ಶುಕ್ರವಾರ, ಫೆಬ್ರವರಿ 26, 2021
31 °C

ಅಂತರಿಕ್ಷದಲ್ಲಿ ಫಲ!

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಅಂತರಿಕ್ಷದಲ್ಲಿ ಫಲ!

ಜೋರ್ಡಾನ್ ಗಡಿಗೆ ಹೊಂದಿಕೊಂಡಿದ್ದ ಆ ತೋಟದಲ್ಲಿ ತುಂತುರು ನೀರಾವರಿಯಿಂದಾಗಿ ತಂಪು ಮಲೆನಾಡಿದ ವಾತಾವರಣವಿತ್ತು. ತೋಟದ ನಡುವಿನ ಇಪ್ಪತ್ತು ಅಡಿ ಎತ್ತರದ ಹಸಿರು ಮನೆಯೊಳಗೆ ಪ್ರವೇಶಿಸಿದಾಗ ಕಬ್ಬಿಣದ ಕಂಬ, ಬಳ್ಳಿ, ಗೊಂಚಲುಗಳಲ್ಲಿ ಸಾವಿರಾರು ಟೊಮೆಟೊ ಕಂಡವು. ಆ ಪ್ರಮಾಣ ನೋಡಿ ಅಚ್ಚರಿ ಪಡುತ್ತಿದ್ದಂತೆ ‘ಮೇಲೆ ನೋಡಿ’ ಎಂದು ರೈತ ನೋರ್ಮನ್ ತೋರಿಸಿದ. ಕೆಂಪು ವರ್ಣದ ಸ್ಟ್ರಾಬೆರಿ ಹಣ್ಣುಗಳು ಅಂತರಿಕ್ಷದಲ್ಲಿ ತೂಗಾಡುತ್ತಿದ್ದವು!‘ಕೆಳಗೆ ಮಣ್ಣು ಇಲ್ಲ. ಆದರೂ ಇಲ್ಲಿ ಟೊಮೆಟೊ; ಮೇಲೆ ಸ್ಟ್ರಾಬೆರಿ. ಹೇಗಿದೆ ಈ ಐಡಿಯಾ..?’ ಎಂದು ನೋರ್ಮನ್ ಪ್ರಶ್ನಿಸಿದಾಗ, ಮೆಚ್ಚುಗೆ ವ್ಯಕ್ತಪಡಿಸದೇ ಇರಲಾದೀತೆ?ಇಸ್ರೇಲಿನಲ್ಲಿ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಕೃಷಿಯೋಗ್ಯ ಮಣ್ಣು ಲಭ್ಯವಿಲ್ಲ. ಹೀಗಾಗಿ ಸಿಕ್ಕಷ್ಟೇ ಮಣ್ಣನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕು. ನೆಲದಲ್ಲಿ ಸುರಿಯುವ ಮಣ್ಣು ವ್ಯರ್ಥವಾದೀತು ಎಂಬ ಚಿಂತೆಯಿಂದ ಅಲ್ಪ ಪ್ರಮಾಣದಲ್ಲಿ ಬಳಸುವ ಪದ್ಧತಿ ದಶಕದ ಹಿಂದೆಯೇ ಅಲ್ಲಿ ಆರಂಭಗೊಂಡಿದೆ. ದುಬಾರಿ ಹಾಗೂ ಅತಿ ಹೆಚ್ಚು ಬೇಡಿಕೆಯ ಸ್ಟ್ರಾಬೆರಿ ಹಾಗೂ ಬಳ್ಳಿಗಳಲ್ಲಿ ಬೆಳೆಯುವ ಹಲವು ಹಣ್ಣುಗಳನ್ನು ಈ ವಿಧಾನದಲ್ಲಿ ಬೆಳೆಸಲಾಗುತ್ತದೆ.ಆರರಿಂದ ಹತ್ತು ಅಂಗುಲ ಅಗಲದ ಚೌಕಾಕಾರದ ಕೊಳವೆಗಳನ್ನು ಉದ್ದಕ್ಕೂ ಕತ್ತರಿಸಿ, ಎರಡು ಭಾಗ ಮಾಡಲಾಗುತ್ತದೆ. ಇಂಥ ಕೊಳವೆಗಳಲ್ಲಿ ಮಣ್ಣು ಹಾಗೂ ಗೊಬ್ಬರದ ಮಿಶ್ರಣ ಸುರುವಿ, ಸಸಿ ನಾಟಿ ಮಾಡಿ ಮೇಲೆ ಸಾಲಾಗಿ ಜೋಡಿಸುತ್ತಾರೆ. ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ನೀರು ಹಾಗೂ ಎಲ್ಲ ಬಗೆಯ ಪೋಷಕಾಂಶಗಳನ್ನು ಬೆರೆಸಿ, ಕಿರು ಕೊಳವೆಗಳ ಮೂಲಕ ಕರಾರುವಾಕ್ಕಾದ ಸಮಯಕ್ಕೆ ಹರಿಸುತ್ತಾರೆ. ಈ ರಸಾವರಿ ವಿಧಾನ ಈಗ ಅಲ್ಲಿ ಜನಪ್ರಿಯ. ಮೇಲೆ ಅಂತರಿಕ್ಷದಲ್ಲಿ ಸ್ಟ್ರಾಬೆರಿ ಬೆಳೆದರೆ, ಕೆಳಗಿನ ನೆಲದ ಮೇಲಿನ ಗುಂಡಿಯಲ್ಲಿ ಟೊಮೆಟೊ ಸಸಿ ಇರುತ್ತದೆ. ಹೀಗೆ ಒಂದೇ ಜಾಗದಲ್ಲಿ ಎರಡೆರಡು ಬೆಳೆ!ಹಸಿರುಮನೆ ಎಂಬ ಜೀವನಾಡಿ

ಧಗೆಯುಕ್ಕಿಸುವ ಮರುಭೂಮಿಯಲ್ಲಿ ಸಾಗುತ್ತಿರುವಂತೆ ದೂರದಲ್ಲಿ ಶಿಸ್ತುಬದ್ಧವಾಗಿ ಕೊರೆದಂತಿದ್ದ ನೂರಾರು ಬಿಳಿ ಸಾಲುಗಳು ಕಂಡವು. ಹತ್ತಿರ ಹೋದಾಗ ಗೊತ್ತಾಗಿದ್ದು– ಅವು ಹಸಿರುಮನೆ. ‘ಟನಲ್’ ಎಂದೇ ಕರೆಯಲಾಗುವ ಇವು ಇಸ್ರೇಲಿನ ಕೃಷಿಯ ಜೀವನಾಡಿ.ಎರಡರಿಂದ ಐದು ಅಡಿ ಎತ್ತರದ ಸಣ್ಣ, ಎಂಟರಿಂದ ೧೫ ಅಡಿವರೆಗಿನ ಮಧ್ಯಮ ಹಾಗೂ ೧೫ ಅಡಿಗಿಂತ ಎತ್ತರದ ದೊಡ್ಡ ಹಸಿರುಮನೆಗಳು ಇಲ್ಲಿವೆ. ಬೆಳೆಗಳಿಗೆ ತಕ್ಕಂತೆ ಇವುಗಳ ಬಳಕೆಯಿದೆ. ತರಕಾರಿ ಉತ್ಪಾದನೆಯಲ್ಲಿ ಇವುಗಳ ಪಾಲು ದೊಡ್ಡದು. ಬೆಳೆಗೆ ಮೊದಲು ಇಲ್ಲಿ ಅಳೆಯುವುದು ಸಸ್ಯಗಳ ಬೇರುಗಳನ್ನು! ಯಾಕೆಂದರೆ ಎಷ್ಟು ಬೇರು ಬಿಡುತ್ತದೋ ಅಷ್ಟಕ್ಕಿಂತ ಹೆಚ್ಚು ವಿಸ್ತಾರದಲ್ಲಿ ಮಣ್ಣು ಯಾಕೆ ಬೇಕು? ಬೇರೆಡೆಯಿಂದ ತಂದ ಮಣ್ಣನ್ನು ಸುರಿದು ಹದಗೊಳಿಸಿ, ಸಸಿ ನಾಟಿ ಮಾಡುತ್ತಾರೆ. ರಸಾವರಿ ವಿಧಾನದಲ್ಲಿ ಗೊಬ್ಬರ ನೀಡುತ್ತಾರೆ. ಇದೆಲ್ಲ ಹಸಿರುಮನೆಯೊಳಗೆ ಬೆಳೆಯುವ ವಿಧಾನ.ಇದೆಲ್ಲ ನಮ್ಮಲ್ಲೂ ಇದೆ. ಆದರೆ ಹಸಿರು­ಮನೆ­ಯಲ್ಲಿ ಬೆಳೆಯುವ ವಿಧಾನದಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡಿರು­ವುದು ಇಸ್ರೇಲಿನ ಹೆಗ್ಗಳಿಕೆ. ಟನಲ್‌ಗಳಲ್ಲಿ ಆಯ್ದ ಸಸ್ಯಗಳ ಕಾಂಡ ಹಾಗೂ ಎಲೆಗಳಿಗೆ ಚಿಕ್ಕ ಚಿಕ್ಕ ಸಂವೇದಿ ಯಂತ್ರಗಳನ್ನು ಜೋಡಿಸ­ಲಾಗು­ತ್ತದೆ. ಅವು ವಾತಾವರಣ, ತೇವಾಂಶ, ತಾಪಮಾನ ಇತ್ಯಾದಿ ಮಾಹಿತಿಯನ್ನು ನಿಯಂತ್ರಣ ಕೊಠಡಿಗೆ ಸತತವಾಗಿ ರವಾನಿಸು­ತ್ತವೆ.ನೆಲದೊಳಗೇ ಇರುವ ಸಂವೇದಿಗಳು ನೀರು ಕಡಿಮೆಯಾದಾಗ ಕೊಡುವ ಸಂದೇಶ ಆಧರಿಸಿ ಕಂಪ್ಯೂಟರ್ ನಿಯಂತ್ರಿತ ಯಂತ್ರವು ತುಂತುರು ಅಥವಾ ಹನಿ ನೀರು ಹಾಯಿಸುತ್ತದೆ. ‘ಇಷ್ಟು ನೀರು ಸಾಕು’ ಎಂಬ ಸಂದೇಶ ರವಾನೆಯಾದಾಗ ನೀರು ಪೂರೈಕೆ ಸ್ಥಗಿತಗೊಳ್ಳುತ್ತದೆ. ಬೆಳೆದ ಬೆಳೆ ಯಾವುದು? ಯಾವತ್ತು ನಾಟಿ ಮಾಡಲಾಗಿದೆ ಎಂಬುದನ್ನಷ್ಟೇ ನಮೂದಿಸಿದರೆ ಸಾಕು; ಅದರಲ್ಲಿನ ತಂತ್ರಾಂಶದ ನೆರವಿನಿಂದ ಕಂಪ್ಯೂಟರ್ ಎಲ್ಲವನ್ನು ನಿರ್ವಹಿಸುತ್ತದೆ.ಮರಗಳಿಗೇ ಮೋಸ?

ಇಸ್ರೇಲ್‌ನ ಪ್ರಮುಖ ತೋಟಗಾರಿಕೆ ಬೆಳೆಯಲ್ಲಿ ‘ಮ್ಯಾಂಡರಿನ್’ ಕೂಡ ಒಂದು. ನಮ್ಮಲ್ಲಿನ ಕಿತ್ತಳೆ, ಮೂಸಂಬಿ ಥರದ ಈ ಹಣ್ಣು ಸಾಮಾನ್ಯವಾಗಿ ಜೂನ್-– ಜುಲೈ ತಿಂಗಳಲ್ಲಿ ಇಳುವರಿ ಕೊಡುತ್ತದೆ. ಅದಕ್ಕೂ ಮೊದಲೇ ಇಳುವರಿ ಪಡೆಯಲು ಮರಗಳಿಗೇ ‘ಮೋಸ’ ಮಾಡುತ್ತಾರೆ!ಬೃಹತ್ ಹಸಿರುಮನೆಗಳಲ್ಲಿ ಬೆಳೆದ ಈ ಮರಗಳಿಗೆ ನವೆಂಬರ್ ತಿಂಗಳಲ್ಲಿ ‘ಪ್ರೂನಿಂಗ್’ (ಕವಲು ಕತ್ತರಿಸಿ) ಮಾಡುತ್ತಾರೆ. ಬಳಿಕ ಆವರಣ ಹೊದೆಸಿ, ರಾಸಾಯನಿಕ ಸಿಂಪಡಿಸುತ್ತಾರೆ. ಇದು ಬಿಸಿ ವಾತಾವರಣ ಸೃಷ್ಟಿಸಿ ‘ಈಗ ಬೇಸಿಗೆ ಬಂದಿದೆ’ ಎಂಬ ಭ್ರಮೆಯನ್ನು ಮರಗಳಿಗೆ ಮೂಡಿಸುತ್ತದೆ. ಮರಗಳು ಕಾಯಿ ಬಿಡಲು ಶುರು ಮಡುತ್ತವೆ. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹಣ್ಣುಗಳನ್ನು ಕಿತ್ತು, ಮಾರುಕಟ್ಟೆಗೆ ಕಳಿಸುತ್ತಾರೆ.‘ಆಗ ಬೇಸಿಗೆ ಇರುವುದರಿಂದ, ಬೇಡಿಕೆ ಹೆಚ್ಚು. ಆದರೆ ನಮ್ಮಷ್ಟು ಬೇಗ ಎಲ್ಲೂ ಇಳುವರಿ ಬಂದಿರುವುದಿಲ್ಲ. ಹೀಗಾಗಿ ಎಷ್ಟೋ ದೇಶಗಳು ಅತ್ಯಧಿಕ ಬೆಲೆ ತೆತ್ತು ಇವುಗಳನ್ನು ಖರೀದಿಸುತ್ತವೆ. ನಮ್ಮಲ್ಲಿನ ಎಲ್ಲ ಇಳುವರಿ ಜೂನ್ ಹೊತ್ತಿಗೆ ಖಾಲಿಯಾಗುತ್ತದೆ’ ಎಂದು ಹೇಳಿದ ಯೆನ್ ವಹಾವ್ ಗ್ರಾಮದ ರೈತ ಶಮಿ ಅನಾನ್ ಒಂದು ಬಟನ್ ಒತ್ತಿದರು.೧೫ ಎಕರೆ ಪ್ರದೇಶದ ಹಸಿರುಮನೆ ಆವರಣ ತಂತಾನೇ ಐದು ನಿಮಿಷದಲ್ಲಿ ಮುಚ್ಚಿಕೊಂಡಿತು. ಇನ್ನೊಂದು ಬಟನ್ ಅದುಮಿದಾಗ, ನೀರಿನ ಅಸಂಖ್ಯಾತ ಕೊಳವೆಗಳು ಮಂಜಿನ ವಾತಾವರಣ ಸೃಷ್ಟಿಸಿದವು. ತಂತ್ರಜ್ಞಾನ ಬಳಕೆ ಹೀಗೂ ಇದೆಯೇ? ಎಂದು ಅಚ್ಚರಿಯಾಯಿತು. ಸಿಂಪಡಿಸುವ ರಾಸಾಯನಿಕ ಪದಾರ್ಥದ ಅವಶೇಷ ಹಣ್ಣುಗಳಲ್ಲಿ ಉಳಿಯುತ್ತಿದೆ ಎಂಬ ದೂರು ಕೆಲ ವರ್ಷಗಳ ಹಿಂದೆ ಕೇಳಿ ಬಂತು. ಆಗ ರಾಸಾಯನಿಕದ ಬದಲಿಗೆ ಹೀಟರ್‌ಗಳ ಮೂಲಕ ಬಿಸಿ ವಾತಾವರಣ ನಿರ್ಮಿಸುವ ವ್ಯವಸ್ಥೆ ರೂಪಿಸಲಾಗಿದೆ.ವಾಣಿಜ್ಯ, ಆಹಾರ, ತರಕಾರಿ, ತೋಟಗಾರಿಕೆ, ಪುಷ್ಪಕೃಷಿ... ಹೀಗೆ ಎಲ್ಲದರಲ್ಲೂ ಇಸ್ರೇಲ್ ನೈಪುಣ್ಯ ಸಾಧಿಸಿದೆ. ತುಂಬಾ ದುಬಾರಿ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡ ದೂರು ಇಸ್ರೇಲ್‌ ಮೇಲಿದೆ. ಆದರೆ ವಾಸ್ತವವಾಗಿ ಬೇಸಾಯಕ್ಕೆ ಅಗತ್ಯವಾದ ಸರಳ ತಂತ್ರಜ್ಞಾನವನ್ನೂ ಸಾಕಷ್ಟು ಕಡೆ ಅಳವಡಿಸಿಕೊಂಡ ಜಾಣ್ಮೆ ಈ ದೇಶದ್ದು. ‘ರೈತರಿಗೆ ಉಪಯೋಗವಾಗದ ಸಂಶೋಧನೆ ಮಾಡುವುದಾದರೂ ಯಾಕೆ?’ ಎಂಬ ಅರವಾ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊ. ಯಿಗಲ್‌ ಎಲಾದ್‌ ಪ್ರಶ್ನೆಯು, ಅಲ್ಲಿನ ಕೃಷಿ ಯಶಸ್ಸಿನ ಹಿಂದಿರುವ ಮೂಲಮಂತ್ರ.ಇಲ್ಲಿ 15 ಟನ್; ಅಲ್ಲಿ 150 ಟನ್

ಯೂರೋಪ್ ದೇಶಗಳಲ್ಲಿ ಚೆರಿ ಟೊಮೆಟೊಗೆ ಯಾವಾಗಲೂ ಬೇಡಿಕೆ. ಅದಕ್ಕೆಂದೇ ವರ್ಷದುದ್ದಕ್ಕೂ ಉತ್ಪನ್ನ ಸಿಗುವಂಥ ತಾಂತ್ರಿಕತೆಯನ್ನು ಸಂಶೋಧಕರು ರೂಪಿಸಿದ್ದಾರೆ. ಅದು ತೀರಾ ಸರಳ. ಬಳ್ಳಿಯಾಗಿ ಬೆಳೆಯುವ ಚೆರಿ ಟೊಮೆಟೊಗೆ ಒಂದಷ್ಟು ಆಧಾರ ಸಿಕ್ಕರೆ, ಮುಂದೆ ಮುಂದೆ ಬೆಳೆಯುತ್ತ ಹೋಗುತ್ತದೆ. ಐದು ಅಡಿ ಅಂತರದಲ್ಲಿ ನೆಡಲಾದ ಎರಡು ಕಂಬಗಳ ಮಧ್ಯೆ ಸುತ್ತುತ್ತ ಬೆಳೆಯುವ ಟೊಮೆಟೊ, ವರ್ಷವಿಡೀ ಹಣ್ಣು ಕೊಡುತ್ತಲೇ ಇರುತ್ತದೆ. ‘ಇದನ್ನು ಒಂದೂವರೆ ವರ್ಷದ ಹಿಂದೆ ನಾಟಿ ಮಾಡಿದ್ದು. ಹೇಗೆ ಸುತ್ತುತ್ತ ಬೆಳೆಯುತ್ತಿದೆ ನೋಡಿ’ ಎಂದು ಹೆಮ್ಮೆಯಿಂದ ತೋರಿಸಿದರು ರಾಹತ್ ನಗರದ ರೈತ ಯೂಸುಫಾ.ಅಂದ ಹಾಗೆ, ಭಾರತದಲ್ಲಿ ಇಷ್ಟೇ ಸ್ಥಳದಲ್ಲಿ ಬೆಳೆಯುವ ಟೊಮೆಟೊ ವರ್ಷಕ್ಕೆ ಹೆಕ್ಟೇರ್‌ಗೆ ೧೫ ಟನ್ ಇಳುವರಿ ನೀಡಿದರೆ, ಇಸ್ರೇಲ್‌ನಲ್ಲಿ ಈ ಪ್ರಮಾಣದ ೧೫೦ ಟನ್!* ಲೇಖಕರು ಇಸ್ರೇಲ್‌ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿದ್ದರು. ಅಲ್ಲಿಯ ಅನುಭವದ ಐದನೇ ಕಂತು ಇದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.