ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀದಿ, ಗೌಡ್ತಿ, ಗೌಡರ ಗದ್ಲಾ!

Last Updated 8 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಟೀವ್ಯಾಗ್‌ ಪ್ರಸಾರ್‌ ಆಗುತ್ತಿದ್ದ ಮಧ್ಯಂತರ ಬಜೆಟ್‌ ಮೇಲಿನ ವಿಶ್ಲೇಷಣೆಯನ್ನ ಠೀವಿಯಿಂದ ನೋಡ್ತಾ ಕುಂತಾಗ, ‘ಹೆಂಗೈತಿ, ನೋಡಿ ಇಲ್ಲ. ಅವ್ರಿಗೆ ಅಷ್ಟ್‌ ಕೊಟ್ಟಾರ್‌, ಇವ್ರಿಗೆ ಇಷ್ಟ್ ಬಿಟ್ಟಾರ್‌, ‘ನಮೋ’ ವಿರೋಧಿಗಳೆಲ್ಲ ಬಾಯಿ ಮುಚ್ಚೊಂಡಾರ್‌’ ಅಂತ ಭಾರಿ ಖುಷಿಯಿಂದ ಹೇಳ್ಕೊತs ಪ್ರಭ್ಯಾ ಮನ್ಯಾಗ್‌ ಕಾಲಿಟ್ಟ.

‘ಬಾರಪಾ,ಕೆಲ್ಸಾಬಗ್ಸಿ ಇಲ್ದ ನೊಣಾ ಹೊಡ್ಕೊಂಡು ಕುಂತಿರುವ ನಿನ್ನಂಥ ನಿರುದ್ಯೋಗಿಗಳಿಗೆ ಏನ್‌ ಕೊಟ್ಟಾರ್‌ಪಾ’ ಎಂದು ಪ್ರಶ್ನಿಸಿದೆ.

ನನ್ನ ಮಾತನ್ನ ಕೇಳಿದ ಕೂಡಲೇ, ಪ್ರಭ್ಯಾನ ಕಪಾಳ್ಕ ಎರಡೇಟ್ ಕೊಟ್ಟಂಗ್‌ ಆತು. ಕುಮಾರಣ್ಣ, ಬಿಜೆಪಿಯವ್ರ ಫ್ಯೂಸ್‌ ತಗೀತಿನಿ ಅಂತ ಹೇಳ್ದಂಗೂ ಆಗಿ ಅವನ ಫ್ಯೂಸs ಹಾರಿ ಹೋಯ್ತು.

‘ಆಯ್ತು ಬಿಡಪಾ, ತಪ್ಪಾಯ್ತು, ಯಾವ್ದೊ ಜೋಶ್‌ನ್ಯಾಗ್ ಹೇಳ್ದೆ. ನೀ ಹೇಳೂದು ಖರೆ ಅದ ನೋಡ್‌. ದೇಶದಾಗ್‌ ನಿರುದ್ಯೋಗ ಹೆಚ್‌ ಆಗೇದ್‌ ಅಂತ ಮೊನ್ನೆಅರ ಸುದ್ದಿ ಬಂದದ. ನನ್ನಂಥವ್ರು ಕೆಲ್ಸಾ ಇಲ್ದ, ಇಂದಲ್ಲ ನಾಳೆ ನಮ್ಮ ಭವಿಷ್ಯಾನೂ ಸುಧಾರ‍್ಸತೈತಿ ಅಂತ ‘ಅಚ್ಛೆ ದಿನ್‌’ಗಳ ಕನಸು ಮಾರಾವ್ನ ಹಿಂದ ಬಿದ್ದೀವಿ’ ಎಂದು ಮುಖ ಸಪ್ಪಗೆ ಮಾಡ್ಕೊಂಡು ಹೇಳ್ದ.

‘ಮಂತ್ರಿ ನಿತೀನ್‌ ಗಡ್ಕರಿನೂ ಅದ್ನ ಹೇಳ್ಯಾನಪಾ. ಕನಸು ಮಾರಾವ್ರು ಅವುಗಳನ್ನ ಖರೆ ಮಾಡಿ ತೋರಿಸ್ಬೇಕು. ಇಲ್ಲಂದ್ರ ಜನಾ ಹಿಡ್ಕೊಂಡು ಹೊಡೀತಾರಂತ ಹೇಳ್ಯಾರ್‌’ ಎಂದೆ.

