ ಇರಾದೆ ಇದ್ದದ್ದು ಅಚ್ಚುತನಿಗೆ ಮಾತ್ರ. ತೊಂಬತ್ತೆರಡೆಕೆರೆ ತೋಟದ ಒಬ್ಬನೇ ವಾರಸುದಾರ ಅಚ್ಚುತ, ಸೇವಂತಿ ಅವನ ಜೊತೆ ಇದ್ದರೆ ಸುಖವಾಗಿರುತ್ತಾಳೆ ಅಂತ ಮಾತ್ರ ನನಗೆ ಯಾವತ್ತೂ ಅನ್ನಿಸುತ್ತಿತ್ತು. ಸೇವಂತಿ ಮಾತ್ರ ಇದ್ಯಾವುದರ ಗೊಡವೆಯೂ ಇಲ್ಲದೆ ಸುಮ್ಮನೆ ನಮ್ಮಿಬ್ಬರ ಜೊತೆಗೂ ಹಾಯೆನಿಸುವಂತಿದ್ದಳು.

ಅಚ್ಚುತ ಓದಲಿಕ್ಕೆ ದೂರ ಹೋದ ಮೇಲೆ ಹೇಗೋ ಹಠಕ್ಕೆ ಬಿದ್ದು.. ನಾನು, ಸೇವಂತಿ ನಡೆದು, ಬಸ್ಸಿಡಿದು ಒಂದು ಡಿಗ್ರಿ ಅಂತ ಸಂಪಾದಿಸಿಕೊಂಡದ್ದು ಆ ಕಾಲಕ್ಕೆ ಸಾಹಸವೇ.

ಇಂತಹ ಸಾಹಸಗಳ ಸಾಧಿಸುವಾಗ ಇಬ್ಬರೇ ಇರುತ್ತಿದ್ದೆವು. ನಾವಿಬ್ಬರೇ...
ಒಂಟಿ ಮರ, ಹೊಳೆಯ ಬದುವಲ್ಲಿ ಗವ್ವೆನ್ನುವ ನಿಶ್ಯಬ್ಧದ ಒಂದು ನಡುಮಧ್ಯಾಹ್ನ ಯೌವ್ವನ ಆತ್ಮೀಯತೆಯನ್ನು ಮೀರಿ ಆವರಿಸಿಕೊಂಡಾಗ ಆವರೆಗೂ ಜೀವನರ‍್ಯಂತ ಜೊತೆಯಾಗಿರುವ ಯಾವ ಒಪ್ಪಂದವೂ ನಮ್ಮಲ್ಲಿ ಮಾತಾಗಿರಲಿಲ್ಲ. ಕಡುಪ್ರೀತಿಯ ನಾವು ಪ್ರೀತಿಯ ವ್ಯಾಖ್ಯಾನವಿಲ್ಲದೆಯೇ ಕಾಮಿಸಿದ್ದೆವು.

ಪ್ರಮಾಣವಾಗಲೂ ನನಗೆ ಮೊದಲು ಅಚ್ಚುತನಿಗಾಗೇ ಬೇಸರವಾಗಿದ್ದು, ಸೇವಂತಿಯ ಸುಖ ತಪ್ಪಿಸಿದೆನಾ ಅಂತಲೂ ಬೇಸರವಾಗಿತ್ತು, ಹೀಗೂ ಆಯಿತಾ.. ಆಗುತ್ತದಾ, ಆಯಿತಲ್ಲಾ ಅನ್ನುವ ಗೊಂದಲ, ನಾಚಿಕೆಗಳಿಂದ ಬೇಸರವಾಗಿತ್ತು. ಆದರೆ, ಅವುಗಳನ್ನ ಮೀರಬೇಕಿತ್ತು. ಸೇವಂತಿಯ ಕಣ್ಣಲ್ಲಿ ಸಂಕೋಚ, ಅಸಹಾಯಕತೆಯ ನಡುವೆಯೂ ನಂಬಿಕೆ ಕಂಡಾಗ ಅವಳನ್ನು ಮದುವೆಯಾದೆ.

