ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫೀಸರ್ಸ್ ನಶ್ಯವೂ.. ಬೀಡಿಕಟ್ಟೂ..!

Last Updated 20 ಜುಲೈ 2019, 19:45 IST
ಅಕ್ಷರ ಗಾತ್ರ

ನಾನು ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದ ಸಮಯ. ನಮ್ಮ ತಾಯಿಯ ಸೋದರ ಮಾವ ರಾಮರಾಯರಿಗೆ ಸುಮಾರು ಜನ ಗಂಡು ಮಕ್ಕಳು, ಹೆಣ್ಣುಮಕ್ಕಳು ಎಲ್ಲರೂ ಇದ್ದರು. ಇವರಲ್ಲಿ ಮದುವೆ ವಯಸ್ಸಿಗೆ ಬಂದ ಮೊದಲಿಬ್ಬರಾದ ಶ್ರೀನಿವಾಸರಾವ್ ಮತ್ತು ಕೇಶವಮೂರ್ತಿ ಇಬ್ಬರಿಗೂ ಒಟ್ಟಿಗೆ (ಮುಂದೆಲ್ಲ ನಾನು ಇವರನ್ನು ಸೀನಿ, ಕೇಶವ ಎಂದೇ ಕರೆಯುತ್ತೇನೆ) ಮದುವೆ ನಿಷ್ಕರ್ಷೆಯಾಯಿತು. ಮದುವೆ ಕಣಿವೆ ಕೆಳಗಿನ ಹೆಣ್ಣುಮಕ್ಕಳ ಜೊತೆಗೆ. ಆಗೆಲ್ಲ ಯಳಂದೂರು ತಾಲ್ಲೂಕಿನ ಬಹುಪಾಲು ಹಳ್ಳಿಗಳು ತಮಿಳುನಾಡಿನ ಬಾರ್ಡ‌ರ್‌ನಲ್ಲಿ ಇದ್ದುದರಿಂದ, ಅಲ್ಲಿಂದಹೆಣ್ಣುಗಳನ್ನು ತರುವುದು ವಾಡಿಕೆ. ದೂರದ ಕೊಯಮತ್ತೂರು ಜಿಲ್ಲೆಯ ಕೋಂಪಟ್ಟಿ ಎಂಬ ಹಳ್ಳಿಯಿಂದ ಸೀನಿ ಹಾಗೂ ಕೇಶವ ಇಬ್ಬರಿಗೂ ಇಬ್ಬರು ಕಸಿನ್ ಸಿಸ್ಟರ್‌ಗಳನ್ನು ಗೊತ್ತು ಮಾಡಿಕೊಂಡು ಬಂದರು.

ಸೀನಿ, ಕೇಶವ ಇಬ್ಬರ ಮದುವೆ ನಡೆದುದು ಟಿ. ನರಸೀಪುರ ತಾಲ್ಲೂಕಿನ ತುಂಬುಲ ಎಂಬ ಹಳ್ಳಿಯಲ್ಲಿ (ಅದನ್ನು ಕರೆಯುತ್ತಿದ್ದುದು ತುಂಮ್ಲಾ ಎಂದೇ! ಆದರೆ ನಾವು ಮದುವೆ ಸಿಂಮ್ಲಾದಲ್ಲಿ ಎಂದು ಹೇಳಿಕೊಂಡು ಖುಷಿಪಡುತ್ತಿದ್ದೆವು) ತಾಯಿಯ ಕಡೆಯ ಸಂಬಂಧ. ಹತ್ತಿರ ಸಂಬಂಧ ಎಂದಮೇಲೆ ನಾವು ಮದುವೆಗೆ ಹೋಗದಿದ್ದರಾಗುತ್ತದೆಯೇ?

