ಶುಕ್ರವಾರ, ಜೂನ್ 18, 2021
24 °C

ಅಂಗಳದಲ್ಲಿ ತಿಂಗಳ ತರಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಿನ ಏಳರ ಸಮಯ. `ಛಾಯಾ ನಿಲಯ~ದ ಹೊರಗೆ ಇಣುಕುವ ಅನಿತಾ ಹೇಳುತ್ತಾಳೆ. `ಉಪ್ಪಿಟ್ಟಿಗೆ ಬೇಕಾದ ಕರಿಬೇವು, ಹಸಿಮೆಣಸು, ಟೊಮೆಟೊ, ಕೊತ್ತಂಬರಿ ಕೊಡಪ್ಪ~. ತರಕಾರಿ ಬುಟ್ಟಿ ತಂದು ಕೊಡುವ ಇನ್ನೊಬ್ಬ ಮಗಳು ಛಾಯಾ `ನನಗೂ ಇವತ್ತಿನ ಅಡುಗೆಗೆ ಬೇಕಾದ ಪಾಲಕ್ ಸೊಪ್ಪು, ನವಿಲುಕೋಸು ತಂದುಕೊಡು~. ಮಗ ಮೋಹನ ಕೇಳುತ್ತಾನೆ `ಪೂಜೆಗೆ ಒಂದು ಬುಟ್ಟಿ ಹೂ ಕೊಡಮ್ಮೋ~. ಐದೇ ನಿಮಿಷದಲ್ಲಿ ಮಕ್ಕಳ ಬೇಡಿಕೆಗಳನ್ನೆಲ್ಲ ಪೂರೈಸುವ ದಂಪತಿ, ಚೀಲ ಹಿಡಿದು ಅಂಗಡಿಗೆ ಹೋಗುವುದಿಲ್ಲ. ತಾವೇ ಅಕ್ಕರೆಯಿಂದ ಬೆಳೆಸಿದ ಗಿಡಗಳಿಂದ ಹೂವು ತರಕಾರಿಗಳನ್ನು ಬಿಡಿಸಿ ಕೊಡುತ್ತಾರೆ.ಧಾರವಾಡದ ಹೊರವಲಯದ ಹೊಯ್ಸಳ ನಗರದಲ್ಲಿನ `ಛಾಯಾನಿಲಯ~ದಲ್ಲಿ ಇದು ನಿತ್ಯದ ನೋಟ. ನಿವೃತ್ತ ಜೀವನ ನಡೆಸುತ್ತಿರುವ ಅರವತ್ಮೂರು ವರ್ಷದ ವಸಂತರಾವ್ ಘಾಟಗಿ, ಐವತ್ತೈದರ ಚಂದ್ರಕಲಾ ದಂಪತಿಯ ಕೈತೋಟದ ಕೃಷಿಯಿಂದ ಇಡೀ ಮನೆಗೆ ನೆಮ್ಮದಿ.ಇವರ ಪಾಲಿಗೆ ಕೈತೋಟ ನಿರ್ವಹಣೆ ಮೂವತ್ತೈದು ವರ್ಷಗಳ ದಾಂಪತ್ಯ ಜೀವನದ ಅವಿಭಾಜ್ಯ ಅಂಗ. ಇಬ್ಬರದೂ ಕೃಷಿ ಹಿನ್ನೆಲೆ ಇರುವ ಕುಟುಂಬ. ಅಂಬಿಕಾನಗರದ ಕೆಪಿಸಿಯಲ್ಲಿ ತಮ್ಮ ಉದ್ಯೋಗ ನಿರ್ವಹಿದ ವಸಂತರಾವ್ ಅಲ್ಲಿಯ ವಸತಿ ಗೃಹದ ಬಳಿಯೂ ಪುಟ್ಟ ಕೈತೋಟ ನಿರ್ಮಿಸಿದ್ದರು. 2003ರಲ್ಲಿ ಧಾರವಾಡದಲ್ಲಿ ಸ್ವಂತದ ಸೂರು ಕಟ್ಟಿಕೊಂಡರು. ನಿವೃತ್ತಿ ಬಳಿಕ ಧಾರವಾಡಕ್ಕೆ ಬರುವಾಗ ಮನೆಯ ಇತರ ವಸ್ತುಗಳೊಂದಿಗೆ ತಮ್ಮ ಇಪ್ಪತ್ತಾರು ವರ್ಷಗಳ ಕೈತೋಟದ ಅನುಭವಗಳನ್ನು, ಹಲವು ಗಿಡಗಳನ್ನು ಬೀಜಗಳನ್ನು ತಂದರು.