‘ಯಾರನ್ನ ಉದ್ದೇಶಿಸಿ ಹೇಳ್ಯಾನಂತ ನಿಂಗೇನರ ಗೊತ್ತದ ಏನ್‌’ ಎಂದ ಮುಗ್ಧತೆ ನಟಿಸುತ್ತ.

‘ಲೇ ಮಗ್ನ, ಅಂಗೈ ಹುಣ್ಣಿಗೆ ಕನ್ನಡಿ ಬೇಕೇನ್‌. ಕನಸು ಮಾರಾಂವಾ ಯಾರು, ಎಷ್ಟ್‌ ನಿಜಾ ಮಾಡ್ಯಾನ್‌, ದಿನಾ ದುಃಸ್ವಪ್ನ ಬೀಳೂಹಂಗ್‌ ಮಾಡ್ಯಾನ್‌ ಅನ್ನೋದು ಇಡೀ ಜಗತ್ತಿಗೆ ಗೊತ್ತದ. ಏನೂ ಗೊತ್ತಿಲ್ಲಂತ ನಾಟ್ಕಾ ಆಡಬ್ಯಾಡ’ ಎಂದೆ.

‘ನಿಮ್ಮ ಓಣ್ಯಾಗ್‌ ಎಂಥಾದ್ದೊ ಜಗಳಾ ನಡ್ದದಲ್ಲ. ಕನಸು ಮಾರಾವ್ರನ್ನ ಹಿಡ್ಕೊಂಡು ಹೊಡ್ಯಾಕತ್ತಾರ್‌ ಏನ್‌’ ಎಂದು ಮಳ್ಳನಂಗ ಕೇಳಿ ಮಾತಿನ ಹಳಿ ತಪ್ಸಿದ.

‘ಅದು ಕನಸು ಮಾರಾವ್ರ ಜಗಳ ಅಲ್ಲಲೇ. ನಿನ್ನೆ ಅಮಾಸಿ ಇತ್ತಲ್ಲ. ಮೂರು ರಸ್ತೆ ಕೂಡುವ ಮೂಲ್ಯಾಗಿನ ಮಮತಾ ಮನಿ ಮುಂದ ರಾತ್ರಿ ಯಾರೊ ಮಾಟಾ ಮಂತ್ರ ಮಾಡ್ಯಾರ್‌. ಕುಂಕ್ಮಾ, ಅರಿಸಿನ, ಟೆಂಗಿನಕಾಯಿ ಇಟ್ಟು ಪೂಜಿ ಮಾಡ್ದವ್ರ ನಸೀಬ್‌ ಸರಿ ಇದ್ಹಂಗ್‌ ಇಲ್ಲ. ಬೆಳಗಿನಿಂದನ ಅಕಿ ಅವರ ಜನ್ಮ ಜಾಲಾಡಿ ಬುಡಚಿ ಹ‌ಚ್ಚಿ ತೊಳ್ಯಾಕತ್ತಾಳ್‌. ಇನ್ನs ನಿಂತಿಲ್ಲೇನ್‌ ಅವ್ಳ ಬಾಯಿ. ಬೊಂಬಾಯಿ ಬಾಯಿ ಅವಳ್ದು’ ಎಂದೆ.

‘ಬೀದಿ ಜಗ್ಳ ಅಂದಕೂಡ್ಲೆ, ಬಂಗಾಳದ ಮಮತಾ ದೀದಿಯ ಬೀದಿ ಜಗಳಾ ನೆನಪಿಗೆ ಬಂತ್‌ ನೋಡ್‌. ಅದು ಕೂಡಾ ತುಂಬಾ ಜೋಶ್‌ನಾಗ್‌ ನಡಿತ್‌. ಮಮತಾಳದ್ದೂ ಭಾಳ್‌ ಆತ್‌ ಬಿಡಪಾ. ಹಾರು ಹಕ್ಕಿಯ ಪುಕ್ಕಾ ಎಣಸ್ತಾಳ ಆಕಿ’ ಎಂದ.