ಮದುವೆಯ ಹಿಂದಿನ ದಿನ ಹೊರಡುವುದೆಂದು ನಿರ್ಧಾರವಾಗಿ ಯಳಂದೂರು ತನಕ ಎತ್ತಿನಗಾಡಿ ಪ್ರಯಾಣ. (1955–56 ಸುಮಾರಿನಲ್ಲಿ) ಅಲ್ಲಿಂದ ಮುಂದಕ್ಕೆ ನರಸೀಪುರದವರೆಗೆ ಷರೀಫ್ ಎಕ್ಸ್‌ಪ್ರೆಸ್. ಹೆಸರಿಗೆ ಎಕ್ಸ್‌ಪ್ರೆಸ್. ಒಂದೆರಡು ಮನೆಗಳಿರುವ ಹಳ್ಳಿಯನ್ನು ಕಂಡರೂ ಸಾಕು, ಹಾರನ್ ಮಾಡುತ್ತಾ ನಿಧಾನವಾಗಿ ಹೋಗುವುದು, ಯಾರಾದರೂ ಕೈತೋರಿಸಿದ ಕಡೆ ನಿಲ್ಲಿಸುವುದು. ಕಾಲು ಹಾದಿಯಲ್ಲಿದ್ದ ಗದ್ದೆ ಪಕ್ಕದಿಂದ ಯಾರಾದರೂ ನಡೆದು ಬರುತ್ತಿದ್ದರೆ, ಗಿರಾಕಿ ಬರುತ್ತಿದ್ದಾರೆಂದು ಅವರು ಬರುವವರೆಗೂ ನಿಲ್ಲಿಸಿ, ಅವರು ಎಡಕ್ಕೋ, ಬಲಕ್ಕೋ ಹೊರಳಿಕೊಂಡರೆ ಡ್ರೈವರ್ ಖಾದರ್ ಸಾಬ್ ಮನಸ್ಸಿನಲ್ಲಿಯೇ ಬೈದುಕೊಂಡು ಗೇರ್ ಬದಲಿಸಿ ಹೊರಡುವುದು ಇವೆಲ್ಲ ಸಾಮಾನ್ಯ.

ನರಸೀಪುರದಿಂದ ಪುನಃ ಎತ್ತಿನಗಾಡಿಯೋ ಮತ್ತೊಂದರಲ್ಲೋ ಪ್ರಯಾಣ. ಕಡೆಗೂ ತುಂಮ್ಲಾ ತಲುಪಿದಾಗ ವರಪೂಜೆಯ ವರಗಳನ್ನು ಇದಿರುಗೊಳ್ಳುವ ಗೋಧೂಳಿ ಸಮಯ ಬಂದೇ ಬಿಟ್ಟಿತ್ತು.

