ಭಾನುವಾರ, ಮೇ 31, 2020
27 °C

ನಕ್ಷತ್ರ ಜನನ- ಎಂಥ ವಿಸ್ಮಯ!

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

Prajavani

‘ನಕ್ಷತ್ರ’ - ಬೃಹತ್ ಗಾತ್ರಕ್ಕೆ, ಉಜ್ವಲ ಸ್ವಯಂ ಪ್ರಭೆಗೆ, ಕಲ್ಪನಾತೀತ ಆಯುಷ್ಯಕ್ಕೆ, ಅಳಿಯದ ಆಕರ್ಷಣೆಗೆ ಸಮಾನಾರ್ಥಕವಾಗಿರುವ ನಿರ್ಮಿತಿ ಅದು. ಹಾಗಾದ್ದರಿಂದಲೇ ತಾರೆ ಎಂಬ ಹೆಸರು ಪರಮ ಪ್ರಸಿದ್ಧಿಯ ಸಾರ್ವತ್ರಿಕ ರೂಪಕ ಕೂಡ. ನಿರಭ್ರ ಇರುಳಿನಾಗಸದಲ್ಲಂತೂ ವಿವಿಧ ವರ್ಣ, ಗಾತ್ರ, ಕಾಂತಿಗಳಿಂದ ಕಿಕ್ಕಿರಿದಂತೆ, ಅಸಂಖ್ಯವೆನಿಸುವಂತೆ ಗೋಚರಿಸುವ ನಕ್ಷತ್ರ ಸಾಮ್ರಾಜ್ಯಕ್ಕೇ ಸೇರಿರುವ ಒಂದು ತಾರೆಯಂತೂ - ನಮ್ಮ ಸೂರ್ಯ - ಧರೆಯ ಬದುಕಿನ ಮೂಲ ಆಕರವೇ ತಾನೇ ? ಅತ್ಯಂತ ಇತ್ತೀಚಿನ ವೈಜ್ಞಾನಿಕ ಸರ್ವೇಕ್ಷಣೆಯ ಪ್ರಕಾರ ವಿಶ್ವದಲ್ಲಿರುವ ನಕ್ಷತ್ರಗಳ ಒಟ್ಟೂ ಸಂಖ್ಯೆ ಒಂದು ನೂರು ಕೋಟಿ ಕೋಟಿ ಕೋಟಿ ಕೋಟಿ (10 ಘಾತ 30)! ಕಲ್ಪನೆಗೂ ಎಟುಕದ ಸಂಖ್ಯೆಅಲ್ಲವೇ?

ಹೀಗೆ ವಿಶ್ವದ ಪ್ರಧಾನ ಕಾಯಗಳಾಗಿರುವ ನಕ್ಷತ್ರಗಳು ಹುಟ್ಟುವುದು ಹೇಗೆ?

ವಾಸ್ತವವಾಗಿ ನಕ್ಷತ್ರ ಜನನ - ಅದೊಂದು ಪರಮ ವಿಸ್ಮಯದ ವಿದ್ಯಮಾನ ; ನಾನಾ ವಿಧ ನಿಸರ್ಗ ಕ್ರಿಯೆಗಳು ಮೇಳವಿಸಬೇಕಾಗುವ, ಲಕ್ಷಾಂತರ ವರ್ಷಗಳ ಅವಧಿಯೂ ಬೇಕಾಗುವ ಒಂದು ಅತ್ಯದ್ಭುತ ವಿದ್ಯಮಾನ ಅದು. ತಾರಾ ಜನನದ ಮಹದಚ್ಚರಿಯ ವಿಧಿ-ವಿಧಾನಗಳ ಸಂಕ್ಷಿಪ್ತ ವಿವರ ಹೀಗಿದೆ:

