ಬುಧವಾರ, ಮೇ 18, 2022
28 °C

ಅಂಗವಿಕಲ ರೈತನ ಪುತ್ರ ಪ್ರೀತಿಯವಾಹನ

ಜಡೇಕುಂಟೆ ಮಂಜುನಾಥ್ Updated:

ಅಕ್ಷರ ಗಾತ್ರ : | |

ಚಳ್ಳಕೆರೆ ತಾಲ್ಲೂಕಿನ ಹೊಟ್ಟೆಜ್ಜನ ಕಪಿಲೆ ಗ್ರಾಮದ ಹನುಮಂತರಾಯಪ್ಪ  ಅವರಿಗೆ ಎರಡು ಕಾಲುಗಳು ಸರಿ ಇಲ್ಲ. ಆದರೂ ಯಾರಿಗೂ ಕಡಿಮೆ ಇಲ್ಲದಂತೆ ಮುಂಜಾನೆಯ ಸೂರ್ಯನ ಕಿರಣ ಭೂಮಿಗೆ ಅಪ್ಪಳಿಸುವ ಮುನ್ನವೇ ಹೊಲ ಗದ್ದೆಗಳ ಕಡೆಗೆ ವಿಶೇಷ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಾರೆ. ಅಕಸ್ಮಾತ್ ಎರಡು ಕಣ್ಣುಗಳನ್ನು ಕಳೆದುಕೊಂಡು ಅಸಹಾಯಕನಾದ ಪ್ರೀತಿಯ ಮಗನ ನೆನಪಿಗಾಗಿ ಖರೀದಿಸಿದ ವಾಹನವಿದು. ಇದನ್ನು ತಯಾರಿಸಿದ ಕಾರ್ಕಳದ ನಿತಿನ್ ಎಂಬುವರು `ಸ್ಪ್ಯಾರೋ~ ಎಂದು ಹೆಸರಿಟ್ಟು ಅಂಗವಿಕಲರಿಗೆ ಅನುಕೂಲವಾಗುವಂತೆ ತಯಾರಿಸಿಕೊಟ್ಟಿದ್ದಾರೆ. ಇದರ ಬೆಲೆ 2010ರಲ್ಲಿ ರೂ. ಒಂದು ಲಕ್ಷದ 30 ಸಾವಿರ.ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ-19ರಲ್ಲಿ ಬೆಂಗಳೂರಿನಿಂದ ಬರುವಾಗ ಚಳ್ಳಕೆರೆ ಕೇವಲ 15 ಕಿ.ಮೀ. ಇರುವಾಗಲೇ ಎಡಭಾಗಕ್ಕೆ ಸಿಗುವ ಹೊಟ್ಟೆಜ್ಜನ ಕಪಿಲೆ ಎಂಬ ಪುಟ್ಟ ಗ್ರಾಮದ ಹನುಮಂತರಾಯಪ್ಪ ತಮ್ಮ ಮಗನಿಗೆ ಈಗ್ಗೆ ಐದಾರು ವರ್ಷಗಳ ಹಿಂದೆ ಟಿವಿಎಸ್ ವಿಕ್ಟರ್ ಕೊಡಿಸಿದ್ದರು. ಆದರೆ, ಮಗನಿಗೆ ಆಕಾಲಿಕ ನರ ದೌರ್ಬಲ್ಯದಿಂದ ಕುರುಡುತನ ಸಂಭವಿಸಿದ ಪರಿಣಾಮ ಮಗನಿಗೆ ಕೊಡಿಸಿದ ವಿಕ್ಟರಿ ಬೈಕ್ ಬಳಕೆಯಾಗಲಿಲ್ಲ.ಆಂಗ್ಲ ದಿನಪತ್ರಿಕೆಯಲ್ಲಿ ನೋಡಿದ ವಾಹನ ಹನುಮಂತರಾಯಪ್ಪ ಅವರಿಗೆ ಹಿಡಿಸಿತು. ತಕ್ಷಣವೇ ಕಾರ್ಕಳಕ್ಕೆ  ಹೋದರು. ಮಗನಿಗೆ ಕೊಡಿಸಿದ ಟಿವಿಎಸ್ ವಿಕ್ಟರ್‌ನ ಕೆಲ ಭಾಗಗಳನ್ನು ಉಪಯೋಗಿಸಿ ಇಂತಹ ಆಕಾರದ್ದೇ ಆದ ಮೂರು ಚಕ್ರದ ವಾಹನ ತಯಾರಿಸಿಕೊಡುವಂತೆ ಕಾರ್ಕಳದ ನಿತಿನ್‌ಗೆ ಕೋರಿದರು.ಮಿನಿ ಆಟೋರಿಕ್ಷಾದಂತೆ ಕಾಣುವ ಮೂರು ಚಕ್ರದ ಈ ವಾಹನ ರಿಕ್ಷಾ ಮಾತ್ರ ಅಲ್ಲ. ತನ್ನ ಮಗನಿಗೆ ಕೊಡಿಸಿದ್ದ ವಿಕ್ಟರ್‌ನ ಎಂಜಿನ್ ಬಳಸಿ ತಯಾರಿಸಿರುವ ಮೂರು ಚಕ್ರದ ವಾಹನ ಅಂಗವಿಕಲ ಹನುಂತರಾಯಪ್ಪ ಹಾಗೂ ಮಗ ನವೀನ್ ಇಬ್ಬರೂ ಇದರಲ್ಲಿ ಕೂರುವಷ್ಟು ಜಾಗ ಮತ್ತು ಹಿಂದೆ ಲಗೇಜ್ ಇಡಲೂ ಅವಕಾಶವಿದೆ.ಒಂದು ಲೀಟರ್ ಪೆಟ್ರೋಲ್‌ಗೆ 40ರಿಂದ 45 ಕಿ.ಮೀ. ಓಡಿಸುವ ಇವರು ಬಸ್ಸನ್ನು ಹತ್ತಿ ಇಳಿಯುವ ಕಷ್ಟ ಮಾತ್ರ ಇವರಿಗಿಲ್ಲ. ತಾಲ್ಲೂಕು ಕೇಂದ್ರಕ್ಕೆ ಬರುವಾಗ ನೆಂಟರಿಷ್ಟರ ಊರುಗಳಿಗೆ ಹೋಗುವಾಗ ಇದನ್ನು ಬಳಸುತ್ತಾರೆ.  ಅನುಕೂಲವಾಗುವಂತೆ ಬ್ರೇಕ್, ಕಿಕ್ಕರ್ ಮತ್ತು ರಿವರ್ಸ್‌ ಗೇರ್ ಅನ್ನು ಬಲಭಾಗಕ್ಕೆ ಅಳವಡಿಸಿಕೊಂಡಿದ್ದಾರೆ.ಆಟೋರಿಕ್ಷಾಗಳಿಗೆ ಇರುವ ಕಿಕ್ಕರ್  ಅಳವಡಿಸಲಾಗಿದೆ. ಮಳೆಗಾಲದಲ್ಲಿ ಗಾಡಿ ಓಡಿಸುವಾಗ ತೊಂದರೆ ಆಗಬಾರದು ಎಂದು ಮುಂದಿನ ಗ್ಲಾಸ್‌ಗೆ ವೈಫರ್ ಹಾಕಲಾಗಿದೆ. ಮಳೆ, ಬಿಸಿಲು ತಡೆಯಲು ಗಾಡಿಯ ಮೇಲ್ಛಾವಣಿಗೆ ರಿಕ್ಷಾ ರೀತಿ ಪ್ಯಾಕ್ ಮಾಡಲಾಗಿದೆ.  ಹನುಮಂತರಾಯಪ್ಪ ಅವರ ವಾಹನದಲ್ಲಿ ಹಲವು ವಿಶೇಷ ಇರುವುದನ್ನು ಸಾರ್ವಜನಿಕರು ಆಸಕ್ತಿಯಿಂದ ನೋಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.