‘ಅಷ್ಟ ಅಲ್ಲಲೇ, ಹಾರು ಹಕ್ಕಿ ಪುಕ್ಕಾನೂ ಕತ್ತರಸ್ತಾಳ್‌. ಯೋಗಿ, ಹೆಲಿಕಾಪ್ಟರ್‌ ಹಾರಾಟ ಕೈಬಿಟ್ಟು ಕಾರ್‌ನ್ಯಾಗ್‌ ಹೋಗಿ ಭಾಷ್ಣಾ ಮಾಡ್ಬೇಕಾಯ್ತು. ಮೋದಿ ಸಿಬಿಐ ಪಿಸ್ತೂಲ್‌ ಹಿಡ್ಕೊಂಡು ಬೆದರಿಕೆ ಹಾಕಿದ್ರ, ಅಕಿ ಫಿರಂಗಿ ಅಸ್ತ್ರಾನ ಬಳಸ್ಯಾಳ್‌’ ಎಂದೆ.

‘ನೀ, ಅಮಾಸಿ ಅಂದ ಕೂಡ್ಲ ಕುಂಭ ಮೇಳಾನೂ ನಂಗ್‌ ನೆನಪಾತು ನೋಡ್‌. ನಾನೂ ಹೋಗ್ತೀನಿ. ಅಲ್ಲಿ ಕೋಟ್ಯಂತರ ರೂಪಾಯಿ ವ್ಯಾಪಾರ ಆಗಾಕತ್ತದಂತ. ಏನರ್‌ ಕೆಲ್ಸಾ ಸಿಗ್ತದ ಏನಂತ ನೋಡ್ತೀನಿ’ ಅಂದ.

‘ರಾಜಕಾರಣಿಗಳು ತಮ್ಮೆಲ್ಲ ಪಾಪಾ ತೊಳ್ಕೊಂಡು ನದಿ ನೀರನ್ನು ಇನ್ನಷ್ಟು ಮಲಿನ ಮಾಡುವ ಮೊದ್ಲ ಪವಿತ್ರ ಸ್ನಾನಾ ಮಾಡ್ಕೊಂಡ್‌ ಬಾ. ಡಿಗ್ರಿ ಮಾಡಿದ್ರೂ ಕೆಲ್ಸಾನ ಸಿಗ್ತಾ ಇಲ್ಲಂತ ಬ್ಯಾಸರಾ ಮಾಡ್ಕೊಂಡು ನಿರುದ್ಯೋಗಿಯಾಗಿ ಇರೋದಕ್ಕಿಂತ ನಾಗಾ ಸನ್ಯಾಸಿ ಆಗ್ತೀನಿ ಅಂತ ಎಲ್ಲಾ ಕಳಚಿ ಹಿಮಾಲಯಕ್ಕ ಓಡಬ್ಯಾಡ’ ಎಂದೆ ಕಕ್ಕಲಾತಿಯಿಂದ.

‘ರೈತರ ಖಾತೆಗೆ ಚುನಾವಣಾ ಮೊದ್ಲ ಲಂಚದ ಹಣ ಹಾಕಾಕ್‌, ಎಲೆಕ್ಷನ್‌ದಾಗ್‌ ಓಡ್ಯಾಡಾಕ್‌ ಕೈತುಂಬ ಕೆಲ್ಸಾ ರೊಕ್ಕಾ ಸಿಗು ಛಾನ್ಸ್‌ ಅದ. ಸನ್ಯಾಸಿ ಆಗಾಕ್‌ ನಂಗೇನ್‌ ಹುಚ್ಚ ಹಿಡಿದಿಲ್ಲ’ ಎಂದು ಹೇಳುತ್ತ ಪ್ರಭ್ಯಾ, ದುರ್ದಾನ ತಗೊಂಡ ದುರ್ವಾಸ ಮುನಿಯಂತೆ ಭಂ ಭಂ ಭೋಲೆ, ಹರಹರ ಮಹಾದೇವ ಎಂದು ಹೇಳುತ್ತಲೇ ಹೊರಡಲು ಎದ್ದು ನಿಂತ.