ನಿಮಗೇ ತಿಳಿದಿರುವಂತೆ ವಿಶ್ವದಲ್ಲಿರುವ ಸಕಲ ದ್ರವ್ಯ ರಾಶಿ ಮತ್ತು ಆ ದ್ರವ್ಯದಿಂದ ಸೃಷ್ಟಿಗೊಂಡಿರುವ ಸರ್ವವಿಧ ಕಾಯಗಳೂ ನಮ್ಮ ’ಕ್ಷೀರಪಥ’ವೂ ಸೇರಿದಂತೆ ( ಚಿತ್ರ-1 ) ’ಗ್ಯಾಲಕ್ಸಿ’ಗಳಲ್ಲಿ ನೆಲೆಗೊಂಡಿವೆ. ವಿಶ್ವದಲ್ಲಿ ಸಾವಿರಾರು ಕೋಟಿ ಸಂಖ್ಯೆಯಲ್ಲಿರುವ ಗ್ಯಾಲಕ್ಸಿಗಳಲ್ಲಿ ( ಚಿತ್ರ 1, 9, 10 ) ಪ್ರತಿಯೊಂದರಲ್ಲೂ ತಾರೆಗಳೇ ಅಲ್ಲದೆ ಮೃತ ತಾರಾ ಅವಶೇಷಗಳುಮತ್ತು ಅಪಾರ ಪ್ರಮಾಣದ ಅನಿಲಗಳು ಮತ್ತು ಧೂಳು ಹರಡಿಕೊಂಡಿವೆ. ಹೀಗೆ ಅತ್ಯಂತ ವಿರಳವಾಗಿ ಚದುರಿರುವ "ತಾರಾ ನಡುವಣ ದ್ರವ್ಯ" (ಇಂಟರ್ ಸ್ಟೆಲ್ಲಾರ್ ಮ್ಯಾಟರ್ ) ನಲ್ಲಿರುವ ಪ್ರಧಾನ ವಸ್ತು ಜಲಜನಕ - ಅದರದ್ದೇ 70% ಭಾಗ. ಉಳಿದದ್ದರ ಬಹು ಪಾಲು ಹೀಲಿಯಂ ಅನಿಲದ್ದು. ಜೊತೆಗೆ ಅಲ್ಪಾತಿಅಲ್ಪ ಪ್ರಮಾಣದಲ್ಲಿ ಇತರೆಲ್ಲ ಧಾತುಗಳು. ತಾರಾ ಜನನಕ್ಕೆ ಈ ದ್ರವ್ಯವೇ ಮೂಲ ಆಕರ. 

