ಗುರುವಾರ , ಮೇ 6, 2021
23 °C
ಮಹಾಲೇಖಪಾಲರ ವರದಿಯಲ್ಲಿ ಬಹಿರಂಗ

ಅಂಡರ್‌ಪಾಸ್: ನಿಯಮಾವಳಿ ಉಲ್ಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಎನ್‌ಆರ್ ವೃತ್ತದ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ವೇಳೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿರುವುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ. ಈ ವರದಿಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಗುರುವಾರ ಮಂಡಿಸಲಾಗಿದೆ.ಅಂಡರ್‌ಪಾಸ್ ನಿರ್ಮಾಣ ಕುರಿತು ಡಿಪಿಆರ್ ಸಿದ್ಧಪಡಿಸುವಂತೆ ಖಾಸಗಿ ವ್ಯಕ್ತಿಯೊಬ್ಬರಿಗೆ 2007ರಲ್ಲಿ ಸೂಚನೆ ನೀಡಲಾಗಿತ್ತು. ಅವರಿಗೆ 3.50 ಲಕ್ಷ ರೂಪಾಯಿ ಶುಲ್ಕ ನೀಡಲಾಯಿತು. ಡಿಪಿಆರ್ ಸಿದ್ಧಪಡಿಸುವ ಮುನ್ನ ಅವರು, ಆ ಪ್ರದೇಶದಲ್ಲಿ ವಾಹನ ದಟ್ಟಣೆ ಎಷ್ಟಿದೆ ಎಂಬುದನ್ನು ಕೇವಲ 12 ಗಂಟೆಗಳ ಕಾಲ ಪರಿಶೀಲಿಸಿದ್ದರು. `ಇಂಡಿಯನ್ ರೋಡ್ ಕಾಂಗ್ರೆಸ್' (ಐಆರ್‌ಸಿ) ರೂಪಿಸಿರುವ ನಿಯಮದ ಪ್ರಕಾರ ಡಿಪಿಆರ್ ಸಿದ್ಧಪಡಿಸುವ ಮುನ್ನ ಕನಿಷ್ಠ ಏಳು ದಿನಗಳ ಕಾಲ ವಾಹನ ಸಂಚಾರ ದಟ್ಟಣೆಯನ್ನು ಪರಿಶೀಲಿಸಬೇಕು ಎಂದು ಸಿಎಜಿ ವರದಿ ಹೇಳಿದೆ.ಆ ಭಾಗದಲ್ಲಿ ಎಷ್ಟು ಮಂದಿ ಪಾದಚಾರಿಗಳು ಓಡಾಟ ನಡೆಸುತ್ತಾರೆ ಎಂಬ ಬಗ್ಗೆ ಡಿಪಿಆರ್‌ನಲ್ಲಿ ಮಾಹಿತಿ ಇರಲಿಲ್ಲ. ಯೋಜನೆ ಕುರಿತು ನೀಡಿರುವ ಡಿಪಿಆರ್ ಸಮರ್ಪಕವಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂದು ಸಿಎಜಿ ವರದಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ನಿಯಮಗಳ ಪ್ರಕಾರ ಏಳು ದಿನಗಳ ಕಾಲ ವಾಹನ ಸಂಚಾರ ದಟ್ಟಣೆ ಪರಿಶೀಲನೆ ಮಾಡದಿರುವುದಕ್ಕೆ ಕಾರಣ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಈ ಅಂಡರ್‌ಪಾಸ್ ನಿರ್ಮಾಣದ ಗುತ್ತಿಗೆಯನ್ನು ಖಾಸಗಿ ಕಂಪೆನಿಯೊಂದಕ್ಕೆ 2008ರ ಮೇ ತಿಂಗಳಲ್ಲಿ ನೀಡಲಾಯಿತು. 10 ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂದು ಗಡುವು ವಿಧಿಸಲಾಗಿತ್ತು. ಆದರೆ 2012ರ ಡಿಸೆಂಬರ್ ಕಳೆದರೂ ಕೆಲಸ ಪೂರ್ಣಗೊಳ್ಳಲಿಲ್ಲ. ಈ ಕಾಮಗಾರಿಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯೂಎಸ್‌ಎಸ್‌ಬಿ) ಸೇರಿದ ಜಮೀನನ್ನು ಬಳಸಿಕೊಳ್ಳಬೇಕಿತ್ತು.ಆದರೆ ಯೋಜನೆಯು ದೋಷಪೂರ್ಣವಾಗಿತ್ತು. ಈ ಮೂರು ಸಂಸ್ಥೆಗಳ ಪ್ರಮುಖ ಕಟ್ಟಡಗಳ ಮೂಲಕ ಹಾದುಹೋಗುವಂತೆ ಅಂಡರ್‌ಪಾಸ್ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಹಾಗಾಗಿ ಮೂರೂ ಸಂಸ್ಥೆಗಳು ಈ ಕಾಮಗಾರಿಗೆ ತಮ್ಮ ಜಮೀನು ನೀಡಲು ನಿರಾಕರಿಸಿದವು ಎಂದು ವರದಿ ಬೊಟ್ಟುಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.