ಭಾನುವಾರ, ಏಪ್ರಿಲ್ 11, 2021
21 °C

ಅಂಗಾರಕನಲ್ಲಿ ಅಂಬೆಗಾಲಿಟ್ಟ ರೋವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಸ್ ಏಂಜಲೀಸ್ (ಐಎಎನ್‌ಎಸ್): 16 ದಿನಗಳ ಹಿಂದೆ ಕೆಂಪು ಕಾಯ ಮಂಗಳನ ಮೇಲೆ ಯಶಸ್ವಿಯಾಗಿ ಇಳಿದು ಜಗದೆಲ್ಲೆಡೆ ಸಂಭ್ರಮ ಮೂಡಿಸಿದ್ದ ರೋವರ್ `ಕ್ಯೂರಿಯಾಸಿಟಿ~ ಇದೀಗ ಅಲ್ಲಿನ ನೆಲದ ಮೇಲೆ ಯಶಸ್ವಿಯಾಗಿ ಅಂಬೆಗಾಲನ್ನೂ ಇಟ್ಟು ಹರ್ಷ ಮೂಡಿಸಿದೆ. ಇದರೊಂದಿಗೆ, ಆರು ಚಕ್ರಗಳ ಪುಟ್ಟ ಕಾರಿನ ಗಾತ್ರದ ರೋವರ್ ಅಂಗಾರಕನ ಅಂಗಳದಲ್ಲಿ ಉರುಳು ಚಕ್ರದ ಮೊದಲ ಪಡಿಯಚ್ಚುಗಳನ್ನು ಮೂಡಿಸಿದೆ.ಹದಿನಾರು ದಿನಗಳಿಂದ ಇಳಿದ ಸ್ಥಳದಲ್ಲೇ ಬೀಡುಬಿಟ್ಟಿದ್ದ ರೋವರ್ ಇದೀಗ ಅಲ್ಲಿಂದ ಆರು ಮೀಟರ್‌ಗಳಷ್ಟು ದೂರಕ್ಕೆ ಚಲಿಸಿದೆ. ಈ ವೇಳೆ, ಅದು ಮುಂದಕ್ಕೆ, ಎಡ-ಬಲಗಳಿಗೆ ಹಾಗೂ ಹಿಮ್ಮುಖವಾಗಿ  ಯಶಸ್ವಿಯಾಗಿ ಚಲಿಸಿದೆ ಎಂದು ಕ್ಯಾಲಿಫೋರ್ನಿಯಾ ಪಸಡೇನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ತಿಳಿಸಿದೆ.ಇಷ್ಟು ದೂರ ಚಲಿಸಲು ರೋವರ್‌ಗೆ 16 ನಿಮಿಷ ಹಿಡಿಯಿತು. ಇದರಲ್ಲಿ ಬಹಳಷ್ಟು ಅವಧಿ ಚಿತ್ರಗಳನ್ನು ತೆಗೆಯಲು ಹಿಡಿಯಿತು. ಹೀಗೆ ಕ್ರಮಿಸುವ ವೇಳೆ ಕ್ಯೂರಿಯಾಸಿಟಿಯ ಚಕ್ರಗಳು ಅಲ್ಲಿನ ನೆಲದಲ್ಲಿ ಹೆಚ್ಚು ಹೂತುಕೊಳ್ಳದಿರುವುದು ಮುಂದಿನ ಅದರ ಸುಗಮ ಚಲನೆಯ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡಿಸಿದೆ ಎಂದು ಅದರ ಚಲನೆಯನ್ನು ನೆಲದ ಮೇಲಿಂದ ನಿಯಂತ್ರಿಸುತ್ತಿರುವ ಮ್ಯಾಟ್ ಹೆವೆರ್ಲಿ ತಿಳಿಸಿದ್ದಾರೆ.ದಿ. ಲೇಖಕ ರೇ ಬ್ರ್ಯಾಡ್‌ಬರಿ ಕೆಲ ದಶಕಗಳ ಹಿಂದೆ ಮಂಗಳ ಗ್ರಹದಲ್ಲಿ ಜೀವಿಗಳ ಅಸ್ತಿತ್ವದ ಸಾಧ್ಯತೆಗಳ ಕುರಿತು ಕಥೆಗಳನ್ನು ಬರೆದಿದ್ದ. ಈಗ ಆತನ ನೆನಪಿನಲ್ಲಿ, ರೋವರ್ ಚಲಿಸಿ ನಿಂತಿರುವ ಜಾಗಕ್ಕೆ ಬ್ರ್ಯಾಡ್‌ಬರಿ ಲ್ಯಾಂಡಿಂಗ್ ಎಂದು ನಾಮಕರಣ ಮಾಡಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.