ಗ್ಯಾಲಕ್ಸಿಗಳಲ್ಲಿ ಹೀಗೆ ಬಹು ವಿರಳವಾಗಿ ಹರಡಿರುವ ಧೂಳಿನ ಕಣಗಳು, ಮೂಲ ವಸ್ತುಗಳ ಪರಮಾಣುಗಳು ಹಾಗೂ ಅಣುಗಳು ಸಹಜವಾಗಿಯೇ ನಕ್ಷತ್ರಗಳ ಗುರುತ್ವಾಕರ್ಷಣದಿಂದ ಸೆಳೆಯಲ್ಪಡುತ್ತಿರುತ್ತವೆ ; ಜೊತೆಗೆ ಗ್ಯಾಲಕ್ಸಿಗಳಲ್ಲಿ ಅಲ್ಲಲ್ಲಿ ಆಗಾಗ ಬೃಹತ್ ತಾರೆಗಳು ’ಸೂಪರ್ ನೋವಾ’ಗಳಾಗಿ ಸಿಡಿದಾಗ ಬಿಡುಗಡೆಯಾಗುವ ಕಲ್ಪನಾತೀತ ಪ್ರಮಣದ ಸ್ಫೋಟ ಶಕ್ತಿಯೂ ಇದೇ ದ್ರವ್ಯವನ್ನು ಒತ್ತರಿಸಿ ಒಗ್ಗೂಡಿಸುತ್ತದೆ. ಈ ಇಬ್ಬಗೆಯ ಬಲಗಳಿಂದ ಗ್ಯಾಲಕ್ಸಿಗಳಲ್ಲಿ ಅಲ್ಲಲ್ಲಿ ಭಾರೀ ಪ್ರಮಾಣದಲ್ಲಿ - ಲಕ್ಷಾಂತರ ಕೋಟಿ ಟನ್ ಪ್ರಮಾಣದಲ್ಲಿ - ಒಟ್ಟು ಸೇರುವ ಇಂಟರ್ ಸ್ಟೆಲ್ಲಾರ್ ದ್ರವ್ಯ ದಟ್ಟ ಮೋಡಗಳಂತೆ ಸಾಂದ್ರವಾಗುತ್ತದೆ. ಜಲಜನಕದ ಅಣುಗಳೇ ಪ್ರಧಾನವಾದ ಇಂಥ ’ಮೋಡ’ಗಳನ್ನು ’ಮಾಲಿಕ್ಯುಲಾರ್ ಕ್ಲೌಡ್’ಗಳೆಂದೇ ಗುರುತಿಸಲಾಗುತ್ತದೆ. ಇಂತಹ ಅತ್ಯಂತ ಬೃಹತ್ ಮೋಡಗಳು ಎಂದರೆ ’ದೈತ್ಯ ಮಾಲಿಕ್ಯುಲಾರ್ ಕ್ಲೌಡ್’ಗಳು ಪ್ರತಿಯೊಂದೊಂದೂ ಸರಾಸರಿ 100 ಜ್ಯೋತಿರ್ವರ್ಷ ವ್ಯಾಸ ಹೊಂದಿ, ಕನಿಷ್ಠ ಆರು ದಶಲಕ್ಷ ಸೂರ್ಯರಷ್ಟು ದ್ರವ್ಯರಾಶಿಯನ್ನು ಪಡೆದು, ಹಾಗಿದ್ದೂ ಅತ್ಯಂತ ಶೀತಲ ಸ್ಠಿತಿಯಲ್ಲಿರುತ್ತವೆ. ನಮ್ಮ ಗ್ಯಾಲಕ್ಸಿ ಕ್ಷೀರಪಥವೊಂದರಲ್ಲೇ ಪ್ರಸ್ತುತ ಸಮೀಪ ಆರು ಸಾವಿರ ದೈತ್ಯ ಮಾಲಿಕ್ಯುಲಾರ್ ಕ್ಲೌಡ್ ಗಳನ್ನು ಗುರುತಿಸಲಾಗಿದೆ!

ಹೀಗೆ ಮೈದಳೆವ ದೈತ್ಯ ಮಾಲಿಕ್ಯುಲಾರ್ ಕ್ಲೌಡ್ ಗಳಲ್ಲಿ ನೈಸರ್ಗಿಕ ವಿದ್ಯಮಾನವೊಂದು ತಂತಾನೇ ಆರಂಭವಾಗುತ್ತದೆ. ಅಂಥ ಮಹಾನ್ ದ್ರವ್ಯರಾಶಿಯದೇ ಸ್ವಗುರುತ್ವ ಬಲ ಇಡೀ ದ್ರವ್ಯವನ್ನು ನಿರಂತರವಾಗಿ ಕೇಂದ್ರದತ್ತ ಸೆಳೆಯತೊಡಗುತ್ತದೆ. ತತ್ಪರಿಣಾಮವಾಗಿ ಅಂಥ ಮೋಡಗಳಲ್ಲಿ ಸಾವಿರಾರು ವರ್ಷಗಳ ಅವಧಿಗಳಲ್ಲಿ ಅಲ್ಲಲ್ಲಿ, ಅಲ್ಲಲ್ಲಿ, ಜ್ಯೋತಿರ್ವರ್ಷಗಳ ದೂರಗಳಲ್ಲಿ ದಟ್ಟ ದ್ರವ್ಯದ ಭಾರೀ ತುಣುಕುಗಳು ರೂಪುಗೊಳ್ಳುತ್ತವೆ; ತನ್ಮೂಲಕ ಹೊಸ ನಕ್ಷತ್ರಗಳು ಅಂಕುರಗೊಳ್ಳುತ್ತವೆ.