ಸೀನಿಗೆ ಅಂಬಾಳ್ ಆಫೀಸರ್ಸ್ ನಶ್ಯ ಏರಿಸುವ ಚಟವಿದ್ದರೆ, ಕೇಶವನಿಗೆ ಗಣೇಶ ಬೀಡಿ ಸೇದುವ ಚಟ. ಮದುಮಕ್ಕಳು ಎಲ್ಲರ ಮುಂದೆ ನಶ್ಯ ಹಾಕುವುದು, ಬೀಡಿ ಸೇದುವುದು ಮಾಡಲಾದೀತೇ? ಆದರೆ ತುರಿಕೆ ಎದ್ದ ಸ್ಥಳದಲ್ಲಿ ಸದಾ ಕೈಯಾಡಿಸುತ್ತಲೇ ಇದ್ದರೆ ಹಾಯೆನಿಸುವಂತೆ ಅರ್ಧಗಂಟೆ, ಗಂಟೆಗೊಮ್ಮೆ ಚಟ ತೀರಿಸಿಕೊಳ್ಳದಿದ್ದರೆ ಮದುಮಕ್ಕಳಾಗಿ ಸಂಭ್ರಮಿಸುವುದಾದರೂ ಹೇಗೆ? ಇಬ್ಬರಲ್ಲಿ ನಶ್ಯದ ಚಟದ ಸೀನಿ ಡಬ್ಬಿಯನ್ನು ಹೇಗೋ ಜೇಬಿನಲ್ಲಿ ಇಟ್ಟುಕೊಂಡು ಬಿಡಬಹುದಾಗಿತ್ತು. ಆದರೆ, ಬೀಡಿ ಸೇದುವವರು ಹಾಗಲ್ಲ. ಬೀಡಿ ಕಟ್ಟಿನ ಜೊತೆಗೆ ರೆಡಿಯಾಗಿ ಬೆಂಕಿ ಪೆಟ್ಟಿಗೆಯು ಇರಲೇಬೇಕಲ್ಲ. ಸೇದುವಾಗಲೆಲ್ಲ ‘ಏಯ್ ಒಂದು ಬೆಂಕಿ ಕಡ್ಡಿ ಕೊಡು’ ಎಂದು ಹಳ್ಳಿಯಲ್ಲಿ ಕೇಳಿದಂತೆ ಪರವೂರಿಗೆ ಹೋಗಿ ಕೇಳಲಾದೀತೇ? ಬೀಡಿಕಟ್ಟು, ಬೆಂಕಿ ಪೆಟ್ಟಿಗೆ ಷರ್ಟಿನ ಮೇಲು ಜೇಬಿನಲ್ಲಿಟ್ಟುಕೊಳ್ಳುವುದು ಸಾಧ್ಯವೇ ಇಲ್ಲ. ಇನ್ನು ಪಟ್ಟಾಪಟ್ಟಿ ನಿಕ್ಕರ್ ಜೇಬಿನಲ್ಲಿಟ್ಟು ಪಂಚೆ ಉಟ್ಟಿದ್ದರೂ ಉಬ್ಬಿಕೊಂಡು ಕಾಣುತ್ತೆ. ನೋಡಿದವರು ಏನೆಂದಾರು ಎಂದು ಯೋಚಿಸಿದ ಇಬ್ಬರೂ, ಒಬ್ಬರು ಕಾಣದಂತೆ ಮತ್ತೊಬ್ಬರು ನನ್ನ ಹತ್ತಿರ ಬಂದರು. ‘ಲೋ ಈ ನಶ್ಯದ ಡಬ್ಬಿ ನಿನ್ನ ಚಡ್ಡಿ ಜೇಬಿನಲ್ಲಿ ಇಟ್ಕೊಂಡಿರು, ನಾ ಕೇಳಿದಾಗ ಕೊಡು’ ಎಂದು ಸೀನಿ ಹೇಳಿದರೆ, ‘ಸ್ವಲ್ಪ ಬೀಡಿ– ಬೆಂಕಿ ಪೆಟ್ಟಿಗೆ ನಿನ್ನ ಜೇಬಿನಲ್ಲಿ ಇಟ್ಕೊ. ನಾನು ಕೇಳಿದಾಗ ಕೊಟ್ರೆ ಸಾಕು’ ಎಂದು ಕೇಶವ ನನ್ನ ಚಡ್ಡಿಜೇಬಿಗೆ ತುರುಕಿದ. ಮದುವೆ ಮುಗಿದು ಊರಿಗೆ ಹೋದನಂತರ ನಿನಗೊಂದು ದೊಡ್ಡ ಗಾಳಿಪಟ ಕಟ್ಕೊಡ್ತೇನೆ, ಹಾರಿಸುವಂತೆ ಎಂದು ಕೇಶವ ಆಸೆ ತೋರಿಸಿದರೆ, ದಪ್ಪದೊಂದು ಬಾಚಿ ಹಲ್ಲಿನ ಬುಗುರಿ ಕೊಡ್ತಿನಿ ಎಂದು ಸೀನಿ ಪುಸಲಾವಣೆ. ಕಡೆಗೆ ವಿಧಿಯಿಲ್ಲದೆ ಒಪ್ಪಿಕೊಂಡೆ. ಒಂದು ಚಡ್ಡಿಯ ಜೇಬಿನಲ್ಲಿ ನಶ್ಯದ ಡಬ್ಬಿ, ಮತ್ತೊಂದರಲ್ಲಿ ಬೀಡಿ ಕಟ್ಟು, ಬೆಂಕಿಪೆಟ್ಟಿಗೆ. ಬೀಡಿ, ಬೆಂಕಿಪೆಟ್ಟಿಗೆ ಇಟ್ಟುಕೊಂಡಿದ್ದ ಎಡಜೇಬು ಸ್ವಲ್ಪ ಉಬ್ಬಿಕೊಂಡಿದ್ದು ಅಪ್ಪಂಗೆ ಗೊತ್ತಾದರೆ ಕಷ್ಟ ಅಂತ ಅಪ್ಪನಿಂದ ಕೊಂಚ ದೂರವನ್ನು ಮೆಂಟೇನ್ ಮಾಡುತ್ತಲೇ ಇದ್ದೆ.