ಕೆಲವೊಂದು ಮದ್ದಿಲ್ಲದ ಹುಚ್ಚುಗಳಿರುತ್ತವೆ. ಅಂತೆಯೇ ನನಗೀಗ ಅಚ್ಚುತ ಕೊಡಬಹುದಾದ್ದೆಲ್ಲಾ ಗಳಿಸಿಕೊಳ್ಳಬೇಕಿತ್ತು. ನಾನು ಅಂದುಕೊಂಡು ಬೆಳೆದಿದ್ದೇ ಹಾಗೇ. ಅವಳಿಗಾಗಿ ಲೆಕ್ಕದೊಳಗೆ ಮುಳುಗಿದೆ, ವ್ಯವಹಾರ ಕಲಿತೆ, ಅವಳ ಕಣ್ಣಲ್ಲಿ ನಾನು ಕಂಡಿದ್ದ ನಿರಾಸೆಗಳಿಗಾಗಿ ದುಡಿದೆ. ಬಹುಶಃ ಅವಳಿಗಾಗಿ ದುಡಿಯುತ್ತಾ ದುಡಿಯುತ್ತಾ ಜಾತ್ರೆಯಲ್ಲಿ ಅವಳನ್ನು ಕಳೆದುಹೋಗಲು ಬಿಟ್ಟೆ.

ಅವಳು ಮಾತಿಗೆ ಕೂತಾಗ ನಾನು ಮಾತಾಗಲಿಲ್ಲ, ಅಷ್ಟುದ್ದದ ನಡಿಗೆಗೆ ಕೈ ಸೇರಿಸಲಿಲ್ಲ, ಅವಳ ನಗುವಿಗಾಗಿ ದುಡಿಯಲು ಹಚ್ಚಿಕೊಂಡ ನನಗೆ ಅವಳ ನಗು, ಅವಳ ಚಂದಗಳನ್ನೆಲ್ಲಾ ನೋಡಿ ಸಂಭ್ರಮಿಸುವುದು ಸಾಧ್ಯವಾಗಲಿಲ್ಲ. ಕುತೂಹಲಗಳಿಲ್ಲದೆ ಕೂಡಿದರೆ ನೆಲವೂ ಚಿಗುರುವುದಿಲ್ಲ - ಅಚ್ಚುತ ಕೊಡಿಸಿದ ಪುಟಾಣಿ ಕಾಲ್ಗೆಜ್ಜೆ ಅವಳ ಮಣಿಕಟ್ಟಿನಲ್ಲಷ್ಟೇ ಸದ್ದು ಮಾಡುತ್ತಿತ್ತು... ಅವಳು ಮಂಕಾದಳು, ಅವಳು ನಾನು ನೋಡುತ್ತಾ ಬೆಳೆದ, ಬೆಳೆಯುತ್ತಾ ನೋಡಿದ ಅವಳಾಗಿರಲಿಲ್ಲ. ಕಡೆ ಕಡೆಗೆ ಪರಸ್ಪರ ಅಪರಿಚಿತರಾದೆವು. ನನಗಾಗ ಅವ್ಯಾವೂ ಸಂಗತಿಗಳೇ ಅನಿಸಲಿಲ್ಲ.
ಈಗ ಎಲ್ಲವೂ ಗೊತ್ತು, ವಯಸ್ಸಿಗೆ ತಕ್ಕಂತೆ ಆಸೆಗಳು, ಬಯಕೆಗಳು ಬದಲಾಗುತ್ತವೆ... ಪ್ರಬುದ್ಧತೆಗೂ ಪ್ರೀತಿಯ ನಿರೀಕ್ಷೆಗಳಿಗೂ ಸಂಬಂಧವೇ ಇಲ್ಲ... ಹಸಿದಾಗ ಅಡಿಗೆ ಮನೆಯಲ್ಲಿನ ಅನ್ನದ ನಂಬಿಕೆ ಹೊಟ್ಟೆ ತುಂಬಿಸುವುದಿಲ್ಲ, ಅನ್ನ ಗಂಟಲಿಂದ ಹೊಟ್ಟೆಗಿಳಿಯಬೇಕು... ಪ್ರೀತಿ ಇದೆ ಅನ್ನುವ ಯಾವ ನಂಬಿಕೆಯೂ ಎದೆಗಿಳಿಯದೇ ತಣಿಯುವುದಿಲ್ಲ.. ಹೀಗೇ.. ಹೀಗೇ ನಂಗೀಗ ಎಲ್ಲವೂ ಗೊತ್ತು. ಆದರೆ ಆವತ್ತು ಸೇವಂತಿ ಹಸಿವಿನಿಂದ ನರಳಿದ್ದಳು, ಅದೂ ಸಾಯುವಂಥ ಹಸಿವು.