ಆ ಬಗೆಯ ಭಾರೀ ದ್ರವ್ಯರಾಶಿಯ ಸಾಂದ್ರ ತುಣುಕುಗಳು ಪ್ರತಿಯೊಂದೂ ಸ್ವಗುರುತ್ವದಿಂದಲೇ ಕುಗ್ಗುತ್ತ, ಕುಸಿಯುತ್ತ, ಒತ್ತಾಗುತ್ತ ಹೆಚ್ಚು ಹೆಚ್ಚು ಸಾಂದ್ರವಾಗುತ್ತವೆ. ಈ ಸ್ವ-ಕುಗ್ಗುವಿಕೆಯಿಂದ ಮೂಡುವ ಸಂಪೀಡನೆಯ ಪರಿಣಾಮವಾಗಿ ದ್ರವ್ಯದ ಉಷ್ಣತೆ ನಿಧಾನವಾಗಿ ಏರತೊಡಗುತ್ತದೆ. ಮೂಲತಃ ಹತ್ತೇ ಡಿಗ್ರಿ ಕೆಲ್ವಿನ್ ನಷ್ಟು ಅತ್ಯಂತ ಶೀತಲವಾಗಿದ್ದ ದ್ರವ್ಯದ ತಾಪ ಏರುತ್ತ ಏರುತ್ತ ನೂರು ಡಿಗ್ರಿ ತಲುಪಿ, ಸಾವಿರವಾಗಿ, ಲಕ್ಷಾಂತರ ದಾಟಿ ಮಿಲಿಯಾಂತರ ಡಿಗ್ರಿ ಮಟ್ಟವನ್ನು ತಲುಪುತ್ತದೆ. ಹಾಗಾದಾಗ ಆ ಸಾಂದ್ರ ಅನಿಲ ಕಾಯದ ಗರ್ಭದಲ್ಲಿ ಪರಮಾಣುಗಳು ಬೆಸೆಗೊಂಡು ಅಪಾರ ಶಾಖವನ್ನೂ ಬಿಡುಗಡೆಮಾಡುವ ’ ಉಷ್ಣ ಬೈಜಿಕ ಸಮ್ಮಿಲನ ಕ್ರಿಯೆ’ (ಥರ್ಮೋ ನ್ಯೂಕ್ಲಿಯಾರ್ ಫ್ಯೂಶನ್) ಆರಂಭವಾಗುತ್ತದೆ. ಈ ಕ್ರಿಯೆಯಲ್ಲಿ ಎರಡೆರಡು ಜಲಜನಕ ಪರಮಾಣುಗಳು ಬೆಸೆಗೊಂಡು ಹೀಲಿಯಂ ಆಗಿ ರೂಪಾಂತರಗೊಳ್ಳುತ್ತವೆ ; ಜೊತೆಗೆ ಭಾರೀ ಪ್ರಮಾಣದ ಶಾಖ ಶಕ್ತಿಯೂ ಬಿಡುಗಡೆಯಾಗುತ್ತದೆ. ಈ ಕ್ರಿಯೆಯೊಂದಿಗೆ ನಕ್ಷತ್ರವೊಂದು ಜನನದ ಹಾದಿಯನ್ನು ತಲುಪುತ್ತದೆ.

ಈ ಬಗೆಯಲ್ಲಿ ತಾರಾ ಮೂಲ ದ್ರವ್ಯ ರಾಶಿಯ ಕೇಂದ್ರ ಭಾಗದಿಂದ ಹೊಮ್ಮತೊಡಗುವ ಶಾಖ ಶಕ್ತಿ ಮೇಲ್ಮೈನತ್ತ ಸಂವಹನಗೊಳ್ಳತೊಡಗಿದೊಡನೆ ಸಾಂದ್ರ ದ್ರವ್ಯದ ಸ್ವಕುಗ್ಗುವಿಕೆ ಸ್ತಬ್ದವಾಗುತ್ತದೆ; ಮೇಲ್ಮೈಯಿಂದ ಹೊಮ್ಮತೊಡಗುವ ತಾಪದಿಂದ ಸಾಂದ್ರ ದ್ರವ್ಯದ ಸುತ್ತ ಹರಡಿದ ವಿರಳ ಅನಿಲಗಳು ಚದುರಿ ದೂರವಾಗುತ್ತವೆ. ಆಗ ಸ್ವಯಂ ಪ್ರಭೆಯಿಂದ ಕೂಡಿದ ಒಂದು ಬೃಹತ್ ಕಾಯ ಗೋಚರಿಸತೊಡಗುತ್ತದೆ. ಹೊಸ ನಕ್ಷತ್ರವೊಂದು ಜನಿಸುತ್ತದೆ. ಹೀಗೆ ತನ್ನದೇ ಸ್ವತಂತ್ರ ದ್ರವ್ಯ ರಾಶಿಯನ್ನು ಪಡೆದು, ಸ್ವಯಂಪ್ರಭೆಯನ್ನು ಗಳಿಸಿ ಅಸ್ತಿತ್ವಕ್ಕೆ ಬರುವ ಕಾಯವೇ ನಕ್ಷತ್ರ. ನಕ್ಷತ್ರಗಳು ಜನ್ಮ ತಳೆವ ಪರಿ ಇದೇ.

ವಾಸ್ತವ ಏನೆಂದರೆ, ಪ್ರತಿ ದೈತ್ಯ ಮಾಲಿಕ್ಯುಲಾರ್ ಕ್ಲೌಡ್ ನಲ್ಲೂ ಸಾವಿರಾರು ಮತ್ತು ಕೆಲಬಾರಿ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಜರುಗುವ ಈ ವಿದ್ಯಮಾನದಲ್ಲಿ ನಕ್ಷತ್ರಗಳು ಒಂದೊಂದೇ ಜನಿಸುವುದಿಲ್ಲ; ಒಟ್ಟೊಟ್ಟಾಗಿ ಹತ್ತಾರು ಇಲ್ಲವೇ ನೂರಾರು ಸಂಖ್ಯೆಯಲ್ಲಿ , ಆದರೆ ಒಂದೊಂದೂ ಹಲವಾರು ಜ್ಯೋತಿರ್ವರ್ಷಗಳ ಅಂತರಗಳಲ್ಲಿ ಮೈದಳೆಯುತ್ತವೆ; ಸರಾಸರಿ ಒಂದು ಲಕ್ಷ ವರ್ಷಗಳಲ್ಲಿ ’ಸ್ಥಿರ ಸ್ಥಿತಿ’ ತಲುಪುತ್ತವೆ. ಹಾಗೆ ಜನ್ಮ ತಳೆವ ಎಲ್ಲ ತಾರೆಗಳ ಒಟ್ಟೂ ಪ್ರಭೆ ಅವೆಲ್ಲ ತಾರೆಗಳ ಜನನಕ್ಕೆ ದ್ರವ್ಯ ಒದಗಿಸಿದ ಮಹಾ ಮೋಡದ ಚದುರಿ ಉಳಿದ ಶೇಷಾಂಶಗಳನ್ನು ಬೆಳಗತೊಡಗುತ್ತದೆ. ನಕ್ಷತ್ರಗಳ ಜನ್ಮ ನೆಲೆಗಳಾದ ’ನೀಹಾರಿಕೆ’ ಗಳು ಗ್ಯಾಲಕ್ಸಿಗಳಲ್ಲಿ ಗೋಚರಿಸಲು ಈ ಬೆಳಕೇ ಕಾರಣ. ವಿವಿಧ ರೂಪಗಳ, ಆಕಾರಗಳ, ವಿಸ್ತಾರಗಳ ಅಂಥ ಹಲವಾರು ನೀಹಾರಿಕೆಗಳನ್ನೂ, ಅವುಗಳಲ್ಲಿ ಕಂಗೊಳಿಸುತ್ತಿರುವ ನವ ಜಾತ ನಕ್ಷತ್ರಗಳ ವಿಸ್ಮಯದ ದೃಶ್ಯಗಳನ್ನು ಚಿತ್ರಗಳಲ್ಲಿ ಗಮನಿಸಿ.

ಎಂಥ ವಿದ್ಯಮಾನ! ಎಂಥ ವಿಸ್ಮಯ! ಅಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.