ಮದುವೆಯ ಕಾರ್ಯಕ್ರಮದ ಮಧ್ಯೆ ಒಂದು ಹತ್ತು ನಿಮಿಷ ಬಿಡುವು ಸಿಕ್ಕರೆ ಸಾಕು ಅಲ್ಲೇ ಸುಳಿದಾಡುತ್ತಿದ್ದ ನನ್ನನ್ನು ಇಬ್ಬರಲ್ಲೊಬ್ಬರು ಕರೆಯುತ್ತಿದ್ದರು. ಸೀನಿ ಕರೆದ ತಕ್ಷಣ ಮನೆ ಹಿಂಭಾಗಕ್ಕೆ ಹೋದರೆ, ಆ ಹಳ್ಳಿಯಲ್ಲಿ ಮನೆಯ ಹಿಂಭಾಗವೆಲ್ಲ ಹೊಲಗದ್ದೆಗಳೆಲ್ಲ ಕೂಡಿದ್ದರಿಂದ ಬೆಳೆದಿದ್ದ ಗಿಡಗಳ ಮರೆಯಲ್ಲಿ ನಿಂತ ಸೀನಿ ನಶ್ಯ ಏರಿಸಿ, ಬೆರಳು ತುದಿಗಳ ಚಿಟಿಕೆ ಹೊಡೆದು ಜಾಡಿಸಿ, ಕರ್ಚೀಫ್ ಎಂಬ ಬಟ್ಟೆಯಿಂದ ಮೂಗೊರೆಸಿಕೊಂಡರೆ ಸೀನಿಯ ನಾಸಿಕ ಚೂರ್ಣ ಆರೋಹಣ ಕಾರ್ಯ ಮುಗಿದಂತೆ, ‘ತಗೋ ಒಳ್ಗಿಟ್ಕೊ, ಜೋಪಾನ’ ಎಂದು ಹೇಳಿ ಕೊಟ್ಟ ಸೀನಿ ಮದುವೆ ಮನೆಯೊಳಗೆ ಹೋಗಿಬಿಡುವ.

ಕೇಶವನ ಚಟ ಹಾಗಲ್ಲ. ನೆಂಜಿಕೊಳ್ಳುವ ಪದಾರ್ಥದಂತೆ ಪ್ರತಿ ಕೆಲಸದ ನಂತರ ಬೀಡಿ ಸೇವನೆ ಮಾಡಿ ಧೂಮ್ರ ವಲಯ ಸೃಷ್ಟಿಸಲೇ ಬೇಕಿತ್ತು. ಬೆಳಿಗ್ಗೆ ಎದ್ದಾಗಿನ ಸಂಡಾಸದಿಂದ ಹಿಡಿದು ತಿಂಡಿ–ಕಾಫಿ, ಎಲೆ–ಅಡಿಕೆ ಜಗಿತ, ಮಧ್ಯಾಹ್ನದ ಊಟ, ಇವುಗಳ ಮಧ್ಯೆ ಆಗಾಗ್ಗೆ ನಾಲಗೆ ತುರಿಸಿದಾಗ, ಮನಸ್ಸು ತಿರುಗಿದಾಗ.

