ಭಾನುವಾರ, ಮೇ 16, 2021
22 °C

ಅಂಜೂರ, ಸಪೋಟಾಗೆ ಸಹಾಯಧನ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿ ತಾಲ್ಲೂಕಿನ ಎರಡು ಸೆಕ್ಟರ್‌ಗಳ ನೂರಾರು ಎಕರೆ  ಭೂಮಿಯಲ್ಲಿ ಸಪೋಟಾ ಹಾಗೂ ಅಂಜೂರ ಬೆಳೆಯಲು ಅಗತ್ಯ ಸಹಾಯಧನ ಸೌಲಭ್ಯ ನೀಡಿರುವ ತೋಟಗಾರಿಕೆ ಇಲಾಖೆ, ಬೆಳೆಗಾರರ ಸಹಕಾರಿ ಸಂಘಗಳಿಗೆ ಅನುಕೂಲ ಕಲ್ಪಿಸುತ್ತಿದೆ.ಬಳ್ಳಾರಿ ತಾಲ್ಲೂಕಿನ ಮೋಕಾ ಹಾಗೂ ಕುರುಗೋಡು ಹೋಬಳಿಗಳಲ್ಲಿ ತಲಾ 40 ಹೆಕ್ಟೇರ್ ಭೂಮಿಯನ್ನು ಆಯ್ಕೆ ಮಾಡಿ, ಗರಿಷ್ಠ 5 ಎಕರೆ ಭೂಮಿ ಹೊಂದಿರುವ ಬಡ, ಸಣ್ಣ, ಅತಿ ಸಣ್ಣ ಹಿಡುವಳಿದಾರರಿಗೆ ಶೇ 50ರಷ್ಟು ಸಹಾಯಧನ ಸೌಲಭ್ಯ ನೀಡುವ ಮೂಲಕ ತೋಟಗಾರಿಕೆ ಬೆಳೆಗೆ ಉತ್ತೇಜನ ನೀಡಲಾಗುತ್ತಿದೆ.ಮೋಕಾ ಹೋಬಳಿಯ ಜಿ.ನಾಗೇನಹಳ್ಳಿ ಮತ್ತು ಡಿ.ನಾಗೇನಹಳ್ಳಿ ಗ್ರಾಮಗಳ ಸುತ್ತಮುತ್ತ ಈಗಾಗಲೇ ವೇದಾವತಿ (ಹಗರಿ) ನದಿ ದಂಡೆಯ ಅನೇಕ ದೊಡ್ಡ ಹಿಡುವಳಿದಾರರು ಸಪೋಟಾ ಬೆಳೆಯಲ್ಲಿ ತೊಡಗಿದ್ದು, ಈ ಗ್ರಾಮಗಳಲ್ಲದೆ, ಪಕ್ಕದ ಕಾರೇಕಲ್ಲು ಮತ್ತು ಜಾಲಿಹಾಳ ಗ್ರಾಮಗಳಲ್ಲಿನ ಆಯ್ದ ಬಡ ರೈತರನ್ನೂ ತೋಟಗಾರಿಕೆ  ಬೆಳೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಬೆಳೆಗಾರರ ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ಮುಂದೆ ಬಂದಲ್ಲಿ ಸಹಾಯಧನ ನೀಡಲಾಗಿದೆ.ತಾಲ್ಲೂಕಿನ ಕಾರೇಕಲ್ಲು ಗ್ರಾಮದ ರಾಜಶೇಖರ, ಕಟ್ಟೆಬಸವ ಮತ್ತಿತರ ರೈತರು ಯೋಜನೆ ಅಡಿ ನೆರವು ಪಡೆದು, ತಮ್ಮ ಜಮೀನಿನಲ್ಲಿ ಸಪೋಟಾ ಸಸಿ ನೆಟ್ಟಿದ್ದು, ಇನ್ನು ಮೂರು ವರ್ಷಗಳ ನಂತರ ಹಣ್ಣು ಬಿಡುವ ಗಿಡಗಳ ಆರೈಕೆಯಲ್ಲಿ ನಿತ್ಯ ತೊಡಗಿದ್ದಾರೆ. ಅದೇ ರೀತಿ, ಕುರುಗೋಡು ಹೋಬಳಿಯ ಕುರುಗೋಡು, ಸೋಮಸಮುದ್ರ ಮತ್ತು ಬಾದನಟ್ಟಿ ಗ್ರಾಮಗಳ ಸುತ್ತಮುತ್ತಲೂ ಅಂಜೂರ ಬೆಳೆಯಲು ರೈತರಿಗೆ ಉತ್ತೇಜನ ನೀಡುವ ಮೂಲಕ ಹನಿ ನೀರಾವರಿ ಸೌಲಭ್ಯ ಅಳವಡಿಸಿಕೊಳ್ಳಲು ಸಹಕರಿಸಲಾಗಿದೆ.ಈ ಮುಂಚೆ ಎಕರೆಗೆ ಕೇವಲ 50ರಿಂದ 60 ಸಪೋಟಾ ಗಿಡ ಬೆಳೆಸುತ್ತಿದ್ದ ರೈತರ ಪಾರಂಪರಿಕ ಪದ್ಧತಿಯ ಬದಲಿಗೆ, ಎಕರೆಗೆ 125ರಿಂದ 130 ಗಿಡ ನೆಡುವ ಸಲಹೆ ನೀಡಿ, ಹನಿ ನೀರಾವರಿ ಅಳವಡಿಸಲು ಪ್ರೇರಣೆ ನೀಡಲಾಗಿದೆ. ಭೂಮಿ ಹದಗೊಳಿಸುವ ಹಂತದಿಂದ ಹಿಡಿದು ಪಿಟ್ ಮತ್ತು ಟ್ರೆಂಚ್ ಹಾಕಲು, ಸಸಿ ಖರೀದಿಸಲು, ಸಸಿ ನೆಡಲು, ಹನಿ ನೀರಾವರಿಗೆ ಅಗತ್ಯವಿರುವ ಎಲ್ಲ ಸಲಕರಣೆ ಖರೀದಿಸಲು ಶೇ 50ರಷ್ಟು ಸಹಾಯಧನ ಸೌಲಭ್ಯದ ಅಡಿ ಅನೇಕ ರೈತರಿಗೆ ನೆರವು ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಿ.ಎಂ. ರಮೇಶ `ಪ್ರಜಾವಾಣಿ'ಗೆ ತಿಳಿಸಿದರು.ಕಳೆದ ವರ್ಷ ಅನೇಕ ರೈತರಿಗೆ ತೋಟಗಾರಿಕೆ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿ, ಅವರ ಮನವೊಲಿಸಿ, ಅತ್ಯಾಧುನಿಕ ಮಾದರಿಯ ತೋಟಗಾರಿಕೆಯತ್ತ ಆಕರ್ಷಿಸಲಾಗಿದೆ. ಮೋಕಾ ಹೋಬಳಿಯಲ್ಲಿ 40 ಹೆಕ್ಟೆರ್ ವ್ಯಾಪ್ತಿಯಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಜಾರಿಗೊಳಿಸಲು ಅವಕಾಶವಿದ್ದರೂ, ಅಷ್ಟು ಪ್ರಮಾಣದ ರೈತರು ಮುಂದೆ ಬಾರದ್ದರಿಂದ ಕೇವಲ 14 ಹೆಕ್ಟೇರ್ ಭೂಮಿಯಲ್ಲಿ ರೈತರಿಗೆ ಮಾತ್ರ ಯೋಜನೆಯ ನೆರವು ನೀಡಲಾಗಿದೆ. ಈ ವರ್ಷವೂ ಯೋಜನೆಯನ್ನು ಮುಂದುವರಿಸಿ ಇನ್ನೂ ಅನೇಕ ರೈತರನ್ನು ಯೋಜನೆ ವ್ಯಾಪ್ತಿಗೆ ತರಲು ಶ್ರಮಿಸಲಾಗುತ್ತಿದೆ ಎಂದು ಅವರು ವಿವರಿಸಿದರು.ರಾಷ್ಟ್ರೀಯ ಸಣ್ಣ ನೀರಾವರಿ ಮಿಷನ್ ಅಡಿಯೂ ಹನಿ ನೀರಾವರಿ ಅಳವಡಿಕೆಗೆ ನೆರವು ನೀಡಲಾಗುತ್ತಿದೆ. ಕುರುಗೋಡು ಹೋಬಳಿ ಸುತ್ತಮುತ್ತ ಅಂಜೂರ ಬೆಳೆ ಬೆಳೆಯುವವರಿಗೆ ಸಹಾಯಧನ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬಳ್ಳಾರಿ ಮತ್ತು ರೂಪನಗುಡಿ ಹೋಬಳಿಗಳಲ್ಲಿ ತರಕಾರಿ, ಕಲ್ಲಂಗಡಿ ಮತ್ತು ಖರಬೂಜು ಬೆಳೆಯುವುದಕ್ಕೆ ಯೋಜನೆ ಅಡಿ ನೆರವು ನೀಡಲು ಎಲ್ಲ ಸಿದ್ಧತೆಗಳೂ ನಡೆದಿವೆ. ಈ ಭಾಗದ ರೈತರು ಯೋಜನೆಯ ನೆರವು ಪಡೆಯುವ ನಿಟ್ಟಿನಲ್ಲಿ ಬಳ್ಳಾರಿಯ ತಹಶೀಲ್ದಾರ ಕಚೇರಿಯ ಆವರಣದಲ್ಲಿರುವ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಅವರು ಕೋರಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.