ಅದರ ಫಲವೇ ಸಸ್ಯ ವೈವಿಧ್ಯ. ಮನೆಯ ಮುಂಭಾಗದಲ್ಲಿ ಪೇರಲ, ದಾಳಿಂಬೆ, ಪಪ್ಪಾಯಿ ಹಾಗೂ ಹೂವಿನ ತೇರಿನಂತೆ ಕಾಣುವ ದಾಸವಾಳ ದಾರಿಹೋಕರ ಗಮನ ಸೆಳೆಯುತ್ತವೆ. ಹತ್ತಾರು ಜಾತಿಯ ಗುಲಾಬಿ, ಮಲ್ಲಿಗೆ, ಸೇವಂತಿಗೆ, ಜೀನಿಯಾ ಆರೋಗ್ಯಪೂರ್ಣವಾಗಿ ಬೆಳೆದು ನಿಂತಿವೆ. ಬಳ್ಳಿ ಗುಲಾಬಿಯ ಕಮಾನು ವರ್ಷವಡೀ ಹೂ ಹೊತ್ತು ನಗುತ್ತದೆ. ಸೊಂಪಾಗಿ ಬೆಳೆದ ಮಧುಮಾಲತಿ ಬಳ್ಳಿಯಲ್ಲಿ ಹೂಕುಟುಕ ಹಕ್ಕಿಗಳ ಮೂರು ಗೂಡುಗಳಿವೆ.ಇದರ ಹೊರತಾಗಿ ಹಲವು ಔಷಧೀಯ ಗಿಡಗಳನ್ನು ಬೆಳೆಸಿದ್ದಾರೆ. `ಮೈಕೈ ನೋವಿಗೆ ಕಾಮಕಸ್ತೂರಿ ಎಲೆಗಳನ್ನು ಜಜ್ಜಿ ತಿಕ್ಕಿದರೆ ಆರಾಮ. ನೆಗಡಿಗೆ ಜೇನುತುಪ್ಪದೊಂದಿಗೆ ತುಳಸಿ ರಸ ತೆಗೆದುಕೊಳ್ಳಬೇಕು~ ಎಂದು ತಾವು ಬೆಳೆಸಿದ ಪ್ರತಿ ಗಿಡದ ಮನೆಮದ್ದಿನ ಗುಣದ ಬಗ್ಗೆ ಚಂದ್ರಕಲಾ ಹೇಳಬಲ್ಲರು.ತರಕಾರಿಗೆ ಆದ್ಯತೆ

ಪ್ರತಿ ದಿನ ಬೆಳಿಗ್ಗೆ ಆರರಿಂದ ಹನ್ನೊಂದು ಗಂಟೆಯವರೆಗೆ ದಂಪತಿ ಕೈತೋಟದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಗೆಯುವುದು, ಹಂದರ ಹಾಕುವುದು ಮೊದಲಾದ ಶ್ರಮದ ಕೆಲಸ ಪತಿಯದು. ಹೊಸ ಗಿಡಗಳನ್ನು ನೆಡುವುದು, ತರಕಾರಿ ಬೀಜಗಳನ್ನು ಬಿತ್ತುವುದು, ಬೆಳೆದ ತರಕಾರಿ ಬೀಜಗಳನ್ನು ಸಂಗ್ರಹಿಸುವುದು ಇತ್ಯಾದಿ ಪತ್ನಿಯದು.

ಮಳೆಗಾಲದಲ್ಲಿ ಹೀರೆ, ನವಿಲುಕೋಸು, ಸೋರೆ, ಮೆಣಸು, ಚಳಿಗಾಲಕ್ಕೆ ಪಾಲಕ್, ಹರಿವೆ, ಅವರೆ, ಬೇಸಿಗೆಯಲ್ಲಿ ಬದನೆ, ಬೆಂಡೆ, ಟೊಮೆಟೊ ಹೀಗೆ ಆಯಾಕಾಲಕ್ಕೆ ಹೊಂದುವ ತರಕಾರಿ ಬೆಳೆಯುತ್ತಾರೆ. ಕರಿಬೇವು, ಲಿಂಬೆ, ಮಲ್ಲಿಗೆ ಮೆಣಸು, ಚಕ್ರಮುನಿ, ಕತ್ತಿ ಅವರೆ ಹೀಗೆ ಕೆಲವು ತರಕಾರಿ ವರ್ಷವಿಡೀ ಲಭ್ಯ.

ಗಿಡಗಳಿಗೆ ಮದ್ದು

ಲಿಂಬೆಗಿಡ ಹೆಚ್ಚಿಗೆ ಫಲ ನೀಡಲು, ಕರಿಬೇವಿನ ಎಲೆಚುಕ್ಕಿ ರೋಗ ನಿಯಂತ್ರಿಸಲು ಗಿಡದ ಬುಡದಲ್ಲಿ ಹುಳಿ ಮಜ್ಜಿಗೆ ಹಾಕುತ್ತಾರೆ. ಮನೆಯ ನೀರು ಕಾಯಿಸುವ ಅಸ್ತ್ರ ಒಲೆಯ ಬೂದಿಯನ್ನು ಟೊಮೆಟೊ, ಮೆಣಸಿನ ಗಿಡಕ್ಕೆ ಚಿಮುಕಿಸುತ್ತಾರೆ. ಕಹಿ ಬೇವಿನ ಎಲೆಗಳನ್ನು ಎರಡು ದಿನ ನೀರಿನಲ್ಲಿ ನೆನೆಹಾಕಿ ಎಲೆಗಳಿಗೆ ಬರುವ ಬೂದಿ ರೋಗಕ್ಕೆ ಚಿಮುಕಿಸುತ್ತಾರೆ. ಕೆಲವೊಮ್ಮೆ ಗೋಮೂತ್ರವನ್ನು ಸಿಂಪಡಿಸುತ್ತಾರೆ. ಯಾವ ಮದ್ದಿಗೂ ಬಗ್ಗದ ರೋಗಪೀಡಿತ ಗಿಡವಾದರೆ ಕಿತ್ತೆಸೆದು ಉಳಿದ ಗಿಡಗಳಿಗೆ ಹಬ್ಬದಂತೆ ನೋಡಿಕೊಳ್ಳುತ್ತಾರೆ.ಕೈತೋಟದಲ್ಲಿ ಉದುರುವ ಎಲೆ, ಕಸಕಡ್ಡಿ, ಹಳೆಯ ಹೂವು, ತರಕಾರಿ ಸಿಪ್ಪೆ, ಕಾಗದದ ಚೂರು, ಕೊಳೆಯಬಲ್ಲ ಎಲ್ಲ ಕಸಗಳನ್ನು ಪಪ್ಪಾಯಿ ದಾಳಿಂಬೆಯಂಥ ದೊಡ್ಡ ಮರದ ಬಳಿ ಪುಟ್ಟ ರಾಶಿ ಹಾಕುತ್ತಾರೆ. ಅದರ ಮೇಲೆ ರಸ್ತೆಯಲ್ಲಿ ಬಿದ್ದ ಸಗಣಿ ಆರಿಸಿ ತಂದು ನೀರು ಹಾಕುತ್ತಾರೆ. ಅದನ್ನು ಮೂರು ನಾಲ್ಕು ದಿನಗಳಿಗೊಮ್ಮೆ ತಿರುವಿ ಹಾಕಿ ಕೊಳೆಯಿಸಿ ತಿಂಗಳಿಗೊಮ್ಮೆ ಗಿಡಗಳಿಗೆ ಹಾಕುತ್ತಾರೆ. ನಾಲ್ಕು ಮಕ್ಕಳು,ಇಬ್ಬರು ಮೊಮ್ಮಕ್ಕಳ ಸಮೇತ ಎಂಟು ಜನರಿರುವ ಇವರ ಮನೆಗೆ ಎರಡು ದಿನಕ್ಕೆ ಸಾವಿರ ಲೀಟರ್ ನೀರು ಮಾತ್ರ ಪೂರೈಕೆಯಾಗುತ್ತದೆ. ಗೃಹಕತ್ಯಗಳಿಗೆ ಮಿತವಾಗಿ ನೀರು ಬಳಸಿ, ಅದೇ ನೀರನ್ನು ಸಾಧ್ಯವಾದಷ್ಟು ಗಿಡಗಳ ಬೇರಿಗಿಳಿಸುತ್ತಾರೆ. ಬೆಳೆಸಿದ ಗಿಡಗಳಲ್ಲಿ ಉತ್ತಮವಾದ ಒಂದನ್ನು ಬೀಜ ತಯಾರಿಕೆಗಾಗಿ ಮೀಸಲಿಡುತ್ತಾರೆ. ಬೆಳೆದ ಬೀಜಗಳನ್ನು ನೆರಳಿನಲ್ಲಿ ಕಾಗದದ ಮೇಲೆ ಹಾಕಿ ಒಣಗಿಸುತ್ತಾರೆ, ಜೋಪಾನವಾಗಿ ಕಾಯ್ದಿಡುತ್ತಾರೆ.ಚಂದ್ರಕಲಾ ಹಲವು ಸ್ನೇಹಿತೆಯರೊಂದಿಗೆ ಗಿಡಗಳ ವಿನಿಮಯ ಮಾಡಿಕೊಳ್ಳುತ್ತಾರೆ. ಬಡಾವಣೆಯ ಹಲವರು `ನಿಮ್ಮಷ್ಟು ಕಾಳಜಿ ಮಾಡಿ ಗಿಡ ಬೆಳೆಸೋದು ನಮ್ಮ ಕಡೀಕ್ ಸಾಧ್ಯ ಇಲ್ರಿ~ ಎನ್ನುತ್ತಲೇ ಗಿಡ ಬೆಳೆಸುವ ಸ್ಫೂರ್ತಿ ಪಡೆದುಕೊಂಡಿದ್ದಾರೆ.ತಿಂಗಳಿಗೊಮ್ಮೆ ಮಾತ್ರ ತಾವು ಬೆಳೆಯಲಾಗದ ಈರುಳ್ಳಿ, ಆಲೂಗಡ್ಡೆ, ಬೀಟ್‌ರೂಟ್,ದೊಣ್ಣೆಮೆಣಸು ಇಂಥವುಗಳನ್ನು ತರುತ್ತಾರೆ. ಇವರ ಆಹಾರದಲ್ಲಿ ಕೈತೋಟದಲ್ಲಿ ಬೆಳೆದ ತರಕಾರಿಗಳದ್ದೆ ಸಿಂಹಪಾಲು. ಅಂದರೆ ಹತ್ತು-ಹನ್ನೆರಡು ಸಾವಿರ ರೂಪಾಯಿಗಳ ಉಳಿತಾಯ. ಕನಿಷ್ಠ ಒಂದೂವರೆ ಕಿ.ಮಿ ಕ್ರಮಿಸಿ ತರಕಾರಿ ತರಬೇಕಾದ ಅನಿವಾರ್ಯತೆ ಇರುವ, ನಗರದ ಹೊರವಲಯದಲ್ಲಿ ವಾಸ ಮಾಡುವ ಇವರು ಓಡಾಟದ ಸಮಯ, ವೆಚ್ಚವೂ ಉಳಿತಾಯವಾಗುತ್ತದೆ ಎನ್ನುತ್ತಾರೆ.`ನಾವೇ ಬೆಳೆದ ತರಕಾರಿ ತಿನ್ನುವಾಗ ಕೀಟನಾಶಕ ಹೊಡೆದಿದ್ದಾರೇನೊ? ರಸಗೊಬ್ಬರ ಹಾಕಿದ್ದಾರೊ, ಚರಂಡಿ ನೀರು ಹಾಕಿದ್ದಾರೊ ಎಂಬ ಚಿಂತೆ ಇರುವುದಿಲ್ಲ.ಸ್ವಾದಿಷ್ಟಕರವಾಗೂ ಇರುತ್ತದೆ. ಕೈತೋಟದ ಕೆಲಸ ಮಾಡುವುದರಿಂದ ಆರೋಗ್ಯವೂ ಚೆನ್ನಾಗಿದೆ. ಕೆಲಸದಲ್ಲಿ ತೊಡಗಿಕೊಂಡಾಗ ಒಳ್ಳೆಯ ವಿಚಾರಗಳು ಬರುತ್ತವೆ~ ಎನ್ನುವುದು ಇವರಿಬ್ಬರ ಅಭಿಪ್ರಾಯ. ಇವರ ದೂರವಾಣಿ 0836 2772 208.                                  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.