ಮನೆಯ ಹಿಂಭಾಗದ ಗದ್ದೆಯೊಳಗೆ ಹೋದಾಗ ಬೀಡಿ ಹೊತ್ತಿಸಿಕೊಂಡು ಸೇದುತ್ತಾ ಮಹಾ ಸಂತೋಷವನ್ನು ಅವನು ಅನುಭವಿಸುತ್ತಾ ಶೌಚದ ಕೆಲಸದಲ್ಲಿ ತೊಡಗಿ ಒಂದು ಬೀಡಿ ಎಳೆದು, ಪ್ರೆಷರ್ ಬಿಲ್ಡಪ್ ಆಗದಿದ್ದರೆ ‘ಇನ್ನೊಂದು ಬೀಡಿ ಕೊಡು’ ಎಂದಾಗ ಕೊಡಲು ತಯಾರಾಗಿ ಗಿಡದ ಮರೆಯಲ್ಲಿ ನೀರಿನ ಡಬ್ಬ ಹಿಡಿದು ನಿಂತಿದ್ದವನು ಇನ್ನೊಂದು ಬೀಡಿ ಕೊಡಬೇಕಿತ್ತು. ಅವನು ಬೀಡಿ ಎಳೆದು ಉತ್ತುಂಗ ಸುಖ ಅನುಭವಿಸಿ ತೊಳೆದುಕೊಂಡು ಬಂದ ನಂತರ ನನ್ನ ಕೆಲಸ.

ಹೀಗೆ ಮದುವೆಯ ಮೂರ್ನಾಲ್ಕು ದಿವಸವೂ ಇಬ್ಬರ ದುಶ್ಚಟಗಳ ಸೇವೆಯನ್ನು ಸಾಂಗೋಪವಾಗಿ ನೆರವೇರಿಸಿದ್ದೆ. ಮದುವೆಯ ಕಾರ್ಯಗಳೆಲ್ಲವೂ ಮುಗಿದು ಊರಿಗೆ ಹೊರಡುವ ದಿನವೂ ಬಂತು. ಅವರಿಬ್ಬರ ಅಗ್ನಿಕಾರ್ಯ, ನಾಸಿಕಾಂತರ್ಗತ ಬ್ರಹ್ಮರಂಧ್ರ ಪ್ರಚೋದನಾ ಕಾರ್ಯದ ದಿವ್ಯವಸ್ತುಗಳು ನನ್ನ ಜೇಬನ್ನು ತೊರೆದು ಹೋಗಿರಲಿಲ್ಲ. ಸಾಮಾನು ಸರಂಜಾಮನ್ನೆಲ್ಲ ಕಟ್ಟಿ ಗಾಡಿಗೆ ಹಾಕುವ ಮುಂಚೆ ಅಪ್ಪನ ಕಣ್ಣಿಗೆ ಬಿದ್ದು ಬಿಟ್ಟೆ. ಮೂರ್ನಾಲ್ಕು ದಿನವೂ ಅವರ ಕಣ್ಣು ತಪ್ಪಿಸಿ ದೂರ ದೂರವೇ ಇದ್ದು ಮೇಂಟೇನ್ ಮಾಡಿದವನು ಅಂದು ಸಿಕ್ಕಿಬಿದ್ದಿದ್ದೆ. ನಾನೇನೋ ಮದುವೆಯ ಮನೆಯಿಂದ ಹೊಡೆದುಕೊಂಡು ಬಂದಿರಬಹುದಾದ ವಸ್ತು ಎಂಬ ಅನುಮಾನದಿಂದ ಅಪ್ಪ, ‘ಏನೋ ಇದು, ಚಡ್ಡಿ ಜೇಬು ಉಬ್ಕೊಂಡಿದೆ’ ಎಂದು ಜೇಬಿಗೆ ಕೈಹಾಕಿ ತೆಗೆದೇಬಿಟ್ಟರು.

ಕೈಯನ್ನು ಹೊರತೆಗೆದು ನೋಡುತ್ತಿದ್ದಂತೆ ಅವರ ಕಣ್ಣುಗುಡ್ಡೆಗಳು ಕೆಂಪಗೆ ಕಾದು ಗರಗರ ಸುತ್ತತೊಡಗಿತು. ನನಗೆ ಚೆಡ್ಡಿಯೊಳಗೆ ಏನೋ ಆಗಿಬಿಡುತ್ತದೆ ಇವತ್ತು ಎಂದು ಭಯವಾಯಿತು. ದೂರ್ವಾಸಮುನಿ ಅಪರಾವತಾರದಂತಿದ್ದ ಅಪ್ಪನಿಗೆ ಮಹಾಕೋಪ. ‘ಇದ್ಬೇರೆ ಕಲ್ತಿದ್ದೀಯಾ ಮುಂಡೇದೆ? ಎಷ್ಟು ದಿನದಿಂದ ಇಂಥ ಕರಾಮತ್ ನಡೆಸ್ತಾಯಿದ್ದೀಯ, ಅದೂ ಮದ್ವೆ ಮನೆಗೆ ಬಂದು’ ಎಂದು ಕುಂಡೆಗೆ ಒಂದ್‌ ಬಿಟ್ರು. ಅಪ್ಪನ ಅಷ್ಟಗಲ ಕೈ ಹೊಡೆತ, ಕುಂಡೆಯ ಎರಡು ಬದಿಯೂ ಉರಿಯ ತೊಡಗಿ ಎರಡು ಕೈಯಿಂದಲೂ ಕುಂಡೆಯನ್ನು ಉಜ್ಜಿಕೊಳ್ಳತೊಡಗಿದೆ.

ಅಷ್ಟರಲ್ಲಿ ಮದುಮಗ ಕೇಶವನಿಗೆ ನಾಲಿಗೆ ಕಡಿಯ ತೊಡಗಿ ಬಂದಿದ್ದರಿಂದ ಬಚಾವಾದೆ. ’ನಾನೇ ಇಟ್ಕೊಂಡಿರೋಕ್ಕೆ ಕೊಟ್ಟಿದ್ದೆ ನರಸಿಂಹ. ಬಿಡು ಪಾಪ, ಅವನೆಲ್ಲಿ ಬೀಡಿ ಸೇದ್ತಾನೆ’ ಎಂದು ಹೇಳಿ ಬೀಡಿ, ಬೆಂಕಿ ಪೊಟ್ಣ ಇಸ್ಕೊಂಡು ಓಟ ಕಿತ್ತ ಕೇಶವ.

‘ಬದುಕ್ಕೊಂಡೆ ಇವತ್ತು, ಹೋಗು ಗಾಡೀಲಿ ಕೂತ್ಕೊ’ ಎಂದು ಅಪ್ಪ ಹೇಳಿದ್ದೇ ತಡ ಅಮ್ಮನ ಬಳಿ ಓಡಿ ಹೋಗಿದ್ದೆ. ಎಷ್ಟೆ ಗೋಪ್ಯವಾಗಿ ಇಬ್ಬರ ಕೆಲಸವನ್ನು ನಿಭಾಯಿಸಿಕೊಂಡು ಬಂದಿದ್ದರೂ ಕಡೇ ಘಳಿಗೆಯಲ್ಲಿ ಸಿಕ್ಕಿಬಿದ್ದು ಅಂಡಿನ ಮೇಲೆ ಹೊಡಿಸಿಕೊಂಡಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT