ಗುರುವಾರ , ಮಾರ್ಚ್ 4, 2021
26 °C
ಮೂರು ದಿನಗಳ ವಲಯ ಮಟ್ಟದ ವರ್ಬ್ಯಾಟಲ್‌ ಸ್ಪರ್ಧೆಗೆ ತೆರೆ

ಅಂತಿಮ ಹಂತಕ್ಕೆ ವಿದ್ಯಾರ್ಥಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತಿಮ ಹಂತಕ್ಕೆ ವಿದ್ಯಾರ್ಥಿಗಳ ಆಯ್ಕೆ

ಮಂಗಳೂರು: ‘ಪ್ರಜಾವಾಣಿ’ಯ ಸಹಪಾಠಿ, ಎಸಿಬಿ ಫೈಬರ್‌ ನೆಟ್‌ವರ್ಕ್‌, ಟಿ.ವಿ. ಹೌಸ್‌ ನೆಟ್‌ವರ್ಕ್‌ನ ಸಹಯೋಗದಲ್ಲಿ ನಗರದ ಸಹ್ಯಾದ್ರಿ ಕಾಲೇಜಿನ ಸಭಾಂಗಣದಲ್ಲಿ ಮೂರು ದಿನ ನಡೆದ ವರ್ಬ್ಯಾಟಲ್‌–2016 ಮಂಗಳೂರು ವಲಯದ ಸ್ಪರ್ಧೆಗಳು ಗುರುವಾರ ಮುಕ್ತಾಯವಾದವು.ವರ್ಬ್ಯಾಟಲ್‌ ಕನ್ನಡ, ವರ್ಬ್ಯಾಟಲ್‌ ಜ್ಯೂನಿಯರ್‌, ವರ್ಬ್ಯಾಟಲ್‌ ಸೀನಿಯರ್‌ ಗುಂಪಿನ ಸ್ಪರ್ಧೆಗಳು ನಡೆದವು. ಮೂರೂ ದಿನ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ವಿದ್ಯಾರ್ಥಿಗಳು ತಮ್ಮ ಸಂವಹನ ಕೌಶಲವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಕನ್ನಡ ವಿಭಾಗದ ಸ್ಪರ್ಧೆಯಲ್ಲಿ ನಗರದ ಮೂರು ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೆ, ಜ್ಯೂನಿ ಯರ್‌ ವಿಭಾಗದಲ್ಲಿ 10ಕ್ಕೂ ಅಧಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದರು.ಗುರುವಾರ ನಡೆದ ವರ್ಬ್ಯಾಟಲ್‌ ಸೀನಿಯರ್‌ ಸ್ಪರ್ಧೆಯಲ್ಲಿ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿ ಗಳನ್ನು ಒಳಗೊಂಡ  8 ತಂಡಗಳು ಭಾಗವಹಿಸಿದ್ದವು.ಭಾರತೀಯರು ಮೂಲತಃ ಪ್ರಜಾ ಪ್ರಭುತ್ವವಾದಿಗಳು ಎಂಬ ವಿಷಯವಾಗಿ ನಡೆದ ಚರ್ಚೆಯಲ್ಲಿ ಪರ–ವಿರೋಧದ ವಾದಗಳು ಬಿರುಸಿನಿಂದಲೇ ಮಂಡನೆಯಾದವು.ವಿಷಯದ ಪರವಾಗಿ ಮಾತ ನಾಡಿದ ಯೇನೆಪೋಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಜಗತ್ತಿನ ಅತಿ ದೊಡ್ಡ ಸಂವಿಧಾನವನ್ನು ಹೊಂದಿರುವ ದೇಶ ನಮ್ಮದಾಗಿದ್ದು, ನಮ್ಮ ಸಂವಿಧಾನವು ಪ್ರತಿ ಪ್ರಜೆಗೂ ಹಕ್ಕು ಮತ್ತು ಅಧಿಕಾರಗಳನ್ನು ನೀಡಿದೆ. ಇಲ್ಲಿ ಎಲ್ಲ ರೀತಿಯ ಸ್ವಾತಂತ್ರ್ಯ ನೀಡಲಾಗಿದೆ. ಇದರಿಂದ ದೇಶದ ಜನರು ಗೌರವದಿಂದ ಬದುಕುತ್ತಿದ್ದಾರೆ ಎನ್ನುವ ವಾದವನ್ನು ಮುಂದಿಟ್ಟರು.ಇದನ್ನು ವಿರೋಧಿಸಿದ ಸೇಂಟ್‌ ಅಲೋಶಿಯಸ್‌ ಕಾಲೇಜು ಹಾಗೂ ಶಾರದಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಮೀಸಲಾತಿ ಪದ್ಧತಿ ಇನ್ನೂ ಜಾರಿಯಲ್ಲಿದೆ.ಸಂವಿಧಾನ ನೀಡಿರುವ ಮತದಾನದ ಹಕ್ಕು ಚಲಾಯಿಸು ವುದಕ್ಕೂ ಜನರು ಹಿಂದೇಟು ಹಾಕುತ್ತಿದ್ದಾರೆ.ನೋಟಿಗಾಗಿ ವೋಟಿನಂತಹ ಚಟುವಟಿಕೆಗಳು ನಡೆಯುತ್ತಿವೆ. ಮತಾಂ ತರ ಮಾಡಲಾಗುತ್ತಿದೆ. ಅಂತರ್ಜಾತಿಯ ವಿವಾಹಕ್ಕೆ ಆಸ್ಪದ ಸಿಗುತ್ತಿಲ್ಲ. ಮಹಿಳೆಯರಿಗೆ ಮೀಸಲಾತಿ ಇನ್ನೂ ಮರೀಚಿಕೆ ಯಾಗಿ ಉಳಿದಿದೆ. ಇದು ಸ್ವಾತಂತ್ರ್ಯವೇ? ಇದರಿಂದಾಗಿ ಜನರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.ಭವಿಷ್ಯದಲ್ಲಿ ಕೆಲವೇ ಜನರು ಧಾರ್ಮಿಕ ಭಾವನೆ ಹೊಂದಲಿದ್ದಾರೆ ಎನ್ನುವ ವಿಷಯ ಮೇಲಿನ ಚರ್ಚೆಯೂ ಗಮನ ಸೆಳೆಯಿತು. ಭಾರತೀಯ ವ್ಯವಸ್ಥೆಯೇ ಧರ್ಮವನ್ನು ಆಧರಿಸಿದೆ. ಧರ್ಮ ನಮ್ಮ ಜೀವನದ ಅವಿಭಾಜ್ಯ ಅಂಗ. ಇಂತಹ ಪರಿಸ್ಥಿತಿಯನ್ನು ಧರ್ಮವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ ಭಾರತೀಯ ಧಾರ್ಮಿಕತೆಯನ್ನು ಅಧ್ಯಯನ ಮಾಡುವ ಉದ್ದೇಶದಿಂದಲೇ ಅನೇಕ ವಿದೇಶಿಗರು ಭಾರತಕ್ಕೆ ಬರುತ್ತಿದ್ದಾರೆ.ಇಸ್ರೋದಂತಹ ಸಂಶೋಧನಾ ಕೇಂದ್ರದ ಮುಖ್ಯಸ್ಥರೂ, ಉಪಗ್ರಹ ಉಡಾವಣೆ ಮಾಡುವ ಮೊದಲು ದೇವರ ದರ್ಶನ ಪಡೆಯಲು ಇಚ್ಛಿಸುತ್ತಾರೆ. ಇಂತಹ ದೇಶದಲ್ಲಿ ಧಾರ್ಮಿಕ ಭಾವನೆ ಕಡಿಮೆ ಆಗುವುದು ಅಸಾಧ್ಯ ಎನ್ನುವ ಮಾತನ್ನು ವಿದ್ಯಾರ್ಥಿ ಗಳು ಗಟ್ಟಿಯಾಗಿ ಎಂದು ಹೇಳಿದರು.ಇದಕ್ಕೆ ವಿರೋಧ ವ್ಯಕ್ತಪಡಿಸಿದ ಇನ್ನೊಂದು ಗುಂಪಿನ ಸದಸ್ಯರು, ಇಂದಿನ ಕಾಲದಲ್ಲಿ ಸಮಯವೇ ಸಿಗ ದಂತಾಗಿದೆ. ಇನ್ನು ಧಾರ್ಮಿಕ ಆಚರಣೆ, ಧರ್ಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ದೂರದ ಮಾತು.ತಂತ್ರಜ್ಞಾನದಿಂದಾಗಿ ಜಗತ್ತು ಕಿರಿದಾಗುತ್ತಿದ್ದು, ಹೆಚ್ಚಿನ ಜನರು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಧಾರ್ಮಿಕ ಆಚರಣೆ ಗಳು ಕೇವಲ ನೆಪ ಮಾತ್ರ ಆಗುತ್ತಿವೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು. ನಿರ್ಣಾಯಕರಾಗಿ ನಾಗರಾಜ್‌ ಶರ್ಮ, ಜಾರ್ಜಿಲ್ ಡಿಸೋಜ, ಸಮಿನಾ ನಾಯಕ್‌ ಭಾಗವಹಿಸಿದ್ದರು. ವರ್ಬ್ಯಾಟಲ್‌ನ ಆರ್ಯನ್‌, ಸ್ಪರ್ಧೆ ನಡೆಸಿಕೊಟ್ಟರು.‘ಸಂವಹನ ಕೌಶಲಕ್ಕೆ ಆದ್ಯತೆ’

ವಿದ್ಯಾರ್ಥಿಗಳು ವಾದ ಮಂಡಿಸುವ ಕೌಶಲ ಹಾಗೂ ಪ್ರತಿಸ್ಪರ್ಧಿಗಳ ವಾದವನ್ನು ಹಿಮ್ಮೆಟ್ಟಿಸುವ ಸಂವಹನ ಕೌಶಲಗಳಿಗೆ ಇಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇದು ಚರ್ಚಾ ಸ್ಪರ್ಧೆಗಿಂತ ವಾದ–ಪ್ರತಿವಾದ ಮಂಡನೆಯ ಸ್ಪರ್ಧೆಯಾಗಿದೆ ಎಂದು ಸ್ಪರ್ಧೆಯ ನಿರ್ವಹಣಾಕಾರ ದೀಪಕ್‌ ತಿಮ್ಮಯ ಹೇಳಿದರು.

ವಿದ್ಯಾರ್ಥಿಗಳು ವಿಷಯಾಂತರ ಮಾಡಬಾರದು. ನೀಡಿರುವ ವಾಕ್ಯದ ಮೇಲೆ ಸಮರ್ಥವಾದ ವಾದ ಮಂಡನೆ ಮಾಡಬೇಕು. ಪ್ರತಿಸ್ಪರ್ಧಿಗಳ ಮಾತನ್ನು ಅರ್ಥೈಸಿಕೊಂಡು, ಅದಕ್ಕೆ ಸಮರ್ಥವಾದ ಪ್ರತಿವಾದವನ್ನು ಮಂಡಿಸಬೇಕು ಎಂದು ಸಲಹೆ ನೀಡಿದರು. ತಿಳಿಯುವುದು, ಅರ್ಥೈಸಿಕೊಳ್ಳುವುದು ಹಾಗೂ ಅದಕ್ಕೆ ಪೂರಕವಾಗಿ ಚರ್ಚೆ ಮಾಡುವುದೇ ವರ್ಬ್ಯಾಟಲ್‌ನ ವಿಶೇಷತೆಯಾಗಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.