ಅಷ್ಟೊತ್ತಿಗೆ ಓಣ್ಯಾಗಿನ ಜಗಳದ ಸದ್ದು ಹೆಚ್ಚಾಗಿ ನಮ್ಮ ಕಿವಿಗೂ ಬೀಳಾಕತ್ತು. ಬಾಗಲ್‌ತನ್ಕಾ ಹೋದಾಂವಾ, ‘ಹಠಮಾರಿ ಹೆಂಗಸರು ಜಗಳಕ್ಕ ನಿಂತ್ರ ಬಿಡಿಸೋದ ದೊಡ್ಡ ತ್ರಾಸ್‌ ನೋಡು’ ಅಂತ ಹೇಳ್ಕೊತ ವಾಪಸ್‌ ಬಂದು ಕುತ್ಕೊಂಡ.

‘ಹಂಗ್‌ ಅನಬ್ಯಾಡಲೇ, ಅದ್ನ ದೊಡ್ದು ಮಾಡಿ ತಮ್ಮ ಜಗಳಾ ಮರ‍್ತು, ನಿನ್ನ ಕೂಡ ಜಗಳಕ್ಕ ಬಂದಾರ್‌, ಹುಷಾರ್‌. ನಾಲ್ಗಿ ಬಿಗಿ ಹಿಡ್ದು ಮಾತಾಡ್‌. ಬಂಗಾಳದಾಗ ಮಮತಕ್ಕ ಕಾಲು ಕೆದರಿ ಜಗಳಕ್ಕ ನಿಂತಿದ್ರ, ಮಂಡ್ಯದಾಗ ಸುಮಲತಕ್ಕ ಹೆಸರ್‌ನ್ಯಾಗ್‌ ಅಂಬಿ ಅಭಿ
ಮಾನಿಗಳು ಜಗಳಕ್ಕ ನಿಂತಾರ್‌. ಅಲ್ಲಿ ದೀದಿ ಗದ್ಲಾ, ಇಲ್ಲಿ ಗೌಡ್ತಿ ಗದ್ಲಾ. ದೊಡ್ಡ ಗೌಡ್ರು ಇನ್ನೂ ಏನೇನ್‌ ಗದ್ಲಾ ಮಾಡ್ತಾರ್‌ ಅನ್ನೋದು ಹಾಸನಾಂಬೆಯ ಆಣೆಗೂ ಯಾವುದೇ ಪ್ರಕಾಂಡ ಪಂಡಿತನಿಗೂ ಗೊತ್ತಿರಲಿಕ್ಕಿಲ್ಲ ಬಿಡು’ ಎಂದೆ.

‘ನಿನ್ನ ಮಾತು ನೂರಕ್ಕ ನೂರು ಖರೆ ಐತಿ ಬಿಡು’ ಎಂದು ಶಹಬ್ಬಾಸ್‌ಗಿರಿ ಕೊಟ್ಟ.

ಅದ್ರಿಂದ ಉಬ್ಬಿ ಹೋದ ನಾನು, ಗೌಡ್ರ ಗದ್ಲ ನಾಟಕ್‌ದಾಗಿನ ಗೌಡನ ಪಾತ್ರಧಾರಿ, ಎಡಗೈದಾಗ್‌ ತಂಬಾಕ್‌ ಹೊಸೆಯುತ್ತ, ರಾಗಬದ್ಧವಾಗಿ ‘ನಡಿ ಹಳೆಮನಿಗಿ...’ ಅಂತ ಹೇಳ್ದಂಗ್‌, ನಾನೂ ಪ್ರಭ್ಯಾನ ಉದ್ದೇಶಿಸಿ, ‘ನಡಿ ಹಳೆ ಹೆಂಡದಂಗ್ಡಿಗಿ..’ ಅಂತ ಹೇಳಿ ಅವ್ನ ಎಳಕೊಂಡು ‘ಕನಸುಗಾರನ ಒಂದು ಕನಸಾ ಕೇಳಮ್ಮ...’ ಹಾಡು ಗುನುಗುನಿಸುತ್ತಾ ಹೆಜ್ಜೆ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT