ಮಂಗಳವಾರ, ಮೇ 11, 2021
27 °C

ಅಂಗವಿಕಲ ವಿದ್ಯಾರ್ಥಿಗಳಿಗೆ ಜಯ: ಮೀಸಲಾತಿ ನೀಡಲು ಹೈಕೋರ್ಟ್ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸುವ ಕೌನ್ಸೆಲಿಂಗ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಬುಧವಾರ ತೆರವುಗೊಳಿಸಿದೆ. ಇದರಿಂದ ಮುಂದಿನ ತಿಂಗಳು ನಡೆಸಲು ಉದ್ದೇಶಿಸಿರುವ ಕೌನ್ಸೆಲಿಂಗ್‌ಗೆ ಹಾದಿ ಸುಗಮವಾಗಿದೆ.

ತಮಗೆ ಕಾನೂನಿನ ಅನ್ವಯ ಮೀಸಲಾತಿ ನೀಡದೆ ಕೌನ್ಸೆಲಿಂಗ್ ನಡೆಸುತ್ತಿರುವುದನ್ನು ಪ್ರಶ್ನಿಸಿ ಅಂಗವಿಕಲ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಕೌನ್ಸೆಲಿಂಗ್‌ಗೆ ಈ ಹಿಂದೆ ಹೈಕೋರ್ಟ್ ತಡೆ ನೀಡಿತ್ತು.

ಈಗ ಅಂಗವಿಕಲರಿಗೆ ಕೆಲವೊಂದು ವಿಭಾಗಗಳಲ್ಲಿ ಶೇ 3ರಷ್ಟು ಮೀಸಲಾತಿ ನೀಡಲು ಸರ್ಕಾರ ಒಪ್ಪಿದೆ. ಈ ಕುರಿತು ಹೈಕೋರ್ಟ್‌ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಉಸ್ತುವಾರಿ ನಿರ್ದೇಶಕ ಜಿ.ಎಸ್.ವೆಂಕಟೇಶ್ ಪ್ರಮಾಣ ಪತ್ರ ಸಲ್ಲಿಸ್ದ್ದಿದಾರೆ.

`ಕ್ಲಿನಿಕಲ್ ವಿಭಾಗದ ಅಡಿಯಲ್ಲಿ ಬರುವ ಚರ್ಮ ಹಾಗೂ ಲೈಂಗಿಕ ರೋಗಗಳ ವಿಭಾಗ, ರೇಡಿಯೋಥೆರಪಿ, ಶಿಶುವೈದ್ಯ ವಿಜ್ಞಾನ, ವೈದ್ಯ ವಿಜ್ಞಾನ, ಕ್ಷ-ಕಿರಣ, ಮನೋರೋಗ ವಿಭಾಗ, ಕ್ಷಯ ಹಾಗೂ ಎದೆರೋಗ ವಿಭಾಗಗಳಲ್ಲಿ ಸೀಟುಗಳನ್ನು ನೀಡಲು ಇದೇ 18ರಂದು ನಡೆದ ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯಸ್ಥರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಉಳಿದ ಕೆಲವು ವಿಭಾಗಗಳಲ್ಲಿ ಅಂಗವಿಕಲರು ಕೆಲಸ ನಿರ್ವಹಿಸಲು ಸಾಧ್ಯವಾಗದ ಕಾರಣ, ಅವರಿಗೆ ಮೀಸಲಾತಿ ನೀಡಲಾಗದು~ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ. ಈ ಪ್ರಕಾರ ನಡೆದುಕೊಳ್ಳಲು ಆದೇಶಿಸಿದ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ಅವರು ತಡೆಯಾಜ್ಞೆಯನ್ನು ತೆರವುಗೊಳಿಸಿದರು.

ಅವ್ಯವಹಾರ: ತನಿಖೆಗೆ ತಡೆ

ಬಿಎಂಎಸ್ ಶೈಕ್ಷಣಿಕ ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ವಿಶೇಷ ಕೋರ್ಟ್ ಆದೇಶದ ನಂತರ ನಡೆಯಲಿರುವ ಮುಂದಿನ ಎಲ್ಲ ಪ್ರಕ್ರಿಯೆಗಳಿಗೂ ತಡೆ ನೀಡಿ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಆದೇಶಿಸಿದ್ದಾರೆ.

ಚಾಮರಾಜಪೇಟೆ ನಿವಾಸಿ ಎನ್.ವೆಂಕಟೇಶಯ್ಯ ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿದ್ದ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಿತ್ತು. ಟ್ರಸ್ಟ್‌ನ ಅಧ್ಯಕ್ಷರಾದ ಆಚಾರ್ಯ ಅವ್ಯವಹಾರ ನಡೆಸಿದ್ದಾರೆ ಎನ್ನುವುದು ವೆಂಕಟೇಶಯ್ಯನವರ ಆರೋಪ.

`ಟ್ರಸ್ಟ್ ವಿರುದ್ಧ ಆದೇಶ ಹೊರಡಿಸುವ ಅಧಿಕಾರ ವಿಶೇಷ ಕೋರ್ಟ್ ವ್ಯಾಪ್ತಿಗೆ ಒಳಪಡುವುದಿಲ್ಲ. ಅಷ್ಟೇ ಅಲ್ಲದೇ ಈ ಟ್ರಸ್ಟ್ ಅಧ್ಯಕ್ಷ ಸ್ಥಾನ ಸಾರ್ವಜನಿಕ ಸೇವೆಗೆ ಒಳಪಡುವುದಿಲ್ಲ ಎಂಬ ಆಚಾರ್ಯ ಅವರ ವಾದವನ್ನು ಕೋರ್ಟ್ ಮಾನ್ಯ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.