ಸೋಮವಾರ, ಜುಲೈ 26, 2021
21 °C

ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ರಾಜ್ಯದಲ್ಲಿ ಆರ್‌ಎಸ್‌ಎಸ್ ಅಜೆಂಡಾ ಜಾರಿಗೊಳಿಸಲು ಉದ್ದೇಶಿಸಿದ್ದಾರೆ. ಅದರ ಭಾಗವಾಗಿ ಬೆಂಗಳೂರು ಮೆಟ್ರೊ ರೈಲು ಯೋಜನೆ ಹೆಸರಿನಲ್ಲಿ ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸಲು ಹುನ್ನಾರ ನಡೆದಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್. ಸಂಜೀವ ಆರೋಪಿಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ದಸಂಸ ರಾಜ್ಯ ಘಟಕ ನೀಡಿದ ಕರೆಯನ್ವಯ ದ.ಕ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ದಲಿತರ ಸ್ವಾಭಿಮಾನದ ಪ್ರತೀಕವಾದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳಾಂತರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ದೇಶದಲ್ಲಿ ಶೇ.3ರಷ್ಟು ಇರುವ ಮೇಲ್ಜಾತಿಯ ಜನರು ಶೇ.97ರಷ್ಟಿರುವ ಹಿಂದುಳಿದ ಮತ್ತು ದಲಿತ ವರ್ಗದ ಜನರನ್ನು ಆಳುತ್ತಿದ್ದಾರೆ. ಇತ್ತೀಚೆಗೆ ನಡೆದ ನರಬಲಿಯಂತಹ ಆಚರಣೆಗಳನ್ನು ಮೇಲ್ವರ್ಗದ ಜನರೇ ಕಲಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದರು.ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಂಜಲು ಎಲೆ ಮೇಲೆ ಉರುಳುಸೇವೆಯನ್ನು ಕೂಡಲೇ ನಿಷೇಧಿಸಬೇಕು, ದಸಂಸ ಮುಖಂಡರೊಂದಿಗೆ ಅಸಭ್ಯವಾಗಿ ವರ್ತಿಸಿ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ನಗರದ ಬಂದರು ಸರ್ಕಲ್ ಇನ್ಸ್‌ಪೆಕ್ಟರ್ ವಿನಯ ಗಾಂವ್ಕರ್ ಅವರನ್ನು ಅಮಾನತು ಮಾಡಬೇಕು, ಜಿಲ್ಲೆಯಲ್ಲಿ ಅಂಬೇಡ್ಕರ್ ಭವನವನ್ನು ಶೀಘ್ರವಾಗಿ ನಿರ್ಮಿಸಬೇಕು, ವಾಮಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬುದು ಸಮಿತಿಯ ಇತರ ಬೇಡಿಕೆಗಳಾಗಿವೆ ಎಂದು ವಿವರಿಸಿದರು.

ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಪಿ.ಆನಂದ, ಉಪಸಂಚಾಲಕ ಎಲ್.ಚಂದು, ಪದಾಧಿಕಾರಿಗಳಾದ ಸದಾಶಿವ ಉರ್ವಸ್ಟೋರ್, ಸೇಸಪ್ಪ ನೆಕ್ಕಿಲು, ಎಂ.ದೇವು, ಜಗದೀಶ ಪಾಂಡೇಶ್ವರ ಮತ್ತಿತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.