***
‘ಮತ್ತು ಅವರೆಲ್ಲಾ ಸುಖವಾಗಿದ್ದರು’ ಅನ್ನುವ ಸಾಲು ಯಾವತ್ತೂ ಕತೆಯ ಕಡೇಗೆ ಬರಬೇಕು. ಒಂದು ಕಾಲವಿತ್ತು. ನಾವು ಸುಖವಾಗಿದ್ದೆವು. ಹೀಗೆ ಶುರುವಾಗುವ ನನ್ನ ಕತೆಯಲ್ಲಿ ಮೂವರಿದ್ದೆವು. ನಾನು ಅಂದರೆ ಸೇವಂತಿ, ನಾನು ಅಂದರೆ ಅಚ್ಯುತರಾಮ ಮತ್ತು ನಾನು ಅಂದರೆ ಚಂದ್ರಶೇಖರ. ನಾವು ಅತ್ಯಂತ ಶ್ರೀಮಂತರಾಗಿದ್ದ ಕಾಲವೊಂದಿತ್ತು. ಈಗ ಈ ಶ್ರೀಮಂತಿಕೆಗೆ ತೀರಿಸಲಾಗದ ಬಡತನದಲ್ಲಿದ್ದೇವೆ. ಈಗ ಮೊದಲಿನಂತೆ ಕಡುಪ್ರೀತಿಯಲ್ಲಿರಲಾರೆವು, ಹಠಕ್ಕೆ ಬಿದ್ದು ಜೊತೆಯಾಗಿ ನಡೆಯಲಾರೆವು, ಕಾಳಜಿಯ ಹೆಸರಿನಲ್ಲಿ ಮೋಹಿಸುವುದನ್ನು ಬಿಟ್ಟೆವು. ನಾವು ನಮ್ಮ ನಮ್ಮ ವ್ಯಾಖ್ಯಾನಗಳಲ್ಲಿ ಪ್ರೀತಿಯನ್ನು ದಿಕ್ಕು ತಪ್ಪಿಸಿದೆವು.

ಬಡತನದ ಹಸಿವಿದ್ದ ಹಾಗೆ ಹಸಿವಿನ ಬಡತನದವರಿದ್ದಾರೆ... ಗುಡಿಸಿಲಿಗೆ ಕಾಣುವ ಅರಮನೆಗೂ, ಅರಮನೆಗೆ ಕಾಣಿಸದ ಗುಡಿಸಲಿಗೂ ವ್ಯತ್ಯಾಸ ಕಡಿಮೆಯೇ. ಪ್ರೀತಿಯ ನದಿಯೊಂದೇ ಈ ಎರಡೂ ದಡಗಳ ತಂಪಾಗಿಡಬಲ್ಲದು. ಪ್ರೀತಿ ಇಲ್ಲದ ಮೇಲೆ ಎಲ್ಲರೂ ದರಿದ್ರರೇ. ಈ ಪೈಕಿ; ಅನ್ನದ ಬಡತನಕ್ಕೆ ಮರುಕ ಪಡುವವರೂ, ದಾನಿಗಳೂ, ಹೋರಾಡುವವರೂ ಸಿಗುತ್ತಾರೆ. ಈ ಜಗತ್ತಿಗೆ ಪ್ರೀತಿಯ ದರಿದ್ರರ ಮೇಲೆ ಕುತೂಹಲವಿದ್ದರೂ ಭರ್ತಿ ಉದಾಸೀನ.

ಪ್ರೇಮಿಸುವುದೆಂದರೆ ಪ್ರೇಮಕ್ಕಿಂತಲೂ ಮಿಗಿಲಾದ್ದು. ಅಚ್ಚುತ.. ಚಂದ್ರ ಪ್ರೇಮಕ್ಕಿಂತಲೂ ಮಿಗಿಲಾದವರು. ಆದರೆ ಮಿಗಿಲು ಅನ್ನುವುದು ಬದುಕಿಸುವ ಸಂಗತಿಯಲ್ಲಾ ಅನ್ನುವುದು ಎಷ್ಟು ಜನರಿಗೆ ಗೊತ್ತು. ಈ ವರ್ಷವೂ ಮನೆ ತಿರುವಿಗೆ ಹೊಳೆ ಬಂದಿದೆ. ಬೆಂದುಹೋಗಿದ್ದ ಕಲ್ಲುಗಳು ಮುಳುಗಿ ತಣ್ಣಗಾಗುತ್ತಿವೆ. ದೂರದ ಮಂಟಿಯ ಒಂಟಿ ಮರದ ನೇರಕ್ಕೆ ಮಣ್ಣಾದ ಸೇವಂತಿಯ ಮೇಲೊಂದು ಸಂಪಿಗೆ ಮರ. ಸಂಪಿಗೆಯ ಘಾಟು ಘಮದಲ್ಲೂ ಸೇವಂತಿ ಒಳಗಿಂದ ಘಮ್ಮೆನ್ನುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT